Homeಮುಖಪುಟವಿಜ್ಞಾನ ವಿಶೇಷ; ಸೂರ್ಯನ ಅನ್ವೇಷಣೆ: ಹಾಗೆಂದರೇನು?

ವಿಜ್ಞಾನ ವಿಶೇಷ; ಸೂರ್ಯನ ಅನ್ವೇಷಣೆ: ಹಾಗೆಂದರೇನು?

- Advertisement -
- Advertisement -

ಸೌರಮಂಡಲದ ಶಕ್ತಿ ಕೇಂದ್ರ ಸೂರ್ಯ. ಭೂಮಿಯಲ್ಲಿನ ಸಕಲ ಜೀವರಾಶಿಯ ಹುಟ್ಟಿಗೆ ಕಾರಣ, ಈ ಜೀವರಾಶಿಗಳಿಗೆ ಅಗತ್ಯವಿರುವ ಶಕ್ತಿಯ ಮೂಲ, ನಾವು ತಿನ್ನುವ ಆಹಾರದ ಮೂಲ ಶಕ್ತಿ ಸೂರ್ಯ. ಸೌರ ಮಂಡಲದಲ್ಲಿನ ಎಲ್ಲ ಪ್ರಕ್ರಿಯೆಗಳೂ ಸೂರ್ಯನ ಪ್ರಭಾವದಿಂದಲೇ ನಡೆಯುವುದು. ಸೂರ್ಯನೂ ಸೇರಿದಂತೆ, ಸೌರಮಂಡಲದ ಎಲ್ಲಾ ಗ್ರಹಗಳು, ಉಪಗ್ರಹಗಳು, ಧೂಳಿನ ಕಣಗಳು ಎಲ್ಲವನ್ನೂ ಒಟ್ಟು ತೂಕ ಮಾಡಿದರೆ, ಶೇ.99ರಷ್ಟು ತೂಕ ಸೂರ್ಯನದೇ ಆಗಿದೆ. ಸುಮಾರು ಇನ್ನೂರು ಬಿಲಿಯನ್ ಟ್ರಿಲಿಯನ್ ನಕ್ಷತ್ರಗಳಿರುವ ಈ ವಿಶ್ವದಲ್ಲಿ ಸೂರ್ಯ ಕೇವಲ ಒಂದು ಸಾಮಾನ್ಯ ನಕ್ಷತ್ರ!

ಸೂರ್ಯ ಇಲ್ಲದಿದ್ದರೆ, ಭೂಮಿಯಲ್ಲಿ ನೀರು, ಗಾಳಿ ಎರಡು ಸೇರಿ ಹಿಮಗಡ್ಡೆಯಾಗುತ್ತಿದ್ದವು. ಇಲ್ಲಿ ಜೀವಿಗಳು (ಸೂಕ್ಷ್ಮಜೀವಿಗಳನ್ನೂ ಸೇರಿಸಿ) ಉಗಮವಾಗುವುದು ಕಷ್ಟವಾಗುತ್ತಿತ್ತು ಅಥವಾ ಜೀವಿಗಳು ಉಗಮವಾಗುತ್ತಲೇ ಇರಲಿಲ್ಲ! ಸೂರ್ಯನ ಶಾಖ ಭೂಮಿಯ ಮೇಲೆ ನೀರನ್ನು ದ್ರವರೂಪದಲ್ಲಿ ಇಟ್ಟಿರುವುದೇ ಭೂಮಿಯಲ್ಲಿ ಜೀವಿಗಳ ಉಗಮಕ್ಕೆ ಮೂಲಕಾರಣ. ನೀರು ದ್ರವರೂಪದಲ್ಲಿರುವುದರಿಂದ, ಸೂಕ್ಷ್ಮಜೀವಿಗಳು ಮೊದಲು ನೀರಿನಲ್ಲಿ ಉಗಮಗೊಂಡು, ನಂತರ ಸುಮಾರು ಬಿಲಿಯನ್ ವರ್ಷಗಟ್ಟಲೇ ಸೂರ್ಯನ ಶಾಖದ ಪರಿಣಾಮದಿಂದ ಬಹುಜೀವಕೋಶದ ಜೀವಿಗಳು ಹಾಗೂ ನಾವು ನೀವು ಭೂಪ್ರದೇಶದಲ್ಲಿ ರೂಪುಗೊಂಡಿದ್ದೇವೆ. ನಮ್ಮ ಭೂಮಿಯ ಇಂದಿನ ಆಕಾರ, ಜೀವರಾಶಿ, ಬೆಳಕು, ಕತ್ತಲೆ, ಮೋಡ, ಮಳೆ, ಸಮುದ್ರ, ಲೋಹಗಳು, ಲವಣಗಳು, ಅನಿಲಗಳು, ಪ್ರವಾಹಗಳು, ಹವಾಮಾನ ವೈಪರೀತ್ಯಗಳು, ಚಂಡಮಾರುತಗಳು ಇವೆಲ್ಲವುದಕ್ಕೂ ಕಾರಣ ಬಿಲಿಯನ್ ವರ್ಷಗಳಿಂದ ಭೂಮಿಗೆ ಸ್ಥಿರವಾಗಿ ದೊರೆಯುತ್ತಿರುವ ಸೂರ್ಯನ ಅನಿರ್ದಿಷ್ಟ ಶಾಖ ಮತ್ತು ಬೆಳಕು. ಸೂರ್ಯನಲ್ಲಿ ಒಂದು ಸಣ್ಣ ಬದಲಾವಣೆಯಾದರೂ ಕೂಡ ಸೌರಮಂಡಲದಲ್ಲಿನ ಗ್ರಹಗಳು ಮತ್ತು ಉಪಗ್ರಹಗಳಲ್ಲಿ ಸಂಪೂರ್ಣವಾಗಿ ಬದಲಾವಣೆಯಾಗುತ್ತದೆ. ಸೌರ ಮಂಡಲದೊಳಗಿನ ಬಾಹ್ಯಾಕಾಶ ಹವಾಮಾನವು ಬದಲಾವಣೆ ಹೊಂದುತ್ತದೆ; ಭೂಮಿಯಲ್ಲೂ ಕೂಡ ಜೀವರಾಶಿಯೇ ಒಮ್ಮೆಲೇ ನಶಿಸಿಹೋಗಬಹುದು!

ಭಾರತವೂ ಸೇರಿದಂತೆ ಪ್ರಪಂಚದ ಅನೇಕ ನಾಗರಿಕತೆಗಳು ಸೂರ್ಯನಿಗೆ ಅಧಿಪತಿಯ ಸ್ಥಾನ ನೀಡಿ ಆರಾಧಿಸಿದೆ. ಹಲವು ದೇಶಗಳ ಪುರಾಣ ಕಥೆಗಳಲ್ಲೂ ಸೂರ್ಯನೇ ಪ್ರಮುಖ. ಭಾರತದಲ್ಲಿ ಸೂರ್ಯನಿಗೆ ಹಲವು ಹೆಸರುಗಳಿವೆ- ಸೂರ್ಯ, ಭಾನು, ರವಿ, ಭಾಸ್ಕರ, ಪುಶ್ಪ, ಮಿರಿಚಿನಿ, ಆದಿತ್ಯ, ಸಾವಿತ್ರಿ, ಆರ್ಕಾ- ಹೀಗೆ ಪಟ್ಟಿ ದೊಡ್ಡದಿದೆ. ಸೂರ್ಯನನ್ನೇ ಕೇಂದ್ರಿಕರಿಸಿ, ಅವನಿಗೆ ನಮಸ್ಕರಿಸಿ ದಿನ ಪ್ರಾರಂಭಿಸುವ ಅಭ್ಯಾಸವು ಕೆಲವು ಸಮುದಾಯಗಳಲ್ಲಿ ನಡೆದುಬಂದಿದೆ. ಇದರ ಜೊತೆಗೆ ಸೂರ್ಯನಿಗೂ ಮೌಢ್ಯದ ನಂಬಿಕೆಗಳನ್ನು ಕಟ್ಟಿ ಬೆಳೆಸಿ ಪೋಷಿಸಲಾಗುತ್ತಿರುವುದು ಸರ್ವೇಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಏನೇ ಇರಲಿ, ಆಧುನಿಕ ವಿಜ್ಞಾನ ಬೆಳೆದಂತೆ, ಮಾನವನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿಸರ್ಗದ ಆಗುಹೋಗುಗಳನ್ನು ಹುಡುಕುತ್ತಾ ಹೋದಂತೆ, ನಿಸರ್ಗದ ವಿಸ್ಮಯಗಳು, ಪ್ರಕ್ರಿಯೆಗಳು ನಮಗೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಸೌರಮಂಡಲದಲ್ಲಿ ಜೀವರಾಶಿಯಿರುವ ಏಕೈಕ ಗ್ರಹ ಭೂಮಿ. ಈ ಜೀವರಾಶಿಗೆ ಕಾರಣ ಸೂರ್ಯನೇ. ಆದುದರಿಂದ, ನಾವು ಸೂರ್ಯನನ್ನು ಅಧ್ಯಯನ ಮಾಡುವುದು ಬಹಳ ಮುಖ್ಯವಾಗುತ್ತದೆ. ಸೂರ್ಯನಲ್ಲಿ ಹೇಗೆ ಶಾಖ, ಬೆಳಕು ಉತ್ಪತ್ತಿಯಾಗುತ್ತಿದೆ? ಇನ್ನು ಎಷ್ಟು ಕಾಲ ನಾವು ಈ ಶಾಖವನ್ನು ಬಳಸಿಕೊಳ್ಳಬಹುದು? ಸೂರ್ಯನಲ್ಲಿ ಶಾಖ ಉತ್ಪತ್ತಿಯಾಗುವುದು ಕಡಿಮೆಯಾದರೆ ಅಥವಾ ಹೆಚ್ಚಾದರೆ ಭೂಮಿಗೆ ಎಂತಹ ಪರಿಣಾಮ ಬೀರುತ್ತದೆ? ಸೂರ್ಯ ಈಗಿರುವಂತೆಯೇ ಇದ್ದರೆ, ಭೂಮಿಗೆ ಅಥವಾ ಜೀವರಾಶಿಗೆ ಏನಾದರೂ ಸಮಸ್ಯೆ ಬರಬಹುದೇ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ಸುಮಾರು 46 ಸಾವಿರ ಲಕ್ಷ ವರ್ಷಗಳ ಹಿಂದೆ ಸೌರ ನಿಹಾರಿಕೆಯ ಮೋಡಗಳು ತಿರುಗುತ್ತಿದ್ದವು. ಈ ಮೋಡಗಳು ಗುರುತ್ವ ಬಲದಿಂದ ಸಂಕುಚಿತಗೊಂಡು ಕೇಂದ್ರ ಭಾಗದಲ್ಲಿ ದೊಡ್ಡದಾದ ಒಂದು ಮೋಡದ ರೂಪ ಪಡೆಯಿತು. ಗುರುತ್ವ ಬಲದಿಂದ ಸಂಕುಚಿತತೆ ಹೆಚ್ಚಾದಂತೆ, ಕೇಂದ್ರ ಭಾಗವು ಹೆಚ್ಚು ಸಾಂದ್ರತೆ ಪಡೆಯಿತು, ತಾಪಮಾನ ಹೆಚ್ಚಿತು ಮತ್ತು ಅತೀ ವೇಗವಾಗಿ ತಿರುಗಲು ಪ್ರಾರಂಭಿಸಿತು. ಕ್ರಮೇಣ ಕೇಂದ್ರದಲ್ಲಿ ಸೃಷ್ಟಿಯಾದ ದೊಡ್ಡ ಮೋಡ ಸೂರ್ಯವಾದರೆ, ಕೇಂದ್ರದಿಂದ ದೂರದಲ್ಲಿ ರೂಪುಗೊಂಡಿದ್ದ ಇತರೆ ಸಣ್ಣಸಣ್ಣ ಮೋಡಗಳು ಸಂಕುಚಿತಗೊಂಡು, ತಂಪಾಗಿ, ಘನರೂಪವಾಗಿ ಸೂರ್ಯನ ಸುತ್ತ ಸುತ್ತುವ ಗ್ರಹಗಳಾಗಿ ರೂಪುಗೊಂಡವು. ಆದರೂ, ಮಂಗಳ ಗ್ರಹದಿಂದಾಚೆಗಿರುವ ಗ್ರಹಗಳು ಇನ್ನೂ ಅನಿಲ ರೂಪದಲ್ಲಿಯೇ ಇದೆ. ಇದು ಸೂರ್ಯ ಮತ್ತು ಸೌರಮಂಡಲದಲ್ಲಿನ ಗ್ರಹಗಳ ಉಗಮದ ಪ್ರಕ್ರಿಯೆ. ಈಗ ಸೂರ್ಯನ ಬಗ್ಗೆ ಕೆಲವೊಂದು ವಿಚಾರಗಳ ಬಗ್ಗೆ ಗಮನ ಹರಿಸೋಣ.

