Homeಕರ್ನಾಟಕಉಪ್ಪಿನಂಗಡಿ ಲಾಠಿಚಾರ್ಜ್‌: ಪಾಪ್ಯುಲರ್ ಫ್ರಂಟ್‌‌ ಆಫ್‌ ಇಂಡಿಯಾ ಖಂಡನೆ

ಉಪ್ಪಿನಂಗಡಿ ಲಾಠಿಚಾರ್ಜ್‌: ಪಾಪ್ಯುಲರ್ ಫ್ರಂಟ್‌‌ ಆಫ್‌ ಇಂಡಿಯಾ ಖಂಡನೆ

ಅಮಾಯಕರ ಮೇಲಿನ ಕೇಸ್ ಹಿಂಪಡೆದು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ: ಪಿಎಫ್‌ಐ ಆಗ್ರಹ

- Advertisement -
- Advertisement -

ಅಕ್ರಮವಾಗಿ ಬಂಧಿಸಿದ ಪಾಪ್ಯುಲರ್ ಫ್ರಂಟ್ ನಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ನಾಗರಿಕರ ಮೇಲೆ ಬರ್ಬರವಾಗಿ ಪೊಲೀಸರು ಲಾಠಿಚಾರ್ಚ್ ನಡೆಸಿದ್ದು ಪೊಲೀಸರ ಕೃತ್ಯ ಖಂಡನೀಯ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹೇಳಿದೆ.

ಪಾಪ್ಯುಲರ್‌ ಫ್ರಂಟ್‌ನ ಮುಖಂಡರು ಸುದ್ದಿಗೋಷ್ಠಿ ನಡೆಸಿದ್ದು, ಗಾಯದ ತೀವ್ರತೆಯನ್ನು ಗಮನಿಸಿದರೆ ಪೊಲೀಸರು ಲಾಠಿಗೆ ಬದಲಾಗಿ ಯಾವುದೋ ಮಾರಕಾಸ್ತ್ರ ಬಳಸಿರುವ ಬಗ್ಗೆ ಸಂಶಯ ಮೂಡುತ್ತದೆ ಎಂದು ಆರೋಪಿಸಿದ್ದಾರೆ.

ರಾತೋರಾತ್ರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೂರು ಮಂದಿಯನ್ನು ಅಕ್ರಮವಾಗಿ ಬಂಧಿಸಿದ್ದರು. ಆದರೆ ಬಂಧನದ ವೇಳೆ ಯಾವುದೇ ಸೂಚನೆಯನ್ನು ನೀಡಿರಲಿಲ್ಲ. ಯಾವ ಕಾರಣಕ್ಕಾಗಿ ಬಂಧಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ ನೀಡಿರಲಿಲ್ಲ. ಅಕ್ರಮ ಬಂಧನವನ್ನು ಖಂಡಿಸಿ ಪ್ರತಿಭಟನಕಾರರು ಬೆಳಗ್ಗೆ ಠಾಣೆ ಮುಂದೆ ಜಮಾಯಿಸಿದಾಗಲಷ್ಟೇ ಸ್ಥಳೀಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕರೆ ತಂದಿದ್ದೇವೆ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದರು. ಆದರೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರಲ್ಲಿ ಎಳ್ಳಷ್ಟೂ ಆಧಾರವಿರಲಿಲ್ಲ. ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದು ಧರಣಿ ಕುಳಿತ್ತಿದ್ದರು ಎಂದು ಮುಖಂಡರು ತಿಳಿಸಿದ್ದಾರೆ.

ಕತ್ತಲಾವರಿಸಿದರೂ ಪ್ರತಿಭಟನಕಾರರು ಅಲ್ಲಿಂದ ಕದಲದೇ ಇದ್ದಾಗ ರಾತ್ರಿ ಸುಮಾರು 7ರ ವೇಳೆಗೆ ಓರ್ವ ನಾಯಕರನ್ನು ಬಿಡುಗಡೆಗೊಳಿಸಿದ್ದರು. ಇನ್ನಿಬ್ಬರನ್ನು ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸುವುದಾಗಿ ಪೊಲೀಸ್ ಅಧಿಕಾರಿ ಭರವಸೆ ನೀಡಿದ್ದರು. ಆದರೆ ತುಂಬಾ ಸಮಯದ ನಂತರವೂ ಅವರನ್ನು ಬಿಡುಗಡೆಗೊಳಿಸುವ ಲಕ್ಷಣ ಕಂಡು ಬರಲಿಲ್ಲ. ಅವರಿಬ್ಬರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ ಸೂಚನೆ ಕಂಡು ಬಂದಾಗ, ಉಳಿದಿಬ್ಬರು ಅಮಾಯಕರನ್ನು ಬಿಡುಗಡೆಗೊಳಿಸುವಂತೆ ಮತ್ತೇ ಪ್ರತಿಭಟನೆಯನ್ನು ಮುಂದುವರಿಸಲಾಗಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿರುವಾಗ ಪೊಲೀಸರು ಯಾವುದೇ ಸೂಚನೆ ನೀಡದೇ ಯದ್ವಾತದ್ವಾ ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಪ್ರತಿಭಟನಕಾರರು ಗಂಭೀರ ಗಾಯಗೊಂಡಿದ್ದಾರೆ ಎಂದು ಮುಖಂಡರು ಹೇಳಿದ್ದಾರೆ.

ಪೊಲೀಸರ ರಾಕ್ಷಸೀಯ ವರ್ತನೆ ಖಂಡನಾರ್ಹ. ಬರ್ಬರ ಲಾಠಿಚಾರ್ಜ್‌‌ನಿಂದಾಗಿ ಪ್ರತಿಭಟನಕಾರರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದ ಮುಸ್ಲಿಮರ ಧಾರ್ಮಿಕ ಗುರು ಸೈಯ್ಯದ್ ಆತೂರ್ ತಂಗಳ್ರವರ ತಲೆಗೆ ಗಂಭೀರ ಗಾಯವಾಗಿದೆ. ಗಾಯದ ತೀವ್ರತೆಯನ್ನು ಗಮನಿಸಿದರೆ ಪೊಲೀಸರು ಲಾಠಿಗೆ ಬದಲಾಗಿ ಯಾವುದೋ ಮಾರಕಾಸ್ತ್ರ ಬಳಸಿರುವ ಬಗ್ಗೆ ಸಂಶಯ ಮೂಡುತ್ತದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಲಾಠಿ ಏಟಿಗೆ ಯುವಕನೋರ್ವ ಪ್ರಜ್ಞೆ ಕಳೆದುಕೊಂಡು ರಸ್ತೆಯಲ್ಲಿ ಬಿದ್ದಿದ್ದ ಕರುಣಾಜನಕ ದೃಶ್ಯವೂ ಕಂಡು ಬಂತು. ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಮತ್ತು ಸುಮಾರು 40ರಷ್ಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರು ಆ್ಯಂಬುಲೆನ್ಸ್ ಮೇಲೆಯೂ ಲಾಠಿ ಬೀಸಿ ಆತಂಕದ ವಾತಾವರಣ ಸೃಷ್ಟಿಸಿದ್ದರು. ಇದೇ ವೇಳೆ ಆ್ಯಂಬುಲೆನ್ಸ್‌ ಒಂದನ್ನು ಠಾಣೆ ಬಳಿ ತಡೆ ಹಿಡಿದಿದ್ದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ತೀವ್ರ ಅಡಚಣೆ ಉಂಟು ಮಾಡಿದ್ದರು. ಈ ಮಧ್ಯೆ, ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದ್ದ ನಾಯಕರ ಮೇಲೆಯೂ ಲಾಠಿ ಬೀಸಿ ಉದ್ಧಟತನದಿಂದ ವರ್ತಿಸಲಾಗಿದೆ ಎಂದು ದೂರಿದ್ದಾರೆ.

ಬೆಳಿಗ್ಗಿನಿಂದಲೇ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರು ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರ ಬೆದರಿಕೆ, ಪ್ರಚೋದನೆಯ ಹೊರತಾಗಿಯೂ ಪ್ರತಿಭಟನಕಾರರು ರಾತ್ರಿಯಾದರೂ ಸಂಯಮ ಕಳೆದುಕೊಂಡಿರಲಿಲ್ಲ. ಆದರೆ ಸುಮಾರು 9:30ರ ವೇಳೆಗೆ ಪೊಲೀಸರು ಹಿಂಬದಿಯಿಂದ ಏಕಾಏಕೀ ಲಾಠಿ ಪ್ರಯೋಗ ಮಾಡಿ ಪ್ರತಿಭಟನಕಾರರನ್ನು ಬರ್ಬರವಾಗಿ ಥಳಿಸಿದ್ದಾರೆ. ಲಾಠಿಚಾರ್ಜ್‌ನಿಂದ ಗಾಯಗೊಂಡವರ ಪೈಕಿ ಬಹುಪಾಲು ಜನರಿಗೆ ತಲೆಗೆ ಪೆಟ್ಟು ಬಿದ್ದಿರುವುದು ಪೊಲೀಸರ ಪ್ರತೀಕಾರದ ಮನೋಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ತಮ್ಮ ದುಷ್ಕೃತ್ಯವನ್ನು ಮರೆಮಾಚಲು ಪೊಲೀಸರು ಎಂದಿನಂತೆ ತಮ್ಮ ಮೇಲೆ ಹಲ್ಲೆ ನಡೆಸಿರುವ ಕಟ್ಟು ಕಥೆಯನ್ನು ಕಟ್ಟುತ್ತಿದ್ದಾರೆ ಎಂದಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆದಾಗ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವುದು ಪೊಲೀಸರ ಕರ್ತವ್ಯ. ಆದರೆ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಮತ್ತು ಯಾರದೋ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಅಮಾಯಕರನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸುವ ಪ್ರವೃತ್ತಿ ಆತಂಕಕಾರಿಯಾಗಿದೆ. ಘಟನೆಯ ಆರೋಪಿಗಳು ಪತ್ತೆಯಾಗಿಲ್ಲ ಎಂಬ ಕಾರಣಕ್ಕೆ ಇದೀಗ ಅಮಾಯಕರನ್ನು ಹಿಡಿದು ಪೊಲೀಸರು ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ನೆಲದ ಕಾನೂನನ್ನು ಗೌರವಿಸುತ್ತದೆ ಮತ್ತು ಪೊಲೀಸರ ತನಿಖೆಗೂ ಸಹಕರಿಸುತ್ತದೆ. ಆದರೆ ಘಟನೆಗೆ ಸಂಬಂಧಪಡದ ಅಮಾಯಕರನ್ನು ಸಿಲುಕಿಸಿ ಪ್ರಕರಣ ದಾಖಲಿಸುವ ಅನ್ಯಾಯದ ಕ್ರಮಕ್ಕೆ ಯಾವತ್ತೂ ಅವಕಾಶ ನೀಡುವುದಿಲ್ಲ. ನಿನ್ನೆ ನಡೆದ ಪ್ರತಿಭಟನೆಯೂ ಇದೇ ನಿಲುವಿನ ಭಾಗವಾಗಿತ್ತು ಎಂದು ತಿಳಿಸಿದ್ದಾರೆ.

ವಿನಾ ಕಾರಣ ಲಾಠಿ ಚಾರ್ಜ್ ನಡೆಸಿ ಹಲವು ಮಂದಿ ಗಂಭೀರ ಗಾಯಗೊಳ್ಳಲು ಕಾರಣಕರ್ತರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಲಾಠಿ ಚಾರ್ಜ್‌‌ಗೆ ಆದೇಶ ನೀಡಿದ ಅಧಿಕಾರಿಯನ್ನು ಪೊಲೀಸ್ ಇಲಾಖೆ ಕೂಡಲೇ ಅಮಾನತುಪಡಿಸಬೇಕು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರಕಾರದ ವತಿಯಿಂದಲೇ ಭರಿಸಬೇಕು. ವಿಚಾರಣೆಯ ನೆಪದಲ್ಲಿ ಕೊಂಡೊಯ್ದು ಇಬ್ಬರ ಮೇಲೆ ಇದೀಗ ಸುಳ್ಳು ಕೇಸು ಜಡಿಯಲಾಗಿದ್ದು, ಈ ಸುಳ್ಳು ಕೇಸನ್ನು ಕೂಡಲೇ ವಾಪಸ್ ಪಡೆಯಬೇಕು. ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಪ್ರತಿಭಟನಕಾರರನ್ನೂ ಬೇಷರತ್ ಆಗಿ ಬಿಡುಗಡೆಗೊಳಿಸಬೇಕು. ಪೊಲೀಸರು ಯಾರದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು. ಈ ಮೂಲಕ ಅವರು ಕಾನೂನಿನ ಘನತೆ, ಪಾವಿತ್ರ್ಯಾತೆಯನ್ನು ಎತ್ತಿಹಿಡಿಯಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.

ಲಾಠಿಚಾರ್ಜ್ ಘಟನೆಯನ್ನು ಖಂಡಿಸಿ ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಸೆಂಬರ್ 17ರ ಶುಕ್ರವಾರದಂದು ಮಂಗಳೂರಿನಲ್ಲಿ ಎಸ್‌‌ಪಿ ಆಫೀಸ್ ಎದುರು ಮಾರ್ಚ್ ಹಮ್ಮಿಕೊಳ್ಳಲೂ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಾಪ್ಯುಲರ್‌ ಫ್ರಂಟ್‌‌ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ಮಂಗಳೂರು ನಗರ ಅಧ್ಯಕ್ಷ ಖಾದರ್ ಕುಳಾಯಿ, ಪುತ್ತೂರು ತಾಲ್ಲೂಕು ಅಧ್ಯಕ್ಷ ಜಾಬೀರ್ ಅರಿಯಡ್ಕ ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...