Homeಮುಖಪುಟಹೀಗಿದ್ದರು ನಮ್ಮ ಡಾ. ಮನಮೋಹನ್ ಸಿಂಗ್: ಮಾಜಿ ಪ್ರಧಾನಿಗಳ ಕುರಿತು ಟ್ವಿಟರ್‌ನಲ್ಲಿ ಮೆಚ್ಚುಗೆಗೆ ಕಾರಣ?

ಹೀಗಿದ್ದರು ನಮ್ಮ ಡಾ. ಮನಮೋಹನ್ ಸಿಂಗ್: ಮಾಜಿ ಪ್ರಧಾನಿಗಳ ಕುರಿತು ಟ್ವಿಟರ್‌ನಲ್ಲಿ ಮೆಚ್ಚುಗೆಗೆ ಕಾರಣ?

- Advertisement -
- Advertisement -

ಹಲವು ದಿನಗಳ ನಂತರ ನಿನ್ನೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರು ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ನೀತಿಗಳ ವಿರುದ್ಧ ಕಿಡಿಕಾರಿದ್ದರು. ‘ಪ್ರಧಾನಿ ಹುದ್ದೆಗೆ ವಿಶೇಷ ಸ್ಥಾನಮಾನವಿದೆ, ನಿಮ್ಮ ಸರ್ಕಾರದ ಎಲ್ಲಾ ತಪ್ಪುಗಳಿಗೂ ನೆಹರೂರವರನ್ನು ದೂರಬೇಡಿ’ ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ಅಸಮಾಧಾನ ಹೊರಹಾಕಿದ್ದರು. ತದನಂತರ ಹಲವಾರು ಸೆಲೆಬ್ರಿಟಿಗಳು ಮಾಜಿ ಪ್ರಧಾನಿಗಳ ಬೆನ್ನಿಗೆ ನಿಂತಿದ್ದು, ಅವರಿಗೆ ಮೆಚ್ಚುಗೆ ಸಲ್ಲಿಸಿದ್ದಾರೆ. ಜೊತೆಗೆ ಹಾಲಿ ಪ್ರಧಾನಿಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

“ಒಂದೆಡೆ ಜನರು ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮತ್ತೊಂದೆಡೆ ಕಳೆದ ಏಳೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಈಗಿನ ಸರ್ಕಾರವು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಸರಿಪಡಿಸುವ ಬದಲು ಜನರ ಸಮಸ್ಯೆಗಳಿಗೆ ಇನ್ನೂ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ದೂಷಿಸುತ್ತಿದೆ. ಪ್ರಧಾನಿ ಸ್ಥಾನಕ್ಕೆ ವಿಶೇಷ ಮಹತ್ವವಿದೆ ಎಂದು ನಾನು ಭಾವಿಸುತ್ತೇನೆ. ಪ್ರಧಾನಿಯವರು ಇತಿಹಾಸವನ್ನು ದೂಷಿಸುವ ಬದಲು ತಮ್ಮ ಘನತೆಯನ್ನು ಕಾಯ್ದುಕೊಳ್ಳಬೇಕು. ನಾನು 10 ವರ್ಷಗಳ ಕಾಲ ಪ್ರಧಾನಿಯಾಗಿದ್ದಾಗ ನನ್ನ ಕೆಲಸದ ಮೂಲಕ ಮಾತನಾಡಿದ್ದೇನೆ. ಪ್ರಪಂಚದ ಮುಂದೆ ದೇಶವು ಪ್ರತಿಷ್ಠೆಯನ್ನು ಕಳೆದುಕೊಳ್ಳಲು ನಾನು ಎಂದಿಗೂ ಬಿಡಲಿಲ್ಲ. ನಾನು ಎಂದಿಗೂ ಭಾರತದ ಹೆಮ್ಮೆಯನ್ನು ಕುಗ್ಗಿಸಿಲ್ಲ. ನನ್ನ ವಿರುದ್ಧ ದುರ್ಬಲ, ಶಾಂತ ಮತ್ತು ಭ್ರಷ್ಟ ಎಂಬ ಸುಳ್ಳು ಆರೋಪ ಮಾಡಿದ್ದ ಬಿಜೆಪಿ ಈಗ ಜಗತ್ತಿನೆದುರು ಬೆತ್ತಲುಗೊಳ್ಳುತ್ತಿದೆ” ಎಂದು ಸಿಂಗ್ ಕಿಡಿಕಾರಿದ್ದರು.

ಖ್ಯಾತ ಸ್ಟ್ಯಾಂಡಪ್ ಕಾಮಿಡಿಯನ್ ವೀರ್ ದಾಸ್, ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಸೇರಿದಂತೆ ಹಲವರು ಮಾಜಿ ಪ್ರಧಾನಿಗಳ ಕುರಿತು ತಮ್ಮ ಅನಿಸಿಕೆಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿಂದೆ ನಾವು ಪ್ರಧಾನಿಗಳನ್ನು ಮತ್ತು ಸರ್ಕಾರವನ್ನು ಯಾವುದೇ ಅಳುಕಿಲ್ಲದೆ ಟೀಕಿಸುತ್ತಿದ್ದೆವು, ಜೋಕ್ ಮಾಡುತ್ತಿದ್ದೆವು ಮತ್ತು ಕಾರ್ಟೂನ್ ಬರೆಯುತ್ತಿದ್ದೆವು. ಅವರು ಸಹ ಅವನ್ನು ಆನಂದಿಸುತ್ತಿದ್ದರು. ಆಗ ಈಗ ಆ ಕಾಲ ಮಾಯವಾಗಿ, ಬೆದರಿಕೆಗಳ ಕಾಲವಾಗಿದೆ ಎಂದು ಪರೋಕ್ಷವಾಗಿ ಈಗಿನ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.

ವೀರ್ ದಾಸ್ ಟ್ವೀಟ್ ಮಾಡಿ, “ಡಾ. ಮನಮೋಹನ್ ಸಿಂಗ್‌ರವರ ಸುದ್ದಿ ನೋಡಿದಾಗ ಹಿಂದಿನ ಒಂದು ಸಾಮಾನ್ಯ ಕಾಲ ನೆನಪಾಯಿತು. ನಾವು ಸಿಎನ್‌ಬಿಸಿ ಚಾನೆಲ್‌ನಲ್ಲಿ ವಾರಕ್ಕೆ ಐದು ದಿನ ಪ್ರೈಮ್‌ಟೈಮ್ ಬುಲೆಟಿನ್‌ನಲ್ಲಿ ನಮ್ಮ ಪ್ರಧಾನಿ ಮತ್ತು ಆಡಳಿತ ಪಕ್ಷದ ಬಗ್ಗೆ ಜೋಕ್ ಮಾಡಿದ್ದೇವೆ. ನಮಗೆ ಗೊತ್ತು, ಕೆಲವೊಮ್ಮೆ ಅವರು ಆ ಕಾರ್ಯಕ್ರಮ ನೋಡಿ ನಕ್ಕಿರುತ್ತಾರೆ ಎಂದು. ಈಗ ಇದೆಲ್ಲ ಶತಮಾನದ ಹಿಂದೆ ಮರೆತುಹೋದಂತೆ ಭಾಸವಾಗುತ್ತಿದೆ” ಎಂದಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಕಾರ್ಟೂನಿಸ್ಟ್ ಸತೀಶ್ ಆಚಾರ್ಯರವರು, “ನಿಜ. ನಾನು ಮನಮೋಹನ್ ಸಿಂಗ್ ಮತ್ತು ಅವರ ಸರ್ಕಾರದ ಮೇಲೆ ಹಲವಾರು ಕಾರ್ಟೂನ್‌ಗಳನ್ನು ಚಿತ್ರಿಸಿದ್ದೇನೆ (ಅವರ ಬಗ್ಗೆ ನನಗೆ ಅಪಾಯ ತುಂಬಾ ಗೌರವವಿದ್ದರೂ). ಆಗ ಯಾರೂ ನನ್ನನ್ನು ತಡೆಯಲು ಪ್ರಯತ್ನಿಸಲಿಲ್ಲ. ಯಾರೂ ನನ್ನನ್ನು ನಿಂದಿಸಿಲ್ಲ. ಪತ್ರಿಕೆಗಳು ಅವುಗಳನ್ನು ಪ್ರಕಟಿಸಲು ಹೆದರುತ್ತಿರಲಿಲ್ಲ. ಯಾರೂ ನನ್ನ ಕೆಲಸವನ್ನು ಕಸಿದುಕೊಳ್ಳಲು ಪ್ರಯತ್ನಿಸಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಅನು ಮಿತ್ತಲ್ ಎಂಬುವವರು ಸಿಂಗಾಪುರದ ಪ್ರಧಾನಿಗಳ ಉದಾಹರಣೆ ನೀಡಿದ್ದಾರೆ. ‘ಸಿಂಗಾಪುರ ಪ್ರಧಾನಿಗಳ ವಿಡಿಯೋವನ್ನು ನನ್ನ ಮಗುವಿಗೆ ತೋರಿಸಿದಾಗ, “ಇವರು ನಿಜವಾಗಲೂ ಪ್ರಧಾನಿಗಳೇ, ಅವರ ಮುಖ ಮತ್ತು ಉಡುಪಿನಲ್ಲಿನ ವಿನಯ ನೋಡಿ” ಎಂಬುದು ಅವನ ಮೊದಲ ಪ್ರತಿಕ್ರಿಯೆಯಾಗಿತ್ತು. ನಮ್ಮ ಹಿಂದಿನ ಪ್ರಧಾನಿಗಳು ಸಹ ಹೀಗೆ ಇದ್ದರು. ಅವರೆಲ್ಲರೂ ತಮ್ಮ ಅದ್ವೀತಿಯ ಕೆಲಸಗಳಿಂದ ನೆನಪಿನಲ್ಲಿದ್ದಾರೆಯೆ ಹೊರತು ಅವರ ಫ್ಯಾನ್ಸಿ ಡ್ರೆಸ್‌ನಿಂದ ಅಲ್ಲ ಎಂದು ನಾನು ಮಗುವಿಗೆ ಹೇಳಿದೆ’ ಎಂದು ಪರೋಕ್ಷವಾಗಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ.

“ಯಾರ್ಯಾರು ಡಾ.ಮನಮೋಹನ್ ಸಿಂಗ್‌ರವರನ್ನು ಪ್ರಧಾನಿಯಾಗಿ ಮಿಸ್ ಮಾಡಿಕೊಳ್ಳುತ್ತಿದ್ದೀರಿ” ಎಂದು ಕ್ಯಾಪ್ಟನ್ ನರೇಶ್ ಸಿಂಗ್ ಎಂಬುವವರು ಪ್ರಶ್ನಿಸಿದ್ದಾರೆ.

ನಿನ್ನೆಯ ವಿಡಿಯೋ ಸಂದೇಶದಲ್ಲಿ ಡಾ.ಸಿಂಗ್, “ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆರ್ಥಿಕ ನೀತಿಯ ಬಗ್ಗೆ ತಿಳುವಳಿಕೆ ಇಲ್ಲ. ವಿದೇಶಾಂಗ ನೀತಿಯಲ್ಲೂ ಈ ಸರ್ಕಾರ ವಿಫಲವಾಗಿದೆ, ಚೀನಾ ನಮ್ಮ ಗಡಿಯಲ್ಲಿ ಕುಳಿತು ತಂಟೆ ಮಾಡುತ್ತಿದೆ. ಬೇರೆ ದೇಶದ ನಾಯಕರನ್ನು ಬಲವಂತವಾಗಿ ತಬ್ಬಿಕೊಳ್ಳುವುದು ಅಥವಾ ಅವರಿಗೆ ಬಿರಿಯಾನಿ ತಿನ್ನಿಸುವ ಮೂಲಕ ವಿದೇಶಾಂಗ ನೀತಿಯನ್ನು ನಡೆಸಲಾಗುವುದಿಲ್ಲ ಎಂದು ಪ್ರಧಾನಿ ಅರ್ಥಮಾಡಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ನಾವು ಎಂದಿಗೂ ಪಟ್ಟಭದ್ರ ರಾಜಕೀಯ ಲಾಭಕ್ಕಾಗಿ ದೇಶವನ್ನು ವಿಭಜಿಸಲಿಲ್ಲ. ನಾವು ಎಂದಿಗೂ ಸತ್ಯವನ್ನು ಮರೆಮಾಚಲು ಪ್ರಯತ್ನಿಸಲಿಲ್ಲ. ನಾವು ಎಂದಿಗೂ ದೇಶದ ಗೌರವ ಅಥವಾ ಪ್ರಧಾನಿ ಸ್ಥಾನಕ್ಕೆ ಧಕ್ಕೆ ತಂದಿಲ್ಲ. ಜನರು ಇಂದು ವಿಭಜನೆಯಾಗುತ್ತಿದ್ದಾರೆ. ಈ ಸರ್ಕಾರದ ನಕಲಿ ರಾಷ್ಟ್ರೀಯತೆ ಟೊಳ್ಳು ಮತ್ತು ಅಪಾಯಕಾರಿ. ಒಡೆದು ಆಳುವ ಬ್ರಿಟಿಷರ ನೀತಿಯ ಮೇಲೆ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಸರ್ಕಾರದ ಆರ್ಥಿಕ ನೀತಿಯಲ್ಲಿ ಸ್ವಾರ್ಥ ಮತ್ತು ದುರಾಸೆ ಇದೆ. ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಒಡೆದು ಹೊಡೆದಾಡುವಂತೆ ಮಾಡುತ್ತಿದ್ದಾರೆ” ಎಂದು ತೀಕ್ಷ್ಣವಾಗಿ ಟೀಕಿಸಿದ್ದರು.


ಇದನ್ನೂ ಓದಿ; ’ಪ್ರಧಾನಿ ಹುದ್ದೆಗೆ ವಿಶೇಷ ಸ್ಥಾನಮಾನವಿದೆ’: ಮೋದಿ ವಿರುದ್ಧ ಮಾಜಿ ಪಿಎಂ ಮನಮೋಹನ್ ಸಿಂಗ್ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...