Homeನ್ಯಾಯ ಪಥಬೌದ್ಧ ತತ್ವಗಳನ್ನು ಆಕ್ರಮಿಸುತ್ತಿರುವ ವೈದಿಕ ತಂತ್ರಗಳು

ಬೌದ್ಧ ತತ್ವಗಳನ್ನು ಆಕ್ರಮಿಸುತ್ತಿರುವ ವೈದಿಕ ತಂತ್ರಗಳು

- Advertisement -
- Advertisement -

ಹೋದ ತಿಂಗಳಲ್ಲಿ ನಡೆದ ಒಂದು ಪುಸ್ತಕದ ಬಿಡುಗಡೆಯ ಕಾರ್ಯಕ್ರಮದಲ್ಲಿ (ಪ್ರ.ವಾ 30.1.2023) ’ಪಂಡಿತ’ರೆನ್ನಿಸಿಕೊಂಡ ಅನೇಕರು ಬುದ್ಧ ಮತ್ತು ಅವರ ತಾತ್ವಿಕತೆಯ ಬಗ್ಗೆ ಅಪಾರ್ಥ ಬರುವಂತೆ ಮಾತಾಡಿದ್ದಾರೆ ಮತ್ತು ಅದನ್ನು ಮುಂದುವರಿಸಿದ್ದಾರೆ. ಇಷ್ಟುದಿನ ಇಲ್ಲದ ಬುದ್ಧನ ಮೇಲಿನ ಪ್ರೀತಿಯನ್ನು ಈಗ ತೋರ್ಪಡಿಸುತ್ತಿದ್ದಾರೆ. ಇದನ್ನು ಬಹುದೊಡ್ಡ ರಾಜಕೀಯದ ಭಾಗವಾಗಿ ನಾವು ಅರ್ಥೈಸಿಕೊಳ್ಳಬೇಕು. ಇಲ್ಲಿ ನಾನು ಬಲ-ಎಡ ಇತ್ಯಾದಿಯಾಗಿ ಮಾತಾಡಲಾರೆ. ಪ್ರತಿಯೊಬ್ಬರಿಗೂ ಬುದ್ಧರನ್ನು ಅರ್ಥೈಸಿಕೊಳ್ಳುವ, ಮಾತಾಡುವ ಹಕ್ಕಿದೆ. ಆದರೆ ತಮ್ಮ ಬದುಕನ್ನೇ ತಪಸ್ವಿಯಂತೆ ಬುದ್ಧಮಾರ್ಗದಲ್ಲಿ ನಡೆದ ಬಾಬಾಸಾಹೇಬ ಅಂಬೇಡ್ಕರರನ್ನು ಮತ್ತು ಅಂತಹ ಇನ್ನೂ ಅನೇಕರನ್ನು ಟೀಕಿಸುವ ಹಕ್ಕು ಇವರಿಗಿಲ್ಲ. ಇಲ್ಲಿಯವರೆಗೆ ತಮ್ಮ ವೈದಿಕ ಪ್ರವಚನಗಳಲ್ಲಿ ಬುದ್ಧನನ್ನು ಟೀಕಿಸಲು ಅಪಹಾಸ್ಯ ಮಾಡಲು ತಮ್ಮ ವಿದ್ವತ್ತು ಉಪಯೋಗಿಸಿದವರು ಈಗ ಅವರನ್ನು ತಮ್ಮ ವೈದಿಕತೆಯ ಭಾಗವಾಗಿ ಬಿಂಬಿಸಿ ಹೊಗಳುತ್ತಿದ್ದಾರೆ. ಬಹುಶಃ ಅದು ಅವರಿಗೆ ರಾಜಕೀಯ ಮತ್ತು ಸಾಮಾಜಿಕ ಅನಿವಾರ್ಯತೆಯಾಗಿರಬಹುದು.

