Homeಮುಖಪುಟಸಂದರ್ಶನ; ಮುಖಂಡರಲ್ಲ, ರೈತರೇ ಈ ಆಂದೋಲನದ ನಿಜವಾದ ಚಾಲಕರಾಗಿದ್ದಾರೆ: ಯೋಗೇಂದ್ರ ಯಾದವ್

ಸಂದರ್ಶನ; ಮುಖಂಡರಲ್ಲ, ರೈತರೇ ಈ ಆಂದೋಲನದ ನಿಜವಾದ ಚಾಲಕರಾಗಿದ್ದಾರೆ: ಯೋಗೇಂದ್ರ ಯಾದವ್

ಎಂಎಸ್‌ಪಿಯ ರಾಷ್ಟ್ರೀಯ ಅಭಿಯಾನವನ್ನು ಕರ್ನಾಟಕದಿಂದಲೇ ಪ್ರಾರಂಭಿಸಿದ್ದೇವೆ; ಇದು ಎಲ್ಲೆಡೆ ಹರಡುತ್ತದೆ.

- Advertisement -
- Advertisement -

ರೈತ ಮುಖಂಡ ಮತ್ತು ಚಿಂತಕ ಯೋಗೇಂದ್ರ ಯಾದವ್ ಅವರು ಕರ್ನಾಟಕದಲ್ಲಿ ನಡೆಯಲಿರುವ ರೈತ ಮಹಾಪಂಚಾಯತ್‌ನ ಸಿದ್ಧತೆಗಳ ಬಗ್ಗೆ ಕರ್ನಾಟಕದ ಮುಖಂಡರು ಮತ್ತು ಸಂಘಟನೆಗಳೊಂದಿಗೆ ಚರ್ಚೆ ಮಾಡಿ ರೂಪುರೇಷೆ ಸಿದ್ಧಪಡಿಸಲು ಇತ್ತೀಚೆಗೆ ಬೆಂಗಳೂರಿನಲ್ಲಿ ಇದ್ದರು. ರಾಜಶೇಖರ್ ಅಕ್ಕಿ ನ್ಯಾಯಪಥ ಪತ್ರಿಕೆಗಾಗಿ ನಡೆಸಿದ ಸಂದರ್ಶನ ಇದು. ರೈತ ಹೋರಾಟ ಇಲ್ಲಿಯವರೆಗೂ ರೂಪುಗೊಂಡ ಬಗೆ, ಮುಂದೆ ಅದು ತುಳಿಯಲಿರುವ ದಾರಿ ಮುಂತಾದ ವಿಷಯಗಳ ಬಗ್ಗೆ ಯೋಗೇಂದ್ರ ಯಾದವ್ ಉತ್ತರಿಸಿದ್ದಾರೆ.

ಅಕ್ಕಿ: ನೀವು ಮುಂಚೆಯಿಂದ ಹೇಳುತ್ತಿದ್ದು; ಕೃಷಿ ವಲಯವೇ ಭಾರತದಲ್ಲಿ ಬದಲಾವಣೆಯ ಕೇಂದ್ರವಾಗಿರುತ್ತೆ. ಈಗ ಅದರ ಸಮಯ ಬಂದಿದೆ ಎಂದು ನಿಮಗೆ ಅನಿಸುತ್ತಿದೆಯೇ?

ಯೋಗೆಂದ್ರ ಯಾದವ: ಖಂಡಿತವಾಗಿಯೂ. ನೋಡಿ ನಾನು ಅನೇಕ ಸಮಯದಿಂದ ಹೇಳುತ್ತಿದ್ದುದು, ನಾವು ಗ್ರಾಮೀಣ ಕೃಷಿ ವಲಯವನ್ನು ನಿರ್ಲಕ್ಷಿಸುತ್ತಿದ್ದೇವೆ ಎಂದು. ಇದೇ ಭಾರತದ ಅತಿ ದೊಡ್ಡ ಬಿಕ್ಕಟ್ಟು ಹಾಗೂ ಇದೇ ಭಾರತಕ್ಕೆ ಅತೀ ದೊಡ್ಡ ಅವಕಾಶವೂ ಆಗಲಿದೆ. ಇಂದು ನಾವು ನೋಡುತ್ತಿರುವುದು, ಈ ಬಿಕ್ಕಟ್ಟಿನ ಸ್ಫೋಟ ಹಾಗೂ ಅದರೊಂದಿಗೆ ಸೃಷ್ಟಿಯಾಗಿರುವ ಅವಕಾಶ. ಈ ರೈತರ ಆಂದೋಲನವನ್ನು ಕೇವಲ ರೈತರಿಗಾಗಿ ಮಾತ್ರವಲ್ಲ, ಇಡೀ ಭಾರತಕ್ಕೇ ಒಂದು ಅದ್ಭುತ ಅವಕಾಶವನ್ನಾಗಿ ನಾನು ನೋಡುತ್ತೇನೆ. ಏಕೆಂದರೆ, ಈ ರೈತರ ಆಂದೋಲನವು ಈ ಮೂರು ಕಾಯಿದೆಗಳನ್ನು ಹಿಂಪಡೆಯುವುದನ್ನೂ ಮೀರಿದ ಭರವಸೆ ನೀಡುತ್ತದೆ. ಹೌದು, ಈ ಮೂರು ಕಾಯಿದೆಗಳನ್ನು ರದ್ದುಗೊಳಿಸುವುದು ಅವರ ಪ್ರಮುಖ ಬೇಡಿಕೆ. ಹಾಗೂ ಸರಕಾರ ಈ ಬೇಡಿಕೆಗಳಿಗೆ ಮಣೆ ಹಾಕಲೇಬೇಕಾಗುತ್ತದೆ ಎಂದು ನನಗೆ ಅನಿಸುತ್ತದೆ.

ರೈತರು ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕ ಹಕ್ಕನ್ನಾಗಿಸುವ ಬೇಡಿಕೆಯನ್ನೂ ಇಟ್ಟಿದ್ದಾರೆ, ಅದು ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯ ಬೇಡಿಕೆ ಇಟ್ಟಂತೆ ಹಾಗೂ ಗ್ರಾಮೀಣ ಮಕ್ಕಳು ಆರ್‌ಟಿಇಗೆ (ಶಿಕ್ಷಣದ ಹಕ್ಕು) ಬೇಡಿಕೆ ಇಟ್ಟಂತೆ ಹಾಗೂ ದೇಶದ ಬಡವರಿಗೆ ಆಹಾರದ ಹಕ್ಕಿದ್ದಂತೆ. ಹಾಗಾಗಿ ರೈತರ ಬೇಡಿಕೆಯು ವಿಶೇಷವೇನಲ್ಲ. ಆದರೆ ರೈತರ ಆಂದೋಲನಕ್ಕೆ ಇವುಗಳನ್ನೆಲ್ಲ ಮೀರಿದ ಅವಕಾಶವಿದೆ. ಏಕೆಂದರೆ, ಮೊದಲ ಬಾರಿಗೆ, ಜನವಿರೋಧಿಯಾದ, ಈ ದೇಶದ ಗಣರಾಜ್ಯದ ಸ್ವರೂಪವನ್ನು ಬುಡಮೇಲು ಮಾಡುತ್ತಿರುವ ಈ ಆಡಳಿತಕ್ಕೆ, ಅವರಿಗೆ ತಕ್ಕ ಪ್ರತಿಸ್ಪರ್ಧಿ ಸಿಕ್ಕದಂತಾಗಿದೆ. ಸಿಎಎ ವಿರೋಧಿ ಆಂದೋಲನವನ್ನು ಮುಸ್ಲಿಮರ ಪ್ರತಿಭಟನೆ ಎಂದು ತಿರುಚಲು ಈ ಸರಕಾರಕ್ಕೆ ಸಾಧ್ಯವಾಗಿತ್ತು. ಇತರ ಪ್ರತಿಭಟನೆಗಳನ್ನೂ ಹತ್ತಿಕ್ಕಿತ್ತು ಆದರೆ ಈ ಆಂದೋಲನ ಗಟ್ಟಿಯಾಗಿ ನಿಂತಿದೆ. ಹಾಗಾಗಿ ನಾನು ನಮ್ಮ ಪ್ರಜಾಪ್ರಭುತ್ವಕ್ಕೆ ಮತ್ತು ಗಣರಾಜ್ಯಕ್ಕೆ ಒಂದು ಅದ್ಭುತ ಆಶಾಕಿರಣವನ್ನು ಕಾಣುತ್ತಿದ್ದೇನೆ.

ಈ ಗಣರಾಜ್ಯವನ್ನು ಉಳಿಸುವ ಹೊರೆಯನ್ನು ರೈತರು ಇಂದು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆ. ರೈತರು ಮಾಡುತ್ತಿರುವ ಇನ್ನೂ ಮಹತ್ವದ ಕೆಲಸವೆಂದರೆ, ಅವರು ಈ ದೇಶವನ್ನು ಒಗ್ಗೂಡಿಸುತ್ತಿದ್ದಾರೆ. ನೋಡಿ, ಪಂಜಾಬ್ ಮತ್ತು ಹರಿಯಾಣದ ಮಧ್ಯೆ ವಿವಾದವಿತ್ತು, ಈಗ ಅದು ಇಲ್ಲವಾಗಿದೆ. ಪಶ್ಚಿಮ ಉತ್ತರಪ್ರದೇಶದಲ್ಲಿದ್ದ ಹಿಂದು-ಮುಸ್ಲಿಮ್ ಹಗೆತನವು ರಾತ್ರೋರಾತ್ರಿ ಕಾಣೆಯಾಗಿದೆ. ದೇಶವನ್ನು ಆಳುತ್ತಿರುವವರು ಈ ದೇಶವನ್ನು ವಿಭಜಿಸುತ್ತಿರುವಾಗ, ರೈತರು ಮತ್ತು ದೇಶದ ಸಾಮಾನ್ಯ ಪ್ರಜೆಗಳು ಈ ದೇಶವನ್ನು ಒಗ್ಗೂಡಿಸುತ್ತಿದ್ದಾರೆ. ಇದೇ ಆ ಆಶಾಕಿರಣ. ಇನ್ನೊಂದು ವಿಷಯ; ಈ ಆಂದೋಲನವು ಗ್ರಾಮೀಣ ಭಾರತ ಬಗ್ಗೆ ಮತ್ತು ಕೃಷಿಯ ಬಗ್ಗೆ ನಮ್ಮನ್ನು ಮರುಚಿಂತನೆ ಮಾಡಲು ಒತ್ತಾಯ ಮಾಡುತ್ತಿದೆ. ಏಕೆಂದರೆ ಗ್ರಾಮೀಣ ಮತ್ತು ಕೃಷಿ ವಲಯವನ್ನು ನಾವು ಭೂತಕಾಲವೆಂಬಂತೆ ನೋಡುತ್ತೇವೆ. ಅವುಗಳ ಕಾಲ ಮುಗಿಯಿತು, ಅವಕ್ಕೆ ಯಾವುದೇ ಭವಿಷ್ಯ ಇಲ್ಲ ಎಂದು ತಿಳಿದುಕೊಂಡಿದ್ದೇವೆ.

ಆದರೆ ವಾಸ್ತವವೇನೆಂದರೆ, ಇದೇ ವಲಯ ದೇಶದ ಸುಮಾರು ಶೇ.45 ಜನರಿಗೆ ಉದ್ಯೋಗ ನೀಡುತ್ತದೆ ಹಾಗೂ ಈ ಶೇ.45 ಜನರಿಗೆ ಬೇರೆಲ್ಲೂ ಹೋಗಲು ಅವಕಾಶವಿಲ್ಲ. ಹಾಗಾಗಿ ನಾವೆಲ್ಲ ಗ್ರಾಮೀಣ ಭಾರತ ಮತ್ತು ಕೃಷಿಯನ್ನು ನಮ್ಮ ಭವಿಷ್ಯ ಎಂದು ನೋಡಬಲ್ಲೆವೆ? ಭಾರತವು ದೇಶದ 140 ಕೋಟಿ ಜನರಿಗಷ್ಟೇ ಅಲ್ಲದೆ ಇಡೀ ವಿಶ್ವಕ್ಕೆ ಆಹಾರ ನೀಡುವಂತಾಗಬಹುದೇ? ಗ್ರಾಮೀಣ ಪ್ರದೇಶಗಳನ್ನು ಕೈಗಾರಿಕೆಗಳ ಕೇಂದ್ರ ಎಂದು ವಿಚಾರ ಮಾಡಬಹುದೇ? ಉದ್ಯೋಗ ಸೃಷ್ಟಿಯ ಜಾಗ ಎಂದು ನೋಡಬಹುದೇ? ಅಲ್ಲಿ ಉದ್ಯೋಗ ಸೃಷ್ಟಿಸುವುದು ಅತ್ಯಂತ ಅಗ್ಗ. ಬಹುಶಃ ಮೂವತ್ತು ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾವನ್ನು ಬಿಟ್ಟು ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಬ್ ಆಗಬಹುದು ಎಂದು ಯಾರೂ ಊಹಿಸಿದ್ದಿಲ್ಲ. ಅದನ್ನು ಊಹಿಸುವುದು ಕಷ್ಟ ಆದರೆ ಕೆಲವರು ಆ ರೀತಿ ಊಹಿಸಿದರು. ಅದೇ ರೀತಿ ಗ್ರಾಮೀಣ ಭಾರತವನ್ನು ಒಂದು ರೀತಿಯ ಕೈಗಾರಿಕೋದ್ಯಮದ ಕೇಂದ್ರ ಎಂದು ಊಹಿಬಹುದಲ್ಲವಾ. ಹಾಗೆ ಮಾಡಿದಲ್ಲಿ ಗ್ರಾಮೀಣ ವಲಯವನ್ನು ಭವಿಷ್ಯಕ್ಕೆ ಉತ್ತಮವಾಗಿ ಪರಿವರ್ತಿಸಿದಂತಾಗುತ್ತದೆ.

