PC: New Indian Express

ನಮ್ಮನ್ನು ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಎಂದು ಹೆಸರಿಗೆ ಕರೆದು ನಮಗಾಗಿ ಚಪ್ಪಾಳೆ ತಟ್ಟಿದ್ದು ಮಾತ್ರವೇ ಬಂತು. ಆದರೆ ಸರ್ಕಾರ ನಮ್ಮ ಯಾವ ಬೇಡಿಕೆಯನ್ನು ಈಡೇರಿಸದೇ ಸಂಕಷ್ಟಕ್ಕೆ ನೂಕಿದೆ ಎಂದು ಆಕ್ರೋಶ ಹೊರ ಹಾಕಿದ್ದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಾ.ನಾಗಲಕ್ಷ್ಮಿ.

ಜುಲೈನಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವುದಾಗಿ ರಾಜ್ಯ ಸರ್ಕಾರ ನೀಡಿದ್ದ ಭರವಸೆಗಳು ಈಡೇರದ ಕಾರಣ ನಾಳೆ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ಮತ್ತೆ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘವು ಪ್ರತಿಭಟನೆ ನಡೆಸಲಿದೆ.

ಆಶಾ ಕಾರ್ಯಕರ್ತೆಯರ ವೇತನವನ್ನು 12 ಸಾವಿರಕ್ಕೆ ಹೆಚ್ಚಳ ಮಾಡಿ ಎಂಬ ಬೇಡಿಕೆಯೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ನಾಳೆ ಜಿಲ್ಲಾ ಘಟಕಗಳ ಮುಖಂಡರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಇದನ್ನೂ ಓದಿ:  ಆಶಾರೋಧನ; ಈಡೇರದ ಬೇಡಿಕೆ, ಮತ್ತೆ ಆಹೋರಾತ್ರಿ ಧರಣಿಗೆ ಮುಂದಾದ ಅಂಗನವಾಡಿ ಕಾರ್ಯಕರ್ತೆಯರು

ನಮಗೆ ರಾಜ್ಯ ಸರ್ಕಾರ ನೀಡುವುದು ಮಾಸಿಕ 4 ಸಾವಿರ ಸಹಾಯಧನ. ಕೇಂದ್ರದ ಸಹಾಯಧನ ಪಡೆಯಲು ನಾವು ಹಲವು RCH ಪೋರ್ಟಲ್ ಮುಖಾಂತರ ಹೋಗಬೇಕು. ಈ ಪೋರ್ಟಲ್‌ನಲ್ಲಿ ತುಂಬಾ ಸಮಸ್ಯೆಗಳಿವೆ. ಕೆಲಸ ಮಾಡಿದರೂ ಹಣ ಮಾತ್ರ ಕಡಿಮೆ ಬರುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನಗಳನ್ನುಒಟ್ಟಿಗೆ ಸೇರಿಸಿ 12 ಸಾವಿರ ವೇತನ ನಿಗದಿ ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ ಎನ್ನುತ್ತಾರೆ ಡಾ.ನಾಗಲಕ್ಷ್ಮಿ.

PC: Prokerala

ನಾವು ಜನವರಿಯಿಂದಲೂ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದೇವೆ. NRC, CAA ಪ್ರತಿಭಟನೆಯಿಂದಾಗಿ ಅದು ಮುಂದುವರಿಯಲಿಲ್ಲ. ಆದರೆ ಕಳೆದ ಜುಲೈನಲ್ಲಿ 20 ದಿನಗಳ ಕಾಲ ನಿರಂತರ ಪ್ರತಿಭಟನೆ ನಡೆಸಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ,  ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಆರೋಗ್ಯ ಸಚಿವ ಶ್ರೀರಾಮುಲು 3 ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ 50 ದಿನಗಳಾಗುತ್ತಾ ಬಂದರೂ ಒಂದೂ ಭರವಸೆ ಈಡೇರಿಸಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಾಳೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಡಾ.ನಾಗಲಕ್ಷ್ಮಿ ನಾನುಗೌರಿ.ಕಾಂಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆ ಸಾಧ್ಯವಾದರೆ, ಪಾಕಿಸ್ತಾನದೊಂದಿಗೆ ಯಾಕಿಲ್ಲ: ಫಾರೂಕ್ ಅಬ್ದುಲ್ಲಾ ಪ್ರಶ್ನೆ

ಆಶಾ ಕಾರ್ಯಕರ್ತೆಯರು ಕೋವಿಡ್ ಸಮಯದಲ್ಲಿಯೂ ದುಡಿಯುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸುತ್ತಿಲ್ಲ. ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿದಂತೆ ಅವಶ್ಯಕ ಆರೋಗ್ಯ ರಕ್ಷಣಾ ಸಲಕರಣೆಗಳು ಸರ್ಕಾರ ನೀಡುತ್ತಿಲ್ಲ ಎಂಬುದು ಅವರ ಆರೋಪವಾಗಿದೆ.

ನಮ್ಮನ್ನು ಕೊರೊನಾ ವಾರಿಯರ್ಸ್ ಎಂದು ಹೇಳಿದರೇ ಸಾಲದು. ನಮ್ಮ ಸಮಸ್ಯೆಗಳನ್ನು ಆಲಿಸಬೇಕು. ಈಗಲೂ ಸರ್ಕಾರ ಗಮನಹರಿಸದಿದ್ದರೇ, 42 ಸಾವಿರ ಆಶಾ ಕಾರ್ಯಕರ್ತೆಯರು ಬೀದಿಗಿಳಿದು ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಆಶಾ ಕಾರ್ಯಕರ್ತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ಮೈಸೂರಿನ ಸುಮಾರು 500-600 ಆಶಾ ಕಾರ್ಮಿಕರು ನಾಳೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಐಯುಟಿಯುಸಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ದುರ್ಗೇಶ್ ಪ್ರಕಾಶ್ ಹೇಳಿದ್ದಾರೆ.


ಇದನ್ನೂ ಓದಿ:  ಕೊರೊನಾ ವಾರಿಯರ್ಸ್‌ಗೆ ವಿಭಿನ್ನವಾಗಿ ಗೌರವ ಸಲ್ಲಿಸಿದ ಆರ್‌ಸಿಬಿ ತಂಡ!

LEAVE A REPLY

Please enter your comment!
Please enter your name here