ಶತಾವಧಾನಿ ಆರ್ ಗಣೇಶ ಹೇಳುತ್ತಾರೆ “ಬೌದ್ಧ ದರ್ಶನ ಮತ್ತು ಸನಾತನ ಧರ್ಮಕ್ಕೂ ಶತಮಾನಗಳಿಂದ ತಿಕ್ಕಾಟ, ಸಂಘರ್ಷವಿದೆ ಎಂದು ಬಿಂಬಿಸಲಾಗುತ್ತಿದೆ. ಇದು ಸುಳ್ಳಿನ ಕಥನ” ಎಂದು. ಮಹಾಶಯರೇ, ಇದು ಸುಳ್ಳಿನ ಕಥನವಲ್ಲ, ಭಾರತ ಅನುಭವಿಸಿದ ವಾಸ್ತವ. ಬ್ರಿಟಿಷರು ಭಾರತಕ್ಕೆ ಬರದೇ ಇದ್ದರೆ ಬುದ್ಧ ಮತ್ತು ಸಾಮ್ರಾಟ ಅಶೋಕ ಭರತ ಖಂಡದಲ್ಲಿ ಇದ್ದರೆನ್ನುವ ಸಂಗತಿಯೇ ಜಗತ್ತಿಗೆ ಗೊತ್ತಾಗುತ್ತಿರಲಿಲ್ಲ. ಬ್ರಿಟಿಷ್ ಸಂಶೋಧಕರು ಬರ್ಮಾ ಮತ್ತು ಸಿಲೋನ್‌ನಲ್ಲಿ ಬುದ್ಧ ದರ್ಮದ ಅಸ್ತಿತ್ವವನ್ನು ನೋಡುತ್ತಾರೆ. ಅಲ್ಲಿನ ಐತಿಹ್ಯಗಳು ಬುದ್ಧನ ಜನ್ಮಸ್ಥಳವನ್ನು ಜಂಬುದ್ವೀಪದಲ್ಲಿ ತೋರಿಸುತ್ತವೆ, ಆದರೆ ಇಲ್ಲಿ ಮಾತ್ರ ಯಾವ ಸಾಕ್ಷ್ಯಗಳೂ ಸಿಗದಂತಿತ್ತು. ಆದರೆ ಆ ಎರಡೂ ದೇಶಗಳಲ್ಲಿ ಬೌದ್ಧ ಧರ್ಮ ಇದೆಯೆಂದಾದರೆ ಇಲ್ಲಿಯೂ ಇರಲೆಬೇಕೆಂಬ ನಿರ್ಧಾರಕ್ಕೆ ಬಂದು ಸಂಶೋಧನೆಗೆ ನಿಲ್ಲುತ್ತಾರೆ.

ಡಾ.ಬುಖಾನನ್ ಒಬ್ಬ ಬೊಟಾನಿಸ್ಟ್ ಮತ್ತು ಸರ್ಜನ್. ಆತ ಬಂಗಾಳ, ಬರ್ಮ, ನೇಪಾಳ, ಬಿಹಾರ್ ಮತ್ತು ದಕ್ಷಿಣ ಕರ್ನಾಟಕದಲ್ಲಿ ಸರ್ವೆ ಕಾರ್ಯ ಮಾಡಿರುತ್ತಾರೆ. ಅವರು ಬೋಧಗಯಾಕ್ಕೆ ಬಂದಾಗ ತಮ್ಮ ಅನುಭವವನ್ನು ಹೀಗೆ ಬರೆಯುತ್ತಾರೆ: “ಇಲ್ಲಿ ಎಷ್ಟೊಂದು ಮನೆಗಳಿಗೆ ಕಟ್ಟಲು ಉಪಯೋಗಿಸಿದ ಕಲ್ಲು ಇಟ್ಟಿಗೆಗಳು ಈಗಾಗಲೇ ಉಪಯೋಗಿಸಿದ್ದನ್ನು ತಂದು ಉಪಯೋಗಿಸಿದಂತಿದೆ. ಬೇರೆಬೇರೆ ಆಕಾರದ ಕಲ್ಲುಗಳು ಮತ್ತು ಅವುಗಳ ಮೇಲೆ ಪದ್ಮಾಸನದಲ್ಲಿ ಕುಳಿತ ಬುದ್ಧ, ಕಮಲ, ಚಕ್ರ ಇವುಗಳ ಉಬ್ಬು ಕೆತ್ತನೆಗಳು; ಅಲ್ಲಿ ಬಿದ್ದ ರಾಶಿರಾಶಿ ಇಟ್ಟಿಗೆ, ಕಲ್ಲುಗಳು, ಪೊದೆಗಳು; ಬೆಳೆದ ಯಾವುದೋ ಮಂದಿರದ ಹಾಳು ಗೋಡೆಗಳು ಕಾಣುತ್ತಿವೆ”. ಜನಗಳು ಬಂದುಹೋಗುತ್ತಿದ್ದ ಒಂದು ದೇವಸ್ಥಾನದ ಮಹಂತನಿಗೆ ಬುಖಾನನ್ ಕೇಳುತ್ತಾರೆ: “ಈ ಹಾಳಾದ ದೇವಸ್ಥಾನಗಳು ಯಾವವು” ಎಂದು. ಅವು ನಾಸ್ತಿಕರ ಮಂದಿರಗಳಾಗಿದ್ದು ಜನ ಅವುಗಳನ್ನು ನಾಶ ಮಾಡಿದ್ದಾರೆ ಎಂದು ಉತ್ತರಿಸುತ್ತಾನೆ ಮಹಂತ. 16ನೇ ಶತಮಾನದಲ್ಲಿ ಬಿಕೋ ಎನ್ನುವ ಆ ಜಾಗಕ್ಕೆ ಬಂದಿದ್ದ ಬ್ರಾಹ್ಮಣ, ಅಲ್ಲಿ ಒಂದು ಹಾಳಾದ ಮಂದಿರದಲ್ಲಿ ನಂತರದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಪೂಜೆ ಪ್ರಾರಂಭಿಸಿರುತ್ತಾನೆ. ನಂತರ ಮೊಘಲ್ ದೊರೆಗಳಿಂದ ಆ ಇಡೀ ಜಾಗವನ್ನು ಉಂಬಳಿ ಪಡೆಯುತ್ತಾನೆ. ಬುಖಾನನ್ ಜೊತೆ ಮಾತಾಡಿದ ಮಹಂತ ಆ ವಂಶದವನಾಗಿರುತ್ತಾನೆ.

