Homeಮುಖಪುಟಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ವಿಚಿತ್ರ ಮುನ್ಸೂಚನೆ: ಭಾಗ 1

ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ವಿಚಿತ್ರ ಮುನ್ಸೂಚನೆ: ಭಾಗ 1

- Advertisement -
- Advertisement -

ಪಕ್ಷ-ಜಿಗಿತವನ್ನು ಯುಪಿಯ ಸಾಮಾಜಿಕ ನ್ಯಾಯದ ರಾಜಕಾರಣದ ಪುನರುತ್ಥಾನಕ್ಕೆ ಸಮೀಕರಿಸಲಾಗುತ್ತಿದೆ!

ಸಮಾಜವಾದಿ ಐಕಾನ್ ರಾಮ್ ಮನೋಹರ ಲೋಹಿಯಾ ಅವರ ಬಹುಪ್ರಖ್ಯಾತವಾದ ಮತ್ತು ಮತ್ತೆಮತ್ತೆ ಕೇಳಿಬರುವ ಘೋಷಣೆ- “ಜೀವಂತ ಸಮುದಾಯಗಳು ಐದು ವರ್ಷಗಳವರೆಗೆ ಕಾಯುವುದಿಲ್ಲ” ಎಂಬುದು. ಉತ್ತರ ಪ್ರದೇಶದ ಅವರ ಸೈದ್ಧಾಂತಿಕ ಹಿಂಬಾಲಕರು ಮತ್ತು ಅವರಿಗೆ ಸಂಬಂಧಿಸಿದ ಜಾತಿ-ಸಮುದಾಯಗಳಿಗೆ, ತಮ್ಮ ಬದುಕಿನ ಬಗ್ಗೆ ಎಷ್ಟು ಖಾತ್ರಿಯಿದೆಯೆಂದರೆ, ಅವರು ತಾವುಗಳು ಬಹುಕಾಲದಿಂದ ಕಾದಿರುವ ಸಾಮಾಜಿಕ ನ್ಯಾಯದ ಕನಸನ್ನು ನನಸಾಗಿಸಿಕೊಳ್ಳಲು ಪೂರ್ಣ ಐದು ವರ್ಷಗಳ ಕಾಲ ಕಾಯಲು ಸಿದ್ಧರಿರುತ್ತಾರೆ. ಉತ್ತರ ಪ್ರದೇಶದ ಚುನಾವಣಾ ದಿನಾಂಕಗಳು ಘೋಷಣೆಯಾದ ನಂತರದಲ್ಲಿ ಕಂಡುಬಂದಿರುವ ರಾಜಕೀಯ ಬೆಳವಣಿಗೆಗಳು ಇದನ್ನು ಸಾಬೀತುಪಡಿಸುತ್ತವೆ.

ಭಾರತೀಯ ಚುನಾವಣಾ ಆಯೋಗವು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಜನವರಿ 8ರಂದು ಘೋಷಿಸಿತು ಮತ್ತು ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂತು. ಇದಾದ 24 ಗಂಟೆಗಳ ನಂತರ ಮೊಟ್ಟಮೊದಲ ಪಕ್ಷಾಂತರದೊಂದಿಗೆ ನೈತಿಕ ಮತ್ತು ರಾಜಕೀಯ ದುರ್ನಡತೆ ಆರಂಭವಾಯಿತು. ಪಶ್ಚಿಮ ಯುಪಿಯ ಕಾಂಗ್ರೆಸ್ ಪಕ್ಷದ ಬಲಾಢ್ಯ ವ್ಯಕ್ತಿ ಇಮ್ರಾನ್ ಮಸೂದ್, ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ತನ್ನ ರಾಜೀನಾಮೆಯನ್ನು ಘೋಷಿಸಿದರು ಹಾಗೂ ತನ್ನ ಬೆಂಬಲಿಗ ಮತ್ತು ಹಾಲಿ ಶಾಸಕ ಇಮ್ರಾನ್ ಅಖ್ತರ್‌ರವರೊಂದಿಗೆ ಸಮಾಜವಾದಿ ಪಕ್ಷ ಸೇರಿದರು. ಈ ಸುದ್ದಿಯು ಡಿಸೆಂಬರ್‌ನಿಂದಲೇ ಸಹರನ್‌ಪುರದಲ್ಲಿ ಮಾತ್ರವಲ್ಲ ಯುಪಿಸಿಸಿ ಕೇಂದ್ರ ಕಛೇರಿಯಲ್ಲೂ ಕೂಡಾ ಎಲ್ಲರಿಗೂ ತಿಳಿದಿದ್ದದ್ದೇ ಆಗಿತ್ತು. ಆದರೂ ಕೊನೆಯ ನಿಮಿಷದಲ್ಲಿ ಕುದುರೆಯ ಬಾಯಿಂದಲೇ ಸುದ್ದಿ ಹೊರಬೀಳುವತನಕ ನಾಯಕತ್ವ ಕಾದಿದ್ದು ಏಕೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟತೆಯಿರಲಿಲ್ಲ.

ಇಮ್ರಾನ್ ಮಸೂದ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಯುಪಿಯಲ್ಲಿ ಕಾಂಗ್ರೆಸ್‌ನ ಎರಡು ಗೆಲುವುಗಳಿಗೆ (ಬೇಹತ್ ಮತ್ತು ಸಹರನ್‌ಪುರ ಗ್ರಾಮೀಣ ಸ್ಥಾನಗಳು) ಸಂಪೂರ್ಣವಾಗಿ ಇಮ್ರಾನ್ ಮಸೂದ್ ಕಾರಣ. ಅಲ್ಲದೆ, ಮಸೂದ್‌ರ ರಾಜಕೀಯ ವರ್ಚಸ್ಸು ಮುಜಫರ್‌ನಗರ್ ಮತ್ತು ಶಾಮ್ಲಿವರೆಗೂ ಹರಡಿದೆ. ಆದ್ದರಿಂದ, ಮೊದಲ ದಿನದಿಂದಲೂ ಹೆಚ್ಚೂಕಡಿಮೆ ಒಂದು ಡಜನ್‌ಗಿಂತ ಹೆಚ್ಚು ಸೀಟುಗಳು ಇದರಿಂದ ಬಾಧಿತವಾಗುತ್ತವೆಂಬುದು ತಿಳಿದೇ ಇತ್ತು. ಈ ಬರಹವನ್ನು ಕಳಿಸುವವರೆಗೆ ತೀರ ಇತ್ತೀಚಿನ ಸನ್ನಿವೇಶದಲ್ಲೂ ಇದನ್ನೇ ಕಾಣಬಹುದು- ಸಮಾಜವಾದಿ ಪಕ್ಷ ಮತ್ತು ಮೈತ್ರಿಕೂಟವು ಸಹರನ್‌ಪುರದ 6 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ ಮತ್ತು ಕಾಂಗ್ರೆಸ್ ಸಹರನ್‌ಪುರದ ಎಲ್ಲಾ 7 ಮತ್ತು ಶಾಮ್ಲಿಯ 3 ಕ್ಷೇತ್ರಗಳ ವಿಷಯದಲ್ಲಿ ಸಂಪೂರ್ಣ ದಿಕ್ಕು ಕಾಣದಾಗಿದೆ. ಮೊದಲ ಹಂತದ ಸೀಟುಗಳಿಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಜನವರಿ 21 ಮತ್ತು ಇದರಲ್ಲಿ ಶಾಮ್ಲಿಯೂ ಸೇರಿದೆ. ಸಹರನ್‌ಪುರ ಎರಡನೇ ಹಂತದಲ್ಲಿ ಚುನಾವಣೆ ಎದುರಿಸಲಿರುವುದರಿಂದ ಇದಾದ ನಂತರ ಇನ್ನೂ ಒಂದು ವಾರ ಸಮಯ ಅದಕ್ಕೆ ದೊರೆಯಲಿದೆ, ಅಂದರೆ ಎರಡೂ ಪಕ್ಷಗಳಿಗೆ ಕೊಂಚ ಉಸಿರಾಡಲು ಅವಕಾಶ.

ಸಹರನ್‌ಪುರದಲ್ಲಿ ಮಸೂದ್‌ರಿಂದ ಆರಂಭವಾದದ್ದು ಕೆಲವೇ ದಿನಗಳಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ಕ್ಯಾಬಿನೆಟ್ ಸಚಿವರನ್ನೂ ಒಳಗೊಂಡಂತೆ ಬಿಜೆಪಿಯ ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ಹಾಲಿ ಶಾಸಕರು ಮತ್ತು ನಾಯಕರು ಸಮಾಜವಾದಿ ಪಕ್ಷಕ್ಕೆ ಪಕ್ಷಾಂತರ ಮಾಡಿದ ಸುದ್ದಿಗಳು ಪತ್ರಿಕೆಗಳ ತಲೆಬರಹಗಳ ತುಂಬ ಕಂಡುಬರಲಾರಂಭಿಸಿದಾಗ ಸ್ಫೋಟಕ ಸ್ವರೂಪ ಪಡೆದುಕೊಂಡಿತು. ಇವುಗಳಲ್ಲೆಲ್ಲ ಅತಿದೊಡ್ಡ ಹೆಸರು ಸ್ವಾಮಿ ಪ್ರಸಾದ್ ಮೌರ್ಯ; ಇವರು ಒಬಿಸಿ ನಾಯಕರ ಸಂಘರ್ಷದ ಮುಂಚೂಣಿ ವಹಿಸಿದ್ದಾರೆಂದೂ ’ಬಿಜೆಪಿಯ ಆಟ ಮುಗಿಸುವ’ ಘೋಷಣೆ ಮಾಡಿದ್ದಾರೆಂದೂ ಹೇಳಲಾಗುತ್ತಿದೆ. ಒಟ್ಟು 3 ಮಂದಿ ಸಚಿವರು ಮತ್ತು 7 ಮಂದಿ ಶಾಸಕರು ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ್ದಾರೆ.

ಈ ವಿದ್ಯಮಾನವು ’ಕಮಂಡಲ’ದ ವಿರುದ್ಧ ’ಮಂಡಲ್’ ಮರಳಿ ಬಂದಿರುವುದು ಎಂಬ ರೀತಿಯಲ್ಲಿ ದೆಹಲಿಯ ರಾಜಕೀಯ ಮತ್ತು ಮಾಧ್ಯಮ ವಲಯಗಳಲ್ಲಿ ಪ್ರತಿಧ್ವನಿಸಿದೆ. ಸಾಮಾಜಿಕ ವ್ಯಾಖ್ಯಾನಕಾರರು, ಅನುಭವಿ ಪತ್ರಕರ್ತರೂ ಯುಪಿಯಲ್ಲಿ ಸಾಮಾಜಿಕ ನ್ಯಾಯದ ರಾಜಕಾರಣದ ಪುನರುತ್ಥಾನ ನಡೆಯುತ್ತಿದೆ ಎಂದು ಘೋಷಿಸುತ್ತಿದ್ದಾರೆ. ಇದು ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕರ ಮೇಲೆ ಎಷ್ಟು ಒತ್ತಡ ಉಂಟುಮಾಡಿದೆಯೆಂದರೆ ಅವರು ದಲಿತರ ಮನೆಗಳಲ್ಲಿ ಊಟ ಮಾಡುತ್ತಾ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಸಮುದಾಯಗಳ ನಾಯಕರ ಮತ್ತು ’ಮಂಡಲ್’ ರೂಪಕದ ಮರುಹುಟ್ಟು ಆಗಿರುವುದು, ಹಿಂದೂಗಳಲ್ಲಿ ಜಾತಿ ಕಾರಣಕ್ಕೆ ಒಡಕುಂಟಾಗುವುದರಿಂದ ಎಂದು ಬಗೆದು ಅದನ್ನು ತಡೆದು ಐಕ್ಯತೆ ತರಲು ವಿಶ್ವ ಹಿಂದೂ ಪರಿಷದ್ ಅಭಿಯಾನವೊಂದನ್ನು ಹಮ್ಮಿಕೊಳ್ಳಬೇಕಾದ ಸಂದರ್ಭ ತಂದಿದೆ.

ಸ್ವಾಮಿ ಪ್ರಸಾದ್ ಮೌರ್ಯ

ಬಿಜೆಪಿ ವಿರುದ್ಧವಾಗಿರುವವರು ಮತ್ತು ಹಿಂದುತ್ವ ಆಡಳಿತ ಕೊನೆಗೊಳ್ಳಬೇಕೆಂದು ಬಯಸುವವರಿಗೆ ಈ ವಿದ್ಯಮಾನ ಮೇಲ್ನೋಟಕ್ಕೆ ಭರವಸೆ ಮೂಡಿಸಬಹುದಾದರೂ ಇದು ತನ್ನದೇ ಸಂಕೀರ್ಣತೆಗಳನ್ನು ಹೊಂದಿದೆ. ಇದರಲ್ಲಿ ಎದ್ದು ಕಾಣುತ್ತಿರುವುದು ಸಮಾಜವಾದಿ ಪಕ್ಷದ ವರಿಷ್ಟ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ಟಿಕೆಟ್ ಹಂಚಿಕೆ ಮಾಡುವುದರಲ್ಲಿ ಮತ್ತು ಸಮಾಜವಾದಿ ಪಕ್ಷದಿಂದ ಮರುವಲಸೆ ತಡೆಯುವುದರಲ್ಲಿ ಉಂಟಾಗಿರುವ ಅತಿ ಇಕ್ಕಟ್ಟಿನ ಸ್ಥಿತಿ. ಇತ್ತೀಚಿನ ಕೆಲವು ಉದಾಹರಣೆಗಳು ಎಷ್ಟು ನಿಚ್ಚಳವಾಗಿವೆಯೆಂದರೆ ಬಹುಚರ್ಚಿತ ಸಾಮಾಜಿಕ ನ್ಯಾಯದ ಘೋಷಣೆಗೆ ಧಕ್ಕೆ ತರುವಂತಿವೆ.

ಶಾಮ್ಲಿ ಕ್ಷೇತ್ರದಲ್ಲಿ ಬಿಜೆಪಿಯಿಂದ ವಲಸೆ ಬಂದ ಪ್ರಸೂನ್ ಚೌಧುರಿಗೆ ಎಸ್‌ಪಿ-ರಾಷ್ಟ್ರೀಯ ಲೋಕದಳ ಮೈತ್ರಿಯ ವತಿಯಿಂದ ಟಿಕೆಟ್ ನೀಡಲಾಗಿದೆ. ಈತ ಹಿಂದೊಮ್ಮೆ ಲೋಕದಳದ ಈಗಿನ ಮುಖ್ಯಸ್ಥ ಜಯಂತ್ ಚೌಧುರಿಯ ತಂದೆ ಚೌಧುರಿ ಅಜಿತ್ ಸಿಂಗ್‌ರ ಸೋಲನ್ನು ಸಂಭ್ರಮಿಸಿದ್ದುದರಿಂದ, ಲೋಕದಳದ ಕಾರ್ಯಕರ್ತರು ಈ ಬೆಳವಣಿಗೆಯ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದಾರೆ. 2017ರಲ್ಲಿ ಈ ಕ್ಷೇತ್ರದಲ್ಲಿ ಲೋಕದಳದ ವತಿಯಿಂದ ಗೆದ್ದು ಬಿಜೆಪಿಯೆದುರು ಸೋತಿದ್ದ ಬಿಜೇಂದ್ರ ಮಲಿಕ್ ಇಲ್ಲಿ ಅತ್ಯಂತ ಸಂಭಾವ್ಯ ಅಭ್ಯರ್ಥಿಯಾಗಿದ್ದರು. ಬಿಜೇಂದ್ರರಿಗೆ ಟಿಕೆಟ್ ನೀಡದೇ ಇದ್ದುದರಿಂದ ಕಾಂಗ್ರೆಸ್ ಮತ್ತು ಬಿಎಸ್‌ಪಿಯವರು ಅವರನ್ನು ಸಂಪರ್ಕಿಸಿದ್ದರು ಮತ್ತು ಅಂತಿಮವಾಗಿ ಈಗ ಬಿಎಸ್‌ಪಿ ಟಿಕೆಟ್ ಮೇಲೆ ಅವರು ಸ್ಪರ್ಧಿಸುತ್ತಿದ್ದಾರೆ.

ಪಕ್ಕದ ಕೈರಾನಾ ಕ್ಷೇತ್ರದಲ್ಲಿ ಎಸ್‌ಪಿ ಲೋಕದಳ ಮೈತ್ರಿ ಅಭ್ಯರ್ಥಿ ನಹೀದ್ ಹಸನ್ ಎಸ್‌ಪಿಯ ಈಗಿನ ಶಾಸಕರಾಗಿದ್ದು, ಆತ ರೌಡಿಶೀಟ್ ಹೊಂದಿರುವ ಕುಖ್ಯಾತ ವ್ಯಕ್ತಿ. ಆತನಿಗೆ ಟಿಕೆಟ್ ಘೋಷಣೆಯಾದ ತಕ್ಷಣ, ಜನವರಿ 15ರಂದು ಹಳೆಯ ಕೇಸೊಂದರಲ್ಲಿ ಬಂಧನಕ್ಕೊಳಗಾಗಿದ್ದರಿಂದ, ಪಕ್ಷವು ಟಿಕೆಟ್ ರದ್ದು ಪಡಿಸಿ, ಆತನ ಸೋದರಿ ಇಕ್ರಾ ಹಸನ್‌ರಿಗೆ ನೀಡಿದೆ. ನಹೀದ್‌ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ದೆಹಲಿಯಲ್ಲಿ ಬಿಜೆಪಿಯ ಅಶ್ವಿನಿ ಕುಮಾರ್ ಉಪಾಧ್ಯಾಯ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಡೈರಿ ನಂ. 1834/2022) ದಾಖಲಿಸಿದ್ದು, ಎಸ್‌ಪಿಯು ಗ್ಯಾಂಗ್‌ಸ್ಟರ್ ಒಬ್ಬರನ್ನು ಅಭ್ಯರ್ಥಿ ಮಾಡುವುದರ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದೆ ಎಂಬ ಆರೋಪ ಮಾಡಿದ್ದಾರೆ. ಸುಪ್ರೀಂಕೋರ್ಟು ಈ ಹಿಂದೆ 25.09.2018 ಮತ್ತು 13.02.2020ರಂದು ನೀಡಿದ್ದ ಸೂಚನೆಗಳನ್ನು ಉಲ್ಲಂಘಿಸಿರುವ ಪಕ್ಷದ ನೋಂದಣಿ ರದ್ದುಪಡಿಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಬೇಕೆಂದೂ ಅವರು ಕೋರಿದ್ದಾರೆ

ಇಕ್ರಾ ಹಸನ್‌

ಸಹರನ್‌ಪುರದಲ್ಲಿ ಇಮ್ರಾನ್ ಮಸೂದ್ ಅವರ ಬದಲಾವಣೆಯ ಸುದ್ದಿ ಬಂದ ನಂತರ ಬೇಹತ್‌ನ ಹಾಲಿ ಕಾಂಗ್ರೆಸ್ ಶಾಸಕ ನರೇಶ್ ಸೈನಿ ಬಿಜೆಪಿ ಸೇರಿದರು. ಈಗ ಅವರಿಗೆ ಬೇಹತ್ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ನೀಡಲಾಗುತ್ತಿದೆ. ಅದೇ ಸಮಯದಲ್ಲಿ ಅಖಿಲೇಶ್ ಯಾದವ್ ಅವರಿಂದ ಅಸಮಾಧಾನಗೊಂಡಿರುವ ಮಸೂದ್ ತನಗೆ ಮತ್ತು ತನ್ನ ಅಳಿಯನಿಗೆ ಟಿಕೆಟ್ ಖಾತ್ರಿಪಡಿಸಕೊಳ್ಳಲು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷವು ಎಲ್ಲ ಅಸಮಾಧಾನಗೊಂಡ ನಾಯಕರೂ ಹೊರಬರುವುದನ್ನೇ ಕಾದುಕೊಂಡಿದೆ, ಹಾಗೆ ಬಂದವರಲ್ಲಿ ’ಉಳಿಕೆ’ಯವರನ್ನು ಕೊನೆ ನಿಮಿಷದಲ್ಲಿ ಸೆಳೆದುಕೊಳ್ಳುವ ಲೆಕ್ಕಾಚಾರ ಅವರದ್ದು. ನಂಬಿದರೆ ನಂಬಿ ಅಥವಾ ಬಿಡಿ, ರಾಜಕೀಯ ಪಕ್ಷಗಳ ಚುನಾವಣಾ ಖಜಾನೆಯಲ್ಲಿ ’ಸೆಳೆಯಬಹುದಾದ’ ಮತ್ತು ’ಸೆಳೆಯಲಾಗದ’ ವಿಧಾನಸಭಾ ಅಭ್ಯರ್ಥಿಗಳು ಎಂಬುದು ತೀರಾ ಇತ್ತೀಚಿನ ಸೇರ್ಪಡೆ!

ಈ ಮಧ್ಯೆ, ಸಹರನ್‌ಪುರದಲ್ಲಿ ರೂಪುತಳೆಯುತ್ತಿರುವಂತೆ ಕಾಣುತ್ತಿರುವ ಆಸಕ್ತಿದಾಯಕ ಬೆಳವಣಿಗೆಯೊಂದರಲ್ಲಿ ಬ್ರಾಹ್ಮಣ ಮುಸ್ಲಿಮರು (ಗಧಾ ಮುಸ್ಲಿಮರೆಂದು ಕರೆಯಲ್ಪಡುವವರು) ಹಾಲಿ ಎಂಎಲ್‌ಎ, ಸದ್ಯದಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ಗಾಗಿ ಹೋರಾಡುತ್ತಿರುವ ಸಂಜಯ್ ಗರ್ಗ್ ವಿರುದ್ಧ ಒಟ್ಟಾಗುತ್ತಿದ್ದಾರೆ. ಗಧಾ ಮುಸ್ಲಿಂ ಸಮುದಾಯವು ಈ ಪ್ರದೇಶದಲ್ಲಿ ದೊಡ್ಡ ಅಸ್ತಿತ್ವ ಹೊಂದಿದೆ ಮತ್ತು ಬಹುಪಾಲು ವ್ಯಾಪಾರೀ ವರ್ಗವಾಗಿದೆ. ಈ ಸಮುದಾಯದ ನಾಯಕರು ಅಸಾದುದ್ದೀನ್ ಒವೈಸಿಯ ಎಐಎಂಐಎಂ ನೊಂದಿಗೆ ನಿಕಟ ಒಡನಾಟದಲ್ಲಿದ್ದಾರೆ. ಈ ಸಮುದಾಯಕ್ಕೆ ರಶೀದ್ ಮಸೂದ್ ಕುಟುಂಬದೊಂದಿಗೆ ಸುದೀರ್ಘ ದ್ವೇಷವಿದೆ. ಈಗ ಸಂಜಯ್ ಗರ್ಗ್‌ನನ್ನು ಸೋಲಿಸುವ ಮೂಲಕ ಇಮ್ರಾನ್‌ಗೆ ಆತನ ’ನಿಜವಾದ ಮುಖ’ವನ್ನು ತೋರಿಸುವುದು ಅವರ ಉದ್ದೇಶವಾಗಿದೆ. ಇದೇ ಸಮುದಾಯಕ್ಕೆ ಸೇರಿದ ವಕೀಲ ಇಂತಿಖಾಬ್ ಆಜಾದ್ ಅವರ ಆರೋಪದಂತೆ ಇಮ್ರಾನ್ ಅವರನ್ನು ಗರ್ಗ್ ಅವರೇ ಸಮಾಜವಾದಿ ಪಕ್ಷಕ್ಕೆ ತಮ್ಮ ನಡುವಿನ ಒಳ ಒಪ್ಪಂದದ ಭಾಗವಾಗಿ ಕಳಿಸಿದ್ದಾರೆ ಮತ್ತು ಅವರಿಬ್ಬರ ನಡುವೆ ಹಣಕಾಸಿನದ್ದೂ ಸೇರಿದಂತೆ ಹಲವು ಒಡಂಬಡಿಕೆಗಳಾಗಿ.

ಕೇವಲ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ’ಪಕ್ಷ-ನಗೆತಗಾರ’ರ ಕಾರಣದಿಂದ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿಲ್ಲ; ಈ ವಿಷಯದಲ್ಲಿ ಹಿಂದುತ್ವದ ನಾಯಕ ಅಮಿತ್ ಜನಿ ಸೇರ್ಪಡೆಯ ನಂತರ ಕಾಂಗ್ರೆಸ್ ಕೂಡಾ ಇದೇ ಗುಂಪಿನಲ್ಲಿದೆ. ಅಮಿತ್ ಜನಿ ಕೆಲವು ವರ್ಷಗಳ ಹಿಂದೆ ಯುಪಿ ನವನಿರ್ಮಾಣ ಸೇನೆ ಕಟ್ಟಿದ್ದರು ಮತ್ತು ನಂತರ ಶಿವಪಾಲ್ ಯಾದವ್ ಅವರ ಪಕ್ಷ ಸೇರಿದ್ದರು. ಜನಿಯವರನ್ನು ಕಾಂಗ್ರೆಸ್‌ನೊಳಕ್ಕೆ ಆಚಾರ್ಯ ಪ್ರಮೋದ್ ಕೃಷ್ಣನ್‌ರವರು ಇತ್ತೀಚೆಗೆ ಬರಮಾಡಿಕೊಂಡಿದ್ದರು. ಕೃಷ್ಣನ್ ಅವರು ಜನಿಯವರನ್ನು ಬರಮಾಡಿಕೊಳ್ಳುತ್ತಿದ್ದ ಚಿತ್ರಗಳನ್ನು ಹಂಚಿಕೊಂಡದ್ದಕ್ಕೆ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿ, ಹೇಗೆ ಜನಿ ಹೋರಾಟಗಾರ ಕನ್ಹಯ್ಯ ಕುಮಾರ್ ಅವರಿಗೆ ಪ್ರಾಣ ಬೆದರಿಕೆ ಒಡ್ಡಿದ್ದರು ಮತ್ತು ಸಾಮಾಜಿಕ ಕಾರ್ಯಕರ್ತ ಶಾರ್ಜಿಲ್ ಇಮಾಮ್ ಅವರ ತಲೆತೆಗೆದರೆ ಔತಣಕೂಟ ನಡೆಸುವುದಾಗಿ ಹೇಳಿಕೆ ನೀಡಿದ್ದರೆಂಬುದನ್ನು ನೆನಪಿಸಿದರು. ಯುಪಿ ಕಾಂಗ್ರೆಸ್ ಕೃಷ್ಣನ್ ಅವರು ಹಾಕಿದ ಫೋಟೋಗಳ ಬಗ್ಗೆ ಒಂದು ಔಪಚಾರಿಕ ಹೇಳಿಕೆ ನೀಡಿದೆಯಾದರೂ ವಿವರಣೆ ನೀಡಿಲ್ಲ. ಕೃಷ್ಣನ್ ಅವರು ಕೋವಿಡ್ ಪಾಸಿಟಿವ್ ಆದ ಕಾರಣದಿಂದ ಪ್ರತ್ಯೇಕವಾಸದಲ್ಲಿದ್ದಾರೆ.

ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿ ಮುರಿದುಬಿದ್ದದ್ದಕ್ಕಾಗಿ ಟಿವಿ9ರ ಚರ್ಚೆಯೊಂದರಲ್ಲಿ ಕಣ್ಣೀರು ಹಾಕಿದ ಸಾಮಾಜಿಕ ನ್ಯಾಯದ ಹೊಸ ಐಕಾನ್ ಚಂದ್ರಶೇಖರ್ ಆಜಾದರ ಕುರಿತಂತೆ ನೋಡೋಣ. ಆಜಾದ್ ಜನವರಿ 11ರಂದು ಚುಟ್ಮಲ್‌ಪುರದ ತನ್ನ ಮನೆಯಲ್ಲಿ, ತನ್ನ ತಂದೆ ತೀರಿಕೊಂಡ ದಿನದಂದು ನೂರಾರು ಬೆಂಬಲಿಗರೊಂದಿಗೆ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. ಸುಮಾರು ಒಂದೂವರೆಗಂಟೆ ಕಾಲ ದಲಿತ ಸಮುದಾಯದ ಕುರಿತ ಬದ್ಧತೆಯ ಕುರಿತಂತೆ ದೀರ್ಘವಾಗಿ ಮಾತನಾಡಿದರು. ಭಾಷಣ ಮುಗಿಸಿ ಕುರ್ಚಿಯ ಮೇಲೆ ಕುಳಿತು ತನ್ನನ್ನು ಭೇಟಿಯಾಗಲು ಬಂದಿರುವ ’ವಿಶೇಷ ಮತ್ತು ಹಿರಿಯ’ರನ್ನು ಕರೆತರಲು ಸಹಾಯಕನಿಗೆ ಹೇಳಿದರು. ಚುನಾವಣಾ ಟಿಕೆಟ್‌ಗಾಗಿ ಆಜಾದ್ ಬಳಿ ಸಹಾಯ ಕೇಳಿ ಬಂದ ಜನರು ಅವರಾಗಿದ್ದರು. ಅವರು ತಂದಿದ್ದ ಅರ್ಜಿ ಹಾಗೂ ಫೈಲುಗಳನ್ನು ತಿರುವಿ ಹಾಕಿದ ನಂತರ ಅವರೆಲ್ಲರಿಗೂ ಟಿಕೆಟ್‌ನ ಭರವಸೆ ನೀಡಿದ ಆಜಾದ್, ಸಮುದಾಯದ ಹಿತಾಸಕ್ತಿಗಾಗಿ ತಾನು ಏಕಾಂಗಿಯಾಗಿ ಹೋರಾಡಲಿದ್ದೇನೆಂದು ಅಲ್ಲಿದ್ದ ಪತ್ರಕರ್ತರೊಬ್ಬರಿಗೆ ಹೇಳಿದ್ದರು.

ಅಶೋಕ್ ಚೌಧರಿ

ಒಂದೆರಡು ದಿನಗಳ ನಂತರ ಅವರು ಅಖಿಲೇಶ್ ಯಾದವ್‌ರನ್ನು ಭೇಟಿಯಾದರು, ಆದರೆ ಮೈತ್ರಿ ಕುದುರಲಿಲ್ಲ. ಈಗ ಉ.ಪ್ರ.ದಲ್ಲಿ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬಂದರೆ ಅದಕ್ಕೆ ಅಖಿಲೇಶ್ ಕಾರಣ ಎಂದು ಹೇಳುತ್ತಿದ್ದಾರೆ. ಅಖಿಲೇಶ್ ಯಾದವ್ ಪ್ರಕಾರ ’ಸೀಟು ಹಂಚಿಕೆಯಾಗಿತ್ತು, ಆದರೆ ಆಜಾದ್‌ಗೆ ದೆಹಲಿಯಿಂದ ಕಡೆ ನಿಮಿಷದಲ್ಲಿ ಕರೆಯೊಂದು ಬಂದು, ಅವರು ಹಿಂದೆ ಸರಿದರು’. ಸತ್ಯ ಏನೇ ಇದ್ದರೂ ಆಜಾದ್ ಸಮಾಜ್ ಪಕ್ಷವು ಸ್ವಂತ ಬಲದ ಮೇಲೆ ಅಭ್ಯರ್ಥಿಗಳನ್ನು ನಿಲ್ಲಿಸುವ ಸಾಮರ್ಥ್ಯ ಹೊಂದಿಲ್ಲ ಮತ್ತು ಇವೆಲ್ಲವೂ ನಡೆದ ನಂತರ ಸಮಾಜವಾದಿ ಪಕ್ಷವು ಅವರನ್ನು ಪುರಸ್ಕರಿಸುವ ಸಾಧ್ಯತೆ ಇಲ್ಲ. ತನ್ನ ಭದ್ರ ನೆಲೆಯಾದ ಪಶ್ಚಿಮ ಉತ್ತರಪ್ರದೇಶವನ್ನು ಬಿಎಸ್‌ಪಿಯೂ ಹಗುರವಾಗಿ ಪರಿಗಣಿಸುವುದಿಲ್ಲ. ಉತ್ತರಪ್ರದೇಶದ ಚುನಾವಣಾ ರಾಜಕೀಯಕ್ಕೆ ಪ್ರವೇಶ ಕೊಡುತ್ತಿರುವ ಪ್ರಯತ್ನದಲ್ಲಿ ಆಜಾದ್ ವೈಫಲ್ಯ ಕಾಣುವ ಸಾಧ್ಯತೆಯೇ ಹೆಚ್ಚು.

ಇದಲ್ಲದೇ ಯಾವುದೇ ಮೈತ್ರಿಕೂಟದ ಭಾಗವಾಗಿಲ್ಲದ ಆಮ್ ಆದ್ಮಿ ಪಕ್ಷ ಹಾಗೂ ಇತರ ಪಕ್ಷಗಳಿವೆ. ತಳಮಟ್ಟದ ಚರ್ಚೆಗಳಲ್ಲಿ ಅವರುಗಳು ಇಲ್ಲವೇ ಇಲ್ಲ. ತಳಮಟ್ಟದ ಆರಂಭಿಕ ಭಾವನೆಗಳು, ಅದರಲ್ಲೂ ಮೊದಲೆರಡು ಹಂತಗಳಲ್ಲಿ ಮತದಾನವಾಗಲಿರುವ ಪಶ್ಚಿಮ ಉತ್ತರ ಪ್ರದೇಶದಲ್ಲಿ, ಬಿಜೆಪಿ ಅಥವಾ ಅದರ ವಿರುದ್ಧ ಎಂಬಂತೆ ಧ್ರುವೀಕರಣಗೊಂಡಿವೆ.

ಸಹ್ರಾನ್‌ಪುರದ ಹಿರಿಯ ಆಕ್ಟಿವಿಸ್ಟ್ ಅಶೋಕ್ ಚೌಧರಿ ಹೀಗೆನ್ನುತ್ತಾರೆ, ’ಬಿಜೆಪಿ ಪರ ಅಥವಾ ಅದರ ವಿರುದ್ಧ ಎಂದು ಧ್ರುವೀಕರಣಗೊಂಡಿರುವ 325 ಸೀಟುಗಳನ್ನು ನೀವು ಎಣಿಸಬಹುದು. ಕೇವಲ 80 ಸೀಟುಗಳಲ್ಲಿ ಮಾತ್ರ ಉಳಿದವರಿಗೂ ಏನಾದರೂ ಪಾತ್ರವಿರಬಹುದು. ಈ ಭಾವನೆಯು ಮೇಲಿಂದ ಕೆಳಕ್ಕೆ ಎಲ್ಲಾ ಕಡೆ ಇರುವುದರಿಂದ, ಒಂದೋ ಬಿಜೆಪಿಯ ಪರವಾಗಿ ಪೂರ್ಣ ಬಹುಮತ ಅಥವಾ ಬಿಜೆಪಿಯ ವಿರುದ್ಧ ಇರುವ ಪಕ್ಷದ ಪರವಾಗಿ ಮತ ಎನ್ನುವ ರೀತಿ ಆಗುತ್ತದೆ. ಆದರೆ ಇದನ್ನು ನೀವು ಇಡೀ ರಾಜ್ಯದಲ್ಲೆಲ್ಲಾ ಒಂದೇ ರೀತಿ ಎನ್ನಲಾಗುವುದಿಲ್ಲ. ಏಕೆಂದರೆ ಪ್ರತಿಯೊಂದೂ ಸೀಟಿನಲ್ಲೂ ಗುದ್ದಾಟವಿದೆ’.

ಇನ್ನು ಸಾಮಾಜಿಕ ನ್ಯಾಯ? ’ಮಂಡಲ್’ ಸಂಕಥನದ ಕಥೆ? ಅವರ ಅಭಿಪ್ರಾಯದಂತೆ, ಇನ್ನು ಹತ್ತು ದಿನಗಳಷ್ಟೇ ಕಾದು ನೋಡಿದರೆ ಸಮಾಜವಾದಿ ಪಕ್ಷದಿಂದ ಹೊರಕ್ಕೆ ಮರುವಲಸೆ ಆರಂಭವಾಗಲಿದೆ. ಮೊದಲ ಸುತ್ತಿನ ನಾಮಪತ್ರ ಸಲ್ಲಿಕೆ ಕೊನೆಗೊಳ್ಳುವ ಜನವರಿ 21ರಂದು, ಟಿಕೆಟ್‌ಗಳನ್ನು ಗೆಲ್ಲುವ ಸಾಮರ್ಥ್ಯವಿರುವವರಿಗೆ ನೀಡಲಾಗುತ್ತಿದೆಯಾ ಅಥವಾ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವವರಿಗೆ ನೀಡಲಾಗುತ್ತಿದೆಯಾ ಎಂಬುದೂ ಗೊತ್ತಾಗಲಿದೆ.

ಅನು: ಮಲ್ಲಿಗೆ ಸಿರಿಮನೆ

ಅಭಿಷೇಕ್ ಶ್ರೀವಾಸ್ತವ
ಹಿರಿಯ ಪತ್ರಕರ್ತ, junputh.comನ ಕಾರ್ಯನಿರ್ವಾಹಕ ಸಂಪಾದಕ, ಉತ್ತರ ಪ್ರದೇಶ


ಇದನ್ನೂ ಓದಿ: ಯುಪಿ ಚುನಾವಣೆ-2022: ಯುವಜನರಿಗೆ ವಿಶೇಷ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...