Homeಮುಖಪುಟಹಿಂದಿ ಹೇರಿಕೆ ಕುರಿತು ಉತ್ತರ ಭಾರತದ ಜನಪರ ಮುಖಂಡರ ಅಭಿಪ್ರಾಯವೇನು? - ಡಾ.ಎಚ್.ವಿ ವಾಸು

ಹಿಂದಿ ಹೇರಿಕೆ ಕುರಿತು ಉತ್ತರ ಭಾರತದ ಜನಪರ ಮುಖಂಡರ ಅಭಿಪ್ರಾಯವೇನು? – ಡಾ.ಎಚ್.ವಿ ವಾಸು

ಇಂದು ಕನ್ನಡಾಭಿಮಾನವೆನ್ನುವುದು ಪ್ರಧಾನವಾಗಿ ತಮಿಳು ವಿರೋಧವಾಗಿ ಉಳಿದುಕೊಂಡಿಲ್ಲ. ಈಗ ದೆಹಲಿ ದಬ್ಬಾಳಿಕೆಯ ವಿರುದ್ಧ ದಕ್ಷಿಣ ಭಾರತೀಯರೆಲ್ಲರೂ ಒಂದಾಗಬೇಕು ಎಂದು ಹೇಳುವಲ್ಲಿಗೆ ಅದು ಬಂದು ನಿಂತಿದೆ.

- Advertisement -
- Advertisement -

ಕರ್ನಾಟಕದಲ್ಲಿ ಹಿಂದಿ ವಿರುದ್ಧ ಮತ್ತೊಮ್ಮೆ ದನಿ ಎದ್ದಿದ್ದ ಹೊತ್ತಿನಲ್ಲೇ ನಾವು ಗೌರಿ ಲಂಕೇಶರ ನೆನಪಿನಲ್ಲಿ ಕಾರ್ಯಕ್ರಮವೊಂದನ್ನು ಸಂಘಟಿಸುವ ಸಂದರ್ಭ ಬಂದಿತ್ತು. ಎನ್‍ಡಿಟಿವಿ ಹಿಂದಿಯ ಪ್ರಸಿದ್ಧ ಪತ್ರಕರ್ತ ರವೀಶ್ ಕುಮಾರ್ ಅವರಿಗೆ, ಗೌರಿ ಲಂಕೇಶ್ ಪ್ರಶಸ್ತಿಯನ್ನು ಆ ಕಾರ್ಯಕ್ರಮದಲ್ಲಿ ನೀಡುವುದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಹಲವು ಗೆಳೆಯರು ಭಿನ್ನವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಸತ್ಯ ಮತ್ತು ಸೆಕ್ಯುಲರಿಸಂ ಕುರಿತು ರವೀಶ್ ಕುಮಾರ್ ಅವರ ಬದ್ಧತೆಗಳ ಬಗ್ಗೆ ಆ ಗೆಳೆಯರಿಗೂ ಸಂದೇಹಗಳಿರಲಿಲ್ಲ. ಆದರೆ, ‘ಹಿಂದಿ ವಾಲಾ’ ಒಬ್ಬರಿಗೆ ನಾವು ಪ್ರಶಸ್ತಿ ಕೊಡುವುದರ ಕುರಿತು ಅವರಿಗೆ ತಕರಾರುಗಳಿತ್ತು. ‘ರವೀಶ್ ಕುಮಾರ್ ಏನೂ ಹಿಂದಿಯ ಸಮರ್ಥನೆ ಮಾಡುವವರಲ್ಲ, ಅಂದಿನ ಕಾರ್ಯಕ್ರಮದಲ್ಲಿ ರವೀಶ್ ಕುಮಾರ್ ಏನು ಮಾತಾಡುತ್ತಾರೆಂದು ನೋಡಿ ತೀರ್ಮಾನಕ್ಕೆ ಬನ್ನಿ’ ಎಂದು ಇನ್ನೊಬ್ಬ ಗೆಳೆಯರು ಫೇಸ್‍ಬುಕ್‍ನಲ್ಲಿ ತಕರಾರೆತ್ತಿದವರಿಗೆ ಹೇಳಿದ್ದರು.