ಇದನ್ನೂ ಓದಿ: ಟಿಪ್ಪು v/s ಸಾವರ್ಕರ್‌ ಎಂಬುದಕ್ಕೆ ನನ್ನ ಒಪ್ಪಿಗೆ ಇಲ್ಲ: ಯಡಿಯೂರಪ್ಪ

ಬುಖಾನನ್ ಇಡಿಯ ಬಿಹಾರ ನೇಪಾಳಗಳಲ್ಲಿ ಸಂಪೂರ್ಣವಾಗಿ ನಾಶಗೊಂಡ ಬೌದ್ಧ ವಿಹಾರ, ಮಂದಿರಗಳನ್ನು ನೋಡುತ್ತಾರೆ. ಅವರಿಗೆ ಒಂದು ವಿಷಯ ನಿಶ್ಚಿತವಾಗುತ್ತದೆ. ಈ ನಾಶಗೊಂಡ ಸಂಸ್ಕೃತಿ ಆಗಿನ ಬ್ರಾಹ್ಮಣ ಸಂಸ್ಕೃತಿಗಿಂತ ಪುರಾತನವಾದದ್ದು ಮತ್ತು ಶ್ರೇಷ್ಠವಾದದ್ದು ಎಂದು. ಹೇಳಿ ಪಂಡಿತರೇ, ಗ್ರೀಸ್, ಬ್ಯಾಕ್ಟ್ರಿಯಾ ಪ್ರದೇಶಗಳಿಂದ ಮೈಸೂರಿನವರೆಗೂ ವ್ಯಾಪಿಸಿದ ಬೌದ್ಧ ಧರ್ಮ ಒಮ್ಮಿಂದೊಮ್ಮೆಲೆ ಈ ನೆಲದಿಂದ ಹೇಗೆ ಅವಸಾನ ಹೊಂದಿತು? ಅದೂ ಜನಮಾನಸದಿಂದಲೇ ಇಲ್ಲವಾಗುವಷ್ಟು. ಬುದ್ಧನ ಮೂರ್ತಿಗಳ ನಿರ್ಮಾಣ ಪ್ರಾರಂಭವಾದದ್ದು ಕನಿಷ್ಕನ ಕಾಲದಲ್ಲಿ. ನಂತರದಲ್ಲಿ ಬೌದ್ಧ ಧರ್ಮದ ಅವನತಿಯ ಕಾಲದಲ್ಲಿ ಇಡೀ ಭಾರತದ ತುಂಬಾ ತುಂಬಿದ್ದ ವಿಹಾರಗಳು, ಬುದ್ಧನ ಮಂದಿರಗಳನ್ನು ಹಾಳುಗೆಡವಲಾಯಿತು; ಇಲ್ಲವೆ ವೈದಿಕರು ತಮ್ಮ ಸ್ವಾಧೀನ ಮಾಡಿಕೊಂಡರು. ಬುದ್ಧ ಅವಲೋಕಿತೇಶ್ವರನ ವಿಗ್ರಹಗಳನ್ನು ವಿಷ್ಣುವಿನ ವಿಗ್ರಹವಾಗಿ ರೂಪಾಂತರಿಸಿ ತಮ್ಮ ಹೊಟ್ಟೆಪಾಡಿಗೆ ದಾರಿಮಾಡಿಕೊಂಡರು. ಸ್ತೂಪಗಳನ್ನು ಶಿವಲಿಂಗಗಳಾಗಿ ರೂಪಾಂತರಿಸಲಾಯಿತು. ಬೌದ್ಧ ಬಿಕ್ಕುಗಳನ್ನು ಸಾಯಿಸಲಾಯಿತು ಇಲ್ಲವೇ ಅವರು ಈ ಉಪಖಂಡದಿಂದಲೇ ಓಡಿಹೋಗುವಂತೆ ಮಾಡಲಾಯಿತು.

ವೃಷಾಂಕನೆಂಬೊಬ್ಬ ವ್ಯಕ್ತಿ ಬೌದ್ಧ ಧರ್ಮವನ್ನು ಸನಾತನ ಹಿಂದು ಧರ್ಮದ ಕವಲು ಎನ್ನುತ್ತಾರೆ. ಪುರೋಹಿತಶಾಹಿ ವೈದಿಕ ಧರ್ಮದ ವರ್ಣಸಿದ್ಧಾಂತವನ್ನು ಮೂಲದಲ್ಲೇ ವಿರೋಧಿಸುವ ಬೌದ್ಧ ಧರ್ಮ ಅದು ಹೇಗೆ ಹಿಂದು ಧರ್ಮದ ಕವಲಾಗುತ್ತದೆ? ಬೌದ್ಧ ಧರ್ಮ ವಿವರಿಸುವ ಮೂರು ಮುಖ್ಯ ತತ್ವಗಳು ಅನಿತ್ಯ, ಅನತ್ತ ಮತ್ತು ದುಃಖ; ಇವು ಯಾವುವೂ ವೈದಿಕ ಧರ್ಮದಲ್ಲಿಲ್ಲ. ಪ್ರೀತಿ, ಕರುಣೆ ಸಮಾನತೆಗಳು ಬೌದ್ಧ ಧರ್ಮದ ಅಡಿಗಲ್ಲಾಗಿವೆ.

