Homeಮುಖಪುಟಸುರಂಗಮಾರ್ಗದ ಭೂಕುಸಿತ; ಅಪಾಯಕಾರಿ ಅಭಿವೃದ್ಧಿಗೆ ಎಚ್ಚರಿಕೆಯ ಘಂಟೆ

ಸುರಂಗಮಾರ್ಗದ ಭೂಕುಸಿತ; ಅಪಾಯಕಾರಿ ಅಭಿವೃದ್ಧಿಗೆ ಎಚ್ಚರಿಕೆಯ ಘಂಟೆ

- Advertisement -
- Advertisement -

(ಇದು ನ್ಯಾಯಪಥ ಡಿಸೆಂಬರ್ 1-15 ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ..)

ಸರಿಸುಮಾರು ಒಂದೆರಡು ದಶಕಗಳ ಹಿಂದೆ ಬ್ರಿಗೇಡಿಯರ್ ಜಾನ್ ಪಿ ದಳವಿಯವರ ’ಹಿಮಾಲಯನ್ ಬ್ಲಂಡರ್’ ಎಂಬ ಅನುವಾದಿತ ಕೃತಿ (ಅನು: ರವಿ ಬೆಳೆಗರೆ) ಕನ್ನಡದ ಓದುಗರ ಗಮನ ಸೆಳೆದಿತ್ತು. ಇದು ಆಗಿನ ನೆಹರು ಆಡಳಿತ ಚೀನಾ ದೇಶದ ವಿರುದ್ಧ ಯುದ್ಧವನ್ನು ನಿರ್ವಹಿಸಿದ ರೀತಿಯ ಕುರಿತು ಒಂದು ಬಗೆಯ ಅಭಿಪ್ರಾಯವನ್ನು ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಳೆದ ಕೆಲ ದಶಕಗಳಲ್ಲಿ ಉತ್ತರ ಭಾರತದ ಕೋಟ್ಯಂತರ ಜನರ ಜೀವನಾಡಿಯಾಗಿರುವ ಮತ್ತು ಜೀವ ವೈವಿಧ್ಯತೆಯ ತಾಣವಾಗಿರುವ ಹಿಮಾಲಯದ ಪ್ರದೇಶದಲ್ಲಿ ಬೇರೆಯದೇ ರೀತಿಯ ಬ್ಲಂಡರ್(ಪ್ರಮಾದ)ಗಳು ನಡೆಯುತ್ತಿದ್ದರೂ, ಅದರ ಕುರಿತು ಕೆಲ ಪರಿಸರಾಸಕ್ತರ ಹೊರತು ಹೆಚ್ಚಿನ ಜನರಿಗೆ ಪರಿಚಯವೂ ಇಲ್ಲ ಮತ್ತು ಅದರ ಕುರಿತು ಯಾವ ಚರ್ಚೆಗಳೂ ಆಗುತ್ತಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಹಿಮಾಲಯಕ್ಕೆ ಅಲ್ಲಿ ಹೊಂದಿಕೆಯಾಗದ ಯೋಜನೆಗಳನ್ನು ತರುವ ಚಾಳಿ ಕೆಲವು ದಶಕಗಳಿಂದ ನಡೆದಿದ್ದರೂ ಪ್ರಸ್ತುತ ಕೇಂದ್ರ ಸರ್ಕಾರದ ಸಮಯದಲ್ಲಿ ಅದು ಎಲ್ಲ ಎಲ್ಲೆಗಳನ್ನೂ ಮೀರಿದೆ. ಯಾವ ಮಟ್ಟಿಗೆ ಎಂದರೆ ಹಿಮಾಲಯದ ಸುರಕ್ಷತೆಗೇ ಸಂಚಕಾರ ತರುವಷ್ಟರ ಮಟ್ಟಿಗೆ.

ಈ ಪೀಠಿಕೆಗೆ ಬರೆಯಬೇಕಾದ ಕಾರಣ, ಪ್ರಧಾನಮಂತ್ರಿಯವರ ಅಚ್ಚುಮೆಚ್ಚಿನ ಚಾರ್ ಧಾಮ್ ಯೋಜನೆಯಡಿ ಉತ್ತರ ಕಾಶಿಯ ಸುರಂಗ ಮಾರ್ಗದ ಕಾಮಗಾರಿಯಲ್ಲಿ ನಡೆದ ದುರ್ಘಟನೆ. ದೇಶವೆಲ್ಲಾ ದೀಪಾವಳಿಯ ಸಡಗರದಲ್ಲಿ ಇದ್ದಾಗ, ಸಿಲ್ಕ್ಯಾರಾ-ಬಾರ್ಕೋಟ್ ಮಧ್ಯದ ಸುರಂಗ ಮಾರ್ಗದ ಒಂದು ಭಾಗದಲ್ಲಿ ಭೂಕುಸಿತ ಉಂಟಾಗಿ ಕೆಲಸದಲ್ಲಿ ನಿರತರಾಗಿದ್ದ 41 ಕಾರ್ಮಿಕರು ಸುರಂಗದಲ್ಲಿಯೇ ಬಂಧಿಯಾದರು. ಹಿಮಾಲಯದ ಪ್ರದೇಶದಲ್ಲಿ ಭೂಕುಸಿತಗಳು ಸಾಮಾನ್ಯ; ಇನ್ನೇನು, ಹೆಚ್ಚೆಂದರೆ ಒಂದೆರಡು ದಿನಗಳಲ್ಲಿ ಕುಸಿದ ಮಣ್ಣು ಕಲ್ಲನ್ನು ಹೊರತೆಗೆದು ಅವರನ್ನು ರಕ್ಷಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಆ ಭೂಪ್ರದೇಶದ ಜಟಿಲತೆ ಎಷ್ಟಿತ್ತೆಂದರೆ ಸರಿಸುಮಾರು 17 ದಿನಗಳ ಮಟ್ಟಿಗೆ ಕಾರ್ಮಿಕರು ಸುರಂಗದ ಒಳಗಡೆಯೇ ಬಂಧಿಯಾಗಿರಬೇಕಾಯಿತು. ಕೇಂದ್ರ ವಿಪತ್ತು ನಿರ್ವಹಣಾ ದಳದ ಅವಿರತ ಪ್ರಯತ್ನ, ರಾಷ್ಟ್ರೀಯ-ಅಂತಾರಾಷ್ಟ್ರೀಯ ತಜ್ಞರ ನೆರವಿನ ಹೊರತಾಗಿಯೂ ರಕ್ಷಣಾ ಕಾರ್ಯ ಸುಲಭದ್ದಾಗಿರಲಿಲ್ಲ; ಇದು ಅತ್ಯಂತ ಸೂಕ್ಷ್ಮವಾಗಿ ಮತ್ತು ನಿಧಾನವಾಗಿ ಮಾಡಬೇಕಾದ ಕೆಲಸವಾಗಿತ್ತು. ಇಲ್ಲದಿದ್ದರೆ ಅಕ್ಕಪಕ್ಕದ ಭೂಮಿ ಮತ್ತಷ್ಟು ಕುಸಿದು ಒಳಗಿನ ಕಾರ್ಮಿಕರಷ್ಟೇ ಅಲ್ಲದೇ ರಕ್ಷಣಾ ಕಾರ್ಯದಲ್ಲಿ ನಿರತರಾದವರೂ ಕೂಡ ಅಪಾಯಕ್ಕೆ ಸಿಲುಕಬಹುದಾಗಿತ್ತು. ಆದರೆ ಹೇಗೊ ಕೊನೆಗೆ ಬಿಲ ಕೊರೆದು ಗಣಿಗಾರಿಕೆ ಮಾಡುವ ನುರಿತ ಕಾರ್ಮಿಕರ ನೆರವಿನಿಂದ ಎಲ್ಲ 41 ಕಾರ್ಮಿಕರನ್ನೂ ರಕ್ಷಿಸಿ ಪ್ರಕರಣ ಸುಖಾಂತ್ಯ ಕಂಡಿತು.

ಆದರೆ ಇಂತಹ ಒಂದು ಬಹುದೊಡ್ಡ ದುರಂತದ ನಂತರ, ಈ ಘಟನೆ ಏಕೆ ಆಯಿತು, ಇಂತಹ ಘಟನೆ ಮರುಕಳಿಸಬಾರದೆಂದರೆ ಏನು ಮಾಡಬೇಕು ಎಂದು ಯಾವುದೇ ಒಂದು ಪ್ರಬುದ್ಧ ಸಮಾಜ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿತ್ತು. ಆದರೆ ಈ ಯಶಸ್ವೀ ಕಾರ್ಯಾಚರಣೆ ಕೇವಲ ಸಂಭ್ರಮಾಚರಣೆ, ರಾಜಕೀಯ ಪಕ್ಷಗಳ ರೋಡ್ ಶೋ, ಬಹುಮಾನ ಘೋಷಣೆ ಮತ್ತು ಕಾರ್ಮಿಕರು 17 ದಿನ ಒಳಗೆ ಹೇಗೆ ಇದ್ದರು ಎಂಬ ರೋಚಕ ಕಥೆಗಳ ಚರ್ಚೆಗಷ್ಟೇ ಸೀಮಿತವಾಯ್ತು. ಈ ದುರ್ಘಟನೆಯ ಕೇಂದ್ರಬಿಂದುವಾದ ಚಾರ್ ಧಾಮ್ ಯೋಜನೆಯ ಕುರಿತು ಯಾವ ಪ್ರಶ್ನೆಯೂ ಏಳಲಿಲ್ಲ, ಮತ್ತೆ ಇಂತಹ ಘಟನೆ ನಡೆಯಬಾರದು ಎಂದರೆ ನಾವು ಎಷ್ಟು ತಯ್ಯಾರಿಯಾಗಿರಬೇಕು ಎಂಬಿತ್ಯಾದಿ ವಿಷಯಗಳು ಚರ್ಚೆಯಾಗಲೇ ಇಲ್ಲ.

ಈ ಚಾರ್ ಧಾಮ್ ಯೋಜನೆ ಉತ್ತರ ಭಾರತದ ಹಿಮಾಲಯ ಶ್ರೇಣಿಯ ಗಂಗೋತ್ರಿ, ಯಮುನೋತ್ರಿ, ಬದರಿನಾಥ್ ಮತ್ತು ಕೇದಾರನಾಥ್ ಪುಣ್ಯ ಕ್ಷೇತ್ರಗಳಿಗೆ ಸರ್ವ ಋತು ನಾಲ್ಕು ಪಥದ ರಸ್ತೆಗಳನ್ನು ನಿರ್ಮಿಸುವ ಯೋಜನೆಯಾಗಿದೆ. ಇದು ಒಟ್ಟಾರೆ 889 ಕಿ.ಮೀ ಉದ್ದದ ರಸ್ತೆಯಾಗಿದೆ. ಈ ರಸ್ತೆಯ ಕಾರ್ಯವಿಧಾನದ ಕುರಿತು ಮೊದಲಿನಿಂದಲೂ ಪರಿಸರ ತಜ್ಞರ, ಭೂಗರ್ಭ ಶಾಸ್ತ್ರಜ್ಞರ ಮತ್ತು ಸ್ಥಳೀಯರ ವಿರೋಧ ಇದೆ. ಆದರೆ ಆರಂಭದಿಂದಲೂ ಈ ಯೋಜನೆಯು ಎಲ್ಲ ಪ್ರಶ್ನೆಗಳನ್ನು ಹತ್ತಿಕ್ಕಿ, ನಿಯಮಗಳನ್ನು ಜಾಣತನದಿಂದ ಬದಿಗೆ ಸರಿಸಿ ಅವಸರದಲ್ಲಿಯೇ ಕಾರ್ಯ ನಿರ್ವಹಿಸಲಾಗುತ್ತಿದೆ. ’ಪರಿಸರ ಪರಿಣಾಮಗಳ ಅಧ್ಯಯನ-2006’ರ ಕರಡಿನ ಪ್ರಕಾರ ಯಾವುದೇ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ 100 ಕಿ.ಮೀಗೂ ಉದ್ದದ ರಸ್ತೆ ಯೋಜನೆಯನ್ನು ಕೈಗೊಳ್ಳುವ ಮೊದಲು ಪರಿಸರದ ಮೇಲಿನ ಪರಿಣಾಮಗಳ ಕುರಿತು ಅಧ್ಯಯನ ನಡೆಸಬೇಕು. ಆದರೆ ಈ ನಿಯಮವನ್ನು ಬದಿಗೆ ಸರಿಸಲು ಈ ಯೋಜನೆಯನ್ನು 53 ಸಣ್ಣಸಣ್ಣ ಯೋಜನೆಗಳನ್ನಾಗಿ ತೋರಿಸಲಾಗಿದೆ. ಹಾಗಾಗಿ ಈ ಯೋಜನೆಗೆ ಯಾವುದೇ ಪರಿಸರದ ಪರಿಣಾಮಗಳ ಅಧ್ಯಯನಗಳೂ ಆಗಿಲ್ಲ. ಅಷ್ಟೇ ಅಲ್ಲದೇ ಇದನ್ನು ರಾಷ್ಟ್ರೀಯ ರಕ್ಷಣೆಗೆ ಮುಖ್ಯವಾದ ಯೋಜನೆ ಎಂದು ಹೇಳಿ ಇದಕ್ಕೆ ಬರುವ ಎಲ್ಲ ಆಕ್ಷೇಪಗಳನ್ನೂ ಬದಿಗೆ ಸರಿಸಲಾಗುತ್ತಿದೆ. ದೇಶದ ಗಡಿಯಲ್ಲಿ ರಸ್ತೆಯ ಲಭ್ಯತೆ ಇರಬೇಕು ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಒಂದು ಪ್ರದೇಶದ ಭೌಗೋಳಿಕ ಸೂಕ್ಷ್ಮತೆಯನ್ನು ಅರಿಯದೆ, ಬೇಕಾಬಿಟ್ಟಿ ಬೆಟ್ಟಗಳನ್ನು ಬಗೆದು, ಸುರಂಗ ಕೊರೆದು ರಸ್ತೆಗಳನ್ನು ನಿರ್ಮಿಸಿ, ನಮ್ಮ ದೇಶದ ರಕ್ಷಣೆ ಮಾಡಬೇಕಾದ ಸೈನಿಕರಿಗೆ ಮತ್ತು ಸ್ಥಳೀಯ ಜನರಿಗೆ ಅಪಾಯವನ್ನು ಉಂಟುಮಾಡಿದರೆ ಅದು ಹೇಗೆ ದೇಶ ರಕ್ಷಣೆಯಾದೀತು? ಅದಲ್ಲದೇ ಸುರಂಗದಿಂದ ಕೊರೆದ ಕಲ್ಲು ಮಣ್ಣನ್ನೆಲ್ಲ ಪಕ್ಕದ ನದಿಗೆ ಸುರಿದು ನದಿಯ ಸಹಜ ಹರಿವಿಗೂ ತೊಂದರೆ ಉಂಟಾಗುತ್ತಿದೆ; ಒಂದುವೇಳೆ ಪ್ರವಾಹ ಪರಿಸ್ಥಿತಿ ಉಂಟಾದರೆ ಇದೇ ಕಲ್ಲು ಮಣ್ಣೆಲ್ಲಾ ಹತ್ತಿರದ ಜನವಸತಿ ಪ್ರದೇಶದಲ್ಲಿ ಬಂದು ಬೀಳಬಹುದು. ಅಷ್ಟೇಅಲ್ಲದೇ ಸುರಂಗಗಳ ಕೊರೆತದಿಂದ ಹತ್ತಿರದ ಜನವಸತಿ ಪ್ರದೇಶಕ್ಕೆ ತೊಂದರೆ ಉಂಟಾಗಿ ಅಪಾರ ಆಸ್ತಿಪಾಸ್ತಿ ಮತ್ತು ಪ್ರಾಣಹಾನಿಗೆ ಕಾರಣವಾಗಬಹುದು. ಈ ಎಲ್ಲ ಪರಿಣಾಮಗಳೂ ಕೇವಲ ಊಹಾಪೋಹಗಳಲ್ಲ, ಬದಲಿಗೆ ಇವೆಲ್ಲ ಈಗಾಗಲೇ ಸಂಭವಿಸುತ್ತಿರುವ ಸಂಗತಿಗಳು. ಉದಾಹರಣೆಗೆ ಇದೇ ಉತ್ತರಾಖಂಡ ರಾಜ್ಯದ ಜೋಷಿಮಠ ಊರಿನಲ್ಲಿ 6 ಇಂಚು ಭೂಮಿ ಕುಸಿದು ಎಲ್ಲ ಜನಜಾನುವಾರುಗಳನ್ನು ಸ್ಥಳಾಂತರಿಸಬೇಕಾಯಿತು ಮತ್ತು ಹಿಮಾಲಯದ ರಾಜ್ಯಗಳಲ್ಲಿ ಭೂಕುಸಿತ ಮತ್ತು ಪ್ರವಾಹಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ.

ಇದನ್ನೂ ಓದಿ: ಸಿಲ್ಕ್ಯಾರಾ ಸುರಂಗ ಕುಸಿತ: ಕಾರ್ಮಿಕನ ಕುಟುಂಬದ ದುಸ್ಥಿತಿ ಬಗ್ಗೆ ವರದಿ ಮಾಡಿದ ಪತ್ರಕರ್ತರ ವಿರುದ್ಧ ಎಫ್ಐಆರ್

ಈ ಯೋಜನೆಯ ಕುರಿತು ವಿವರವಾದ ಅಧ್ಯಯನ ಕೈಗೊಳ್ಳಲು ಮತ್ತು ಶಿಫಾರಸ್ಸುಗಳನ್ನು ತಿಳಿಸಲು ಸರ್ವೋಚ್ಚ ನ್ಯಾಯಾಲಯವು 2019ರಲ್ಲಿ ಪರಿಸರ ತಜ್ಞ ರವಿ ಛೋಪ್ರಾರವರ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು, ಹಿಮಾಲಯದಲ್ಲಿ ಬೇಕಾಬಿಟ್ಟಿ ರಸ್ತೆಯ ಅಗಲೀಕರಣವನ್ನು ಮಾಡಲಾಗದು; ಇದರಿಂದ ಭೂಕುಸಿತಗಳ ಪ್ರಮಾಣ ಹೆಚ್ಚಾಗಬಹುದು ಹಾಗಾಗಿ 5.5 ಮೀಟರುಗಳಷ್ಟು ಅಗಲ ಮಾತ್ರ ರಸ್ತೆ ನಿರ್ಮಿಸುವಂತೆ ವರದಿ ಕೊಟ್ಟಿತ್ತು. ಆದರೆ ಕೊನೆಯಲ್ಲಿ ದೇಶದ ಸುರಕ್ಷತೆಯ ಕಾರಣ ನೀಡಿ ರಸ್ತೆಯನ್ನು 10 ಮೀಟರಿನಷ್ಟು ಅಗಲದಲ್ಲಿ ನಿರ್ಮಿಸಲು ಅನುಮತಿ ನೀಡಲಾಯಿತು. ಇದರಿಂದ ಆಗುವ ಅನಾಹುತವನ್ನು ಅರಿತ ರವಿ ಛೋಪ್ರಾರವರು ಸಮಿತಿಗೆ ರಾಜೀನಾಮೆ ನೀಡಿದರು. ಅವರ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವಂತೆ, ಹಿಮಾಲಯದ ಪರಿಸರ ಮತ್ತು ಜನಜೀವನದ ಸಂರಕ್ಷಣೆಯ ಏಕೈಕ ಉದ್ದೇಶದಿಂದ ಅವರು ಈ ಇಳಿವಯಸ್ಸಿನಲ್ಲೂ ಈ ಸಮಿತಿಯ ನೇತೃತ್ವ ವಹಿಸಲು ಒಪ್ಪಿಕೊಂಡಿದ್ದರು, ಆದರೆ ಈಗ ಅವರ ಕಣ್ಣೆದುರಿಗೇ ಒಂದು ಕಾಲದಲ್ಲಿ ಅಬೇಧ್ಯವಾಗಿದ್ದ ಹಿಮಾಲಯವನ್ನು ಹೊಸ ಹೊಸ ಯಂತ್ರೋಪಕರಣಗಳನ್ನು ಬಳಸಿ ಬಗೆಯಲಾಗುತ್ತಿದೆ, ಅಲ್ಲಿನ ಕಡಿದಾದ ಇಳಿಜಾರನ್ನು ರಕ್ಷಿಸುತ್ತಿದ್ದ ಕಾಡುಗಳನ್ನು ಕಡಿಯಲಾಗುತ್ತಿದೆ, ಪವಿತ್ರ ತಾಣಗಳಾಗಿದ್ದ ಹಿಮಾಲಯದ ಕ್ಷೇತ್ರಗಳು ವಿಪರೀತ ಪ್ರವಾಸಿಗರ ಆಗಮನದಿಂದ ಕೊಳಚೆಯ ಆಗರಗಳಾಗುತ್ತಿವೆ. ಇದೆಲ್ಲವನ್ನು ನೋಡಿಯೂ ನಾನು ಈ ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಾರೆ ಎಂದು ಮನಮುಟ್ಟುವ ಒಂದು ದೀರ್ಘ ಪತ್ರವನ್ನು ಬರೆದು ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ, ಪ್ರಕೃತಿಯು ತನ್ನ ಮೇಲೆ ಆಗುತ್ತಿರುವ ಈ ದಾಳಿಯನ್ನು ಮರೆಯುವುದೂ ಇಲ್ಲ ಮತ್ತು ಕ್ಷಮಿಸುವುದೂ ಇಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.

ಸಂಕೀರ್ಣ ಭೌಗೋಳಿಕ ಮತ್ತು ಪರಿಸರ ವ್ಯವಸ್ಥೆಗಳಿಂದ ಕೂಡಿದ ಹಿಮಾಲಯವು ಭೌಗೋಳಿಕ ಕಾಲಮಾನದಲ್ಲಿ ಇನ್ನೂ ಗಟ್ಟಿಗೊಳ್ಳದ ತರುಣ ಪರ್ವತ ಶ್ರೇಣಿಯಾಗಿದೆ. ಇದು ಭಾರತ ಮತ್ತು ಯುರೇಷಿಯನ್ ಶಿಲಾ ಫಲಕಗಳ ಘರ್ಷಣೆಯಿಂದ ಉಂಟಾಗಿದ್ದು ಇಲ್ಲಿನ ಬೆಟ್ಟಗಳು ಇನ್ನೂ ಗಟ್ಟಿಗೊಳ್ಳದ ಪದರು ಶಿಲೆಗಳನ್ನು ಒಳಗೊಂಡಿವೆ. ಅಷ್ಟೇಅಲ್ಲದೆ ಹಿಮಾಲಯ ಶ್ರೇಣಿಯಲ್ಲಿ ಬರುವ ಪ್ರದೇಶಗಳು ಅತಿಹೆಚ್ಚು ಅಪಾಯದ ಭೂಕಂಪನ ವಲಯದಲ್ಲಿ ಕಂಡುಬರುತ್ತವೆ. ಹಾಗಾಗಿ ಇಲ್ಲಿ ಬೇರೆಲ್ಲಾ ಕಡೆ ನಿರ್ಮಿಸಿದಂತೆ ನಾಲ್ಕು, ಹತ್ತು ಪಥದ ಎಕ್ಸ್‌ಪ್ರೆಸ್ ರಸ್ತೆಗಳನ್ನು ನಿರ್ಮಿಸಲಾಗದು. ಇದಕ್ಕೆ ಉದಾಹರಣೆ ಎಂಬಂತೆ ಕಳೆದ ವರ್ಷ ಉತ್ತರಾಖಂಡ ರಾಜ್ಯದಲ್ಲಿ ತೀವ್ರ ಪ್ರಮಾಣದ ಪ್ರವಾಹ ಉಂಟಾಗಿ ಅಪಾರ ಆಸ್ತಿ ಮತ್ತು ಪ್ರಾಣಹಾನಿಯಾಯಿತು. ಇದಕ್ಕೂ ಮುಂಚೆ ಹಿಂದೆಂದೂ ಕೇಳದ ಭೀಕರ ಪ್ರವಾಹದಲ್ಲಿ 5000 ಜನ ಪ್ರಾಣ ಕಳೆದುಕೊಂಡರು, ಅಷ್ಟೇ ಅಲ್ಲದೇ ಇತ್ತೀಚಿಗೆ ಸಿಕ್ಕಿಂ ರಾಜ್ಯದಲ್ಲಿ ಕೂಡ ಹಿಂದೆಂದೂ ಆಗದಂತಹ ಪ್ರವಾಹ ಉಂಟಾಗಿ ತೀಸ್ತಾ ನದಿಗೆ ಅಡ್ಡಲಾಗಿ ಕಟ್ಟಿದ್ದ ಜಲವಿದ್ಯುತ್ ಯೋಜನೆಯ ಅಣೆಕಟ್ಟೆಯನ್ನು ಒಡೆದು ನೀರು ಮುನ್ನುಗ್ಗಿತ್ತು; ಇದರಿಂದ ನೂರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ಇನ್ನು ಜೋಶಿಮಠ ಊರು 6 ಇಂಚುಗಳಷ್ಟು ಕುಸಿದು ಊರನ್ನೇ ಶಾಶ್ವತವಾಗಿ ಖಾಲಿ ಮಾಡಬೇಕಾಗಿ ಬಂತು; ಅದೆಷ್ಟೋ ತಲೆಮಾರುಗಳಿಂದ ಅಲ್ಲಿ ನೆಲೆನಿಂತಿದ್ದ ಜನ ಕಣ್ಣೀರಿಡುತ್ತಾ ತಮ್ಮ ಮನೆ, ಆಸ್ತಿಗಳನ್ನು ತೊರೆದು ಬಂದರು.

ಸುಮಾರು 50 ವರ್ಷಗಳ ಹಿಂದೆ ಜೋಶಿಮಠ ಪ್ರದೇಶದಲ್ಲಿ ಎಂಸಿ ಮಿಶ್ರಾ ಸಮಿತಿಯು ಅಧ್ಯಯನ ಕೈಗೊಂಡು ಅನೇಕ ಶಿಫಾರಸ್ಸುಗಳನ್ನು ಮಾಡಿತ್ತು. ಭೂಮಿಯನ್ನು ಅಗೆಯುವುದು, ಡೈನಾಮೇಟುಗಳನ್ನು ಬಳಸಿ ಸ್ಫೋಟಿಸುವುದು ಇವೆಲ್ಲ ಅಲ್ಲಿನ ಪ್ರದೇಶದ ಅಸ್ಥಿರತೆಗೆ ಕಾರಣವಾಗುತ್ತದೆ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ದುರಂತವೆಂದರೆ ಅಲ್ಲಿ ಏನು ಮಾಡಬಾರದು ಎಂದು ಹೇಳಲಾಗಿತ್ತೋ, ಯಥಾವತ್ತಾಗಿ ಅದನ್ನೇ ಮಾಡಿದ್ದು ಜೋಷಿಮಠ ಊರಿನ ಅವಸಾನಕ್ಕೆ ಪರೋಕ್ಷ ಕಾರಣವಾಯ್ತು.

ಹಿಮಾಲಯ ಶ್ರೇಣಿಯ ಜನರು ಶತಶತಮಾನಗಳಿಂದ ಪ್ರಕೃತಿಯೊಂದಿಗೆ ಬದುಕಿ ಬಂದವರು. ಅಲ್ಲಿನ ಅಭಿವೃದ್ಧಿ ಕಾರ್ಯಗಳ ಮತ್ತು ಎಲ್ಲ ಯೋಜನೆಗಳ ಪ್ರಥಮ ಆದ್ಯತೆ ಅಲ್ಲಿನ ಸ್ಥಳೀಯರ ಸುರಕ್ಷತೆ ಮತ್ತು ಸುಸ್ಥಿರತೆಯಾಗಿರಬೇಕು. ಹಾಗಾಗಿ ಅಲ್ಲಿ ಯಾವ ಯೋಜನೆಯನ್ನೂ ಕೈಗೊಳ್ಳುವ ಮೊದಲು, ಅದರ ಕುರಿತು ವಿಸ್ತೃತ ಅಧ್ಯಯನ ಮತ್ತು ಜನಾಭಿಪ್ರಾಯ ಪಡೆದೇ ಮುಂದಿನ ಹೆಜ್ಜೆ ಇಡಬೇಕು. ಹಿಮಾಲಯದಲ್ಲಿ ಹಿಂದೆಂದೂ ಕಾಣದಷ್ಟು ಯೋಜನೆಗಳು ಬರುತ್ತಿವೆ. ಚಾರ್‌ಧಾಮ್ ರಸ್ತೆ ಅಷ್ಟೇ ಅಲ್ಲ, ಬಹುಪಾಲು ಸುರಂಗದಲ್ಲಿಯೇ ಹೋಗುವ ಚಾರ್ ಧಾಮ್ ರೈಲು ಯೋಜನೆಯ ಕಾಮಗಾರಿ ಕೂಡ ಚಾಲ್ತಿಯಲ್ಲಿದೆ. ಇನ್ನು ಅರುಣಾಚಲ ಪ್ರದೇಶವನ್ನು ಒಳಗೊಂಡು ಹಿಮಾಲಯದ ಎಲ್ಲ ರಾಜ್ಯಗಳಲ್ಲೂ ನೂರಾರು ಜಲವಿದ್ಯುತ್ ಯೋಜನೆಗಳು ಬರುತ್ತಿವೆ. ಹವಾಮಾನ ವೈಪರೀತ್ಯ ಮತ್ತು ಭೂಕಂಪನದಂತಹ ದುರ್ಘಟನೆಗಳು ಈಗಾಗಲೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅಲ್ಲಿನ ಪರಿಸರ ವ್ಯವಸ್ಥೆಗೆ ಹೊಂದಿಕೆಯಾಗದ ಇಂತಹ ಯೋಜನೆಗಳನ್ನು ತರಾತುರಿಯಲ್ಲಿ ನಿರ್ಮಿಸಿದರೆ ಅಲ್ಲಿನ ಜನರ ಅಸ್ತಿತ್ವಕ್ಕೆ ಮತ್ತು ದೇಶದ ಸುಸ್ಥಿರತೆಗೂ ಅಪಾಯ ಕಟ್ಟಿಟ್ಟ ಬುತ್ತಿ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕುವೈತ್‌ ಅಗ್ನಿ ದುರಂತ: 45 ಭಾರತೀಯರ ಮೃತದೇಹಗಳು ಇಂದು ಕೇರಳಕ್ಕೆ ಆಗಮನ

0
ಎರಡು ದಿನಗಳ ಹಿಂದೆ ಗಲ್ಫ್ ದೇಶದಲ್ಲಿ ಸಂಭವಿಸಿದ ಭಾರೀ ಬೆಂಕಿಯಲ್ಲಿ ಸಾವನ್ನಪ್ಪಿದ 45 ಭಾರತೀಯರ ಮೃತದೇಹಗಳನ್ನು ಹೊತ್ತ ವಿಶೇಷ ವಾಯುಪಡೆಯ ವಿಮಾನವು ಕುವೈತ್‌ನಿಂದ ಟೇಕಾಫ್ ಆಗಿದೆ. ವಿಮಾನವು ಕೇರಳದ ಕೊಚ್ಚಿಯಲ್ಲಿ ಬೆಳಿಗ್ಗೆ 11...