Homeಮುಖಪುಟಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಹಳೆಯ ವರಸೆ; ಹೊಸ ಪಾತ್ರಧಾರಿಗಳು

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ಹಳೆಯ ವರಸೆ; ಹೊಸ ಪಾತ್ರಧಾರಿಗಳು

- Advertisement -
- Advertisement -

ಮುಂದಿನ ತಿಂಗಳು ಚುನಾವಣೆಗೆ ಹೋಗುತ್ತಿರುವ ರಾಜ್ಯಗಳು ಐದಾದರೂ, ಹೆಚ್ಚಿನ ಕುತೂಹಲವಿರುವುದು ಪಶ್ಚಿಮ ಬಂಗಾಳದ ಕುರಿತಾಗಿಯೇ ಆಗಿದೆ. ತಮಿಳುನಾಡಿನಲ್ಲಿ ಡಿಎಂಕೆಯ ಗೆಲುವು ಖಚಿತ ಎಂಬುದು ಬಹುತೇಕ ನಿಶ್ಚಿತವಾಗಿದೆ. ಕೇರಳದಲ್ಲಿ ಪ್ರತೀ ಚುನಾವಣೆಯಲ್ಲೂ ಆಡಳಿತ ಪಕ್ಷ ಅಧಿಕಾರ ಕಳೆದುಕೊಳ್ಳುವ ಖಚಿತ ಫಲಿತಾಂಶ ಈ ಸಾರಿ ಬದಲಾಗುತ್ತದೆ ಎನ್ನುವ ಸೂಚನೆಗಳಿದ್ದರೂ, ಬಿಜೆಪಿ ಓಟು ಮತ್ತು ಸೀಟು ಹೆಚ್ಚಿಸಿಕೊಂಡರೂ ಬಿಜೆಪಿಯೇತರ ಪಕ್ಷವಷ್ಟೇ ಅಧಿಕಾರಕ್ಕೆ ಬರಲು ಸಾಧ್ಯ. ಪುದುಚೇರಿಯಲ್ಲಿ ಏನೇ ಆದರೂ ಅದು ಪುಟ್ಟ ಕೇಂದ್ರಾಡಳಿತ ಪ್ರದೇಶವಷ್ಟೇ. ಈಶಾನ್ಯ ಭಾರತದ ಮಟ್ಟಿಗೆ ಅಸ್ಸಾಂನಲ್ಲಿ ಏನಾಗುತ್ತದೆಂಬುದು ಮುಖ್ಯವೇ ಆದರೂ, ಇಡೀ ದೇಶದ ರಾಜಕಾರಣಕ್ಕೆ ತಿರುವು ನೀಡುವಂತದ್ದೇನಲ್ಲ. ಆದರೆ ಸಂಸತ್ತಿಗೆ 42 ಎಂಪಿಗಳನ್ನು ಕಳಿಸುವ ಪಶ್ಚಿಮ ಬಂಗಾಳ ಹಲವು ಕಾರಣಗಳಿಂದ ಪ್ರಾಮುಖ್ಯತೆ ಹೊಂದಿದೆ.

ಭಾರತದ ಸದ್ಯದ ರಾಜಕಾರಣದಲ್ಲಿ ಪ್ರಾದೇಶಿಕವಾಗಿ ಪ್ರಬಲವಾಗಿರುವ ಹಲವು ಕಾಂಗ್ರೆಸ್ಸೇತರ ವಿರೋಧ ಪಕ್ಷಗಳು ಮತ್ತು ದೊಡ್ಡ ನಾಯಕರಿದ್ದಾರಾದರೂ, ನರೇಂದ್ರ ಮೋದಿ ನಾಯಕತ್ವಕ್ಕೆ ಸೆಡ್ಡು ಹೊಡೆದು ನಿಂತಿರುವವರಲ್ಲಿ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯೇ ಅಗ್ರಗಣ್ಯರು. ತಳಮಟ್ಟದಲ್ಲಿ ಗಟ್ಟಿಯಾದ ಬೇಸ್‌ಅನ್ನು ಹೊಂದಿದ್ದು, ಗಣನೀಯ ಮಟ್ಟದ ಮುಸ್ಲಿಂ (27%) ಮತದಾರರ ಮತಗಳ ಅಖಂಡ ಬೆಂಬಲದೊಂದಿಗೆ, ಬಂಗಾಳಿ ಅಸ್ಮಿತೆಯ ಪ್ರಾದೇಶಿಕತೆಯನ್ನೂ ಮುಂದಿಡುತ್ತಾ ಘರ್ಜಿಸುತ್ತಿರುವ ಮಮತಾ ಬ್ಯಾನರ್ಜಿ ಗಮನ ಸೆಳೆದಿದ್ದಾರೆ. ಶರದ್ ಪವಾರ್, ತೇಜಸ್ವಿ ಯಾದವ್, ಅಖಿಲೇಶ್ ಯಾದವ್, ಸ್ಟಾಲಿನ್, ಪಿನರಾಯಿ ವಿಜಯನ್ ಇವರುಗಳಿಗಿಂತಲೂ ಅಬ್ಬರದಿಂದ ನರೇಂದ್ರ ಮೋದಿ-ಅಮಿತ್‌ಶಾ ಪಾರಮ್ಯಕ್ಕೆ ನೇರ ಸವಾಲೊಡ್ಡುತ್ತಿರುವವರು ಮಮತಾ. ವಾಜಪೇಯಿ ಸರ್ಕಾರವಿದ್ದಾಗ ಮಮತಾ ಬ್ಯಾನರ್ಜಿಯವರ ಟಿಎಂಸಿ ಮತ್ತು ಸ್ಟಾಲಿನ್ ತಂದೆ ಕರುಣಾನಿಧಿಯವರ ನಾಯಕತ್ವದ ಡಿಎಂಕೆ ಎರಡೂ ಎನ್‌ಡಿಎ ಭಾಗವಾಗಿದ್ದವು ಎಂಬುದನ್ನೂ ನೆನಪಿನಲ್ಲಿಡಬೇಕು.

