Homeಕರ್ನಾಟಕಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಸದನದಲ್ಲಿ ಮಾತಾಡಿದ್ದೇನು?

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಸದನದಲ್ಲಿ ಮಾತಾಡಿದ್ದೇನು?

ರೈತರ ಬೆಳೆಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ನಿಜವಾದ ಕಾಳಜಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದ್ದರೆ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿ, ತೂಕ ಮತ್ತು ಇತರೆಡೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ.

- Advertisement -
- Advertisement -

ಕೊರೊನಾ ನೆಪದಲ್ಲಿ ರಾಜ್ಯಸರ್ಕಾರ 6 ದಿನಗಳಲ್ಲಿ ವಿಧಾನಸಭಾ ಅಧಿವೇಶನವನ್ನು ಮುಗಿಸಿದೆ. ಈ ಆರು ದಿನಗಳ ಸದನದಲ್ಲಿ ಕೇಂದ್ರದ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗಳ ಮೂಲಕ ತಂದಿದ್ದ ಕೃಷಿ, ಎಪಿಎಂಸಿ ಮತ್ತು ಭೂಸುಧಾರಣಾ ತಿದ್ದುಪಡಿಗಳ ಮೇಲೆಯೇ ಹೆಚ್ಚಿನ ಚರ್ಚೆ ನಡೆದಿದೆ.

ವಿಧಾನಸಭೆಯಲ್ಲಿ ಬಹುಮತ ಹೊಂದಿದ್ದ ಆಡಳಿತರೂಢ ಬಿಜೆಪಿ ಸರ್ಕಾರ ಮೂರು ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆದರೆ ಬಹುಮತ ಹೊಂದಿಲ್ಲದ ವಿಧಾನಪರಿಷತ್ತಿನಲ್ಲಿ ಈ ಮಸೂದೆಗಳು ಅಂಗೀಕಾರವಾಗದೇ ಕಲಾಪ ಅಂತ್ಯಗೊಂಡಿದೆ. ಈ ಆರು ದಿನಗಳ ಅವಧಿಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಸದನದಲ್ಲಿ ಮಾತಾಡಿದ್ದರ ಸಾರ ರೂಪ ಇಲ್ಲಿದೆ.

ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ಪಾತ್ರ:

ಕೊರೊನಾ ಸೋಂಕು ಅನಿಯಂತ್ರಿತವಾಗಿ ಹರಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗೇಡಿತನ ಕಾರಣ. ಪ್ರಧಾನಿ ಅವರು ಮೊದಲು ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಕ್ಯಾಂಡಲ್ ಹಚ್ಚಿ ಎಂದರು. ಮಹಾಭಾರತ ಯುದ್ಧ ಮುಗಿದದ್ದು 18 ದಿನದಲ್ಲಿ, ನಾವು 21 ದಿನದಲ್ಲಿ ಕೊರೊನಾ ಗೆಲ್ತೇವೆ ಎಂದರು. ಏನಾಯ್ತು?
ದೇಶದಲ್ಲಿ ಕೊರೊನಾ ಇಷ್ಟೊಂದು ವೇಗವಾಗಿ ಹರಡುತ್ತಿದೆಯೆಂದರೆ ಶೀಘ್ರದಲ್ಲಿಯೇ ನಾವು ಅಮೆರಿಕವನ್ನು ಹಿಂದಕ್ಕೆ ಹಾಕಿ ಮೊದಲ ಸ್ಥಾನಕ್ಕೆ ಏರಲಿದ್ದೇವೆ. ದೇಶದಲ್ಲಿ ಈಗಾಗಲೇ ಕೊರೊನಾ ಸೋಂಕು 55,62,663 ಜನರಿಗೆ ತಗುಲಿದೆ. 89,000 ಜನ ಸಾವಿಗೀಡಾಗಿದ್ದಾರೆ. ಇದಕ್ಕೆ ಯಾರು ಹೊಣೆ?

ಫೆಬ್ರವರಿ 24-25 ರಂದು ಲಕ್ಷಾಂತರ ಜನರನ್ನು ಸೇರಿಸಿ ಭಾರತದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಲಾಯಿತು. ನಂತರ ತಬ್ಲಿಗಿ ಸಮಾವೇಶಕ್ಕೂ ಅನುಮತಿ ನೀಡಲಾಯಿತು. ಜನವರಿಯಲ್ಲೇ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೂ ಕೇಂದ್ರ ಈ ಮಟ್ಟಿನ ಬೇಜವಾಬ್ದಾರಿ ನಡವಳಿಕೆ ಪ್ರದರ್ಶಿಸಿದ್ದು ಏಕೆ?
ಕೊರೊನಾ ಸೋಂಕಿನಿಂದಾಗಿ ಅತಿ ಹೆಚ್ಚು ಸರಾಸರಿ ಮರಣ ಪ್ರಮಾಣ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ 7ನೇ ಸ್ಥಾನದಲ್ಲಿದೆ. ದೊಡ್ಡ ರಾಜ್ಯಗಳಲ್ಲಿ ಮಹಾರಾಷ್ಟ್ರದ ನಂತರ ಎರಡನೇ ಸ್ಥಾನದಲ್ಲಿದೆ. ಹತ್ತು ಲಕ್ಷ ಜನರಲ್ಲಿ ಮಹಾರಾಷ್ಟ್ರದಲ್ಲಿ 286 ಜನ, ರಾಜ್ಯದಲ್ಲಿ 129 ಜನ ಸತ್ತಿದ್ದಾರೆ.