ವೇದ ಉಪನಿಷತ್ತುಗಳನ್ನು ಬುದ್ಧ ತಿರಸ್ಕರಿಸಲಿಲ್ಲ ಎನ್ನುತ್ತಾರೆ. ನಿಜ, ಯಾಕೆಂದರೆ ಆಗ ವೇದ ಉಪನಿಷತ್ತುಗಳ ರಚನೆಯೇ ಆಗಿರಲಿಲ್ಲ. ಶ್ರೀಯುತ ಪ್ರಕಾಶ ಮಲ್ಪೆ ಎನ್ನುವ ಇನ್ನೊಬ್ಬ ಪಂಡಿತರು, “ಬುದ್ಧ ಸಂಸ್ಕೃತದಲ್ಲಿ ತುಂಬಾ ಜಾಣನಾಗಿದ್ದ. ಅವನು ಭಗವದ್ಗೀತೆಯನ್ನೇ ಜನಸಾಮಾನ್ಯರಿಗೆ ಪಾಲಿ ಭಾಷೆಯಲ್ಲಿ ಉಪದೇಶಿಸಿದ.. ದುಃಖಕ್ಕೆ ಕಾರಣ ಹುಡುಕ ಹೊರಟ ಬುದ್ಧ ತನ್ನ ತಂದೆತಾಯಿಗಳಿಗೆ ದುಃಖವನ್ನೇ ಉಂಟುಮಾಡಿದ” ಎಂದು ಒಂದು ’ಸಂವಾದ’ ಎನ್ನುವ ಯುಟ್ಯೂಬ್ ಚಾನಲ್‌ನ ವಿಡಿಯೋದಲ್ಲಿ ಹೇಳುತ್ತಾರೆ. ಬುದ್ಧರ ತತ್ವಗಳೊಂದಿಗೆ ಸಂವಾದ, ಅನುಸಂಧಾನ ಮಾಡದವರು ಹೀಗೆ ಸುಳ್ಳುಗಳನ್ನು, ಕಲ್ಪಿತ ಕಥೆಗಳನ್ನು ಹರಿಬಿಟ್ಟು ಜನರಲ್ಲಿ ಸುಳ್ಳನ್ನು ಬಿತ್ತಿ ನಂಬಿಸುವ ಕೆಲಸವನ್ನು ನಾಚಿಕೆಯಿಲ್ಲದೆ ಮಾಡುತ್ತಲೇ ಇದ್ದಾರೆ. ಪಾಲಿ ಮತ್ತು ಪ್ರಾಕೃತಗಳು ಉತ್ತರ ಭಾರತದ ಮೂಲ ಭಾಷೆಗಳು. ಅವು ಸಂಸ್ಕೃತದಿಂದ ಹುಟ್ಟಲಿಲ್ಲ; ಬದಲಾಗಿ ಸಂಸ್ಕೃತವೇ ಅವುಗಳಿಂದ ಹುಟ್ಟಿತು. ಸುಳ್ಳುಸುಳ್ಳೇ ಸಂಸ್ಕೃತವನ್ನು ಜಗತ್ತಿನ ತಾಯಿಭಾಷೆ ಎಂದು ಕಣ್ಕಟ್ಟು ಮಾಡಲಾಗಿದೆ. ಪಾಟಲಿಪುತ್ರ, ಉಜ್ಜೈನಿ, ತಕ್ಷಶಿಲ ಹಾಗೂ ಬ್ಯಾಕ್ಟ್ರಿಯಾ, ಗ್ರೀಕ್‌ಗಳ ಜೊತೆ ನಡೆದ ವ್ಯಾಪಾರ, ಸಾಂಸ್ಕೃತಿಕ ಸಂಬಂಧಗಳಲ್ಲಿ ಸಂಪರ್ಕ ಭಾಷೆಯಾಗಿ ಸಂಸ್ಕೃರಿತ ಭಾಷೆ ಸಂಸ್ಕೃತ ಹುಟ್ಟಿಕೊಂಡಿತು. ಅಶೋಕ ಇಡೀ ಭರತಖಂಡದ ಉದ್ದಗಲಕ್ಕೂ ಧಮ್ಮ ಲಿಪಿಯಲ್ಲಿ, ಬ್ಯಾಕ್ಟ್ರಿಯಾ ಗ್ರೀಸ್‌ಗಳಲ್ಲಿ ಕರೋಷ್ಟಿ ಲಿಪಿಯಲ್ಲಿಯೂ ಶಾಸನಗಳನ್ನು ಬರೆಸಿದ್ದಾನೆ. ಎಲ್ಲಿಯೂ ಸಂಸ್ಕೃತದಲ್ಲಿಲ್ಲ. ಗುಪ್ತರ ಕಾಲದಲ್ಲೂ ಸಂಸ್ಕೃತ ಇರಲಿಲ್ಲ. ನಂತರದಲ್ಲಿ ಬೆಳೆದುಬಂತು. ಮತ್ತು ದಕ್ಷಿಣದಿಂದ ಉತ್ತರದವರೆಗೂ ಪಂಡಿತರ ಭಾಷೆಯಾಯ್ತು. ಮಹಾಯಾನದ ಪಂಡಿತರು ಸಂಸ್ಕೃತವನ್ನೇ ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ಮಾಡಿಕೊಂಡರು. ಅಶೋಕನ ಕಾಲದಲ್ಲಿ ಸಂಸ್ಕೃತ ಯಾರದ್ದಾದರೂ ತಾಯಿಭಾಷೆಯಾಗಿದ್ದರೆ ಅಶೋಕ ತನ್ನ ಕೆಲ ಶಿಲಾಲಿಪಿಗಳಲ್ಲಾದರೂ ಅದನ್ನು ಬಳಸುತ್ತಿದ್ದ. ನಂತರದ ಬೌದ್ಧ ಪರಂಪರೆ, ಜೈನ ಪರಂಪರೆಗಳು ತಮ್ಮ ಜೀವ ಕರುಣೆ ಅಹಿಂಸೆಗಳನ್ನು ನೀತಿಕತೆಗಳ ಮೂಲಕ ಹೇಳುವ ಪರಂಪರೆಯನ್ನು ಬೆಳೆಸಿಕೊಂಡವು. ಇಂತಹ ಅನೇಕ ಕಥೆಗಳನ್ನು ವೈದಿಕರು ತಮ್ಮಕಾವ್ಯ ಪುರಾಣಗಳಿಗೆ ಎತ್ತಿಕೊಂಡರು. ದಶರಥ ಜಾತಕ, ದೇವಧಮ್ಮ ಜಾತಕ, ಯಕ್ಷ ಜಾತಕ, ಸಾಮ, ವಿದುರ ಜಾತಕ, ನಿಮಿ ಜಾತಕ, ಘತ ಪಂಡಿತ ಜಾತಕ ಇವು ಕೆಲವೇ ಕೆಲವು ಉದಾಹರಣೆಗಳು ಮಾತ್ರ.

ನಮ್ಮ ಕರ್ನಾಟಕದಲ್ಲಿಯೇ ಸನ್ನತಿಯಲ್ಲಿ ಬುದ್ಧವಿಹಾರವನ್ನು ನಾಶ ಮಾಡಿ ಚಂದ್ರಲಾಪರಮೇಶ್ವರಿ ದೇವಸ್ಥಾನ ಕಟ್ಟುತ್ತಾರೆ. ದೇವಸ್ಥಾನದ ಜೀರ್ಣೋದ್ಧಾರದ ಸಮಯದಲ್ಲಿ 1989ರಲ್ಲಿ ಇದು ಜಗತ್ತಿಗೇ ಗೊತ್ತಾಗುತ್ತದೆ. ಆಗ ಯಾವ ವೈದಿಕರೂ ಹೀಗೆ ವಿಹಾರವನ್ನು ನಾಶಪಡಿಸಿದ ಅನ್ಯಾಯವನ್ನು ಖಂಡಿಸಲಿಲ್ಲ.

ಬುದ್ಧರು ಜಾತಿವರ್ಣಗಳು ಯಾವ ದೇವರ ನಿರ್ಮಾಣವೂ ಅಲ್ಲ, ಅದು ಮನುಷ್ಯ ಸೃಷ್ಟಿ ಎಂದೇ ಹೇಳಿದರು: “ನ ಜಟಾಹಿ ನ ಗೊತ್ತೇನ ನ ಚಜ್ಜಾ ಹೋತಿ ಬ್ರಾಹ್ಮಣೋ”, ಅಂದರೆ ಜಟೆಯಿಂದಾಗಲಿ, ಗೋತ್ರದಿಂದಾಗಲಿ, ಹುಟ್ಟಿನಿಂದಾಗಲಿ ಒಬ್ಬನು ಬ್ರಾಹ್ಮಣನಾಗುವದಿಲ್ಲ. ಬಹಳಷ್ಟು ಸೂತ್ತಗಳಲ್ಲಿ ಬಿಕ್ಖುಗಳಿಗೆ ಮತ್ತು ಸಾಮಾನ್ಯ ಗೃಹಸ್ಥರಿಗೆ ಹೀಗೆ ಉಪದೇಶ ಮಾಡಿದ್ದಾರೆ. ಆದರೆ ಭಗವದ್ಗೀತೆ ಮಾತ್ರ ಸ್ಪಷ್ಟವಾಗಿ ವರ್ಣ ವ್ಯವಸ್ಥೆ ಹುಟ್ಟಿನಿಂದ ಬಂದದ್ದು ಎಂದು ಅದನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತದೆ: “ಚಾತುವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃಋ ತಸ್ಯ ಕರ್ತಾರ ಮಪಿ ಮಾಂ ವಿದ್ಧ್ಯಕರ್ತಾರಮವ್ಯಯಂ ಋಋಭ”. (ಗೀತೆ:4-13)

ಇದನ್ನೂ ಓದಿ: ದೆಹಲಿಯಲ್ಲಿ ಗೃಹಬಳಕೆಯ ಅಡುಗೆ ಅನಿಲ (LPG) ದರ 50 ರೂ. ಏರಿಕೆ; ಸಿಲಿಂಡರ್‌ಗೆ 1,103ರೂ.

ಗುಣಕರ್ಮ ವಿಭಾಗದ ಮೂಲಕ ಚಾತುವರ್ಣ್ಯವು ನನ್ನಿಂದ ಸೃಷ್ಟಿಸಲ್ಪಟ್ಟಿತು ಎಂದು ಸ್ಪಷ್ಟವಾಗಿದೆ. ಆದರೆ ಇದಕ್ಕೆ ಕೆಲ ವೈದಿಕರ ಸಮಜಾಯಿಷಿ ಹೀಗಿದೆ. ಎಲ್ಲರೂ ಮೊದಲು ಶೂದ್ರರಾಗಿಯೇ ಹುಟ್ಟುವದು, ಸಂಸ್ಕಾರಗಳಿಂದ ಒಬ್ಬನು ಬ್ರಾಹ್ಮಣನಾಗುತ್ತಾನೆ. (ಜನ್ಮನಾ ಜಾಯತೆ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೆ-ಸ್ಕಂದ ಪುರಾಣ). ಹಾಗಾದರೆ ಯಾರು ಬೇಕಾದರೂ ಬ್ರಾಹ್ಮಣ ಅಥವಾ ಕ್ಷತ್ರಿಯರಾಗಬಹುದು. ಅಂತಹ ವ್ಯವಸ್ಥೆ ಎಲ್ಲಿದೆ ಮತ್ತು ಎಂದು ಇತ್ತು? ಬ್ರಾಹ್ಮಣನ ಮಕ್ಕಳು ಬ್ರಾಹ್ಮಣರೇ ಆಗುತ್ತಾರೆ, ಶೂದ್ರರ ಮಕ್ಕಳು ಶೂದ್ರರೇ ಆಗುತ್ತಾರೆ ಹುಟ್ಟಿನಿಂದಲೇ. ಇದು ಆಗಲೂ ಇತ್ತು, ಈಗಲೂ ಇದೆ. ಹೀಗಿರುವಾಗ ಸಮಾನತೆ ಎಲ್ಲಿಯದು? ಸಮಾನತೆಯ ಆಶಯವೇ ಇಲ್ಲದ ಧರ್ಮ ಎಲ್ಲಿಯದು? ಬರೀ ಇಷ್ಟೇ ಅಲ್ಲ, ಗೀತೆ ಮುಂದುವರಿದು ಯಾವ ವರ್ಣಭೇದವಿಲ್ಲದೆ ಸ್ತ್ರೀಯರನ್ನು ಕೂಡ ಶೂದ್ರರ ಸಾಲಿಗೆ ಸೇರಿಸುತ್ತದೆ:
“ಮಾಂ ಹಿಂ ಪಾರ್ಥ ವ್ಯಪಾಶ್ರಿತ್ಯ ಯೆsಪಿ ಸ್ಯುಃ ಪಾಪಯೋನಯಃಋ

