Homeಮುಖಪುಟರಾಜಸ್ಥಾನದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿ; ಬೀದಿಗಿಳಿದ ವೈದ್ಯರು

ರಾಜಸ್ಥಾನದಲ್ಲಿ ಆರೋಗ್ಯ ಹಕ್ಕು ಕಾಯ್ದೆ ಜಾರಿ; ಬೀದಿಗಿಳಿದ ವೈದ್ಯರು

ಆರೋಗ್ಯ ರಕ್ಷಣೆಯ ಸೇವೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಿದ ಭಾರತದ ಮೊದಲ ರಾಜ್ಯವಾಗಿ ರಾಜಸ್ಥಾನ ಹೊಮ್ಮಿದೆ

- Advertisement -
- Advertisement -

ರಾಜಸ್ಥಾನ ಸರ್ಕಾರ ಜಾರಿಗೆ ತಂದಿರುವ ಆರೋಗ್ಯ ಹಕ್ಕು ಕಾಯ್ದೆ ವಿರುದ್ಧ ರಾಜ್ಯದಲ್ಲಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಸಂಘ ಮಂಗಳವಾರ ಬೆಂಬಲ ನೀಡಿದೆ.

ಕಳೆದ ವಾರ ರಾಜ್ಯ ವಿಧಾನಸಭೆಯಲ್ಲಿ ಕಾಯಿದೆಯನ್ನು ಅಂಗೀಕರಿಸಲಾಯಿತು. “ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು ಅಗತ್ಯವಿದ್ದಾಗ ಯಾವುದೇ ಪೂರ್ವಪಾವತಿ ಇಲ್ಲದೆ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಬೇಕು” ಎಂದು ಈ ಕಾಯ್ದೆ ಹೇಳಿದೆ. “ಈ ಷರತ್ತು ಕಾನೂನಿನ ಅತ್ಯಂತ ವಿವಾದಾತ್ಮಕ ಅಂಶಗಳಲ್ಲಿ ಒಂದಾಗಿದೆ” ಎಂದು ರಾಜ್ಯದ ವೈದ್ಯಕೀಯ ಸಮೂಹ ಬೀದಿಗಿಳಿದಿದೆ.

ಸರ್ಕಾರ ಆಸ್ಪತ್ರೆಗಳಿಗೆ ಮರುಪಾವತಿ ಮಾಡುತ್ತದೆ ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆಯಾದರೂ, ಮರುಪಾವತಿ ಹೇಗೆ ಅಥವಾ ಯಾವಾಗ ನಡೆಯುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜಸ್ಥಾನದಲ್ಲಿ ಜಾರಿಯಾಗಿರುವ ಕಾನೂನಿನ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಮಾರ್ಚ್ 27ರಂದು ಭಾರತೀಯ ವೈದ್ಯಕೀಯ ಸಂಘವು ಕರೆ ನೀಡಿದ ನಂತರ ಸುಮಾರು 20,000 ವೈದ್ಯರು ಜೈಪುರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಶರದ್ ಕುಮಾರ್ ಅಗರ್ವಾಲ್, ಗೌರವ ಕಾರ್ಯದರ್ಶಿ ಅನಿಲ್‌ಕುಮಾರ್ ನಾಯಕ್ ಪ್ರತಿಕ್ರಿಯಿಸಿ, “ರಾಜಸ್ಥಾನ ಸರ್ಕಾರವು ಪ್ರತಿಭಟನಾನಿರತ ವೈದ್ಯರೊಂದಿಗೆ ಚರ್ಚೆಯನ್ನು ಪ್ರಾರಂಭಿಸಬೇಕು, ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

“ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ, ಸಾರ್ವಜನಿಕರಿಗೆ ಉತ್ತಮವಾದ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಸಾಕಷ್ಟು ಮೂಲಸೌಕರ್ಯವನ್ನು ಪೂರೈಸುವ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಬಾರದು” ಎಂದಿದ್ದಾರೆ.

ರಾಜಸ್ಥಾನ ಸರ್ಕಾರವು ಕಾಯಿದೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಆಕ್ರಮಣಕಾರಿ ಹೋರಾಟಕ್ಕೆ ಕಾರಣವಾಗಬಹುದು. ದೇಶಾದ್ಯಂತ ತನ್ನ ಆಂದೋಲನವನ್ನು ಮುಂದುವರಿಸಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಘ ಎಚ್ಚರಿಸಿದೆ.

“ರೋಗಿಗಳು ಎದುರಿಸುವ ಯಾವುದೇ ತೊಂದರೆಗೆ ರಾಜಸ್ಥಾನ ಸರ್ಕಾರವು ಜವಾಬ್ದಾರವಾಗಿರುತ್ತದೆ” ಎಂದು ಬೆದರಿಕೆ ಹಾಕಿದೆ.

ರಾಜಸ್ಥಾನದ ಸರ್ಕಾರಿ ವೈದ್ಯರು ಮತ್ತು ವೈದ್ಯಕೀಯ ಕಾಲೇಜುಗಳ ಅಧ್ಯಾಪಕರು ಖಾಸಗಿ ವೈದ್ಯರೊಂದಿಗೆ ಸೇರಿ ಒಂದು ದಿನದ ಮುಷ್ಕರವನ್ನು ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

“ಪೂರ್ವಾನುಮತಿ ಇಲ್ಲದೆ ರಜೆ ಮೇಲೆ ತೆರಳುವ ವೈದ್ಯರು ಹಾಗೂ ಸರ್ಕಾರಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದರೂ ಧರಣಿ ಮುಂದುವರಿದಿದೆ.

ಹೊರರೋಗಿ ವಿಭಾಗಗಳು, ಒಳರೋಗಿಗಳ ವಿಭಾಗಗಳು, ತೀವ್ರ ನಿಗಾ ಘಟಕಗಳು, ತುರ್ತು ಮತ್ತು ಹೆರಿಗೆ ವಿಭಾಗಗಳಲ್ಲಿ ಯಾವುದೇ ಸೇವೆಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯಕೀಯ ಕಾಲೇಜು ಪ್ರಾಂಶುಪಾಲರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿತ್ತು.

ಕಾಯ್ದೆ ಏನು ಹೇಳುತ್ತದೆ?

“ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಅಥವಾ ವೈದ್ಯರು ತುರ್ತು ಚಿಕಿತ್ಸೆ ಪಡೆಯಬೇಕಾಗಿರುವ ವ್ಯಕ್ತಿಗೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ” ಎಂದು ಕಾಯ್ದೆ ಹೇಳುತ್ತದೆ. ಈ ಕಾಯ್ದೆಯ ಮೂಲಕ ಆರೋಗ್ಯ ರಕ್ಷಣೆಯ ಸೇವೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಿದ ಭಾರತದ ಮೊದಲ ರಾಜ್ಯವಾಗಿ ರಾಜಸ್ಥಾನ ಹೊಮ್ಮಿದೆ.

ಇದನ್ನೂ ಓದಿರಿ: ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವವರಿಗೆ ತಜ್ಞ ವೈದ್ಯರು ಹೇಳುವುದೇನು?

ಅಪಘಾತಗಳು, ಪ್ರಾಣಿ ಅಥವಾ ಹಾವು ಕಡಿತ, ಗರ್ಭಾವಸ್ಥೆಯಲ್ಲಿನ ತೊಡಕುಗಳು ಅಥವಾ ರಾಜ್ಯ ಆರೋಗ್ಯ ಪ್ರಾಧಿಕಾರದಿಂದ ವ್ಯಾಖ್ಯಾನಿಸಲಾದ ತುರ್ತುಸ್ಥಿತಿಯ ಸಂದರ್ಭಗಳನ್ನು ತುರ್ತು ಚಿಕಿತ್ಸೆಯ ಭಾಗವಾಗಿ ಗುರುತಿಸಲಾಗಿದೆ.

ಕಾಯ್ದೆಯ ವಿರೋಧಿಗಳ ವಾದವೇನು?

“ಇದು ಆರೋಗ್ಯ ಕಾರ್ಯಕರ್ತರ ಮೇಲೆ, ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ” ಎಂದು ಕಾಯ್ದೆಯ ವಿರೋಧಿಗಳು ವಾದಿಸುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಸೊಸೈಟಿಯ ಕಾರ್ಯದರ್ಶಿ ವಿಜಯ್ ಕಪೂರ್ ಅವರು ‘ದಿ ಸ್ಕ್ರಾಲ್‌’ಗೆ ಪ್ರತಿಕ್ರಿಯಿಸಿ, “ಸರ್ಕಾರ ತನ್ನ ಜವಾಬ್ದಾರಿಯನ್ನು ಖಾಸಗಿ ವೈದ್ಯರಿಗೆ ವರ್ಗಾಯಿಸುತ್ತಿದೆ. ಬಂದೂಕಿನ ನಳಿಕೆಯನ್ನಿಟ್ಟು ಈ ಕೆಲಸವನ್ನು ಮಾಡಲಾಗುತ್ತಿದೆ” ಎಂದು ಟೀಕಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...