Homeಕರ್ನಾಟಕಮೈಸೂರು: ಹಿರಿಯ ಪತ್ರಕರ್ತ ‘ಹಾಡುಪಾಡು ರಾಮು’ ನಿಧನ

ಮೈಸೂರು: ಹಿರಿಯ ಪತ್ರಕರ್ತ ‘ಹಾಡುಪಾಡು ರಾಮು’ ನಿಧನ

- Advertisement -
- Advertisement -

ಮೈಸೂರಿನ ಪ್ರಾದೇಶಿಕ ದಿನಪತ್ರಿಕೆಯಾದ ‘ಆಂದೋಲನ’ದ ‘ಹಾಡುಪಾಡು’ ಸಂಚಿಕೆಗೆ ವಿಶೇಷತೆಯನ್ನು ತಂದುಕೊಟ್ಟು ‘ಹಾಡುಪಾಡು ರಾಮು’ ಎಂದೇ ಖ್ಯಾತರಾಗಿದ್ದ, ಹಿರಿಯ ಪತ್ರಕರ್ತ ಟಿ.ಎಸ್.ರಾಮಸ್ವಾಮಿ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.

ಹೃದಯದಂತಿರುವ ಹಾಡುಪಾಡು ಸಂಚಿಕೆಯ ಆರಂಭಕ್ಕೆ ಮೇಟಿಯಾಗಿದ್ದ ‘ಹಾಡುಪಾಡು ರಾಮು’ ಎಂದೇ ಖ್ಯಾತಿಯಾಗಿದ್ದ ಹಿರಿಯ ಪತ್ರಕರ್ತ ಟಿ.ಎಸ್.ರಾಮಸ್ವಾಮಿ (69) ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ.

ನಗರದ ಸರಸ್ವತಿಪುರಂನ 9ನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ಮುಂಜಾನೆ 3.20ರ ಸಮಯದಲ್ಲಿ ಹೃದಯಾಘಾತಕ್ಕೊಳಗಾಗಿದ್ದಾರೆ.

ಪತ್ರಕರ್ತ ಟಿ ಎಸ್ ರಾಮಸ್ವಾಮಿ ಅವರು ಸೋದರಿ ರಾಜಲಕ್ಷ್ಮಿ, ಸೋದರ ಟಿ ಎಸ್ ವೇಣುಗೋಪಾಲ್, ನಾದಿನಿ ಶೈಲಜಾ, ಸೋದರಿಯ ಪತಿ ಡಾ. ಎಸ್ ತುಕಾರಾಮ್, ಮತ್ತೊಬ್ಬ ಸೋದರಿ ದಿ. ಕುಮುದವಲ್ಲಿ ಅವರ ಪತಿ ರಾಘವೇಂದ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಅವಿವಾಹಿತರಾಗಿದ್ದ ರಾಮು ಅವರು, ಪತ್ರಿಕಾರಂಗದಲ್ಲಿ ಪ್ರಾಮಾಣಿಕತೆಗೆ ಮಾದರಿಯಾಗಿದ್ದರು. ನೊಂದವರು, ಬಡವರ ಏಳಿಗೆಗೆ ಪತ್ರಿಕೆಗಳು ಸ್ಪಂದಿಸಬೇಕಾದ ಬಗೆಯನ್ನು ಪ್ರತಿಕ್ಷಣ ಚಿಂತಿಸುತ್ತಿದ್ದರು. ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದರು. ರಾಮು ಅವರ ಗರಡಿಯಲ್ಲಿ ಪಳಗಿದ ದೊಡ್ಡ ಸಂಖ್ಯೆಯ ಪತ್ರಕರ್ತರು ಮೈಸೂರು ಸೇರಿದಂತೆ ರಾಜ್ಯಾದ್ಯಂತ ಇದ್ದಾರೆ.

ಅಗ್ನಿಸೂಕ್ತ, ವಿಷ್ಣುಕ್ರಾಂತಿ ಮತ್ತು ಇತರ ಪದ್ಯಗಳು, ರಾಮು ಕವಿತೆಗಳು ಅವರ ಪ್ರಕಟಿತ ಕವನ ಸಂಕಲನಗಳು, ‘ರಾಮು ಕವಿತೆಗಳು’ ಕೃತಿಯನ್ನು ಋತುಮಾನ ಪ್ರಕಾಶನ ಸಂಸ್ಥೆಯು ಪ್ರಕಟಿಸಿದಾಗ ತಮ್ಮ ಹೆಸರನ್ನು ಉಲ್ಲೇಖಿಸದಂತೆ ಅವರು ಹೇಳಿದ್ದರು.

ಆಂದೋಲನ ಪತ್ರಿಕೆಯ ‘ಹಾಡು ಪಾಡು’ ಪುರವಣಿ ಅವರ ನೇತೃತ್ವದಲ್ಲಿ ರೂಪುಗೊಳ್ಳುತ್ತಿತ್ತು. ಅದರಿಂದ ಆಂದೋಲನ ‘ಹಾಡುಪಾಡು ರಾಮು’ ಎಂದೇ ಅವರನ್ನು ಓದುಗರು ಕರೆಯುತ್ತಿದ್ದರು. ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಚಿಂತಕ ದೇವನೂರ ಮಹದೇವ, ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ, ಎಚ್.ಎಸ್.ರಾಘವೇಂದ್ರ ರಾವ್‌ ಸೇರಿದಂತೆ ಸಾಹಿತ್ಯ ಲೋಕದ ಹಲವರ ಒಡನಾಡಿಗಳಾಗಿದ್ದರು.

ಅವರ ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಧ್ಯಾಹ್ನ 1.30ಕ್ಕೆ ನಿಗದಿಯಾಗಿತ್ತು.

ರಾಮು ನಿಧನರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದು, “ರಾಮು ಎಂದೇ ಜನಪ್ರಿಯರಾಗಿದ್ದ ಪತ್ರಕರ್ತ ಮತ್ತು ಕವಿ ಟಿ ಎಸ್ ರಾಮಸ್ವಾಮಿ ಅವರ ಅನಿರೀಕ್ಷಿತ ಸಾವು ನನ್ನನ್ನು ಆಘಾತಕ್ಕೀಡು ಮಾಡಿದೆ. ಮೈಸೂರಿನ ಸಾಹಿತ್ಯ, ಸಾಂಸ್ಕೃತಿಕ ಮತ್ತು ಮಾಧ್ಯಮ ಕ್ಷೇತ್ರ ರಾಮು ಅವರ ಅಗಲಿಕೆಯಿಂದ ಬಡವಾಗಿದೆ. ಹಲವಾರು ಬರಹಗಾರರು ಮತ್ತು ಪತ್ರಕರ್ತರನ್ನು ಸಲಹಿ ಬೆಳೆಸಿದ್ದ ರಾಮು ನನಗೂ ಆತ್ಮೀಯ ಸ್ನೇಹಿತರಾಗಿದ್ದರು. ರಾಮು ಅವರ ಸಾವಿನಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಗೆಳೆಯರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಸಂತಾಪ ಸೂಚಿಸಿದ್ದಾರೆ.

ಸಾಹಿತಿ ದೇವನೂರ ಮಹಾದೇವ ಅವರ ಬರಹ, ಚಿಂತನೆಗಳಿಗೆ ವೇದಿಕೆಯಾದ ‘ನಮ್ಮ ಬನವಾಸಿ’ ಫೇಸ್‌ಬುಕ್‌ ಪೇಜ್‌ನಲ್ಲಿ ಸಂತಾಪ ಸೂಚಿಸಲಾಗಿದೆ. “ದೇವನೂರರ ಆಪ್ತ ಸಖ, ‘ನಮ್ಮ ಬನವಾಸಿ’ ಬಳಗದ/ ಅಂತರ್ಜಾಲ ತಾಣದ ಹಿಂದಿನ ಚೈತನ್ಯ ಶಕ್ತಿ, ಆಂದೋಲನ ಪತ್ರಿಕೆಯ ‘ಹಾಡುಪಾಡು ರಾಮು’, ಹೆಚ್ಚಿನವರಿಂದ ‘ರಾಮುಕಾಕ’, ‘ರಾಮು ಮಾಮ’ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಪತ್ರಕರ್ತ, ಕವಿ, ಮೈಸೂರಿನ ‘ರಾಮು’ ಅವರಿಗೆ ನಮ್ಮ ಬನವಾಸಿ ಬಳಗದಿಂದ ಹೃದಯಪೂರ್ವಕ, ದುಃಖತಪ್ತ ಅಂತಿಮ‌ ನಮನಗಳು” ಎಂದು ತಿಳಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...