ಬೃಹತ್ ಆಂದೋಲನವೇ ಬ್ರಿಟಿಷ್ ವಸಾಹತುಶಾಹಿಯಿಂದ ಭಾರತವನ್ನು ಬಿಡುಗಡೆಗೊಳಿಸಿತು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೆನಪಿಸಲು ಬಯಸುತ್ತೇವೆ. ಅದಕ್ಕಾಗಿ ನಾವು ಆಂದೋಲನ ಜೀವಿಗಳಾಗಲು ಹೆಮ್ಮೆ ಪಡುತ್ತೇವೆ ಎಂದು ಹೇಳುವ ಮೂಲಕ ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿ ನರೇಂದ್ರ ಮೋದಿಯವರ ಆಂದೋಲನ್ ಜೀವಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದೆ.

ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತು ಮಾತನಾಡಿದ ಪ್ರಧಾನಿ ಮೋದಿಯವರು “ದೇಶದಲ್ಲಿ ಆಂದೋಲನ್‌ ಜೀವಿ (ಹೋರಾಟಗಾರರು) ಎಂಬ ಹೊಸ ಸಮುದಾಯವೊಂದು ಹುಟ್ಟಿಕೊಂಡಿದೆ. ಪ್ರತಿ ಪ್ರತಿಭಟನೆಯಲ್ಲಿಯೂ ಅವರನ್ನು ನೋಡಬಹುದು, ಅವರು ದೇಶಕ್ಕೆ ಪರವಾಲಂಬಿಯಾಗಿದ್ದಾರೆ” ಎಂದು ಹೇಳಿದ್ದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ ಡಾ.ದರ್ಶನ್ ಪಾಲ್ “ಬಿಜೆಪಿ ಮತ್ತು ಅವರ ಪರಿವಾರ ಎಂದಿಗೂ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಅವರು ಸ್ವಾತಂತ್ರ್ಯ ಚಳವಳಿಯ ವಿರುದ್ಧವಿದ್ದರು. ಹಾಗಾಗಿ ಇಂದಿಗೂ ಚಳವಳಿಗಳಿಗೆ ಅವರು ಹೆದರುತ್ತಾರೆ” ಎಂದು ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರ ಈಗಲಾದರೂ ನಮ್ಮ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಒಪ್ಪಿಕೊಂಡರೆ, ರೈತರು ಕೃಷಿಗೆ ಮರಳಲು ಹೆಚ್ಚು ಸಂತೋಷಪಡುತ್ತಾರೆ. ಆದರೆ ಸರ್ಕಾರದ ಅಹಂ ಮನೋಭಾವವೇ ಹೆಚ್ಚು ಆಂದೋಲನ್ ಜೀವಿಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಎಂಎಸ್‌ಪಿ ಕುರಿತ ಪ್ರಧಾನಿಯವರ ಖಾಲಿ ಹೇಳಿಕೆಗಳು ರೈತರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುವುದಿಲ್ಲ ಮತ್ತು ಹಿಂದಿನ ಕಾಲದಲ್ಲಿಯೂ ಇಂತಹ ಅರ್ಥಹೀನ ಹೇಳಿಕೆಗಳನ್ನು ನೀಡಲಾಗಿದೆ. ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಖಾತ್ರಿ ಮಾಡುವ ಕಾನೂನು ಜಾರಿಮಾಡಿದರೆ ಮಾತ್ರ ರೈತರು ವಾಸ್ತವದಲ್ಲಿ ನ್ಯಾಯಯುತವಾಗಿ ಮತ್ತು ಸುಸ್ಥಿರ ರೀತಿಯಲ್ಲಿ ಪ್ರಯೋಜನ ಪಡೆಯುತ್ತಾರೆ ಎಂದು ದರ್ಶನ್ ಪಾಲ್ ಹೇಳಿದ್ದಾರೆ.

ಯಾವುದೇ “ವಿದೇಶಿ ವಿನಾಶಕಾರಿ ಐಡಿಯಾಲಜಿ” ಯಿಂದ ನಾವು ದೂರವಾಗಿದ್ದೇವೆ. ಆದರೆ ಪ್ರಧಾನಮಂತ್ರಿಯ ಎಫ್‌ಡಿಐ ವಿಧಾನವು ಅಪಾಯಕಾರಿ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಆರೋಪಿಸಿದೆ. ಪ್ರಪಂಚದ ಯಾವುದೇ ಭಾಗದಲ್ಲಿ ಮೂಲಭೂತ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ರಚನಾತ್ಮಕ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ನಾವು ಬೆಂಬಲಿಸುತ್ತೇವೆ ಮತ್ತು ಪ್ರಪಂಚದಾದ್ಯಂತದ ಸಮಾನ ಮನಸ್ಕ ನಾಗರಿಕರಿಂದ ಇದೇ ರೀತಿಯ ಬೆಂಬಲವನ್ನು ನಿರೀಕ್ಷಿಸುತ್ತೇವೆ, ಏಕೆಂದರೆ “ಎಲ್ಲಿಯೇ ನಡೆಯುವ ಅನ್ಯಾಯವು, ಎಲ್ಲೆಡೆಯು ನ್ಯಾಯಕ್ಕೆ ಅಪಾಯವಾಗಿದೆ” ಎಂದು ಮೋರ್ಚಾ ಹೇಳಿದೆ.

ರೈತರ ಬೇಡಿಕೆಗಳನ್ನು ಗಂಭೀರವಾಗಿ ಮತ್ತು ಪ್ರಾಮಾಣಿಕವಾಗಿ ಪರಿಹರಿಸುವಲ್ಲಿ ಸರ್ಕಾರದ ಬದ್ಧತೆ ಮೇಲೆ ನಮಗೆ ಅನುಮಾನವಿದೆ. ಏಕೆಂದರೆ ವಿದ್ಯುತ್ ತಿದ್ದುಪಡಿ ಮಸೂದೆ 2021 ಕರಡು ಮಸೂದೆಯನ್ನು ಹಿಂತೆಗೆದುಕೊಳ್ಳುವುದಾಗಿ ರೈತರ ಸಂಘಟನೆಗಳಿಗೆ ಭರವಸೆ ನೀಡಿದ್ದ ಕೇಂದ್ರ ಇಂದು ಅದನ್ನು ಸಂಸತ್ತಿನಲಲ್ಲಿ ಪರಿಚಯಿಸುತ್ತಿದೆ ಎಂದು ಡಾ.ದರ್ಶನ್ ಪಾಲ್ ಕಿಡಿಕಾರಿದ್ದಾರೆ.

ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಕಿಸಾನ್ ಮಹಾಪಂಚಾಯತ್‌ಗಳಿಗೆ ಜನಪ್ರಹಾವೇ ಹರಿದುಬರುತ್ತಿದೆ. ಇದು ದೆಹಲಿಯ ಗಡಿಗಳಲ್ಲಿ ಹೋರಾಟನಿರತ ರೈತರ ಸ್ಫೂರ್ತಿ ಮತ್ತು ಉತ್ಸಾಹವನ್ನು ಹಿಮ್ಮಡಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಎಂಎಸ್‌ಪಿ ಮುಂಚೆಯು ಇತ್ತು, ಮುಂದೆಯು ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳೀದ್ದಾರೆ. ಆದರೆ ಅವರು ಎಂಎಸ್‌ಪಿ ಖಾತ್ರಿಗಾಗಿ ಕಾನೂನು ತರುತ್ತೇವೆ ಎಂದು ಹೇಳಿಲ್ಲ. ಇಂದು ದೇಶವು ನಂಬಿಕೆಯ ಮೇಲೆ ನಡೆಯುತ್ತಿಲ್ಲ ಬದಲಿಗೆ ಕಾನೂನು ಮತ್ತು ಸಂವಿಧಾನದ ಮೇಲೆ ನಡೆಯುತ್ತಿದೆ ಎಂದು ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

ಪ್ರಧಾನಿಗಳು ಶಾಂತಿಯುತವಾಗಿ ಹೋರಾಡುತ್ತಿರುವ ರೈತರನ್ನು ಆಂದೋಲನ್ ಜೀವಿಗಳೆಂದು ವ್ಯಂಗ್ಯವಾಡಿದ್ದಾರೆ. ವಿದೇಶಿ ವಿನಾಶಕಾರಿ ಐಡಿಯಾಲಜಿಯಿಂದ ಪ್ರೇರಿತರಾದವರು ಎಂದು ಅವಮಾನ ಮಾಡಿದ್ದಾರೆ. ತಮ್ಮ ಅಧಿಕಾರ ದುರಪಯೋಗ ಪಡಿಸಿಕೊಂಡು ರೈತರನ್ನು ಅವಮಾನಿಸುವ ಪ್ರಧಾನಿಗಳ ನಡೆಯನ್ನು ಆಲ್‌ ಇಂಡಿಯಾ ಕಿಸಾನ್ ಮಜ್ದೂರ್ ಸಭಾ ಖಂಡಿಸಿದೆ.

11 ಸುತ್ತಿನ ಮಾತುಕತೆಗಳಲ್ಲಿ ರೈತರು ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿದ್ದಾರೆ. ಆದರೆ ಮೋದಿಯವರು ತಮ್ಮ ಕಾರ್ಪೊರೇಟ್ ಗೆಳೆಯರಿಗಾಗಿ ಈ ಕಾನೂನುಗಳನ್ನು ವಾಪಸ್ ಪಡೆಯದೆ ಹಠಮಾರಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆಲ್‌ ಇಂಡಿಯಾ ಕಿಸಾನ್ ಮಜ್ದೂರ್ ಸಭಾದ ಪ್ರಧಾನ ಕಾರ್ಯದರ್ಶಿ ಆಶಿಸ್ ಮಿತ್ತಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಆಂದೋಲನ್ ಜೀವಿ ಟ್ರೆಂಡ್: ನೆಟ್ಟಿಗರು ಮೋದಿಯವರ ಹಳೆಯ ಫೋಟೊಗಳನ್ನಾಕಿ ಟ್ರೋಲ್ ಮಾಡುತ್ತಿರುವುದೇಕೆ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here