ಸರಾಸರಿ ಮರಣದಲ್ಲಿ ಕರ್ನಾಟಕದ ಸ್ಥಿತಿ ಆತಂಕಕಾರಿಯಾಗಿದೆ. ಹತ್ತು ಲಕ್ಷ ಜನರಲ್ಲಿ ತೆಲಂಗಾಣದಲ್ಲಿ 29, ತಮಿಳುನಾಡುನಲ್ಲಿ 121, ಪಂಜಾಬ್‌ನಲ್ಲಿ 99, ಆಂಧ್ರದಲ್ಲಿ 107, ಕೇರಳದಲ್ಲಿ 15 ಜನ ಸತ್ತಿದ್ದರೆ ರಾಜ್ಯದಲ್ಲಿ 129 ಜನ ಸತ್ತಿದ್ದಾರೆ. ಇದನ್ನು ನಾವು ಸಾಧನೆ ಅನ್ನಬೇಕಾ?

ಮೊದಲು ಲಾಕ್ ಡೌನ್ ಘೋಷಿಸಿದಾಗ ರಾಜ್ಯದಲ್ಲಿ 37 ಕೊರೊನಾ ಸೋಂಕಿನ ಪ್ರಕರಣಗಳಿತ್ತು, ಒಂದು ಸಾವು ಸಂಭವಿಸಿತ್ತು. ಈಗ 5,26,876 ಸೋಂಕಿನ ಪ್ರಕರಣಗಳು ಮತ್ತು 8,145 ಸಾವು ಸಂಭವಿಸಿವೆ. ಇದಕ್ಕೆ ಪೂರ್ವಸಿದ್ದತೆ ಇಲ್ಲದ ರಾಜ್ಯ ಸರ್ಕಾರದ ವೈಫಲ್ಯ ಕಾರಣ.

ಲಾಕ್ಡೌನ್ ಸಮಯದಲ್ಲಿ ತ್ವರಿತಗತಿಯಲ್ಲಿ ವೈದ್ಯರ ನೇಮಕ, ಆಕ್ಸಿಜನ್ ವ್ಯವಸ್ಥೆ ಇರುವ ಬೆಡ್ ಗಳು, ವೆಂಟಿಲೇಟರ್ ಗಳು, ಸಾಕಷ್ಟು ಟೆಸ್ಟ್ ಗಳು, ಔಷಧಗಳು, ಆಂಬುಲೆನ್ಸ್ಗಳು, ಲ್ಯಾಬ್ ಗಳ ಸ್ಥಾಪನೆ ಆಗಬೇಕಾಗಿತ್ತು. ಸರ್ಕಾರ ಏನನ್ನೂ ಮಾಡದೆ ಕೈಚೆಲ್ಲಿ ಕೂತುಬಿಟ್ಟಿತ್ತು.

ಕೊರೊನಾದಂತಹ ಸಂಕಟದ ಕಾಲವನ್ನು ಭ್ರಷ್ಟಾಚಾರ ಎಸಗಲು ದುರ್ಬಳಕೆ ಮಾಡಿಕೊಂಡಿರಿ. ಕೃಷಿ ಉತ್ಪನ್ನಗಳ ತಯಾರಿಕೆ ಕಂಪೆನಿಯಿಂದ ಪಿಪಿಇ ಕಿಟ್, ಸ್ಟೀಲ್ ಫರ್ನಿಚರ್ಸ್ ಕಂಪೆನಿಯಿಂದ ಪಲ್ಸ್ ಆಕ್ಸಿಮೀಟರ್, ಸಾಫ್ಟ್ವೇರ್ ಕಂಪೆನಿಯಿಂದ ವೈದ್ಯಕೀಯ ಉಪಕರಣಗಳ ಖರೀದಿ. ಏನಿದು ಮುಖ್ಯಮಂತ್ರಿ ಅವರೇ?

ಕಳಪೆ ಸ್ಯಾನಿಟೈಸರ್, ಕಳಪೆ ಪಿಪಿಈ ಕಿಟ್ ಸರಬರಾಜು ಮಾಡಿದ್ದೀರಿ. ವೈದ್ಯರು ಪ್ರತಿಭಟನೆ ಮಾಡಿದ ಮೇಲೆ ವಾಪಸ್ ಪಡೆದಿರಿ. ಕೊರೋನ ವಾರಿಯರ್ಸ್ ಎಂದು ಹೂ ಮಳೆಗರೆದು ಅವರಿಗೆ ಕಳಪೆ ಆರೋಗ್ಯ ರಕ್ಷಕ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದೀರಿ ಎಂದರೆ ನಿಮ್ಮನ್ನು ಏನೆಂದು ಕರೆಯಬೇಕು?