ಸ್ರೀಯೋ ವೈಶ್ಯಾಸ್ತತಾ ಶೂದ್ರಾಸ್ತೇಪಿ ಯಾಂತಿ ಪರಾಂ ಗತಿಂಋಋ” (ಭ.ಗೀತಾ: 9-32)
“ಪಾಪಯೋನಿಜರಾದ ಸ್ತ್ರೀಯರು, ವೈಶ್ಯರು ಹಾಗೂ ಶೂದ್ರರೂ ಕೂಡ ನನ್ನನ್ನು ಆಶ್ರಯಿಸಿ ಪರಮಗತಿಯನ್ನು ಹೊಂದುತ್ತಾರೆ” ಎಂದು.

ಇಲ್ಲಿ ಮೂವರೂ ಪಾಪಯೋನಿಜರೇ. ಪಾಪಯೋನಿ ಅಂದರೆ ಹುಟ್ಟಿನಿಂದಲೇ ನೀಚವಾದದ್ದು. ಇನ್ನು ಇವರು ಹೇಳುವ ’ಗುಣಕರ್ಮ ವಿಭಾಗಶಃ’ ಎಲ್ಲಿಂದ ಬಂತು. ಇನ್ನು ಬ್ರಾಹ್ಮಣರು, ರಾಜರ್ಷಿಗಳು ಪುಣ್ಯಯೋನಿಗಳಂv !

ಮನುಸ್ಮೃತಿ ಒರಟಾಗಿ ರೂಕ್ಷವಾಗಿ ಹೇಳಿದ್ದನ್ನೇ ಗೀತೆಯು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಸೂಕ್ಷ್ಮವಾಗಿ, ’ಸುಂದರ’ಗೊಳಿಸಿದ ಭಾಷೆಯಲ್ಲಿ ಹೇಳುತ್ತದೆ. ತಮ್ಮ ಜಾತಿ ಶ್ರೇಷ್ಠತೆಯನ್ನು ಸಾರುವದು, ಅದೇ ಅಜೆಂಡಾ, ಮತ್ತೇನಿಲ್ಲ.

ಇಲ್ಲಿ ಗೀತೆಯ ಭಗವಾನ್ ದೇವರಾಗಿದ್ದಾನೆ. ಭಗವಾನ್ ಉವಾಚ ಎಂದರೆ ದೇವರೇ ಮಾತಾಡುತ್ತಿದ್ದಾನೆ. ಇಂತಹ ಸ್ಥಿತಿಯಲ್ಲಿ ಪ್ರಶ್ನಿಸುವದು- ಸಂವಾದ ಹೇಗೆ ಸಾಧ್ಯ? ಹಾಗಿದ್ದ ಮೇಲೆ ಇದೂ ಕೂಡ ಬೈಬಲ್, ಕುರಾನ್‌ಗಳ ಹಾಗೆ ಸೆಮೆಟಿಕ್ ಧರ್ಮಗಳ ಗುಂಪಿಗೆ ಸೇರುತ್ತದೆ ಅಂತಾಯ್ತು. ಇದು ದೇವ ವಾಣಿ (Gospel), ಆದ್ದರಿಂದ ಪ್ರಶ್ನಿಸಲೇಬಾರದು! ಆದರೆ ಬುದ್ಧರು ತಮ್ಮ ದರ್ಶನವನ್ನು ಅತ್ಯಂತ ವೈಜ್ಞಾನಿಕವಾಗಿ ಕಂಡರು ಮತ್ತು ಬೇರೆಯವರಿಗೂ ಪ್ರಶ್ನಿಸಿ, ಪರೀಕ್ಷಿಸಿ ನೋಡಲು ಹೇಳಿದರು: “ಸ್ವಾಖ್ಖಾತೋ ಭಗವತಾಧಮ್ಮೋ ಸಂಧಿಟ್ಟಿಕೋ ಅಕಾಲಿಕೋ ಏಹಿಪಸ್ಸಿಕೊ ಪಚ್ಚತ್ತಂ ವೇದಿತಬ್ಬೋ ವಿನ್ಗೂಹೀತಿಋಋ”. ಅಂದರೆ ನೀವೇ ಬಂದು ಪರೀಕ್ಷಿಸಿ ಎಂದು ಹೇಳುತ್ತಾರೆ.

