Homeಮುಖಪುಟಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ 4 ವರ್ಷ; ಸಂಘ ಪರಿವಾರ ಮಾದರಿ ಆಳ್ವಿಕೆಯ ಸತ್ವ ಪರೀಕ್ಷೆ

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ 4 ವರ್ಷ; ಸಂಘ ಪರಿವಾರ ಮಾದರಿ ಆಳ್ವಿಕೆಯ ಸತ್ವ ಪರೀಕ್ಷೆ

- Advertisement -
- Advertisement -

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಲ್ಕು ವರ್ಷ ಆಳ್ವಿಕೆಯನ್ನು ಪೂರ್ಣಗೊಳಿಸಿರುವುದರ ಜೊತೆಗೆ ಮುಂದಿನ ಚುನಾವಣೆಗೆ ತಯಾರಿಯನ್ನೂ ಚುರುಕುಗೊಳಿಸಿದ್ದಾರೆ. ಹಬ್ಬದ ಹುರುಪಿನೊಂದಿಗೆ ದೇಶದಾದ್ಯಂತ ಎಲ್ಲಾ ಪತ್ರಿಕೆ ಮತ್ತು ಸುದ್ದಿ ಚಾನೆಲ್‌ಗಳಿಗೂ ನೀಡಲಾದ ಭಾರಿಭಾರೀ ಜಾಹೀರಾತುಗಳಲ್ಲಿ ಚುನಾವಣಾ ಸಿದ್ಧತೆಯ ಝಲಕ್ ಎದ್ದುಕಾಣುತ್ತಿತ್ತು. ಆ ನಂತರವೂ ಉ.ಪ್ರ. ಸರ್ಕಾರದ ವಿವಿಧ ಇಲಾಖೆಗಳ ಜಾಹೀರಾತುಗಳ ಸರಣಿ ಮುಂದುವರಿಯಿತು, ಪತ್ರಿಕೆ ಮತ್ತು ಚಾನೆಲ್‌ಗಳ ಮಾಲೀಕರ ತಿಜೋರಿಗಳಿಗೆ ಹಣದ ಹೊಳೆಯೇ ಹರಿಯಿತು.

ಇರಲಿ, ನಾವು ಸಹ ಯೋಗಿ ಸರ್ಕಾರದ ವಿಫಲತೆಗಳನ್ನು ಎಣಿಸುತ್ತ ಕೂರುವ ಬದಲು ಅದರ ಕೆಲವು ಮಹಾನ್ ’ಸಾಧನೆ’ಗಳ ಚರ್ಚೆಯಿಂದಲೇ ಶುರು ಮಾಡೋಣ. ಕಳೆದ ನಾಲ್ಕು ವರ್ಷಗಳಲ್ಲಿ ಯುಪಿ ಸರ್ಕಾರ ಒಂದು ವಿಚಾರದಲ್ಲಿ ನಿರಂತರ ಸಫಲತೆ ಸಾಧಿಸಿದೆ – ಸರಿಸಾಟಿಯಿಲ್ಲದ ಮೀಡಿಯಾ ಮ್ಯಾನೇಜ್‌ಮೆಂಟಿನಲ್ಲಿ! ಇಂದು ಯುಪಿಯಿಂದ ಪ್ರಕಟವಾಗುವ ಯಾವುದೇ ಪ್ರಮುಖ ಪತ್ರಿಕೆ ಅಥವಾ ಚಾನೆಲ್ಲಿನ ಪತ್ರಕರ್ತ ಯುಪಿ ಸರ್ಕಾರದ ಬಗ್ಗೆ ಟೀಕೆ-ವಿಮರ್ಶೆ ಮಾಡುವುದಿಲ್ಲ, ಅದರ ಬಗ್ಗೆ ಪ್ರಶ್ನೆ ಎತ್ತುವುದಿಲ್ಲ, ಅದರ ಲೋಪಗಳನ್ನು ಎತ್ತಿ ತೋರಿಸುವುದಿಲ್ಲ. ಇದು ಕಳೆದ ಮೂರು ವರ್ಷಗಳಿಂದ ’ಮಾಧ್ಯಮ ನೀತಿ’ ಆಗಿಬಿಟ್ಟಿದೆ. ಆದರೆ ಇದೇ ಮಾಧ್ಯಮಗಳು ಈಗಾಗಲೇ ಸತ್ತಂತಿರುವ ವಿಪಕ್ಷಗಳು ಮತ್ತು ಅವುಗಳ ನಾಯಕರ ಕುರಿತು ಎಷ್ಟು ಬೇಕಾದರೂ ಟೀಕಿಸಲು, ಹಲವೊಮ್ಮೆ ಕೆಟ್ಟ ಶಬ್ದಗಳನ್ನು ಸಹ ಬಳಸಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿವೆ! ಹಾಥರಸ್‌ನಂತಹ ಕೆಲವೇ ಕೆಲವು ಸಂದರ್ಭಗಳಲ್ಲಿ ಸರ್ಕಾರದ ವಿರುದ್ಧ ಚೂರುಪಾರು ಟೀಕೆ ಕೇಳಿಬಂದಿದಿದೆ: ಆದರೆ ಅದೆಲ್ಲ ಹೆಚ್ಚಾಗಿ ಎಡಿಜಿಪಿ, ಡಿಐಜಿ, ಎಸ್‌ಪಿ ಅಥವಾ ಡಿಸಿಯ ವಿರುದ್ಧವೇ ಇತ್ತು. ಇನ್ನು ಕೆಲವು ವೆಬ್ ಪೋರ್ಟಲ್‌ಗಳು ಮುಂತಾದ ಸ್ವತಂತ್ರ ಮಾಧ್ಯಮಗಳು ಸರ್ಕಾರದ ಬಗ್ಗೆ ವಿಮರ್ಶೆ ಮಾಡಿವೆ, ಅವುಗಳಲ್ಲಿ ಹಲವಕ್ಕೆ ಸರಿಯಾದ ’ಪಾಠ’ ಕಲಿಸಿದ್ದೂ ಆಗಿದೆ! ಕೆಲವಕ್ಕೆ ಪೊಲೀಸ್ ಕೇಸುಗಳಾದರೆ ಕೆಲವರನ್ನು ರಸ್ತೆಗಳಲ್ಲೇ ಬಂಧಿಸಲಾಗಿದೆ. ಮಲಯಾಳಂ ವೆಬ್‌ಸೈಟೊಂದರ ವರದಿಗಾರ ರಶೀದ್ ಕಪ್ಪನ್ ಇನ್ನೂ ಜೈಲಿನಲ್ಲೇ ಇದ್ದಾರೆ; ಅವರ ಮೇಲೆ ಯುಎಪಿಎ ಸೇರಿದಂತೆ ಗಂಭೀರ ಸೆಕ್ಷನ್‌ಗಳನ್ನು ಹಾಕಲಾಗಿದೆ.

ಯೋಗಿಯ ನಾಲ್ಕು ವರ್ಷಗಳ ಆಡಳಿತದಲ್ಲಿ ಇಂಥ ಇನ್ನೂ ಕೆಲವು ’ಸಾಧನೆ’ಗಳಿವೆ. ಒಂದು: ಸಾಂಪ್ರದಾಯಿಕ ವಿರೋಧ ಪಕ್ಷಗಳನ್ನು ಪ್ರಾಂತೀಯ ರಾಜಕಾರಣದಲ್ಲಿ ಅಭೂತಪೂರ್ವ ರೀತಿಯಲ್ಲಿ ನಿಷ್ಕ್ರಿಯಗೊಳಿಸಿರುವುದು. ಇದನ್ನು ’ವಿರೋಧೀ ಶಿಬಿರದ ಮ್ಯಾನೇಜ್‌ಮೆಂಟ್’ ಅಂತಲೂ ಕರೆಯಬಹುದು. ಯುಪಿ ರಾಜಕಾರಣದಲ್ಲಿ ಹೀಗೆ ವಿಪಕ್ಷಗಳ ಸದ್ದೇ ಇಲ್ಲವಾದದ್ದು ಹಿಂದೆಂದೂ ನಡೆದಿರಲಿಲ್ಲ. ಇದು ಹೊಸ ಭಾಜಪಾದ ಹೊಸ ಶೈಲಿ ಇರುವಂತಿದೆ. ಪ್ರತಿದಿನವೂ ಒಂದಿಲ್ಲೊಂದು ವಿವಾದವನ್ನು ಹುಟ್ಟುಹಾಕುತ್ತಿರುವ ಸರ್ಕಾರಕ್ಕೆ ವಿರೋಧ ಪಕ್ಷಗಳ ಸವಾಲೇ ಇಲ್ಲ ಎಂಬಂತಾಗಿದೆ. ವಿರೋಧ ಪಕ್ಷವಾದ ಸಮಾಜವಾದಿ ಪಕ್ಷವು (ಸಪ) 2017ರ ನಂತರ ಬೀದಿಗಿಳಿದು ಪ್ರತಿಭಟಿಸಿದ್ದು ಇಲ್ಲವೇ ಇಲ್ಲ ಎನ್ನಬಹುದು. ಇನ್ನು ಮಾಯಾವತಿಯವರ ಬಹುಜನ ಸಮಾಜ ಪಕ್ಷ(ಬಸಪ)ಕ್ಕಂತೂ ರಸ್ತೆ ಹೋರಾಟಗಳಲ್ಲಿ ನಂಬಿಕೆಯೇ ಇಲ್ಲ. ಅದು ಯಾವಾಗಲಾದರೊಮ್ಮೆ ಟ್ವೀಟ್ ಮಾಡುತ್ತದೆ ಅಥವಾ ಮಾಧ್ಯಮ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತದೆ.

PC : Oneindia Kannada

ಸಪ ಅಧ್ಯಕ್ಷ ಅಖಿಲೇಶ್ ಯಾದವ್ ಸಹ ಟ್ವೀಟ್ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಈ ಇಬ್ಬರೂ ನಾಯಕರ ಸಾಮಾಜಿಕ ಸಮೂಹ ನೆಲೆಯಾದ ಬಡಜನರ ಮೇಲೆ ಇಂತಹ ಟ್ವೀಟ್‌ಗಳು ಏನು ಪರಿಣಾಮ ಬೀರುತ್ತವೋ! ಬಲ್ಲವರಿಲ್ಲ. ಹೀಗೆ ಎರಡೂ ಪ್ರಮುಖ ವಿರೋಧ ಪಕ್ಷಗಳ ’ನಿದ್ರಾವಸ್ಥೆ’ಯ ಹೊತ್ತಿನಲ್ಲಿ, ಈಗಷ್ಟೇ ಬೆಳಕಿಗೆ ಬರುತ್ತಿರುವ ಪಕ್ಷ ಅಥವಾ ಚಳವಳಿಗಳು ಮಾತ್ರವೇ ಸರ್ಕಾರಕ್ಕೆ ನಿಜಾರ್ಥದಲ್ಲಿ ಸವಾಲೊಡ್ಡುತ್ತಿವೆ. ಇವರ್‍ಯಾರೂ ಈ ಹಿಂದೆ ಸರಕಾರ ನಡೆಸಿದವರಲ್ಲ; ಹಾಗಾಗಿ ಅವರ ಮೇಲೆ ಸಿಬಿಐ/ಇಡಿಯಂಥ ಏಜೆನ್ಸಿಗಳನ್ನು ಛೂ ಬಿಡುವ ಸಂಭವ ಇಲ್ಲ ಎನ್ನುವುದು ಇದಕ್ಕೆ ಕಾರಣ ಇರಬಹುದು. ಇನ್ನು, ರೈತ ಆಂದೋಲನದಲ್ಲಿ ಸಕ್ರಿಯವಾಗಿರುವ ಸಂಘಟನೆ/ಸಮುದಾಯಗಳು ಹೆಚ್ಚಾಗಿ ಪಶ್ಚಿಮ ಯುಪಿಯ ಕೆಲವು ಜಿಲ್ಲೆಗಳಲ್ಲಷ್ಟೇ ಸರಕಾರದ ವಿರುದ್ಧ ಮಹಾಪಂಚಾಯತ್ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಿವೆ.

ಸಪ-ಬಸಪ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ಸು ಹೆಚ್ಚು ಸಕ್ರಿಯವಾಗಿ ಕಾಣುತ್ತದೆ. ಆದರೆ ಅದಕ್ಕೆ ಯುಪಿಯಲ್ಲಿ ಹೆಚ್ಚಿನ ಜನಬೆಂಬಲ ಉಳಿದಿಲ್ಲ. ಕಾಂಗ್ರೆಸ್ಸಿನ ಉನ್ನತ ನಾಯಕರು ಮತ್ತು ರಣನೀತಿ ನಿರ್ಣಾಯಕರು ಈಗಲೂ ಮೇಲುವರ್ಣಗಳ ಹಿಂದೂಗಳು ಅಥವಾ ಪ್ರತಿಷ್ಠಿತ ಮುಸ್ಲಿಂ ಸಮುದಾಯದವರಾಗಿದ್ದಾರೆ. ಹಿಂದೀ ಭಾಷಿಕ ಪ್ರದೇಶಗಳ ಮೇಲುವರ್ಣದ ಹಿಂದೂ ಸಮುದಾಯಗಳ ದೊಡ್ಡ ಭಾಗ ಭಾಜಪಾ ಜೊತೆ ನಿಂತಿರುವುದು ಗೊತ್ತಿರುವಂಥದ್ದೇ. ಇದಕ್ಕೆ ಮೂರು ಪ್ರಮುಖ ಕಾರಣಗಳಿವೆ: ಭಾಜಪಾ-ಸಂಘಪರಿವಾರದ ಮಂದಿರ-ಮಸೀದಿ ರಾಜಕಾರಣ, ಮೀಸಲಾತಿ ವಿಚಾರದಲ್ಲಿ ಅದರ ನೀತಿ-ರಣನೀತಿಗಳು, ಹಾಗೂ ಮುಸ್ಲಿಂ ವಿರೋಧ. ಸವರ್ಣೀಯರಿಗೆ ತಮ್ಮ ಪಾರಂಪರಿಕವಾದ ಮೀಸಲಾತಿ-ವಿರೋಧಕ್ಕೆ ಭಾಜಪಾ-ಸಂಘ ಮಾತ್ರವೇ ದನಿ ನೀಡಿದೆ ಎಂದು ಅನ್ನಿಸಿದೆ. ಇದರ ಹೊರತಾಗಿಯೂ, ಯುಪಿಯ ಶೂದ್ರ (ಹಿಂದುಳಿದ) ಸಮುದಾಯಗಳಲ್ಲಿ ಸಂಘ-ಭಾಜಪಾಕ್ಕೆ ಬೆಂಬಲ ಬಹಳ ಹೆಚ್ಚಿರುವ ವಿಸ್ಮಯಕಾರಿ ವಿದ್ಯಮಾನವನ್ನು ಕಾಣಬಹುದು. ಇದಕ್ಕೆ ಅನೇಕ ಆಸಕ್ತಿದಾಯಕ ಕಾರಣಗಳಿವೆ. ಇಂಥ ಹಿನ್ನೆಲೆಯಲ್ಲಿ ಕಾಂಗ್ರೆಸ್ಸು ಯುಪಿಯಲ್ಲಿ ಹೆಚ್ಚಿನ ಜನಬೆಂಬಲ ಸಾಧಿಸಲು ಸಫಲವಾಗುತ್ತಿಲ್ಲ. ಇನ್ನು ಈ ಭಾಗದ ಅಲ್ಪಸಂಖ್ಯಾತರು ಪ್ರಾಂತೀಯ ರಾಜಕಾರಣದಲ್ಲಿ ಭಾಜಪಾದ ವಿರುದ್ಧ ಕಾಂಗ್ರೆಸ್ಸು ಪರಿಣಾಮಕಾರಿ ಶಕ್ತಿ ಎಂದು ಭಾವಿಸುವುದಿಲ್ಲ. ಅವರ ಒಲವು ಈಗಲೂ ಸಪ ಕಡೆಗೇ ಇರುತ್ತದೆ.

ಹೀಗೆ, ಮೀಡಿಯ ಮ್ಯಾನೇಜ್‌ಮೆಂಟ್ ಮತ್ತು ಸಾಂಪ್ರದಾಯಿಕ ವಿಪಕ್ಷಗಳ ಮ್ಯಾನೇಜ್‌ಮೆಂಟ್ – ಯೋಗಿಯ ಯುಪಿ ಸರ್ಕಾರದ ಈ ಎರಡು ಸಫಲತೆಗಳು. ಈ ವಿಚಾರದಲ್ಲಿ ಯೋಗಿ ಸರ್ಕಾರ ಮತ್ತು ಕೇಂದ್ರದ ಮೋದಿ ಸರ್ಕಾರಗಳ ಕಾರ್ಯ ವಿಧಾನದ ನಡುವೆ ಬಹಳ ಸಾಮ್ಯತೆ ಇದೆ. ಮಾಧ್ಯಮಗಳ ವಿಚಾರದಲ್ಲಿ ಇಂಥ ಅನುಕೂಲಕರ ವಾತಾವರಣದ ಒಂದು ಕಾಲದಲ್ಲಿ ಗುಜರಾತಿನಲ್ಲಿ ಕಾಣಬರುತ್ತಿತ್ತು. ಪತ್ರಿಕೆಗಳ ಪ್ರಾದೇಶಿಕ ಆವೃತ್ತಿಗಳಲ್ಲಂತೂ ಓದುಗರ ಅಭಿಪ್ರಾಯದ (’ಒಪೀನಿಯನ್’) ಪುಟಗಳು ಸಹ ಪೂರ್ವನಿರ್ದೇಶಿತ ಆಗಿರುತ್ತವೆ ಎಂದು ಭಾವಿಸಲಾಗುತ್ತಿದೆ. ವಿರೋಧ ಪಕ್ಷಗಳ ಒಲವು ಇರುವಂಥವು ಎಂದು ಭಾವಿಸಲಾಗಿದ್ದವೂ ಸಹ ಮೌನವಾಗಿರುವ ಮೂಲಕ ಸಹಕಾರ ನೀಡುತ್ತಿವೆ. ಇಂಥ ಸಹಕಾರ ಸದ್ಯ ಮೋದಿಗೆ ಕೂಡ ಸಿಗುತ್ತಿಲ್ಲ. ಅವರು ತಮ್ಮನ್ನು ಟೀಕಿಸುವವರನ್ನು ಮತ್ತು ವಿರೋಧ ಪಕ್ಷಗಳನ್ನು ’ಕೇರ್’ ಮಾಡದೇ ಇರಬಹುದು; ಆದರೂ ಕಾಂಗ್ರೆಸ್ ಮತ್ತು ಕೆಲವು ಎಡಪಕ್ಷಗಳ ನಾಯಕರು ಸರಕಾರದ ವಿರುದ್ಧ ದಿನಂಪ್ರತಿ ದಾಳಿ ಮಾಡುತ್ತಲೇ ಇರುತ್ತಾರೆ. ಈ ರೀತಿ ನೋಡಿದರೆ ಯೋಗಿ ಸರ್ಕಾರವು ತನ್ನ ಇಂಥ ಕೆಲವು ’ಸಾಧನೆ’ಗಳಲ್ಲಿ ಮೋದಿ ಸರ್ಕಾರಕ್ಕಿಂತಲೂ ಎರಡು ಹೆಜ್ಜೆ ಮುಂದಿದೆ ಎನ್ನಬಹುದೇ ಹೊರತು ಖಂಡಿತಾ ಹಿಂದಿಲ್ಲ.

ಹೊಸ ಹಾದಿಯ ಮಾಧ್ಯಮಗಳ ಪತ್ರಕರ್ತರು, ಸಂಪಾದಕರು ಅಥವಾ ಕಾರ್ಯಕರ್ತರು ಯೋಗಿ ಸರ್ಕಾರದ ಲೋಪದೋಷಗಳನ್ನು ಟೀಕಿಸಿದರೆ ಅಥವಾ ಬೆಳಕಿಗೆ ತಂದರೆ ಅವರನ್ನು ಬಂಧಿಸುವುದಕ್ಕೂ ಸರ್ಕಾರ ಹಿಂಜರಿಯುತ್ತಿಲ್ಲ. ಅನೇಕರ ಮೇಲೆ ಈಗಾಗಲೇ ಮೊಕದ್ದಮೆಗಳು ನಡೆಯುತ್ತಿವೆ. ಕಾಂಗ್ರೆಸ್ಸಿನ ರಾಜ್ಯ ನಾಯಕರು ಮತ್ತು ಸಪದ ಸ್ಥಳೀಯ ಮತ್ತು ಜಿಲ್ಲಾ ನಾಯಕರ ಮೇಲೆ ಇದು ಬಹಳ ಪರಿಣಾಮ ಬೀರಿದೆ. ಈ ವಿಚಾರದಲ್ಲಿ ಯೋಗಿ ಸರ್ಕಾರದ ದಾಖಲೆಯು ಎಮರ್ಜೆನ್ಸಿಯ ಇಂದಿರಾ ಗಾಂಧಿಯ ದಾಖಲೆಯನ್ನೂ ಅಳಿಸಿಹಾಕಿದೆ! ಜನತೆ ಎದುರಿಸುತ್ತಿರುವ ಅಸಂಖ್ಯ ಸಮಸ್ಯೆಗಳ ಕುರಿತು ಯಾವ ಮಾಧ್ಯಮದಲ್ಲೂ ಚರ್ಚೆ ಆಗದಂತೆ ಪ್ರಯತ್ನ ನಡೆಸುತ್ತಿದ್ದರೂ ನ್ಯೂಸ್ ಪೋರ್ಟಲ್‌ಗಳಲ್ಲಂತೂ ಚರ್ಚೆ ನಡೆದೇ ನಡೆಯುತ್ತದೆ. ಅಂಕೆಸಂಖ್ಯೆಗಳು ಮತ್ತು ವಾಸ್ತವಗಳನ್ನು ಗಮನಿಸಿದಲ್ಲಿ ಯೋಗಿ ಸರ್ಕಾರದ ಕಾರ್ಯ ನಿರ್ವಹಣೆ ಸರಾಸರಿಗಿಂತಲೂ ಬಹಳ ಕಡಿಮೆಯಿದೆ. ಆಡಳಿತದ ವೈಫಲ್ಯಗಳು ಮತ್ತೆಮತ್ತೆ ಬೆಳಕಿಗೆ ಬರುತ್ತಲೇ ಇವೆ. ಆದರೂ ನಾಲ್ಕು ವರ್ಷ ಪೂರೈಸಿದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಜಾಹೀರಾತುಗಳ ಕೇಂದ್ರ ವಿಷಯ: ಯುಪಿಯಲ್ಲಿ ಹಲವಾರು ದಶಕಗಳಲ್ಲಿ ಆಗದಿದ್ದುದನ್ನು ಯೋಗಿ ಸರ್ಕಾರ ನಾಲ್ಕೇ ವರ್ಷಗಳಲ್ಲಿ ಮಾಡಿ ತೋರಿಸಿದೆ ಎಂಬುದಾಗಿತ್ತು.

ಸ್ವಾತಂತ್ರ್ಯಾನಂತರದ ಎಲ್ಲಾ ಸರ್ಕಾರಗಳ ಕಾರ್ಯ ನಿರ್ವಹಣೆಯ ದಾಖಲೆ ಬಹಳ ಚೆನ್ನಾಗಿಯೇನೂ ಇರಲಿಲ್ಲ ಎಂಬುದೇನೋ ನಿಜ. ಆದರೆ ಇಂದಿನ ಸರ್ಕಾರದ ದಾಖಲೆ ಹೇಗಿದೆ? ವ್ಯಕ್ತಿಗತ ಆದಾಯದ ಜೊತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗುವ ಮಾನವ ವಿಕಾಸ ಸೂಚ್ಚಾಂಕದಲ್ಲಿ ಯುಪಿ ಇತರ ರಾಜ್ಯಗಳಿಗಿಂತ ತೀರಾ ಕೆಳಗಿದ್ದು ದಯನೀಯವಾಗಿದೆ. ಈ ನಿಟ್ಟಿನಲ್ಲಿ ಅತ್ಯಂತ ಕೆಳಗಿರುವ ಬಿಹಾರಕ್ಕಿಂತ ತಾನು ವಾಸಿ ಎಂಬ ’ಸಾಧನೆ’ಯಿಂದ ಬೇಕಾದರೆ ಯುಪಿ ಸರ್ಕಾರ ತೃಪ್ತಿಪಟ್ಟುಕೊಳ್ಳಬಹುದು! 2020ರ ಆರಂಭದಲ್ಲಿ ಪ್ರಕಟವಾದ ಎನ್‌ಸಿಆರ್‌ಬಿ ಅಂಕಿಸಂಖ್ಯೆಗಳ ಪ್ರಕಾರ ಒಟ್ಟಾರೆ ಅಪರಾಧ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳ ವಿಷಯದಲ್ಲೂ ಯುಪಿಯ ಡಾಮಿನೇಶನ್ ಮುಂದುವರಿದಿದೆ; ದಲಿತರ ಮೇಲಿನ ಅಪರಾಧಗಳಲ್ಲಿ ಅದು ಐದನೇ ಸ್ಥಾನದಲ್ಲಿದೆ. ಪಬ್ಲಿಕ್ ಅಫೇರ್ಸ್ ಇಂಡೆಕ್ಸ್ – 2020ರಲ್ಲಿ, ಅತ್ಯಂತ ಕೆಟ್ಟ ಆಳ್ವಿಕೆಯಿರುವ ರಾಜ್ಯಗಳಲ್ಲಿ ಯುಪಿ ಮೊದಲನೇ ಸ್ಥಾನದಲ್ಲಿದೆ.

PC : India Today

ಈ ಎಲ್ಲ ಸೂಚ್ಯಂಕಗಳಲ್ಲಿ ಅಂದರೆ ಒಳ್ಳೆಯ ಆಡಳಿತ ನಿರ್ವಹಣೆಯಲ್ಲಿ ಕೇರಳ ದೀರ್ಘ ಕಾಲದಿಂದ ನಂಬರ್ ಒನ್ ಸ್ಥಾನದಲ್ಲಿದೆ. ತಮಿಳುನಾಡಿನ ಸ್ಥಾನ ಕೂಡ ಚೆನ್ನಾಗಿಯೇ ಇದೆ, ಬಂಗಾಳ ಕೂಡ ಯುಪಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಸದ್ಯ ಕೇರಳ, ತಮಿಳುನಾಡು ಮತ್ತು ಬಂಗಾಳದ ಚುನಾವಣಾ ರ್‍ಯಾಲಿಗಳಲ್ಲಿ ಯೋಗಿ ಸಹಿತ ಭಾಜಪಾದ ಎಲ್ಲಾ ದೊಡ್ಡದೊಡ್ಡ ನಾಯಕರೂ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಈ ರಾಜ್ಯವನ್ನು ಬಂಗಾರ ಮಾಡುತ್ತೇವೆ (ಅಮಾರ್ ಸೋನಾರ್ ರಾಜ್ಯ) ಎಂದು ಘೋಷಿಸುತ್ತಿದ್ದಾರೆ! ಯೋಗಿಯಂತೂ ಯುಪಿಯಂಥದ್ದೇ ’ರಾಮರಾಜ್ಯ’ ಮಾಡುವುದಾಗಿಯೂ ಭರವಸೆ ನೀಡುತ್ತಿದ್ದಾರೆ. ಇಲ್ಲಿ ಅಪರಾಧ ಮಾಡುವವರು ಜೈಲಿಗೆ ಇಲ್ಲವೇ ಸೀದಾ ’ಯಮರಾಜ’ನ ಬಳಿಗೇ ಹೋಗುತ್ತಾರೆ ಎಂದೂ ಅವರು ಹೇಳುತ್ತಾರೆ.

ಹೌದಪ್ಪಾ, ಹಾಗಿದ್ದೂ ಸಹ ಅಪರಾಧ ಪ್ರಕರಣಗಳಲ್ಲಿ ನಿಮ್ಮ ರಾಜ್ಯದ ಸ್ಥಿತಿ ಇಷ್ಟು ಹೀನಾಯವಾಗಿ ಯಾಕಿದೆ? ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿ ದಾಖಲಾಗಿರುವ 59,445 ಪ್ರಕರಣಗಳ ಸಹಿತ ಅದು ಯಾಕೆ ಅತಿ ಹೆಚ್ಚು ಅಪರಾಧ ಪ್ರಕರಣ ನಡೆಯುತ್ತಿರುವ ರಾಜ್ಯವಾಗಿದೆ? ಕೇಂದ್ರ ಸರ್ಕಾರದ ಎನ್‌ಸಿಆರ್‌ಬಿ ವರದಿ ಪ್ರಕಾರ 2016-19ರ ನಡುವೆ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ 20% ಏರಿಕೆ ಯಾಕಾಗಿದೆ? ಸತ್ಯವಾದ ವರದಿ ಪ್ರಕಟಿಸುತ್ತಿರುವುದಕ್ಕಾಗಿ ದಿಲ್ಲಿ, ಲಖನೌ ಅಥವಾ ಮಿರ್ಜಾಪುರದ ಪತ್ರಕರ್ತರ ವಿರುದ್ಧ ಗಂಭೀರ ಅಪರಾಧಗಳ ಪ್ರಕರಣಗಳನ್ನು ದಾಖಲಿಸುತ್ತಿರುವಂತೆ, ಈ ರೀತಿಯ ’ಫೇಕ್ ನ್ಯೂಸ್’ ಹರಡುತ್ತಿರುವುದಕ್ಕಾಗಿ ಅವೇ ಪ್ರಕರಣಗಳನ್ನು ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಯುಪಿ ಸರ್ಕಾರ ಹಾಕಿಲ್ಲ ಯಾಕೆ? ’ರಾಜ್ಯದಲ್ಲಿ ಮಹಿಳೆಯರ ವಿರುದ್ಧ ದಾಖಲಾಗಿರುವುದು 4322 ಪ್ರಕರಣಗಳಲ್ಲ, ಕೇವಲ 3946 ಪ್ರಕರಣಗಳು ಮಾತ್ರ’ ಎಂದು ಯುಪಿ ಸರ್ಕಾರ ಬೆನ್ನು ತಟ್ಟಿಕೊಂಡಿದೆ. ಆಗಲಪ್ಪಾ, ಈ ಅಂಕಿಸಂಖ್ಯೆಯಾದರೂ ಒಳ್ಳೆಯ ಆಳ್ವಿಕೆ ಅಥವಾ ’ಅಮಾರ್ ಸೋನಾರ್ ರಾಜ್ಯ’ದ ಚಿತ್ರಣ ನೀಡುವುದಾ? – ಎಂದು ಯೋಗಿಯನ್ನು ಕೇಳುವವರು ಯಾರು!?

ನಾಲ್ಕು ವರ್ಷ ಪೂರೈಸಿದ್ದಕ್ಕೆ ಮಾರ್ಚ್ 18ರಂದು ಸರ್ಕಾರ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿ ಎಲ್ಲಕ್ಕಿಂತ ಮೇಲಿದ್ದುದು: ’ಈಸ್ ಆಫ್ ಡೂಯಿಂಗ್ ಬಿಸಿನೆಸ್’ (ease of doing business – ವ್ಯಾಪಾರ ವಹಿವಾಟಿಗೆ ಹಿತಕರ ವಾತಾವರಣ) ಬಾಬತ್ತಿನಲ್ಲಿ ಯುಪಿ ದೇಶದಲ್ಲೇ ಎರಡನೇ ಸ್ಥಾನದಕ್ಕೆ ಏರಿದೆ ಎಂಬುದು! ಜನತೆಯ ಹಿತಾಸಕ್ತಿಗಳು, ಸಮಾಜದ ಮೂಲಭೂತ ಅಗತ್ಯಗಳು ಹಾಗೂ ಪ್ರದೇಶದ ಸರ್ವತೋಮುಖ ಪ್ರಗತಿಯ ವಿಚಾರಗಳಿಗೂ ಈ “ಎರಡನೇ ಸ್ಥಾನ”ಕ್ಕೂ ಏನು ಸಂಬಂಧ? “ಬಿಸಿನೆಸ್ ಮಾಡುವುದು ಸರ್ಕಾರದ ಬಿಸಿನೆಸ್ ಅಲ್ಲ” ಎಂದು ಬಹಳ ಸಮಯದಿಂದ ಹೇಳುತ್ತಾ ಬಂದಿರುವ ಏಕೈಕ ಪಕ್ಷವೆಂದರೆ ಭಾಜಪ. ಹಾಗಿದ್ದ ಮೇಲೆ ಬಿಸಿನೆಸ್ ಮಾಡುವವರ ದಾರಿ ಸುಗಮಗೊಳಿಸುವ ಬಿಸಿನೆಸ್‌ನಲ್ಲಿ ಯುಪಿ ಸರ್ಕಾರ ತಲ್ಲೀನವಾಗುವ ಅಗತ್ಯವೇನು? ರೈತರು, ಕಾರ್ಮಿಕರು, ಯುವಜನತೆ, ಎಲ್ಲ ವರ್ಗ-ವರ್ಣಗಳ ನಿರುದ್ಯೋಗಿಗಳು, ಮಹಿಳೆಯರು, ಮಧ್ಯಮ ವರ್ಗದ ಜನತೆ ಹಾಗೂ ಹಿರಿಯ ನಾಗರಿಕರ ಯೋಗಕ್ಷೇಮದ ಹಾದಿ ಸುಗಮಗೊಳಿಸಲು ಅದು ಯಾಕೆ ಏನೂ ಮಾಡುತ್ತಿಲ್ಲ? ಬಿಸಿನೆಸ್ ಮಾಡುವ ಕಾರ್ಪೊರೇಟ್‌ಗಳಿಗೆ ರತ್ನಗಂಬಳಿ ಹಾಸುವ ಕೆಲಸವನ್ನು ಮಾತ್ರ ಯಾಕೆ ಮಾಡುತ್ತಿದೆ?

ತನ್ನ ಟೀಕಾಕಾರರು, ಭಿನ್ನಾಭಿಪ್ರಾಯ ಹೊಂದಿರುವವರು ಹಾಗೂ ಅಲ್ಪಸಂಖ್ಯಾತರ ವಿರುದ್ಧ ಅತ್ಯಂತ ನಿರಂಕುಶ ವಿಧಾನ ಅನುಸರಿಸುತ್ತಿರುವುದರಲ್ಲಿ ಯುಪಿ ಆಡಳಿತವನ್ನು ಮೀರಿಸಿದ ರಾಜ್ಯ ಯಾವುದೂ ಇಲ್ಲ. ಎನ್‌ಎಸ್‌ಎ, ಯುಎಪಿಎಗಳ ಬೇಕಾಬಿಟ್ಟಿ ಬಳಕೆ ಮಾತ್ರವಲ್ಲದೆ ಯುಪಿ ಆಡಳಿತವು ಕೃತಕ ಎನ್‌ಕೌಂಟರ್‌ಗಳಂಥ ನಿರಂಕುಶ ಹತ್ಯಾಕಾಂಡಗಳಲ್ಲೂ ಕುಖ್ಯಾತವಾಗಿದೆ. “ಅಪರಾಧಿಗಳನ್ನು ಎನ್‌ಕೌಂಟರ್ ಮಾಡಲಾಗುವುದು” ಎಂಬುದಾಗಿ ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಯಾವನೇ ರಾಜಕೀಯ ನಾಯಕ ಜನತೆಗೆ ಧಮಕಿ ಹಾಕುವುದು ಸರಿಯಾ? ಧಮಕಿಯಷ್ಟೇ ಅಲ್ಲ, ವಾಸ್ತವದಲ್ಲೂ ’ಅಲೀಗಢ ಲೈವ್ ಎನ್‌ಕೌಂಟರ್’ನಂಥ ಹಲವು ಕುಖ್ಯಾತ ಕಗ್ಗೊಲೆಗಳನ್ನು ಈ ಸರ್ಕಾರ ಮಾಡಿದ್ದು ಬಹಳ ಖಂಡನೆಗೆ ಒಳಗಾಗಿದ್ದನ್ನು ನೋಡಿದ್ದೇವೆ.

ಕಳೆದ ವರ್ಷ ಮಾಜಿ ಐಜಿಪಿ ದಾರಾಪುರಿ ಅವರನ್ನು ಬಂಧಿಸಿ ಅವರ ಮೇಲೆ ತೀವ್ರ ರೀತಿಯ ಪ್ರಕರಣವನ್ನು ದಾಖಲಿಸಿದ್ದಲ್ಲದೆ ಅವರಿಂದ ದಂಡವನ್ನೂ ವಸೂಲು ಮಾಡಿದ್ದು, ಸದಫ್ ಜಫರ್‌ರಂಥ ಹಲವು ಮಂದಿ ಕಲಾವಿದರು ಮತ್ತು ರಾಜಕೀಯ ಕಾರ್ಯಕರ್ತರ ವಿರುದ್ಧ ಇಂಥವೇ ಪ್ರಕರಣಗಳನ್ನು ದಾಖಲಿಸಿದ್ದು, 2017ರಲ್ಲಿ ಗೋರಖ್‌ಪುರದಲ್ಲಿ ಹಸುಗೂಸುಗಳ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್ ಇಲ್ಲದೆ ಹೋದಾಗ ಸ್ವಂತ ಖರ್ಚಿನಲ್ಲಿ ತರಿಸಿ ಚಿಕಿತ್ಸೆ ನೀಡಿದ “ಅಪರಾಧ”ಕ್ಕಾಗಿ ಡಾಕ್ಟರ್ ಕಫೀಲ್ ಖಾನ್ ವಿರುದ್ಧ ದೇಶದ್ರೋಹದ ಆಪಾದನೆ ಹೊರಿಸಿ ವರ್ಷಗಳ ಕಾಲ ಜೈಲಿನಲ್ಲಿಟ್ಟಿದ್ದಲ್ಲದೆ ಅವರು ದೀರ್ಘ ಸೆರೆವಾಸದ ಬಳಿಕ ಜಾಮೀನು ಪಡೆದು ಹೊರಬಂದರೂ ಪುನಃಪುನಃ ಬಂಧಿಸಿ ಜೈಲುಪಾಲು ಮಾಡಿದ್ದು… ಇಂಥ ಹಲವು ಕ್ರೂರ ಘಟನೆಗಳು ಯುಪಿಯಲ್ಲಿ ದಿನನಿತ್ಯದ ಸಂಗತಿಗಳಾಗಿವೆ.

1975ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ನಾನು ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದೆ, ಪರಿಸ್ಥಿತಿ ವಿರೋಧಿ ಚಳವಳಿಯ ಬೆಂಬಲಿಗನೂ ಆಗಿದ್ದೆ. ಆಗಲೂ ಬಹಳಷ್ಟು ಜನರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಲಾಯಿತು, ಬಂಧನಗಳೂ ನಡೆದವು. ಆದರೆ ದಾರಾಪುರಿ, ಕಫೀಲ್ ಖಾನ್, ಸದಫ್ ರೀತಿಯ ’ಮನಮಾನೀ’ (whimsical) ಪ್ರಕರಣಗಳು ಪರಿಸ್ಥಿತಿ ಆ ಕಾಲದಲ್ಲೂ ಇರಲಿಲ್ಲ. ಈ ವಿಚಾರದಲ್ಲಿ ಮಾನ್ಯ ಹೈಕೋರ್ಟು ಸಾಂವಿಧಾನಿಕತೆಯ ಪರವಾಗಿ ಮಧ್ಯಪ್ರವೇಶ ಮಾಡದೇ ಹೋಗಿದ್ದಲ್ಲಿ ಇಂಥ ಪ್ರಬುದ್ಧ, ಸಾಮಾಜಿಕ ಕಾಳಜಿಯ ಜನರ ಸ್ಥಿತಿ ಏನಾಗಿರುತ್ತಿತ್ತು ಎಂದು ಊಹಿಸುವುದು ಕಷ್ಟವೇನಲ್ಲ. ಮಿರ್ಜಾಪುರದ ಪತ್ರಕರ್ತ ಪವನ್ ಜೈಸ್ವಾಲ್ ಅವರು ಮಕ್ಕಳ ಶಾಲೆಯಲ್ಲಿ ಮಧ್ಯಾಹ್ನದ ಉಪಾಹಾರದ ಗುಣಮಟ್ಟ ಬಹಳ ಕಳಪೆಯಾಗಿದೆ ಎಂಬ ಸತ್ಯವನ್ನು ಬಯಲಿಗೆ ತರುವಲ್ಲಿ ನೆರವಾಗಿದ್ದರು ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಯಿತು. ಹಾಗೆಯೇ scrollನ ಸುಪ್ರಿಯಾ ಶರ್ಮ ಮತ್ತು The Wireನ ಸಿದ್ಧಾರ್ಥ ವರದರಾಜನ್‌ರಂಥ ಹಿರಿಯ ಪತ್ರಕರ್ತರ ವಿರುದ್ಧ ಭಯಂಕರ ಸೆಕ್ಷನ್‌ಗಳ ಸಹಿತ ಕೇಸು ದಾಖಲಿಸಿ, ಅವರನ್ನು ಬಂಧಿಸುವ ಪ್ರಯತ್ನವೂ ನಡೆಯಿತು.

PC : The Print

ನಮ್ಮ ಪ್ರಜಾಸತ್ತೆಯ ಮಾಯೆ ನೋಡಿ: ಇಷ್ಟೆಲ್ಲಾ ಆಗಿಯೂ ಯೋಗಿ ಆದಿತ್ಯನಾಥರಿಗೆ ಯಾವುದೇ ರಾಜಕೀಯ ಸವಾಲು ಈಗಲೂ ಇಲ್ಲ, ಸದ್ಯದ ಭವಿಷ್ಯದಲ್ಲೂ ಕಾಣುತ್ತಿಲ್ಲ. ಆರೆಸ್ಸೆಸ್ಸಿನ ನಾಯಕತ್ವವಂತೂ ಅವರ ’ಸದ್ಗುಣ’ಗಳಿಗೆ ಮಾರುಹೋಗಿದೆ! ಅದು ಯೋಗಿಯನ್ನು ಭವಿಷ್ಯದ ದೊಡ್ಡ ನಾಯಕನಂತೆ ಪರಿಭಾವಿಸಿದೆ ಎಂದು ನಂಬಲರ್ಹ ಮೂಲಗಳು ಹೇಳುತ್ತವೆ. ಈ ಹಿಂದೆ ಗುಜರಾತಿನಲ್ಲಿ ಮೋದಿಯ ಕಟ್ಟರ್ ಹಿಂದುತ್ವವಾದಿ ರಾಜಕಾರಣಕ್ಕೆ ಕಾರ್ಪೊರೇಟ್ ಬೆಂಬಲವು ಮತ್ತಷ್ಟು ಬಲ ನೀಡಿತ್ತು. ಯುಪಿಯಲ್ಲಿ ಅಂಥ ಸ್ಥಳೀಯ ಮಟ್ಟದ ಕಾರ್ಪೊರೇಟ್ ಕ್ಯಾಪ್ಟನ್‌ಗಳು ಇಲ್ಲ. ಆದ್ದರಿಂದ ಇಲ್ಲಿ ಸಂಘ-ಭಾಜಪ ’ಸೋಷಿಯಲ್ ಇಂಜಿನಿಯರಿಂಗ್’ಅನ್ನು ನೆಚ್ಚಿಕೊಂಡಿದೆ. ’ಸೋಷಿಯಲ್ ಇಂಜಿನಿಯರಿಂಗ್’ನ  ಅಗತ್ಯ ಯುಪಿಯಲ್ಲಿ ಗುಜರಾತಿಗಿಂತ ಸ್ವಲ್ಪ ಹೆಚ್ಚಾಗಿತ್ತು. ಆದ್ದರಿಂದ ಇಲ್ಲಿನ ಸಂಘ ಪರಿವಾರದ ಪ್ರಯೋಗಶಾಲೆಯಲ್ಲಿ ಸ್ವಲ್ಪ ಬೇರೆ ರೀತಿಯ ಪ್ರಯೋಗ ನಡೆಯುತ್ತಿದೆ. ದಿಲ್ಲಿ, ಮುಂಬಯಿ, ಬೆಂಗಳೂರು, ಕೊಲ್ಕತ್ತಾಗಳಲ್ಲಿನ ಇಂಗ್ಲಿಷ್ ವಿದ್ಯಾಭ್ಯಾಸ ಪಡೆದ ಉದಾರವಾದಿ ಬುದ್ಧಿಜೀವಿಗಳು, ಲೇಖಕರು ಮತ್ತಿತರ ಮಧ್ಯಮ ವರ್ಗದ ಜನರು ಸರ್ವೇಸಾಮಾನ್ಯವಾಗಿ, ’ಕಟ್ಟರ್ ಹಿಂದುತ್ವ’ದ ಹೊಸ ದೂತ ಯೋಗಿ ಆದಿತ್ಯನಾಥ್‌ರ ಸರ್ಕಾರವು ದಮನ-ಹಿಂಸೆಗಳ ಕಾರಣಕ್ಕೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ನಗ್ನವಾಗಿ ಗಾಳಿಗೆ ತೂರಿರುವುದರಿಂದ ಇಂದಲ್ಲಾ ನಾಳೆ ತೀರಾ ಜನ ಬೆಂಬಲ ಕಳೆದುಕೊಂಡು ತಾನೇತಾನಾಗಿ ಬಿದ್ದುಹೋಗಲಿದೆ ಎಂದು ಯೋಚಿಸುತ್ತಾರೆ.

ಆದರೆ ಯುಪಿಯ ವಾಸ್ತವ ಸ್ಥಿತಿ ತದ್ವಿರುದ್ಧವಾಗಿ ಕಾಣುತ್ತಿದೆ. ಎರಡೂ ವಿರೋಧ ಪಕ್ಷಗಳಾದ ಸಪ-ಬಸಪಗಳಿಗೆ ’ಶಾಂತಿಪಾಠ’ ಕಲಿಸಿರುವ ಭಾಜಪಾ-ಸಂಘ ನಾಯಕತ್ವವು ತನ್ನ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಈ ಎರಡೂ ಪಕ್ಷಗಳ ಬೆಂಬಲಿಗರು ತಮ್ಮ ನಾಯಕರ ಇಂಥ ’ಮಂಡಿಯೂರುವ ರಾಜಕಾರಣ’ದಿಂದ ವಿಪರೀತ ಕ್ರುದ್ಧರಾಗಿದ್ದಾರೆ. ಇತ್ತೀಚೆಗೆ ಅಖಿಲೇಶ್ ಯಾದವ್ ತಮ್ಮ ಬೆಂಬಲಿಗರ ಒತ್ತಡದಿಂದಾಗಿ ತಮ್ಮ ಕಾರ್ಯಶೈಲಿಯನ್ನು ಸ್ವಲ್ಪ ಹರಿತಗೊಳಿಸಿದ್ದಾರೆ. ಆದರೆ ಅವರ ಬಳಿ ಭಾಜಪ-ಸಂಘ ನಾಯಕತ್ವವನ್ನು ಎದುರಿಸಬಲ್ಲ ಯಾವುದೇ ಪರಿಣಾಮಕಾರಿ ಸಂಘಟನೆಯಿಲ್ಲ. ಕೇವಲ ಜನಜಂಗುಳಿ ಮಾತ್ರ ಇದೆ. ಅದರ ಮುಂದೆ ಸದ್ಯ ನಿರ್ದಿಷ್ಟವಾದ ಯಾವುದೇ ಪರ್ಯಾಯ ರಣತಂತ್ರವಿಲ್ಲ. ಹೀಗಾಗಿ ಅವರ ಪಕ್ಷದ ಒಂದು ಭಾಗ ತೀವ್ರ ಹತಾಶೆಗೆ ಒಳಗಾಗಿದೆ. ಅದರಲ್ಲಿನ ಕೆಲವರು ಸರ್ಕಾರದ ದಮನದಿಂದ ಬಚಾವಾಗಲು ಹಾಗೂ ತಮ್ಮತಮ್ಮ ಸ್ವಾರ್ಥಕ್ಕಾಗಿ ಸರ್ಕಾರದ ನೆರಳಿಗೆ ಹೋಗುತ್ತಿದ್ದಾರೆ. ಬಸಪದ ಸ್ಥಿತಿ ಎಲ್ಲಕ್ಕಿಂತ ಕೆಟ್ಟದ್ದಾಗಿದೆ. ದಲಿತ ಮತ್ತು ಹಿಂದುಳಿದ ಸಮುದಾಯಗಳ ಹಲವು ಮುಂಚೂಣಿ ನಾಯಕರಲ್ಲಿ ವೈಚಾರಿಕ ರಾಜಕಾರಣಕ್ಕಿಂತಲೂ ತಮ್ಮತಮ್ಮ ಸ್ವಾರ್ಥದ ರಾಜಕಾರಣವೇ ಮೇಲುಗೈಯಾಗಿದೆ. ಸಂಘ-ಭಾಜಪ ನಾಯಕತ್ವವಾದರೋ ತಮ್ಮ ಈ ’ಪ್ರಯೋಗ’ದ ಯಶಸ್ಸಿನಿಂದ ಪುಳಕಿತವಾಗಿದೆ. ಅದು ಯುಪಿಯನ್ನು ಸಂಪೂರ್ಣವಾಗಿ ಬೇರೆಯೇ ರೀತಿಯಿಂದ ಗುಜರಾತ್ ಹಾದಿಯಲ್ಲಿ ತೆಗೆದುಕೊಂಡು ಹೋಗಲು ಶ್ರಮಿಸುತ್ತಿದೆ. ಸಂಸದೀಯ ವಿರೋಧ ಪಕ್ಷಗಳಂತೂ ಅದನ್ನು ತಡೆಯಲು ಸಂಪೂರ್ಣ ಅಸಮರ್ಥರಾಗಿ ಕಾಣುತ್ತಿದ್ದಾರೆ.

ಹೀಗಿರುವಾಗ, ಯುಪಿಯ ಭವಿಷ್ಯದ ರಾಜಕಾರಣದ ಮುಂದಿರುವ ಅತಿದೊಡ್ಡ ಸವಾಲು ಇದು: ಸ್ಥಳೀಯ ಮಟ್ಟದ ಕಾರ್ಯಕರ್ತ ಸಮೂಹ, ಪಶ್ಚಿಮ ಯುಪಿಯ ರೈತ ಆಂದೋಲನದ ಪ್ರಭಾವದಿಂದ ಮೇಲೆ ಬರುತ್ತಿರುವ ಹೊಸ ರಾಜಕಾರಣ ಹಾಗೂ ಕ್ಷೋಭೆಗೊಂಡಿರುವ ಯುವಜನತೆ ಒಟ್ಟು ಸೇರಿ, ಮುಳುಗುತ್ತಿರುವ ವಿರೋಧ ಪಕ್ಷಗಳ ಜೊತೆಗೂಡಿ ಯುಪಿಯು ’ಗುಜರಾತ್ ಹಾದಿ’ಯಲ್ಲಿ ಸಾಗದಂತೆ ತಡೆಯಬಲ್ಲರೆ?

ಅನುವಾದ: ಸಿರಿಮನೆ ನಾಗರಾಜ್.

ಊರ್ಮಿಳೇಶ್

ಊರ್ಮಿಳೇಶ್
ಹಿರಿಯ ಪತ್ರಕರ್ತರು, ಟಿವಿ ನಿರೂಪಕರು ಮತ್ತು ಲೇಖಕರು. ರಾಜ್ಯಸಭಾ ಟಿವಿ ಮತ್ತು ದ ವೈರ್ ಪತ್ರಿಕೆಗಳ ಜೊತೆಗೆ ಕೆಲಸ ಮಾಡಿರುವ ಊರ್ಮಿಳೇಶ್ ಸದ್ಯಕ್ಕೆ ನ್ಯೂಸ್‌ಕ್ಲಿಕ್ ಸುದ್ದಿತಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಜನರು ಏನು ತೊಡುತ್ತಾರೆ ಎಂಬುದರಲ್ಲಿ ರಾಜಕಾರಣಿಗಳು ಮೂಗು ತೂರಿಸಬೇಕಿಲ್ಲ: ಸ್ಮೃತಿ ಇರಾನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ವೃತ್ತಿ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...