Homeಮುಖಪುಟರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರ: ಬಹುಮತವಿಲ್ಲದೆ ನಿಯಮಗಳ ಉಲ್ಲಂಘನೆ..?

ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರ: ಬಹುಮತವಿಲ್ಲದೆ ನಿಯಮಗಳ ಉಲ್ಲಂಘನೆ..?

ಮಸೂದೆಗಳನ್ನು ಆಯ್ಕೆ ಸಮಿತಿಗೆ ಕಳುಹಿಸಲು ಮುಂದಾದಾಗ ಮತಗಳ ವಿಭಜನೆಗೆ ಒತ್ತಾಯಿಸಿದ ಮೂವರು ಸಂಸದರಲ್ಲಿ ಕನಿಷ್ಠ ಇಬ್ಬರು ಅವರ ಸ್ಥಾನಗಳಲ್ಲಿದ್ದರು ಎಂದು ದೃಶ್ಯಾವಳಿಗಳು ತೋರಿಸುತ್ತವೆ.

- Advertisement -
- Advertisement -

ದೇಶಾದ್ಯಂತ ರೈತ ಸಂಘಟನೆಗಳು, ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸೆಪ್ಟಂಬರ್ 20 ರಂದು ಕೃಷಿ ಮಸೂದೆಗಳನ್ನು ಅಂಗೀಕರಿಸಿದೆ. ಆದರೆ ಅಂದು ರಾಜ್ಯಸಭೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕೃಷಿ ಮಸೂದೆಗಳ ಅಂಗೀಕಾರದಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಿ ಬಹುಮತದೊಂದಿಗೆ ಅಂಗೀಕರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಕೃಷಿ ಮಸೂದೆಗಳು ಅಂಗೀಕಾರವಾದ ದಿನ ಅಂದರೆ ಸೆಪ್ಟೆಂಬರ್‌ 20ರಂದು ರಾಜ್ಯಸಭಾದಲ್ಲಿ ನಡೆದ ಘಟನೆಗಳ ವಿಡಿಯೋ ದೃಶ್ಯಾವಳಿಗಳು ಬೇರೆಯದ್ದೇ ಕಥೆ ಹೇಳುತ್ತಿವೆ.

ಕೃಷಿ ಮಸೂದೆಗಳನ್ನು ಮಂಡಿಸುವ ವೇಳೆ ಸದನದ ಸಮಯ ವಿಸ್ತರಿಸಲು ಸರ್ವಾನುಮತ ಒಪ್ಪಿಗೆ ಪಡೆದಿಲ್ಲ ಮತ್ತು ಧ್ವನಿ ಮತದ ಮೂಲಕ ಮತಗಳ ವಿಭಜನೆಗೆ ಕರೆ ಕೊಟ್ಟಾಗ ವಿರೋಧ ಪಕ್ಷಗಳ ಸದಸ್ಯರು ತಮ್ಮ ಆಸನಗಳಲ್ಲಿ ಇರಲಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಇದು ಸುಳ್ಳು ಎಂದು ಎನ್‌ಡಿಟಿವಿ ಬಿಡುಗಡೆಮಾಡಿರುವ ವಿಡಿಯೋ ದೃಶ್ಯಾವಳಿಗಳು ಸಾಕ್ಷ್ಯಾ ನೀಡುತ್ತಿವೆ.

ಇದನ್ನೂ ಓದಿ: ರೈತ ವಿರೋಧಿ ಕಾಯ್ದೆ ವಿರುದ್ದ ರಾಜ್ಯದಾದ್ಯಂತ ಪ್ರತಿಭಟನೆ; ಹೋರಾಟದ ಝಲಕ್

ಈ  ಮಸೂದೆಗಳ ಅಂಗೀಕಾರವು ಭಾರಿ ಗದ್ದಲ, ಗಲಾಟೆಗೆ ಕಾರಣವಾಗಿದ್ದು, ಸದನದಲ್ಲಿ ಕೋಲಾಹಲ ಎಬ್ಬಿಸಿ, ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಎಂಟು ಸದಸ್ಯರನ್ನು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು  ಅಮಾನತುಗೊಳಿಸಿದ್ದರು. ನಂತರ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಸಿಂಗ್ ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಿದರು. “ಸರ್ಕಾರಕ್ಕೆ ಬಹುಮತವಿಲ್ಲದ ಕಾರಣ ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ. ಧ್ವನಿ ಮತದ ಬದಲು ಭೌತಿಕ ಮತ ಚಲಾಯಿಸಿದ್ದರೆ” ಸರ್ಕಾರಕ್ಕೆ ಸೋಲಾಗುತ್ತಿತ್ತು ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಇತ್ತ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹರಿವಂಶ್ ಸಿಂಗ್ ಭೌತಿಕ ಮತದಾನಕ್ಕೆ ಒತ್ತಾಯಿಸಿದಾಗ ಪ್ರತಿಪಕ್ಷದ ಸದಸ್ಯರು ತಮ್ಮ ಸ್ಥಾನಗಳಲ್ಲಿ ಇರಲಿಲ್ಲ. ಹಾಗಾಗಿ ಧ್ವನಿ ಮತದ ಮೂಲಕ ಮಸೂದೆ ಅಂಗೀಕರಿಸಲಾಯಿತು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಂಸದರು
ಅಮಾನತುಗೊಂಡ 8 ಸಂಸದರು ಅಹೋರಾತ್ರಿ ಧರಣಿ ನಡೆಸುತ್ತಿರುವುದು. PC: PTI