ರವೀಶ್ ಅವರ ಜೊತೆ ಯಾರೂ ಈ ಕುರಿತು ಪ್ರಸ್ತಾಪ ಮಾಡಿರಲಿಲ್ಲ. ಆದರೆ ಅವರು ತಮ್ಮ ಭಾಷಣದ ಗಣನೀಯ ಭಾಗವನ್ನು ಹಿಂದಿಯ ಕುರಿತು ಮಾತನಾಡಲು ಮೀಸಲಿಟ್ಟಿದ್ದರು. ಅವರು ಹಿಂದಿಯ ಮೇಲರಿಮೆಯ ಕುರಿತಾಗಿ ಮಾತಾಡಲಿಲ್ಲ; ಹಿಂದಿ ಜನರ ಕುರಿತು ಅನುಕಂಪ ತೋರಿಸಿ ಎಂದು ಮಾತಾಡಿದರು. ಅಂದರೆ ಯಾವ ಹಿಂದಿಯನ್ನು ಹೇರುವ ಅಥವಾ ಅದರ ಹಿರಿಮೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ರಾಜಕಾರಣಿಗಳು ಮಾತಾಡುತ್ತಿದ್ದಾರೋ, ಆ ಹಿಂದಿ ಭಾಷೆ ಮಾತಾಡುವ ಜನರನ್ನು ಅಷ್ಟೇ ಕೆಟ್ಟ ಪರಿಸ್ಥಿತಿಯಲ್ಲಿಟ್ಟಿದ್ದಾರೆ ಎಂಬುದನ್ನು ಅಂಕಿ-ಅಂಶ ಹಾಗೂ ನಿದರ್ಶನಗಳ ಮೂಲಕ ಬಿಚ್ಚಿಟ್ಟಿದ್ದರು. ಈ ವಿಚಾರವನ್ನು ಹೀಗೂ ನೋಡಬಹುದು ಎಂದು ತೋರಿಸಿದ್ದರು!

ರವೀಶ್, ಯೋಗೇಂದ್ರ ಯಾದವ್ ಅಥವಾ ಅವರ ತಾತ್ವಿಕ ಗುರು ರಾಮಮನೋಹರ ಲೋಹಿಯಾ (ಯೋಗೇಂದ್ರ ಯಾದವ್ ಅವರು ಕಿಷನ್ ಪಟ್ನಾಯಕ್ ಅವರನ್ನು ತಮ್ಮ ಗುರು ಎಂದು ಹೇಳುತ್ತಾರಾದರೂ ಕಿಷನ್ ಅವರು ಪ್ರಮುಖ ಲೋಹಿಯಾವಾದಿ ನಾಯಕರಲ್ಲೊಬ್ಬರು ಎನ್ನುವುದನ್ನು ಮರೆಯಲಾಗದು), ಜಯಪ್ರಕಾಶ್ ನಾರಾಯಣ್ ಮತ್ತಿತರರು ಹಿಂದಿ ಹೇರಿಕೆ, ಅಧಿಕಾರ ವಿಕೇಂದ್ರೀಕರಣ, ಒಕ್ಕೂಟ ವ್ಯವಸ್ಥೆಯ ಮೂಲಭೂತ ನೀತಿಗಳ ಕುರಿತು ಏನು ಹೇಳುತ್ತಾರೆ ಎಂಬುದಕ್ಕೆ ಒಂದು ಮಹತ್ವವಿದೆ. ಏಕೆಂದರೆ ಇವರುಗಳು ಮೂಲಭೂತವಾಗಿ ಕೇಂದ್ರೀಕರಣ ರಾಜಕೀಯದ ವಿರೋಧಿಗಳೇ. ಆದರೆ ಹಿಂದಿ ಪ್ರದೇಶದಲ್ಲಿ ಇದ್ದಾರೆ. ನಮ್ಮ ವಿರೋಧ ಇರುವುದು ಕೇಂದ್ರೀಕರಣ, ಹೇರಿಕೆಗಳ ವಿರುದ್ಧವೇ ಹೊರತು, ಅಲ್ಲಿನ ಸಾಮಾನ್ಯ ಜನರ ವಿರುದ್ಧವಲ್ಲವಾದ್ದರಿಂದ ಇಂತಹ ನಮ್ಮ ‘ಸಮಾನ ಮನಸ್ಕ’ರ ಅನಿಸಿಕೆಗಳನ್ನು ಗಂಭೀರವಾಗಿ ನೋಡುವ ಅಗತ್ಯವಿದ್ದೇ ಇರುತ್ತದೆ.

