Homeಕರ್ನಾಟಕಬಳ್ಳಾರಿ ರಸ್ತೆಯಲ್ಲಿ ಅವ್ಯವಸ್ಥೆ; 'ಮಾಲ್ ಆಫ್ ಏಷ್ಯಾ'ಗೆ 15 ದಿನ ಬೀಗ!

ಬಳ್ಳಾರಿ ರಸ್ತೆಯಲ್ಲಿ ಅವ್ಯವಸ್ಥೆ; ‘ಮಾಲ್ ಆಫ್ ಏಷ್ಯಾ’ಗೆ 15 ದಿನ ಬೀಗ!

- Advertisement -
- Advertisement -

ಏಷ್ಯಾದಲ್ಲೇ ಅತಿ ದೊಡ್ಡ ಶಾಪಿಂಗ್ ಮಾಲ್ ಎಂದು ಹೇಳಿಕೊಂಡು, ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಆರಂಭಗೊಂಡ ಫೀನಿಕ್ಸ್ ಮಾಲ್ ಆಫ್ ಏಷ್ಯಾಕ್ಕೆ ಸಾರ್ವಜನಿಕರ ಪ್ರವೇಶವನ್ನು ಬೆಂಗಳೂರು ಪೊಲೀಸರು 15 ದಿನಗಳ ಕಾಲ ನಿರ್ಭಂದ ಹೇರಿದ್ದಾರೆ.

ಪಾರ್ಕಿಂಗ್ ಸಮಸ್ಯೆ, ಕನ್ನಡ ನಾಮಫಲಕ ವಿವಾದ, ಮಾಲ್ ಪ್ರವೇಶಕ್ಕೆ ಶುಲ್ಕ ಹಾಗೂ ವಿಮಾನ ನಿಲ್ದಾಣ ರಸ್ತೆಯಲ್ಲಿ ಉಂಟಾಗುತ್ತಿದ್ದ ಅತಿಯಾದ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ಕಿರಿಕಿರಿಗೆ ಒಳಗಾಗುತ್ತಿದ್ದರು. ಇದನ್ನೆಲ್ಲಾ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು, ಡಿಸೆಂಬರ್ 30 ರಂದು ಆದೇಶ ಹೊರಡಿಸಿದ್ದು, ಡಿಸೆಂಬರ್ 31 ರಿಂದ ಜನವರಿ 15 ರವರೆಗೆ ಉತ್ತರ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷಾಚರಣೆಗೆ ಒಂದು ದಿನ ಮುಂಚಿತವಾಗಿ ಈ ಆದೇಶ ಬಂದಿದೆ.

ಡಿ. 31 ಬೆಳಿಗ್ಗೆಯಿಂದ 2024ರ ಜನವರಿ 15ರ ರಾತ್ರಿ 11:59 ರವರೆಗೆ ಫೀನಿಕ್ಸ್ ಮಾಲ್ ಆಫ್ ಏಷ್ಯಾ, ಬಳ್ಳಾರಿ ರಸ್ತೆ, ಬ್ಯಾಟರಾಯನಪುರ ಹಾಗೂ ಯಲಹಂಕ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144 (1) ಮತ್ತು 144 (2) ರ ಅಡಿ ನಿಷೇಧಾಜ್ಷೆ ಜಾರಿಗೊಳಿಸಿದ್ದಾರೆ. ‘ಸಾರ್ವಜನಿಕ ನೆಮ್ಮದಿಗೆ ಕಿರಿಕಿರಿ ಮತ್ತು ಅಡಚಣೆಯನ್ನು ತಡೆಗಟ್ಟಲು, ಸುಗಮ ಸಂಚಾರ ಮತ್ತು ಸಾರ್ವಜನಿಕರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು’ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರ ಸೂಚನೆ ಮೇರೆಗೆ ಶನಿವಾರ ಆದೇಶ ಹೊರಡಿಸಲಾಗಿದೆ.

ಬ್ಯಾಟರಾಯನಪುರದಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಮತ್ತು ವೈಟ್‌ಫೀಲ್ಟ್‌ನಲ್ಲಿರುವ ಫೀನಿಕ್ಸ್ ಮಾರ್ಕೆಟ್‌ ಸಿಟಿಯಲ್ಲಿರುವ ಮಾಲ್ ಆಡಳಿತದ ವಿರುದ್ಧ ಕನ್ನಡ ಪರ ಹೋರಾಟಗಾರರು, ಕನ್ನಡ ಸೈನ್‌ಬೋರ್ಟ್‌ಗಳಿಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಿಂದಾಗಿ ಡಿಸೆಂಬರ್ 27 ರಂದು ಮಾಲ್ ಮುಚ್ಚಬೇಕಾಯಿತು.

ಕ್ರಿಸ್ಮಸ್ ಹಬ್ಬ ಹಾಗೂ ಅದರ ಹಿಂದಿನ ದಿನವಾದ ಭಾನುವಾರದಂದು ನಿರೀಕ್ಷೆಗೂ ಮೀರಿ ಮಾಲ್‌ಗೆ ಜನರು ತಮ್ಮ ವಾಹನಗಳ ಮೂಲಕ ಬಂದಿದ್ದರಿಂದಾಗಿ ಬಳ್ಳಾರಿ ರಸ್ತೆಯಲ್ಲಿ (ವಿಮಾನ ನಿಲ್ದಾಣ ರಸ್ತೆ) ಸಂಚಾರ ದಟ್ಟಣೆ ಉಂಟಾಗಿ, ಅಸ್ತವ್ಯಸ್ತವಾಗಿತ್ತು. ಇದರಿಂದ ಸ್ವಲ್ಪ ದಿನಗಳ ಕಾಲ ಮಾಲ್ ಮುಚ್ಚುವಂತೆ ಸಂಚಾರಿ ಪೊಲೀಸರು ಸಲಹೆ ನೀಡಬೇಕಾಯಿತು. ಮಾಲ್‌ಗೆ ಜನರ ಪ್ರವೇಶಕ್ಕೆ ₹200 ಮತ್ತು ಕಾರುಗಳಿಗೆ ₹150 ಶುಲ್ಕವನ್ನು ವಿಧಿಸಿದ್ದರಿಂದ ಜನ ಮಾಲ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಪೊಲೀಸ್ ಆಯುಕ್ತ ದಯಾನಂದ ಅವರು ಹೊರಡಿಸಿರುವ ಆದೇಶದಲ್ಲಿ, ‘ನಾಳೆ (ಡಿಸೆಂಬರ್ 31) ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಕಿರಿಕಿರಿ, ಅಡಚಣೆ, ಅಪರಾಧಗಳು ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗವನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ತುರ್ತು ಕ್ರಮವು ತಕ್ಷಣದ ಅಗತ್ಯವಿದೆ; ಅನುಸರಿಸಿ’ ಎಂದು ಹೇಳಿದ್ದಾರೆ.

‘ಮಾಲ್ ಹಾಗೂ ಅದರ ಸುತ್ತಮುತ್ತ ಪ್ರತಿದಿನ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಘಟನೆಗಳು ನಡೆಯುತ್ತಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ತೊಂದರೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ, ವ್ಯತ್ಯಯ, ಶಬ್ದ ಮಾಲಿನ್ಯ, ಸಾರ್ವಜನಿಕರಿಗೆ ತೊಂದರೆ, ಶಾಂತಿ ಕದಡುವ ಸಾಧ್ಯತೆ ಹೆಚ್ಚಳವಾಗಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಡಿಸೆಂಬರ್ 31 ರಂದು ಹೊಸ ವರ್ಷದ ಆಚರಣೆಯ ಸಂದರ್ಭಗಳಿಗೆ ಅನ್ವಯಿಸುತ್ತದೆ. ಜನವರಿ 13, 2024 ರಂದು ಎರಡನೇ ಶನಿವಾರ ಮತ್ತು ಜನವರಿ 14, 2024 ರಂದು ಭಾನುವಾರದಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಮಾಲ್‌ಗೆ ಹೆಚ್ಚಿನ ಜನರು ಭೇಟಿ ನೀಡುತ್ತಾರೆ. ಸಾರ್ವಜನಿಕರಿಗೆ ಮೊದಲಿಗಿಂತ ಹೆಚ್ಚಿನ ಅನಾನುಕೂಲತೆ ಮತ್ತು ತೊಂದರೆಗೆ ಕಾರಣವಾಗುತ್ತದೆ’ ಎಂದು ದಯಾನಂದ್ ಹೇಳಿದ್ದಾರೆ.

ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ವರದಿ ಪ್ರಕಾರ, ‘ಫೀನಿಕ್ಸ್ ಮಾಲ್ ಆಫ್ ಏಷ್ಯಾ’ ಕಟ್ಟಡದಲ್ಲಿ ಕನಿಷ್ಠ 10,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳಿಗೆ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವ ಅಗತ್ಯವಿದೆ. ಭೇಟಿ ನೀಡುವ ಸಾರ್ವಜನಿಕರಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳಗಳನ್ನು ಒದಗಿಸಲು ಮಾಲ್ ಆಡಳಿತ ಮಂಡಳಿ ಅಸಮರ್ಥವಾಗಿದೆ. ಇದರಿಂದ ಸ್ಥಳೀಯ ನಿವಾಸಿಗಳು, ಪ್ರಯಾಣಿಕರು, ಸಾರ್ವಜನಿಕರು ಮತ್ತು ರೋಗಿಗಳು ತೊಂದರೆ ಅನುಭವಿಸುವಂತಾಗಿದೆ’ ಎಂದು ಹೇಳಿದ್ದಾರೆ.

‘ಈ ವಿಷಯಗಳನ್ನು ನಿರ್ಲಕ್ಷಿಸಿದರೆ, ಸಾರ್ವಜನಿಕರಲ್ಲಿ ಗಲಾಟೆಗಳು ಮತ್ತು ಆಗಾಗ್ಗೆ ವಾಗ್ವಾದಗಳು ಉಂಟಾಗುತ್ತವೆ. ಮಾಲ್‌ಗೆ ಸಾರ್ವಜನಿಕ ಪ್ರವೇಶವನ್ನು ಸೂಕ್ತವಾಗಿ ನಿರ್ಬಂಧಿಸುವುದು ಮತ್ತು ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆಯಿಂದ ಉಂಟಾಗುವ ಅಡಚಣೆ ಮತ್ತು ಸಂಚಾರ ದಟ್ಟಣೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ’ ಎಂದಿದ್ದಾರೆ.

‘ಒಸಿ’ ಹಿಂಪಡೆಯಲು ಬಿಬಿಎಂಪಿಗೆ ಪೊಲೀಸರ ಒತ್ತಾಯ:

ಮಾಲ್‌ ಆರಂಭಕ್ಕೆ ನೀಡಲಾದ ‘ಭಾಗಶಃ ಆಕ್ಯುಪೆನ್ಸಿ ಸರ್ಟಿಫಿಕೇಟ್’ (ಒಸಿ) ಹಿಂಪಡೆಯಬೇಕು ಅಥವಾ ರದ್ದು ಮಾಡಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳೊಂದಿಗೆ ಬೆಂಗಳೂರು ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಬಿಬಿಎಂಪಿ ನೀಡಿರುವ ಭಾಗಶಃ ಒಸಿ ಪ್ರಕಾರ, ಮಾಲ್ 12 ಅಂತಸ್ತಿನ ಕಟ್ಟಡವಾಗಿದೆ (2 ನೆಲಮಾಳಿಗೆಯ ಮಹಡಿಗಳನ್ನು ಒಳಗೊಂಡಂತೆ). ನೆಲ ಮಹಡಿಯಿಂದ ಮೂರನೇ ಮಹಡಿಯವರೆಗೆ ಒಟ್ಟು 86,421 ಚದರ ಮೀಟರ್ ವಿಸ್ತೀರ್ಣವಿದೆ. ಆದಾಗ್ಯೂ, ಮಾಲ್ 2,324 ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಕೇವಲ ಎರಡು ನೆಲಮಾಳಿಗೆಗಳನ್ನು ಹೊಂದಿದೆ. ‘ಈ ಮಾಲ್‌ನಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೇ ಇರುವುದರಿಂದ ಇಲ್ಲಿಗೆ ಬರುವ ಸಾರ್ವಜನಿಕರ ವಾಹನಗಳು ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಪ್ರವೇಶ ದ್ವಾರದಲ್ಲೇ ಕಾರುಗಳು ಸರತಿ ಸಾಲಿನಲ್ಲಿ ನಿಂತಿದ್ದು, ಮುಖ್ಯರಸ್ತೆಯ ಪಕ್ಕದಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಹೆದ್ದಾರಿಯ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಂಚಾರ ದೀರ್ಘಕಾಲದವರೆಗೆ ಸ್ಥಗಿತಗೊಳ್ಳಲು ಕಾರಣವಾಗುತ್ತದೆ’ ಎಂದು ಪೊಲೀಸ್ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಮಾಲ್ ಆವರಣದಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳವಿಲ್ಲ, ಸುಮಾರು 2,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳನ್ನು ಮಾಲ್‌ನ ಹೊರಗಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿತ್ತು. ಪರಿಣಾಮವಾಗಿ, ಸರ್ವೀಸ್ ರಸ್ತೆ ಮತ್ತು ಹೆದ್ದಾರಿಯಲ್ಲಿ ವಾಹನ ಸಂಚಾರ ತೀವ್ರವಾಗಿ ಅಸ್ತವ್ಯಸ್ತಗೊಂಡಿದ್ದು, ಇದು ಸ್ಥಳೀಯರು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡಿದೆ.

ವಿಪರೀತ ಶಬ್ದ ಮಾಲಿನ್ಯ:

ಮಾಲ್‌ನ ಎಕ್ಸಾಸ್ಟ್ ಬ್ಲೋವರ್‌ಗಳು ಹೆಚ್ಚಿನ ಮಟ್ಟದ ಶಬ್ದ ಮಾಲಿನ್ಯವನ್ನು ಉಂಟುಮಾಡುತ್ತಿದ್ದು, ಇದು ರಾತ್ರಿಯಲ್ಲಿ ಮಲಗಲು ತೊಂದರೆ ಉಂಟು ಮಾಡುತ್ತಿದೆ ಎಂದು ಸ್ಥಳೀಯ ನಿವಾಸಿಗಳಿಂದ ಹಲವಾರು ದೂರುಗಳು ಬಂದಿವೆ. ಇದರಿಂದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡುವುದು ಸವಾಲಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಯ ಪ್ರಕಾರ, ಶಬ್ದ ಮಾಲಿನ್ಯವು ನಿಗದಿತ ಮಿತಿಯನ್ನು ಮೀರಿದೆ. ಯಲಹಂಕ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಶಬ್ದ ಮಾಲಿನ್ಯವನ್ನು ತಕ್ಷಣವೇ ನಿಲ್ಲಿಸುವಂತೆ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಮಾಲ್ ವ್ಯವಸ್ಥಾಪಕರ ಸಮಜಾಯಿಷಿ ಪ್ರಕಾರ, ‘ಮಾಲ್‌ನಲ್ಲಿ ದೊಡ್ಡ ಸಭೆ ಮತ್ತು ನೆಲಮಾಳಿಗೆಯ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳು ಇದ್ದಾಗ, ಬ್ಲೋವರ್‌ಗಳು ಅನಿವಾರ್ಯವಾಗಿ ಹೆಚ್ಚಿನ ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತವೆ’ ಎಂದು ಹೇಳಿದ್ದಾರೆ.

ಈ ಹೆದ್ದಾರಿಯು ಬ್ಯಾಟರಾಯನಪುರ, ಸಹಕಾರ ನಗರ, ನ್ಯಾಯಾಂಗ ಬಡಾವಣೆ, ಜಕ್ಕೂರು ಪ್ರದೇಶ, ಎನ್‌ಟಿಐ ಲೇಔಟ್ ಮತ್ತು ಉತ್ತರ ಬೆಂಗಳೂರಿನ ಇತರ ಜನನಿಬಿಡ ಪ್ರದೇಶಗಳನ್ನು ಹೆಬ್ಬಾಳದ ಮೂಲಕ ನಗರದ ವಿವಿಧ ಭಾಗಗಳಿಗೆ ಸಂಪರ್ಕಿಸುತ್ತದೆ. ಹೆಚ್ಚುವರಿಯಾಗಿ, ಪ್ರಮುಖ ಆಸ್ಪತ್ರೆಗಳು ಮತ್ತು ಕಚೇರಿ ಸ್ಥಳಗಳು ಈ ಹೆದ್ದಾರಿಯ ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತವೆ, ಇದು ಬೆಂಗಳೂರಿನ ಉತ್ತರ ಪ್ರದೇಶಗಳಿಗೆ ಪ್ರಮುಖ ಜೀವನಾಡಿಯಾಗಿದೆ.

ಮಾಲ್‌ನಿಂದ ಉಂಟಾಗುತ್ತಿರುವ ದಟ್ಟಣೆಯಿಂದಾಗಿ, ಸುತ್ತಮುತ್ತಲಿನ ಸ್ಥಳೀಯ ಜನರ ದೈನಂದಿನ ಜೀವನದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರಯಾಣದ ಸಮಯದಲ್ಲಿ ತೊಂದರೆ ಉಂಟಾಗುತ್ತಿದೆ. ವಿವಿಧ ಸ್ಥಳೀಯ ಸಂಸ್ಥೆಗಳು, ಶಾಲೆಗಳು ಮತ್ತು ಕಾಲೇಜುಗಳು ಈ ಬಗ್ಗೆ ದೂರುಗಳನ್ನು ಸಲ್ಲಿಸಿವೆ. ಮಾಲ್‌ನಿಂದ ಉಂಟಾದ ಅವ್ಯವಸ್ಥೆಯ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಡಿಸೆಂಬರ್ 24ರಂದು ಮಾಲ್‌ನಿಂದ ಉಂಟಾದ ಅನಾನುಕೂಲತೆಯ ವಿರುದ್ಧ ಸ್ಥಳೀಯ ನಿವಾಸಿಗಳಿಂದ ಹಠಾತ್ ಪ್ರತಿಭಟನೆಯನ್ನೂ ನಡೆಸಬೇಕಾಯಿತು.

ಇದನ್ನೂ ಓದಿ; ಬಾಹ್ಯ ಏಜೆನ್ಸಿಗಳಿಗೆ ಪ್ರವೇಶವಿಲ್ಲ, ಇವಿಎಂ ಪ್ರೋಗ್ರಾಮಿಂಗ್ ಪ್ರಕ್ರಿಯೆಯು ದೃಢವಾಗಿದೆ: ಚುನಾವಣಾ ಆಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...