  • ಸೂರ್ಯ ಭೂಮಿಯಿಂದ ಸುಮಾರು 1500 ಲಕ್ಷ ಕಿಲೋಮಿಟರ್‌ನಷ್ಟು ದೂರ ಇದೆ; ಅಂದರೆ ಭೂಮಿ ಚಂದ್ರನ ನಡುವೆ ಇರುವ ದೂರದ 400 ಪಟ್ಟು ಹೆಚ್ಚು. ಇದಲ್ಲದೆ, ಸೂರ್ಯನ ಗಾತ್ರವು ಚಂದ್ರನಿಗಿಂತ 400 ಪಟ್ಟು ಹೆಚ್ಚಿದೆ. ಈ ಕಾರಣದಿಂದ ಭೂಮಿಯ ಮೇಲಿಂದ ಆಕಾಶದಲ್ಲಿ ಸೂರ್ಯ ಮತ್ತು ಚಂದ್ರ ಎರಡೂ ಒಂದೇ ಗಾತ್ರದಲ್ಲಿ ಕಾಣುತ್ತದೆ.
  • ಸುಮಾರು 12,700 ಕಿಲೋಮೀಟರ್ ವ್ಯಾಸ ಹೊಂದಿರುವ ಭೂಮಿಯನ್ನು 109 ಬಾರಿ ಸೂರ್ಯನ ವ್ಯಾಸದಲ್ಲಿ ಜೋಡಿಸಬಹುದು.
  • ಸುಮಾರು 13 ಲಕ್ಷ ಭೂಮಿಗಳನ್ನು ಸೂರ್ಯನ ಒಳಗೆ ತುಂಬಬಹುದು.
  • ಸೂರ್ಯನ ಮೇಲ್ಮೈ ತಾಪಮಾನ ಸುಮಾರು 5,700 ಡಿಗ್ರಿ ಸೆಲ್ಸಿಯಸ್, ಸೂರ್ಯನ ಕೇಂದ್ರ ಭಾಗದ ತಾಪಮಾನ 150 ಲಕ್ಷ ಡಿಗ್ರಿ ಸೆಲ್ಸಿಯಸ್
  • ಸೂರ್ಯನ ಒಳಬಾಗ ತಿರುಳು (ಕೇಂದ್ರ ಭಾಗ- Core), ವಿಕಿರಣ ವಲಯ (Radiation Zone), ಸಂವಹನ ವಲಯ (Convective Zone), ಫೋಟೋಸ್ಪಿಯರ್ (Photosphere- ದ್ಯುತಿಗೋಳ) ಎಂದು ವಿಂಗಡಿಸಲಾಗಿದೆ.
  • ಸೂರ್ಯನ ಹೊರಭಾಗವನ್ನು ಕ್ರೋಮೊಸ್ಪಿಯರ್ (Chromosphere- ವರ್ಣಗೋಳ), ಕರೋನಾ (Corona) ಎಂದು ವಿಂಗಡಿಸಲಾಗಿದೆ
  • ಸೂರ್ಯ ಶೇ.75ರಷ್ಟು ಹೈಡ್ರೋಜನ್, ಶೇ.24ರಷ್ಟು ಹೀಲಿಯಂ, ಉಳಿದ ಶೇ.1ರಷ್ಟು ಇತರೆ ಧಾತುಗಳಿಂದ ಮಾಡಲ್ಪಟ್ಟಿದೆ.
  • ಹೀಲಿಯಂ ಅನಿಲವನ್ನು ಮೊದಲು ಸೂರ್ಯನಲ್ಲಿ ಪತ್ತೆ ಮಾಡಲಾಯಿತು, ನಂತರ ಭೂಮಿಯಲ್ಲಿ ಇದರ ಇರುವಿಕೆಯನ್ನು ಗುರುತಿಸಲಾಯಿತು.
  • ಸೂರ್ಯನ ಕಿರಣ ಸೂರ್ಯನ ಫೋಟೋಸ್ಪಿಯರ್‌ನಿಂದ ಭೂಮಿಗೆ ಬರಲು ಎಂಟು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಇದೇ ಕಿರಣ ಸೂರ್ಯನ ಕೇಂದ್ರ ಭಾಗದಿಂದ ಫೋಟೋಸ್ಪಿಯರ್‌ಗೆ ತಲುಪಲು ಸುಮಾರು 20 ಸಾವಿರ ವರ್ಷ ತೆಗೆದುಕೊಳ್ಳುತ್ತದೆ.
  • ಸೂರ್ಯನ ಮೇಲ್ಮೈಯಲ್ಲಿ ಕೆಲವೊಮ್ಮೆ ಸೂರ್ಯ ಕಲೆಗಳು ಕಾಣುತ್ತವೆ, ಇದನ್ನು Sun Spot ಎಂದು ಕರೆಯುತ್ತಾರೆ. ಇದು ಕಪ್ಪಾಗಿ ಕಾಣುತ್ತದೆ ಆದರೂ Sun Spotನ ತಾಪಮಾನ ಸುಮಾರು 3500 ಡಿಗ್ರಿ ಸೆಲ್ಸಿಯಸ್! Sun Spotನ ಸುತ್ತಲಿನ ಪ್ರದೇಶ 5,800 ಡಿಗ್ರಿ ಸೆಲ್ಸಿಯಸ್ ಇರುವುದರಿಂದ, ಕಡಿಮೆ ತಾಪಮಾನ ಇರುವ ಸೌರ ಕಲೆಯ ಪ್ರದೇಶ ಕಪ್ಪಾಗಿ ಕಾಣುತ್ತದೆ.
  • ಸೌರ ಕಲೆಯ ಪ್ರದೇಶದಲ್ಲಿ ಸೂರ್ಯನ ಕಾಂತೀಯ ಕ್ಷೇತ್ರ ಹೆಚ್ಚಿರುತ್ತದೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಕೇಂದ್ರ, ಮಣಿಪುರ ಸರ್ಕಾರಕ್ಕೆ ವಿವರಣೆ ಕೇಳಿ NHRC ನೊಟೀಸ್

ಸೂರ್ಯನ ಬಗ್ಗೆ ನಡೆಸಿರುವ ಹಲವು ಅಧ್ಯಯನಗಳಿಂದ ಕಂಡುಕೊಂಡ ಮಾಹಿತಿಯನ್ನು ನೀವು ಈಗ ಓದಿದ್ದು. ಇವೆಲ್ಲವನ್ನು ತಿಳಿದುಕೊಂಡಿದ್ದು ಸೂರ್ಯನ ಬಳಿಗೆ ತೆರಳಿ ಅಲ್ಲ, ಬದಲಾಗಿ ಸೂರ್ಯನ ಬೆಳಕಿನ ಅಧ್ಯಯನದಿಂದ! ವೈಜ್ಞಾನಿಕ ಉಪಕರಣಗಳಾದ Spectrometer, Helioscope, Coronagraphಗಳ ಮೂಲಕ ಸೂರ್ಯನ ಬೆಳಕನ್ನು ಹಾಯಿಸಿ ರೋಯಿತವನ್ನು (Spectrum) ಪಡೆದು, ಡೋಪ್ಲರ್ ಪರಿಣಾಮವನ್ನು ಗುರುತಿಸಿ ಸಾಮಾನ್ಯವಾಗಿ ಅಧ್ಯಯನ ಮಾಡಲಾಗುತ್ತದೆ. ಇದಲ್ಲದೆ, ಇತರೆ ಗ್ರಹಗಳು ಸೂರ್ಯನ ಗುರುತ್ವ ಪ್ರಭಾವದಿಂದ ಸೂರ್ಯನ ಸುತ್ತ ಹೇಗೆ ಸುತ್ತುತ್ತಿವೆ ಎಂದು ಅಧ್ಯಯನ ಮಾಡುವುದರಿಂದ ಸೂರ್ಯನ ಬಗ್ಗೆ ವಿವರಗಳನ್ನು ಪಡೆಯುವುದು, ಜೊತೆಗೆ, ಕೆಲವು ಗಣಿತದ ಮಾದರಿಗಳಿಂದಲೂ (Mathematical Models) ಸೂರ್ಯನ ತೂಕ, ತಾಪಮಾನಗಳನ್ನು ನಾವು ಗ್ರಹಿಸಬಹುದು.

ಮಾನವರು ಸೂರ್ಯನಲ್ಲಿ ನಡೆಯುವ ಕೆಲವು ಪ್ರಕ್ರಿಯೆ ಮತ್ತು ಬದಲಾವಣೆಗಳನ್ನು ಬಹಳ ಹಿಂದಿನಿಂದಲೂ ಗ್ರಹಿಸುತ್ತಿದ್ದಾರೆ. ಮೊದಲ ಬಾರಿಗೆ ಸೂರ್ಯನಿಗೆ ಗ್ರಹಣವಾಗಿದೆ ಎಂದು 1948B.C. ಯಲ್ಲಿಯೇ ಗುರುತಿಸಲಾಗಿದೆ, ಸೂರ್ಯನ ಮೇಲಿನ ಸೌರ ಕಲೆಯನ್ನು 12ನೇ ಶತಮಾನದಲ್ಲಿ ಗುರುತಿಸಲಾಗಿದೆ. 17ನೇ ಶತಮಾನದಲ್ಲಿ ಗೆಲಿಲಿಯೋ ದೂರದರ್ಶಕದಿಂದ ಸೂರ್ಯನನ್ನು ಅಧ್ಯಯನ ಮಾಡುತ್ತಾನೆ. ನಂತರದಲ್ಲಿ ಸೂರ್ಯನ ಅನೇಕ ಬದಲಾವಣೆಗಳು ವಿಜ್ಞಾನದ ಇತಿಹಾಸದಲ್ಲಿ ದಾಖಲಾಗುತ್ತಾ ಹೋಗುತ್ತವೆ. ಸೂರ್ಯನ ಬಗ್ಗೆ ಹಲವು ವಿವರಗಳನ್ನು ಕಂಡುಕೊಂಡಿದ್ದರೂ, ಸೂರ್ಯನೇ ಜೀವಿಗಳ ಉಗಮಕ್ಕೆ ಮೂಲ ಕಾರಣವಾಗಿದ್ದರೂ, ಸೂರ್ಯನ ಪೂರ್ಣ ಚಿತ್ರ ನಮಗಿನ್ನೂ ಅಸ್ಪಷ್ಟ. ಒಂದು ಕಾಲದಲ್ಲಿ ಸೂರ್ಯನು ಬೆಂಕಿ ಕೆಂಡದಂತೆ ಉರಿಯುತ್ತಿರುವುದನ್ನು ಕಂಡ ಮಾನವರು, ಅದರೊಳಗೆ ಸಾಕಷ್ಟು ಕಲ್ಲಿದ್ದಲು ಇರಬಹುದು, ಆ ಕಲ್ಲಿದ್ದಲು ಉರಿದು ಶಾಖವನ್ನು ನೀಡುತ್ತಿದೆ ಎಂದು ಊಹಿಸಿದ್ದರು. ಅಲ್ಲದೆ, ಕೆಲವೊಂದು ರಾಸಾಯನಿಕ ಕ್ರಿಯೆ ನಡೆದು ಶಾಖ ಉತ್ಪತಿಯಾಗುತ್ತಿದೆ ಎಂದೂ ಕೂಡ ನಂಬಿದರು. ಒಂದು ಪಕ್ಷ ಇಂತಹ ಕ್ರಿಯೆಗಳು ನಡೆಯುತ್ತಿದ್ದರೆ, ಒಂದಷ್ಟು ಲಕ್ಷ ವರ್ಷಗಳಾದ ನಂತರ ಸೂರ್ಯನಲ್ಲಿರುವ ಕಲ್ಲಿದ್ದಲು ಮತ್ತು ರಾಸಾಯನಿಕ ಕ್ರಿಯೆಗಳು ಅಂತ್ಯಗೊಳ್ಳಬೇಕಾಗಿತ್ತು ಅಥವಾ ಶಾಖದ ಪ್ರಖರತೆ ಕಡಿಮೆಯಾಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ, ಸೂರ್ಯ ಸುಮಾರು 46 ಸಾವಿರ ಲಕ್ಷ ವರ್ಷದಿಂದಲೂ ಸ್ಥಿರವಾಗಿ ಶಾಖವನ್ನು ಮತ್ತು ಬೆಳಕನ್ನು ಉತ್ಪಾದಿಸುತ್ತಿದೆ!

ಸೂರ್ಯ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ ಉಂಡೆಯಾಗಿ ಉರಿಯುವ ಕಾರಣವನ್ನು ನಾವು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಕಂಡುಕೊಂಡೆವು, ಅದುವೆ ನ್ಯೂಕ್ಲಿಯಾರ್ ಕ್ರಿಯೆ- Thermonuclear ‍Fusion Reaction (ಉಷ್ಣ ಭೈಜಿಕ ಸಮ್ಮಿಳನ ಕ್ರಿಯೆ). ಸೂರ್ಯನಲ್ಲಿ ಅಪಾರ ಪ್ರಮಾಣದ ಹೈಡ್ರೋಜನ್ ಅನಿಲವಿದ್ದು, ಎರಡು ಹೈಡ್ರೋಜನ್ ಅಣುಗಳು ಸಮ್ಮಿಳನಗೊಂಡು ಹೀಲಿಯಂ ಅಣುವನ್ನು ಉತ್ಪಾದಿಸುವುದು, ಈ ಉತ್ಪಾದನೆಯಲ್ಲಿ ನಷ್ಟವಾದ ದ್ರವ್ಯರಾಶಿಯು ಐನ್‌ಸ್ಟೀನ್ ಸಮೀಕರಣವಾದ e=mc2 ರನ್ವಯ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಈಗಾಗಲೆ ನಮಗೆ ತಿಳಿದಂತೆ ಸೂರ್ಯನ ಕೇಂದ್ರ ಭಾಗದಲ್ಲಿ 150 ಲಕ್ಷ ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಇದು ಉಷ್ಣ ಭೈಜಿಕ ಕ್ರಿಯೆಗೆ ಅನುವು ಮಾಡಿಕೊಡುತ್ತದೆ. ಈ ಭೈಜಿಕ ಕ್ರಿಯೆಯಿಂದಲೇ 46 ಸಾವಿರ ವರ್ಷಗಳಿಂದಲೂ ಸೂರ್ಯನಲ್ಲಿ ಅತೀ ಹೆಚ್ಚು ಶಾಖ ಮತ್ತು ಬೆಳಕು ಸ್ಥಿರವಾಗಿ ಉತ್ಪತ್ತಿಯಾಗುತ್ತಿರುವುದು; ಇನ್ನೂ 50 ಸಾವಿರ ಲಕ್ಷ ವರ್ಷದವರೆಗೂ ಅದು ಹೀಗೆ ಉರಿಯುತ್ತಿರುತ್ತದೆ. ಸೂರ್ಯ ಒಂದು ಸೆಕೆಂಡಿಗೆ ಸರಿಸುಮಾರು 42 ಲಕ್ಷ ಟನ್ ದ್ರವ್ಯರಾಶಿಯನ್ನು ಶಕ್ತಿಯಾಗಿ ಬಿಡುಗಡೆ ಮಾಡುತ್ತದೆ. ಇದನ್ನು ಅಂದಾಜಿಸಿದರೆ, ಸುಮಾರು 600 ವರ್ಷಗಳಿಗೆ ಮನುಷ್ಯನಿಗೆ ಬೇಕಾಗುವ ಶಕ್ತಿಯನ್ನು ಸೂರ್ಯ ಒಂದು ಸೆಕೆಂಡಿಗೆ ಉತ್ಪತ್ತಿ ಮಾಡುತ್ತಿದೆ! ಸೂರ್ಯನ ಮೇಲ್ಮೈನಲ್ಲಿ 5,700 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೆ, ಸೂರ್ಯನ ಹೊರ ಪದರವಾದ ಕ್ರೋಮೋಸ್ಪಿಯರ್ ನಂತರದ ಕರೋನಾದಲ್ಲಿ ಸುಮಾರು 10ರಿಂದ 20 ಲಕ್ಷ ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಏಕೆ ಹೊರಪದರದಲ್ಲಿ ತಾಪಮಾನ ಹೆಚ್ಚಿದೆ ಎನ್ನುವುದಕ್ಕೆ ಕಾರಣ ಇನ್ನೂ ಅಸ್ಪಷ್ಟ. ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ನಾವು ಸೂರ್ಯನ ಹೊರಪದರಗಳಾದ ಕ್ರೋಮೋಸ್ಪಿಯರ್ ಮತ್ತು ಕರೋನಾವನ್ನು ಅಧ್ಯಯನ ಮಾಡಬಹುದು. ಏಕೆಂದರೆ, ಸೂರ್ಯಗ್ರಹಣದ ಸಮಯದಲ್ಲಿ, ಚಂದ್ರ ಸೂರ್ಯನನ್ನು ಫೋಟೋಸ್ಪಿಯರ್‌ವರೆಗೂ ಮರೆಮಾಚಿರುತ್ತದೆ, ಆದುದರಿಂದ ಸೂರ್ಯನ ಹೊರಪದರವನ್ನು ನಾವು ನೋಡಬಹುದಾಗಿದೆ. ಆದರೆ, ಈ ಗ್ರಹಣಗಳು ಕೆಲವು ನಿಮಿಷಗಳಷ್ಟು ಮಾತ್ರ ಉಂಟಾಗುವುದರಿಂದ, ಅಧ್ಯಯನಕ್ಕೆ ಸಿಕ್ಕುವ ಸಮಯ ಬಹಳ ಕಡಿಮೆ. ಗ್ರಹಣಗಳನ್ನು ಹೊರತುಪಡಿಸಿದರೆ, ವೈಜ್ಞಾನಿಕ ಉಪಕರಣವಾದ Coronagraph ಸಹಾಯದಿಂದ ಸೂರ್ಯನ ಫೋಟೋಸ್ಪಿಯರ್‌ಅನ್ನು ಮರೆಮಾಚಿ, ಉಳಿದ ಪದರಗಳ ಅಧ್ಯಯನ ಮಾಡಬಹುದು. ಆದರೆ ಭೂಮಿಯಲ್ಲಿ ವಾತಾವರಣ ಇರುವುದರಿಂದ, ಸೂರ್ಯನ ಹೊರಪದರಗಳಿಂದ ಬರುವ ಕಿರಣಗಳ ತೀಕ್ಷ್ಣತೆ ಕಡಿಮೆ ಇರುತ್ತದೆ. ಆದಕಾರಣ ಬಾಹ್ಯಾಕಾಶದಿಂದ ಸೂರ್ಯನನ್ನು ಅಧ್ಯಯನ ಮಾಡುವುದು ಅನಿವಾರ್ಯವಾಗುತ್ತದೆ.

ತಂತ್ರಜ್ಞಾನ ಮುಂದುವರಿದಂತೆ ಮಾನವರಿಗೆ ವಿಷಯ ತಿಳಿಯುವ, ಅನ್ವೇಷಿಸುವ ಬಗೆಯ ಪರಿಧಿಯು ಬದಲಾಗುತ್ತದೆ. 19ನೇ ಶತಮಾನಕ್ಕೂ ಹಿಂದೆ ಸೂರ್ಯನನ್ನು ಭೂಮಿಯಿಂದ ಮಾತ್ರ ಅಧ್ಯಯನ ಮಾಡುತ್ತಿದ್ದ ಮನುಷ್ಯ, ಬಾಹ್ಯಾಕಾಶ ವಿಜ್ಞಾನ ಬೆಳೆದಂತೆ, ಚಂದ್ರನ ಬಳಿಗೆ ನೌಕೆಯನ್ನು ಕಳುಹಿಸಿದಂತೆ ಸೂರ್ಯನ ಬಳಿಗೂ ಕಳುಹಿಸಿ ಸೂರ್ಯನನ್ನು ಅಧ್ಯಯಿಸಲು ಪ್ರಾರಂಭಿಸಲಾಯಿತು.

ಸೂರ್ಯನ ಅಧ್ಯಯನಕ್ಕೆ ನೌಕೆಯನ್ನು ಕಳುಹಿಸುವುದು ಹೊಸ ವಿಚಾರವಲ್ಲ. ಆದರೆ, ಸೂರ್ಯನ ತಾಪಮಾನ ಹೆಚ್ಚಾಗಿರುವುದರಿಂದ, ಸೂರ್ಯನ ಹತ್ತಿರಕ್ಕೆ ಬಾಹ್ಯಾಕಾಶ ನೌಕೆಗಳು ತೆರಳುವುದು ಕಷ್ಟ. ಅಲ್ಲದೆ, ಸೂರ್ಯನ ಗುರುತ್ವ ಬಲದ ತೀವ್ರತೆ ಹೆಚ್ಚಿರುವುದರಿಂದ, ನೌಕೆಗಳನ್ನು ತನ್ನ ಬಳಿಗೆ ಆಕರ್ಷಿಸುವ ಸೂರ್ಯನ ಸೆಳೆತವು ಹೆಚ್ಚಿರುತ್ತದೆ. ಈ ಕಾರಣದಿಂದ ಸೂರ್ಯನ ಬಳಿಗೆ ತೆರಳುವ ಬಾಹ್ಯಾಕಾಶ ನೌಕೆಯನ್ನು ನಿಯಂತ್ರಿಸುವುದು ಕಷ್ಟವಾಗಿರುತ್ತದೆ. ಆದರೂ 1960ರಲ್ಲಿ ಮೊದಲ ಬಾರಿಗೆ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆ Poineer Mission ಹೆಸರಿನ ಗಗನನೌಕೆಗಳನ್ನು ಸೂರ್ಯನ ಬಳಿಗೆ ಹಾರಿಬಿಟ್ಟಿತು. ಸೂರ್ಯನನ್ನು ವಿವಿಧ ಬೆಳಕಿನ ತರಂಗಾಂತರಗಳಿಂದ ವೀಕ್ಷಿಸುವುದು ಮತ್ತು ಸೂರ್ಯನ ಕಾಂತೀಯ ಪ್ರಕ್ರಿಯೆಗಳನ್ನು ಅಧ್ಯಯನ ಮಾಡುವುದು ಇದರ ಪ್ರಮುಖ ಉದ್ದೇಶವಾಗಿತ್ತು. ತದನಂತರ ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳು ಹಲವು ರೀತಿಯ ನೌಕೆಗಳನ್ನು ಸೂರ್ಯನ ಅಧ್ಯಯನಕ್ಕೆ ಕಳುಹಿಸಿವೆ. ಅದರಲ್ಲಿ ಪ್ರಮುಖವಾಗಿ 2018ರಲ್ಲಿ ನಾಸಾ ಕಳುಹಿಸಿದ Parker Solar Probe ಉಲ್ಲೇಖನೀಯ. ಈ ನೌಕೆಯು 2021ರಲ್ಲಿ ಸೂರ್ಯನಿಂದ ಕೇವಲ 65 ಲಕ್ಷ ಕಿಲೋಮೀಟರ್ ದೂರದಲ್ಲಿದ್ದು, ಸೂರ್ಯನ ಹತ್ತಿರಕ್ಕೆ ತೆರಳಿದ ಮೊದಲ ಮಾನವ ನಿರ್ಮಿತ ನೌಕೆಯಾಗಿದೆ. ಈ ನೌಕೆಯು ಸೂರ್ಯನ ಹೊರಪದರವಾದ ಕರೋನಾವನ್ನು ಅತೀ ಹತ್ತಿರದಿಂದ ಅಧ್ಯಯನ ನಡೆಸುತ್ತಿದ್ದು, ಹಲವು ವಿವರಗಳು ಮುಂದಿನ ದಿನಗಳಲ್ಲಿ ಬರಬಹುದು. ಭಾರತವು ಚಂದ್ರಯಾನದ ಯಶಸ್ಸಿನ ಹೊಸ್ತಿಲಲ್ಲೇ, ಆದಿತ್ಯ ಎಲ್1 ಎಂಬ ಸೂರ್ಯನನ್ನು ಅಧ್ಯಯನ ಮಾಡುವ ಬಾಹ್ಯಾಕಾಶ ನೌಕೆಯನ್ನು ಸೆಪ್ಟೆಂಬರ್ 2ರಂದು ISRO ತನ್ನ ಬಹು ಅವಲಂಬಿತ PSLV C57 ರಾಕೆಟ್ ಮೂಲಕ ನಭಕ್ಕೆ ಚಿಮ್ಮಿಸಿತು. ಇದರ ಮೂಲಕ ಸೂರ್ಯನನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ಏಷ್ಯಾ ಖಂಡದ ಮೊದಲ ದೇಶ ಭಾರತವಾಯಿತು. ಈ ನೌಕೆಯು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ L1 (Langrage Point) ಬಿಂದುವಿನಲ್ಲಿ ಕಾರ್ಯನಿರ್ವಹಿಸಲಿದೆ. ಈ Langrage Point ಬಗ್ಗೆ ಸರಳವಾಗಿ ಹೇಳಬೇಕೆಂದರೆ, ಈ L1 ಬಿಂದುವಿನಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವ ಬಲವು ಸಮಪ್ರಮಾಣದಲ್ಲಿ ವಿರುದ್ಧ ದಿಕ್ಕಿನಲ್ಲಿರುವುದರಿಂದ ಬಲವು ರದ್ದಾಗಿರುತ್ತದೆ. ಅಂದರೆ, ಈ ಬಿಂದುವಿನಲ್ಲಿ ಯಾವುದಾದರು ವಸ್ತುವು ಇರುವಂತಾದರೆ, ಅದರ ಮೇಲೆ ಯಾವುದೇ ತಳ್ಳುವ ಅಥವಾ ಎಳೆಯುವ ಬಲ ಇರುವುದಿಲ್ಲ, ವಸ್ತುವು ನ್ಯೂಟನ್ ನಿಯಮಗಳ ಪ್ರಕಾರ ಅದೇ ಬಿಂದುವಿನಲ್ಲಿರುತ್ತದೆ/ಸ್ಥಾನದಲ್ಲಿರುತ್ತದೆ. ಭೂಮಿ ಸೂರ್ಯನ ಸುತ್ತ ತಿರುಗಿದಂತೆ, L1 ಬಿಂದುವು ಚಲಿಸುವುದರಿಂದ, ಅದೇ ಬಿಂದುವಿನಲ್ಲಿ ವಸ್ತುವು trap ಆಗಿ, ಬಿಂದುವಿನ ಜತೆಯೇ ಚಲಿಸುತ್ತಿರುತ್ತದೆ. ಈ ಕಾರಣದಿಂದ L1 ಬಿಂದುವಿನಲ್ಲಿ ಬಾಹ್ಯಾಕಾಶ ನೌಕೆಯಾಗಲಿ ಅಥವಾ ಇತರೆ ಯಾವುದೇ ಕಾಯವಾಗಲಿ ಇದ್ದರೆ, ಅದು ಆ ಬಿಂದುವಿನಲ್ಲೇ ಇರುತ್ತದೆ ಮತ್ತು ಆ ಬಿಂದುವಿಗೆ ಕಳಿಸುವ ನೌಕೆಗಳನ್ನು ಬಹಳ ಕಡಿಮೆ ಇಂಧನ ಬಳಸಿ ನಿರ್ವಹಣೆ ಮಾಡಬಹುದಾಗಿರುತ್ತದೆ. ಅಲ್ಲದೆ, ಈ L1 ಬಿಂದುವಿನಿಂದ ಯಾವುದೇ ಅಡೆತಡೆ ಇಲ್ಲದೆ ಸೂರ್ಯನನ್ನು ಪ್ರತಿಕ್ಷಣವು ವೀಕ್ಷಣೆ ಮಾಡಬಹುದಾಗಿರುತ್ತದೆ. ಭಾರತದ ಚಂದ್ರಯಾನ ಯೋಜನೆಯಲ್ಲಿ ಚಂದ್ರನ ಮೇಲೆ ನೌಕೆಯನ್ನು ಮೃದುವಾಗಿ ಲ್ಯಾಂಡಿಂಗ್ ಮಾಡುವ ದೇಶೀ ನಿರ್ಮಿತ ತಂತ್ರಜ್ಞಾನ ಪ್ರದರ್ಶನವಾದರೆ, ಆದಿತ್ಯ L1 ನೌಕೆಯು ಸೂರ್ಯನಿಗೆ ಸಂಬಂಧಿಸಿದ ಮೂಲ ವಿಜ್ಞಾನದ ಸಂಶೋಧನೆಗಳ ಬಗ್ಗೆ ಗಮನ ಹರಿಸುವುದಾಗಿದೆ. ಆದಿತ್ಯ L1 ನೌಕೆಯಲ್ಲಿ ಸೂರ್ಯನ ಮೇಲ್ಮೈ, ಕರೋನಾ ಪದರ, ಕಾಂತೀಯ ಕ್ಷೇತ್ರ ವಲಯ ಮತ್ತು ಸೂರ್ಯನಿಂದ ಹೊರಸೂಸುವ ಸೌರ ಮಾರುತ ಮತ್ತು ಅವುಗಳಿಂದ ಬಾಹ್ಯಾಕಾಶದ ಹವಾಮಾನದಲ್ಲಾಗುವ ಪರಿಣಾಮಗಳನ್ನು ಅಧ್ಯಯನ ಮಾಡಲು ಏಳು ವೈಜ್ಞಾನಿಕ ಉಪಕರಣಗಳು ಇವೆ. ಆದಿತ್ಯ L1 ಸುಮಾರು ನಾಲ್ಕು ತಿಂಗಳುಗಳು ಬಾಹ್ಯಾಕಾಶದಲ್ಲಿ ಚಲಿಸಿ L1 ಬಿಂದುವನ್ನು ಸೇರುತ್ತದೆ. ಈಗಾಗಲೇ ವಿಜ್ಞಾನಿಗಳು ಆದಿತ್ಯ L1ನ ಕೆಲವು ಉಪಕರಣಗಳಿಂದ ಮಾಹಿತಿಯನ್ನು ಕೂಡ ಪಡೆಯುತ್ತಿದ್ದು, ಸರಿಯಾಗಿ ಕೆಲಸ ಮಾಡುವ ಬಗ್ಗೆ ಅವಲೋಕಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸೂರ್ಯನ ಬಗೆಗಿನ ಕೌತುಕಗಳಿಗೆ, ಅದರಲ್ಲಿನ ಸೌರಲೆಗಳ ಬಗ್ಗೆ, ಕರೋನಾ ಪದರದ ಬಗ್ಗೆ, ಸೌರ ಮಾರುತಗಳ ಬಗ್ಗೆ, ಈ ಮಾರುತಗಳಿಂದ ಭೂಮಿಯಲ್ಲಿ ನಡೆಯುವ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಬಹುದೆಂಬ ವಿಚಾರ ವಿಜ್ಞಾನಿಗಳ ಬಳಿಯಿದೆ. ಈ ನೌಕೆಯು ಈಗಾಗಲೇ L1 ಬಿಂದುವಿನಲ್ಲಿರುವ ನಾಸಾ ಮತ್ತು ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳ SOHO- Solar Heliospheric Observatory, Advanced Composition Explorer (ACE), WIND and Deep Space Climate Observatory (DSCOVR) ನೌಕೆಗಳನ್ನು ಸೇರಿಕೊಳ್ಳುತ್ತದೆ. ಈ ಎಲ್ಲಾ ನೌಕೆಗಳು ಸೂರ್ಯನನ್ನು ಪ್ರತಿ ಕ್ಷಣ ವೀಕ್ಷಿಸುತ್ತಿದ್ದು, ಹಲವು ದತ್ತಾಂಶಗಳನ್ನ ಭೂಮಿಗೆ ಕಳುಹಿಸುತ್ತಿದ್ದು, ವಿಜ್ಞಾನಿಗಳು ದತ್ತಾಂಶಗಳಲ್ಲಿ ಅಡಗಿರುವ ಕುತೂಹಲ ವಿಚಾರವನ್ನು ಅಧ್ಯಯನ ಮಾಡುತ್ತಿದ್ದಾರೆ. ಈ ಎಲ್ಲಾ ನೌಕೆಗಳ ಅಧಿಕೃತ ವೆಬ್ ತಾಣಗಳಲ್ಲಿ ಈ ನೌಕೆಗಳಿಂದ ನಮಗೆ ಒದಗಿರುವ ಕೆಲವು ದತ್ತಾಂಶಗಳು ಮತ್ತು ಸೂರ್ಯನ ಇತ್ತೀಚಿನ ವಿವಿಧ ತರಂಗಾಂತರದ ಚಿತ್ರಗಳು ಸಾರ್ವಜನಿಕರಿಗೂ ಮುಕ್ತವಾಗಿ ಲಭ್ಯವಿದೆ. ಭೂಮಿಯಲ್ಲಿನ ಜೀವಿಯ ಉಗಮಗಳಿಗೆ ಕಾರಣವಿರುವ ಸೂರ್ಯನ ಅಧ್ಯಯನಕ್ಕೆ ತೆರಳಿರುವ ಆದಿತ್ಯ L1 ನೋಡುವ ಬೆಳಕು, ಅದರಿಂದ ಬರುವ ಅರಿವು, ಮಾನವನಿಗೆ ವೈಜ್ಞಾನಿಕ ಮತ್ತು ವೈಚಾರಿಕತೆಯನ್ನು ಮೂಡಿಸುವ ದೀವಿಗೆಯಾಗಲಿ ಎಂಬುದಷ್ಟೇ ನಮ್ಮ ಆಶಯ.

ಎಚ್ಚರಿಕೆ: ಸೂರ್ಯನನ್ನು ಬರಿ ಕಣ್ಣಿನಲ್ಲಿ, ದೂರದರ್ಶಕದಲ್ಲಿ, ಬೈನಾಕ್ಯುಲರ್‌ನಿಂದಾಗಲಿ ನೋಡಬಾರದು. ಅಧಿಕೃತ Solar Filter ಸಹಾಯದಿಂದ ಮತ್ತು ಅದನ್ನು ಬಳಸುವ ವಿಧಾನವನ್ನು ಸರಿಯಾಗಿ ತಿಳಿದು ಸೂರ್ಯನನ್ನು ನೋಡಬೇಕು.

ವಿಶ್ವ ಕೀರ್ತಿ ಎಸ್.

ವಿಶ್ವ ಕೀರ್ತಿ ಎಸ್
ವಿಜ್ಞಾನ ಮತ್ತು ಖಗೋಳದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read