ತೀರಾ ಇತ್ತೀಚೆಗೆ ಭಾಷಣವೊಂದರಲ್ಲಿ ಗುಜರಾತಿಗಳು ನಮ್ಮ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಹೊರಟಿದ್ದಾರೆ ಎಂದು ನಾನು ಹೇಳಿದಾಗಲೂ, ಗೆಳೆಯರೊಬ್ಬರು ಸಾಮಾನ್ಯ ಗುಜರಾತಿಗಳಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದರು. ಗುಜರಾತಿ ರಾಜಕಾರಣಿ ದ್ವಯರಾದ ನರೇಂದ್ರ ಮೋದಿ ಮತ್ತು ಅಮಿತ್‍ಷಾ, ಗುಜರಾತ್ ಮೂಲದ ಉದ್ದಿಮೆಪತಿಗಳಾದ ಅಂಬಾನಿ, ಅದಾನಿ ಮತ್ತಿತರರು ಮತ್ತು ಪ್ರಧಾನಮಂತ್ರಿ ಕಚೇರಿಯಲ್ಲಿ ಕುಳಿತು ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ಗುಜರಾತ್ ಕೇಡರ್ ಐಎಎಸ್ ಅಧಿಕಾರಿಗಳ ಕುರಿತಾಗಿ ನಾನು ಮಾತಾಡಿದ್ದೆ. ಆದರೆ ಇದೇ ‘ಗುಜರಾತಿ’ಗಳು ಗುಜರಾತ್ ಮಾದರಿ ಅಭಿವೃದ್ಧಿ ಎಂಬ ಹುಸಿ ಸಂಗತಿಯನ್ನು 6 ವರ್ಷಗಳ ಹಿಂದೆ ದೇಶದ ಮುಂದಿಟ್ಟು ಅಧಿಕಾರ ಕಬಳಿಸಿದ್ದರು. ಅದು ಹುಸಿ ಅಭಿವೃದ್ಧಿಯಾದಲ್ಲಿ ಗುಜರಾತಿನ ಸಾಮಾನ್ಯ ಜನರೂ ಬಲಿಪಶುಗಳೇ ತಾನೇ?

ಹೀಗಾಗಿ ಯಜಮಾನಿಕೆಯನ್ನು ಭಾಷೆ ಅಥವಾ ಇನ್ನಾವುದಾದರೂ ನೆಲೆಯಲ್ಲಿ ಹೇರಲು ಹೊರಟಿರುವ ಸ್ಥಾಪಿತ ಹಿತಾಸಕ್ತಿಗಳನ್ನು ವಿರೋಧಿಸಲು ಹೊರಟಾಗ ಆ ಭಾಷೆ ಅಥವಾ ಪ್ರದೇಶದ ಸಾಮಾನ್ಯ ಜನರನ್ನೂ ಗುರಿ ಮಾಡಹೊರಡಬಾರದು ಎಂಬುದು ಬಹಳ ಹಳೆಯ ವಿವೇಕ. ಕರ್ನಾಟಕದಲ್ಲಿ ತಮಿಳು ವಿರೋಧಿ ಭಾವನೆ ಬಲವಾಗಿದ್ದ ಕಾಲವೊಂದಿತ್ತು. ಅತ್ಯಂತ ಅಸಂಬದ್ಧ ಸಂಗತಿಗಳನ್ನು ಕೆಲವರು ತಮಿಳರ ಕುರಿತು ಮುಂದಿಡುತ್ತಿದ್ದರು. ಅವು ಮುಸ್ಲಿಮರ ಕುರಿತು ಆರೆಸ್ಸೆಸ್ ಪರಿವಾರದ ಜನರು ಹೇಳುವ ಸುಳ್ಳುಗಳ ರೀತಿ ಭಾಸವಾಗುತ್ತಿತ್ತು. ಅದೇನೇ ಇದ್ದರೂ ಇಂದು ಕನ್ನಡಾಭಿಮಾನವೆನ್ನುವುದು ಪ್ರಧಾನವಾಗಿ ತಮಿಳು ವಿರೋಧವಾಗಿ ಉಳಿದುಕೊಂಡಿಲ್ಲ. ಹಾಗೆ ನೋಡಿದರೆ ಈಗ ದೆಹಲಿ ದಬ್ಬಾಳಿಕೆಯ ವಿರುದ್ಧ ದಕ್ಷಿಣ ಭಾರತೀಯರೆಲ್ಲರೂ ಒಂದಾಗಬೇಕು ಎಂದು ಹೇಳುವಲ್ಲಿಗೆ ಅದು ಬಂದು ನಿಂತಿದೆ. ಹಾಗಾದರೆ ಅದೇ ದೆಹಲಿ ದಬ್ಬಾಳಿಕೆಯ ವಿರುದ್ಧ ಭಾರತೀಯರೆಲ್ಲರೂ ಏಕೆ ಒಂದಾಗಬಾರದು ಎಂಬ ಪ್ರಶ್ನೆಯೂ ಏಳುತ್ತದೆ.

ಯೋಗೇಂದ್ರ ಯಾದವ್

ಆದರೆ, ಅದು ಅಷ್ಟು ಸುಲಭವಲ್ಲವೇಕೆಂದರೆ ಹಿಂದಿ ಯಜಮಾನಿಕೆ ಎಂಬುದು ಹಿಂದಿ ಮೂಲದ ಪ್ರಜಾತಂತ್ರವಾದಿಗಳಲ್ಲೂ ಸುಪ್ತವಾಗಿ ಇದ್ದೇ ಇರುತ್ತದೆ ಎಂಬ ಭಾವನೆ ಇದೆ. ಇದಕ್ಕೆ ಕಾರಣವೂ ಇದ್ದಿದೆ. ಮೂಲತಃ ಇಂಗ್ಲಿಷ್ ವಿರೋಧಿಯಾಗಿದ್ದ (ಇಂಗ್ಲಿಷ್ ಭಾಷೆಯ ವಿರೋಧಿ ಎನ್ನುವುದಕ್ಕಿಂತ, ಭಾರತದ ಮೇಲೆ ವಿದೇಶೀ ವಸಾಹುತಗಳ ಯಜಮಾನಿಕೆ ಹೋಗಬೇಕೆಂದು ಬಲವಾಗಿ ವಾದಿಸುತ್ತಿದ್ದ) ರಾಮಮನೋಹರ ಲೋಹಿಯಾ ಅವರು ಆ ಜಾಗದಲ್ಲಿ ಹಿಂದಿಯನ್ನು ಕೂರಿಸಲು ಹೊರಟಿದ್ದರು ಎಂಬ ಅನಿಸಿಕೆ ಮೂಡಲು ಕಾರಣಗಳಿದ್ದವು. ಇತ್ತೀಚೆಗೆ (2009ರಲ್ಲಿ) ಲೋಹಿಯಾರ ನಿಲುವಿನ ಕುರಿತು ಸುಧನ್ವ ದೇಶಪಾಂಡೆ ಮತ್ತು ಯೋಗೇಂದ್ರ ಯಾದವ್ ಅವರ ನಡುವೆ ಇಪಿಡಬ್ಲ್ಯುನಲ್ಲಿ ಒಂದು ವಾಗ್ವಾದವೂ ನಡೆದಿತ್ತು. ‘ಇಂಗ್ಲಿಷನ್ನು ತೆಗೆಯಬೇಕು, ಹಿಂದಿಯನ್ನು ಸ್ಥಾಪಿಸುವುದಲ್ಲ’ ಎಂಬ ಶೀರ್ಷಿಕೆಯ ಲೋಹಿಯಾರ ಲೇಖನವನ್ನು ಉಲ್ಲೇಖಿಸಿ ಯೋಗೇಂದ್ರ ಯಾದವ್ ಲೋಹಿಯಾ ಹಿಂದಿ ಮೇಲಾಳ್ವಿಕೆಯನ್ನು ಬೆಂಬಲಿಸುತ್ತಿರಲಿಲ್ಲ ಎಂಬುದನ್ನು ಸಮರ್ಥಿಸಿಕೊಂಡಿದ್ದರು. ಆದರೆ ಅದೇ ಲೇಖನದ ಒಳಗಿನ ಸಾಲುಗಳನ್ನು ಸುಧನ್ವ ಉದ್ಧರಿಸಿ, ಹಿಂದಿಯೇತರ ರಾಜ್ಯಗಳಿಗೆ ಭಾಷಿಕ ಸ್ವಾಯತ್ತತೆಯನ್ನು ಖಾತರಿ ಮಾಡುವುದು ಲೋಹಿಯಾರಿಗೆ ಅನಿವಾರ್ಯ ಬೇಸರದ ಸಂಗತಿಯಾಗಿತ್ತು ಎಂದು ಹೇಳಿದ್ದರು. ತೀರಾ ಇತ್ತೀಚೆಗೆ ಹೊಸ ಶಿಕ್ಷಣ ನೀತಿಗೆ ವಿರೋಧ ಬಂದಾಗ ಯೋಗೇಂದ್ರ ಯಾದವ್ ಅವರು, ಶಿಕ್ಷಣ ನೀತಿಯನ್ನು ವಿರೋಧಿಸಲು ಬೇರೆ ಬೇರೆ ಕಾರಣಗಳಿರಬಹುದಾದರೂ, ಕೆಲವರು ಅದರಲ್ಲಿ ಹಿಂದಿ ಹೇರಿಕೆ ಕಾಣುತ್ತಿರುವುದಕ್ಕೆ ಕಾರಣಗಳಿಲ್ಲ ಎಂದು ಹೇಳಿದ್ದರು. ಅದೂ ಸಹಾ ಕೆಲವರ ಸಣ್ಣಮಟ್ಟದ ತಕರಾರಿಗೆ ಕಾರಣವಾಗಿತ್ತು.

ಹಾಗೆ ನೋಡಿದರೆ ಲೋಹಿಯಾ ಅವರು ಪ್ರತಿಪಾದಿಸಿದ ರಾಜಕೀಯ ಆಡಳಿತ ವ್ಯವಸ್ಥೆಯು ಚೌಕಂಬಾ ವ್ಯವಸ್ಥೆ ಆಗಿತ್ತು. ಅಂದರೆ ದೆಹಲಿಯ ಒಕ್ಕೂಟ ಸರ್ಕಾರ, ರಾಜ್ಯ ಸರ್ಕಾರಗಳು, ಜಿಲ್ಲಾ ಮಟ್ಟದ ಪಂಚಾಯಿತಿ ವ್ಯವಸ್ಥೆ ಹಾಗೂ ಗ್ರಾಮ ಪಂಚಾಯಿತಿ ವ್ಯವಸ್ಥೆ. ಈ ನಾಲ್ಕೂ ವ್ಯವಸ್ಥೆಗಳೂ ತಮ್ಮಂತೆ ತಾವೇ ಸಾಪೇಕ್ಷವಾದ ಸಮಾನ ಅಧಿಕಾರವನ್ನು ಹೊಂದಿರಬೇಕೆಂಬುದು ಅವರ ಅನಿಸಿಕೆಯಾಗಿತ್ತು. ಹೆಚ್ಚು ಕಡಿಮೆ ಇದೇ ರೀತಿಯ ಅನಿಸಿಕೆಯನ್ನು ಹೊಂದಿದ್ದ ಜಯಪ್ರಕಾಶ ನಾರಾಯಣರು ಸಣ್ಣ ಸಣ್ಣ ರಾಜ್ಯಗಳಿರಬೇಕು ಮತ್ತು ಸಣ್ಣ ರಾಜ್ಯಗಳಿಗೆ ಹೆಚ್ಚಿನ ಅಧಿಕಾರವನ್ನೂ ಕೊಡಬೇಕು ಎಂದು ಹೇಳಿದ್ದರು. ಆದರೆ ಅದನ್ನು ವಿವರಿಸುವ ಅವರ Case for small states ಲೇಖನದಲ್ಲೇ, ಭಾಷಾವಾದಕ್ಕೆ ಅವಕಾಶ ಕೊಡಬಾರದು ಎಂದು ಖಚಿತವಾಗಿ ಹೇಳಿದ್ದರು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಭಾಷೆಯ ಆಧಾರದಲ್ಲಲ್ಲದೇ, ಆಡಳಿತಾತ್ಮಕ ಅನುಕೂಲಕ್ಕಾಗಿ ರಾಜ್ಯಗಳ ವಿಭಜನೆ ಆಗಬೇಕು ಎಂಬುದು ಅವರ ವಾದವಿದ್ದಂತೆ ತೋರುತ್ತದೆ.

PC : Prajavani

ಸಂವಹನದ ಸಂಗತಿ ಮಾತ್ರವಲ್ಲದೇ, ಭಾಷಿಕ ನೆಲೆಯಲ್ಲಿ ಪ್ರಜಾತಂತ್ರ ಹಾಗೂ ಯಜಮಾನಿಕೆ ಏರ್ಪಡಲು ಸಾಧ್ಯ ಎಂದು ಇವರಿಗೆಲ್ಲ ಏಕೆ ಅನಿಸುವುದಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡುತ್ತದೆ. ಹಿಂದಿಯ ಜಾಗದಲ್ಲಿ ಬಂಗಾಳಿಯೋ, ತಮಿಳೋ ಇದ್ದರೂ ಪರವಾಗಿಲ್ಲ – ಈ ದೇಶದಲ್ಲಿ ಎಲ್ಲರದ್ದೂ ಆದ ಒಂದು ಭಾಷೆ ಇರಲೇಬೇಕು, ಇಂಗ್ಲಿಷ್ ತೊಲಗಬೇಕು ಎಂಬುದು ಲೋಹಿಯಾರ ಪ್ರತಿಪಾದನೆಯಾಗಿತ್ತು. ನಮ್ಮ ಮಟ್ಟಿಗೆ ಇಂಗ್ಲಿಷ್ ಹಾಗೂ ಹಿಂದಿ ಎರಡೂ ಒಂದೇ, ಅಥವಾ ಇಂದಿನ ಸ್ಥಿತಿಯಲ್ಲಿ ಹಿಂದಿಗಿಂತ ಇಂಗ್ಲಿಷೇ ಒಳ್ಳೆಯದು ಎಂದು ಯಾರಾದರೂ ಹೇಳುವುದಾದಲ್ಲಿ ಆ ಅವಕಾಶವೂ ಇರಬೇಕು ಎಂದು ಹಿಂದಿ ಮೂಲದ ‘ಸಮಾನ ಮನಸ್ಕ’ರಿಗೆ ಅನಿಸಿದಂತಿಲ್ಲ.

ಆದರೆ ಈಚೀಚೆಗೆ ದೆಹಲಿ, ಮುಂಬಯಿ ಅಥವಾ ಇತರೆಡೆಗಳಲ್ಲಿ ನಡೆಯುವ ಅಖಿಲ ಭಾರತ ಮಟ್ಟದ ಸಭೆಗಳಲ್ಲಿ ಹಿಂದಿ ಭಾಷಿಕರೇ ಹೆಚ್ಚಾಗಿದ್ದಾಗ ‘ಈ ಸಭೆಯಲ್ಲಿರುವ ಎಲ್ಲರಿಗೂ – ಹಿಂದಿಯೇತರ ಅಥವಾ ಮುಖ್ಯವಾಗಿ ದಕ್ಷಿಣ ಭಾರತದವರಿಗೆ – ಹಿಂದಿ ಬಂದೇ ಬರುತ್ತದೆ ಅಥವಾ ಬರಬೇಕು’ ಎಂಬ ಭಾವನೆಯಿಂದ ವರ್ತಿಸುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. ಸಭೆಯ ಆರಂಭದಲ್ಲೇ ಯಾರ್ಯಾರಿಗೆ ಹಿಂದಿ ಬರುವುದಿಲ್ಲ ಎಂಬುದನ್ನು ಕೇಳಿಕೊಂಡು ತರ್ಜುಮೆಯ ವ್ಯವಸ್ಥೆ ಆಗುತ್ತದೆ.

ಇವುಗಳಲ್ಲಿ ಹೆಚ್ಚಿನವು ಭಾಷಿಕ ಯಜಮಾನಿಕೆಗೆ ಸಂಬಂಧಿಸಿದ ಸಂಗತಿಗಳಾಗಿದ್ದರೆ, ಅದರಾಚೆಗೆ ಬೇರೆಯ ಆಯಾಮಗಳೂ ಇವೆ. ಗ್ರಾಮ ಸ್ವರಾಜ್ ಥರದ ಮತ್ತು ಪಂಚಾಯಿತಿಗೆ ಹೆಚ್ಚಿನ ಅಧಿಕಾರ ಕೊಡುವ ವಿಚಾರಗಳು ಅಂಬೇಡ್ಕರರಿಗೆ ಒಪ್ಪಿಗೆಯಾಗದಿರಲು ಕಾರಣಗಳಿದ್ದವು. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರೂ, ಪ್ರತೀ ಊರಿನಲ್ಲೂ ‘ಅಲ್ಪಸಂಖ್ಯಾತ’ರಾಗಿರುವ ದಲಿತ ಹಾಗೂ ಇತರ ಶೋಷಿತ ಸಮುದಾಯಗಳು ಆಯಾ ಗ್ರಾಮಗಳಲ್ಲಿ ದಬ್ಬಾಳಿಕೆಗಳಿಗೆ ಗುರಿಯಾಗುತ್ತಿರುತ್ತಾರೆ. ಹಳ್ಳಿಗಳಲ್ಲಿ ಸೃಷ್ಟಿಯಾಗುವ ಹೊಸ ಯಜಮಾನರುಗಳು ಸಹಜವಾಗಿ ಬಲಾಢ್ಯ ಸಮುದಾಯಗಳಿಗೆ ಸೇರಿದವರಾಗಿದ್ದು, ಹಳೆಯ ಫ್ಯೂಡಲ್ ರಚನೆ ಪುನರುತ್ಪತ್ತಿಯಾಗಲು ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಪ್ರಜಾತಾಂತ್ರಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಕೇಂದ್ರೀಕೃತ ಆಳ್ವಿಕೆಯಲ್ಲಿ ಹೆಚ್ಚಿನ ಹಕ್ಕುಗಳ ಸಾಧ್ಯತೆ ಅವರಿಗೆ ಕಂಡಿತ್ತು.

ಇನ್ನೊಂದು ಆಯಾಮವೆಂದರೆ ‘ಅಭಿವೃದ್ಧಿ ಹೊಂದಿದ’ ರಾಜ್ಯಗಳಿಂದ, ‘ಹಿಂದುಳಿದ’ ರಾಜ್ಯಗಳಿಗೆ ಸಂಪನ್ಮೂಲಗಳನ್ನು ಹರಿಸುವ ವಿಚಾರ. ಕರ್ನಾಟಕದಲ್ಲೇ ಬೆಂಗಳೂರು ಕಾಲುಭಾಗದಷ್ಟು ಜಿಡಿಪಿ ತಂದುಕೊಡುತ್ತದೆಂದು ಉಳಿದ ಭಾಗಗಳನ್ನು ನಿರ್ಲಕ್ಷ್ಯ ಮಾಡದಂತಿರಬೇಕೆಂದರೆ ‘ಹಿಂದುಳಿದ’ ಭಾಗಗಳಿಗೆ ಸಂಪನ್ಮೂಲ ಹರಿಸುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದಲ್ಲವೇ? ಅದೇ ರೀತಿ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಒಟ್ಟಿಗೇ ಬಾಳುತ್ತಿರುವ ರಾಜ್ಯಗಳು ಪರಸ್ಪರ ಕಷ್ಟ ಸುಖ ಹಂಚಿಕೊಳ್ಳಬೇಕಲ್ಲವೇ? ರವೀಶ್ ಕುಮಾರ್ ಥರದವರಿಗೆ ‘ಹಿಂದಿವಾಲಾ’ಗಳ ಆಡಳಿತದಲ್ಲಿ ಹಿಂದಿ ಪ್ರದೇಶಗಳು ಮತ್ತಷ್ಟು ಬಡವಾಗುತ್ತಿರುವ ಕುರಿತು ಆತಂಕವಿರುವಾಗ ನಾವಿದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಉತ್ತರ ಕರ್ನಾಟಕ ಪ್ರದೇಶದ ಮುಖ್ಯಮಂತ್ರಿಗಳು ದೀರ್ಘಕಾಲ ಈ ರಾಜ್ಯ ಆಳಿಯೂ ಆ ಭಾಗಗಳು ಹಿಂದುಳಿದಿರಲಿಲ್ಲವೇ, ಹಾಗೆ? ಅಧಿಕಾರ ಕಳೆದುಕೊಂಡ ನಂತರದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಮತ ಚಲಾಯಿಸಲಾಗಿರಲಿಲ್ಲ. ಏಕೆಂದರೆ ಅನಾರೋಗ್ಯದಲ್ಲಿದ್ದ ಅವರು ತಮ್ಮೂರಿನ ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ಕಾರಿನಲ್ಲಿ ಹೋಗಲೂ ಸಾಧ್ಯವಾಗದ ದುಸ್ಥಿತಿಯಲ್ಲಿ ಆ ಊರಿನ ರಸ್ತೆಯಿತ್ತು!

ನಮ್ಮೊಡನೆ ಕೆಲಸ ಮಾಡುವ ಉತ್ತರ ಭಾರತ ಮೂಲದ ಗೆಳತಿಯೊಬ್ಬರು ಒಮ್ಮೆ ತನ್ನದೊಂದು ಆತಂಕವನ್ನು ವ್ಯಕ್ತಪಡಿಸಿದರು. ಉತ್ತರ ಪ್ರದೇಶದಲ್ಲಿನ ಕೆಟ್ಟ ಪರಿಸ್ಥಿತಿಯ ಕುರಿತು ಅವರು ಲೇಖನವೊಂದನ್ನು ಬರೆಯಬೇಕಿತ್ತು. ಅಲ್ಲಿನ ವಸ್ತುಸ್ಥಿತಿಯ ಕುರಿತು ತಾನು ಬರೆದರೆ ಉತ್ತರ ಪ್ರದೇಶವೆಂಬುದು ಅತ್ಯಂತ ದುಸ್ಥಿತಿಯಲ್ಲಿರುವ, ಕೊಲೆ ಸುಲಿಗೆ ದೌರ್ಜನ್ಯಗಳನ್ನು ಮಾಡುವ ಜನರನ್ನು ಹೊಂದಿರುವ ಮಧ್ಯಯುಗದ ರಾಜ್ಯವೆಂಬ ದಕ್ಷಿಣದವರ ‘ಸ್ಟೀರಿಯೋಟೈಪ್’ ನೋಟವನ್ನು ಬಲಪಡಿಸಿದಂತಾಗುವುದಿಲ್ಲವೇ ಎಂಬುದು ಅವರ ಆತಂಕವಾಗಿತ್ತು! ಅಂದರೆ ದಕ್ಷಿಣದವರು ತಮ್ಮ ‘ಅಭಿವೃದ್ಧಿ’ ಹಾಗೂ ಹಿಂದಿ ವಿರೋಧದ ಕಾರಣಕ್ಕೆ ಪಡೆದುಕೊಂಡಿರುವ ‘ನೋಟ’ದಿಂದ ದುಸ್ಥಿತಿಯಲ್ಲಿರುವ ರಾಜ್ಯಗಳ ಜನರು ಎದುರಿಸಬೇಕಾದ ದೃಷ್ಟಿಕೋನದ ಸಮಸ್ಯೆಯ ಆಯಾಮ ಅಲ್ಲಿ ಕಾಣುತ್ತಿತ್ತು.

ಇರಲಿ, ಮೂಲ ವಿಚಾರಕ್ಕೆ ಬರುವುದಾದರೆ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಮೇಲಿನ ಎಲ್ಲಾ ಅಂಶಗಳು ನಮಗೆ ಕೆಲವು ಸಂಗತಿಗಳನ್ನು ಮುಂದಿಡುತ್ತಿವೆ. ಹಿಂದಿ ಮೂಲದ ಹಲವು ಚಿಂತಕರು/ಪ್ರಜಾತಂತ್ರವಾದಿಗಳಿಗೂ ಸವಾಲುಗಳಿವೆ. ತಮ್ಮ ಭಾಗದ ಜನರನ್ನೂ ಹಿಂಡುತ್ತಿರುವ ಕೇಂದ್ರೀಕರಣ ಪರವಾದ ಶಕ್ತಿಗಳನ್ನೂ ಎದುರಿಸುತ್ತಾ, ಇತರ ಭಾಷಿಕ ಜನರು ಹಾಗೂ ಪ್ರದೇಶಗಳ ಸ್ವಾಯತ್ತತೆಯ ಪರವಾಗಿ ದನಿಯೆತ್ತುವಾಗ ನೋಟ, ನುಡಿ, ಘೋಷಣೆಗಳನ್ನು ರೂಪಿಸಿಕೊಳ್ಳುವುದು ಸುಲಭವೇನಲ್ಲ. ಹಾಗೆಯೇ ‘ಹಿಂದಿ ಬೆಲ್ಟ್’ ಒಳಗೇ ಇರುವ ಭಿನ್ನತೆಗಳನ್ನು ನುಂಗಿ ‘ಐಕ್ಯತೆ’ಯ ಮಂತ್ರವನ್ನು ಲೋಹಿಯಾ ಒಳಗೊಂಡು ಹಲವರು ಜಪಿಸಿದ್ದಾರೆ. ಹೀಗಿರುವಾಗ ಅದರ ಹೊರಗಿರುವ ರಾಜ್ಯಗಳಲ್ಲಿನ ವಿವಿಧ ಭಾಷಿಕರ ಅನನ್ಯತೆಯನ್ನು ಒಪ್ಪಿಕೊಳ್ಳುವಾಗ ಆಳಕ್ಕಿಳಿಯುವುದು ಸಹಜವಾಗಿ ಆಗದೇ ಹೋಗಬಹುದು. ಹಾಗಾಗಿ ಪ್ರಜ್ಞಾಪೂರ್ವಕ ಪ್ರಯತ್ನ ಆ ಕಡೆಯಿಂದಲೂ ನಡೆಯಬೇಕು. ಹಿಂದಿ ಭಾಷಿಕ ಪ್ರದೇಶ ಹಾಗೂ ಜನರ ಜೊತೆಗೆ ಸೌಹಾರ್ದಭಾವ ಬೆಸೆಯುವ ಭಾಷೆ, ರೀತಿ, ನೀತಿಗಳನ್ನು ಈ ಕಡೆಯಿಂದಲೂ ರೂಢಿಸಿಕೊಳ್ಳಬೇಕೆನಿಸುತ್ತದೆ. ಆಗ ಮಾತ್ರ ಒಕ್ಕೂಟ ತತ್ವವು ಗಟ್ಟಿಯಾಗಿ ರೂಪುಗೊಳ್ಳುತ್ತದೆ.


ಇದನ್ನೂ ಓದಿ: ದ್ರಾವಿಡ ನಾಡಿನ ಹಿಂದಿ ಹೇರಿಕೆ ವಿರೋಧಿ ಚಳುವಳಿಯ ಇತಿಹಾಸ ಮತ್ತು ಪ್ರಸ್ತುತ ರಾಜಕಾರಣವೆಂಬ ನಾಟಕದ ಸುತ್ತ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...