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ವಿರೋಧಿಸಿ ಗದ್ದಲ: ಅಧಿವೇಶನದಿಂದ 8 ಸಂಸದರ ಅಮಾನತು

ಸಂಸತ್ತಿನ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಸ್ತಾವನೆಯ ಮೇರೆಗೆ ಉಪಸಭಾಪತಿ ಸದನದ ಒಮ್ಮತವನ್ನು ತೆಗೆದುಕೊಳ್ಳದೆ ಸದನದ ಅವಧಿಯನ್ನು ವಿಸ್ತರಿಸಿದ್ದಾರೆ ಎಂದು ಪ್ರತಿಪಕ್ಷಗಳು ಗದ್ದಲ ಮಾಡಿದ್ದಾ ಮಧ್ಯಾಹ್ನ 1 ಗಂಟೆ ಆಗಿತ್ತು. ಎನ್‌ಡಿಟಿವಿ ಪ್ರಸಾರ ಮಾಡಿರುವ ರಾಜ್ಯಸಭಾ ನಡಾವಳಿಗಳ ವಿಡಿಯೋದಲ್ಲಿ ಮಧ್ಯಾಹ್ನ 1.03 ರ ಸುಮಾರಿಗೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ “ಯಾವುದೇ ಕಾರಣಕ್ಕೂ ಸದನದ ಅವಧಿಯನ್ನು ವಿಸ್ತರಿಸಬಾರದು. ಇಂದು ಮತ್ತು ನಾಳೆ ಪ್ರಶ್ನೆಗಳಿಗೆ ಉತ್ತರಿಸಬಹದು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತವೆ” ಎಂದಿದ್ದಾರೆ.

ಕಳೆದ ಎರಡು ದಶಕಗಳಿಂದ ಸಂಸತ್ ಸದಸ್ಯರಾಗಿರುವ ಡಿಎಂಕೆ ಸಂಸದ ತಿರುಚಿ ಶಿವ “ಸಾಮಾನ್ಯವಾಗಿ, ಸದನದ ಒಮ್ಮತವನ್ನು ತೆಗೆದುಕೊಂಡ ನಂತರ ಸದನದ ಅವಧಿ ವಿಸ್ತರಿಸಲಾಗುತ್ತದೆ. ಆದರೆ ಈ ಬಾರಿ ನಮ್ಮ ಕಡೆ ನೋಡದೆ, 12 ವಿರೋಧ ಪಕ್ಷಗಳ ಸದಸ್ಯರು ತಮ್ಮ ಸದನ ಮುಂದೂಡಬೇಕೆಂದು ಕೇಳಿಕೊಳ್ಳುತ್ತಿದ್ದರೂ ಸಹ, ಸದನದ ಅವಧಿ ವಿಸ್ತರಣೆ ಮಾಡಲಾಯಿತು. ಇದು ರಾಜ್ಯಸಭಾ ನಿಯಮ 37 ರ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದಿದ್ದಾರೆ ಎಂದು ಎನ್‌ಡಿಟಿವಿ ವರದಿಮಾಡಿದೆ.

ಇದನ್ನೂ ಓದಿ: ಸೆ.28ಕ್ಕೆ ಕರ್ನಾಟಕ ಬಂದ್: ಪಂಜಾಬ್‌ನಲ್ಲಿ ಸೆ. 29ರವರೆಗೆ ’ರೈಲ್ ರೋಕೋ’

ಎನ್‌ಡಿಟಿವಿ ಪರಿಶೀಲಿಸಿದ ರಾಜ್ಯಸಭಾ ದೃಶ್ಯಾವಳಿಗಳು, ಮಸೂದೆಗಳನ್ನು ಆಯ್ಕೆ ಸಮಿತಿಗೆ ಕಳುಹಿಸಲು ಮುಂದಾದಾಗ ಮತಗಳ ವಿಭಜನೆಗೆ ಒತ್ತಾಯಿಸಿದ ಮೂವರು ಸಂಸದರಲ್ಲಿ ಕನಿಷ್ಠ ಇಬ್ಬರು ಅವರ ಸ್ಥಾನಗಳಲ್ಲಿ ಕುಳಿತಿದ್ದರು ಎಂದು ತೋರಿಸುತ್ತದೆ.

ಆಯ್ಕೆ ಸಮಿತಿಗೆ ಮಸೂದೆಗಳನ್ನು ಕಳುಹಿಸಲು ಉಪಾಧ್ಯಕ್ಷರು ತಿರುಚಿ ಶಿವ, ಕೆ.ಕೆ.ರಾಗೇಶ್ ಅವರನ್ನು ಗಣನೆಗೆ ತೆಗೆದುಕೊಂಡಾಗ, ಇಬ್ಬರೂ ತಮ್ಮ ತಮ್ಮ ಸ್ಥಾನದಲ್ಲಿ ಇದ್ದುಕೊಂಡು ಮತಗಳ ವಿಭಜನೆಗೆ ಒತ್ತಾಯಿಸಿದ್ದಾರೆ.  ಆಗ ಸಮಯ ಮಧ್ಯಾಹ್ನ 1.10, 1.11. ಇಬ್ಬರ ಮಾತನ್ನು ಧ್ವನಿ ಮತದ ಮೂಲಕ ನಿರಾಕರಿಸಲಾಗಿದೆ.

ಇದನ್ನೂ ಓದಿ: ಕೃಷಿ ಕಾನೂನುಗಳು ನಮ್ಮ ರೈತರನ್ನು ಗುಲಾಮರನ್ನಾಗಿಸುತ್ತವೆ: ರಾಹುಲ್ ಗಾಂಧಿ

ಎನ್‌ಡಿಟಿವಿಯೊಂದಿಗೆ ಮಾತನಾಡಿದ ಸಂಸದ ಕೆ.ಕೆ.ರಾಗೇಶ್, ಮತಗಳ ವಿಭಜನೆಗೆ ಕರೆ ಕೊಟ್ಟಾಗ ಸದಸ್ಯರು ತಮ್ಮ ಸ್ಥಾನಗಳಲ್ಲಿಲ್ಲ ಎಂಬ ಸರ್ಕಾರದ ಆರೋಪವು ’ಶುದ್ಧ ಸುಳ್ಳು’ ಎಂದು ಹೇಳಿದ್ದಾರೆ.

“ಸದನದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಸದಸ್ಯನು ತನ್ನ ಸ್ಥಾನದಿಂದ ವಿಭಜನೆ ಕೇಳಿದಾಗ, ವಿಭಜನೆ ಮೂಲಕ ಮತ ಚಲಾಯಿಸಬೇಕಾಗಿತ್ತು. ಆದರೆ ಉಪಾಧ್ಯಕ್ಷರು ನಾನು ನನ್ನ ಸ್ಥಾನದಲ್ಲಿಲ್ಲ ಎಂದು ಹೇಳುವ ಮೂಲಕ ನನ್ನ ಬೇಡಿಕೆಯನ್ನು ತಿರಸ್ಕರಿಸಿದರು. ರಾಜ್ಯಸಭಾ ಟಿವಿಯ ದೃಶ್ಯಗಳು ಸತ್ಯವನ್ನು ತೋರಿಸುತ್ತದೆ. ನನ್ನ ಸಾಂವಿಧಾನಿಕ ಮತ್ತು ಸದನದ ಹಕ್ಕುಗಳನ್ನು ನಿರಾಕರಿಸಲಾಗಿದೆ. ಸತ್ಯವೆಂದರೆ ಸರ್ಕಾರವು  ಬಹುಮತ ಹೊಂದಿರಲಿಲ್ಲ” ಎಂದು ಸಂಸದ ಕೆ.ಕೆ.ರಾಗೇಶ್ ಹೇಳಿದರು.

ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಸಿಂಗ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಪ್ರತಿಪಕ್ಷಗಳು ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ್ದು, ಇದನ್ನು ಮೇಲ್ಮನೆ ಅಧ್ಯಕ್ಷ ವೆಂಕಯ್ಯ ನಾಯ್ಡು ನಿರಾಕರಿಸಿದ್ದಾರೆ.

ರಾಜ್ಯಸಭಾ ಟಿವಿ ದೃಶ್ಯಗಳು ಸದನದಲ್ಲಿ ಮಸೂದೆ ಅಂಗೀಕರಿಸುವಾಗ ವಿಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೇ ಇರುವುದು, ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಅಮಾನತು ಮಾಡಿರುವುದನ್ನು ತೋರಿಸುತ್ತದೆ. ಹಾಗಾದರೇ ಕೃಷಿ ಮಸೂದೆಗಳ ಜಾರಿಗೆ ಬಹುಮತವಿರಲಿಲ್ಲವೇ..? ಧ್ವನಿ ಮತಕ್ಕೆ ಅಷ್ಟು ವಿರೋಧವಿದ್ದರೂ ಅದನ್ನೇ ಮಾನ್ಯ ಮಾಡಿದ್ದು ಯಾಕೆ ಎಂಬ ಪ್ರಶ್ನೆಗಳು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿವೆ.


ಇದನ್ನೂ ಓದಿ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಸದನದಲ್ಲಿ ಮಾತಾಡಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...