ಆದರೆ, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಸಿಪಿಎಂನಿಂದ ಅಸಂತುಷ್ಟರಾಗಿದ್ದಾರೆ ಎಂಬುದನ್ನು ಅರಿತ ಮಮತಾ ಎನ್‌ಡಿಎಯಿಂದ ದೂರ ಸರಿದರು. ಸಿಂಗೂರಿನ ನಂತರ ತೀವ್ರ ಸಂಘರ್ಷ ಕಂಡು, ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಹಣಾಹಣಿ ಹೋರಾಟ ನಡೆದ ನಂದಿಗ್ರಾಮದಲ್ಲೂ ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿದ್ದರು. ಅದರ ನಂತರ 2011ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 35 ವರ್ಷಗಳ ಎಡಪಕ್ಷಗಳ ಸರ್ಕಾರವನ್ನು ಮಣಿಸಿ ಮಮತಾ ಬ್ಯಾನರ್ಜಿಯವರ ಪಕ್ಷ ಅಧಿಕಾರಕ್ಕೆ ಬಂದಿತು. ಅಲ್ಲಿಂದಾಚೆಗೆ ಎಡಪಕ್ಷಗಳು ಚೇತರಿಸಿಕೊಂಡಿಲ್ಲ. ಅದರ ನಂತರ 2016ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ ಎಡಪಕ್ಷಗಳು ಕಾಂಗ್ರೆಸ್‌ನ ನಂತರದ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟವು. ಈಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳೆರಡೂ ಸೇರಿದರೂ ದೂರದ ಮೂರನೇ ಸ್ಥಾನದಲ್ಲಿವೆ. ಹಣಾಹಣಿ ಬಿಜೆಪಿ ಹಾಗೂ ಟಿಎಂಸಿ ನಡುವೆ ಇದೆ. ಕೇವಲ 10 ವರ್ಷಗಳಲ್ಲಿ ಆದ ಈ ಬದಲಾವಣೆಗೆ ಮೂಲ ಕಾರಣವನ್ನು ಸಿಪಿಎಂನ ಆಡಳಿತದಲ್ಲಿ ನೋಡಬೇಕಿದೆ. ಇಲ್ಲದಿದ್ದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂನ ತಳಮಟ್ಟದ ಕಾರ್ಯಕರ್ತರು ಕಟು ಸೈದ್ಧಾಂತಿಕ ವಿರೋಧಿ ಬಿಜೆಪಿಯ ಪರವಾಗಿ ನಿಂತಿದ್ದೇಕೆ ಎಂಬುದು ಅರ್ಥವಾಗುವುದಿಲ್ಲ. ಆ ಅರ್ಥದಲ್ಲಿ ನೋಡಿದರೆ ಬಂಗಾಳದ ಈ ಸಾರಿಯ ಚುನಾವಣೆಯು, ಬಂಗಾಳದ ಮಟ್ಟಿಗೆ ಹಳೆಯ ವರಸೆಯೇ. ಒಂದೇ ವ್ಯತ್ಯಾಸವೆಂದರೆ ಅದು ಒಂದರ್ಥದಲ್ಲಿ ಸಮಬಲದ ಪೈಪೋಟಿಯಾಗಿದೆ.

ಬಂಗಾಳದಲ್ಲಿ 8 ಹಂತದ ಚುನಾವಣೆ: ಮೋದಿ, ಶಾ ತಂತ್ರ ಎಂದು ಮಮತಾ ಬ್ಯಾನರ್ಜಿ ಆಕ್ರೋಶ
PC: NH

ಇದು ಅರ್ಥವಾಗಬೇಕೆಂದರೆ ಪಶ್ಚಿಮ ಬಂಗಾಳದಲ್ಲಿ ದೀರ್ಘ ಕಾಲ ಆಳ್ವಿಕೆ ನಡೆಸಿದ ಸಿಪಿಎಂನ ಆಡಳಿತ ವೈಖರಿಯನ್ನು ಒಮ್ಮೆ ಹಿಂತಿರುಗಿ ನೋಡಬೇಕು. ಕಮ್ಯುನಿಸ್ಟ್ ಪಕ್ಷವಾಗಿ ಸಿಪಿಎಂ ಅಧಿಕಾರಕ್ಕೆ ಬಂದ ನಂತರ ಆಪರೇಷನ್ ಬರ್ಗಾ ಮೂಲಕ ಭೂ ಹಂಚಿಕೆಗೆ ಗಮನ ನೀಡಿದ್ದು, ಆರಂಭದಲ್ಲಿ ಕಾರ್ಮಿಕರ ಹಕ್ಕುಗಳ ಪರವಾಗಿಯೂ ನಿಂತಿದ್ದು ಸೇರಿದಂತೆ ಹಲವು ಜನಪರ ಕ್ರಮಗಳಿಗೆ ಆದ್ಯತೆ ನೀಡಿತ್ತು. ಆದರೆ, ಸಿಪಿಎಂನ ಇಡೀ ಆಡಳಿತಾವಧಿಯಲ್ಲಿ ಅಭಿವೃದ್ಧಿ, ಸಮಾನತೆ, ಸಾಮಾಜಿಕ ನ್ಯಾಯ, ಶೋಷಿತ ಸಮುದಾಯಗಳಿಗೆ ಪ್ರಾಶಸ್ತ್ಯ ಇವುಗಳು ಪ್ರಧಾನವಾಗಿರಲಿಲ್ಲ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಮಾತ್ರವಲ್ಲದೇ, ಬಂಗಾಳದ ಸಮಾಜದಲ್ಲಿ ಎಡಪಕ್ಷಗಳ, ಅದರಲ್ಲೂ ಸಿಪಿಎಂನ ಅಧಿಕಾರ ನಡೆದ ರೀತಿಗೆ ಅದರದ್ದೇ ಆದ ಛಾಪು ಇತ್ತು. ಇಂದು ಟಿಎಂಸಿ ಅಧಿಕಾರ ಚಲಾಯಿಸುತ್ತಿರುವ ರೀತಿ ಮತ್ತು ನಂತರ ಬಿಜೆಪಿಯು ಅಧಿಕಾರಕ್ಕೆ ಬಂದರೆ ಯಾವ ರೀತಿ ಅಧಿಕಾರ ನಡೆಸುತ್ತದೆಯೋ ಅದರ ಬೀಜಗಳು ಅಲ್ಲೇ ಬಿತ್ತಲ್ಪಟ್ಟಿದ್ದವು.

ಸಿಪಿಎಂನ ಪಕ್ಷದ ಕಚೇರಿಯು ಪೊಲೀಸ್ ಸ್ಟೇಷನ್ ಮತ್ತು ತಹಸೀಲ್ದಾರ್ ಕಚೇರಿಗಿಂತ ಹೆಚ್ಚಿನ ಅಧಿಕಾರ ಹೊಂದಿರುತ್ತವೆ ಎಂಬುದು ಸಾಮಾನ್ಯ ತಿಳುವಳಿಕೆಯಾಗಿತ್ತು. ಗ್ರಾಮ ಮಟ್ಟದಲ್ಲಿ ಅದನ್ನು ಸುಲಭದಲ್ಲಿ ಪ್ರಶ್ನಿಸುವುದು ದುಸ್ಸಾಧ್ಯವಾಗಿತ್ತು. ಒಂದು ಉದಾಹರಣೆ ಹೇಳುವುದಾದರೆ, ಪಂಚಾಯಿತಿ ಚುನಾವಣೆಗಳಲ್ಲಿ ಮೂರನೇ ಒಂದು ಭಾಗದಷ್ಟು ಕ್ಷೇತ್ರಗಳಲ್ಲಿ ಅವರೆದುರು ನಾಮಪತ್ರ ಸಲ್ಲಿಸುವುದೇ ಸಾಧ್ಯವಿರಲಿಲ್ಲ. ಆ ರೀತಿಯ ಧೈರ್ಯ ಯಾರಾದರೂ ಮಾಡಿದರೆ ಅವರು ಜೀವಂತ ಇರದ ಸ್ಥಿತಿ ಕೆಲವೆಡೆ ಇತ್ತು. ಹಾಗಾಗಿಯೇ ತಳಮಟ್ಟದಲ್ಲಿ ಸಿಪಿಎಂಅನ್ನು ಎದುರಿಸಲಾಗದೇ ಶರಣಾಗುವುದು ಏಕೈಕ ಸಾಧ್ಯತೆಯಿರುವ ಹಲವು ಭಾಗಗಳು ಅಲ್ಲಿದ್ದವು. ಆ ಪಕ್ಷದಲ್ಲಿರಲು ಬಯಸದವರು ಕನಿಷ್ಠ ರಕ್ಷಣೆ ಬೇಕೆಂದರೂ ಬಲಾಢ್ಯವಾದ ಇನ್ನೊಂದು ಪಕ್ಷದ ಆಸರೆ ಬಯಸಿ ಹೋಗಬೇಕಾಗುತ್ತಿತ್ತು. ಆದರೆ ದೀರ್ಘಕಾಲದ ಆಡಳಿತ ವಿರೋಧಿ ಅಲೆಯ ಜೊತೆಗೆ ಹಲವು ಸಂಗತಿಗಳು ಒಟ್ಟು ಸೇರಿ ಕೊನೆಗೊಮ್ಮೆ ಎಡಪಕ್ಷಗಳ ಅಧಿಕಾರ ಕೊನೆಗೊಂಡಾಗ ಟಿಎಂಸಿ ಇದೇ ವಿಧಾನವನ್ನು ತನ್ನದಾಗಿಸಿಕೊಂಡಿತು; ಸಿಪಿಎಂಗಿಂತ ಮೂರು ಪಟ್ಟು ಹೆಚ್ಚು. ಸ್ಥಳೀಯವಾಗಿ ಟಿಎಂಸಿಯನ್ನು ಎದುರಿಸಿ ನಿಲ್ಲುವುದು ಸಾಧ್ಯವೇ ಇರಲಿಲ್ಲ. 2018ರ ಪಂಚಾಯಿತಿ ಚುನಾವಣೆಗಳಲ್ಲಿ 58,692 ಸೀಟುಗಳ ಪೈಕಿ 20,159 ಕ್ಷೇತ್ರಗಳಲ್ಲಿ ಟಿಎಂಸಿ ಎದುರು ಅಭ್ಯರ್ಥಿಯಾಗಲು ಯಾರೂ ಧೈರ್ಯ ಮಾಡಲಿಲ್ಲ.

ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯವಾಗಿ ಟಿಎಂಸಿಯೆದುರು ರಕ್ಷಣೆ ಕೊಡಲು ಬೇಕಾದ ಬಲವನ್ನು ಹೊಂದಿರುವ ಪಕ್ಷದ ಜೊತೆಗೆ ಎಲ್ಲಾ ವಿರೋಧಿಗಳೂ ಧ್ರುವೀಕರಣವಾಗುತ್ತಾರೆ. ಸಿಪಿಎಂನ ಎಷ್ಟೋ ಬೆಂಬಲಿಗ ಬಳಗ ಅಧಿಕಾರವಿಲ್ಲದೇ ಹೋದಾಗ ಟಿಎಂಸಿ ಜೊತೆಗೆ ಹೋಗಿತ್ತು; ನಂತರ ಅವರಿಗೆ ಬಿಜೆಪಿಯು ಆಸರೆಯಾಗಿದೆ. ಏಕೆಂದರೆ ಸಿಪಿಎಂ ಅಥವಾ ಕಾಂಗ್ರೆಸ್ ಅವರಿಗೆ ರಕ್ಷಣೆಯನ್ನು ಒದಗಿಸಲು ಶಕ್ತವಾಗಿಲ್ಲ. ’ಸಿಪಿಎಂನ ಕೇಡರ್ ಸ್ಥಳೀಯವಾಗಿ ಬಿಜೆಪಿಯ ಪರವಾಗಿ ನಿಂತಿದ್ದರು ಎಂಬ ವರದಿಗಳನ್ನು ನೋಡಿ ನಮಗೆ ಶಾಕ್ ಆಯಿತು’ ಎಂದು ಹಲವರು ಹೇಳುವುದನ್ನು ಕೇಳಿದ್ದೇವೆ. ಇದು ಎಡಪಕ್ಷವೊಂದು ಅಭಿವೃದ್ಧಿ, ಸಮಾನತೆ, ಶೋಷಿತ ಸಮುದಾಯಗಳೆಲ್ಲವನ್ನೂ ಆತುಕೊಳ್ಳುವುದನ್ನು ಮಾಡದೇ ಚುನಾವಣೆ ಗೆಲ್ಲಲು ಬೇಕಾದ ವಿವಿಧ ಹಂತಗಳ ಅಧಿಕಾರ ಸ್ಥಾಪನೆಯನ್ನಷ್ಟೇ ಮಾಡಿದಾಗ ಏನಾಗುತ್ತದೆ ಎಂಬುದಕ್ಕೆ ನಿದರ್ಶನ.

ಹಾಗೆ ನೋಡಿದರೆ, ಇದೇ ಸಿಪಿಎಂ ಕೇರಳದಲ್ಲಿ ಇದಕ್ಕಿಂತ ಭಿನ್ನವಾಗಿದೆ. ಯಾವ ಪ್ರಮಾಣಕ್ಕೆಂದರೆ ಎಡಪಕ್ಷಗಳ ವೈಚಾರಿಕ ಪ್ರಾಬಲ್ಯದ ಕಾರಣಕ್ಕಾಗಿಯೇ ಅಲ್ಲಿನ ಕಾಂಗ್ರೆಸ್ ಸಹಾ ಉಳಿದೆಡೆಗಳಿಗಿಂತ ಉತ್ತಮವಾಗಿದೆ. ಅಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗಿದ್ದು ಇಬ್ಬರಿಗೂ, ಒಟ್ಟಾರೆ ರಾಜ್ಯಕ್ಕೂ ಒಳ್ಳೆಯದನ್ನೇ ಮಾಡಿತ್ತು. ಹಾಗೆಂದು ರಾಜಕೀಯ ಹಿಂಸಾಚಾರವು ಕೇರಳದಲ್ಲಿ ಕಡಿಮೆಯೆಂದೇನಲ್ಲ. ಅದು ಸಮಬಲರ ನಡುವೆ ನಡೆಯುತ್ತದೆ ಎಂದಷ್ಟೇ ಅರ್ಥ.

ತಳಮಟ್ಟದಲ್ಲಿ ಎರಡರಲ್ಲೊಂದು ಉಳಿಯಬೇಕು ಎಂಬ ಧ್ರುವೀಕರಣವುಂಟಾಗುವ ಸಂದರ್ಭ ಬಂದಾಗ, ಹೊಸ ಬಲಾಢ್ಯ ಆಟಗಾರನಿಗೆ ಅನುಕೂಲ ಹೆಚ್ಚು. ಏಕೆಂದರೆ ಬೇರೆ ಬೇರೆ ಕಾರಣಗಳಿಂದಾಗಿ ಅಸಮಾಧಾನ ಹೊಂದಿರುವ ಎಲ್ಲರೂ ಅಲ್ಲಿಗೆ ಹೋಗಲು ಬಯಸುತ್ತಾರೆ. ಒಂದು ವೇಳೆ ಕೇರಳದಲ್ಲಿ ಕಾಂಗ್ರೆಸ್ ಸಿಪಿಎಂಗೆ ಸಮಬಲದ ಪೈಪೋಟಿ ನೀಡಲಾಗದಿದ್ದರೆ, ಅವರ ಕಾರ್ಯಕರ್ತರು ಬಿಜೆಪಿಯೆಡೆಗೆ ಹೋಗುವುದರಲ್ಲಿ ಸಂಶಯವೇ ಇಲ್ಲ. ಅದನ್ನು ಮನಗಂಡ ಕಾಂಗ್ರೆಸ್ ಅದನ್ನು ತಡೆಯಬಲ್ಲ ಸೆಕ್ಯುಲರ್ ಯೋಜನೆಗಿಂತ, ಮೃದು ಹಿಂದುತ್ವದ ಧೋರಣೆಯನ್ನು ಅಳವಡಿಸಿಕೊಂಡು ತನ್ನ ನೆಲೆಯನ್ನು ಉಳಿಸಿಕೊಳ್ಳಲು ಲಾಗಾ ಹಾಕುತ್ತಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಷಯದಲ್ಲಿ ಬಿಜೆಪಿ ಮತ್ತು ಕೇರಳದ ಕಾಂಗ್ರೆಸ್ ಪಕ್ಷವೆರಡರ ನಿಲುವೂ ಒಂದೇ ಆಗಿದೆ ಎಂಬುದನ್ನು ಗಮನಿಸಬೇಕು. ಇದನ್ನು ಮೀರಿದ ರೀತಿಯ ರಾಜಕಾರಣ ಮಾಡಬಹುದೆಂದು ಕಾಂಗ್ರೆಸ್‌ಗೆ ಅನಿಸಿದಂತಿಲ್ಲ.

PC : Twitter

1974ರಿಂದಲೂ ಪ.ಬಂಗಾಳದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಲೇ ಇದ್ದ ಬಿಜೆಪಿ (ಅಂದಿನ ಜನಸಂಘ-ಆರೆಸ್ಸೆಸ್)ಯು ಬಲ ಪಡೆದುಕೊಳ್ಳಲು ಸಾಧ್ಯವಾಗಿದ್ದು ಟಿಎಂಸಿಯೆದುರು ಸಿಪಿಎಂ ದುರ್ಬಲವಾದಾಗಲೇ. ಒಂದು ವೇಳೆ ಟಿಎಂಸಿಯ ಬದಲು ಸಿಪಿಎಂನ ಅಧಿಕಾರವೇ ಇಲ್ಲಿಯವರೆಗೆ ಇದ್ದಿದ್ದರೂ, ಬಿಜೆಪಿಯು ಈ ಹೊತ್ತಿಗೆ ಪ್ರವರ್ಧಮಾನಕ್ಕೆ ಬರುತ್ತಿತ್ತು. ಹಾಗಾಗದೇ ಇಂದು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಬೆಂಬಲವೂ ಇರುವ ಬಲಪಂಥೀಯ ಪಕ್ಷ ಮತ್ತು ಹಿಂದುತ್ವದ ರಾಜಕಾರಣ ಮಾಡುವ ತೀವ್ರ ಬಲಪಂಥೀಯ ಪಕ್ಷದ ನಡುವೆ ಪೈಪೋಟಿ ನಡೆದಿದೆ. ನಿಜವಾದ ಎಡಪಂಥದ ರಾಜಕಾರಣ ಮಾಡಲಾಗದ ಸಿಪಿಎಂ ಆ ಕಾರಣಕ್ಕೇ ಸೋಲನ್ನೊಪ್ಪಿಕೊಂಡು 10 ವರ್ಷಗಳು ಗತಿಸಿವೆ. ನಿಜವಾದ ಎಡಪಂಥದ ರಾಜಕಾರಣವೆಂದರೆ ಪಶ್ಚಿಮ ಬಂಗಾಳದಲ್ಲಿ ಕೆಲವರು ಮುಂದಿಟ್ಟ ಎಂ-ಎಲ್ (ನಕ್ಸಲೈಟ್) ದಾರಿ ಅಲ್ಲ. ಹಾಗಾದರೆ ಅದೇನಾಗಿರಬಹುದಿತ್ತು ಎಂಬುದನ್ನು ಚರ್ಚಿಸುವುದು ಈ ಲೇಖನದ ಆದ್ಯತೆ ಅಲ್ಲವಾದರೂ, ದಲಿತರು, ಮುಸ್ಲಿಮರು ಮತ್ತು ಆದಿವಾಸಿಗಳನ್ನೂ ಒಳಗೊಳ್ಳುವ, ಅವರ ಹಕ್ಕುಗಳು ಹಾಗೂ ಅಭಿವೃದ್ಧಿಯ ಕುರಿತು ಕೆಲಸ ಮಾಡುವ ಆಡಳಿತ ಕಮ್ಯುನಿಸ್ಟ್ ಪಕ್ಷಗಳದ್ದಾಗಿರಲಿಲ್ಲ ಎಂಬುದನ್ನಂತೂ ಇಲ್ಲಿ ದಾಖಲಿಸಬೇಕು. ಎಡಪಕ್ಷಗಳ ಆಳ್ವಿಕೆಯಲ್ಲಿಯೇ ಪ.ಬಂಗಾಳದಲ್ಲಿ ಹಸಿವಿನ ಸಾವುಗಳು ದಾಖಲಾದವು ಮತ್ತು ಮುಸ್ಲಿಮರ ಪರಿಸ್ಥಿತಿ ಆ ರಾಜ್ಯದಲ್ಲಿ ಅತ್ಯಂತ ಕೆಟ್ಟದಾಗಿದೆ ಎಂಬುದನ್ನು ನ್ಯಾ.ಸಾಚಾರ್ ವರದಿ ದಾಖಲಿಸಿತ್ತು ಎಂಬುದನ್ನು ಮರೆಯಲಾದೀತೇ?

ಆದರೆ ಇದೀಗ ಬಾಣಲೆಯಿಂದ ಬೆಂಕಿಗೆ ಬಂದಂತಾಗಲಿಲ್ಲವೇ? ಸಿಪಿಎಂ ಬಲವಾಗಿ ಉಳಿದಿದ್ದರೆ ಒಳ್ಳೆಯದಲ್ಲವೇ ಎಂಬ ಪ್ರಶ್ನೆಯೂ ಬರಬಹುದು. ಆದರೆ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರಿತು, ಆಗಬೇಕಿರುವ ಬದಲಾವಣೆಗಳನ್ನು ಅರಿತು ನಡೆಯುವ ಹಾಗೂ ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸುವ ಕೆಲಸವನ್ನು ಮಾಡದಾದಾಗ ಇಂತಹವು ನಡೆಯುತ್ತವೆ. ಇದರ ಜೊತೆಗೆ ’ಮುಖ್ಯವಾಹಿನಿ ರಾಜಕಾರಣ’ ಮಾಡದ ಕೆಲವು ಸಂಘಟನೆಗಳ ಸ್ಥಿತಿಯನ್ನೂ ನೋಡಬೇಕು. ಸಿಪಿಎಂ ಆಡಳಿತವಿದ್ದಾಗ ಅದನ್ನು ವಿರೋಧಿಸಿ ಹೋರಾಟ ಮಾಡಿದ, ಸಂಸದೀಯ ರಾಜಕಾರಣದಲ್ಲಿ ಭಾಗಿಯಾಗದ ಹಲವು ಸಂಘಟನೆಗಳು/ಎಡಪಕ್ಷಗಳು ಬಂಗಾಳದಲ್ಲಿವೆ. ಅವರು ಸಿಂಗೂರು, ನಂದಿಗ್ರಾಮದ ಹೋರಾಟದಲ್ಲೂ ಸಕ್ರಿಯವಾಗಿದ್ದರು. ಅವರೀಗ, ಈ ಚುನಾವಣೆಯ ಸಂದರ್ಭದಲ್ಲಿ ಏನು ಮಾಡುತ್ತಿದ್ದಾರೆ? ಅವರು ’ನೋ ವೋಟ್ ಟು ಬಿಜೆಪಿ’ (ಬಿಜೆಪಿಗೆ ಮತ ಹಾಕಬೇಡಿ) ಎಂಬ ಪ್ರಚಾರ ಮಾಡುತ್ತಿದ್ದಾರೆ. ಈ ಪ್ರಚಾರವೂ ಒಂದಷ್ಟು ಸುದ್ದಿ ಮಾಡಿದೆ. ಆದರೆ ದುರಂತವೆಂದರೆ, ಸ್ವತಃ ತಮಗೂ ಓಟು ಕೇಳಲಾಗದ, ಸಿಪಿಎಂ-ಕಾಂಗ್ರೆಸ್ ಮೈತ್ರಿಗೂ ಮತ ಕೇಳಲಾಗದ, ತೃಣಮೂಲ ಕಾಂಗ್ರೆಸ್ಸಿಗೂ ಮತ ಕೇಳಲಾಗದ ದುಸ್ಥಿತಿಯಲ್ಲಿ ಅವರಿದ್ದಾರೆ. ಆದರೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದಷ್ಟೇ ಅವರ ಗುರಿಯಾಗಿದೆ. ಬಂಗಾಳದ ಸಂದರ್ಭದಲ್ಲಿ ಅದರ ಅರ್ಥ ತೃಣಮೂಲ ಕಾಂಗ್ರೆಸ್ಸನ್ನು ಬೆಂಬಲಿಸಿ ಎಂದೇ ಆಗಿರುತ್ತದೆ.

ಸಿಪಿಎಂನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬಂಗಾಳವನ್ನು ವಶಪಡಿಸಿಕೊಳ್ಳಲು ನುಗ್ಗಿರುವ ಬಿಜೆಪಿಯನ್ನು ಸೋಲಿಸಲು ತೃಣಮೂಲ ಕಾಂಗ್ರೆಸ್ಸಿನ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂಬ ಅಸಾಧ್ಯ ಸಲಹೆಯನ್ನು ಕೆಲವರು ಸಿಪಿಎಂಗೆ ನೀಡುತ್ತಾರೆ. ಅಂಥವರಿಗೆ ಬಂಗಾಳದ ರಾಜಕೀಯ ಗೊತ್ತಿಲ್ಲ ಎಂದೇ ಅರ್ಥ. ಸೀತಾರಾಂ ಯಚೂರಿಯವರು ಈ ಮೈತ್ರಿ ಏಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ. ಸಾರಾಂಶದಲ್ಲಿ ಅವರ ಪ್ರಕಾರ ’ಬಂಗಾಳದಲ್ಲಿ ಈಗ ತೃಣಮೂಲದ ಪರ ಮತ್ತು ಅದರ ವಿರುದ್ಧ ಎಂಬ ಎರಡು ಸಾಧ್ಯತೆಗಳಷ್ಟೇ ಇವೆ. ನಾವು ತೃಣಮೂಲದ ವಿರುದ್ಧ ಇದ್ದರೆ, ಅದರ ವಿರೋಧಿ ಮತಗಳೆಲ್ಲಾ ಬಿಜೆಪಿಗೇ ಹೋಗುವುದನ್ನು ತಡೆಯಬಹುದು.

ನಾವು ಮೈತ್ರಿ ಮಾಡಿಕೊಂಡರೇ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚು (ಇದು ಅವರ ಮಾತಿನ ಅರ್ಥ, ಇದೇ ವಾಕ್ಯಗಳಲ್ಲಿ ಅವರು ಹೇಳಿಲ್ಲ).’ ಆದರೆ ಸಿಪಿಐ ಎಂಎಲ್ ಲಿಬರೇಷನ್‌ನ ದೀಪಂಕರ್ ಭಟ್ಟಾಚಾರ್ಯರು ಈ ನಿಲುವನ್ನು ವಿರೋಧಿಸಿದ್ದಾರೆ.

ಇವೆಲ್ಲದರಾಚೆಗೂ ಹೇಳಬೇಕಾದ ಒಂದು ಸಂಗತಿಯೆಂದರೆ, ಈ ರಾಜ್ಯದಲ್ಲಿ ಅಥವಾ ಎಲ್ಲೇ ಆದರೂ ಎಡಪಕ್ಷಗಳ ಅಸ್ತಿತ್ವ ಕುಗ್ಗಲು ಅವರದ್ದೇ ತಪ್ಪುಗಳಾಚೆ ’ಎಡಪಕ್ಷಗಳ ಅಸ್ತಿತ್ವ ಮುಗಿಯಿತು’ ಎಂಬಂತೆ ಬಿಂಬಿಸುವುದೂ ಒಂದು ಕಾರಣವಾಗಿದೆ. ಹೀಗೆ ಹೇಳುತ್ತಿರುವಾಗಲೇ ಪಕ್ಕದ ಬಿಹಾರದಲ್ಲಿ ಸಿಪಿಐಎಂಎಲ್ ಲಿಬರೇಷನ್ ಪಕ್ಷವು 12 ಎಂಎಲ್‌ಎ ಸೀಟುಗಳನ್ನು ಗೆದ್ದುಕೊಂಡಿದೆ ಅಲ್ಲವೇ? ನಿಂತ ಸೀಟುಗಳು ಮತ್ತು ಗೆದ್ದ ಸೀಟುಗಳ ಲೆಕ್ಕಾಚಾರ ನೋಡುವುದಾದರೆ ಅದು ಕಾಂಗ್ರೆಸ್ಸಿಗಿಂತ ಉತ್ತಮವಾದ ಸಾಧನೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಈ ಸಾರಿ ಏನಾಗುತ್ತದೆ ಎಂಬುದು ಎಡಪಕ್ಷಗಳ ದೃಷ್ಟಿಯಿಂದ ಮುಂದಿನ ಒಂದು ದಶಕದಲ್ಲಿ ಏನಾಗಬಹುದು ಎಂಬುದನ್ನು ತೀರ್ಮಾನಿಸಲಿದೆ.

ಟಿಎಂಸಿ ಗೆಲುವಿನ ಕುರಿತು ಆ ಪಕ್ಷದ ನಾಯಕರಿಗಿಂತ ಆತ್ಮವಿಶ್ವಾಸದಿಂದ ಮಾತಾಡುತ್ತಿರುವುದು ಪ್ರಶಾಂತ್ ಕಿಶೋರ್. ಚುನಾವಣೆಗಳನ್ನು ಗೆಲ್ಲಲು ರಾಜಕೀಯ ಪಕ್ಷಗಳಿಗೆ ’ಸಹಾಯ’ ಮಾಡುವ ವೃತ್ತಿಯ ಈತ ಬಿಜೆಪಿಯು ಮೂರಂಕಿಯನ್ನು ಮುಟ್ಟಿದರೆ ತನ್ನೀ ವೃತ್ತಿಯನ್ನು ಬಿಟ್ಟುಬಿಡುತ್ತೇನೆ ಎಂದು ಹೇಳಿದ್ದಾರೆ. ಮುಂದೊಂದು ದಿನ ದೇಶದ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಹೊಂದಿರುವ ಪ್ರಶಾಂತ್ ಕಿಶೋರ್‌ರ ವೃತ್ತಿ/ರಾಜಕೀಯ ಧೋರಣೆಯ ಬಗ್ಗೆ ನಮಗೆ ಗೌರವವಿರಬೇಕಿಲ್ಲ; ಆದರೆ ನಿರ್ಲಕ್ಷ್ಯ ಮಾಡುವ ಹಾಗೂ ಇಲ್ಲ.

ಪ್ರಶಾಂತ್ ಕಿಶೋರ್ ಮಾತಿನ ಮೇಲೆ ವಿಶ್ವಾಸವಿಟ್ಟು ಟಿಎಂಸಿಯ ಗೆಲುವು ಮತ್ತು ಬಿಜೆಪಿಯ ಸೋಲಿನ ಸಾಧ್ಯತೆಯ ಕುರಿತು ಮಾತಾಡಬೇಕಿಲ್ಲ. ವಾಸ್ತವದಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಪ್ರಾಬಲ್ಯದ ಎದುರು ಬಿಜೆಪಿಯ ಪೈಪೋಟಿ ಅಲ್ಲಿ ನಡೆಯುತ್ತಿದೆಯೇ ಹೊರತು, ಟಿಎಂಸಿಯ ಆಡಳಿತದ ವೈಫಲ್ಯದ ಎದುರು ವಿರೋಧ ಪಕ್ಷಗಳ ಹೋರಾಟ ಅಲ್ಲ. ಇಂತಹ ವಿಚಿತ್ರ ಸನ್ನಿವೇಶದಲ್ಲಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯು ನಡೆಯುತ್ತಿದೆ ಹಾಗೂ ಫಲಿತಾಂಶವು ಮೇ 2ರಂದು ಹೊರಬೀಳಲಿದೆ. ಇವತ್ತಿನ ಪರಿಸ್ಥಿತಿಯ ಪ್ರಕಾರ ಟಿಎಂಸಿಯು ಮರಳಿ ಅಧಿಕಾರ ಹಿಡಿಯುವಂತೆ ಕಾಣುತ್ತಿದ್ದು, ಪಶ್ಚಿಮ ಬಂಗಾಳದ ದೃಷ್ಟಿಯಿಂದ ಮತ್ತು ದೇಶದ ದೃಷ್ಟಿಯಿಂದ ಅದಕ್ಕಿಂತ ಉತ್ತಮವಾದ ಫಲಿತಾಂಶ ಅಸಾಧ್ಯವಾಗಿದೆ.


ಇದನ್ನೂ ಓದಿ: ‘ಮೊದಲ ಕ್ಯಾಬಿನೆಟ್ ಸಭೆಯಲ್ಲೆ ಸಿಎಎ ಜಾರಿ’- ಪಶ್ಚಿಮ ಬಂಗಾಳ ಬಿಜೆಪಿ ಪ್ರಣಾಳಿಕೆ ಭರವಸೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ್ದಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿತ: ಅವಮಾನ ತಾಳಲಾರದೆ ಆತ್ಮಹತ್ಯೆ

0
ಬೈಕ್‌ನಲ್ಲಿ ಓವರ್‌ಟೇಕ್ ಮಾಡಿದ ಎಂಬ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನ ಬೈಕ್ ಮತ್ತು ಮೊಬೈಲ್ ಕಿತ್ತುಕೊಂಡು ಸವರ್ಣೀಯರು ಮರಕ್ಕೆ ಕಟ್ಟಿ ಥಳಿಸಿರುವ ಮತ್ತು ಆ ಯುವಕ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಜಾತಿ...