Homeಮುಖಪುಟದಮನಿತರ ಕತೆಯುಳ್ಳ ‘ಪಾಲಾರ್‌’ ಸಿನಿಮಾಕ್ಕೆ U/A ಸರ್ಟಿಫಿಕೇಟ್‌

ದಮನಿತರ ಕತೆಯುಳ್ಳ ‘ಪಾಲಾರ್‌’ ಸಿನಿಮಾಕ್ಕೆ U/A ಸರ್ಟಿಫಿಕೇಟ್‌

- Advertisement -
- Advertisement -

ದಮನಿತರ ಕತೆಯುಳ್ಳ ಕನ್ನಡದ ‘ಪಾಲಾರ್‌’ ಸಿನಿಮಾ ಟ್ರೇಲರ್‌‌ ಬಿಡುಗಡೆಯ ವೇಳೆ ವಿವಾದಗಳಿಗೆ ಗುರಿಯಾಗಿತ್ತು. ಜಾತಿಯ ವಿಷಯವನ್ನು ಢಾಳಾಗಿ ತೋರಿಸಿರುವ ಕಾರಣ ಹಲವು ಆಡಿಯೊ ಕಂಪನಿಗಳು ಟ್ರೇಲರ್‌ ಬಿಡುಗಡೆಗೆ ಒಪ್ಪಿಕೊಂಡಿಲ್ಲ ಎಂದು ಆರೋಪಿಸಿದ್ದ ಚಿತ್ರತಂಡ ತಮ್ಮದೇ ಯೂಟ್ಯೂಬ್‌ ಚಾನೆಲ್‌ ಮೂಲಕ ಬಿಡುಗಡೆ ಮಾಡಿತ್ತು. ತಮಿಳಿನ ಖ್ಯಾತ ನಿರ್ದೇಶಕ, ನಿರ್ಮಾಪಕ ಪ.ರಂಜಿತ್‌ ‘ಪಾಲಾರ್‌’ ಸಿನಿಮಾದ ಟ್ರೇಲರ್‌‌ ಹಂಚಿಕೊಂಡಿದ್ದರು. ಈಗ ಅಂತಿಮವಾಗಿ ಸಿನಿಮಾ ಸೆನ್ಸಾರ್‌ ಆಗಿದ್ದು ‘ಯು/ಎ’ ಸರ್ಟಿಫಿಕೇಟ್ ಪಡೆದು ಬಿಡುಗಡೆಗೆ ಸಿದ್ಧವಾಗಿದೆ.

“ಜೀವಾ ನವೀನ್ ನಿರ್ದೇಶನದ, ನಟಿ ವೈ.ಜಿ.ಉಮಾ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದು ಮುಂದಿನ ತಿಂಗಳು ತೆರೆಕಾಣಲಿದೆ” ಎಂದು ಚಿತ್ರತಂಡ ತಿಳಿಸಿದೆ.

“ಶೋಷಿತ ವರ್ಗಗಳ, ದಲಿತರ ನೈಜ ಘಟನೆಗಳನ್ನು ಆಧರಿಸಿ ತೆಗೆದ ಸಿನೆಮಾ ಇದಾಗಿದೆ. ತಮಿಳು, ತೆಲುಗು ಭಾಷೆಗಳಿಗೆ ಸೀಮಿತವಾಗಿದ್ದ ನೆಲದ ಕಥೆಯನ್ನು ಕನ್ನಡದಲ್ಲೂ ಹೇಳಲು ಹೊರಟಿರುವ ಸಿನೆಮಾ ಪಾಲಾರ್” ಎಂದು ‘ಪಾಲಾರ್‌’ ತಂಡ ಮಾಹಿತಿ ನೀಡಿದೆ.

“ಕೋಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿ ಸೊಗಡಿನ ಕನ್ನಡ ಭಾಷೆಯನ್ನು ಬಳಸಿದ ಕನ್ನಡದ ಮೊದಲ ಸಿನಿಮಾ ಇದಾಗಿದೆ. ಆಂಧ್ರಪ್ರದೇಶ, ಕರ್ನಾಟಕ ಗಡಿಭಾಗಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಅನ್ಯಾಯ ಅನುಭವಿಸುತ್ತಿರುವ ದಲಿತರ ಕಥೆಯನ್ನು ತೆರೆಗೆ ತರಲಾಗಿದೆ” ಎಂದಿದೆ.

“ಮಹಿಳೆ ತನ್ನ ಜೀವನದಲ್ಲಿ ಹೋರಾಟದ ಮೂಲಕ ಜಯವನ್ನು ಸಾಧಿಸಬಹುದು ಎಂದು ಇಲ್ಲಿ ತೋರಿಸಲಾಗಿದೆ. ಮರ್ಯಾದೆ ಹತ್ಯೆ, ಬಡವರ ಭೂಮಿ ಶ್ರೀಮಂತರ ಪಾಲಾಗುವುದು, ಜಮೀನ್ದಾರಿಗಳ ದೌರ್ಜನ್ಯ ಇತ್ಯಾದಿ ಪ್ರಮುಖ ಸಂಗತಿಗಳನ್ನು ಕತೆಯಲ್ಲಿ ತರಲಾಗಿದೆ” ಎಂದು ಹೇಳಿದೆ.

“ಸೆನ್ಸಾರ್ ಮುಗಿಸಿದ ಪಾಲಾರ್ ಸಿನೆಮಾಗೆ CBFC ಬೋರ್ಡ್ U/A (ಯು/ಎ) ಸರ್ಟಿಫಿಕೇಟ್ ನೀಡಿದೆ. ದಕ್ಷಿಣ ಭಾರತದ ಖ್ಯಾತ ನಟ ನಟಿಯರ, ಸಮಾಜದ ಮುಖಂಡರ, ಜನಸಾಮಾನ್ಯರ ಬೆಂಬಲ ಸಿಕ್ಕಿದೆ. ಈಗಾಗಲೇ ಪಾಲಾರ್ ಸಿನೆಮಾದ ಟ್ರೇಲರ್‌ ನೋಡಿ ಭರವಸೆ ವ್ಯಕ್ತಪಡಿಸಿದ್ದಾರೆ. ಪಾಲಾರ್ ಸಿನೆಮಾ ಗೆದ್ದರೆ ನಮ್ಮ ದೀನ ದಲಿತರ, ಬಡವರ, ನೆಲದ ಕಥೆಗಳು ಇನ್ನೂ ಹೆಚ್ಚಾಗಿ ಮೂಡಿ ಬರುತ್ತವೆ. ಇಲ್ಲವಾದಲ್ಲಿ ಇಂತಹ ಪ್ರಯತ್ನ ಯಾರೂ ಮಾಡುವುದಿಲ್ಲ. ಹೀಗಾಗಿ ನಮ್ಮ ಸಿನಿಮಾವನ್ನು ಕನ್ನಡಿಗರು ಗೆಲ್ಲಿಸಬೇಕು” ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿರಿ: ‘ಪಾಲಾರ್’ ಸಿನಿಮಾ ಟ್ರೇಲರ್‌ ಬಿಡುಗಡೆ ಮಾಡಿದ ಖ್ಯಾತ ನಿರ್ದೇಶಕ ಪ.ರಂಜಿತ್

‘ಪಾಲಾರ್‌’ ಟೈಟಲ್‌ ವಿಶೇಷತೆ ಏನು?

“ನಂದಿ ಬೆಟ್ಟದಲ್ಲಿ ಹುಟ್ಟಿದ ಪಾಲಾರ್‌ ನದಿ ಕೋಲಾರದ ಬೇತಮಂಗಲವರೆಗೂ ಭೂಮಿಯ ಒಳಗಡೆಯೇ ಹರಿದು ಹೋಗುತ್ತದೆ. ಆ ನಂತರ ತಮಿಳುನಾಡು ನಾಡಿನಾದ್ಯಂತ ಹರಿದು ಸಮುದ್ರ ಸೇರುತ್ತದೆ. ನದಿ ಒಳಗಡೆಯೇ ಇದ್ದಾಗ ಬಿಸಿಯಾಗಿರುತ್ತದೆ. ಆ ಬಿಸಿ ಒಂದು ರೀತಿಯಲ್ಲಿ ರಕ್ತಕ್ಕೆ ಸಮಾನ. ದಲಿತರಲ್ಲೂ ಇದೇ ರೀತಿಯ ಕುದಿತ ಆಂತರ್ಯದಲ್ಲಿ ಅಡಗಿದೆ. ಸಂದರ್ಭ ಸಿಕ್ಕಾಗ ಅದು ಹೊರಬರುತ್ತದೆ. ಒಮ್ಮೆ ಆ ಆಕ್ರೋಶ ಸ್ಫೋಟಿಸಿದಾಗ ಏನಾಗುತ್ತದೆ ಎಂಬುದೇ ಈ ಪಾಲಾರ್‌ ಕಥೆ. ನದಿಗೂ ಮತ್ತು ನಮ್ಮ ಕಥೆಗೂ ಸಂಬಂಧವಿಲ್ಲ. ಒಂದು ರೂಪಕವಾಗಿ ಈ ಹೆಸರನ್ನು ಬಳಸಿದ್ದೇವೆ. ಪಾಲಾರ್‌ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಮ್ಮ ಕಥೆ ನಡೆಯುತ್ತದೆ” ಎನ್ನುತ್ತಾರೆ ನಿರ್ದೇಶಕ ಜೀವಾ ನವೀನ್.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...