ನಾನು ಮಾಹಿತಿ ಕೋರಿ ಸುಮಾರು 20 ಪತ್ರಗಳನ್ನು ಮುಖ್ಯಮಂತ್ರಿಯವರಿಗೆ ಬರೆದಿದ್ದೆ, ಒಂದಕ್ಕೂ ಉತ್ತರ ನೀಡಿಲ್ಲ. ಎಲ್ಲ ಕಡತಗಳನ್ನು ಮುಖ್ಯಮಂತ್ರಿಗಳು ಇಟ್ಟುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮುಖ್ಯಮಂತ್ರಿಗಳೇ, ನೀವು ಪ್ರಾಮಾಣಿಕರಾಗಿದ್ದರೆ ಮಾಹಿತಿ ನೀಡಲು ನಿಮಗ್ಯಾಕೆ ಭಯ ಸ್ವಾಮಿ?
ಬೇರೆ ಬೇರೆ ಇಲಾಖೆಗಳು ಎಷ್ಟು ಖರ್ಚು ಮಾಡಿವೆ? ಎಷ್ಟು ಸಾಮಗ್ರಿಗಳಿಗೆ ಹಣ ಬಿಡುಗಡೆಯಾಗಿದೆ? ಎಷ್ಟು ಬಾಕಿ ಇದೆ? ಎಷ್ಟು ಮೊತ್ತದ ಸಾಮಗ್ರಿಗಳ ಸರಬರಾಜಿಗೆ ಒಪ್ಪಂದ ಮಾಡಿಕೊಂಡಿದ್ದೀರಿ? ಯಾವಾಗ ಸರಬರಾಜು ಮಾಡಿದರು? ಹಣವನ್ನು ಯಾವಾಗ ಬಿಡುಗಡೆ ಮಾಡಿದ್ದೀರಿ? ಯಾವ ಪ್ರಶ್ನೆಗಳಿಗೂ ಉತ್ತರ ಇಲ್ಲ.

ಮುಖ್ಯ ಕಾರ್ಯದರ್ಶಿಗಳು ನಡೆಸಿದ್ದ ಏಪ್ರಿಲ್ ಮೇ ತಿಂಗಳ ಪರಿಶೀಲನೆಯಲ್ಲಿ ಆರೋಗ್ಯ ಇಲಾಖೆ ರೂ.3328 ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದಾರೆ. ಆದರೆ ಜುಲೈ ತಿಂಗಳ ವರೆಗಿನ ಪ್ರಗತಿ ಪರಿಶೀಲನೆಯನ್ನು ಆಗಸ್ಟ್ 20 ರಂದು ಮಾಡಿದ್ದಾರೆ. ಅದರಲ್ಲಿ 1708.42 ಕೋಟಿ ಖರ್ಚು ಎಂದು ಹೇಳಲಾಗಿದೆ. ಏನಿದರ ಮರ್ಮ?
ನಾವು ಪ್ರಶ್ನಿಸದಿದ್ದರೆ ಲೆಕ್ಕ ಬೆಳೆಯುತ್ತಾ ಹೋಗಿ ಹಣ ಬಿಡುಗಡೆಯಾಗುತ್ತಿತ್ತು. ಪ್ರಶ್ನಿಸಿದ ಕೂಡಲೆ ಲೆಕ್ಕ ಕಡಿಮೆಯಾಯಿತು. ಏನಿದರ ಒಳ ಮರ್ಮ? ಒಪ್ಪಂದ ಮಾಡಿಕೊಂಡಂತೆ ಒಂದು ದಿನ ಹಣ ಬಿಡುಗಡೆಯಾಗಲೇ ಬೇಕು, ಇಲ್ಲಾ ನೀವು ಖರೀದಿ ಆದೇಶಗಳನ್ನು ರದ್ದು ಮಾಡಬೇಕು.

ಈ ಲೆಕ್ಕದಲ್ಲಿ ಜಿಲ್ಲಾಡಳಿತಗಳು ಮಾಡಿರುವ ಖರ್ಚಿನ ಲೆಕ್ಕ ಇಲ್ಲ. ಬಿಬಿಎಂಪಿಯ ಖರೀದಿ, ಸರಬರಾಜು ಕಮಿಟ್ಮೆಂಟ್ ಗಳ ಮಾಹಿತಿ ಇಲ್ಲ. ಇದೆಲ್ಲ ಲೆಕ್ಕ ಹಾಕಿದರೆ ಜುಲೈನಲ್ಲಿ ನಾವು ಆರೋಪಿಸಿದ್ದ 2000 ಕೋಟಿ ರೂಪಾಯಿ ಮೀರಿದ ಹಗರಣವಾಗುತ್ತದೆ.

ರಾಜ್ಯ ಸರ್ಕಾರ ಘೋಷಣೆ ಮಾಡಿದ್ದ ಲಾಕ್ಡೌನ್ ನಷ್ಟ ಪರಿಹಾರದ ಪ್ಯಾಕೇಜ್ಗಳು ಈ ವರೆಗೂ ಅರ್ಹರನ್ನು ತಲುಪಿಲ್ಲ. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಘೋಷಿಸಿದ್ದ ರೂ.137 ಕೋಟಿ ಹಣದಲ್ಲಿ 69,670 ಬೆಳಗಾರರಿಗೆ ರೂ.57 ಕೋಟಿ ಹಣ ಮಾತ್ರ ಖರ್ಚು ಮಾಡಲಾಗಿದೆ. ಉಳಿದ ರೈತರಿಗೆ ಪರಿಹಾರ ಯಾವಾಗ?
ಹೂ ಬೆಳೆಗಾರರಿಗೆ ಹೆಕ್ಟೇರ್‌ಗೆ ತಲಾ ರೂ.25,000 ದಂತೆ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಈ ವರೆಗೆ ಕೇವಲ 22,728 ರೈತರಿಗೆ ಮಾತ್ರ ಈ ಹಣ ತಲುಪಿದೆ. ಸವಿತಾ ಸಮಾಜದ 2.30 ಲಕ್ಷ ಜನರಿಗೆ ಪರಿಹಾರದ ಘೋಷಣೆ ಮಾಡಿ 52,966 ಮಂದಿಗೆ ಮಾತ್ರ ಪರಿಹಾರ ನೀಡಲಾಗಿದೆ.

7.75 ಲಕ್ಷ ಮಂದಿ ಆಟೋ, ಟ್ಯಾಕ್ಸಿ ಚಾಲಕರಿಗೆ ತಲಾ ರೂ.5,000 ದಂತೆ ಪರಿಹಾರದ ಭರವಸೆ ನೀಡಿದ್ದ ಸರ್ಕಾರ ಈ ವರೆಗೆ ಕೇವಲ 2,14,119 ಜನರಿಗೆ ಮಾತ್ರ ಪರಿಹಾರದ ಹಣ ನೀಡಿದೆ. ಹೀಗೆ ಕಟ್ಟಡ ಕಾರ್ಮಿಕರು, ಮೆಕ್ಕೆಜೋಳ ಬೆಳೆಗಾರರಿಗೆ, ಆಶಾ ಕಾರ್ಯಕರ್ತೆಯರಿಗೆ ಘೋಷಿಸಲಾಗಿದ್ದ ಪರಿಹಾರದ ಹಣವಿನ್ನು ಗಗನ ಕುಸುಮವಾಗಿಯೇ ಇದೆ.

ಕೊರೊನಾ ಪರಿಸ್ಥಿತಿ ನಿರ್ವಹಣೆ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಿ, ಸರ್ಕಾರ ತಪ್ಪಿತಸ್ಥರನ್ನು ಪತ್ತೆಗಚ್ಚುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ. ಭ್ರಷ್ಟಾಚಾರ ನಡೆದಿಲ್ಲ ಅಂತಾದರೆ ಸರ್ಕಾರಕ್ಕೆ ತನಿಖೆ ಎದುರಿಸಲು ಏಕೆ ಭಯ?

ರಾಜ್ಯದಹಣಕಾಸುಪರಿಸ್ಥಿತಿ

ರಾಜ್ಯದ ವಿತ್ತೀಯ ಕೊರತೆ ನಮ್ಮ ಆಂತರಿಕ ಉತ್ಪನ್ನದ(GSDP) ಶೇಕಡಾ ಮೂರನ್ನು ಮೀರಬಾರದು ಎಂದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಹೇಳಿದೆ. ಬಿ.ಎಸ್ ಯಡಿಯೂರಪ್ಪ ಸರ್ಕಾರ ಈ ಮಿತಿಯನ್ನು ಶೇಕಡಾ 5ಕ್ಕೆ ಹೆಚ್ಚಿಸಲು ಹೊರಟಿರುವುದು ರಾಜ್ಯದ ಆರ್ಥಿಕತೆಗೆ ಬೀಳುವ ಮಾರಣಾಂತಿಕ ಹೊಡೆತ.
ಮುಖ್ಯಮಂತ್ರಿಯಾಗಿ ನಾನು ಮಂಡಿಸಿದ್ದ ಆರು ಆಯವ್ಯಯಪತ್ರಗಳಲ್ಲಿ ವಿತ್ತೀಯಕೊರತೆ ಎಂದೂ ಶೇಕಡಾ ಮೂರರ ಮಿತಿಯನ್ನು ಮೀರಿರಲಿಲ್ಲ. ನನ್ನ ಕೊನೆಯ ಬಜೆಟ್ ನಲ್ಲಿ ಈ ಮಿತಿ ಶೇಕಡಾ 2.49ರಷ್ಟಿತ್ತು. ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಇದು ಅನಿವಾರ್ಯ. ಯಡಿಯೂರಪ್ಪ ಸರ್ಕಾರ ರಾಜ್ಯವನ್ನು ಆರ್ಥಿಕ ದಿವಾಳಿಗೆ ತಳ್ಳುತ್ತಿದೆ.

ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ನಮ್ಮ ಸಾಲ 25%ರ ಮಿತಿಯಲ್ಲಿರಬೇಕಾಗುತ್ತದೆ.. ನಾನೆಂದೂ ಈ ಮಿತಿಯನ್ನು ಮೀರಿರಲಿಲ್ಲ. ಆದರೆ ಬಿ.ಎಸ್ ಯಡಿಯೂರಪ್ಪ ಸರ್ಕಾರ ರೂ.53000 ಕೋಟಿ ಸಾಲ ಮಾಡಿದೆ, ಈಗ ಹೆಚ್ಚುವರಿಯಾಗಿ ರೂ.33,000 ಕೋಟಿ ಸಾಲ ಎತ್ತಲು ಹೊರಟಿದೆ. ಈ ಒಟ್ಟು ಸಾಲ ಖಂಡಿತ 25%ರ ಮಿತಿಯನ್ನು ಮೀರಲಿದೆ.

2020-21ರ ಆಯವ್ಯಯದಲ್ಲಿ ನಮ್ಮ ಒಟ್ಟು ಆಂತರಿಕ ಉತ್ಪನ್ನ ರೂ.18 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಕೊರೊನಾ ಹಾವಳಿ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಎಡವಟ್ಟುಗಳ ಕಾರಣದಿಂದ ಅದು ರೂ.12 ಲಕ್ಷ ಕೋಟಿಗಿಂತಲೂ ಕೆಳಗಿಳಿಯಬಹುದು. ಆಗ ನಮ್ಮ ಸಾಲದ ಸಾಮರ್ಥ್ಯ ಕೂಡಾ ಕಡಿಮೆಯಾಗಲಿದೆ.

ಸಂವಿಧಾನದ 101ನೇ ತಿದ್ದುಪಡಿ ಮೂಲಕ ಕಾರ್ಯರೂಪಕ್ಕೆ ಬಂದಿರುವ ಜಿಎಸ್ ಟಿ ಕಾಯ್ದೆಯ ಸೆಕ್ಷನ್ 18ರ ಪ್ರಕಾರ 5 ವರ್ಷಗಳ ಕಾಲ ಜಿಎಸ್ ಟಿ ಪರಿಹಾರ ನೀಡಬೇಕಾಗಿರುವುದು ಸಂವಿಧಾನಾತ್ಮಕ ಕರ್ತವ್ಯ. ಈ ಪರಿಹಾರದ ನಿರಾಕರಣೆ ನಮ್ಮ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿದೆ.

2020-2021ರ ಆರ್ಥಿಕ ವರ್ಷದ ಅಂತ್ಯಕ್ಕೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್ ಟಿ ಪರಿಹಾರವಾಗಿ ರೂ.30,000 ಕೋಟಿ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಅನ್ಯಾಯವನ್ನು ಪ್ರತಿಭಟಿಸಲಿಕ್ಕಾಗದ ಮುಖ್ಯಮಂತ್ರಿಗಳು ಜಿಎಸ್ ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್ ಬಿ ಐನಿಂದ ಸಾಲ ಪಡೆಯಲು ಹೊರಟು ರಾಜ್ಯವನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ.

ರಾಜ್ಯದ ಹಿತದೃಷ್ಟಿಯಿಂದ ವಿತ್ತೀಯ ಕೊರತೆಯ ಮಿತಿಯನ್ನು 3% ಇಂದ 5% ಗೆ ಏರಿಕೆ ಮಾಡುವುದು ಸರಿಯಲ್ಲ. ಹೆಚ್ಚೆಂದರೆ 3.5 ಕ್ಕೆ ಏರಿಕೆ ಮಾಡಿ, ಮುಂದಿನ ದಿನಗಳಲ್ಲಿ ಮತ್ತೆ ಇಳಿಕೆ ಮಾಡಬೇಕು. 5% ಗೆ ಏರಿಕೆ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಲಿದೆ.

ಈಗಿನ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕಾದರೆ ರಾಜ್ಯ ಸರ್ಕಾರ ಬದ್ಧತಾ ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ದುಂದು ವೆಚ್ಚಗಳನ್ನು ನಿಲ್ಲಿಸಬೇಕು, ಅನಗತ್ಯ ಹುದ್ದೆಗಳನ್ನು ರದ್ದುಮಾಡಬೇಕು, ತೆರಿಗೆಯೇತರ ಆದಾಯವನ್ನು ಹೆಚ್ಚಿಸಬೇಕು. ಆರ್ಥಿಕ ಶಿಸ್ತನ್ನು ಪಾಲಿಸಬೇಕು.

14ನೇ ಹಣಕಾಸು ಆಯೋಗದಲ್ಲಿ 4.71% ಇದ್ದ ರಾಜ್ಯದ ಪಾಲನ್ನು 15ನೇ ಹಣಕಾಸು ಆಯೋಗದಲ್ಲಿ 3.64%ಗೆ ಇಳಿಸಲಾಗಿದೆ. ಇದರಿಂದ ರಾಜ್ಯಕ್ಕೆ ರೂ.12 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಆಯೋಗ ಶಿಫಾರಸು ಮಾಡಿದ್ದ ರೂ.5495 ಕೋಟಿ ವಿಶೇಷ ಅನುದಾನವನ್ನು ಹಣಕಾಸು ಸಚಿವೆ ತಿರಸ್ಕರಿಸಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ.

ಈ ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದವರು. ಅವರಿಗೆ ರಾಜ್ಯದ ಹಿತ ಬೇಕಿಲ್ಲವೇ? ಯಡಿಯೂರಪ್ಪ ಅವರೇ, ನೀವ್ಯಾಕೆ ಇದನ್ನೆಲ್ಲ ಸಹಿಸಿಕೊಂಡು ಕೂತಿದ್ದೀರಿ. ಇದರಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ, ನೀವೂ ಮಾಡಬೇಡಿ. ರಾಜ್ಯದ ಹಿತ ನಮಗೆ ಮುಖ್ಯ.

ರಾಜ್ಯದ ಹಿತರಕ್ಷಣೆಯ ವಿಷಯದಲ್ಲಿ ರಾಜಕೀಯವನ್ನು ಎಳೆದು ತರಬಾರದು. ನಿಮ್ಮ ಪಕ್ಷದ ಸಂಸದರು ದೆಹಲಿಯಲ್ಲಿ ಬಾಯಿ ಬಿಡುತ್ತಿಲ್ಲ. ಸರ್ವಪಕ್ಷಗಳ ನಿಯೋಗವನ್ನಾದರೂ ಕರೆದುಕೊಂಡು ಹೋದರೆ ನಾವೇ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಧಾನಿಯವರಿಗೆ ತಿಳಿಸುತ್ತೇವೆ. ಇದರಲ್ಲಿ ರಾಜಕೀಯ ಬೇಡ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ಆರ್ಥಿಕತೆ ಅಧೋಗತಿಗೆ ತಲುಪಿದೆ ಎನ್ನುವುದನ್ನು ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ. ಆರ್ ಬಿ ಐ ಗವರ್ನರ್ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರ ವರೆಗೆ ದೇಶದ ಪ್ರಖ್ಯಾತ ಆರ್ಥಿಕ ತಜ್ಞರೆಲ್ಲರೂ ದೇಶದ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದಾರೆ.

ಭೂಸುಧಾರಣೆ ತಿದ್ದುಪಡಿ

ಉದ್ಯಮಿಗಳು, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳು ಅಸಹಾಯಕ ರೈತರಿಗೆ ವಂಚಿಸಿ ಸುಲಭದಲ್ಲಿ ಭೂಮಿ ಖರೀದಿ ಮಾಡಲು ನೆರವಾಗುವ ಉದ್ದೇಶದಿಂದಲೇ ಈ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ಯಾವ ರೈತರ ಹಿತದೃಷ್ಟಿಯೂ ಇಲ್ಲ.

ಭೂ ಸುಧಾರಣೆ ಕಾಯ್ದೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೆ ತಂದು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದ್ದರು. ರಾಜ್ಯ ಬಿಜೆಪಿ ಸರ್ಕಾರ ಉಳ್ಳವನನ್ನೇ ಭೂ ಒಡೆಯನನ್ನಾಗಿ ಮಾಡಲು ಹೊರಟಿದೆ.

ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದಿರುವ ಕೊನೆಯ ಮೊಳೆ.

Posted by Naanu Gauri on Tuesday, September 22, 2020

ಕೃಷಿ ಭೂಮಿ ಖರೀದಿಗೆ ಆದಾಯದ ಮಿತಿಯ ಸೆಕ್ಷನ್ 79ಎ, ಕೃಷಿಕರೇತರರಿಗೆ ಭೂಮಿ ಖರೀದಿ ನಿಷೇಧಿಸಿದ್ದ ಸೆಕ್ಷನ್ 79ಬಿ, ಸುಳ್ಳು ಪ್ರಮಾಣಪತ್ರಕ್ಕೆ ದಂಡ ವಿಧಿಸುವ ಸೆಕ್ಷನ್ 79 ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80, ಗರಿಷ್ಠ ಭೂಮಿತಿಯ ಸೆಕ್ಷನ್ 63ರ ರದ್ದತಿ ಭೂತಾಯಿಗೆ ಬಗೆವ ದ್ರೋಹ.

ತಿದ್ದುಪಡಿಗೆ ಒಳಗಾಗಿರುವ ಎಲ್ಲಾ ಸೆಕ್ಷನ್ ಗಳು ಭೂಮಲೀಕರ ದೌರ್ಜನ್ಯದಿಂದ ಸಣ್ಣ ರೈತರನ್ನು ರಕ್ಷಿಸುವ ಹಾಗೂ ಸಣ್ಣ ಪುಟ್ಟ ಹಿಡುವಳಿದಾರರ ಅಸಹಾಯಕತೆಯನ್ನು ಶ್ರೀಮಂತರು ಹಾಗು ಉದ್ಯಮಿಗಳು ದುರುಪಯೋಗ ಪಡಿಸಿಕೊಳ್ಳದಂತೆ ತಡೆಹಿಡಿಯುವ ಅವಕಾಶಗಳನ್ನು ಒದಗಿಸುತ್ತಿದ್ದವು.

ಈ ಎಲ್ಲಾ ತಿದ್ದುಪಡಿಗಳ ಪರಿಣಾಮವಾಗಿ ಕಾರ್ಪೋರೇಟ್ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕುಳಗಳು ಮತ್ತು ಶ್ರೀಮಂತರು ಸುಲಭವಾಗಿ ಕೃಷಿ ಭೂಮಿಯನ್ನು ಕಬಳಿಸಬಹುದು. ಸಣ್ಣ ರೈತಾಪಿಗಳು ಇನ್ನಷ್ಟು ವೇಗವಾಗಿ ಹಾಗೂ ಶಾಸನಬದ್ಧವಾಗಿ ಕೃಷಿಯಿಂದ ಹೊರದೂಡಲ್ಪಡುತ್ತಾರೆ.

ಭೂ ಸುಧಾರಣೆ ಕಾಯ್ದೆಯ ಉಲ್ಲಂಘನೆ ಮಾಡಿರುವ ಅಂದಾಜು 60,000 ಎಕರೆ ಜಮೀನು ಒಳಗೊಂಡಿರುವ 13,814 ಪ್ರಕರಣಗಳು ರಾಜ್ಯದ ನ್ಯಾಯಾಲಯದಲ್ಲಿವೆ. ಪ್ರಸ್ತಾಪಿತ ತಿದ್ದುಪಡಿಯಿಂದ ಈ ಎಲ್ಲ ಪ್ರಕರಣಗಳು ರದ್ದಾಗಿ ಅಕ್ರಮಗಳೆಲ್ಲ ಸಕ್ರಮವಾಗಲಿವೆ. ಈ ಭೂಗಳ್ಳರನ್ನು ರಕ್ಷಿಸಲಿಕ್ಕಾಗಿಯೇ ತಿದ್ದುಪಡಿ ತರಲಾಗಿದೆ.

ಭೂ ಸುಧಾರಣೆ ಕಾಯ್ದೆ ಉಲ್ಲಂಘಣೆಯ 13,814 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಭೂಮಿಗೆ ಚಿನ್ನದ ಬೆಲೆ ಇರುವ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿದೆ. ಈ ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಶಾಮೀಲಾಗಿ ಸರ್ಕಾರ ಈ ತಿದ್ದುಪಡಿ ತಂದಿದೆ.

ಭೂ ಸುಧಾರಣೆ ತಿದ್ದುಪಡಿಯ ಹಿಂದೆ ಕೋಟ್ಯಂತರ ರೂಪಾಯಿಗಳ ಹಗರಣ ಇದೆ. ಅಂದಾಜು 60,000 ಎಕರೆ ಜಮೀನನ್ನು ಪಡೆಯಲಿರುವ ಭೂಗಳ್ಳರಿಂದ ಆಡಳಿತ ಪಕ್ಷದವರಿಗೆ ಏನು ಲಾಭ ಎನ್ನುವುದನ್ನು ನಾನು ವಿವರಿಸಲು ಹೋಗುವುದಿಲ್ಲ.