ಸಾಮಾನ್ಯರೂ ಸಂವೇದನೆಗಳ ಮೂಲಕ ಧಮ್ಮವನ್ನು ಅರಿಯಬಹುದಾಗಿದೆ. ಅಂದರೆ ಸಂವೇದನೆಗಳನ್ನು ಅರಿಯುವ ಮೂಲಕವಾಗಿಯೇ ಪರಮ ಸತ್ಯವನ್ನು ತಲುಪಬಹುದಾಗಿದೆ. ಬುದ್ಧರನ್ನು ನಾವು ಭಗವಾನ್ ಎನ್ನುತ್ತೇವೆ. ಅಂದರೆ ದೇವರಲ್ಲ. ಭಗವಾನ್ ಎಂದರೆ ಎಲ್ಲ ಸದ್ಗುಣ ಸಂಪತ್ತು ಇದ್ದವನು, ಭಗವಾನ್ ಎಂದರೆ ಎಲ್ಲ ಬಂಧಗಳನ್ನು ಕತ್ತರಿಸಿ ಸಂಸಾರ ಸಾಗರವನ್ನು ದಾಟಿದವನು ಎಂದರ್ಥ. ಇಲ್ಲಿ ವೇದ, ವೇದನಾ ಎಂದರೆ ಅರಿಯುವದು, ಅನುಭವಕ್ಕೆ ಬರುವದು ಎಂದರ್ಥ. ವೇದನಾ ಇದು ಪಾಲಿ ಶಬ್ದ. ಭಗವಾನರು ಅಂದಿನ ಯಜ್ಞಯಾಗಗಳ ಹೆಸರಿನಲ್ಲಿಯ ಹಿಂಸೆಯನ್ನು, ಶೋಷಣೆಯನ್ನು ಖಂಡಿಸಿದರು. ಅವರು ಶೀಲಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟರು.

ಬುದ್ಧರನ್ನು ದೇವರನ್ನಾಗಿಸಿ ಅವರ ತತ್ವಗಳನ್ನು ಕಬಳಿಸುವ ಯತ್ನ ಆಗಿನಿಂದಲೂ ನಡದೇ ಇದೆ. ಅವರಿಗೆ ಯಶ ಸಿಕ್ಕಿಲ್ಲ; ಈಗ ಮತ್ತೆ ಪ್ರಯತ್ನಿಸುತ್ತಿದ್ದಾರೆ. ಬುದ್ಧರ ತತ್ವಗಳನ್ನು, ಅವರ ಮೈತ್ರಿ, ಕರುಣೆಗಳನ್ನು ನಮಗಾಗಿ, ಮಾನವಕುಲದ ಉಳಿವಿಗಾಗಿ ಉಳಿಸಿಕೊಳ್ಳುವದು ನಮ್ಮ ಜವಾಬ್ದಾರಿಯಾಗಿದೆ. ಸ್ವಾರ್ಥಪೀಡಿತವಾದ ವೈದಿಕ ಮನಸ್ಸುಗಳಿಗೂ ಬುದ್ಧರ ಕರುಣೆ ಸಿಕ್ಕಲಿ ಎಂದೇ ಕೇಳಿಕೊಳ್ಳುತ್ತೇನೆ.

“ಯೇ ಧಮ್ಮಾ ಹೇತುಪ್ಪಭವಾ ತೇಸಂ ಹೇತುಂ ತಥಾಗತೋ ಆಹ
ತೇಸಂಚ ಯೋ ನಿರೋಧೋ ಏವಂ ವಾದಿ ಮಹಾಸಮಣೋಋಋ”
ಅಂದರೆ “ಕಾರಣದಿಂದ ಕಾರ್ಯವಿಧಾನವು ಉತ್ಪನ್ನವಾಗುತ್ತದೆ. ಜ್ಞಾನೋದಯ ಪಡೆದವರು ಕಾರಣವನ್ನು ಮತ್ತು ಅದರ ನಿವಾರಣೆಯನ್ನು ಬಿಡಿಸಿ ಹೇಳಿದ್ದಾರೆ. ಇದು ಮಹಾಸಮಣರ ಉಪದೇಶ”. (ಸಾರನಾಥ ಮತ್ತು ಬೋಧಗಯಾದ ಶಿಲಾಲಿಪಿಗಳಿಂದ.)
ಭವತು ಸಬ್ಬ ಮಂಗಳಂ

 

ರಮಾಕಾಂತ ಪುರಾಣಿಕ

ಮೂಲತಃ ವಿಜಯಪುರ ಜಿಲ್ಲೆಯವರು.BSNLನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೌದ್ಧ ಸಾಹಿತ್ಯ, ವಚನ ಸಾಹಿತ್ಯ ಮತ್ತು ಕಾವ್ಯದಲ್ಲಿ ಆಸಕ್ತಿ,
ಓದು ಮತ್ತು ಬರಹ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...