ಅಕ್ಕಿ: ಹೌದು, ಅದರ ಬಗ್ಗೆ ಇನ್ನೂ ಮಾತನಾಡುವುದಿದೆ. ಈಗ ಆಂದೋಲನದ ಬಗ್ಗೆ ಪ್ರಶ್ನೆಗಳಿವೆ. ಈ ಆಂದೋಲನ ಒಂದು ಐತಿಹಾಸಿಕ ಆಂದೋಲನ ಎಂಬುದರ ಬಗ್ಗೆ ಯಾವುದೇ ಸಂದೇಹವಿಲ್ಲ. ಪ್ರಶ್ನೆ ಏನೆಂದರೆ, ಬೇರೆ ಬೇರೆ ತರಹ ಗುಂಪುಗಳು, ಸಂಘಟನೆಗಳು ಈ ಆಂದೋಲನದ ನಾಯಕತ್ವ ವಹಿಸಲು ಹೇಗೆ ಸಾಧ್ಯವಾಯಿತು? ಇದು ಎಂದಿಗೂ ಸುಲಭವಲ್ಲ, ಇಂತಹ ಅಸಾಧ್ಯ ಕೆಲಸ ಹೇಗೆ ಸಾಧ್ಯವಾಯಿತು?

ಯೋಗೇಂದ್ರ ಯಾದವ: ಇದನ್ನು ಸಾಧ್ಯವಾಗಿಸಲು ಮೂರು ವರ್ಷ ಹಿಡಿಯಿತು. ಜನರು ಈ ವಿಷಯವನ್ನು ಮರೆತುಬಿಡುತ್ತಾರೆ. 2017ರಲ್ಲಿ ಸುಮಾರು ನೂರು ರೈತರ ಸಂಘಟನೆಗಳನ್ನು ಸೇರಿಸಿ ನಾವು ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋಆರ್ಡಿನೇಷನ್ ಕಮಿಟಿಯನ್ನು ಸ್ಥಾಪಿಸಿದೆವು. ಈಗ 200ಕ್ಕಿಂತ ಹೆಚ್ಚು ಸಂಘಟನೆಗಳು ಈ ಒಕ್ಕೂಟದಲ್ಲಿವೆ. ಕಳೆದ ಮೂರು ವರ್ಷಗಳಿಂದ ನಾವು ಜೊತೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹಾಗೂ ಮೊದಲ ದೆಹಲಿ ಚಲೋ ಕರೆಯನ್ನು ಎಐಕೆಎಸ್‌ಸಿಸಿ ನೀಡುತ್ತು. ಆಗ ನಮಗನಿಸಿದ್ದು, ಇಲ್ಲ ಇಷ್ಟೇ ಜನರು/ಸಂಘಟನೆಗಳು ಸಾಕಾಗುವುದಿಲ್ಲ ಎಂದು. ಅನೇಕ ರೈತ ಸಂಘಟನೆಗಳು ಇದರ ಹೊರಗೆ ಇದ್ದವು. ಹಾಗಾಗಿ ನಾವು ಇತರರೊಂದಿಗೆ ಸೇರಿಕೊಂಡು 5 ಜನರ ಸಮಿತಿಯನ್ನು ರಚಿಸಿದೆವು. ಆಗಲೂ ಇದು ಸಾಕಾಗುವುದಿಲ್ಲ ಎನಿಸಿತು. ಪಂಜಾಬಿನ ಹಲವು ಸಂಘಟನೆಗಳು ಇನ್ನೂ ಜೊತೆಗೂಡಿದ್ದಿಲ್ಲ. ಹಾಗಾಗಿ ನಾವು ಇನ್ನೊಂದು ಸುತ್ತಿನ ಮಾತುಕತೆಯನ್ನು ನಡೆಸಿದೆವು. ಹಾಗೂ ನವೆಂಬರ್‌ನ ಮೊದಲ ವಾರದಲ್ಲಿ ನಾವು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಮ್) ಸ್ಥಾಪಿಸಿದೆವು.

ಈಗ ಎಸ್‌ಕೆಎಮ್ ಬೃಹತ್ತಾದ ಒಕ್ಕೂಟವಾಗಿ ಬೆಳೆದಿದೆ. ಇದರಲ್ಲಿ ಸುಮಾರು 400 ಸಂಘಟನೆಗಳಿವೆ. ಹಾಗೂ ಮೊದಲಿದ್ದ 5 ಜನರ ಸಮಿತಿಯನ್ನು 7 ಜನರ ಸಮಿತಿಯನ್ನಾಗಿಸಿದೆವು. ಈಗ ಆ ಸಮಿತಿಯು ಕೆಲಸ ಮಾಡುತ್ತಿದೆ. ಈ 400 ಸಂಘಟನೆಗಳಲ್ಲಿ ಹಲವಾರು ದಶಕಗಳಿಂದ ಕೆಲಸ ಮಾಡುತ್ತಿರುವ ಸಂಘಟನೆಗಳಿದ್ದರೆ, ಒಂದೆರಡು ವರ್ಷಗಳಿಂದ ಅಸ್ತಿತ್ವದಲ್ಲಿರವ ಸಂಘಟನೆಗಳೂ ಇವೆ. ಹಾಗಾಗಿ ಒಂದು ಆಂದೋಲನ ಯಶಸ್ವಿಯಾಗಬೇಕೆಂದರೆ ಅದರ ಹಿಂದೆ ಹಲವಾರು ವರ್ಷಗಳ ಕಠಿಣ ಪರಿಶ್ರಮ ಇರುತ್ತದೆ. ಇದು ರಾತ್ರೋರಾತ್ರಿ ಆಗುವುದಿಲ್ಲ. ಎಐಕೆಎಸ್‌ಸಿಸಿಯ ನಾಲ್ಕು ವರ್ಷದ ಪರಿಶ್ರಮ ಮತ್ತು ಇತರ ಸಂಘಟನೆಗಳ 3-4 ವರ್ಷಗಳ ಪರಿಶ್ರಮದ ಫವಾಗಿ, ಪಂಜಾಬಿನ ಸಂಘಟನೆಗಳು ಕಳೆದ ಒಂದೂವರೆ ವರ್ಷದಿಂದ ಜೊತೆಗೂಡಿ ಕೆಲಸ ಮಾಡುತ್ತಿವೆ. ಹಾಗೂ ಪಂಜಾಬಿನ ಈ ಸಂಘಟನೆಗಳು ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಂದರೆ ಇಡೀ ಒಂದು ತಲೆಮಾರಿನ ಪರಿಶ್ರಮದ ಫಲವಾಗಿ ಈ ಒಂದು ಐತಿಹಾಸಿಕ ಆಂದೋಲನ ಯಶಸ್ವಿಯಾಗಿದೆ.

ಅಕ್ಕಿ: ಹೌದು, ಅದರೊಂದಿಗೆ ಇನ್ನೇನಾದರೂ ಕಾರಣಗಳಿವೆಯೇ?

ಯೋಗೇಂದ್ರ ಯಾದವ: ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ, ದೇಶದ ರೈತರಿಗೆ ಆಳವಾದ ಅಸಮಾಧಾನವಿದೆ. ಭಾರತೀಯ ಕೃಷಿಯು ಮೂರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ; ಒಂದು ಆರ್ಥಿಕ ಬಿಕ್ಕಟ್ಟು, ಎರಡನೆಯದು, ಪರಿಸರದ ಬಿಕ್ಕಟ್ಟು ಹಾಗೂ ಮೂರನೆಯದು ಅಸ್ತಿತ್ವದ ಬಿಕ್ಕಟ್ಟು. ಈ ಅಸ್ತಿತ್ವದ ಬಿಕ್ಕಟ್ಟನ್ನು ಎಲ್ಲಾ ರೈತರು ಅನುಭವಿಸುತ್ತಿದ್ದಾರೆ. ಘನತೆಯನ್ನು ಕಳೆದುಕೊಳ್ಳುವ ಭಯ, ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಭಯ, ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಭಯ – ಇವೆಲ್ಲವೂ ಸೇರಿವೆ.

ಈ ಮೂರು ಕಾಯಿದೆಗಳನ್ನು ತಂದಾಗ, ಇವೆಲ್ಲವುಗಳೂ ಅಂದರೆ ರೈತರಲ್ಲಿ ಆಳವಾಗಿರುವ ಭಯ, ಸಿಟ್ಟು, ಆತಂಕಗಳು ಸೇರಿ ಈ ಕಾಯಿದೆಗಳು ಬಿಕ್ಕಟ್ಟಿನ ಕೇಂದ್ರಬಿಂದುಗಳಾದವು. ಇದೇ ಘಳಿಗೆ, ಈಗ ನಾವು ಪ್ರತಿಭಟಿಸಲೇಬೇಕು ಎನಿಸಿತು. ಹಾಗೂ ಎಲ್ಲಾ ಅದ್ಭುತ ಆಂದೋಲನಗಳಲ್ಲಿ ಇದೇ ಆಗುತ್ತದೆ. ನಿರ್ದಿಷ್ಟ ಪ್ರಚೋದನೆ ಚಿಕ್ಕದೇ ಆಗಿರುತ್ತದೆ, ಆದರೆ ಆಳವಾಗಿದ್ದನ್ನೆಲ್ಲ ಹೊರತರುವಂತದ್ದಾಗಿರುಗುತ್ತದೆ.

ಅಕ್ಕಿ: ದಕ್ಷಿಣದ ರಾಜ್ಯಗಳು ಆಂದೋಲನದಲ್ಲಿ ಅಷ್ಟಾಗಿ ಭಾಗವಹಿಸುತ್ತಿಲ್ಲ. ಈ ಆಂದೋಲನವು ದಕ್ಷಿಣದ ರಾಜ್ಯಗಳ ಮೇಲೆ ಪ್ರಭಾವ ಬೀರದಿರಲು ಕಾರಣವೇನು? ನಿಮ್ಮ ಪ್ರಯತ್ನದಲ್ಲಿ ಏನಾದರೂ ಕೊರತೆಗಳಿವೆಯಾ? ಅಥವಾ ಬೇರೆ ಏನಾದರೂ ವಿಶೇಷ ಕಾರಣಗಳಿವೆಯಾ?

ಯೋಗೇಂದ್ರ ಯಾದವ: ಜಗತ್ತಿನ ಯಾವುದೇ ಆಂದೋಲನಗಳನ್ನು ನೋಡಿ, ಅವೆಲ್ಲ ಒಂದೇಮಟ್ಟದಲ್ಲಿರದೇ ಅಸಮವಾಗಿರುತ್ತವೆ. ಜೆಪಿ ಆಂದೋಲನವನ್ನು ಬಿಹಾರ ಆಂದೋಲನ ಎಂದು ಕರೆಯಲಾಗಿತ್ತು. ದಕ್ಷಿಣದಲ್ಲಿ ಈ ಆಂದೋಲನ ಅಸ್ತಿತ್ವದಲ್ಲಿಲ್ಲ ಎಂದು ನಾನು ಹೇಳುವುದಿಲ್ಲ. ಕರ್ನಾಟಕದ ಸಂಘಟನೆಗಳು ಕಳೆದ ವರ್ಷ ಸೆಪ್ಟೆಂಬರ್‌ನಿಂದಲೇ ಪ್ರತಿಭಟನೆ ಮಾಡುತ್ತಿವೆ. ಕಳೆದ ತಿಂಗಳೂ ಪ್ರತಿಭಟನೆ ನಡೆಸಿವೆ, ಮತ್ತೆ ಈಗಲೂ ನಡೆಸುತ್ತಿವೆ. ಹಾಗಾಗಿ ದಕ್ಷಿಣದಲ್ಲಿ ಆಂದೋಲನವಾಗುತ್ತಲೇ ಇದೆ. ತಮಿಳುನಾಡಿನಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಹೌದು, ಅದೇ ಪ್ರಮಾಣದಲ್ಲಿಲ್ಲ. ಹರಿಯಾಣ ಮತ್ತು ಪಂಜಾಬಿನಲ್ಲಿ ಆಗುತ್ತಿರುವಷ್ಟು ಆಗುತ್ತಿಲ್ಲ. ಹಾಗೂ ವಿಶ್ವಾದ್ಯಂತ ಈ ಸಾಪೇಕ್ಷ ಅಭಾವದ ಥಿಯರಿ ಕೆಲಸ ಮಾಡುತ್ತದೆ.

ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿರುವವರಲ್ಲಿ ಪ್ರತಿಭಟನೆಗಳು ಆಗುವುದಿಲ್ಲ; ಪ್ರತಿಭಟನೆಗಳು ಆಗುವುದು ಹೇಗೆಂದರೆ, ಯಾರು ಒಳ್ಳೆಯ ಅನುಕೂಲಕರ ದಿನಗಳನ್ನು ಕಂಡಿದ್ದಾರೋ, ಅವರಲ್ಲಿ ಆಗುತ್ತದೆ, ಒಳ್ಳೆಯ ದಿನಗಳನ್ನು ನೋಡಿದವರು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವಾಗ ಪ್ರತಿಭಟನೆ ಕಾಣಿಸಿಕೊಳ್ಳುತ್ತವೆ. ಈಗ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಆಗುತ್ತಿರುವುದೂ ಅದೆ. ಅವರು ಒಳ್ಳೆಯ ದಿನಗಳನ್ನು ನೋಡಿದ್ದಾರೆ ಮತ್ತು ಈಗ ಕಷ್ಟಕರ ದಿನಗಳನ್ನು ಕಾಣಬೇಕಾಗುತ್ತದೆ ಎಂಬ ಆತಂಕದಲ್ಲಿದ್ದಾರೆ. ನೋಡಿ, ದೇಶದಲ್ಲಿ ಅತ್ಯಂತ ಕಷ್ಟದಲ್ಲಿರುವ ಪ್ರದೇಶಗಳೆಂದರೆ, ಬುಂದೇಲಖಂಡ, ಅನಂತಪುರ, ಮರಾಠಾವಾಡ ಮುಂತಾದವು. ಆದರೆ ಅಲ್ಲಿ ಆಂದೋಲನ ಅಷ್ಟಾಗಿಲ್ಲ. ಏಕೆಂದರೆ, ಆ ಕಷ್ಟಕರ ಜೀವನವನ್ನು ಸಾಗಿಸುವುದನ್ನು ಅವರು ಒಗ್ಗೂಡಿಸಿಕೊಂಡಿದ್ದಾರೆ. ಆದರೆ, ದಕ್ಷಿಣ ಭಾರತದಲ್ಲೂ ಆಂದೋಲನದ ಬಿಸಿ ಹಚ್ಚುತ್ತಿದೆ ಹಾಗೂ ಈ ಆಂದೋಲನಕ್ಕೆ ರಾಷ್ಟ್ರೀಯ ಆಂದೋಲನದ ಛಾಪು ಮೂಡಲಿದೆ.

ಅಕ್ಕಿ: ಉತ್ತರ ಭಾರತದಲ್ಲೂ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಲ್ಲಿ ಅಂದರೆ ಹಸಿರುಕ್ರಾಂತಿಯ ವಲಯಗಳಲ್ಲೇ ಈ ಆಂದೋಲನ ಕೇಂದ್ರೀಕರಣಗೊಂಡಿರುವುದು ಏಕೆ?

ಯೋಗೇಂದ್ರ ಯಾದವ: ಅದೇ, ಸಾಪೇಕ್ಷ ಅಭಾವ. ಅವರು ಒಳ್ಳೆಯ ದಿನಗಳನ್ನು ನೋಡಿದ್ದಾರೆ, ಈಗ ಕಷ್ಟಕ್ಕೆ ದೂಕಲ್ಪಡುತ್ತಿದ್ದಾರೆ. ಆದರೆ ಈಗ ಈ ಆಂದೋಲನವು ರಾಜಸ್ತಾನಕ್ಕೂ ವಿಸ್ತರಿಸುತ್ತಿದೆ, ಈ ಪ್ರದೇಶ ಎಂದೂ ಹಸಿರು ಕ್ರಾಂತಿಯನ್ನು ಕಂಡಿದ್ದಿಲ್ಲ. ಹಾಗೂ ಪಶ್ಚಿಮ ಉತ್ತರಪ್ರದೇಶವನ್ನು ಮೀರಿ, ಮಧ್ಯಪ್ರದೇಶ ಮತ್ತಿತರೆಡೆಗೂ ವಿಸ್ತರಿಸುತ್ತಿದೆ. ಒಂದು ಸಲ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆಯ) ಬೇಡಿಕೆ ಎಲ್ಲೆಡೆ ಹರಿಡಿದಾಗ, ಅದು ಛತ್ತೀಸಗಢ ಮತ್ತು ಇಡೀ ಮಧ್ಯಪ್ರದೇಶಕ್ಕೂ ವಿಸ್ತರಿಸಲಿದೆ. ಏಕೆಂದರೆ ಈಗ ಖರೀದಿಯ ಬೆಲೆ ಈ ರಾಜ್ಯಗಳಲ್ಲಿ ಸಾಪೇಕ್ಷವಾಗಿ ಉತ್ತಮವಾಗಿದೆ. ತೆಲಂಗಾಣದಲ್ಲೂ ವಿಸ್ತರಣೆಯಾಗಲಿದೆ. ರೈತರ ಆಂದೋಲನಕ್ಕೆ ಮೂರು ತಿಂಗಳ ಅವಧಿಯು ದೊಡ್ಡ ಅವಧಿಯಲ್ಲ. ಇದು ಆನೆಯಿದ್ದಂತೆ, ನಿಧಾನವಾಗಿ ಏಳುತ್ತದೆ ಆದರೆ ಒಂದು ಸಲ ಎದ್ದು ನಡೆಯಲು ಶುರು ಮಾಡಿದರೆ ಯಾರಿಗೂ ತಡೆಯಲು ಆಗುವುದಿಲ್ಲ.

ಅಕ್ಕಿ: ಒಣಭೂಮಿ ಕೃಷಿ ಪ್ರದೇಶಗಳಿಗೆ ಚಳವಳಿ ವಿಸ್ತರಿಸಲು ಯಾವ ರೀತಿಯ ಯೋಜನೆ ಮಾಡುತ್ತೀರಿ, ಯಾವ ಬೇಡಿಕೆಗಳನ್ನು ಮುಂದೆ ತರುತ್ತೀರಿ?

ಯೋಗೇಂದ್ರ ಯಾದವ: ಮಳೆಯಾಧಾರಿತ ಕೃಷಿ ಎಂದಕೂಡಲೇ ನಾವು ಪರಿಸರವನ್ನು ಮುನ್ನೆಲೆಗೆ ತರಬೇಕಾಗುತ್ತದೆ. ಇದು ಕೇವಲ ಆರ್ಥಿಕತೆಯ ವಿಷಯವಾಗಿರಲು ಸಾಧ್ಯವಿಲ್ಲ. ಬಹಳಷ್ಟು ಸಮಯದಿಂದ ನಾವೆಲ್ಲರೂ ಒಂದು ರೀತಿಯ ಭ್ರಾಂತಿಯಲ್ಲಿದ್ದೀವಿ, ಅದೇನೆಂದರೆ, ಇಡೀ ಕೃಷಿ ಭೂಮಿಯನ್ನು ನೀರಾವರಿ ಭೂಮಿಯಾಗಿ ಮಾಡುತ್ತೀವಿ ಎಂದು. ಇದು ಎಂದಿಗೂ ಸಾಧ್ಯವಿಲ್ಲ. ನಾವು ನಮ್ಮ ಕೃಷಿಯ ಬಗ್ಗೆ ಮರುಚಿಂತನೆ ಮಾಡಬೇಕಿದೆ. ಮಳೆಯಾಧಾರಿತ ಕೃಷಿ ಭೂಮಿಯನ್ನು ಕೇವಲ ಸಮಸ್ಯಾತ್ಮಕ ಪ್ರದೇಶ ಎಂದು ನೋಡುವುದನ್ನು ಬಿಡಬೇಕಿದೆ. ಈ ಪ್ರದೇಶಗಳು ವಿಶೇಷ ಅವಕಾಶಗಳನ್ನು ನೀಡುತ್ತವೆ. ಈ ಪ್ರದೇಶಗಳಲ್ಲೇ ಅತ್ಯಂತ ಹೆಚ್ಚಿನ ಪೌಷ್ಠಿಕಾಂಶಗಳುಳ್ಳ ಮಿಲೆಟ್‌ಗಳನ್ನು ಬೆಳೆಯಬಹುದು. ನಮಗೆ ಅತ್ಯಗತ್ಯವಾಗಿರುವ ಬೇಳೆಗಳನ್ನು ಬೆಳೆಯಬಹುದು. ಈ ಪ್ರದೇಶಗಳನ್ನು ಒಂದು ಊಹಾತ್ಮಕ ಕೃಷಿ ಮಾದರಿಯಲ್ಲಿ ಕಲ್ಪಿಸಿಕೊಳ್ಳುವುದರ ಬದಲಿಗೆ ವಿಶೇಷ ಅವಕಾಶದ ಪ್ರದೇಶಗಳನ್ನಾಗಿ ಇವುಗಳನ್ನು ಬದಲಿಸಬಹುದೇ? ಅದರ ಪರಿಸರಕ್ಕೆ ಹೊಂದಿಕೊಳ್ಳುವಂತೆ ಕೃಷಿಯ ಮಾದರಿಯನ್ನು ಬದಲಿಸಬಹುದೇ?

ಅಕ್ಕಿ: ಮಳೆಯಾಧಾರಿತ ಕೃಷಿಗೆ ಏನಾದರೂ ವಿಶೇಷ ಬೇಡಿಕೆಗಳಿವೆಯೇ?

ಯೋಗೇಂದ್ರ ಯಾದವ: ಎಂಎಸ್‌ಪಿ ಬೇಡಿಕೆಯು ಮಳೆಯಾಧಾರಿತ ಕೃಷಿಗೂ ಅನ್ವಯವಾಗುತ್ತದೆ. ವಾಸ್ತವದಲ್ಲಿ ಎಂಎಸ್‌ಪಿಯಿಂದ ವಂಚಿತರಾಗಿರುವ ಪ್ರದೇಶಗಳು, ಇವೇ ಮಳೆಯಾಧಾರಿತ ಪ್ರದೇಶಗಳು. ಎಂಎಸ್‌ಪಿ ಎಂಬುದು ಇಲ್ಲವೇ ಇಲ್ಲ. ಬೇಳೆಗಳನ್ನು ಬೆಳೆಯುವ ಪ್ರದೇಶಗಳನ್ನು ನೋಡಿ, ಇಂದಿನ ದಿನದಲ್ಲಿ ಬೇಳೆಗಳಿಗೆ ತೋರಿಸುವ ಎಂಎಸ್‌ಪಿ ಚೆನ್ನಾಗಿಯೇ ಇದೆ. ಹೆಸರಿಗೆ 7,200 ರೂಪಾಯಿ ನಿಗದಿಪಡಿಸಿದ್ದಾರೆ. ಇತರ ಬೇಳೆಗಳಿಗೆ ಆರು ಸಾವಿರದ ಹತ್ತಿರ ಎಂಎಸ್‌ಪಿ ಇದೆ. ಆದರೆ ವಾಸ್ತವದಲ್ಲಿ ಅವರಿಗೆ ಎಂಎಸ್‌ಪಿ ಸಿಗುವುದೇ ಇಲ್ಲ. ಹಾಗಾಗಿ ಎಂಎಸ್‌ಪಿಯ ಬೇಡಿಕೆ ಮಳೆಯಾಧಾರಿತ ಕೃಷಿಯ ಸಮಸ್ಯೆಗಳನ್ನೂ ಉದ್ದೇಶಿಸುತ್ತದೆ. ಆದರೆ ನಾನು ಮುಂಚೆಯೇ ಹೇಳಿದಂತೆ, ಅತ್ಯಂತ ಮಹತ್ವದ ವಿಷಯವೇನೆಂದರೆ, ಭಾರತೀಯ ಕೃಷಿಯ ಬಗ್ಗೆ ಮರುಚಿಂತನೆ ಮಾಡಲು ಆರಂಭಿಸುವುದಕ್ಕೆ ಈ ಆಂದೋಲನದ ಹೆಜ್ಜೆಗಳನ್ನು ಇಡಬೇಕು. ಇದು ಕೇವಲ ರೈತರ ಟ್ರೇಡ್ ಯೂನಿಯನ್ ಆಗಬಾರದು. ಭಾರತದ ಕೃಷಿಯ ಭವಿಷ್ಯದ ಬಗ್ಗೆ ಮರುಚಿಂತನೆಯನ್ನು ಹುಟ್ಟುಹಾಕಬೇಕಿದೆ.

ಅಕ್ಕಿ: ಗ್ರಾಮೀಣ ಕೂಲಿಕಾರರ ಸಮಸ್ಯೆಯನ್ನು ಈ ಚಳವಳಿ ಅಡ್ರೆಸ್ ಮಾಡುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ, ಇದಕ್ಕೆ ತಾವೇನು ಹೇಳುತ್ತೀರಿ?

ಯೋಗೇಂದ್ರ ಯಾದವ: ಈ ಅಭಿಪ್ರಾಯ ನ್ಯಾಯಸಮ್ಮತವಾಗಿದೆ. ಏಕೆಂದರೆ ಇಲ್ಲಿಯರೆಗೆ ಹೆಚ್ಚಿನ ರೈತರ ಆಂದೋಲನಗಳನ್ನು ಮುನ್ನೆಡಿಸಿದವರು ಒಂದೋ ಭೂಮಿಯನ್ನು ಉಳ್ಳವರು ಅಥವಾ ಉಳುವವರು. ಕೃಷಿ ಕಾರ್ಮಿಕರಿಗೂ ಕೆಲವು ವಿಷಯಗಳಿವೆ; ಎಪಿಎಂಸಿ ಮಾರುಕಟ್ಟೆಗಳು ನಶಿಸಿಹೋದರೆ, ಅವುಗಳಲ್ಲಿ ಖರೀದಿ ಮಾಡದೇಹೋದರೆ, ಆಗ ಪಡಿತರ ವ್ಯವಸ್ಥೆಯೂ ನಾಶವಾಗುತ್ತದೆ. ಹಾಗೂ ನಮ್ಮ ಸಾರ್ವಜನಿಕ ಪಡಿತರ ವ್ಯವಸ್ಥೆ ಕೃಷಿ ಕಾರ್ಮಿಕರನ್ನು ಒಳಗೊಂಡ ದೇಶದ ಅತ್ಯಂತ ಬಡವರಿಗೆ ಇರುವ ಸೇವೆಯಾಗಿದೆ. ಹೌದು, ನಾವು ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ನೇರವಾಗಿ ಉದ್ದೇಶಿಸುವ ದಾರಿಗಳನ್ನು ಕಂಡುಕೊಳ್ಳಬೇಕಿದೆ ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಉದಾಹರಣೆಗೆ; ಉಳುವವರು ನೋಂದಣಿ ಮಾಡಿಕೊಳ್ಳುವ ಒಂದು ವ್ಯವಸ್ಥೆಯಿದೆ; ಇದೇ ರೀತಿಯಲ್ಲಿ ಅಲ್ಲದೆ, ಸರಕಾರದ ಯೋಜನೆಗಳ ಅನುಕೂಲಗಳನ್ನು ಕೇವಲ ಭೂಮಾಲೀಕನಿಗೆ ಮಾತ್ರ ದೊರೆಯದೆ ಆ ಭೂಮಿಯಲ್ಲಿ ಕೆಲಸ ಮಾಡುವವರಿಗೂ ದೊರೆಯುವಂತೆ ಮಾಡಬೇಕಿದೆ. ಇದು ಒಂದು ದೊಡ್ಡ ಹೆಜ್ಜೆಯಾಗಬೇಕಿದೆ. ಈ ನಿಟ್ಟಿನಲ್ಲಿ ನಮಗೆ ಕೆಲಸ ಮಾಡಬೇಕಿದೆ.

ಕೃಷಿ ಕಾಯ್ದೆಗಳಿಗೆ ವಿರೋಧ: ಟಿಕ್ರಿ ಗಡಿಯಲ್ಲಿ ಪ್ರಾಣಬಿಟ್ಟ ಮತ್ತೊಬ್ಬ ರೈತಅಕ್ಕಿ: ಈ ಚಳವಳಿ ಹೀಗೆಯೇ ಆಗುತ್ತದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟತೆ ಇರಲಿಲ್ಲ. ಬಹುಶಃ ಈ ಆಂದೋಲನವನ್ನು ಮುನ್ನಡೆಸುತ್ತಿರುವ ನಾಯಕರಿಗೂ. ಇದು ಹೀಗೆಯೇ ಆಗಿದ್ದು ಹೇಗೆ?

ಯೋಗೇಂದ್ರ ಯಾದವ: ನೋಡಿ, ಎಲ್ಲವನ್ನೂ ಪ್ಲಾನ್ ಮಾಡಲಾಗುವುದಿಲ್ಲ. ನಾವು ನೂರು ದಿವಸ ಇಲ್ಲಿರ್ತೀವಿ ಎಂದು ಖಂಡಿತವಾಗಿಯೂ ಯೋಚಿಸಿರಲಿಲ್ಲ. ನಾವು ಇಲ್ಲಿ ಸೆಂಚುರಿ ಹೊಡೆಯಲು ಬಂದಿಲ್ಲ. ಇದು ರೈತರ ದೃಢನಿಶ್ಚಯ ಮತ್ತು ಸರಕಾರದ ಅಪ್ರಾಮಾಣಿಕತೆಯ ಮಿಶ್ರಣದಿಂದ ಆಗಿದ್ದು. ಅಲ್ಲದೆ ಇದೊಂದನ್ನೂ ಹೇಳಲೇಬೇಕು; ಈ ಚಳವಳಿಯನ್ನು ಮುನ್ನಡೆಸುತ್ತಿರುವ ಶಕ್ತಿ ಇದರ ನಾಯಕರದಲ್ಲ; ಇದರ ಸಂಘಟಕರದ್ದೂ ಅಲ್ಲ, ಈ ಆಂದೋಲನವು ಚಲಿಸುತ್ತಿರುವುದು ಕೆಳಗಿನಿಂದ. ಅಂದರೆ ಸಾಮಾನ್ಯ ರೈತರು ಈ ಚಳವಳಿಯನ್ನು ಮುನ್ನೆಡೆಸುತ್ತಿದ್ದಾರೆ. ಅವರು ಹೇಳುತ್ತಿದ್ದಾರೆ; ’ಇಷ್ಟಕ್ಕೆ ಮಣಿಯಬೇಡಿ, ಇದನ್ನು ಮಾಡಬೇಡಿ’ ಎಂದು. ಇದರ ನಾಯಕರು ಜನರ ಮಾತನ್ನು ಕೇಳಿ ಮುನ್ನಡೆಯುತ್ತಿದ್ದಾರೆ ಹಾಗೂ ಇದೊಂದು ಒಳ್ಳೆಯ ವಿಷಯ. ರೈತರೇ ಈ ಆಂದೋಲನದ ನಿಜವಾದ ಚಾಲಕರಾಗಿದ್ದಾರೆ. ಪ್ರಾರಂಭದಲ್ಲಿ ಪಂಜಾಬಿನ ರೈತರು ನಂತರ ದೇಶದ ಇತರ ಭಾಗಗಳ ರೈತರು ಸೇರಿ ದೃಢಸಂಕಲ್ಪ ಮಾಡಿದ್ದಾರೆ; ’ಈಗ ಆಗಬೇಕು ಇಲ್ಲವಾದರೆ ಎಂದೂ ಆಗುವುದಿಲ್ಲ’ ಎಂದು ಅವರು ನಿಶ್ಚಯಿಸಿದ್ದಾರೆ.

ಅಕ್ಕಿ: ಕೊನೆಯ ಎರಡು ಪ್ರಶ್ನೆ. ಪರಿಸರದ ಬಗ್ಗೆ ಅನೇಕ ವಿಷಯಗಳನ್ನು ಚರ್ಚಿಸಬೇಕಿದೆ ಆದರೆ ಮತ್ತೊಮ್ಮೆ ಅದರ ಚರ್ಚೆ ಇಟ್ಟುಕೊಳ್ಳುವ. ಈಗ, ಸರಕಾರ ಈ ಮೂರು ಕಾನೂನುಗಳನ್ನು ಹಿಂಪಡೆಯುತ್ತದೆ ಎಂದು ನಿಮಗೆ ಅನಿಸುತ್ತಾ?

ಯೋಗೇಂದ್ರ ಯಾದವ: ನೋಡಿ, ನಮ್ಮ ಜೊತೆಗೆ ಸರಕಾರದ ಪ್ರತಿನಿಧಿಗಳು ಅನೌಪಚಾರಿಕವಾಗಿ ಮಾತನಾಡಿದಾಗ ಹೇಳಿದ್ದು; ’ನೋಡಪ್ಪ, ಈ ಮೂರು ಕಾಯಿದೆಗಳು ಸತ್ತುಹೋಗಿವೆ, ಇನ್ನೇಕೆ ಹೆಚ್ಚಿನ ಒತ್ತಡ ಹಾಕುತ್ತಿದ್ದೀರಿ’ ಎಂದು. ಹಾಗಾಗಿ ಈ ಸರಕಾರವಿರಲಿ ಅಥವಾ ಭವಿಷ್ಯದ ಯಾವುದೇ ಸರಕಾರವಿರಲಿ, ಯಾರಿಗೂ ಈ ಕಾನೂನುಗಳನ್ನು ಜಾರಿ ಮಾಡುವ ಅಥವಾ ತರುವ ಧೈರ್ಯ ಇರದಂತಾಗಿದೆ. ಸಮಸ್ಯೆ ಏನೆಂದರೆ ಪ್ರಧಾನ ಮಂತ್ರಿಯು ಈ ವಿಷಯವನ್ನು ವೈಯಕ್ತಿಕ ಪ್ರತಿಷ್ಠೆಯ ವಿಷಯವನ್ನಾಗಿಸಿಕೊಂಡಿದ್ದಾರೆ. ಅವರು ಅಧಿಕೃತವಾಗಿ ಈ ಕಾಯಿದೆಗಳನ್ನು ರದ್ದುಗೊಳಿಸುವುದಿಲ್ಲ ಎಂದು ನಿರ್ಧರಿಸಿದಂತಿದೆ. ಹಾಗಾಗಿ ಒತ್ತಡವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಹಾಗೂ ಅಧಿಕೃತವಾಗಿ ಮರಣಪ್ರಮಾಣಪತ್ರವನ್ನು (ಕಾಯಿದೆಗಳಿಗೆ) ನೀಡುವಂತೆ ಮಾಡಬೇಕಿದೆ.

ಅಕ್ಕಿ: ನೀವು ಕರ್ನಾಟಕಕ್ಕೆ ಹಲವು ಬಾರಿ ಬಂದಿದ್ದೀರಿ, ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ನಿಮಗೆ ಅನಿಸುತ್ತದೆ?

ಯೋಗೇಂದ್ರ ಯಾದವ: ಕರ್ನಾಟಕದಲ್ಲಿ ರೈತ ಚಳವಳಿಗೆ ಅತ್ಯಂತ ದೀರ್ಘ ಇತಿಹಾಸವಿದೆ. ಕರ್ನಾಟಕದ ಒಂದು ಅದ್ಭುತ ವಿಷಯವೇನೆಂದರೆ, ಇಲ್ಲಿಯ ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆಯು ಈ ಆಂದೋಲನದಲ್ಲಿ ರೈತರೊಂದಿಗೆ ದಲಿತ ಸಂಘಟನೆಗಳನ್ನೂ ಒಳತಂದಿದೆ. ಇದು ದೇಶದ ಯಾವ ಭಾಗದಲ್ಲೂ ಸುಲಭವಾಗಿ ಕಾಣಿಸಿಕೊಳ್ಳುವುದಿಲ್ಲ. ಎಂಎಸ್‌ಪಿಯ ರಾಷ್ಟ್ರೀಯ ಅಭಿಯಾನವನ್ನು ಕರ್ನಾಟಕದಿಂದಲೇ ಶುರು ಮಾಡಿದ್ದೇವೆ ಹಾಗೂ ಈ ಚಳವಳಿಯ ಇನ್ನಷ್ಟು ಗಟ್ಟಿಗೊಂಡು, ಕರ್ನಾಟಕದ ಎಲ್ಲೆಡೆ ಹರಡುತ್ತದೆ ಎಂದು ನಾನು ಭಾವಿಸಿದ್ದೇನೆ. ಹಾಗೂ ಒಂದು ಸಲ ಕರ್ನಾಟಕದ ರೈತರು ರೈತ ಹೋರಾಟದ ದಿಗ್ಗಜರಾದ ಪ್ರೊ. ನಂಜುಂಡಸ್ವಾಮಿ ಮುಂತಾದವರನ್ನು ನೆನಪಿಸಿಕೊಂಡಾಗ ಇದು ಪುಟಿದೇಳಲಿದೆ. ಹಾಗೂ ಕರ್ನಾಟಕದ ಚಳವಳಿ ಪಂಜಾಬಿನ ಚಳವಳಿಗಿಂತಲೂ ಗಟ್ಟಿಯಾಗಲಿದೆ. ಇಲ್ಲಿಯ ಸಂಘಟನೆಗಳು ಶಕ್ತಿ ತುಂಬಾ ಆಳವಾಗಿದೆ. ಪ್ರತಿಯೊಂದು ಹಳ್ಳಿಯಲ್ಲಿ ಈ ಹಸಿರು ಶಾಲನ್ನು ನೀವು ನೋಡಬಹುದು. ಇದು ಅತ್ಯಂತ ಶಕ್ತಿಶಾಲಿಯಾದ ಸಿಂಬಲ್ ಆಗಿದೆ. ಈ ಚಳವಳಿ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ನನಗೆ ಭರವಸೆ ಇದೆ.


ಇದನ್ನೂ ಓದಿ: ಹರಿಯಾಣದ ಎಲ್ಲಾ ಬಿಜೆಪಿ, ಜೆಜೆಪಿ ಮುಖಂಡರ ಸಾಮಾಜಿಕ ಬಹಿಷ್ಕಾರಕ್ಕೆ ರೈತರ ನಿರ್ಧಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಳಿಪಟ-2: ಯೋಗರಾಜ ಭಟ್ರ ಲಾಜಿಕ್‌ಗಳನ್ನು ‘ದೇವ್ಲೆ’ ಬಲ್ಲ!

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ...