Homeಮುಖಪುಟಶಿಕ್ಷಣದ ಬಗ್ಗೆ ಜೋತಿಬಾ ಫುಲೆ: ರೈತಾಪಿ ವರ್ಗಗಳಿಂದ ಬರುವವರನ್ನೇ ಸಾಧ್ಯವಾದಷ್ಟರಮಟ್ಟಿಗೆ ಪ್ರಾಥಮಿಕ ಶಾಲೆಗಳ ಶಿಕ್ಷಕರಾಗುವುದಕ್ಕೆ ತರಬೇತುಗೊಳಿಸಬೇಕು

ಶಿಕ್ಷಣದ ಬಗ್ಗೆ ಜೋತಿಬಾ ಫುಲೆ: ರೈತಾಪಿ ವರ್ಗಗಳಿಂದ ಬರುವವರನ್ನೇ ಸಾಧ್ಯವಾದಷ್ಟರಮಟ್ಟಿಗೆ ಪ್ರಾಥಮಿಕ ಶಾಲೆಗಳ ಶಿಕ್ಷಕರಾಗುವುದಕ್ಕೆ ತರಬೇತುಗೊಳಿಸಬೇಕು

- Advertisement -
- Advertisement -

[ಜೋತಿಬಾ ಫುಲೆ ಅವರು 1881ರ ಶಿಕ್ಷಣ ಆಯೋಗಕ್ಕೆ (ಹಂಟರ್ ಆಯೋಗವೆಂದೂ ಪರಿಚಿತ) ಸಲ್ಲಿಸಿದ ಮನವಿ ಪತ್ರವನ್ನು ಅನುವಾದಿಸಿ ಇಲ್ಲಿ ನೀಡಲಾಗಿದೆ. ಸದರಿ ಪತ್ರವನ್ನು Selected Writings of Jotirao Phule ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.]

ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದಂತೆ ನನ್ನ ಅನುಭವವು ಮುಖ್ಯವಾಗಿ ಪೂನಾ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಿಗೆ ಸೀಮಿತವಾಗಿದೆ. ಸುಮಾರು 25 ವರ್ಷಗಳ ಹಿಂದೆ ಹುಡುಗಿಯರಿಗಾಗಿ ಸ್ಥಳೀಯ ಶಾಲೆಗಳು ಇಲ್ಲದಿರುವಾಗ ಮಿಷನರಿಗಳು ಪೂನಾದಲ್ಲಿ ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದಿದ್ದರು. ಇದರಿಂದ ಪ್ರೇರಿತನಾದ ನಾನು ಅದೇ ತರಹದ ಶಾಲೆಯನ್ನು 1854ರ (ಇದು ಟೈಪಿಂಗ್ ಮಾಡುವಾಗ ಆಗಿರುವ ತಪ್ಪು. 1851 ಎಂಬುದು ಸರಿಯಾದ ದಿನಾಂಕವಾಗಿದೆ.) ಹೊತ್ತಿಗೆ ತೆರೆದು, ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಬಹಳ ವರ್ಷಗಳ ಕಾಲ ಅಲ್ಲಿಯೇ ದುಡಿದೆವು. ಕೆಲಕಾಲದ ನಂತರ ಸ್ಥಳೀಯ ವಿದ್ಯಾವಂತರ ಒಂದು ಸಮಿತಿ ರಚಿಸಿ ಶಾಲೆಯನ್ನು ಅವರ ಆಡಳಿತಕ್ಕೆ ಒಳಪಡಿಸಿದೆ. ಅವರ ಆಶ್ರಯದಲ್ಲಿ, ಪಟ್ಟಣದ ಬೇರೆಬೇರೆ ಭಾಗಗಳಲ್ಲಿ ಇನ್ನೂ ಎರಡು ಶಾಲೆಗಳನ್ನು ತೆರೆಯಲಾಯಿತು. ಮಹಿಳೆಯರಿಗಾಗಿ ಶಾಲೆಗಳನ್ನು ಸ್ಥಾಪಿಸಿದ ಒಂದು ವರ್ಷದಲ್ಲಿ, ಎಲ್ಲರಿಗಾಗಿ, ಅದರಲ್ಲೂ ವಿಶೇಷವಾಗಿ ಮಹಾರ್ ಮತ್ತು ಮಾಂಗ್ ಸಮುದಾಯದವರಿಗಾಗಿ ಸ್ಥಳೀಯ ಶಾಲೆಯನ್ನು ಸ್ಥಾಪಿಸಿದೆ. ಈ ವರ್ಗದ ಅಗತ್ಯತೆಯನ್ನು ಮನಗಂಡು ಮತ್ತೆರಡು ಶಾಲೆಗಳನ್ನು ತೆರೆಯಲಾಯಿತು. ಶೈಕ್ಷಣಿಕ ಮಂಡಳಿಯ ಅಧ್ಯಕ್ಷರಾದ ದಿವಂಗತ ಸರ್ ಎರ್ಸ್ಕೈನ್ ಪೆರ್ರ್‍ಇ ಹಾಗೂ ಅಂದು ಸರ್ಕಾರಕ್ಕೆ ಕಾರ್ಯದರ್ಶಿಗಳಾಗಿದ್ದ ಶ್ರೀ ಲುಮ್ಸ್‌ಡೈನ್ ಅವರು ಮಹಿಳೆಯರ ಶಾಲೆಗಳಿಗೆ ಭೇಟಿ ನೀಡಿ, ಪ್ರಾರಂಭವಾಗಿದ್ದ ಚಳವಳಿಯ ಬಗ್ಗೆ ಸಂತಸಗೊಂದು ನನಗೆ ಒಂದು ಜೋಡಿ ಶಾಲುಗಳನ್ನು ಉಡುಗೊರೆಯಾಗಿ ಇತ್ತಿದ್ದರು. ಮುಂದೆ, ಸುಮಾರು 9-10 ವರ್ಷಗಳ ಕಾಲ ಈ ಶಾಲೆಗಳ ಮೇಲೆಯೇ ಕೆಲಸ ಮಾಡಿದೆ. ಕೊನೆಗೆ, ಒದಗಿಬಂದ ಪರಿಸ್ಥಿತಿಗಳ ಕಾರಣಕ್ಕೆ (ಅದರ ವಿವರಗಳು ಇಲ್ಲಿ ಅಗತ್ಯವಿಲ್ಲ) ಈ ಕೆಲಸದಿಂದ ಹೊರ ನಡೆಯಬೇಕಾಯಿತು. ಈ ಮಹಿಳಾ ಶಾಲೆಗಳು ಈಗಲೂ ಕಾರ್ಯನಿರ್ವಹಿಸುತ್ತಿದ್ದು, ಶ್ರೀಮತಿ ಮಿಶೆಲ್ ಅವರ ಆಡಳಿತದಲ್ಲಿರುವ ಶೈಕ್ಷಣಿಕ ಇಲಾಖೆಯ ಸಮಿತಿಯು ಆ ಶಾಲೆಗಳ ಆಡಳಿತವನ್ನು ವಹಿಸಿಕೊಂಡಿದೆ. ಕೆಳವರ್ಗದವರಿಗೆ, ಮಹಾರ್ ಮತ್ತು ಮಾಂಗ್ ಸಮುದಾಯದವರಿಗಾಗಿ ತೆರೆಯಲಾಗಿದ್ದ ಒಂದು ಶಾಲೆ ಈಗಲೂ ನಡೆಯುತ್ತಿದೆಯಾದರೂ, ಆದರೆ ಸ್ಥಿತಿ ತೃಪ್ತಿಕರವಾಗಿಲ್ಲ. ಕೆಲವು ವರ್ಷಗಳ ಕಾಲ ನಾನೊಂದು ಮಿಷನರಿ ಮಹಿಳಾ ಬೋರ್ಡಿಂಗ್ ಶಾಲೆಯಲ್ಲಿ ಶಿಕ್ಷಕನಾಗಿದ್ದೆ. ಮುಖ್ಯವಾಗಿ ನನ್ನ ಅನುಭವಗಳನ್ನು ರೂಪಿಸಿದ್ದು ಈ ಶಾಲೆಗಳ ಒಡನಾಟವೇ ಆಗಿದೆ. ಈ ಪ್ರೆಸಿಡೆನ್ಸಿಯಲ್ಲಿ ಲಭ್ಯವಿರುವ ಪ್ರಾಥಮಿಕ ಶಿಕ್ಷಣದ ಬಗ್ಗೆಯೂ ನಾನು ಸ್ವಲ್ಪಮಟ್ಟಿಗೆ ಗಮನ ಹರಿಸಿದ್ದೇನೆ. ಇಲ್ಲಿನ ವ್ಯವಸ್ಥೆ ಮತ್ತು ಶಿಕ್ಷಣ ಇಲಾಖೆಯ ಕೆಳಹಂತದ ಶಾಲೆಗಳಲ್ಲಿ ನೇಮಕಗೊಂಡಿರುವ ಸಿಬ್ಬಂದಿಗಳ ಬಗ್ಗೆ ನನ್ನದೇ ಆದ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ಅವಕಾಶಗಳು ಒದಗಿಬಂದವು. ಕೆಲವು ವರ್ಷಗಳ ಹಿಂದೆ, ನಾನು ಬ್ರಾಹ್ಮಣರ ಧಾರ್ಮಿಕ ಆಚರಣೆಗಳನ್ನು ಬಟಾಬಯಲುಗೊಳಿಸುವ ಕರಪತ್ರವೊಂದನ್ನು ಮರಾಠಿಯಲ್ಲಿ ಬರೆದಿದ್ದೆ. ಅದರಲ್ಲಿದ್ದ ಇತರೆ ವಿಷಯಗಳೊಟ್ಟಿಗೆ ಪ್ರಾಸಂಗಿಕವಾಗಿ, ಈಗಿರುವ ಶಿಕ್ಷಣ ವ್ಯವಸ್ಥೆಯು, ಉನ್ನತ ಶಿಕ್ಷಣಕ್ಕೆ ಮಾತ್ರ ಸಾಕಷ್ಟು ಹಣ ಒದಗಿಸುವ ಮೂಲಕ ಬ್ರಾಹ್ಮಣರಿಗೆ ಮತ್ತು ಉನ್ನತ ವರ್ಗದವರಿಗಷ್ಟೇ ಅನುವು ಮಾಡಿಕೊಡುತ್ತಾ ಹೇಗೆ ಜನಸಾಮಾನ್ಯರನ್ನು ಅಜ್ಞಾನ ಮತ್ತು ಬಡತನದಲ್ಲಿಯೇ ಮುಳುಗುವಂತೆ ಮಾಡುತ್ತದೆ ಎಂದು ಪ್ರಸ್ತಾಪಿಸಿದ್ದೇನೆ. ನಾನು ಪುಸ್ತಕದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸಂಕ್ಷಿಪ್ತಗೊಳಿಸಿ ಅದಕ್ಕೆ ಲಗತ್ತಿಸಿದ್ದ ಇಂಗ್ಲಿಷ್ ಮುನ್ನುಡಿಯಲ್ಲಿ ನೀಡಿದ್ದೆ. ನಾವಿಲ್ಲಿ ಚರ್ಚಿಸುತ್ತಿರುವ ವಿಚಾರಕ್ಕೆ Cdu ಪೂರಕವಾಗಿರುವ ಕಾರಣ ಅದರ ಕೆಲವು ಭಾಗಗಳನ್ನು ಯಥಾವತ್ತು ಉಲ್ಲೇಖಿಸುತ್ತಿದ್ದೇನೆ:

“ಬಹುಶಃ, ಈ ವಿಷಯದಲ್ಲಿ ಇಂಥ ಬಿಕ್ಕಟ್ಟನ್ನು ಸೃಷ್ಟಿಸಿದ ಆಪಾದನೆಯ ಹೊಣೆಯ ಒಂದು ಭಾಗವನ್ನು ಸರ್ಕಾರದ ಮೇಲೆ ನ್ಯಾಯಯುತವಾಗಿಯೇ ಹೊರೆಸಬಹುದು. ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ಮತ್ತು ಸೌಲಭ್ಯಗಳನ್ನು ಒದಗಿಸುವ ಮತ್ತು ಜನಸಾಮಾನ್ಯರ ಶಿಕ್ಷಣವನ್ನು ನಿರ್ಲಕ್ಷಿಸುವುದರ ಹಿಂದಿನ ಉದ್ದೇಶ ಏನೇ ಆಗಿದ್ದರೂ, ಈ ಯೋಜನೆ ಜನಸಾಮಾನ್ಯರಿಗೆ ನ್ಯಾಯಯುತವಾದುದಲ್ಲ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಭಾರತ ಸಾಮ್ರಾಜ್ಯದ ಆದಾಯದಲ್ಲಿ ಹೆಚ್ಚಿನ ಭಾಗದ ಮೂಲವಿರುವುದು ರೈತಾಪಿಯ ಶ್ರಮದಲ್ಲಿ, ಅದು ಅವರು ಸುರಿಸುವ ಬೆವರಿನಲ್ಲಿ ಅಡಗಿದೆ ಎಂಬುದು ಈಗಾಗಲೇ ಒಪ್ಪಿಕೊಂಡಿರುವ ಸತ್ಯವಾಗಿದೆ. ಬಹುಶ್ರುತ ಇಂಗ್ಲಿಷ್ ಬರಹಗಾರರೊಬ್ಬರು ’ನಮ್ಮ ಆದಾಯದ ಮೂಲವಿರುವುದು ಲಾಭಾಂಶದಲ್ಲಲ್ಲ ಬದಲಿಗೆ ಬಂಡವಾಳದಲ್ಲಿ, ಐಷಾರಾಮದಲ್ಲಲ್ಲ ಬದಲಿಗೆ ಅಗ್ಗದ ಅಗತ್ಯಗಳಲ್ಲಿ. ನಮ್ಮ ಆದಾಯವು ಪಾಪ ಮತ್ತು ಕಣ್ಣೀರಿನ ಫಸಲು’.

“ಉನ್ನತ ವರ್ಗಗಳು ಮಾತ್ರವೇ ಅದರ ಲಾಭವನ್ನು ಪಡೆಯುವಾಗ, ಸರ್ಕಾರವು ಹೀಗೆ ಸಂಗ್ರಹಿಸಿದ ಆದಾಯದಲ್ಲಿ ಹೆಚ್ಚಿನ ಭಾಗವನ್ನು ಉನ್ನತ ಶಿಕ್ಷಣಕ್ಕೆ ಹೇರಳವಾಗಿ ವ್ಯಯಿಸುವುದು ಯಾವ ರೀತಿಯಲ್ಲೂ ನ್ಯಾಯಯುತವಾದ ಅಥವಾ ಸರಿಯಾದ ನಡೆಯಲ್ಲ. ಈ ಉನ್ನತ ದರ್ಜೆಯ ಶಿಕ್ಷಣವನ್ನು ಪೋಷಿಸುವುದರ ಹಿಂದಿನ ಅವರ ಉದ್ದೇಶ ವಿದ್ವಾಂಸರನ್ನು ತಯಾರು ಮಾಡುವುದೇ ಆಗಿದೆ. ಹೀಗೆ ವಿದ್ವಾಂಸರಾದವರು, ಮುಂದೆ ಅವರು ತಮ್ಮ ಕಲಿಕೆಯನ್ನು ಯಾವುದೇ ಹಣ ಪಡೆಯದೆ, ಶುಲ್ಕಗಳಿಲ್ಲದೆ ಉಚಿತವಾಗಿ ಅದನ್ನು ಇತರರಿಗೆ ನೀಡುತ್ತಾರೆ ಎಂದು ಭಾವಿಸಲಾಗಿದೆ. ಮೇಲ್ವರ್ಗಗಳ ಮನಸ್ಸಿನಲ್ಲಿ ಜ್ಞಾನದ ಪ್ರೀತಿಯನ್ನು ಬಿತ್ತಲು ಸಾಧ್ಯವಾದರೆ, ಅದು ಆ ವ್ಯಕ್ತಿಗಳಲ್ಲಿ ಉನ್ನತಮಟ್ಟದ ನೈತಿಕತೆಯನ್ನೂ, ಬ್ರಿಟಿಷ್ ಸರ್ಕಾರದ ಬಗ್ಗೆ ಹೆಚ್ಚಿನ ಪ್ರೇಮವನ್ನೂ ಮತ್ತು ಅವರು ಪಡೆದಿರುವ ಬೌದ್ಧಿಕ ವರಪ್ರಸಾದವನ್ನು ತಮ್ಮ ದೇಶಬಾಂಧವರ ನಡುವೆ ಹರಡಲು ಅಚಲ ಉತ್ಸಾಹವನ್ನೂ ತೋರುತ್ತಾರೆ ಎಂದು ಅವರು ಹೇಳುತ್ತಾರೆ.

“ಸರ್ಕಾರದ ಈ ಉದ್ದೇಶಗಳ ಬಗ್ಗೆ, ’ಇದಕ್ಕಿಂತಲೂ ಹೆಚ್ಚು ಆದರ್ಶಪ್ರಾಯವಾದ ಮತ್ತು ದಯಾಳು ತತ್ವಶಾಸ್ತ್ರವೊಂದನ್ನು ನಾವೆಲ್ಲಿಯೂ ಕೇಳಿಲ್ಲ’ ಎಂದು ನಾವು ಮೇಲೆ ಪ್ರಸ್ತಾಪಿಸಿರುವ ಲೇಖಕರು ಹೇಳುತ್ತಾರೆ. ಜನಪ್ರಿಯ ಪಾಶ್ಚಿಮಾತ್ಯ ಜಗತ್ತಿನಲ್ಲಿ ಉಂಟಾದ ಅದ್ಭುತ ಬದಲಾವಣೆಗಳನ್ನು ಕಂಡಿರುವವರು, ಜನಪ್ರಿಯ ಜ್ಞಾನದ ಪ್ರಸರಣೆಯಿಂದಾಗಿ ಇನ್ನೂರು ಮಿಲಿಯನ್ ಜನರಿರುವ ಭಾರತದ ನ್ಯೂನತೆಗಳನ್ನು ಉನ್ನತ ವರ್ಗಗಳಿಗೆ ಮಾತ್ರವೇ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ನಿವಾರಿಸಬಹುದು ಎಂದು ಪ್ರಸ್ತಾಪಿಸಿದ್ದಾರೆ. ಅವರ ಸಿದ್ಧಾಂತವು ಸತ್ಯವಾಗಿದೆ ಎಂಬುದಕ್ಕೆ ಭಾರತೀಯ ವಿಶ್ವವಿದ್ಯಾಲಯಗಳಲ್ಲಿನ ನಮ್ಮ ಸ್ನೇಹಿತರು, ಅವರ ಅನುಭವಕ್ಕೆ ಈಗಾಗಲೇ ಬಂದಿರಬಹುದಾದ ಒಂದು, ಕೇವಲ ಒಂದೇಒಂದು ಉದಾಹರಣೆಯನ್ನು ನಮಗೆ ತೋರುವಂತೆ ಕೇಳುತ್ತೇವೆ. ಅವರು ಅನೇಕ ಶ್ರೀಮಂತರ ಮಕ್ಕಳಿಗೆ ಶಿಕ್ಷಣ ನೀಡಿ, ಅವರ ಕೆಲವು ವಿದ್ಯಾರ್ಥಿಗಳ ಭೌತಿಕ ಮತ್ತು ಪ್ರಾಪಂಚಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಆದರೆ, ತಮ್ಮವರನ್ನು ಹೊರತುಪಡಿಸಿ ಬೇರೆಯವರ ಜೀವನವನ್ನು ಉನ್ನತೀಕರಿಸುವ ಮಹತ್ಕಾರ್ಯಕ್ಕೆ ಇವು ಯಾವ ರೀತಿಯಲ್ಲಿ ತಾನೇ ಕೊಡುಗೆ ನೀಡಿವೆ? ಯಾವ ರೀತಿಯಲ್ಲಿ ತಾನೇ ಅವರು ಜನಸಮೂಹದ ನಡುವೆ ಕೆಲಸ ಪ್ರಾರಂಭಿಸಿದ್ದಾರೆ? ಅವರಲ್ಲಿ ಯಾರಾದರೊಬ್ಬರು, ತಮ್ಮ ಮನೆಯಲ್ಲಾಗಲೀ ಅಥವಾ ಬೇರೆಲ್ಲಿಯೇ ಆಗಲೀ, ತಮಗಿಂತ ಕಡಿಮೆ ಅದೃಷ್ಟವಂತ ಅಥವಾ ಕಡಿಮೆ ಬುದ್ಧಿಮತ್ತೆ ಹೊಂದಿರುವ ತಮ್ಮದೇ ದೇಶಬಾಂಧವರಿಗೆ ತರಗತಿಗಳನ್ನು ತೆರೆದಿದ್ದಾರೆಯೇ? ಅಥವಾ, ಜ್ಞಾನವನ್ನು ತಮಗೆ ಬಂದಿರುವ ವೈಯಕ್ತಿಕ ಬಳುವಳಿಯೆಂದು ಬಗೆದು, ಅಜ್ಞಾನಿಗಳ-ಅಸಭ್ಯರ ಸಂಪರ್ಕದಿಂದಾಗಿ ಮಣ್ಣಾಗದಂತೆ ತಮ್ಮಲ್ಲಿಯೇ ಇರಿಸಿಕೊಂಡಿದ್ದಾರೆಯೇ? ಎಲ್ಲರ ಹಿತಾಸಕ್ತಿಯನ್ನು ಮುಂದುಮಾಡುವ ಮೂಲಕ, ಬೇರೆಯವರು ಇವರಿಗೆ ತೋರಿದ ಪರೋಪಕಾರವನ್ನು ದೇಶಾಭಿಮಾನವನ್ನಾಗಿ ಪರಿವರ್ತಿಸುವ ತವಕವನ್ನು ಇನ್ನಾವುದೇ ರೀತಿಯಲ್ಲಾದರು ತೋರಿದ್ದಾರೆಯೇ? [ಹೀಗಿರುವಾಗ], ಉನ್ನತ ವರ್ಗಗಳಿಗೆ ಕೊಡಮಾಡುವ ಬೋಧನೆಯ ಗುಣಮಟ್ಟವನ್ನು ಹೆಚ್ಚಿಸಿದರೆ ಜನರ ನೈತಿಕತೆ ಮತ್ತು ಬೌದ್ಧಿಕ ಬೆಳವಣಿಗೆಗೆ ಉತ್ತಮ ಮಾರ್ಗವಾಗಿದೆ ಎಂದು ಯಾವ ಆಧಾರದ ಮೇಲೆ ಪ್ರತಿಪಾದಿಸಲಾಗಿದೆ? ಈ ವಾದ ಶ್ರೀಮಂತ ವರ್ಗಕ್ಕೆ ಅದ್ಭುತವೆನಿಸಿದರೂ, ಸಮರ್ಥನೀಯವಲ್ಲ. ದೇಶದಲ್ಲಿ ಸಂತಸವು ಹೇಗೆ ಬೆಳೆಯುತ್ತಲಿದೆ ಎಂಬುದನ್ನು ತೋರ್ಪಡಿಸಲು, ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಶೈಕ್ಷಣಿಕ ಪದವಿಗಳ ಪಟ್ಟಿಗಳನ್ನು ಉಲ್ಲೇಖಿಸಿದರೆ ಸಾಕು. ಪ್ರತಿ ತಂಟೆಕೋರನನ್ನೂ ರಾಷ್ಟ್ರೀಯ ದಾನಿ ಎಂದು ಪರಿಗಣಿಸಬಹುದು ಮತ್ತು ಡೀನ್‌ಗಳು ಮತ್ತು ಶಿಸ್ತು ಪಾಲಕ ಪ್ರಾಕ್ಟರ್‌ಗಳ ಅಸ್ತಿತ್ವವನ್ನು, ಆಟದ ಕಾನೂನುಗಳು ಮತ್ತು ಹತ್ತು-ಪೌಂಡ್ ಫ್ರ್ಯಾಂಚೈಸ್‌ನಂತೆ (ಕಾಡುಪ್ರಾಣಿಗಳನ್ನು ಬೇಟೆಯಾಡುವ), ಸಂವಿಧಾನದ ಉತ್ತಮ ಹಿತಾಸಕ್ತಿಗಳೊಂದಿಗೆ ಸಂಬಂಧ ಕಲ್ಪಿಸಬಹುದು.

“ಉನ್ನತ ವರ್ಗದ ಶಿಕ್ಷಣವನ್ನು ಬೆಂಬಲಿಸುವ ಸರ್ಕಾರಿ ವ್ಯವಸ್ಥೆಯಲ್ಲಿ ಕಣ್ಣಿಗೆ ರಾಚುವ ಒಂದು ಅಂಶವೆಂದರೆ, ಸರ್ಕಾರದ ಅಧೀನದಲ್ಲಿರುವ ಎಲ್ಲಾ ಉನ್ನತ ಕಚೇರಿಗಳ ಮೇಲೆ ಬ್ರಾಹ್ಮಣರು ಸಾಧಿಸಿರುವ ಏಕಸ್ವಾಮ್ಯ. ರೈತಾಪಿಯ [ಜನಸಾಮಾನ್ಯರ] ಕಲ್ಯಾಣವು ಮುಖ್ಯವಾಗಿದ್ದರೆ, [ತನ್ನ ನೀತಿಗಳು] ದುರುಪಯೋಗವಾಗದಂತೆ ತಡೆಯುವುದು ಸರ್ಕಾರದ ಕರ್ತವ್ಯವಾಗಿದ್ದರೆ, ಈ ಏಕಸ್ವಾಮ್ಯತೆಯನ್ನು ದಿನದಿಂದ ದಿನಕ್ಕೆ ಸಡಲಿಸುತ್ತಾ ಇತರೆ ಜಾತಿಗಳು ಸಹ ಸಾರ್ವಜನಿಕ ಸೇವೆಗಳಿಗೆ (public service) ಪ್ರವೇಶಿಸಲು ಅನುವು ಮಾಡಿಕೊಡುವುದು ಕೂಡ ಅದರ ಕರ್ತವ್ಯವಾಗುತ್ತದೆ. ಬಹುಶಃ ಇಂದಿನ ಶಿಕ್ಷಣದ ಸ್ಥಿತಿಗತಿಯನ್ನು ಗಮನಿಸಿ, ಕೆಲವರು ಇದು ಕಾರ್ಯಸಾಧುವಲ್ಲ ಎಂಬ ಧೋರಣೆಯನ್ನು ತಳೆಯಬಹುದು. ಇದಕ್ಕೆ ನಮ್ಮ ಏಕೈಕ ಉತ್ತರವೆಂದರೆ, ತನ್ನ ಬೇಕು-ಬೇಡಗಳನ್ನು ತಾನೇ ನೋಡಿಕೊಳ್ಳಲು ಶಕ್ತವಾಗಿರುವ ಉನ್ನತ ಶಿಕ್ಷಣದ ಬಗ್ಗೆ ವಹಿಸುತ್ತಿರುವ ಕಾಳಜಿಯನ್ನು ಸರ್ಕಾರವು ಒಂದಷ್ಟು ಕಡಿಮೆ ಮಾಡಿ ಜನಸಾಮಾನ್ಯರ ಶಿಕ್ಷಣದ ಕಡೆಗೆ ಹೆಚ್ಚು ಕಾಳಜಿ ವಹಿಸಿದರೆ ಎಲ್ಲಾ ರೀತಿಯಲ್ಲೂ ಇದಕ್ಕಿಂತಲೂ ಹೆಚ್ಚು ಅರ್ಹರಾಗಿರುವ ಹಾಗೂ ನೈತಿಕತೆ ಮತ್ತು ನಡವಳಿಕೆಯಲ್ಲಿ ಉತ್ತಮರಾಗಿರುವವರನ್ನು ತಯಾರುಗೊಳಿಸುವುದಕ್ಕೆ ಯಾವುದೇ ಕಷ್ಟವಿರುವುದಿಲ್ಲ.

“ಸದರಿ ಸಂಪುಟವನ್ನು ಬರೆಯುವ ಹಿಂದಿನ ನನ್ನ ಉದ್ದೇಶ ಬ್ರಾಹ್ಮಣರು ಹೇಗೆ ನನ್ನ ಶೂದ್ರ ಸಹೋದರರನ್ನು ವಂಚಿಸುತ್ತಿದ್ದಾರೆ ಎಂಬುದನ್ನು ಹೇಳುವುದು ಮಾತ್ರವಲ್ಲ, ಬದಲಿಗೆ, ಇದುವರೆಗೆ ನಿರಂತರವಾಗಿ ಚಾಲ್ತಿಯಲ್ಲಿರುವ ಉನ್ನತ ದರ್ಜೆಯ ಶಿಕ್ಷಣ ವ್ಯವಸ್ಥೆಯು ಹೇಗೆ ಹಾನಿಕಾರಕ ಎಂಬುದನ್ನು ಸರ್ಕಾರಕ್ಕೆ ಮನಗಾಣಿಸುವುದಾಗಿದೆ ಮತ್ತು ಪ್ರಸ್ತುತ ಬಂಗಾಳದ ಲೆಫ್ಟಿನೆಂಟ್-ಗವರ್ನರ್ ಆಗಿರುವ ಸರ್ ಜಾರ್ಜ್ ಕ್ಯಾಂಪ್‌ಬೆಲ್ ಅವರಂತೆ ಎಲ್ಲರ ಹಿತ ಚಿಂತಿಸುವ ಆಡಳಿತಗಾರರು ಈ ನೀತಿಯು ಸರ್ಕಾರದ ಹಿತಾಸಕ್ತಿಗಳನ್ನು ಗಾಳಿಗೆ ತೂರುತ್ತಾ ಅಪಾಯಕಾರಿಯಾಗಿದೆ ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ ಎಂಬುದರ ಕಡೆಗೆ ಗಮನ ಸೆಳೆಯಲು. ಸರ್ಕಾರವು ತನ್ನ ತಪ್ಪನ್ನು ಆದಷ್ಟು ಬೇಗ ಅರಿತುಕೊಂಡು, ಮೇಲ್ವರ್ಗದ ಕಣ್ಣಿಂದ ಲೋಕವನ್ನು ಕಾಣುವ ಲೇಖಕರನ್ನೂ ಜನರನ್ನೂ ನಂಬುವುದನ್ನು ಕಡಿಮೆ ಮಾಡಿ, ನನ್ನ ಶೂದ್ರ ಸಹೋದರರ ಸುತ್ತಲೂ ಬ್ರಾಹ್ಮಣರು ಹೆಣೆದಿರುವ ವಿಷಸರ್ಪದಂತಹ ಸರಪಳಿಯ ಬಂಧನದಿಂದ ಅವರನ್ನು ಬಿಡುಗಡೆಗೊಳಿಸಿ ಅದರ ಕೀರ್ತಿಯನ್ನು ಪಡೆದುಕೊಳ್ಳುತ್ತದೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ. ಒಂದಿಷ್ಟು ಶಿಕ್ಷಣವನ್ನು ಪಡೆದಿರುವ ನನ್ನ ಶೂದ್ರ ಸಹೋದರರೆಲ್ಲರೂ ತಮ್ಮ ಸಮುದಾಯದವರ ನಿಜ ಪರಿಸ್ಥಿತಿಯನ್ನು ಸರ್ಕಾರದ ಮುಂದಿಡುವುದು ಮತ್ತು ಬ್ರಾಹ್ಮಣರ ಗುಲಾಮಿತನದಿಂದ ಹೊರಬರಲು ತಮ್ಮ ಶಕ್ತಿಯ ಅನುಸಾರ ಪ್ರಯತ್ನಿಸುವುದು ಕೂಡ ಅಷ್ಟೇ ಮುಖ್ಯವಾದ ಕರ್ತವ್ಯವಾಗಿದೆ. ಪ್ರತಿ ಹಳ್ಳಿಯಲ್ಲೂ ಶೂದ್ರರಿಗೆ ಶಾಲೆಗಳಿರಲಿ; ಆದರೆ ಬ್ರಾಹ್ಮಣ ಶಾಲಾ-ಮಾಸ್ತರರೆಲ್ಲರೂ ದೂರವಿರಲಿ! ಶೂದ್ರರು ಈ ದೇಶದ ನರನಾಡಿಗಳು. ಶೂದ್ರರು ಈ ದೇಶದ ಜೀವ. ಶೂದ್ರರ ಮತ್ತು ಅವರ ಮಾತ್ರ ಆರ್ಥಿಕ ಮತ್ತು ರಾಜಕೀಯ ಕಷ್ಟಗಳನ್ನು ನಿವಾರಿಸಲು ಸರ್ಕಾರ ಶ್ರಮಿಸಬೇಕೇ ಹೊರತು ಬ್ರಾಹ್ಮಣರದ್ದಲ್ಲ. ಶೂದ್ರರ ಹೃದಯ-ಮನಸ್ಸುಗಳು ಸಂತೋಷ ಮತ್ತು ಸಂತೃಪ್ತವಾಗಿದ್ದರೆ, ಭವಿಷ್ಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಅವರ ನಿಷ್ಠೆಯ ಬಗ್ಗೆ ಯಾವುದೇ ಭಯವಿರಬೇಕಿಲ್ಲ.”

ಪ್ರಾಥಮಿಕ ಶಿಕ್ಷಣ

ಈ ಪ್ರೆಸಿಡೆನ್ಸಿಯಲ್ಲಿ ಜನಸಾಮಾನ್ಯರ ಪ್ರಾಥಮಿಕ ಶಿಕ್ಷಣವು ಹೆಚ್ಚು ನಿರ್ಲಕ್ಷಕ್ಕೊಳಗಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಕೆಲವು ವರ್ಷಗಳ ಹಿಂದಿದ್ದ ಸಂಖ್ಯೆಗಿಂತ ಹೆಚ್ಚು ಪ್ರಾಥಮಿಕ ಶಾಲೆಗಳು ಇಂದಿವೆಯಾದರೂ, ಅವು ಸಮುದಾಯದ ಅವಶ್ಯಕತೆಗಳಿಗೆ ಅನುಗುಣವಾಗಿಲ್ಲ. ಶಿಕ್ಷಣಕ್ಕಾಗಿ ಸರ್ಕಾರವು ವಿಶೇಷ ಸೆಸ್ (cess)ಅನ್ನು ಸಂಗ್ರಹಿಸುತ್ತದೆ ಮತ್ತು ಈ ನಿಧಿಯನ್ನು ಯಾವ ಉದ್ದೇಶಗಳಿಗಾಗಿ ಸಂಗ್ರಹಿಸಲಾಗಿದೆಯೋ ಅದಕ್ಕಾಗಿ ಖರ್ಚು ಮಾಡಲಾಗುತ್ತಿಲ್ಲ ಎಂಬುದು ವಿಷಾದನೀಯ. ಈ ಪ್ರೆಸಿಡೆನ್ಸಿಯ ಸುಮಾರು ಹತ್ತರಲ್ಲಿ ಒಂಭತ್ತು ಹಳ್ಳಿಗಳು ಅಥವಾ ಸುಮಾರು 10 ಲಕ್ಷ ಮಕ್ಕಳು, ಪ್ರಾಥಮಿಕ ಶಿಕ್ಷಣಕ್ಕಾಗಿ ಯಾವುದೇ ರೀತಿಯ ಅವಕಾಶ ಹೊಂದಿಲ್ಲ ಎಂದು ಹೇಳಲಾಗುತ್ತದೆ. ಅವರ ಬಡತನ, ಅವರಲ್ಲಿನ ಸ್ವಾವಲಂಬನೆಯ ಕೊರತೆ ಮತ್ತು ಕಲಿತ-ಬುದ್ಧಿವಂತ ವರ್ಗಗಳ ಮೇಲೆಯೇ ಅವರು ಸಂಪೂರ್ಣವಾಗಿ ಅವಲಂಬಿಸಿರುವುದಕ್ಕೆ, ರೈತಾಪಿಗಳಲ್ಲಿನ ಶೋಚನೀಯ ಶಿಕ್ಷಣದ ಪರಿಸ್ಥಿತಿಯೇ ಕಾರಣವಾಗಿದೆ.

ಪಟ್ಟಣಗಳಲ್ಲಿಯೂ ಸಹ ಸಾಮಾನ್ಯವಾಗಿ ಬ್ರಾಹ್ಮಣರು, ಫರ್ಬುಗಳು- ಹೀಗೆ ಲೇಖನಿಗೆ ಸಂಬಂಧಿಸಿದಂತಹ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಮತ್ತು ವ್ಯಾಪಾರದ ವಂಶಪಾರಂಪರ್ಯ ವರ್ಗಗಳು ಪ್ರಾಥಮಿಕ ಶಿಕ್ಷಣವನ್ನು ಅರಸುತ್ತಾರೆ. ಬೇಸಾಯ ಮಾಡುವವರು ಮತ್ತು ಇತರ ವರ್ಗಗಳು, ಸಾಮಾನ್ಯವಾಗಿ ಪ್ರಾಥಮಿಕ ಶಿಕ್ಷಣದ ಪ್ರಯೋಜನವನ್ನು ಪಡೆಯುವುದಿಲ್ಲ. ಇತರ ವರ್ಗಗಳ ಕೆಲವರನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಕಾಣಬಹುದಾದರೂ, ಬಡತನ ಮತ್ತು ಇತರ ಕಾರಣಗಳಿಂದಾಗಿ ಅವರು ಶಾಲೆಯಲ್ಲಿ ದೀರ್ಘಕಾಲ ಮುಂದುವರಿಯುವುದಿಲ್ಲ. ಅವರಿಗೆ ಶಾಲೆಯನ್ನು ಮುಂದುವರಿಸಲು ಯಾವುದೇ ವಿಶೇಷ ಆಕರ್ಷಣೆಗಳಿಲ್ಲದ ಕಾರಣ, ಯಾವುದಾದರೂ ಸಣ್ಣ ಕೆಲಸ ಅಥವಾ ಉದ್ಯೋಗವೋ ಸಿಕ್ಕ ಕೂಡಲೇ ಅವರು ಶಾಲೆಯನ್ನು ಸ್ವಾಭಾವಿಕವಾಗಿಯೇ ಬಿಟ್ಟುಬಿಡುತ್ತಾರೆ. ಹಳ್ಳಿಗಳಲ್ಲಿಯೂ ಸಹ, ಕಡುಬಡತನದ ಕಾರಣದಿಂದ ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ ವರ್ಗಗಳು ಶಾಲೆಯಿಂದ ದೂರವೇ ಉಳಿಯುತ್ತಾರೆ. ಅಲ್ಲದೇ, ತಮ್ಮ ಮಕ್ಕಳು ಜಾನುವಾರುಗಳನ್ನು ಮತ್ತು ಹೊಲಗಳನ್ನು ನೋಡಿಕೊಳ್ಳಲೆಂದು ಪೋಷಕರು ಬಯಸುತ್ತಾರೆ. ಹೆಚ್ಚೆಚ್ಚು ಶಾಲೆಗಳನ್ನು ತೆರೆಯುವುದರ ಜೊತೆಗೆ, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪ್ರೋತ್ಸಾಹಿಸಲು ಮತ್ತು ಅವರಲ್ಲಿ ಕಲಿಕೆಯ ಅಭಿರುಚಿಯನ್ನು ಮೂಡಿಸಲು ವಿದ್ಯಾರ್ಥಿವೇತನಗಳನ್ನೂ, ಅರೆ-ವಾರ್ಷಿಕ ಅಥವಾ ವಾರ್ಷಿಕ ಬಹುಮಾನಗಳ ರೂಪದಲ್ಲಿ ವಿಶೇಷ ಪ್ರೋತ್ಸಾಹವನ್ನು ನೀಡುವುದು ಅತ್ಯಂತ ಅವಶ್ಯಕವಾಗಿದೆ. ನನ್ನ ಪ್ರಕಾರ, ನಿರ್ದಿಷ್ಟ ವಯಸ್ಸಿನವರೆಗೆ, ಅಂದರೆ ಕನಿಷ್ಟ 12 ವರ್ಷಗಳವರೆಗೆ ಪ್ರಾಥಮಿಕ ಶಿಕ್ಷಣವನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು. ಮರಾಠಿ ಬಗ್ಗೆಯಾಗಲೀ ಇಂಗ್ಲಿಷಿನ ಬಗ್ಗೆಯಾಗಲೀ ಅದೇಕೋ ಒಲವಿರದ ಮುಹಮ್ಮದನರು ಕೂಡ ಈ ಶಾಲೆಗಳಿಂದ ದೂರವೇ ಉಳಿಯುತ್ತಾರೆ. ಕೆಲವು ಮುಹಮ್ಮದನ್‌ರ ಪ್ರಾಥಮಿಕ ಶಾಲೆಗಳಲ್ಲಿ ತಮ್ಮದೇ ಭಾಷೆಯನ್ನು ಕಲಿಸಲಾಗುತ್ತದೆ. ಉನ್ನತ ಜಾತಿಗಳ ಮಕ್ಕಳೊಂದಿಗೆ ಕೂರುವ ಅವಕಾಶವಿರದ ಕಾರಣ, ವಾಸ್ತವದಲ್ಲಿ ಎಲ್ಲಾ ಶಾಲೆಗಳಿಂದ ಮಹಾರರು, ಮಾಂಗರು ಮತ್ತು ಇತರೆ ಕೆಳವರ್ಗದವರನ್ನು ಹೊರಗಿಡಲಾಗಿದೆ. ಇದರ ಪರಿಣಾಮವಾಗಿ, ಸರ್ಕಾರವು ಇವರಿಗಾಗಿಯೇ ವಿಶೇಷ ಶಾಲೆಗಳನ್ನು ತೆರೆಯಿತು. ಆದರೆ ಇವುಗಳಿರುವುದು ದೊಡ್ಡ ಪಟ್ಟಣಗಳಲ್ಲಿ ಮಾತ್ರ. 5,000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಇಡೀ ಪೂನಾದಲ್ಲಿ, ಇರುವುದು ಒಂದು ಶಾಲೆ ಮಾತ್ರ. ಅಲ್ಲಿನ ಹಾಜರಾತಿ, 30ಕ್ಕಿಂತಲೂ ಕಡಿಮೆಯಿದೆ. ಈ ಸ್ಥಿತಿಗೆ ಕಾರಣ ಶಿಕ್ಷಣ ಅಧಿಕಾರಿಗಳಲ್ಲ. ಬ್ರಿಟಿಷ್ ರಾಣಿಯವರ ಅಧಿಕಾರದಲ್ಲಿ ಭರವಸೆಯಿಟ್ಟು, ಜಾತಿ ಪೂರ್ವಾಗ್ರಹಗಳ ಕಾರಣದಿಂದ ಇತರ ಶಾಲೆಗಳಿಗೆ ಮಹಾರ್, ಮಾಂಗ್ ಮತ್ತು ಇತರೆ ಕೆಳವರ್ಗದವರು ಹಾಜರಾಗಲು ಅನುಮತಿಯಿಲ್ಲದ ಕಾರಣ, ಅವರು ಸಾಕಷ್ಟು ಸಂಖ್ಯೆಯಲ್ಲಿರುವ ಕಡೆಗಳಲ್ಲಿ ಅವರಿಗಾಗಿಯೇ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕೆಂದು ನಾನು ಒತ್ತಾಯಿಸುತ್ತೇನೆ.

ಇಂದಿನ ಶೈಕ್ಷಣಿಕ ಸ್ಥಿತಿಯಲ್ಲಿ, ಇನ್ನೂ ಶಿಕ್ಷಣದ ಅಭಿರುಚಿಯೇ ಸೃಷ್ಟಿಯಾಗಿಲ್ಲದ ಬಡವರ ಮತ್ತು ಅರಿವಿಲ್ಲದವರ ನಡುವೆ ಶಿಕ್ಷಣವನ್ನು ಉತ್ತೇಜಿಸಲು ಫಲಿತಾಂಶಗಳನ್ನು ಆಧರಿಸಿ ಮಾಡುವ ಪಾವತಿಯು ಸೂಕ್ತವೆನಿಸುವುದಿಲ್ಲ. ನನ್ನ ಪ್ರಕಾರ, ಅದರಿಂದ ತನ್ನ ಜೀವನವನ್ನು ನಡೆಸಲು ಸಾಧ್ಯವಾಗದ ಕಾರಣ ಯಾವುದೇ ಶಿಕ್ಷಕನು ಈ ಜನರಿಗಾಗಿ ತನ್ನ ಸ್ವಂತ ಖರ್ಚಿನಿಂದ ಶಾಲೆಗಳನ್ನು ತೆರೆಯಲು ಮುಂದಾಗುವುದಿಲ್ಲ. ಅವರ ನಡುವೆ ಅಂತಹ ಅಭಿರುಚಿ ಮೂಡುವವರೆಗೆ, ಮೇಲೆ ತಿಳಿಸಿದಂತೆ ಸರ್ಕಾರಿ ಶಾಲೆಗಳು ಮತ್ತು ವಿಶೇಷ ಪ್ರೋತ್ಸಾಹಗಳು ಅತ್ಯಗತ್ಯವೆನಿಸುತ್ತದೆ.

ಪ್ರೆಸಿಡೆನ್ಸಿಯಲ್ಲಿರುವ ಕೆಲವು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ, ಅಲ್ಲಿ ನೀಡಲಾಗುತ್ತಿರುವ ಪ್ರಾಥಮಿಕ ಶಿಕ್ಷಣವು ತೃಪ್ತಿಕರ ಮತ್ತು ಸಮರ್ಥವಾಗಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ಎಲ್ಲಿಯವರೆಗೆ ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನಕ್ಕೆ ಈ ವ್ಯವಸ್ಥೆ ಉಪಯುಕ್ತವೆನಿಸುವುದಿಲ್ಲವೋ, ಎಲ್ಲಿಯವರೆಗೆ ಈ ವ್ಯವಸ್ಥೆ ಪ್ರಾಯೋಗಿಕವಾಗುವುದಿಲ್ಲವೋ, ಅಲ್ಲಿಯವರೆಗೆ ಈ ವ್ಯವಸ್ಥೆ ದೋಷಪೂರಿತವಾಗಿಯೇ ಉಳಿಯಲಿದೆ. ಭವಿಷ್ಯದಲ್ಲಿ ಶಿಕ್ಷಣವನ್ನು ಉಪಯುಕ್ತವನ್ನಾಗಿಸುವ ನಿಟ್ಟಿನಲ್ಲಿ ಬದಲಾವಣೆಗಳನ್ನು ತಂದುಕೊಳ್ಳಬಹುದಾದರೆ, ಸಮುದಾಯದ ಅಗತ್ಯತೆಗಳನ್ನು ಪೂರೈಸುವಂತೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ. ಶಿಕ್ಷಕರ ನೇಮಕಾತಿ ಮತ್ತು ಈಗ ಅನುಸರಿಸಲಾಗುತ್ತಿರುವ ಬೋಧನಾ ರೀತಿ, ಇವೆರಡನ್ನು ಸಂಪೂರ್ಣವಾಗಿ ಮರುರೂಪಿಸುವ ಅಗತ್ಯವಿದೆ.

ಇದನ್ನೂ ಓದಿ: ವಿಪರೀತದ ಬೆಳಗು ಫುಲೆ ಮಾರ್ಗ

(ಎ) ಪ್ರಾಥಮಿಕ ಶಾಲೆಗಳಲ್ಲಿ ಈಗ ನೇಮಕಗೊಂಡಿರುವ ಶಿಕ್ಷಕರಲ್ಲಿ ಬಹುತೇಕರೆಲ್ಲಾ ಬ್ರಾಹ್ಮಣರೇ; ಅವರಲ್ಲಿ ಕೆಲವರು ಮಾತ್ರ ಸಾಮಾನ್ಯ ತರಬೇತಿ ನೀಡುವ ಕಾಲೇಜಿನಿಂದ ಬಂದವರಾಗಿದ್ದರೆ, ಉಳಿದವರೆಲ್ಲರೂ ತರಬೇತಿ ಪಡೆಯದ ಪುರುಷರು. ಅವರ ವೇತನ ಬಹಳ ಕಡಿಮೆಯಿದ್ದು, ಎಲ್ಲೋ ಕೆಲವು ಕಡೆಗಳಲ್ಲಿ ಮಾತ್ರ ಅವರ ಆದಾಯ 10 ರೂಪಾಯಿಯನ್ನು ಮೀರುತ್ತದೆ. ಅವರ ಸಾಧನೆಗಳೂ ಸಹ ಅತ್ಯಲ್ಪವೇ ಇದೆ. ಆದರೆ ಅವರೆಲ್ಲರೂ ಅವಾಸ್ತವಿಕ ಮತ್ತು ಪ್ರಾಯೋಗಿಕ ಜ್ಞಾನವಿಲ್ಲದ ಪುರುಷರು, ಮತ್ತು ಅವರಡಿ ಕಲಿಯುವ ಹುಡುಗರು ಸಾಮಾನ್ಯವಾಗಿ ನಿಷ್ಕ್ರಿಯತೆ-ಸೋಮಾರಿತನದ ಆಸಕ್ತಿಗಳನ್ನೇ ಮೈಗೂಡಿಸಿಕೊಂಡು, ಬೇರೆಯವರಿಂದಲೇ ಸೇವೆಗಳನ್ನು ಪಡೆಯುತ್ತಾ ಅವರಿಗೆ ತಲತಲಾಂತರದಿಂದ ಬಂದಿರುವ ವೃತ್ತಿಗಳನ್ನು ಅಥವಾ ಇತರ ಸ್ವತಂತ್ರವಾದ, ಕಠಿಣವಾದ ವೃತ್ತಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನನ್ನ ಪ್ರಕಾರ, ತಮ್ಮ ಧಾರ್ಮಿಕ ಪೂರ್ವಾಗ್ರಹಗಳಿಂದಾಗಿ ಎಲ್ಲರಿಂದಲೂ ಅಂತರವನ್ನು ಕಾಯ್ದುಕೊಳ್ಳುವ ಬ್ರಾಹ್ಮಣ ಶಿಕ್ಷಕರಿಗಿಂತ, [ಮಾಂಗ್, ಮಹಾರ್ ಮತ್ತು ಕೆಳ ವರ್ಗಗಳ ವಿದ್ಯಾರ್ಥಿಗಳೊಂದಿಗೆ] ಮುಕ್ತವಾಗಿ ಬೆರೆಯಲು ಮತ್ತು ಅವರ ಬೇಕು-ಬೇಡಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಕ್ಕಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿರುವ, ರೈತಾಪಿ ವರ್ಗಗಳಿಂದ ಬರುವವರನ್ನೇ ಸಾಧ್ಯವಾದಷ್ಟರ ಮಟ್ಟಿಗೆ ಪ್ರಾಥಮಿಕ ಶಾಲೆಗಳ ಶಿಕ್ಷಕರಾಗುವುದಕ್ಕೆ ತರಬೇತುಗೊಳಿಸಬೇಕು. ಇದರಿಂದಾಗಿ, ಅಗತ್ಯ ಬಿದ್ದಾಗ ನೇಗಿಲನ್ನು ಹಿಡಿಯಲು ಅಥವಾ ಬಡಗಿಯ ಉಳಿಯನ್ನು ಹಿಡಿಯಲು ಯಾರೂ ಅವಮಾನ ಪಡುವುದಿಲ್ಲ, ಮತ್ತವರು ಸಮಾಜದ ಕೆಳ ಸ್ತರಗಳಿಂದ ಬರುವವರೊಟ್ಟಿಗೂ ಬೆರೆಯಲು ಸಹ ಉತ್ಸುಕರಾಗಿರುತ್ತಾರೆ. ಆದಕಾರಣ ಇತರೆ ವರ್ಗಗಳ ಶಿಕ್ಷಕರು ಜನರ ಮೇಲೆ ಬೀರಬಹುದಾದ ಪ್ರಭಾವಕ್ಕಿಂತಲೂ ಹೆಚ್ಚಿನ ಪ್ರಭಾವ ಬೀರಬಹುದು. ಅವರಿಗೆ ನೀಡಲಾಗುವ ತರಬೇತಿಯಲ್ಲಿ ಸಾಮಾನ್ಯ ವಿಷಯಗಳ ಜೊತೆಗೆ, ಕೃಷಿ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಪ್ರಾಥಮಿಕ ಪಾಠಗಳೂ ಇರಬೇಕು. ಅತ್ಯಂತ ದಕ್ಷರಾಗಿರುವವರನ್ನು ಹೊರತುಪಡಿಸಿ, ತರಬೇತಿ ಪಡೆಯದ ಶಿಕ್ಷಕರ ಬದಲಿಗೆ ದಕ್ಷರಾದ, ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಇನ್ನೂ ಉತ್ತಮರಾಗಿರುವ ಶಿಕ್ಷಕರನ್ನು ನೇಮಿಸಿಕೊಳ್ಳುವಂತಾಗಲು, ಅವರಿಗಿರುವ ಸ್ಥಾನಮಾನವನ್ನು ಸುಧಾರಿಸಲು, ಹೆಚ್ಚಿನ ಸಂಬಳವನ್ನು ನಿಗದಿಪಡಿಸಬೇಕು. ಅವರ ಸಂಬಳ ಕನಿಷ್ಟವೆಂದರೂ ರೂ 12 ಇರಬೇಕು ಮತ್ತು ದೊಡ್ಡದಾದ ಹಳ್ಳಿಗಳಲ್ಲಿ ಅದು ಕನಿಷ್ಠ ರೂ. 15 ರಿಂದ ರೂ. 20 ರಷ್ಟಿರಬೇಕು. ಅವರನ್ನು ಗ್ರಾಮ ಖಾತೆಗಳ ಲೆಕ್ಕ ಪರಿಶೋಧಕರಾಗಿಯೋ ಅಥವಾ ದಾಖಲೆಪತ್ರಗಳ ರಿಜಿಸ್ಟ್ರಾರ್ ಅಗಿಯೋ ಅಥವಾ ಗ್ರಾಮಗಳ ಪೋಸ್ಟ್‌ಮಾಸ್ಟರುಗಳಾಗಿಯೋ ಅಥವಾ ಅಂಚೆಚೀಟಿ ವಿತರಕರಾಗಿಯೋ ಅವರನ್ನು ಗ್ರಾಮಾಡಳಿತದಲ್ಲಿ ಸೇರಿಸಿಕೊಳ್ಳುವುದರಿಂದ ಅವರ ಸ್ಥಾನಮಾನ ಸುಧಾರಿಸುತ್ತದೆ. ಇದರಿಂದಾಗಿ ಅವರು ವಾಸಿಸುವ ಜನರ ನಡುವೆ ಹೆಚ್ಚಿನ ಪ್ರಭಾವವನ್ನು ಬೀರಬಹುದು. ಹೆಚ್ಚಿನ ಸಂಖ್ಯೆಯ ಹುಡುಗರನ್ನು ಪಾಸು ಮಾಡಿಸುವ ಹಳ್ಳಿಯ ಶಾಲೆಗಳ ಶಿಕ್ಷಕರನ್ನು ಪ್ರೋತ್ಸಾಹಿಸಲು ಅವರಿಗೆ ಸಂಬಳದೊಂದಿಗೆ ಹೆಚ್ಚುವರಿಯಾಗಿ ವಿಶೇಷ ಭತ್ಯೆಯನ್ನು ನೀಡಬೇಕು.

(ಬಿ) ಬೋಧನಾ ತರಬೇತಿಯಲ್ಲಿ ಮೋದಿ (ಮರಾಠಿ ಬರೆಯಲು ಬಳಸುತ್ತಿದ್ದ ಲಿಪಿ) ಮತ್ತು ಬಾಲಬೋಧ್‌ನ (ಸುಧಾರಿತ ದೇವನಾಗರಿ ಲಿಪಿ) ಓದು ಮತ್ತು ಬರವಣಿಗೆಯೊಂದಿಗೆ ಲೆಕ್ಕಗಳು, ಇತಿಹಾಸ, ಭೂಗೋಳಶಾಸ್ತ್ರ ಮತ್ತು ವ್ಯಾಕರಣದ ಪ್ರಾಥಮಿಕ ಪಾಠಗಳಿರಬೇಕು. ಅಲ್ಲದೇ, ಕೃಷಿ, ನೈತಿಕ ಕರ್ತವ್ಯಗಳು ಮತ್ತು ನೈರ್ಮಲ್ಯದ ಕುರಿತೂ ಕೆಲವು ಪಾಠಗಳನ್ನು ಒಳಗೊಂಡಿರಬೇಕು. ಹಳ್ಳಿಯ ಶಾಲೆಗಳಲ್ಲಿನ ಕಲಿಸಲಾಗುವ ಪಾಠಗಳು, ದೊಡ್ಡ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಕಲಿಸಲಾಗುವ ಪಾಠಗಳಿಗಿಂತ ತುಸು ಕಡಿಮೆಯಿದ್ದರೂ ಸರಿಯೇ, ಅದರೆ, ಅವು ಯಾವುದೇ ರೀತಿಯಲ್ಲಿಯೂ ತನ್ನ ಪ್ರಾಯೋಗಿಕತೆಯಲ್ಲಿ ಹಿಂದುಳಿಯಬಾರದು. ಕೃಷಿಯ ಪಾಠಗಳಿಗೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳಿಗೆ ಪ್ರಯೋಗಗಳ ಮೂಲಕ ಕಲಿಸಲು ಅನುವು ಮಾಡಿಕೊಡಿವ ಒಂದು ಸಣ್ಣ ಮಾದರಿ ಹೊಲ ಅತ್ಯಂತ ಹೆಚ್ಚು ಉಪಯುಕ್ತವೆನಿಸಲಿದೆ. ನಿಜವಾಗಿಯೂ ಇದನ್ನು ಸಮರ್ಥವಾಗಿ ನಿರ್ವಹಿಸಿದರೆ, ದೇಶಕ್ಕೇ ಇದು ಒಳಿತನ್ನು ತಂದುಕೊಡಬಲ್ಲದು. ಪ್ರಾಥಮಿಕ ಮತ್ತು ಆಂಗ್ಲೋ-ವರ್ನಾಕ್ಯುಲರ್ ಶಾಲೆಗಳಲ್ಲಿ ಬಳಕೆಯಲ್ಲಿರುವ ಪಠ್ಯ-ಪುಸ್ತಕಗಳು ಅಪ್ರಾಯೋಗಿಕವಾಗಿರುವ ಅಥವಾ ಪ್ರಗತಿಪರವಲ್ಲದಿರುವ ಕಾರಣ ಅವುಗಳನ್ನು ಪರಿಷ್ಕರಿಸಬೇಕು ಮತ್ತು ಪುನರ್ ರಚಿಸಬೇಕು. ತಾಂತ್ರಿಕ ಶಿಕ್ಷಣ ಮತ್ತು ನೈತಿಕತೆ, ನೈರ್ಮಲ್ಯ ಮತ್ತು ಕೃಷಿ ಮತ್ತು ಕೆಲವು ಉಪಯುಕ್ತ ಕಲೆಗಳ ಕುರಿತು ಪಾಠಗಳನ್ನು ಸರಣಿಯಾಗಿ ಅವುಗಳ ನಡುವೆ ಸೇರಿಸಬೇಕು. ಪ್ರಾಥಮಿಕ ಶಾಲೆಗಳಲ್ಲಿ ಸೆಸ್ ಪಾವತಿಸುವವರ ಮಕ್ಕಳಿಗೆ 1 ರೂ. ಶುಲ್ಕವಿದ್ದರೆ ಸೆಸ್ ಪಾವತಿಸದವರ ಮಕ್ಕಳಿಗೆ 2 ರೂ. ಶುಲ್ಕವಿರಬೇಕು.

(ಸಿ) ಈ ಪ್ರಾಥಮಿಕ ಶಾಲೆಗಳ ಮೇಲ್ವಿಚಾರಣಾ ಏಜೆನ್ಸಿಯು ದೋಷಪೂರಿತವೂ, ದುರ್ಬಲವೂ ಆಗಿದೆ. ಡೆಪ್ಯುಟಿ ಇನ್ಸ್‌ಪೆಕ್ಟರರು ವರ್ಷಕ್ಕೊಮ್ಮೆ ಭೇಟಿ ನೀಡುವುದರಿಂದಾಗಿ, ಗಮನಾರ್ಹವಾದ ಯಾವುದೇ ಪ್ರಯೋಜನವಿಲ್ಲ. ಈ ಎಲ್ಲಾ ಶಾಲೆಗಳನ್ನು ವರ್ಷದಲ್ಲಿ ಇನ್ನೂ ಹೆಚ್ಚು ಬಾರಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಕನಿಷ್ಠ ನಾಲ್ಕು ಬಾರಿಯಾದರೂ ಪರಿಶೀಲಿಸಬೇಕು. ಯಾವುದೇ ಸೂಚನೆಗಳನ್ನು ನೀಡದೆ ಇತರೆ ಸಮಯಗಳಲ್ಲಿಯೂ ಈ ಶಾಲೆಗಳಿಗೆ ಭೇಟಿ ನೀಡಬೇಕೆಂಬ ಸಲಹೆಯನ್ನೂ ನಾನು ಸೂಚಿಸುತ್ತೇನೆ. ಜಿಲ್ಲೆಯ ಅಥವಾ ಗ್ರಾಮಾಧಿಕಾರಿಗಳ ಮೇಲೆ ಹೊರೆಸಲಾಗಿರುವ ವಿವಿಧ ಕರ್ತವ್ಯಗಳ ನಡುವೆ ಅವರು ಶಾಲೆಗಳಿಗೆ ಭೇಟಿ ನೀಡಲು ಸಮಯ ಕಂಡುಕೊಳ್ಳುವುದು ಕಷ್ಟವೆನಿಸಿದೆ. ಸಮಯ ಮಾಡಿಕೊಂಡಿದ್ದೇ ಆದಲ್ಲಿ, ಅವರು ಶಾಲೆಗಳನ್ನು ಪರಿಶೀಲಿಸುವ ರೀತಿಯು ಅಪೂರ್ಣವಾಗಿರುತ್ತದೆ ಮತ್ತು ತೋರ್ಪಡಿಕೆಗಾಗಿ ಕೈಗೊಂಡದ್ದಾಗಿರುತ್ತವೆ. ಆದ್ದರಿಂದ ಅವರನ್ನು ಅವಲಂಬಿಸಲಾಗುವುದಿಲ್ಲ. ಶಿಕ್ಷಕರ ಮೇಲೆ ಅತ್ಯಂತ ಹೆಚ್ಚಿನ ನಿಯಂತ್ರಣವನ್ನು ಹೊಂದಬಹುದಾದ ಕಾರಣ ಒಮ್ಮೊಮ್ಮೆ ಯುರೋಪಿಯನ್ ಇನ್ಸ್‌ಪೆಕ್ಟರುಗಳ ಮೇಲ್ವಿಚಾರಣೆಗಳು ಸಹ ಅಪೇಕ್ಷಣೀಯವಾಗಿದೆ.

(ಡಿ) ಪ್ರಾಥಮಿಕ ಶಾಲೆಗಳ ಸಂಖ್ಯೆಯನ್ನು ಈ ಮೂಲಕ ಹೆಚ್ಚಿಸಬೇಕು.

  1. ಈಗಾಗಲೇ ತರಬೇತಿ ಪಡೆದ ಮತ್ತು ಪ್ರಮಾಣೀಕೃತ ಶಿಕ್ಷಕರಿಂದ ನಡೆಸಲಾಗುತ್ತಿರುವ ಅಥವಾ ನಡೆಸಲಾಗುವ ಸ್ಥಳೀಯ ಶಾಲೆಗಳಿಗೆ ಉದಾರ ಅನುದಾನವನ್ನು ನೀಡುವ ಮೂಲಕ ಅವುಗಳನ್ನು ಬಳಸಿಕೊಳ್ಳಬೇಕು
  2. ಸ್ಥಳೀಯ ಸೆಸ್ ನಿಧಿಯ ಅರ್ಧಕ್ಕಿಂತ ಹೆಚ್ಚಿನದನ್ನು ಪ್ರಾಥಮಿಕ ಶಿಕ್ಷಣಕ್ಕಾಗಿಯೇ ಮೀಸಲಿಡುವ ಮೂಲಕ.
  3. ಶಾಸನಬದ್ಧ ಅಧಿನಿಯಮದಡಿಯಲ್ಲಿ, ಪುರಸಭೆ-ನಗರಸಭೆಗಳು ತಮ್ಮ ಸರಹದ್ದಿನಲ್ಲಿರುವ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ನಿರ್ವಹಿಸಲು ಕಡ್ಡಾಯಗೊಳಿಸುವ ಮೂಲಕ.
  4. ಪ್ರಾಂತೀಯ ಅಥವಾ ಸಾಮ್ರಾಜ್ಯಶಾಹಿ ನಿಧಿಯಿಂದ ಸಾಕಷ್ಟು ಅನುದಾನವನ್ನು ನೀಡುವ ಮೂಲಕ.

ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಮತ್ತು ವಿದ್ಯಾರ್ಥಿವೇತನಗಳನ್ನು ಮತ್ತು ಶಿಕ್ಷಕರಿಗೆ ಕ್ಯಾಪಿಟೇಷನ್ (capitation) ಅಥವಾ ಇತರ ಭತ್ಯೆಗಳ ರೂಪದಲ್ಲಿ ನೀಡುವ ಪ್ರೋತ್ಸಾಹವು ಈ ಶಾಲೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ.

ಪುರಸಭೆ-ನಗರಸಭೆಯ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಶಾಲೆಗಳ ಸಂಪೂರ್ಣ ವೆಚ್ಚವನ್ನು ದೊಡ್ಡ ಪಟ್ಟಣಗಳ ಪುರಸಭೆಗಳೇ ಭರಿಸುವಂತಾಗಬೇಕು. ಆದರೆ, ಯಾವುದೇ ಕಾರಣಕ್ಕೂ ಆ ಶಾಲೆಗಳ ನಿರ್ವಹಣೆಯನ್ನು ಪೂರ್ಣವಾಗಿ ಪುರಸಭೆಗೆ ವಹಿಸಬಾರದು. ಈ ಎಲ್ಲಾ ಶಾಲೆಗಳು ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯಲ್ಲಿರಬೇಕು.

ಪುರಸಭೆ-ನಗರಸಭೆಯ ಹಣಕಾಸು ಪರಿಸ್ಥಿತಿ ಅನುಕೂಲಕರವಾಗಿರುವ ಕಡೆಗಳಲ್ಲಿ ಪುರಸಭೆ-ನಗರಸಭೆಯು ಶಿಕ್ಷಣ ಇಲಾಖೆಯ ನಿಯಮಗಳನುಸಾರ ನಡೆಸಲಾಗುತ್ತಿರುವ ಮಾಧ್ಯಮಿಕ ಮತ್ತು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಅನುದಾನವನ್ನು ನೀಡಬೇಕು. ಅನುದಾನದ ಮೊತ್ತವು ಪ್ರತಿವರ್ಷ ಪಾಸಾಗುವ ಹುಡುಗರ ಸಂಖ್ಯೆಯನ್ನು ಆಧರಿಸಿರಬೇಕು. ಪುರಸಭೆ-ನಗರಸಭೆಯ ನಿಧಿಯಿಂದ ನೀಡಬೇಕಾದ ಅನುದಾನವನ್ನು ಶಾಸನಬದ್ಧ ಅಧಿನಿಯಮದಡಿ ಕಡ್ಡಾಯಗೊಳಿಸಬಹುದು.

ಸಾಮಾನ್ಯವಾಗಿ, ಸಾರ್ವಜನಿಕ ಶಿಕ್ಷಣ ನಿರ್ದೇಶಕರೇ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಹಣಕಾಸಿನ ಆಡಳಿತವನ್ನು ವಹಿಸಿಕೊಳ್ಳಬೇಕು.

ಆದರೆ, ಸ್ಥಳೀಯ ಅಥವಾ ಜಿಲ್ಲಾ ಸಮಿತಿಗಳಿಗೆ ವಿದ್ಯಾವಂತರೂ ಬುದ್ಧಿವಂತರೂ ನೇಮಕಗೊಂಡರೆ, ಈ ಹಣಕಾಸಿನ ಆಡಳಿತವನ್ನು ಜಿಲ್ಲಾಧಿಕಾರಿ ಅಥವಾ ಸಾರ್ವಜನಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನದಲ್ಲಿ ಅವರಿಗೆ ವಹಿಸಿಕೊಡಬಹುದು. ಪ್ರಸ್ತುತ, ಸ್ಥಳೀಯ ಮಂಡಳಿಗಳಲ್ಲಿ ಪಟೇಲರು, ಇನಾಮದಾರರು, ಸೂರ್‌ದಾರ್‌ರಂತಹ ಅಜ್ಞಾನಿಗಳು, ಅಶಿಕ್ಷಿತರೇ ತುಂಬಿದ್ದು, ಹಣಕಾಸನ್ನು ಸೂಕ್ತರೀತಿಯಲ್ಲಿ ಬುದ್ಧಿವಂತಿಕೆಯಿಂದ ಬಳಸಿಕೊಳ್ಳಲು ಅವರು ಸಮರ್ಥರಾಗಿಲ್ಲ.

ಸ್ಥಳೀಯ ಶಾಲೆಗಳು

ನಗರಗಳು, ಪಟ್ಟಣಗಳು ಮತ್ತು ಕೆಲವು ದೊಡ್ಡ ಹಳ್ಳಿಗಳಲ್ಲಿ ಅದರಲ್ಲೂ ವಿಶೇಷವಾಗಿ, ಬ್ರಾಹ್ಮಣರ ಜನಸಂಖ್ಯೆ [ಹೆಚ್ಚು] ಇರುವಲ್ಲಿ ಹೆಚ್ಚಿನ ಸ್ಥಳೀಯ ಶಾಲೆಗಳಿವೆ. ಸಾರ್ವಜನಿಕ ಶಿಕ್ಷಣದ ಇತ್ತೀಚಿನ ವರದಿಗಳ ಪ್ರಕಾರ ಈ ಪ್ರೆಸಿಡೆನ್ಸಿಯಲ್ಲಿ 1,049 ಸ್ಥಳೀಯ ಶಾಲೆಗಳಿವೆ. ಅವುಗಳಲ್ಲಿ ಸುಮಾರು 27,694 ವಿದ್ಯಾರ್ಥಿಗಳಿದ್ದಾರೆ. ಅವು ಹಳೆಯ ಗ್ರಾಮ ವ್ಯವಸ್ಥೆಯನ್ನ ಅನುಸರಿಸುತ್ತವೆ. ಹುಡುಗರಿಗೆ ಸಾಮಾನ್ಯವಾಗಿ ಮಗ್ಗಿಯನ್ನ ಬಾಯಿಪಾಠ ಮಾಡಿಸಿ ಕಲಿಸುತ್ತಾರೆ, ಜೊತೆಗೆ, ಸ್ವಲ್ಪ ಮಟ್ಟದ ಮೋದಿಯ ಓದು-ಬರವಣಿಗೆ ಕಲಿಸುತ್ತಾರೆ. ಅದರೊಂದಿಗೆ ಕೆಲವು ಧಾರ್ಮಿಕ ಪಠ್ಯಗಳನ್ನು ಪಠಿಸುವಂತೆ ಮಾಡಲಾಗುತ್ತದೆ. ಸಾಮಾನ್ಯವಾಗಿ [ಅಲ್ಲಿನ] ಶಿಕ್ಷಕರು ಬೋಧಿಸುವ ಕಲೆಗೆ ತೆರೆದುಕೊಂಡಿಲ್ಲವಾದ್ದರಿಂದ ಯಾವುದೇ ಸುಧಾರಣೆಗಳನ್ನು ತರುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ಶಾಲೆಗಳ ಶುಲ್ಕವು ಎರಡರಿಂದ ಎಂಟು ಆಣೆಯಷ್ಟಿರುತ್ತದೆ. ಸಾಮಾನ್ಯವಾಗಿ, ಇಲ್ಲಿನ ಶಿಕ್ಷಕರು ಬ್ರಾಹ್ಮಣ್ಯ ಸಮಾಜದ ಶೇಷಗಳಿಂದಲೇ ಬಂದವರಾಗಿರುತ್ತಾರೆ. ಬಹಳ ನಿರುತ್ಸಾಹಿಗಳಾಗಿ ಮರಾಠಿಯನ್ನು ಓದುವುದು, ಬರೆಯುವುದು ಮತ್ತು ಸುಮಾರು ಮೂರಂಕಿಯ ಲೆಕ್ಕ ಬಿಡಿಸುವುದಕ್ಕಿಂತಲು ಹೆಚ್ಚಿನ ಅರ್ಹತೆಯನ್ನೇನು ಇವರು ಗಳಿಸಿರುವುದಿಲ್ಲ. ಶಿಕ್ಷಕರಾಗುವುದು ಜೀವನೋಪಾಯವನ್ನು ಕಂಡುಕೊಳ್ಳಲು ಅವರಿಗಿದ್ದ ಕೊನೆ ಮಾರ್ಗ. ಜೀವನದಲ್ಲಿ ಬೇರೆಲ್ಲದರಲ್ಲೂ ಸೋತು ಅಥವಾ ಅವುಗಳಿಗೆ ಬೇಕಿರುವ ಯೋಗ್ಯತೆಯಿಲ್ಲದಿರುವುದು ಅವರು ಶಾಲೆಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಸ್ಥಳೀಯ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲು ದೇಶದಲ್ಲಿ ಯಾವುದೇ ವ್ಯವಸ್ಥೆಯಿಲ್ಲ. ಈಗಿನ ಶಿಕ್ಷಕರ ಸ್ಥಾನಕ್ಕೆ ತರಬೇತಿ ಕಾಲೇಜುಗಳಿಂದ ತರಬೇತಿ ಪಡೆದವರನ್ನು ಮತ್ತು ದೇಶಭಾಷೆಯಲ್ಲಿ 6ನೇ ತರಗತಿಯಲ್ಲಿ ಪಾಸಾದವರನ್ನು ನೇಮಿಸದ ಹೊರತು ಸ್ಥಳೀಯ ಶಾಲೆಗಳನ್ನು ಉತ್ತಮಗೊಳಿಸಲು ಸಾಧ್ಯವಿಲ್ಲ. ಈಗಿರುವ ಶಿಕ್ಷಕರು ಸ್ವಇಚ್ಛೆಯಿಂದ ರಾಜ್ಯವು ನೀಡುವ ಅನುದಾನ ಸ್ವೀಕರಿಸುತ್ತಾರೆ. ಆದರೆ, ಹೀಗೆ ಖರ್ಚು ಮಾಡಿದ ಹಣ ಪೋಲಾದಂತೆಯೇ. ಇಂತಹ ಶಾಲೆಗಳಿಗೆ ಅನುದಾನ ನೀಡಲಾಗಿರುವ ಯಾವುದೇ ನಿದರ್ಶನ ನನಗೆ ತಿಳಿದಿಲ್ಲ. ಈ ಶಾಲೆಗಳಿಗೆ ಅನುದಾನವನ್ನು ನೀಡಲಾಗುತ್ತಿದ್ದರೆ, ಅತಿ ವಿರಳ ಪ್ರಕರಣಗಳಲ್ಲಿ ಮಾತ್ರವೇ ನೀಡಲಾಗುತ್ತಿರಬಹುದು. ನನ್ನ ಅಭಿಪ್ರಾಯದಲ್ಲಿ, ಮಾಸ್ತರರು ಪ್ರಮಾಣಪತ್ರವನ್ನು ಹೊಂದಿರದ ಹೊರತು ಅಂತಹ ಶಾಲೆಗಳಿಗೆ ಯಾವುದೇ ಅನುದಾನವನ್ನು ನೀಡಬಾರದು. ಆದರೆ ಪ್ರಮಾಣೀಕೃತ ಅಥವಾ ಸಮರ್ಥ ಶಿಕ್ಷಕರು ಕಂಡುಬಂದಲ್ಲಿ, ಅಂತಹ ಶಾಲೆಗಳಿಗೆ ಅನುದಾನವನ್ನು ನೀಡಬೇಕು. ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಉನ್ನತ ಶಿಕ್ಷಣ

ಸರ್ಕಾರ ಉನ್ನತ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದರೂ ಸಹ, ಜನಸಾಮಾನ್ಯರ ಶಿಕ್ಷಣವನ್ನು ಕಡೆಗಣಿಸಲಾಗಿದೆ ಎಂಬುದು ಇಡೀ ದೇಶದಲ್ಲಿ ಕೆಲಕಾಲದಿಂದ ಕೇಳಿಬರುತ್ತಿರುವ ಕೂಗು. ಉನ್ನತ ಶಿಕ್ಷಣದಿಂದ ನೇರವಾಗಿ ಪ್ರಯೋಜನ ಪಡೆಯುವ ವರ್ಗಗಳು ಇದನ್ನು ಒಪ್ಪಿಕೊಳ್ಳುವುದಿಲ್ಲವಾದರೂ ಈ ಕೂಗು ಒಂದು ಹಂತದವರೆಗೆ ನ್ಯಾಯಯುತವಾಗಿದೆ. ಇದೆಲ್ಲದರ ನಡುವೆಯೂ ತನ್ನ ದೇಶದ ಹಿತ ಬಯಸುವವರಾರೂ ಇಂತಹ ಸಂದರ್ಭದಲ್ಲಿ ಸರ್ಕಾರವು ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಹಣಸಹಾಯವನ್ನು ಹಿಂಪಡೆಯಬೇಕೆಂದು ಬಯಸುವುದಿಲ್ಲ. ಅವರು ಅಪೇಕ್ಷಿಸುವುದು, ದೇಶದ ಒಂದು ವರ್ಗದವರನ್ನು ನಿರ್ಲಕ್ಷಿಸಲಾಗಿದ್ದು, ಇತರರ ಬೆಳವಣಿಗೆಗೆ ವಹಿಸಲಾಗುವಷ್ಟೇ ಕಾಳಜಿಯನ್ನು ನಿರ್ಲಕ್ಷಿತ ವರ್ಗಗಳ ಬೆಳವಣಿಗೆಯ ಬಗ್ಗೆಯೂ ವಹಿಸಬೇಕೆಂದು. ಭಾರತದಲ್ಲಿ ಶಿಕ್ಷಣ ಇನ್ನೂ ಅಂಬೆಗಾಲನ್ನು ಇರಿಸುತ್ತಿದೆ. ಉನ್ನತ ಶಿಕ್ಷಣಕ್ಕೆ ರಾಜ್ಯ ಒದಗಿಸುತ್ತಿರುವ ಅನುದಾನವನ್ನು ಹಿಂತೆಗೆದುಕೊಂಡರೆ, ಅದು ಇಡೀ ಶಿಕ್ಷಣದ ಪ್ರಸರಣೆಗೆ ಹಾನಿಯನ್ನು ಉಂಟುಮಾಡುತ್ತದೆ.

ರಾಜ್ಯವು ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಅನುದಾನವನ್ನು ಕ್ರಮೇಣವಾಗಿ ಹಿಂತೆಗೆದುಕೊಂಡಲ್ಲಿ, ಶಿಕ್ಷಣದ ಅಭಿರುಚಿ ಈಗಾಗಲೇ ಹತ್ತಿರುವ ಉನ್ನತ ಮತ್ತು ಶ್ರೀಮಂತ ವರ್ಗಗಳಾದ ಬ್ರಾಹ್ಮಣರಿಗೆ ಮತ್ತು ಫರ್ಬುಗಳಿಗೆ, ಅದರಲ್ಲೂ ಮುಖ್ಯವಾಗಿ ಲೇಖನಿಯನ್ನೇ ಬದುಕಾಗಿಸಿಕೊಂಡಿರುವ ವರ್ಗಗಳಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ; ಆದರೆ, ಉನ್ನತ ಶಿಕ್ಷಣವು ಯಾವುದೇ ಪ್ರಗತಿಯನ್ನು ಸಾಧಿಸಿರದ ಮಧ್ಯಮ ಮತ್ತು ಕೆಳವರ್ಗದವರಿಗೆ ಅದು ಅತೀವ ತೊಂದರೆಯನ್ನು ಉಂಟುಮಾಡುತ್ತದೆ. ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಅನುದಾನವನ್ನು ಹಿಂತೆಗೆದುಕೊಂಡರೆ, ಹುಡುಗರು ಅವರ ಇಚ್ಛೆಗೆ ವಿರುದ್ಧವಾಗಿ ಅಸಮರ್ಥವಾದ ಮತ್ತು ಪಂಥೀಯ ಶಾಲೆಗಳನ್ನು ಆಶ್ರಯಿಸಬೇಕಾಗುತ್ತದೆ ಮತ್ತು ಇದರಿಂದಾಗಿ ಶಿಕ್ಷಣವು ಕುಂಠಿತವಾಗುತ್ತದೆ. ಇಂತಹ, ಶಿಕ್ಷಣ ಕ್ಷೇತ್ರದ ಯಾವುದೇ ಭಾಗವನ್ನು ಖಾಸಗಿ ಏಜೆನ್ಸಿಗೆ ಒಪ್ಪಿಸಲಾಗುವುದಿಲ್ಲ. ಇನ್ನೂ ಬಹಳಷ್ಟು ಕಾಲದವರೆಗೂ, ಶಿಕ್ಷಣಕ್ಕೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸುವುದು ಮತ್ತು ಅದನ್ನು ಜಾರಿಗೊಳಿಸುವುದು- ಇವೆರಡೂ ಸೇರಿದಂತೆ, ಇಡೀ ಶಿಕ್ಷಣ ಆಡಳಿತ ವ್ಯವಸ್ಥೆಯು ಸರ್ಕಾರದ ಅಧೀನದಲ್ಲಿರಬೇಕು. ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ, ಎರಡಕ್ಕೂ ಸರ್ಕಾರವು ಏನೆಲ್ಲಾ ಕಾಳಜಿ ಮತ್ತು ಗಮನವನ್ನು ನೀಡಬಹುದೋ ಅದೆಲ್ಲದರ ಅಗತ್ಯವಿರುತ್ತದೆ.

ಶಾಲೆಗಳು ಅಥವಾ ಕಾಲೇಜುಗಳಿಂದ [ನಡೆಸುವುದು ಮತ್ತು ಅವುಗಳಿಗೆ ಅನುದಾನ ನೀಡುವುದರಿಂದ] ಸರ್ಕಾರವು ಹಿಂದೆಸರಿದರೆ ಶಿಕ್ಷಣದ ಹರಡುವಿಕೆ ಕುಂಠಿತವಾಗುತ್ತದೆ ಮಾತ್ರವಲ್ಲ, ಭಾರತದಲ್ಲಿ ಪ್ರಚಲಿತದಲ್ಲಿರುವ ವಿವಿಧ ರಾಷ್ಟ್ರೀಯತೆಗಳು ಮತ್ತು ಧಾರ್ಮಿಕ ಪಂಥಗಳ ಕಾರಣದಿಂದಾಗಿ ಸರ್ಕಾರವು ಎಂದಿನಿಂದಲೂ ಬೆಳೆಸಬೇಕೆಂದು ಉದ್ದೇಶಿಸಿರುವ ತಟಸ್ಥತೆಯ ಮನೋಭಾವವನ್ನು (Spirit of neutrality) ಗಂಭೀರವಾದ ಅಪಾಯಕ್ಕೆ ಸಿಲುಕಿಸುತ್ತದೆ. ಈ ಹಿಂತೆಗೆದುಕೊಳ್ಳುವಿಕೆಯು ಒಂದು ಹಂತದವರೆಗೆ, ಉನ್ನತ ಮತ್ತು ಶ್ರೀಮಂತ ವರ್ಗಗಳಲ್ಲಿ ಪ್ರಾದೇಶಿಕ ಸಂಗತಿಗಳಿಗಾಗಿ ಸ್ವಾವಲಂಬನೆಯ ಮನೋಭಾವವನ್ನು ಉಂಟುಮಾಡಬಹುದಾದರೂ, ಶಿಕ್ಷಣ ಕ್ಷೇತ್ರವು ಎಷ್ಟು ದೊಡ್ಡ ನಷ್ಟವನ್ನು ಅನುಭವಿಸುತ್ತದೆ ಎಂದರೆ, ಆ ಕೆಡುಕನ್ನು ನಿವಾರಿಸಲು ಸ್ವಾವಲಂಬನೆಯ ಮನೋವೃತ್ತಿಯು ಹತ್ತು ಹಲವು ವರ್ಷಗಳನ್ನೇ ತೆಗೆದುಕೊಳ್ಳಬಹುದು. ಸಾರ್ವಜನಿಕ ಸೇವೆಯಲ್ಲಿ ಉದ್ಯೋಗ ಪಡೆಯದ ವಿದ್ಯಾವಂತರು, ಉನ್ನತ ಶಿಕ್ಷಣಕ್ಕೆ ಒದಗಿಬರುವ ಅನುದಾನವನ್ನು ಗಮನದಲ್ಲಿರಿಸಿಕೊಂಡು ಶಾಲೆಗಳನ್ನು ತೆರೆಯಲು ಪ್ರೇರೇಪಿತರಾಗಬಹುದು. ಆದರೆ, ಅದರಲ್ಲಿಯೇ ಜೀವನೋಪಾಯ ಕಂಡುಕೊಳ್ಳಬಹುದೆಂದು ನಂಬಿಕೊಂಡು ಸ್ವಂತವಾಗಿ ಯಾರೂ ಸಹ ಆ ಕೆಲಸಕ್ಕೆ ಮುಂದಾಗುವುದಿಲ್ಲ. ಅಂತಹ ಖಾಸಗಿ ಪ್ರಯತ್ನಗಳು ಸ್ಥಿರತೆಯನ್ನು ಕಾಯ್ದುಕೊಳ್ಳಬಹುದೇ, ಅವು ಹೆಚ್ಚು ದಿನಗಳ ಕಾಲ ಮುಂದುವರಿಯುವವೇ ಮತ್ತು ಇಂತಹ ತಮ್ಮ ಫಲಿತಾಂಶಗಳಲ್ಲಿ ಅರ್ಧದಷ್ಟಾದರೂ ಯಶಸ್ವಿಯಾಗುವವೇ ಎಂಬುದೇ ಅನುಮಾನವಾಗಿದೆ. ಶ್ರೀ ವಿಷ್ಣು ಶಾಸ್ತ್ರಿ ಚಿಪ್ಲೂಂಕರ್ ಮತ್ತು ಶ್ರೀ ಭಾವೆ ಅಂತಹವರು ನಡೆಸುವ ಖಾಸಗಿ ಶಾಲೆಗಳು ಪೂನಾದಲ್ಲಿ ಅಸ್ತಿತ್ವದಲ್ಲಿವೆ. ಸಾಕಷ್ಟು ಅನುದಾನದೊಂದಿಗೆ ಅದನ್ನು ಅತ್ಯಂತ ಪರಿಣಾಮಕಾರಿಯಾಗಿಸಬಹುದು. ಆದರೆ, ಅವುಗಳೆಂದಿಗೂ ಪ್ರೌಢಶಾಲೆಯ ಅಗತ್ಯತೆಯ ಸ್ಥಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

ಮಿಷನರಿ ಶಾಲೆಗಳಲ್ಲಿ ಕೆಲವನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸಲಾಗಿದ್ದರೂ, ಅವುಗಳ ಫಲಿತಾಂಶಗಳಲ್ಲಿ ಮಾತ್ರ ಅವು ಅರ್ಧದಷ್ಟು ಯಶಸ್ವಿಯಾಗುವುದಿಲ್ಲ. ಅಲ್ಲದೇ, ಪ್ರೌಢಶಾಲೆಯು ಆಕರ್ಷಿಸುವ ಅರ್ಧದಷ್ಟು ವಿದ್ಯಾರ್ಥಿಗಳನ್ನು ಸಹ ಇವು ಆಕರ್ಷಿಸುವುದಿಲ್ಲ. ಸರ್ಕಾರಿ ಶಾಲೆಗಳು ಉನ್ನತವಾಗಿ ಕಾರ್ಯನಿರ್ವಹಿಸುವ ಹಿಂದಿನ ಮುಖ್ಯಕಾರಣವೆಂದರೆ ಶಿಕ್ಷಕರು ಮತ್ತು ಪ್ರಾಧ್ಯಾಪಕರಿಗೆ ಒಳ್ಳೆಯ ವೇತನವನ್ನು ನೀಡಲಾಗುತ್ತಿದೆ ಎಂಬುದು. ಅಷ್ಟು ವೇತನ ನೀಡಿ, ಶಾಲೆಯನ್ನು ನಿರ್ವಹಿಸುವುದು ಖಾಸಗಿಯವರಿಗೆ ಸಾಧ್ಯವಿಲ್ಲ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಬೋಧಿಸಲಾಗುತ್ತಿರುವ ರೀತಿ ಪ್ರಾಯೋಗಿಕವಾಗಿಲ್ಲ ಮತ್ತದು ಸಾಮಾನ್ಯ ಜೀವನದ ಅವಶ್ಯಕತೆಗಳಿಗೆ ಅನುಗುಣವಾಗಿಲ್ಲ. ಗುಮಾಸ್ತರು ಮತ್ತು ಶಾಲಾ ಶಿಕ್ಷಕರನ್ನು ಉತ್ಪಾದಿಸಲು ಮಾತ್ರವೇ ಅದು ಸಹಕಾರಿ. ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಗಮನ ಅನಗತ್ಯವಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆಯ ಬಗೆಗಿರುತ್ತದೆ ಮತ್ತು ವಿದ್ಯಾರ್ಥಿಯನ್ನು ಅವನ ಮುಂದಿನ ವೃತ್ತಿಜೀವನಕ್ಕೆ ಸನ್ನದ್ಧಗೊಳಿಸಲು ಅಧ್ಯಯನಕ್ರಮದಲ್ಲಿ ಯಾವುದೇ ಪ್ರಾಯೋಗಿಕ ಅಂಶಗಳಿಲ್ಲ. ದೇಶದಲ್ಲಿ ಜ್ಞಾನ ಪ್ರಸರಣೆಯನ್ನು ಗಣನೆಗೆ ತೆಗೆದುಕೊಂಡರೆ ಪ್ರವೇಶ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದೆನಿಸುವುದಿಲ್ಲವಾದರೂ, ಸರ್ಕಾರಿ ಸೇವೆಯ ಅಗತ್ಯತೆಯನ್ನು ಗಣನೆಗೆ ತೆಗೆದುಕೊಂಡರೆ ಅದು ದೊಡ್ಡದಾಗಿ ಕಾಣುತ್ತದೆ. ಶಿಕ್ಷಣವು ಸಾರ್ವತ್ರಿಕವಾಗಿ ಎಲ್ಲರ ಕೈಗೆಟಕುವಂತಿದ್ದರೆ ಈ ಸಂಖ್ಯೆಯು ಇನ್ನೂ ದೊಡ್ಡದಾಗಿರುತ್ತಿತ್ತು. ಅದಿರಬೇಕಿರುವುದು ಹಾಗೆಯೇ. ಇನ್ನು ಮುಂದೆ ಅದು ಹಾಗೆಯೇ ಇರುತ್ತದೆಂದು ನಾನು ಭಾವಿಸುತ್ತೇನೆ. ಉನ್ನತ ಶಿಕ್ಷಣವು ಎಲ್ಲರ ಕೈಗೆಟಕುವಂತಿರಬೇಕು ಹಾಗೂ ಮದ್ರಾಸ್ ಮತ್ತು ಬಂಗಾಳದಲ್ಲಿರುವಂತೆ ಮೆಟ್ರಿಕ್ಯುಲೇಷನ್ ಪರೀಕ್ಷೆಯ ವಿಷಯಗಳ ಪುಸ್ತಕಗಳನ್ನು ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸಬೇಕು. ಇದು ಖಾಸಗಿಯಾಗಿ ಅಧ್ಯಯನ ನಡೆಸುವವರನ್ನು ಪ್ರೋತ್ಸಾಹಿಸುತ್ತದೆ, ಮಾತ್ರವಲ್ಲ ಜ್ಞಾನ ಹೆಚ್ಚಿನ ಪ್ರಸರಣೆಯನ್ನೂ ಕಾಣುತ್ತದೆ. ಬಾಂಬೆ ವಿಶ್ವವಿದ್ಯಾಲಯವು ಪ್ರವೇಶ ಪರೀಕ್ಷೆಗೆ ಖಾಸಗಿಯಾಗಿ ಅಧ್ಯಯನ ಕೈಗೊಂಡವರಿಗೂ ಅವಕಾಶ ಕಲ್ಪಿಸಿರುವುದು ಜನರಿಗೆ ವರದಾನವಾಗಿದೆ. ಇದೇ ವರವನ್ನು ಉನ್ನತ ಪರೀಕ್ಷೆಗಳಿಗೂ ವಿಸ್ತರಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳು ಖುಷಿಯಾಗಿಯೇ ಒಪ್ಪುತ್ತಾರೆಂದು ನಾನು ಭಾವಿಸುತ್ತೇನೆ. ಬಿ.ಎ, ಎಂ.ಎ ಮತ್ತು ಸಿ ಪದವಿಗಳಲ್ಲಿಯೂ ಖಾಸಗಿ ಅಧ್ಯಯನ ನಡೆಸುವವರಿಗೆ ವಿಶ್ವವಿದ್ಯಾಲಯ ಅವಕಾಶ ಕಲ್ಪಿಸಿದರೆ, ಅನೇಕ ಯುವಕರು ತಮ್ಮ ಸಮಯವನ್ನು ಖಾಸಗಿ ಅಧ್ಯಯನಕ್ಕೆ ಮೀಸಲಿಡುತ್ತಾರೆ. ಅವರು ಹಾಗೆ ಮಾಡುವುದರಿಂದ ಜ್ಞಾನವು ಮತ್ತಷ್ಟೂ ಪ್ರಸರಣಗೊಳ್ಳುವ ಸಾಧ್ಯತೆಯಿರುತ್ತದೆ. ಅನೇಕ ಸಂದರ್ಭಗಳಲ್ಲಿ, ಬೇರೆಬೇರೆ ಕಾರಣಗಳಿಗಾಗಿ ಕಾಲೇಜುಗಳಲ್ಲಿ ಅಧ್ಯಯನವನ್ನು ಪೂರ್ಣಗೊಳಿಸುವುದು ಅಸಾಧ್ಯವಾಗುತ್ತದೆ. ವಿಶ್ವವಿದ್ಯಾಲಯವು ಖಾಸಗಿ ಅಧ್ಯಯನಗಳಿಗೆ ಮಾನ್ಯತೆ ನೀಡಿದರೆ, ಒಟ್ಟಾರೆಯಾಗಿ ದೇಶಕ್ಕೇ ಹೆಚ್ಚಿನ ಒಳಿತುಂಟಾಗುತ್ತದೆ ಮತ್ತು ಉನ್ನತ ಶಿಕ್ಷಣಕ್ಕಾಗಿ ವ್ಯಯಿಸಲಾಗುತ್ತಿರುವ ಸಾರ್ವಜನಿಕರ ಹಣವೂ ಉಳಿತಾಯವಾಗುತ್ತದೆ.

ಸರ್ಕಾರಿ ಶಾಲೆಗಳಲ್ಲಿ ಈ ಸದ್ಯ ಜಾರಿಯಲ್ಲಿರುವ ಸರ್ಕಾರಿ ವಿದ್ಯಾರ್ಥಿವೇತನದ ವ್ಯವಸ್ಥೆಯು ಸಹ ದೋಷಪೂರಿತವಾಗಿದೆ. ಇತರೆ ಸಮುದಾಯಗಳಿಗೆ ಹಾನಿಯಾಗುವಂತೆ ಶಿಕ್ಷಣದ ಅಭಿರುಚಿಯನ್ನು ಈಗಾಗಲೇ ಕಂಡುಕೊಂಡಿರುವ ವರ್ಗಗಳನ್ನು ಅನಗತ್ಯವಾಗಿ ಇವು ಪ್ರೋತ್ಸಾಹಿಸುತ್ತಿವೆ. ಯಾವ ಸಮುದಾಯಗಳಲ್ಲಿ ಶಿಕ್ಷಣವು ಇನ್ನೂ ಬೇರುಬಿಟ್ಟಿಲ್ಲವೋ ಅಂತಹ ವರ್ಗಗಳಿಗೆ ಈ ಕೆಲವು ವಿದ್ಯಾರ್ಥಿವೇತನಗಳನ್ನು ನೀಡುವಂತೆ ವ್ಯವಸ್ಥೆಯನ್ನು ಅಣಿಗೊಳಿಸಬಹುದು.

ಸ್ಪರ್ಧೆಯ ಮೂಲಕ ವಿದ್ಯಾರ್ಥಿವೇತನವನ್ನು ಹಂಚುವುದು ಮೇಲುನೋಟಕ್ಕೆ (ಅಮೂರ್ತವಾಗಿ) ಸಮಾನತೆ ಎಂದು ಕಂಡುಬಂದರೂ, ಇತರ ವರ್ಗಗಳ ನಡುವೆ ಶಿಕ್ಷಣದ ಹರಡುವಿಕೆಗೆ ಇದು ಸಹಕಾರಿಯಲ್ಲ.

ಸ್ಥಳೀಯ ವಿದ್ಯಾವಂತರಿಗೆ ಒಳ್ಳೆಯ ವೇತನ ನೀಡುವ ಉದ್ಯೋಗಗಳು ದೊರೆಯಬೇಕು ಎಂಬುದಕ್ಕೆ ಸಂಬಂಧಿಸಿದಂತೆ, ಹೆಚ್ಚಾಗಿ ಬ್ರಾಹ್ಮಣ್ಯ ಮತ್ತು ಇತರ ಉನ್ನತ ವರ್ಗಗಳಿಗೆ ಸೇರಿದ ಸ್ಥಳೀಯ ವಿದ್ಯಾವಂತರು ಹೆಚ್ಚಾಗಿ ಸಾರ್ವಜನಿಕ ಸೇವೆಯತ್ತಲೇ ಮುಖ ಮಾಡುತ್ತಾರೆ ಎಂದು ನೆನಪಿಸಿಕೊಳ್ಳಲಾಗುತ್ತದೆ. ಆದರೆ, ಶಾಲಾ-ಕಾಲೇಜುಗಳಿಂದ ಹೊರಬರುವ ಎಲ್ಲಾ ಸ್ಥಳೀಯ ವಿದ್ಯಾವಂತರಿಗೆ ಸಾರ್ವಜನಿಕ ಸೇವೆಯು ಯಾವುದೇ ಉದ್ಯೋಗವನ್ನು ನೀಡಲು ಸಾಧ್ಯವಿಲ್ಲದ ಕಾರಣದಿಂದಾಗಿ ಮತ್ತು ಅವರು ತಾಂತ್ರಿಕ ಅಥವಾ ಪ್ರಾಯೋಗಿಕ ತರಬೇತಿಯನ್ನು ಪಡೆದಿರುವುದಿಲ್ಲದ ಕಾರಣ, ಅವರು ಇತರ ದೈಹಿಕ ಶ್ರಮಬೇಡುವ ಅಥವಾ ಒಳ್ಳೆಯ ವೇತನ ನೀಡುವ ಇನ್ನಾವುದೇ ಉದ್ಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಬಹಳ ಕಠಿಣವೆನಿಸುತ್ತದೆ. ಇದರಿಂದಾಗಿಯೇ, ಮಾರುಕಟ್ಟೆಯ ತುಂಬೆಲ್ಲಾ ಸ್ಥಳೀಯ ವಿದ್ಯಾವಂತರೇ ತುಂಬಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ. ಕೆಲವು ವೃತ್ತಿಗಳಲ್ಲಿ ಲಭ್ಯವಿರುವ ಉದ್ಯೋಗಕ್ಕಿಂತಲೂ ಹೆಚ್ಚು ಆಕಾಂಕ್ಷಿಗಳಿದ್ದಾರೆಂಬುದು ಒಂದು ಮಟ್ಟಿಗೆ ನಿಜವೇ ಆಗಿದ್ದರೂ, ಇದರರ್ಥ ಅವರಿಗೆ ಯಾವುದೇ ಒಳ್ಳೆಯ ವೇತನ ನೀಡುವ ಉದ್ಯೋಗಗಳು ಲಭ್ಯವಿಲ್ಲವೆಂದಲ್ಲ. ದೇಶಕ್ಕೆ ಸಂಬಂಧಿಸಿದಂತೆ ಈಗಿನ ವಿದ್ಯಾವಂತರ ಸಂಖ್ಯೆ ತೀರಾ ಕಡಿಮೆಯಿದ್ದು ಇದು ನೂರು-ಪಟ್ಟು ಹೆಚ್ಚಾಗುವ ಮತ್ತು ಸಾರ್ವಜನಿಕ ಸೇವೆಯಲ್ಲಿ ಲಭ್ಯವಿರುವ ಉದ್ಯೋಗಗಳನ್ನೇ ನೆಚ್ಚಿಕೊಳ್ಳದೇ ಎಲ್ಲರೂ ತಮ್ಮನ್ನು ತಾವು ಉಪಯುಕ್ತ ಮತ್ತು ಲಾಭದಾಯಕ ಉದ್ಯೋಗಗಳತ್ತ ಕರೆದೊಯ್ಯುವ ದಿನ ದೂರವಿಲ್ಲ ಎಂದು ನಾವು ನಂಬಿದ್ದೇವೆ.

ಕೊನೆಯದಾಗಿ, ಶಿಕ್ಷಣ ಆಯೋಗವು ದಯೆತೋರಿ ಮಹಿಳೆಯರ ಪ್ರಾಥಮಿಕ ಶಿಕ್ಷಣದ ಪ್ರಸರಣಕ್ಕೆ ಕ್ರಮಗಳನ್ನು ಉದಾರವಾಗಿ ಮಂಜೂರು ಮಾಡಬೇಕೆಂದು ನಾನು ವಿನಂತಿಸುತ್ತೇನೆ.

ಪೂನಾ,

19ನೇ ಅಕ್ಟೋಬರ್ 1882.

ಜೋತಿರಾವ್ ಗೋವಿಂದರಾವ್ ಫುಲೆ, ವ್ಯಾಪಾರಿ, ಸಾಗುವಳಿದಾರ ಮತ್ತು ಮುನ್ಸಿಪಲ್ ಕಮಿಷನರ್, ಪೇಠ್ ಜೂನ ಗಂಜ್.
[ಶಿಕ್ಷಣ ಆಯೋಗ, ಬಾಂಬೆ, ಸಂಪುಟ. II.. ಕಲ್ಕತ್ತಾ, 1884, ಪುಟಗಳು 140-154]

ಕನ್ನಡಕ್ಕೆ: ಶಶಾಂಕ್ ಎಸ್. ಆರ್
ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ ಸ್ಟಡೀಸ್‌ನಲ್ಲಿ ಸಂಶೋಧನಾರ್ಥಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪರಿಷತ್ ಫಲಿತಾಂಶ ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರನ ಕಪಾಳಮೋಕ್ಷ: ಸಿಎಂ ಸಿದ್ದರಾಮಯ್ಯ

0
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಜಾತ್ಯತೀತ ಮುಖವಾಡ ಕಳಚಿದೆ, ಜೆಡಿಎಸ್‌ನ ಕೋಮುವಾದಿ ಅವತಾರಕ್ಕೆ ಮತದಾರ ಕಪಾಳಮೋಕ್ಷ ಮಾಡಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ...