Homeಮುಖಪುಟಸಾಮಾನ್ಯ ಊಹೆಗಳನ್ನು ತಲೆಕೆಳಗು ಮಾಡಿದ ಉತ್ತರ ಪ್ರದೇಶ ಚುನಾವಣಾ ಫಲಿತಾಂಶ

ಸಾಮಾನ್ಯ ಊಹೆಗಳನ್ನು ತಲೆಕೆಳಗು ಮಾಡಿದ ಉತ್ತರ ಪ್ರದೇಶ ಚುನಾವಣಾ ಫಲಿತಾಂಶ

- Advertisement -
- Advertisement -

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಫಲಿತಾಂಶ ಈಗ ಒಂದು ವಾರದ ನಂತರ ಸಾರ್ವಜನಿಕವಾಗಿ ಬಹುಚರ್ಚಿತ ವಿಷಯವಾಗಿದೆ. ಬಿಜೆಪಿಗೇ (ಬಿಜೆಪಿ ಮೈತ್ರಿಕೂಟ 273 ಸ್ಥಾನಗಳಲ್ಲಿ ಗೆದ್ದಿದೆ) ಸ್ಪಷ್ಟ ಬಹುಮತ ಸಿಗಲಿದೆ ಎಂದು ಊಹಿಸಿದ್ದ ಮುಖ್ಯವಾಹಿನಿಯ ಮಾಧ್ಯಮಗಳ ಚಾನೆಲ್‌ಗಳನ್ನು ಬಿಟ್ಟರೆ, ದೆಹಲಿಯ ಮತ್ತು ಲಖನೌನ ಸಾಮಾಜಿಕ, ರಾಜಕೀಯ ವಲಯಗಳು, ಸಮಾಜವಾದಿ ಪಕ್ಷ (ಎಸ್‌ಪಿ ಮೈತ್ರಿಕೂಟ 125 ಕ್ಷೇತ್ರಗಳಲ್ಲಿ ಗೆದ್ದಿದೆ) ಹೇಗೆ ಸೋತಿತು ಮತ್ತು ರಾಜಕೀಯವಾಗಿ ಭಾರತದ ಅತಿ ದೊಡ್ಡ ಮತ್ತು ಮಹತ್ವದ ರಾಜ್ಯದಲ್ಲಿ, ಒಂದು ಕಾಲದಲ್ಲಿ ದಮನಿತರು ಪ್ರತಿನಿಧಿಸುವ ರಾಜಕೀಯ ಚಿತ್ರಣದ ಮೇಲೆ ಹಿಡಿತ ಹೊಂದಿದ್ದ ಬಹುಜನ ಸಮಾಜ ಪಕ್ಷವು ಒಂದು ಸೀಟಿಗೆ ಇಳಿದದ್ದು ಹೇಗೆ, ಹೀಗೆ ಇನ್ನೂ ಇವೇ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯಾದ್ಯಂತ ಬಿಜೆಪಿ ವಿರೋಧಿ ಅಲೆ ಇದೆಯೆಂದು ವರದಿ ಮಾಡಿದ್ದ ಸ್ವತಂತ್ರ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಈಗ ಮೌನಕ್ಕೆ ಜಾರಿವೆ. ವಿಶ್‌ಫುಲ್ ಚಿಂತಕರು, ಅಧ್ಯಯನಕಾರು ಮತ್ತು ಹಲವಾರು ಪತ್ರಕರ್ತರು ವಿರೋಧಪಕ್ಷದ ಮೈತ್ರಿಕೂಟದ ವಿರುದ್ಧ ಮತ ಚಲಾಯಿಸಿದ್ದಕ್ಕೆ ಮತದಾರರನ್ನು ದೂಷಿಸುತ್ತಿದ್ದಾರೆ.

ಒಂದೆರಡು ಚುನಾವಣೋತ್ತರ ಅಧ್ಯಯನಗಳು (ಸಿಎಸ್‌ಡಿಎಸ್-ಲೋಕನೀತಿ ಮತ್ತು ಅರವಿಂದ ಕುಮಾರ್) ಬಿಜೆಪಿಗೆ ಜನರು ಹೇಗೆ ಮತ ಚಲಾಯಿಸಿದರು ಎಂದು ವಿವರಿಸಿವೆ. ಆದರೆ ಅವ್ಯಾವುವೂ ಜಾತಿ ವಿಭಜನೆಯ ಒಗಟನ್ನು ಬಿಡಿಸಲು ಆಗಿಲ್ಲ. ಸಾಂಪ್ರದಾಯಿಕವಾಗಿ, ಸಾಮಾಜಿಕ ಮತ್ತು ಕುಲಶಾಸ್ತ್ರೀಯ ಅಧ್ಯಯನಗಳು ವರ್ಗಕ್ಕಿಂತ ಜಾತಿಗೆ ಹೆಚ್ಚಿನ ಒತ್ತು ನೀಡುತ್ತವೆ. ಸಿಎಸ್‌ಡಿಎಸ್-ಲೋಕನೀತಿಯ ಪ್ರಕಾರ, ಬಿಜೆಪಿಯು ಹಿಂದೂ ಮತಗಳನ್ನಷ್ಟೇ ಹೆಚ್ಚಿಸಿಕೊಂಡಿಲ್ಲ, ಈ ಚುನಾವಣೆಯಲ್ಲಿ 8% ಮುಸ್ಲಿಂ ಮತಗಳನ್ನೂ ಗಳಿಸಿದೆ. ಹಿಂದೂ ಮತಗಳಲ್ಲಿ ಅದು ಮೇಲ್ಜಾತಿಯ ಬೆಂಬಲವನ್ನು ಉಳಿಸಿಕೊಂಡಿದ್ದಷ್ಟೇ ಅಲ್ಲದೇ, ಒಬಿಸಿ ಮತ್ತು ಎಸ್‌ಸಿ ಮತಗಳನ್ನೂ ಪಡೆಯುವಲ್ಲಿ ಯಶಸ್ವಿಯಾಗಿದೆ.

ಆದರೆ, ಪ್ರಜ್ಞಾವಂತ ನಾಗರಿಕರಿಗೆ ’ಜನರು ಹೇಗೆ ಮತ ಚಲಾಯಿಸಿದರು’ ಎಂಬ ಪ್ರಶ್ನೆಯೇನೂ ಕಾಡುತ್ತಿಲ್ಲ. ಇನ್ನೂ ಉತ್ತರ ಸಿಗದೇ ಇರುವ ಪ್ರಶ್ನೆ, ’ಬಿಜೆಪಿಗೆ ಜನರು ತಮ್ಮ ಮತ ಏಕೆ ನೀಡಿದರು?’ ಎಂಬುದು. ಈ ಚರ್ಚೆಗೆ ಈ ಪ್ರಶ್ನೆಯೇ ಮೂಲವಾಗಿದೆ.

ಮೂಲಭೂತ ಪ್ರಶ್ನೆ

ಒಂದು ಸ್ಪಷ್ಟ ಚಿತ್ರಣಕ್ಕಾಗಿ, ನಾವು 2020ರಲ್ಲಿ ಸತತವಾಗಿ ಎರಡು ಸಲ ವಿಧಿಸಿದ ಲಾಕ್‌ಡೌನ್‌ಗಳು ಮತ್ತು ಅವುಗಳಿಂದ ಆದ ಅತಿ ದೊಡ್ಡ ಮಟ್ಟದ ಕಾರ್ಮಿಕರ ಹಿಮ್ಮುಖ ವಲಸೆಯ ಭೀಕರತೆಯನ್ನು ಹಾಗೂ 2021ರಲ್ಲಿ ಆದ ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಸಾವುಗಳ ಸಂಖ್ಯೆಯನ್ನು ನೆನಪಿಸಿಕೊಳ್ಳಬೇಕು. ಮೊದಲ ಲಾಕ್‌ಡೌನ್‌ನಲ್ಲಿ, ಲಾಕ್‌ಡೌನ್ ಹೇರಿದ ಮೊದಲ ತಿಂಗಳಲ್ಲಿಯೇ 19,448 ಎಫ್‌ಐಆರ್‌ಗಳು ದಾಖಲಾದವು. ಐಪಿಸಿಯ ಸೆಕ್ಷನ್ 188 ಮತ್ತು ಸಾಂಕ್ರಾಮಿಕ ರೋಗಗಳ ಕಾಯಿದೆಯ ಅಡಿಯಲ್ಲಿ 60,258 ಜನರ ವಿರುದ್ಧ ಪ್ರಕರಣ ದಾಖಲಿಸಲಾಯಿತು. (ಬಾರ್ & ಬೆಂಚ್ ಎಪ್ರಿಲ್ 17, 2020). ಎರಡನೆಯ ಲಾಕ್‌ಡೌನ್‌ನಲ್ಲಿ ಸರಕಾರಿ
ಅಂಕಿಅಂಶಗಳ ಪ್ರಕಾರ ಸುಮಾರು 23,000 ಸಾವುಗಳು ಆದವು. ಆದರೆ ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಪಡೆದ ಮಾಹಿತಿ, ಅದರ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ ಕಾಣುವುದೇನೆಂದರೆ, 31 ಮಾರ್ಚ್ 2021 ತನಕದ ಒಂಬತ್ತು ತಿಂಗಳಲ್ಲಿ ಕೋವಿಡ್ ಸಾವುಗಳ ಸಂಖ್ಯೆ ಸರಕಾರಿ ಅಂಕಿಅಂಶಗಳಿಗಿಂತ 10ರಿಂದ 335 ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಿದ್ದವು ಎಂದು.

ಸತತ ಎರಡು ವರ್ಷಗಳ ಸಾಂಕ್ರಾಮಿಕದಿಂದ ಮತ್ತು ಅದರ ಕಾರಣದಿಂದ ವಿಧಿಸಲಾದ ಲಾಕ್‌ಡೌನ್‌ಗಳಿಂದ ಆಗಿದ್ದೇನೆಂದರೆ, 7ನೇ ಫೆಬ್ರುವರಿ 2020ರ ಮಾಹಿತಿಯಂತೆ, 33.93 ಲಕ್ಷ ನಿರುದ್ಯೋಗಿ ವ್ಯಕ್ತಿಗಳು ತಮಗೆ ಕೆಲಸ ಬೇಕೆಂದು ನೋಂದಣಿ ಮಾಡಿಕೊಂಡಿದ್ದರು. ಅದಕ್ಕಿಂತ ಮುನ್ನ 30 ಜೂನ್ 2018 ರವರೆಗೆ 21.39 ಲಕ್ಷ ಶಿಕ್ಷಿತ ನಿರುದ್ಯೋಗಿ ವ್ಯಕ್ತಿಗಳು ನೋಂದಾಯಿಸಿಕೊಂಡಿದ್ದರು. ಇದು ಆ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ 58.43% ಹೆಚ್ಚಳವಾಯಿತು ಎಂದು ತೋರಿಸುತ್ತದೆ.

ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಸಂಕಷ್ಟಗಳು ಮತ್ತು ಅದರ ಕೆಟ್ಟ ನಿರ್ವಹಣೆ ಒಂದು ಕಡೆಯಾದರೆ, ಯೋಗಿ ಆದಿತ್ಯನಾಥ ಆಡಳಿತದ ಅಡಿಯಲ್ಲಿ ಸರಕಾರವು ನಿರ್ದಿಷ್ಟವಾಗಿ ಗುರಿ ಮಾಡಿ ನಡೆಸಿದ ಎನ್‌ಕೌಂಟರ್ ಹತ್ಯೆಗಳು, ಎನ್‌ಎಚ್‌ಆರ್‌ಸಿ ಮತ್ತು ಸರ್ವೋಚ್ಚ ನ್ಯಾಯಾಲಯ ಅವುಗಳನ್ನು ಗಣನೆಗೆ ತೆಗೆದುಕೊಂಡಿದ್ದು ಮತ್ತೊಂದು ಕಥೆ. ಹಾಗೂ ನಿರ್ದಿಷ್ಟವಾಗಿ ಗುರಿ ಮಾಡಿ, ಮಾಫಿಯಾದ ಆಸ್ತಿಯನ್ನು ಉದ್ದೇಶಿತ ರೀತಿಯಲ್ಲಿ ಬುಲ್‌ಡೋಜ್ ಮಾಡಿದ್ದು, ಕಾನೂನು ಹದಗೆಟ್ಟಿದ್ದಕ್ಕೆ ಇನ್ನೊಂದು ಆಯಾಮವಾಗಿತ್ತು. ಈ ಕಾನೂನುಬಾಹಿರ ಸ್ಥಿತಿಯು ರಾಜ್ಯದಾದ್ಯಂತ ಸಿಎಎ ವಿರೋಧಿ ಪ್ರತಿಭಟನಕಾರರಿಂದ ಪರಿಹಾರ ವಸೂಲಿ ಮಾಡುವ ಆಸ್ತಿಪಾಸ್ತಿಗಲನ್ನು ಜಪ್ತಿ ಮಾಡುವವರೆಗೆ ಮುಂದುವರೆಯಿತು; ಈ ಐದು ವರ್ಷದ ಅವಧಿಯಲ್ಲಿ 12 ಪತ್ರಕರ್ತರ ಕೊಲೆಯಾಗಿದೆ ಹಾಗೂ ಪತ್ರಕರ್ತರ ಮೇಲೆ ಸುಮಾರು 150 ಸಲ ದೈಹಿಕ ಹಲ್ಲೆಯಾದ ಪ್ರಕರಣಗಳು ಕಂಡುಬಂದಿವೆ. ಯುಎಪಿಎ ಮತ್ತು ಎನ್‌ಎಸ್‌ಎಗಳಂತಹ ಕರಾಳ ಕಾಯಿದೆಗಳ ಅಡಿಯಲ್ಲಿ ಆದ ಅಕ್ರಮ ಬಂಧನ ಮತ್ತು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದು ಬೇರೆ. ಯೋಗಿ ಆಡಳಿತದಲ್ಲಿ ನಾಗರಿಕ ಸ್ವಾತಂತ್ರದ ಪರಿಸ್ಥಿತಿ ಹೇಗಿತ್ತು ಎಂದರೆ, ಯಾರೇ ಸತ್ಯವನ್ನು ನುಡಿಯುವ ಧೈರ್ಯ ತೋರಿದರೂ, ಅವರನ್ನು ಗುರಿಯಾಗಿಸಿ ಅವರ ಜೀವನವನ್ನು ನರಕವಾಗಿಸುವಂತಿತ್ತು.

ಕೋವಿಡ್ ನಿಜಪರೀಕ್ಷೆಯಲ್ಲಿ ಖಾಸಗಿ ಆಸ್ಪತ್ರೆಗಳು ಖಳನಾಯಕರಾಗುವರೇ?ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಇಡೀ ಸಂವಿಧಾನಿಕ ಮೌಲ್ಯಗಳ ಚೌಕಟ್ಟೇ ಉತ್ತರಪ್ರದೇಶದ ಈ ಐದು ವರ್ಷದ ಅವಧಿಯಲ್ಲಿ ತಲೆಕೆಳಗಾಗಿ ನಿಂತಿದೆ ಎನ್ನಬಹುದು. ಇದು ಗುತ್ತಿಗೆ ಕಾರ್ಮಿಕರ, ಸರಕಾರಿ ಉದ್ಯೋಗಿಗಳ, ಶಿಕ್ಷಕರ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಹೋಂಗಾರ್ಡ್‌ಗಳು ಸೇರಿದಂತೆ ಹಲವಾರು ವಲಯಗಳಿಂದ ಪ್ರತಿಭಟನೆಗಳು ಮತ್ತು ಅಂದೋಲನಗಳಿಗೆ ಕಾರಣವಾಯಿತು. ಅಂದರೆ ಪರಿಸ್ಥಿತಿ ಬದಲಾವಣೆಗೆ ಅತ್ಯಂತ ಸೂಕ್ತವಾಗಿತ್ತು. ಬಿಜೆಪಿ ವಿರೋಧಿ ಅಲೆ ಇದೆ ಎಂದು ಹೇಳಿದ್ದ ವಿಶ್‌ಫುಲ್ ಚಿಂತಕರ ಮಾತು ಸಂಪೂರ್ಣವಾಗಿ ಸುಳ್ಳಾಗಿರಲಿಲ್ಲ. ಚುನಾವಣೆಗಳ ಬೈಪೋಲಾರ್ ಸ್ವರೂಪವನ್ನು ಮುಂಚೆಯೇ ನಮ್ಮ ಸುದ್ದಿತಾಣಗಳಲ್ಲಿಯೂ ಹೇಳಲಾಗಿತ್ತು ಹಾಗೂ ಅದೇನು ಮಿಥ್ ಆಗಿರಲಿಲ್ಲ. ಆದರೆ, ಅಂತಿಮ ಫಲಿತಾಂಶವು ಖಂಡಿತವಾಗಿ ಅನಿರೀಕ್ಷಿತ ಮತ್ತು ನಮ್ಮ ಆಲೋಚನೆಗೆ ವಿರುದ್ಧವಾಗಿತ್ತು.

ಈ ಮಾರ್ಚ್ 10ರಂದು ಬಂದ ಫಲಿತಾಂಶದ ಅಂತಿಮ ಅಂಕಿಅಂಶಗಳು ರಾಜ್ಯಾದ್ಯಂತ ಊಹಾಪೋಹ ಮತ್ತು ಕುತೂಹಲಕ್ಕೆ ಎಡೆಮಾಡಿವೆ. ಈ ಹಂತದಲ್ಲಿ ಒಂದು ಸೂಕ್ತ ಪ್ರಶ್ನೆಯನ್ನು ಕೇಳಬೇಕಿದೆ. ಏಕೆ ಹಿಂದುಳಿದ, ಬಡ ಮತದಾರರು ತಮ್ಮ ಮತಗಳನ್ನು ಶ್ರೀಮಂತರ ಹಿತಾಸಕ್ತಿ ಕಾಪಾಡುವ ನೀತಿಗಳನ್ನು ಪ್ರತಿನಿಧಿಸುವ ಪಕ್ಷಕ್ಕೆ ನೀಡಿದರು? ಈ ಪ್ರಶ್ನೆಯು ನಮ್ಮನ್ನು ಕಳೆದ ಎರಡು ದಶಕಗಳ ಉದಾರವಾದಿ ಮತ್ತು ಖಾಸಗಿಕರಣದಿಂದ ಆದ ಬದಲಾವಣೆಗಳು ಹಾಗೂ ಅದರೊಂದಿಗೆ ಬದಲಾಗುತ್ತಿರುವ ವರ್ಗದ ಮಾದರಿಗಳು ಮತ್ತು ಜಾತಿಯ ಶ್ರೇಣೀಕರಣದಲ್ಲಿ ಬದಲಾಗುತ್ತಿರುವ ಮಾದರಿಗಳ ಕಡೆಗೆ ಕೊಂಡೊಯ್ಯುತ್ತದೆ. ಈ ಸಮಯದಲ್ಲಿ ಸರಕಾರಗಳು ಎಲೀಟ್ (ಜಾತಿ ಮತ್ತು ವರ್ಗದ ಎಲೀಟ್‌ಗಳು) ಅಧಿಕಾರದ ಕಾವಲುಗಾರರಾಗಿದ್ದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತದೆ.

’ಫಲಾನುಭವಿ’ಗಳ ಅಂಶ

ಯುಪಿ ಚುನಾವಣೆಗಳ ಸಂದರ್ಭದಲ್ಲಿ ಈ ಬೆನೆಫಿಷಿಯರಿ ಅಥವಾ ಫಲಾನುಭವಿಗಳ ವಿಷಯದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇದರಲ್ಲಿ ಹೊಸದೇನೂ ಇಲ್ಲ, ಇದನ್ನು ಅರ್ಥ ಮಾಡಿಕೊಳ್ಳುವುದು ಸುಲಭ ಎನಿಸಿದರೂ, ಬಿಜೆಪಿಯ ಗೆಲುವನ್ನು ಅರ್ಥಮಾಡಿಕೊಳ್ಳಲು ಇದನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುವುದರಲ್ಲಿ ಅನೇಕ ಸಂಕೀರ್ಣತೆಗಳು ಅಡಗಿವೆ. ಕಲ್ಯಾಣ ಸರಕಾರದ ಪರಿಕಲ್ಪನೆಯನ್ನು 90 ದಶಕದಲ್ಲಿ ಕಿತ್ತೆಸೆಯಲಾಗಿದ್ದರಿಂದ, ಎಲ್ಲಾ ರಾಜಕೀಯ ಪಕ್ಷಗಳು ವಿತರಣೆಯ ರಾಜಕೀಯವನ್ನು ಬಳಸಿಕೊಂಡು ಮತದಾರರನ್ನು ನಿರಂತರವಾಗಿ ಸೆಳೆಯಲು ಎರಡು ಮಾರ್ಗಗಳನ್ನು ಬಳಸಿಕೊಳ್ಳುತ್ತಿವೆ: ಅ) ಸ್ಥಳೀಯ ಸಾರ್ವಜನಿಕ ದಾಸ್ತಾನುಗಳನ್ನು ಖಾಸಗಿಯಾಗಿ ಲಭ್ಯ ಮಾಡುವುದು; ಬ) ಕಾರ್ಯಕ್ರಮ ಆಧಾರಿತ ರೀತಿಯಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಮ್ಯಾನಿಪುಲೇಷನ್.

ಯೇಲ್ ವಿಶ್ವವಿದ್ಯಾಲಯದ ತಾರಿಕ್ ಥ್ಯಾಚಿಲ್ ಅವರು ಹೇಳುವುದೇನೆಂದರೆ, ನೇರವಾಗಿ ಮತಗಳನ್ನು ಖರೀದಿಸುವ ಕೆಲವು ಸ್ವರೂಪಗಳನ್ನು ಹೊರತುಪಡಿಸಿ, ಖಾಸಗಿಯವರಿಂದ ದುಡ್ಡು ಖರ್ಚು ಮಾಡಿಸಿ ಮಾಡಿದ ಚುನಾವಣಾ ತಂತ್ರಗಾರಿಕೆಯಲ್ಲಿ, ಅನ್ಯ ಸ್ವರೂಪಗಳ ಬಗ್ಗೆ ಹೆಚ್ಚಿನ ಗಮನ ನೀಡಲಾಗಿಲ್ಲ. ವಿತರಣಾ
ರಾಜಕೀಯದ ಹೆಚ್ಚಿನ ಅಧ್ಯಯನಗಳು ಹೇಗೆ ರಾಜಕೀಯ ಪಕ್ಷಗಳು ಸಾರ್ವಜನಿಕ ಸಂಪನ್ಮೂಲಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತವೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸಿವೆ. ಆದರೂ, ವಿರೋಧಪಕ್ಷದಲ್ಲಿರುವ ಹೆಚ್ಚಿನವರಿಗೆ, ಎಲೀಟ್ ಪಕ್ಷಗಳನ್ನು ಒಳಗೊಂಡಂತೆ ಯಾರಿಗೂ ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸುವ ತಂತ್ರಗಾರಿಕೆಗಳು ಪ್ರಾರಂಭದಲ್ಲಿ ಕಾರ್ಯಸಾಧುವಾದ ಆಯ್ಕೆಗಳಾಗಿಲ್ಲ.

ಬಹಳ ಆಳವಾದ ವಿಶ್ಲೇಷಣೆಯಿರುವ ಅವರ ಪುಸ್ತಕ ’ಎಲೀಟ್ ಪಾರ್ಟೀಸ್, ಪೂಅರ್
ವೋಟರ್ಸ್: ಹೌ ಸೋಷಲ್ ಸರ್ವೀಸಸ್ ವಿನ್ ವೋಟ್ಸ್ ಇನ್ ಇಂಡಿಯಾ’ದಲ್ಲಿ ತಾರಿಕ್ ಹೇಳುವುದು, “ಬಿಜೆಪಿಯ ಅನುಭವ ತೋರಿಸುವುದೇನೆಂದರೆ, ಸೇವೆಗಳನ್ನು ಸ್ಥಳೀಯವಾಗಿ ಸಾರ್ವಜನಿಕಗೊಳಿಸುವುದರಿಂದ, ಆಯಾ ಸೇವೆಗಳನ್ನು ನೀಡುವ ವ್ಯಕ್ತಿಗಳಿಗೆ ಅಲ್ಲಿ ತುಲನಾತ್ಮಕವಾಗಿ ದೊಡ್ಡ ಸಂಖ್ಯೆಯಲ್ಲಿರುವ ಬಡ ಮತದಾರರೊಂದಿಗೆ ಸಂಬಂಧ ಏರ್ಪಡಿಸುತ್ತದೆ. ಅದೇ ಸಮಯದಲ್ಲಿ, ಕೇವಲ ಅತ್ಯಂತ ಮೂಲಭೂತವಾದ (ರುಡಿಮೆಂಟರಿ) ಸೇವೆಗಳನ್ನು ಮಾತ್ರ ನೀಡುವುದರಿಂದ ಕಲ್ಯಾಣ ಕಾರ್ಯಕ್ರಮಗಳ ಆರ್ಥಿಕ ವೆಚ್ಚವನ್ನು ಕಡಿಮೆ ಇರಿಸಬಹುದಾಗಿದೆ. ಉಚಿತ ಪಡಿತರ, ಹಣ, ಗ್ಯಾಸ್ ಸಿಲಿಂಡರ್ ಮುಂತಾದ ಸೇವೆಗಳನ್ನು ಬಿಜೆಪಿಯ ಪ್ರಚಾರದಲ್ಲಿ ಗಟ್ಟಿಯಾಗಿ ಪ್ರಚಾರ ಮಾಡಲಾಗಿದೆ. ಇದು ಎರಡು ಅಂಶಗಳ ಜಂಟಿ ಉತ್ಪನ್ನವಾಗಿದೆ”.

ಮುಂದೆ ತಾರಿಕ್ ಹೀಗೆ ಬರೆಯುತ್ತಾರೆ:

“…ಬಡ ಮತದಾರರ ನೇಮಕಾತಿಯ ಅಪಾಯ ಒಡ್ಡದ ತಂತ್ರಗಾರಿಕೆಗೆ (ಒಂದು ಎಲೀಟ್ ಪಕ್ಷವಾಗಿ) ಇರುವ ಬೇಡಿಕೆ ಹಾಗೂ ಗಟ್ಟಿಯಾದ ಸಂಘಟನಾ ಸಂಪನ್ಮೂಲಗಳ ಪೂರೈಕೆ (ಸಾಮಾಜಿಕ ಆಂದೋಲನದಿಂದ ಹುಟ್ಟಿದ ಒಂದು ಪಕ್ಷವಾಗಿ). ನನ್ನ ಥಿಯಾರಟಿಕಲ್ ವಾದವು, ಎಲೀಟ್ ಕೋರ್ ಕ್ಷೇತ್ರಗಳನ್ನು ಹೊಂದಿರುವ, ರಾಜಕೀಯದಲ್ಲಿ ಇರುವವರಿಗೆ ಎಲ್ಲಾ ಅಷ್ಟೇ ಆಕರ್ಷಕವಾಗಿ ತೋರಿಸಲು ಖಾಸಗಿ ಕಲ್ಯಾಣ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತದೆ. ಆದರೆ, ಗಟ್ಟಿಯಾದ ಸಂಘಟನಾ ಸಂಪನ್ಮೂಲಗಳನ್ನು ಹೊಂದಿದ್ದ ಆ ಎಲೀಟ್ ಗುಂಪುಗಳು ಮಾತ್ರ ಈ ಕಷ್ಟಕರವಾದ ನಡೆಯನ್ನು ಅನುಷ್ಠಾನಗೊಳಿಸಬಲ್ಲವು. ಏಷಿಯಾ ಮತ್ತು ಆಫ್ರಿಕಾದಲ್ಲಿ ಇಂತಹ ಗಟ್ಟಿಯಾದ ಉದಾಹರಣೆಗಳು ಧಾರ್ಮಿಕ ಸಾಮಾಜಿಕ ಆಂದೋಲನಗಳ ಜೊತೆಗೆ ತಳಕುಹಾಕಿಕೊಂಡಿವೆ”.

ಬಿಜೆಪಿ ಈ ಎಲ್ಲಾ ಪೂರ್ವಷರತ್ತುಗಳನ್ನು ಹೊಂದಿರುತ್ತದೆ. ಈ ತಂತ್ರಗಾರಿಕೆ, ಕೇವಲ ಬೆಂಬಲಕ್ಕಾಗಿ ವಸ್ತುಗಳನ್ನು ವಿನಿಮಯ ಮಾಡುವುದಷ್ಟೇ ಅಲ್ಲ ಅದರೊಂದಿಗೆ ಅದು ಹಲವಾರು ಆಯಾಮಗಳನ್ನುಳ್ಳ ಸಾಮಾಜಿಕ ಪ್ರಕ್ರಿಯೆಯಾಗಿದೆ, ಅದು ಭಾರತೀಯ ರಾಜಕೀಯದಲ್ಲಿ ಹಲವಾರು ಹಂತಗಳಲ್ಲಿ ಕಾಣಿಸಕೊಳ್ಳುತ್ತದೆ. ಅವರು ಮುಂದುವರೆದು ಬರೆಯುತ್ತಾರೆ:

“ಭಾರತದಲ್ಲಿ ಕಾರ್ಯಕರ್ತರು (ಆರ್‌ಎಸ್‌ಎಸ್ ಎಂದು ಓದಿಕೊಳ್ಳಿ) ಈ ಪ್ರತಿನಿತ್ಯದ ಸಂಪರ್ಕವನ್ನು ಚುನಾವಣಾ ಲಾಭ ಗಳಿಸುವ ವಿಧಾನವಾಗಿ ಪರಿವರ್ತಿಸಿದ್ದಾರೆ, ಅದನ್ನು ಅವರು ತಾಳ್ಮೆಯಿಂದ ಮತದಾರರ ಗುಡ್‌ವಿಲ್‌ಅನ್ನು ಗಳಿಸುವುದರಿಂದ ಮಾಡಿದ್ದಾರೆಯೇ ಹೊರತು ಕೇವಲ ಗ್ರಾಹಕರಿಗೆ ಸರಕು ನೀಡುವಂತಹ ಲಾಭನಷ್ಟದ ವಿಧಾನದಿಂದ ಅಲ್ಲ. ಸೇವೆಯನ್ನು ನೀಡುವವರು ಈ ಗುಡ್‌ವಿಲ್‌ಅನ್ನು ಫಲಾನುಭವಿಗಳ ಮತ್ತು ಕೆಲವು ಫಲಾನುಭವಿಗಳಲ್ಲದವರ ನಡುವೆ ಚುನಾವಣಾ ಲಾಭವನ್ನಾಗಿ ಪರಿವರ್ತಿಸಿದ್ದಾರೆ. ಅವರು ಬೆಳೆಸಿದ ಸ್ನೇಹಿತರ ಬಳಗ ಮತ್ತು ಸಹವರ್ತಿಗಳ ಮೂಲಕ ಇದನ್ನು ಮಾಡಿದ್ದಾರೆ. ಅವರು ವದಂತಿ ಹರಡುವ ಶಕ್ತಿಯ ಮೇಲೆ ಹಾಗೂ ರಾಜಕೀಯವಲ್ಲದ ಜನರನ್ನು ಸ್ಥಳೀಯವಾಗಿ ಉನ್ನತ ಮಟ್ಟದ ಜನರು ಎಂದು ಸೂಚಿಸುವ ಮೂಲಕ ಇದನ್ನು ಸಾಧ್ಯವಾಗಿಸಿದ್ದಾರೆ”.

ಈ ಸಂದರ್ಭದಲ್ಲಿ, ಬಿಜೆಪಿಯ ಚುನಾವಣಾ ಯಶಸ್ಸಿನಲ್ಲಿ ಆರ್‌ಎಸ್‌ಎಸ್‌ನ ಪಾತ್ರವನ್ನು ವಿಶ್ಲೇಷಣಾಕಾರರು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.

ಕಡೆಗಣಿಸಲಾದ ಇನ್ನೊಂದು ಅಂಶವೆಂದರೆ, ಗ್ರಾಮೀಣ ಯುಪಿಯಲ್ಲಿ ಬಹುಜನ ಸಮಾಜ ಪಕ್ಷದ ಅಸ್ತಿತ್ವವು ಕೊನೆಗೊಳ್ಳುತ್ತ ಬಂದಿದ್ದು. ಅದು ಒಂದು ಸಮಯದಲ್ಲಿ ಶೋಷಣೆಗೊಳಗಾದ ಜಾತಿಗಳ ಅಸ್ಮಿತೆಯನ್ನು ರಾಜಕೀಯಗೊಳಿಸುವ ಮಹತ್ವದ ಪಾತ್ರವಹಿಸಿತ್ತು. ಆದರೆ ಸಾಮಾಜಿಕ ಒಳಗೊಳ್ಳುವಿಕೆಯಲ್ಲಿ ಅದು ಅದೇ ರೀತಿಯ ವಿಸ್ತರಣೆಯನ್ನು ಮಾಡಲಾಗಲಿಲ್ಲ. ತ್ಯಾಚಿಲ್ ಯುಪಿ ಮತ್ತು ಛತ್ತೀಸಗಢದಲ್ಲಿ ತಮ್ಮ ಅನುಭವದ ಮೇಲೆ ಬರೆಯುವುದೇನೆಂದರೆ, “ಹಾಗಾಗಿ, ಉತ್ತರ ಪ್ರದೇಶವು ಒಂದು ತೀವ್ರವಾಗಿ ರಾಜಕೀಯಗೊಂಡಿರುವ ಸಬ್‌ಆಲ್ಟರ್ನ್ ಸಮುದಾಯ (ಕೇರಳದಂತೆ) ಮತ್ತು ಸಮರ್ಪಕವಾಗಿಲ್ಲದ ಮೂಲಭೂತ ಸೇವೆ ಒದಗಿಸುವ ವ್ಯವಸ್ಥೆಯ (ಛತ್ತೀಸಗಢದಂತೆ) ಮಿಶ್ರಣವಾಗಿದೆ. ಈ ಸಬ್‌ಆಲ್ಟರ್ನ್ ಸಮುದಾಯವನ್ನು ಬಿಎಸ್‌ಪಿಯು ಮೇಲಿನಿಂದ ಕೆಳಗಿನವರೆಗೆ ಒಗ್ಗಟ್ಟಾಗಿಸಿತ್ತು, ಅದರಿಂದ 90ರ ದಶಕದ ಕೊನೆಯವರೆಗೆ ಗ್ರಾಮೀಣ ಭಾಗದಲ್ಲಿ ಆರ್‌ಎಸ್‌ಎಸ್‌ಗೆ ಪ್ರತಿರೋಧ ತೋರಲು ಸಾಧ್ಯವಾಗಿತ್ತು. ಆದರೆ ಬಿಎಸ್‌ಪಿಯು ತನ್ನ ಕಾರ್ಯಕರ್ತರನ್ನು ಕಳೆದುಕೊಳ್ಳುವ ಸಮಯದಲ್ಲಿ ಹಾಗೂ ಸಬ್‌ಆಲ್ಟರ್ನ್ ಸಮುದಾಯದ ಬೆಂಬಲ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಆರ್‌ಎಸ್‌ಎಸ್ ತನ್ನ ಸೇವೆಗಳೊಂದಿಗೆ ಪ್ರವೇಶಿಸಿತು. ಈ ಪ್ರಕ್ರಿಯೆಯು ಈ ಚುನಾವಣೆಗಳೊಂದಿಗೆ ತನ್ನ ಒಂದು ಸಂಪೂರ್ಣ ಸರ್ಕಲ್‌ಅನ್ನು ಪೂರ್ಣಗೊಳಿಸಿದೆ. ಬಿಎಸ್‌ಪಿ 22% ಜಾಟವ ಮತಗಳನ್ನು ಹಾಗೂ ಇತರ ಪರಿಶಿಷ್ಟ ಸಮುದಾಯದ 17% ಮತಗಳನ್ನು ಕಳೆದಕೊಳ್ಳುವುದರ ಮೂಲಕ ಅದು ಮುಗಿದಿದೆ.

ತಾರಿಕ್ ಥ್ಯಾಚಿಲ್ ಅವರ ಟಿಪ್ಪಣಿಗಳೊಂದಿಗೆ ಮುಕ್ತಾಯಗೊಳಿಸಬಹುದಾದರೆ:

“ಶ್ರೀಮಂತರ ಮತ್ತು ಬಡವರ ಪ್ರಾಪಂಚಿಕ (ಮೆಟೇರಿಯಲ್) ಕಾಳಜಿಗಳನ್ನು ಬ್ಯಾಲೆನ್ಸ್‌ಗೊಳಿಸುವುದರ ಜೊತೆಗೆ, ಸೇವೆಯು ಅತ್ಯಂತ ಪರಿಣಾಮಕಾರಿಯಾದ ಮನವೊಲಿಸುವ ತಂತ್ರವಾಗಿ ಕಾಣಿಸಿದೆ. ಈ ಎಲ್ಲೆಡೆ ಹೊಂದಿಕೊಳ್ಳುವ ಗುಣದಿಂದ, ಒಂದೇ ಸಮಯದಲ್ಲಿ ತಮ್ಮ ಕಾರ್ಯತಂತ್ರವನ್ನು ಮೂರು ವಿಧದ ಜನರಿಗೆ ಮನವರಿಕೆ ಮಾಡಲು ಹಿಂದೂ ರಾಷ್ಟ್ರೀಯವಾದಿಗಳು ಯಶಸ್ವಿಯಾಯಿತು; ಸಂದೇಹದಿಂದ ನೋಡುವ ಶೋಷಿತ ಸಮುದಾಯಗಳನ್ನು, ಚಿಂತಾಕ್ರಾಂತರಾಗಿರುವ ಮೇಲ್ಜಾತಿಯ ಬೆಂಬಲಿಗರನ್ನು ಹಾಗೂ ಸೈದ್ಧಾಂತಿಕವಾಗಿ ಬದ್ಧರಾಗಿರುವ ಕಾರ್ಯಕರ್ತರ ಗುಂಪನ್ನು.”

ಸಿಎಸ್‌ಡಿಎಸ್‌ನ ಅಂಕಿಅಂಶಗಳನ್ನು ನಂಬಬಹುದಾದರೆ, ಸಿಎಸ್‌ಡಿಎಸ್‌ನ ಆ ಪಟ್ಟಿಯಲ್ಲಿ ಅವರ ಜಾತಿ ವಿತರಣೆಯ ಆಧಾರದ ಮೇಲೆ ಈ ಮೂರು ವಿಧದ ಜನರನ್ನು ಸುಲಭವಾಗಿ ಗುರುತಿಸಬಹುದು.

ಪರಿಗಣಿಸಬೇಕಾದ ಇತರ ಅಂಶಗಳು

ಇವಿಎಂ, ಮತದಾರರ ಪಟ್ಟಿಯನ್ನು ತಿರುಚಿರುವುದು ಮುಂತಾದ ಪರಿಗಣಿಸಬೇಕಾದ ಅಂಶಗಳೂ ಇವೆ. ಬಿಜೆಪಿಯ ಗೆಲುವನ್ನು ವಿವರಿಸಲು ಈ ಅಂಶಗಳನ್ನು ಬಳಸಲಾಗಿದೆ. ಇವಿಎಂ ವಿರೋಧಿಸುವ ಜನರ ಸಲುವಾಗಿ ಹೇಳಬೇಕೆಂದತೆ, ಅತ್ಯಂತ ಸರಳವಾಗಿ, ನಾವು ಒಂದು ವೇಳೆ, ಈ ’ಭ್ರಷ್ಟಾಚಾರ’ದ ಕಾರಣದಿಂದ ಬಿಜೆಪಿಗೆ 70 ಸೀಟುಗಳು ಬಂದಿದ್ದರೂ, ಈ ಸ್ಪಷ್ಟ ಬಹುಮತ ಹೇಗೆ ಸಿಕ್ಕಿತು ಎಂಬುದನ್ನು ವಿವರಿಸುವುದಕ್ಕೆ ಅದು ಸಾಕಾಗುವುದಿಲ್ಲ. ಈ ಅಂಶಗಳಷ್ಟೇ, ಚುನಾವಣೆಯ ಈ ಅನಿರೀಕ್ಷಿತ ಫಲಿತಾಂಶಗಳನ್ನು ವಿವರಿಸಲು ಬರುವುದಿಲ್ಲ.

ಸಾರಾಂಶದಲ್ಲಿ, ಬಿಜೆಪಿಯ ಹಿಂದುತ್ವದ ಕಾರ್ಡ್ ಮತ್ತು ಅದರೊಂದಿಗೆ ಆರ್‌ಎಸ್‌ಎಸ್ ಮೂಲಕ ಸಾಧ್ಯವಾದ ಸಾಮಾಜಿಕ ಲಾಭವನ್ನು ಖಾಸಗಿಯಾಗಿ ಒದಗಿಸುವ ಪ್ರಕ್ರಿಯೆ ಮತ್ತು ಅದರ ಖಾಸಗಿ ಅಂಗಸಂಸ್ಥೆಗಳ ಮಿಶ್ರಣವು 2022ರ ತೀರ್ಪನ್ನು ವಿವರಿಸಬಲ್ಲವು. ಇದು ಸಾಧ್ಯವಾಗಿದ್ದು, ಕಾರ್ಯಕರ್ತರನ್ನು ಹೊಂದಿದ್ದ ಒಂದೇ ಪಕ್ಷವಾಗಿದ್ದ ಬಿಎಸ್‌ಪಿಯು ಗ್ರಾಮೀಣ ಭಾಗದಲ್ಲಿ ತನ್ನ ಸಾಮಾಜಿಕ-ರಾಜಕೀಯ ನೆಲೆಯನ್ನು ಕಳೆದುಕೊಂಡಿದ್ದರಿಂದ. ಇತರ ಪಕ್ಷಗಳಾದ ಎಸ್‌ಪಿ ಮತ್ತು ಕಾಂಗ್ರೆಸ್‌ಗಳಿಗೆ ಬಿಜೆಪಿಯ ಮಿಶ್ರ ಕಾರ್ಯತಂತ್ರವನ್ನು ಎದುರಿಸುವ ಮುನ್ನೋಟವಾಗಲಿ ಅಥವಾ ಅಂತಹ ಗಟ್ಟಿಯಾದ ಸಂಘಟನಾ ಬೇರುಗಳಾಗಲಿ ಇರಲಿಲ್ಲ. ಹಾಗೂ ಅವರಿಗೆ ಒಂದು ರಾಜಕೀಯ ವಿಷನ್ ಅಥವಾ ಕಾರ್ಯಕ್ರಮವೂ ಇರಲಿಲ್ಲ. ಫ್ರೀಬಿಗಳನ್ನು ಘೋಷಿಸುವುದರಲ್ಲಿ ಬಿಜೆಪಿಯನ್ನು ಅನುಕರಣೆ ಮಾಡುವುದರ ಹೊರತು ಬೇರೇನೂ ಇರಲಿಲ್ಲ, ಹಾಗೂ ವಿರೋಧಪಕ್ಷದಲ್ಲಿದ್ದಾಗ ಇವುಗಳು ಕೆಲಸ ಮಾಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು.

ವಿರೋಧ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಾದರೆ, ತಮ್ಮ ಕಾರ್ಯತಂತ್ರಗಳ ಮತ್ತು ಕಾರ್ಯಕ್ರಮಗಳ ಬಗ್ಗೆ ಮರುಚಿಂತನೆ ನಡೆಸಬೇಕಿದೆ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅಭಿಷೇಕ್ ಶ್ರೀವಾಸ್ತವ

ಅಭಿಷೇಕ್ ಶ್ರೀವಾಸ್ತವ
ಹಿರಿಯ ಪತ್ರಕರ್ತ, junputh.comನ ಕಾರ್ಯನಿರ್ವಾಹಕ ಸಂಪಾದಕ, ಉತ್ತರ ಪ್ರದೇಶ


ಇದನ್ನೂ ಓದಿ: ಉತ್ತರ ರೈಲ್ವೆಗೆ 13 ಸಾವಿರ ಕೋಟಿ ರೂ., ದಕ್ಷಿಣಕ್ಕೆ ಕೇವಲ 59 ಕೋಟಿ ರೂ.:…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಐತಿಹಾಸಿಕ...