Homeಮುಖಪುಟಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ವಿಚಿತ್ರ ಮುನ್ಸೂಚನೆ: ಭಾಗ 2

ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ವಿಚಿತ್ರ ಮುನ್ಸೂಚನೆ: ಭಾಗ 2

- Advertisement -
- Advertisement -

ಪಶ್ಚಿಮ ಯು.ಪಿಯಲ್ಲಿ ಆರಂಭದಿಂದಲೂ ಯಾರೂ ಬಿಜೆಪಿ ಬಗ್ಗೆ ಮಾತಾಡುತ್ತಿರಲಿಲ್ಲ. ವಾಸ್ತವದಲ್ಲಿ ರಾಜಕೀಯ ವ್ಯಾಖ್ಯಾನಕಾರರು ಪಶ್ಚಿಮ ಯು.ಪಿಯ ಸೀಟುಗಳಲ್ಲಿ ರೈತ ಆಂದೋಲನದ ಕಾರಣಕ್ಕೆ ಬಿಜೆಪಿಗೆ ಭಾರೀ ನಷ್ಟ ಉಂಟಾಗಬಹುದೆಂದು ಅಂದಾಜಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ನಾಯಕರು ಹಲವು ಪ್ರದೇಶಗಳಲ್ಲಿ ಹಳ್ಳಿಗಳಿಂದ ಪೇರಿ ಕೀಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಇಷ್ಟೆಲ್ಲ ಆರಂಭಿಕ ಅನುಕೂಲಕರ ಅಂಶಗಳು ಇದ್ದಾಗಲೂ, ಚಿತ್ರದಲ್ಲೇ ಇಲ್ಲದಿದ್ದ ಅಮಿತ್ ಶಾ ಇದ್ದಕ್ಕಿದ್ದಂತೆ ವೇದಿಕೆಯ ಮಧ್ಯಕ್ಕೆ ಜಿಗಿದು ಬಂದು ರಾಜಕೀಯ ತಾಪಮಾನವನ್ನು ಏರಿಸಿದ್ದಾರೆ.

ಅಮಿತ್ ಶಾ

ಉತ್ತರ ಪ್ರದೇಶದ ರಾಜಕೀಯ ವಾತಾವರಣದಲ್ಲಿ ದೀರ್ಘಕಾಲದವರೆಗಿದ್ದ ಮಳೆ, ಚಳಿ, ಗಾಳಿ ಮತ್ತು ಮಂಜು ಮುಸುಕಿದ ವಾತಾವರಣದ ನಂತರ ಈಗ ದಿಢಿರನೆ ಹೊಸ ಬಿರುಕುಗಳು ಮತ್ತು ಹಳೆಯ ತಪ್ಪುಗಳ ಕುದಿ ಎದ್ದಿದೆ. ಹಲವು ಪಕ್ಷಗಳಿಂದ ರಾಜಕಾರಣಿಗಳ ನಿರ್ಗಮನ ಕೆಲವು ವಾರಗಳ ಹಿಂದೆ ಆರಂಭವಾಗಿ ಅವರುಗಳು ಸಮಾಜವಾದಿ ಪಕ್ಷಕ್ಕೆ ಸೇರುತ್ತಿರುವುದು ಎಸ್‌ಪಿ ಮೈತ್ರಿಯೊಳಗಿನ ಟಿಕೆಟ್ ವಿತರಣೆಯಲ್ಲಿ ದೊಡ್ಡ ಗೊಂದಲ ಎಬ್ಬಿಸಿದೆ. ಇದು ರಾಷ್ಟ್ರೀಯ ಲೋಕ ದಳದ ಸದಸ್ಯರ ನಡುವೆ ಅಂದರೆ ಜಾಟ್ ಸಮುದಾಯದ ನಡುವೆ ಕೋಪ ಮತ್ತು ಅಸಮಾಧಾನ ಉಂಟುಮಾಡಿದೆ. ಮೀರತ್‌ನ ಸಿವಲಖಾಸ್ ಕ್ಷೇತ್ರದ ಇಂತಹ ಪ್ರಕರಣವೊಂದರಲ್ಲಿ ಹಿರಿಯ ಜಾಟ್ ನಾಯಕ ರಾಜಕುಮಾರ್ ಸಂಗ್ವಾನ್ ಅವರಿಗೆ ಟಿಕೆಟ್ ನಿರಾಕರಿಸಿ, ಅವರ ಬದಲಿಗೆ ಘುಲಾಂ ಮೊಹಮ್ಮದ್ ಅವರನ್ನು ಸಮಾಜವಾದಿ ಪಕ್ಷದಿಂದ ಕಣಕ್ಕಿಳಿಸಲಾಗುತ್ತಿದ್ದು, ಇದರಿಂದ ಜಾಟ್ ಸಮುದಾಯದಲ್ಲಿ ಆಕ್ರೋಶದ ಕಿಡಿ ಹೊತ್ತಿದೆ. ಜಾಟ್ ಮಹಾಸಭಾವು ಎಸ್‌ಪಿಯಿಂದ ಕಣಕ್ಕಿಳಿಸಲಾದ ಮುಸ್ಲಿಂ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಿಲ್ಲವೆಂದು ಘೋಷಣೆ ಮಾಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮುಸ್ಲಿಮರು ಆರ್‌ಎಲ್‌ಡಿಯಿಂದ ಕಣಕ್ಕಿಳಿಸಲಾದ ಜಾಟ್ ನಾಯಕರ ವಿರುದ್ಧ ಪ್ರಚಾರಕ್ಕೆ ಇಳಿದಿದ್ದಾರೆ.

ಮುಜಫರ್‌ನಗರದ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಮುಸ್ಲಿಮರು ಈಗಾಗಲೇ ಕೋಪಗೊಂಡಿದ್ದರು. ಮುಜಫರ್‌ನಗರ ಜಿಲ್ಲೆ 41% ಮುಸ್ಲಿಂ ಜನಸಂಖ್ಯೆ ಹೊಂದಿದೆ. ಆದರೆ, ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಯು ಈ ಜಿಲ್ಲೆಯ 6 ಮತಕ್ಷೇತ್ರಗಳಲ್ಲಿ ಒಂದರಲ್ಲೂ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಅಸಾಮಾನ್ಯ ಸಂಗತಿಯೊಂದು ಈ ಪ್ರದೇಶದಲ್ಲಿ, ಸೆಕ್ಯುಲರ್ ಪಾರ್ಟಿಗಳಲ್ಲಿ ಸಾಮಾನ್ಯ ಜ್ಞಾನವೆಂಬಂತೆ ಚಾಲ್ತಿಯಲ್ಲಿರುವುದೇನೆಂದರೆ, ಇಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಮುಸ್ಲಿಂ ಓಟುಗಳು ವಿಭಜನೆಯಾಗುತ್ತವೆಂಬುದು. ಮಾಯಾವತಿಯವರ ಬಿಎಸ್‌ಪಿ ಮತ್ತು ಒವೈಸಿಯವರ ಎಐಎಂಐಎಂ ಈಗಾಗಲೇ ಇಲ್ಲಿನ ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಒಂದು ಮಟ್ಟಿಗೆ ಈ ಆತಂಕ ಸಹಜವೆನಿಸಿದರೂ, ತಮ್ಮ ಈ ಕಾರ್ಯತಂತ್ರದ ದೂರಗಾಮಿ ಪರಿಣಾಮಗಳ ಬಗ್ಗೆ ಎಸ್‌ಪಿ ಅಥವಾ ಆರ್‌ಎಲ್‌ಡಿ ಚಿಂತಿಸಿದಂತಿಲ್ಲ.

ವಿರೋಧ ಪಕ್ಷಗಳ ಮೈತ್ರಿಯ ಈ ’ಅನ್ಯಾಯ’ಯುತ ಟಿಕೆಟ್ ಹಂಚಿಕೆ, ನಂತರದಲ್ಲಿ ಹೊರಹೊಮ್ಮಿದ ಸಾಮಾಜಿಕ-ರಾಜಕೀಯ ಪ್ರತಿಪಾದನೆಗೆ ಒಂದು ನೆಪವಾಗಿತ್ತು-ವಿಶೇಷವಾಗಿ ಹಿಂದೂ ಜಾಟರು ಮತ್ತು ಮುಸ್ಲಿಮರು ಹೆಚ್ಚೂ ಕಡಿಮೆ ಸಮಬಲಗಳಲ್ಲಿರುವ ಜನಸಂಖ್ಯಾ ಮಾದರಿಯುಳ್ಳ ಪ್ರದೇಶದಲ್ಲಿ ರಾಜಕೀಯ ಪ್ರಾತಿನಿಧ್ಯದ ವಿಚಾರವಾಗಿ ಇದು ಗೋಚರಿಸುತ್ತದೆ. ಇಲ್ಲಿ ಬಿಜೆಪಿಯ ಕೇಂದ್ರ ಗೃಹ ಸಚಿವ ಶಾ ಒಂದು ಅವಕಾಶವನ್ನು ಕಂಡುಕೊಂಡರು.

ಶಾ ಬಿಜೆಪಿಯ ಪ್ರಚಾರವನ್ನು ಜನವರಿ 23ರಂದು ಕೈರಾನಾದಿಂದ ಚಾಲನೆ ಮಾಡುತ್ತಾ ತಮ್ಮ ಎಂದಿನ ’ಹಿಂದೂ ವಲಸೆ’ಯ ಬುಡಬುಡಿಕೆಯನ್ನೇ ಮತ್ತೆ ಮುಂದುವರೆಸಿದರು. ಹಿಂದೂ ಜಾಟರನ್ನು ತಲುಪುವ ಪ್ರಯತ್ನದ ಭಾಗವಾಗಿ ’ಸಾಮಾನ್ಯ ಶತ್ರು ಮೊಘಲರ’ ವಿರುದ್ಧ ’ಬಿಜೆಪಿ ಹಾಗೂ ಜಾಟರು’ ಕಳೆದ 650 ವರ್ಷಗಳಿಂದ ಹೋರಾಡುತ್ತಿದ್ದೇವೆ ಎಂಬ ಹೇಳಿಕೆಯನ್ನೂ ನೀಡಿದರು. ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ಕೆಲವು ಜಾಟ್ ನಾಯಕರನ್ನು ಭೇಟಿಮಾಡಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡುವ ವಾಗ್ದಾನವನ್ನೂ ಮಾಡಿದರು. ಆರ್‌ಎಲ್‌ಡಿಯ ಔಪಚಾರಿಕ ಬೆಂಬಲ ಪಡೆಯುವ ಕೊನೆಯ ಪ್ರಯತ್ನವಾಗಿ ಶಾ
ಚೌಧರಿಯವರಿಗೆ ಸ್ನೇಹಹಸ್ತ ಚಾಚಿದರು ಆದರೆ ಅವರಿಂದ ತಿರಸ್ಕಾರಕ್ಕೆ ಒಳಗಾದರು.

ಜಯಂತ್ ಚೌಧರಿ

ಕೇವಲ 40 ವರ್ಷಗಳ ರಾಜಕೀಯ ಜೀವನವಿರುವ ಪಕ್ಷವು 650 ವರ್ಷಗಳ ಇತಿಹಾಸವನ್ನು ಉಲ್ಲೇಖಿಸುವುದು ಟ್ವಿಟರ್‌ನಲ್ಲಿ ಸಾಕಷ್ಟು ಮೋಜಿಗೆ ಕಾರಣವಾಯಿತು; ವಿರೋಧ ಪಕ್ಷ ಮತ್ತು ಮೀಡಿಯಾ ಕೂಡಾ ಇದನ್ನು ಗಮನಿಸದೆ ಉಳಿಯಲಿಲ್ಲ. ಹಾಗಿದ್ದೂ ಶಾನ ಅತಿಯಾದ ನಡವಳಿಕೆ, ಈಗ ತಮ್ಮ ಜಂಟಿ ಶಕ್ತಿಪ್ರದರ್ಶನ ಮಾಡಬೇಕಾದ ಅನಿವಾರ್ಯತೆಗೆ ಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿಯನ್ನು ತಳ್ಳಿದೆ. ಜನವರಿ 28ರ ಗುರುವಾರ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿಯವರು, ಮುಜಫರ್‌ನಗರ ಮತ್ತು ಮೀರತ್‌ಗಳಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಲಿರುವ ಘೋಷಣೆ ಮತ್ತು ಅದೇ ದಿನದಂದು ಮುಖ್ಯಮಂತ್ರಿ ಆದಿತ್ಯನಾಥ್ ಮೀರತ್‌ನ ಕಂಕರ್‌ಖೇಡಾದಿಂದ ಮನೆ-ಮನೆ ಚುನಾವಣಾ ಪ್ರಚಾರ ಆರಂಭಿಸುವ ಘೋಷಣೆಗಳೊಂದಿಗೆ ರಾಜಕೀಯ ನಾಟಕ ತಾರಕಕ್ಕೇರಿರುವುದಕ್ಕೆ ಸಾಕ್ಷಿಯಾಯಿತು. ಎಸ್‌ಪಿ-ಆರ್‌ಎಲ್‌ಡಿಯ ಭಿನ್ನಮತ ಶಮನಮಾಡಿಕೊಳ್ಳುವ ಪ್ರಯತ್ನಕ್ಕೆ ತನ್ನ ಉತ್ತರವೆಂಬಂತೆ ಯೋಗಿಯ ಕಾರ್ಯಕ್ರಮವು ಹಿಂದಿನ ರಾತ್ರಿ ತರಾತುರಿಯಲ್ಲಿ ನಿರ್ಧಾರವಾದುದಾಗಿತ್ತು. ಅಖಿಲೇಶ್ ಮರುದಿನ ದೆಹಲಿ ತಲುಪಿದರೂ, ಮಧ್ಯಾಹ್ನ 1 ಗಂಟೆಗೆ ಜಯಂತ್ ಚೌಧರಿಯೊಂದಿಗೆ ಮುಜಫರ್‌ನಗರದಲ್ಲಿ ನಡೆಸಬೇಕಿದ್ದ ಪತ್ರಿಕಾಗೋಷ್ಠಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಬಿಜೆಪಿಯು ತನ್ನ ಹೆಲಿಕಾಪ್ಟರ್‌ನ್ನು ತಡೆಹಿಡಿದದ್ದೇ ಇದಕ್ಕೆ ಕಾರಣ ಎಂದು ಅವರು ಆರೋಪಿಸಿದರು.

ಅಖಿಲೇಶ್ ಅವರ ಆರೋಪದ ಸತ್ಯಾಸತ್ಯತೆ ಏನೇ ಇರಲಿ, ವಿರೋಧ ಪಕ್ಷವನ್ನು ತಡೆಹಿಡಿಯಲು ಬಿಜೆಪಿ ಶತಾಯಗತಾಯ ಹತಾಶ ಪ್ರಯತ್ನಗಳನ್ನು ನಡೆಸುತ್ತಿರುವುದನ್ನು ಸಲೀಸಾಗಿ ಅರ್ಥಮಾಡಿಕೊಳ್ಳಬಹುದು. ಆದರೆ
ಎಸ್‌ಪಿ-ಆರ್‌ಎಲ್‌ಡಿಗೆ ಕೇಳಬೇಕಾದ ಪ್ರಶ್ನೆಯೊಂದಿದೆ- ಅಮಿತ್ ಶಾನ ಪ್ರಚೋದನೆಗಳಿಗೆ ಪ್ರತಿಕ್ರಿಯಿಸಬೇಕಾದ ಅಗತ್ಯವೇನಿತ್ತು? ಈ ಮೈತ್ರಿ ಪಶ್ಚಿಮ ಯುಪಿಯಲ್ಲಿ ಜಾಟ್-ಮುಸ್ಲಿಂ ಐಕ್ಯತೆಯ ಬಗ್ಗೆ ಅನುಮಾನಗೊಂಡಿದೆಯೇ? ವಿರೋಧ ಪಕ್ಷದ ಮೈತ್ರಿಕೂಟದ ನಾಯಕತ್ವವನ್ನು ಗಟ್ಟಿಯಾಗುಳಿಸಿಕೊಳ್ಳುವುದು ಮುಖ್ಯವಾದದ್ದೇ, ಆದರೆ ಅದರ ಹಿನ್ನೆಲೆಯನ್ನೊಮ್ಮೆ ನೋಡಿದಾಗ ಎಸ್‌ಪಿ-ಆರ್‌ಎಲ್‌ಡಿಗೆ ಕೊನೆಗೂ ಪೆಟ್ಟು ಬಿದ್ದಿರುವುದು ನಿಜವೇ ಅಲ್ಲವೇ? ಜೊತೆಗೆ 2013ರಲ್ಲಿ ಮುಜಫರ್‌ನಗರ ಗಲಭೆಗೆ ಮತ್ತು ಆ ನಂತರ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜಾಟರ ಗುರುತಿಸಿಕೊಂಡು ಗಟ್ಟಿಯಾಗುವುದಕ್ಕೆ ಕಾರಣವಾದ ಹಳೆಯ ಕೋಮುವಾದಿ ದೋಷಪೂರಿತ ನಡೆ ಮತ್ತೆ ಮರುಕಳಿಸಿದೆಯೇ?

ಅಮಿತ್ ಶಾ ಈ ಹಳೆಯ ಸನ್ನೆಗಳಿಗೆ ಪ್ರತಿಕ್ರಿಯಿಸುವ ಮೂಲಕ ತಮ್ಮ ಭದ್ರಕೋಟೆಗಳೆಂದು ಕರೆಯಲ್ಪಡುವ ಕ್ಷೇತ್ರಗಳಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟವು ಒತ್ತಡಕ್ಕೊಳಗಾಗಿದೆಯೆಂದರೆ, (ಅದರಲ್ಲೂ ರೈತ ಆಂದೋಲನದ ನಂತರ), ತಳಮಟ್ಟದಲ್ಲಿ ನಿರ್ಲಕ್ಷಿಸಲಾಗದಂತಹ ವಿಚಿತ್ರವಾದ ಬೆಳವಣಿಗೆಗಳೇನೋ ನಡೆದಿರಬೇಕು. ಈ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ಯಾವುದೇ ಸಾಮಾನ್ಯ ಚಿತ್ರಣ ನೆರವಾಗುವುದಿಲ್ಲ.

ಧೀರಜ್ ಗುರ್ಜಾರ್

ಮೀರತ್‌ನ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಕಳೆದ ಬಾರಿಯ ಬಿಹಾರ ವಿಧಾನಸಭೆ ಚುನಾವಣೆಯ ಅನುಭವವೊಂದನ್ನು ವಿವರಿಸುತ್ತಾರೆ- “ಆರ್‌ಜೆಡಿ ಪರವಾಗಿ ಒಂದು ಅಲೆ ಇರುವುದನ್ನು ಚುನಾವಣಾ ಪ್ರಚಾರಗಳು ಆರಂಭವಾದ ನಂತರ ಬಹಳ ತಡವಾಗಿ ನಾವು ಗುರುತಿಸಿದ್ದು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಇಲ್ಲಿ ಯುಪಿಯಲ್ಲಿ ಬಿಜೆಪಿ ವಿರೋಧಿ ಅಭಿಪ್ರಾಯ ಇರುವುದನ್ನು ನಾವು ಬಹಳ ಆರಂಭದಲ್ಲೇ ಅಂದರೆ ಮೊದಲ ನಾಮಪತ್ರ ಸಲ್ಲಿಕೆಗೂ ಮೊದಲೇ ಗುರುತಿಸಿದ್ದೆವು. ಬಿಹಾರದ ಚುನಾವಣಾ ಕಣ ಆ ಅಲೆಯನ್ನು ನಿಭಾಯಿಸಿತು, ಆದರೆ ಇಲ್ಲಿ ಅದು ಬಹಳ ಕಷ್ಟದ ಕೆಲಸವಾಗಿ ಕಾಣುತ್ತಿದೆ-ವಿಶೇಷವಾಗಿ ಎಸ್‌ಪಿಯನ್ನು ಒಳಗೊಂಡ ಹಲವು ಪಕ್ಷಗಳ ಬಹಳ ವಿಶಾಲ ಮೈತ್ರಿಯನ್ನು ನಿಭಾಯಿಸುವುದು ಯುವ ನಾಯಕರಿಗೆ ದೊಡ್ಡ ಸವಾಲೇ ಆಗಿದೆ”.

ಯುವ ನಾಯಕರ ನಡುವಿನ ಮೈತ್ರಿ- ಅಂದರೆ ಅಖಿಲೇಶ್ ಯಾದವ್ ಮತ್ತು ಜಯಂತ್ ಚೌಧರಿ ನಡುವಿನ ಮೈತ್ರಿಯು ಕೇವಲ 100 ಸೀಟುಗಳಿಗಷ್ಟೇ ಸೀಮಿತವಾಗಿದ್ದರೂ, ಈ ಪಕ್ಷಗಳೊಂದಿಗೆ ಸಂಬಂಧವಿಟ್ಟುಕೊಂಡಿರುವ ಜನಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು ಈಗಾಗಲೇ ಸಾರ್ವಜನಿಕಗೊಂಡಿವೆ. ಮುಂದೆ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದಾಗ ಅವರ ಸೇವಕನಾಗಿ ಉಳಿಯುವೆ ಎಂದು ಜಯಂತ್‌ರನ್ನು ಜಾಟರು ಈಗಾಗಲೇ ಗೇಲಿ ಮಾಡುತ್ತಿದ್ದಾರೆ.

ಫೆಬ್ರವರಿ 10 ಮತ್ತು 14ರಂದು ಚುನಾವಣೆ ಎದುರಿಸಲಿರುವ ಜಾಟ್ ಬಹುಮತದ ಪ್ರದೇಶಗಳಲ್ಲಿ ಬಿಸಿಯೇರುತ್ತಾ ಹೋದಂತೆ, ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಯುಪಿ ಚುನಾವಣೆಯ ಸ್ಟಾರ್ ಕ್ಯಾಂಪೇನರ್ ಆಗಿದ್ದ ರಾಜವಂಶದ ಉತ್ತರಾಧಿಕಾರಿ ಪದ್ರೋಣಾದ ಆರ್‌ಪಿಎನ್ ಸಿಂಗ್ ಅವರನ್ನೊಳಗೊಂಡಂತೆ ದೊಡ್ಡದೊಡ್ಡ ಮುಖಗಳು ಕಳೆದ ವಾರದಲ್ಲಿ ಪಕ್ಷವನ್ನು ತೊರೆದುಹೋಗಿದ್ದಾರೆ. ಬರೇಲಿ ಕಂಟೋನ್ಮೆಂಟ್‌ನಿಂದ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಸುನಿತಾ ಆರಾನ್ ಪಕ್ಷವನ್ನು ತೊರೆದಿದ್ದಾರೆ. ಅವರು ಪ್ರಿಯಾಂಕಾ ಗಾಂಧಿಯವರಿಂದ ಆಯ್ಕೆಯಾಗಿದ್ದವರು. ಬಹಳ ಗಂಭೀರ ಚಿಂತನ-ಮಂಥನದ ನಂತರ ಪಕ್ಷ ತನ್ನ ಮೂರನೇ ಸುತ್ತಿನ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿ 26ರ ರಾತ್ರಿ ಘೋಷಿಸಿತು. ಸಹರನ್‌ಪುರ ಕ್ಷೇತ್ರದ ಹಲವು ಆಕಾಂಕ್ಷಿಗಳ ಅರ್ಜಿಗಳನ್ನು ಕೊನೆ ಕ್ಷಣದಲ್ಲಿ ತಿರಸ್ಕರಿಸಿದ್ದು ಆಶ್ಚರ್ಯ ಉಂಟುಮಾಡಿತು. ನಿರೀಕ್ಷಿಸಿರದಿದ್ದ ಹಲವು ಮುಖಗಳು ಅಭ್ಯರ್ಥಿಗಳ ಪಟ್ಟಿಯಲ್ಲಿ ಕಂಡುಬಂದು ಹಿರಿಯ ನಾಯಕರಲ್ಲಿ ಅನೇಕರಿಗೆ ಅಸಮಾಧಾನ ಉಂಟುಮಾಡಿವೆ.

ಹಿರಿಯ ನಾಯಕಿ ಹಾಗೂ ಮೂರು ಬಾರಿ ಎಂಎಲ್‌ಎ ಅಭ್ಯರ್ಥಿ ಆಗಿದ್ದ ಉಮಾ ಭೂಷಣ್ ಅವರು ಈ ಬೆಳವಣಿಗೆಗೆ ಪಕ್ಷದ ನಾಯಕತ್ವವನ್ನು, ವಿಶೇಷವಾಗಿ ಉತ್ತಪ ಪ್ರದೇಶ ಚುನಾವಣೆಯ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ನಾಯಕ ಧೀರಜ್ ಗುರ್ಜಾರ್ ಅವರನ್ನು ಟೀಕಿಸುತ್ತಾರೆ. ಅವರು ಹೇಳುವಂತೆ “ಗುರ್ಜಾರ್ ಅವರು ಟಿಕೆಟ್‌ಗಳನ್ನು ಅಂತಿಮಗೊಳಿಸಲು ಸಹರನ್‌ಪುರಕ್ಕೆ ಬಂದರು, ನಾನು ಅವರನ್ನು ಭೇಟಿ ಮಾಡಲು ಹೋದೆ. ಅವರು ಬಹಳ ಅಹಂಕಾರದಿಂದ ವರ್ತಿಸಿದರು. ನೀವು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರುಗಳನ್ನೇ ಯಾಕೆ ಭೇಟಿಯಾಗಬಾರದು, ಹೇಗಿದ್ದರೂ ನೀವು ಅವರ ಕುಟುಂಬಕ್ಕೆ ಬಹಳ ಹತ್ತಿರದವರಲ್ಲವೇ? ಎಂದು ಹೇಳಿದರು” ಎಂದು ಹೇಳಿ ಗುರ್ಜಾರ್ ತನ್ನನ್ನು ಅವಮಾನಿಸಿದರೆಂದು ಉಮಾ ಆರೋಪಿಸುತ್ತಾರೆ. ಅವರು ಈ ಬಗ್ಗೆ ಎಐಸಿಸಿಗೆ ದೂರು ನೀಡಲು ಮರುದಿನ ನೇರವಾಗಿ ದೆಹಲಿಗೆ ತೆರಳಿದರು.

ಮೀರತ್‌ನ ಚಾರ್‌ತಾವಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವರೆಂದು ಅಂದಾಜಿಸಲಾಗಿದ್ದ ನಕುಲ್ ಸಿರೋಹಿ ಅವರಿಗೆ ಕೊನೆ ನಿಮಿಷದಲ್ಲಿ ಟಿಕೆಟ್ ನಿರಾಕರಿಸಿ ಅತ್ಯಂತ ಅಸಾಧ್ಯ ಎನ್ನಲಾಗುತ್ತಿದ್ದ ಮಹಿಳೆಯೊಬ್ಬರನ್ನು ಆ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಮಾಡಲಾಗಿದೆ. ಈಕೆ ಅರ್ಷದ್ ರಾಣಾ ಅವರ ಪತ್ನಿಯರಲ್ಲಿ ಒಬ್ಬರು. ಬಿಎಸ್ಪಿ ಟಿಕೆಟ್ ನೀಡಲು ತನಗೆ 67 ಲಕ್ಷ ಕೇಳಿ ವಂಚಿಸಿತು ಎಂದು ಅತ್ತುಕೊಂಡು ಮಾಧ್ಯಮಗಳ ಮುಂದೆ ದೂರಿದ್ದ ವಿಡಿಯೋ ಒಂದು ಕೆಲವು ದಿನಗಳ ಹಿಂದೆ ತನಗೆ ವೈರಲ್ ಆಗಿತ್ತು – ಹಾಗೆ ಅತ್ತುಕೊಂಡ ವ್ಯಕ್ತಿಯೇ ಅರ್ಷದ್ ರಾಣಾ.

ಕಾಂಗ್ರೆಸ್ ನಾಯಕತ್ವವು ಧೀರಜ್ ಗುರ್ಜಾರ್ ಮೇಲೆ ಬಂದಿದ್ದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಮೊದಲೇ ಕ್ರಮ ಕೈಗೊಂಡಿದ್ದರೆ ಈ ಸಂದರ್ಭವನ್ನು ತಪ್ಪಿಸಬಹುದಿತ್ತು. ಆ ಆರೋಪಗಳಲ್ಲಿ ಕಾಂಗ್ರೆಸ್ ಟಿಕೆಟ್‌ಗೆ 10 ಲಕ್ಷ ಕೇಳಿದ್ದ ಆಡಿಯೋ ಟೇಪ್ ಸಹ ಸೇರಿದೆ. ಪಕ್ಷದೊಳಗಿನ ವಿಷಲ್ ಬ್ಲೋಯರ್ ಒಬ್ಬರು ಈ ಆಡಿಯೋವನ್ನು ಪಕ್ಷದ ಉನ್ನತ ನಾಯಕತ್ವಕ್ಕೆ ಕಳಿಸಿದ್ದರು, ನಂತರ ಅದು ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ಈ ಬಗ್ಗೆ ಎಲ್ಲರಿಗೂ ಅರಿವಿತ್ತು ಮತ್ತು ಯುಪಿ ಕಾಂಗ್ರೆಸ್ ಸಮಿತಿ ಈ ಬಗ್ಗೆ ಏನಾದರೂ ಮಾಡುತ್ತದೆಂದು ನಿರೀಕ್ಷಿಸಲಾಗಿತ್ತು, ಆದರೆ ಎರಡು ದಿನಗಳ ನಂತರ ಗುರ್ಜಾರ್ ಅವರನ್ನು ಸ್ಟಾರ್ ಕ್ಯಾಂಪೇನರ್ ಆಗಿ ಪಟ್ಟಿಗೆ ಸೇರಿಸಲಾಯಿತು. ಯುಪಿಸಿಸಿಯ ಹಿರಿಯ ನಾಯಕರೊಬ್ಬರು “ಕಾಂಗ್ರೆಸ್ ಚುನಾವಣೆ ಗೆಲ್ಲುವ ಪ್ರಯತ್ನದಲ್ಲೇ ಇಲ್ಲ, ಅವರು ಕಾಂಗ್ರೆಸ್ ಟಿಕೆಟ್ ಮಾರಿ ಎಷ್ಟು ಸಾಧ್ಯವೋ ಅಷ್ಟನ್ನುಗಳಿಸಲು ನೋಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ, ಉನ್ನತ ನಾಯಕತ್ವ ಇದಕ್ಕೆ ಕಣ್ಣುಮುಚ್ಚಿಕೊಂಡಿದೆ” ಎಂದು ನಿರಾಶರಾಗಿ ನುಡಿಯುತ್ತಾರೆ.

ಪ್ರಿಯಾಂಕಾ ಗಾಂಧಿ

ಈವರೆಗೆ ಕಾಂಗ್ರೆಸ್ ಒಂದೇ ಒಂದು ಗುರುತು ಮೂಡಿಸುವ ಕೆಲಸ ಮಾಡಿದೆ. ತನ್ನ ವಾಗ್ದಾನದಂತೆ ಶೇ.40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಪ್ರತಿ ಪಟ್ಟಿಯಲ್ಲೂ ಸ್ಥಾನ ನೀಡಿದೆ. ಆದರೆ ಈ ಅಭ್ಯರ್ಥಿಗಳು ಆಯ್ಕೆಯಾದ ರೀತಿ ವೃತ್ತಿಪರವಾದುದಲ್ಲ ಮತ್ತು ರಾಜಕೀಯ ಮುತ್ಸದ್ಧಿತನದಿಂದ ಕೂಡಿದ್ದಲ್ಲ. ಹತ್ತು ಹಲವು ಮಾರ್ಗಗಳು ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದು, ಅದರಲ್ಲಿ ಹಲವು ಸ್ವತಂತ್ರ ಸಂಶೋಧಕರು ತಮ್ಮ ಆಯ್ಕೆಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಿಯಾಂಕಾ ಗಾಂಧಿಗೆ ನೇರವಾಗಿ ತಲುಪಿಸುವಂತಹ ಆಯ್ಕೆಯ ಪದ್ಧತಿ ಈ ಸಮಸ್ಯೆಯ ಮೂಲವಾಗಿದೆ. ಇಲ್ಲಿ ಪ್ರಭಾವಿ ಅಭ್ಯರ್ಥಿಗಳ ಆಯ್ಕೆಗೆ, ಬೇರೆ ಪಕ್ಷಗಳಿಂದ ತನ್ನೆಡೆಗೆ ’ಸೆಳೆದುಕೊಳ್ಳುವುದು’ ಅತ್ಯಂತ ಪರಿಣಾಮಕಾರಿ ಮಂತ್ರ ಎಂದು ಭಾವಿಸಲಾಗಿದೆ. ಎಲ್ಲ ಪಕ್ಷಗಳ ಪಟ್ಟಿ ಅಂತಿಮಗೊಂಡ ತಕ್ಷಣ ಉಳಿದದ್ದೆಲ್ಲ ಕಾಂಗ್ರೆಸ್ ತಟ್ಟೆಗೆ ಸೇರುತ್ತದೆ- ಉಚಿತವಾಗಿಯಾದರೂ ಆಗಬಹುದು, ಶುಲ್ಕ ನೀಡಿಯಾದರೂ ಆಗಬಹುದು.

ಬರಲಿರುವ ದಿನಗಳಲ್ಲಿ ಚುನವಣಾ ಪ್ರಕ್ರಿಯೆ ಪಶ್ಚಿಮದಿಂದ ಪೂರ್ವಕ್ಕೆ ಸಾಗಿದಂತೆ ಉತ್ತರ ಪ್ರದೇಶ ಚುನಾವಣೆಯ ವಿಚಿತ್ರ ಮುನ್ಸೂಚನೆಗಳು ಇನ್ನಷ್ಟು ಸಂಕೀರ್ಣಗೊಳ್ಳಲಿದೆ. 7 ಹಂತಗಳೆಂಬುದು ಸಾಕಷ್ಟು ದೀರ್ಘ ಅವಧಿ. ಈ ಅವಧಿಯಲ್ಲಿ ಹಳೆಯ ನರೆಟಿವ್ ಬದಲಾಗಿ, ಹೊಸದು ಹುಟ್ಟುವುದಕ್ಕೆ ಸಾಧ್ಯವಿದೆ. ಮತಗಳ ಧ್ರುವೀಕರಣಕ್ಕೆ ಬಿಜೆಪಿಯ ಬತ್ತಳಿಕೆಯಲ್ಲಿ ಯಾವ ಅಸ್ತ್ರವಿದೆಯೆಂಬುದು ಇನ್ನೂ ಯಾರಿಗೂ ಗೊತ್ತಿಲ್ಲ. ಆದರೆ ಒಂದಂತೂ ಕಂಡುಬರುತ್ತಿದೆ, ಯಾರು ತಮ್ಮ ಪಕ್ಷಕ್ಕೆ ನಿಷ್ಟರಾಗಿರುತ್ತಾರೋ ಅವರಿಗೆ ಕೊನೆಯಲ್ಲಿ ಪ್ರಾಮುಖ್ಯತೆ ಸಿಗಲಿದೆ, ಮತ್ತು ಪಕ್ಷ ನೆಗೆತಗಾರರು ಮುಖವುಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಬೇಕಾಗಲಿದೆ ಎಂಬುದು.

ಇದಕ್ಕೆ ಉದಾಹರಣೆಯಾಗಿ ಇಮ್ರಾನ್ ಮಸೂದ್ ಅವರನ್ನು ನೋಡಬಹುದು. ಅವರು ಸಹರನ್‌ಪುರದಲ್ಲಿ ಎಸ್‌ಪಿ-ಆರ್‌ಎಲ್‌ಡಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಕಂಡುಬಂದಿದ್ದರು. ಅವರು ಕಾಂಗ್ರೆಸ್ ಬಿಟ್ಟುಹೋದ ಮೊದಲಿಗರಲ್ಲೊಬ್ಬರು. ಈಗ ಅವರದ್ದು ಖಾಲಿ ಕೈಯ್ಯಾಗಿದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿದ್ದಾರೆ. ಕಣಕ್ಕಿಳಿಯಲಿರುವ ಎಸ್‌ಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದ ಜವಾಬ್ದಾರಿಯಲ್ಲಿದ್ದಾರೆ. ಒಂದು ಬಾರಿ ಬೇಕಾದರೆ ಟಿಕೆಟ್‌ನ್ನು ಅಪಾಯಕ್ಕೊಡ್ಡಿಕೊಳ್ಳಬಹುದು, ಆದರೆ ತನ್ನ ರಾಜಕೀಯ ಬೆಂಬಲದ ಗುಂಪನ್ನು ಕಳೆದುಕೊಳ್ಳುವುದು ಭಾರತದ ರಾಜಕಾರಣದಲ್ಲಿ ಸಾಧ್ಯವಿಲ್ಲ. ಆರ್‌ಪಿಎನ್ ಸಿಂಗ್ ಮತ್ತು ಇತರ ಭಾರೀ ರಾಜಕಾರಣಿಗಳ ಜಿಗಿತವನ್ನು ಈ ಬೆಳಕಿನಲ್ಲಿ ಕಾಣಬಹುದು.

ಯಾವಾಗ ರಾಜಕೀಯ ಪ್ರಾತಿನಿಧ್ಯವು ನೇರವಾಗಿ ಸಾಮಾಜಿಕ-ರಾಜಕೀಯ ಪ್ರಭಾವದಿಂದ ಹೊರಹೊಮ್ಮುತ್ತದೋ ಅಂಥಲ್ಲಿ ಅಮಿತ್ ಶಾ ರಂಗಕ್ಕೆ ಬರುತ್ತಾರೆ.

ಅನು: ಮಲ್ಲಿಗೆ ಸಿರಿಮನೆ

ಅಭಿಷೇಕ್ ಶ್ರೀವಾಸ್ತವ

ಅಭಿಷೇಕ್ ಶ್ರೀವಾಸ್ತವ
ಹಿರಿಯ ಪತ್ರಕರ್ತ, junputh.comನ ಕಾರ್ಯನಿರ್ವಾಹಕ ಸಂಪಾದಕ, ಉತ್ತರ ಪ್ರದೇಶ


ಇದನ್ನೂ ಓದಿ: ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ವಿಚಿತ್ರ ಮುನ್ಸೂಚನೆ: ಭಾಗ 1

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read