ಭೂ ಸುಧಾರಣಾ ಕಾಯ್ದೆಯಿಂದಾಗಿ ಭ್ರಷ್ಟಾಚಾರ ಹೆಚ್ಚಾಗಿದೆ, ಅಧಿಕಾರಿಗಳು ಲಂಚ ಹೊಡೆಯಲು ಅನುಕೂಲವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಲಂಚ ಎಲ್ಲಿ ಇಲ್ಲ? ತಹಶೀಲ್ದಾರ್, ಪೊಲೀಸ್, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚ ಇಲ್ಲವೇ? ನಿರ್ಮೂಲನೆ ಮಾಡಬೇಕಾಗಿರುವುದು ಲಂಚವನ್ನೇ? ಇಲ್ಲ ಕಾನೂನನ್ನೇ?

ಅಧಿಕಾರಿಗಳು ಲಂಚಕೋರರಾಗಿದ್ದಾರೆ ಎಂದರೆ ಸರ್ಕಾರ ಅವರನ್ನು ನಿಯಂತ್ರಿಸಲು ವಿಫಲವಾಗಿದೆ ಇಲ್ಲವೇ ಸರ್ಕಾರವೇ ಲಂಚಕೋರರ ಜೊತೆ ಶಾಮೀಲಾಗಿದೆ ಎಂದರ್ಥವಲ್ಲವೇ? ಇದನ್ನೂ ಸಮರ್ಥಿಸಿಕೊಳ್ಳಲು ನಾಚಿಕೆ ಆಗುವುದಿಲ್ವೇ?

ಇಡೀ ದೇಶ ಕೊರೊನಾ ಸೋಂಕಿನಿಂದ ತತ್ತರಿಸುತ್ತಿರುವಾಗ ತರಾತುರಿಯಲ್ಲಿ ಈ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತರುವ ಅನಿವಾರ್ಯತೆ ಏನಿತ್ತು? ಇದನ್ನು ತರುವ ಮೊದಲು ರೈತರ ಜೊತೆ ಸಮಾಲೋಚನೆ ಮಾಡಿದ್ದೀರಾ? ವಿರೋಧ ಪಕ್ಷಗಳ ಜೊತೆ ಚರ್ಚೆ ಮಾಡಿದ್ದೀರಾ? ಕನಿಷ್ಠ ನಿಮ್ಮ ಪಕ್ಷದೊಳಗಾದರೂ ಚರ್ಚೆ ಮಾಡಿದ್ದೀರಾ?

ಈ ಭೂ ಸುಧಾರಣಾ ತಿದ್ದುಪಡಿಯಿಂದ ಕೃಷಿಗೇನು ತೊಂದರೆಯಾಗಲಾರದು ಎಂದು ಹೇಳುತ್ತೀರಲ್ಲಾ? ಕೃಷಿಯೇತರ ಬಳಕೆಗೆ ಕೃಷಿ ಭೂಮಿಯನ್ನು ಬಳಸಿಕೊಳ್ಳಬಾರದೆಂಬ ನಿರ್ಬಂಧವೇನಾದರೂ ತಿದ್ದುಪಡಿಯಲ್ಲಿದೆಯೇ? ಯಾಕೆ ಅದನ್ನು ಸೇರಿಸಿಲ್ಲ? ಇದರ ಹಿಂದಿನ ದುರುದ್ದೇಶ ಏನು?

ರೈತ ವಿರೋಧಿಯಾಗಿರುವ ಭೂ ಸುಧಾರಣಾ ತಿದ್ದುಪಡಿಯನ್ನು ನಾವು ಮಾತ್ರವಲ್ಲ, ಆಡಳಿತ ಪಕ್ಷದ ಸದಸ್ಯರಲ್ಲಿ ಆತ್ಮಸಾಕ್ಷಿ ಇದ್ದರೆ ಅವರೂ ವಿರೋಧಿಸಬೇಕು ಎಂದು ಮನವಿ ಮಾಡುತ್ತೇವೆ. ನಮ್ಮ ಹೋರಾಟ ಸದನಕ್ಕೆ ಮಾತ್ರ ಸೀಮಿತವಲ್ಲ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ.

ಇದನ್ನೂ ಓದಿ: ಆಗ ಉಳುವವನೆ ಭೂಮಿಯ ಒಡೆಯ, ಈಗ ದುಡ್ಡಿದ್ದವನೇ ಭೂಮಿಯ ಒಡೆಯ: ಸಿದ್ದರಾಮಯ್ಯ ಆತಂಕ

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ

ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸ್ವಪ್ರೇರಣೆಯಿಂದಲ್ಲ. ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ಕೃಷಿ ಸಚಿವಾಲಯದ ಒತ್ತಡಕ್ಕೆ ಮಣಿದು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ನಾಡಿನ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲು ಹೊರಟಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ಈಗಿನ ಎಪಿಎಂಸಿ ಕಾಯಿದೆಯ ಅನ್ವಯ ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಒಳಗೆ ವರ್ತಕರಿಗೆ ಇಲ್ಲವೇ ಹೊರಗೆ ಪರವಾನಗಿ ಇರುವ ವರ್ತಕರಿಗೆ ಮಾರಾಟ ಮಾಡಬಹುದಿತ್ತು. ತಿದ್ದುಪಡಿಯಿಂದಾಗಿ ಎಪಿಎಂಸಿ ಹೊರಗಿನ ವರ್ತಕರ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣ ಇರುವುದಿಲ್ಲ. ಹೀಗಿದ್ದಾಗ ರೈತರಿಗೆ ಎಲ್ಲಿದೆ ರಕ್ಷಣೆ?

ಆರಂಭದಲ್ಲಿ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸಿಗುತ್ತದೆ ಎಂದು ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ, ಇದರಿಂದ ರಾಜ್ಯದಲ್ಲಿನ ಎಪಿಎಂಸಿ ಗಳು ಒಂದೊಂದಾಗಿ ಮುಚ್ಚಿಕೊಳ್ಳುತ್ತಾ ಸಾಗಿ ಕೊನೆಗೆ ರೈತರು ಅನಿವಾರ್ಯವಾಗಿ ಖಾಸಗಿಯವರನ್ನೆ ಅವಲಂಭಿಸಬೇಕಾಗುತ್ತದೆ.

ಒಮ್ಮೆ ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳು ಸಾರ್ವಭೌಮತ್ವ ಸಾಧಿಸಿದರೆಂದರೆ ನಂತರ ಅವರನ್ನು ನಿಯಂತ್ರಿಸುವ ಯಾವ ನಿಯಮಗಳು ಅಥವಾ ಅಧಿಕಾರ ಸರ್ಕಾರದ ಬಳಿ ಇರುವುದಿಲ್ಲ. ಇದು ಭವಿಷ್ಯದಲ್ಲಿ ಶೋಷಣೆಗೆ ದಾರಿ ಮಾಡಿಕೊಡುತ್ತದೆ.

ರೈತರ ಬೆಳೆಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬ ನಿಜವಾದ ಕಾಳಜಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದ್ದರೆ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿ. ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿ, ತೂಕ ಮತ್ತು ಇತರೆಡೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ.

ಎಪಿಎಂಸಿಗಳಿಂದ ಸರ್ಕಾರಕ್ಕೆ ವಾರ್ಷಿಕ ರೂ.600 ಕೋಟಿ ಲಾಭವಿದೆ, ಇದರ ಜೊತೆಗೆ ರೈತರ ಬೆಳೆಗಳಿಗೂ ಅರ್ಹ ಬೆಲೆ ಸಿಗುತ್ತಿದೆ. ಕಾಯ್ದೆಗೆ ತಿದ್ದುಪಡಿ ತರುವುದರಿಂದ ಎಲ್ಲಾ ಎಪಿಎಂಸಿ ಗಳು ಬಾಗಿಲು ಹಾಕಿದರೆ ಸರ್ಕಾರಕ್ಕಾಗುವ ಈ ನಷ್ಟವನ್ನು ಖಾಸಗಿ ಕಂಪನೆಗಳು ತುಂಬಿಕೊಡುತ್ತವೆಯೇ?

ರೈತರಿಗೆ ಮುಕ್ತ ಮಾರುಕಟ್ಟೆ ಕಲ್ಪಿಸುವುದರಿಂದ ನ್ಯಾಯಯುತ ಬೆಲೆ ಸಿಗುತ್ತದೆ ಎಂಬುದು ಸರ್ಕಾರದ ವಾದ. ಹಾಗಾದರೆ 1966ರ ಪೂರ್ವದಲ್ಲೂ ಮುಕ್ತ ಮಾರುಕಟ್ಟೆಯಿತ್ತು, ಆಗ ರೈತರಿಗೆ ನ್ಯಾಯಯುತ ಬೆಲೆ ಸಿಕ್ಕಿದ್ದರೆ ಎಪಿಎಂಸಿ ಕಾಯ್ದೆ ಯಾಕೆ ಜಾರಿಗೆ ಬರುತ್ತಿತ್ತು? ರೈತರ ಮೇಲಿನ ಶೋಷಣೆ ಹೆಚ್ಚಿದ್ದಕ್ಕೆ ಕಾಯ್ದೆ ಜಾರಿಗೆ ಬಂದದ್ದಲ್ಲವೇ.

ರಾಜ್ಯಪಟ್ಟಿಯಲ್ಲಿರುವ ಎಪಿಎಂಸಿ ಕಾಯಿದೆಗೆ ಮಾದರಿ ತಿದ್ದುಪಡಿ ರೂಪಿಸಿ, ಇದನ್ನು ಯಥಾವತ್ತಾಗಿ ಜಾರಿಗೆ ತನ್ನಿ ಎಂದು ಕೇಂದ್ರ ಸರ್ಕಾರ ಹೇಳುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅಪಚಾರ. ಕೇಂದ್ರಕ್ಕೆ ಈ ಅಧಿಕಾರ ಕೊಟ್ಟವರು ಯಾರು?

ಎಪಿಎಂಸಿಗಳ ಮೇಲೆ ಸರ್ಕಾರದ ನಿಯಂತ್ರಣವಿದೆ, ತಿದ್ದುಪಡಿ ಜಾರಿಯಾದರೆ ರೈತರ ಉತ್ಪನ್ನಗಳನ್ನು ಖರೀದಿಸುವ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ಸರ್ಕಾರಕ್ಕೆ ಯಾವುದೇ ರೀತಿಯ ನಿಯಂತ್ರಣ ಇರುವುದಿಲ್ಲ. ಭವಿಷ್ಯದಲ್ಲಿ ಖಾಸಗಿಯವರೇ ರೈತರ ಶೋಷಣೆಗೆ ಇಳಿದರೆ ನ್ಯಾಯಕ್ಕಾಗಿ ರೈತರು ಯಾರನ್ನು ಕೇಳಬೇಕು?


ಇದನ್ನೂ ಓದಿ: Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...