ಇನ್ನೆರಡು ಮೂರು ತಿಂಗಳಲ್ಲಿ ನಿತೀಶ್ ಕುಮಾರ್‌ ಸರ್ಕಾರ ಬೀಳಲಿದೆ: ತೇಜಶ್ವಿ ಯಾದವ್
PC: Orissa post

ನವೆಂಬರ್ 11ರ ಮಧ್ಯಾಹ್ನದ ಹೊತ್ತಿಗೆ ಚುನಾವಣಾ ಆಯೋಗವು ಮತ ಎಣಿಕೆ ಕುರಿತ ಮಾಧ್ಯಮಗೋಷ್ಟಿ ನಡೆಸುವುದರೊಂದಿಗೆ, 2020ರ ಬಿಹಾರ ವಿಧಾನಸಭಾ ಚುನಾವಣೆಗಳ ಸುತ್ತಲೂ ಇದ್ದ ಅನಿಶ್ಚಿತತೆ ತಿಳಿಯಾಗಿದೆ. ಅದರ ಹಿಂದಿನ ದಿನದ ಎಣಿಕೆಯಲ್ಲಿ ತಡ ರಾತ್ರಿಯವರೆಗೂ ಆಳುವ ಎನ್‌ಡಿಎ ಮತ್ತು ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್‌ನ ಭವಿಷ್ಯವು ಹಾವು-ಏಣಿ ಆಟದಂತೆ ಏರುಪೇರಾಗುತ್ತಿದ್ದು, ಪ್ರತಿಯೊಂದು ಸಲವೂ ಒಂದೊಂದು ರೀತಿಯ ವಿಶ್ಲೇಷಣೆಗಳು ಹೊರಬೀಳುತ್ತಿದ್ದವು.

ಕೊನೆಗೂ ಅಂತಿಮ ಬಲಾಬಲ ಹೀಗಿದೆ: ಎನ್‌ಡಿಎಯು 125 ಸ್ಥಾನಗಳನ್ನು, ಅಂದರೆ- 243 ಸದಸ್ಯ ಸಂಖ್ಯೆಯ ಸದನದಲ್ಲಿ ಸರಳ ಬಹುಮತಕ್ಕೆ ಅಗತ್ಯವಿರುವ 122ಕ್ಕಿಂತ ಕೇವಲ ಮೂರು ಸ್ಥಾನಗಳನ್ನು ಹೆಚ್ಚು ಗಳಿಸಿದೆ. ಇದರಲ್ಲಿ ಬಿಜೆಪಿ 74, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು 43, ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಜ್ಹಿ ಅವರ ಹಿಂದೂಸ್ತಾನ್ ಆವಾಮಿ ಮೋರ್ಛಾ 4, ಮಲ್ಲಾ ಸಮುದಾಯದ ನಾಯಕ ಮುಖೇಶ್ ಸಾಹ್ನಿ ಅವರ ವಿಕಾಸ್‌ಶೀಲ್ ಇನ್ಸಾನ್ ಪಾರ್ಟಿ 4 ಸ್ಥಾನಗಳನ್ನು ಗಳಿಸಿವೆ.

ಮಹಾಘಟಬಂಧನ್ 110 ಸ್ಥಾನಗಳನ್ನು ಗಳಿಸಿದ್ದು, ಆರ್‌ಜೆಡಿ 75 ಸ್ಥಾನಗಳನ್ನು ಗಳಿಸಿ , ಅತ್ಯಂತ ದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಸಿಪಿಐ (ಎಂಎಲ್) 12, ಸಿಪಿಐ 2 ಮತ್ತು ಸಿಪಿಐ(ಎಂ) 2 ಮತ್ತು ಕಾಂಗ್ರೆಸ್ 19 ಸ್ಥಾನಗಳನ್ನು ಗಳಿಸಿವೆ. ಉಳಿದಂತೆ ಒವೈಸಿಯ ಎಐಎಂಐಎಂ 5, ಎಲ್‌ಜೆಪಿ, ಬಿಎಸ್‌ಪಿ ಮತ್ತು ಇತರರಿಗೆ ತಲಾ 1 ಸ್ಥಾನ ಸಿಕ್ಕಿದೆ.

ಯಾವುದೇ “ಬದಲಿ ಆಯ್ಕೆ” ಇಲ್ಲ ಎಂಬ ನೆಲೆಯಲ್ಲಿ ಎನ್‌ಡಿಎಗೆ ಜಯವು ಸುಲಭದ ತುತ್ತು ಎಂದು ಆರಂಭದಲ್ಲಿ; ಮತ್ತು ನಂತರದಲ್ಲಿ ಮಹಾಘಟಬಂಧನ್‌ಗೆ ನಿರ್ಣಾಯಕ ಗೆಲುವು ಖಂಡಿತ ಎಂದು ಎಕ್ಸಿಟ್ ಪೋಲ್‌ಗಳು ಹೇಳಿದ್ದ- ಅತ್ಯಂತ ನಿಕಟ ಹೋರಾಟ ಕಂಡ ಈ ಚುನಾವಣೆಯಲ್ಲಿ ಪರಿಗಣಿಸಬೇಕಾದ ಮುಖ್ಯಾಂಶಗಳು ಯಾವುವು?

ಅತ್ಯಂತ ನಿಕಟ ಚುನಾವಣೆ

“ಹಿಂದೂಸ್ತಾನ್ ಟೈಮ್” ಮಾಡಿರುವ ವಿಶ್ಲೇಷಣೆಯೊಂದರ ಪ್ರಕಾರ ಈ ಬಾರಿ 2,000ಕ್ಕಿಂತಲೂ ಕಡಿಮೆ ಮತಗಳ ಗೆಲುವಿನ ಅಂತರವಿರುವ 23 ಕ್ಷೇತ್ರಗಳಿವೆ. 2015ರ ಚುನಾವಣೆಯಲ್ಲಿ ಇಂತಹಾ ಕ್ಷೇತ್ರಗಳ ಸಂಖ್ಯೆ ಕೇವಲ ಒಂಭತ್ತು ಆಗಿತ್ತು. ಮತಗಳ ಶೇಕಡಾವಾರು ಲೆಕ್ಕಾಚಾರದಲ್ಲೂ ಎರಡು ಮೈತ್ರಿಕೂಟಗಳ ನಡುವಿನ ವ್ಯತ್ಯಾಸ ಕೇವಲ 0.02%ದಷ್ಟು ಅಲ್ಪ. ಇದೇ ಲೆಕ್ಕಾಚಾರದಲ್ಲಿ ಮಹಾಘಟಬಂಧನ್ ಎನ್‌ಡಿಎಗಿಂತ ಸ್ವಲ್ಪ ಹೆಚ್ಚು ಮತಗಳನ್ನೇ ಗಳಿಸಿದೆ. ಕೊನೆಯದಾಗಿ ಈ ಬಾರಿ ಗೆದ್ದ ಮತ್ತು ಸೋತ ಮೈತ್ರಿಕೂಟಗಳ ನಡುವಿನ ಸ್ಥಾನಗಳ ವ್ಯತ್ಯಾಸ ಕೇವಲ 15 ಮಾತ್ರ. ಅತ್ಯಲ್ಪ ಮತಗಳ ಅಂತರವು ವಿಜಯವನ್ನು ನಿರ್ಧರಿಸಿದ ಇದು ನಿಜವಾಗಿಯೂ ಅತ್ಯಂತ ನಿಕಟ ಚುನಾವಣೆಯಾಗಿದ್ದು, ಚುನಾವಣಾ ವೀಕ್ಷಕರಿಗೆ ಏನನ್ನೂ ಖಚಿತವಾಗಿ ಹೇಳಲು ಕಷ್ಟವಾಗಿತ್ತು.

ಆದರೆ, ಚುನಾವಣಾ ಪ್ರಚಾರದ ಉದ್ದಕ್ಕೂ ಮತದಾರರ ಭಾವನೆಗಳು ಬದಲಾಗುತ್ತಲೇ ಇದ್ದುದರಿಂದಲೂ ಇದು ಅನಿವಾರ್ಯವಾಗಿತ್ತು. ಪ್ರಚಾರದ ವೇಳೆಯಲ್ಲಿ ಇಂತಹ ಏರುಪೇರುಗಳಾಗುವ ಸ್ಥಿತಿಯಲ್ಲಿ ಮತ್ತು ಒಂದೇ ಅಲೆಯ ಚುನಾವಣೆಯಾಗದೆ, ಹಂತಹಂತಗಳಲ್ಲಿ ಚುನಾವಣೆ ನಡೆದಾಗ, ಯಾವುದೇ ಪಕ್ಷ ಅಥವಾ ಮೈತ್ರಿಕೂಟವು ಮುನ್ನಡೆಯೊಂದಿಗೆ ಆರಂಭಿಸಿ ಅದನ್ನೇ ಮುಂದುವರಿಸುವುದು ಅಸಾಧ್ಯ.

ಆರ್‌ಜೆಡಿಗೆ “ಮುಸ್ಲಿಂ-ಯಾದವ ಸೀಮಿತತೆಯ ಶಾಪ” ವಿಮೋಚನೆ

ಆರ್‌ಜೆಡಿಯು ಬಿಹಾರದಲ್ಲಿ ಯಾದವರು ಮತ್ತು ಮುಸ್ಲಿಮರ ಪಕ್ಷ ಎಂದೇ ಹೇಳಲಾಗುತ್ತಿತ್ತು. ಕಳೆದ ಹಲವಾರು ಚುನಾವಣೆಗಳಲ್ಲಿ ಅದು ಬಿಹಾರದ ಮತದಾರರ ಇತರ ವಿಭಾಗಗಳ ಮೇಲೆ ಅಂದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮತಬ್ಯಾಂಕ್ ಎಂದು ಹೇಳಲಾಗುವ ಇಬಿಸಿ (ತೀವ್ರ ಹಿಂದುಳಿದ ವರ್ಗ) ಮತ್ತು ಮಹಾದಲಿತರ ಮೇಲೆ ಅಥವಾ ಬಿಜೆಪಿಯ ಮತದಾರರೆಂದು ಪರಿಗಣಿಸಲಾಗುವ ಮೇಲ್ಜಾತಿ ಮತ್ತು ಬನಿಯಾಗಳ ಮೇಲೆ ಪ್ರಭಾವ ಬೀರಲು ವಿಫಲವಾಗಿರುವುದನ್ನು ಕಾಣಬಹುದು. ಬಿಹಾರದಲ್ಲಿ ಎಂವೈ (ಮುಸ್ಲಿಂ-ಯಾದವ) ಎಂದು ಕರೆಯಲಾಗುವ ಮತದಾರರ ಸಂಖ್ಯೆ ಮೂರನೇ ಒಂದರಷ್ಟು ಇದ್ದು, ಅವರಲ್ಲಿ ಬಹುಸಂಖ್ಯಾತ ಮತದಾರರ ಬೆಂಬಲವನ್ನು ಹೊಂದಿರುವುದರಿಂದ ಆರ್‌ಜೆಡಿಯ ಮತದಾರರ ಶೇಕಡಾವಾರು ಯಾವತ್ತೂ 18%ದ ಸುತ್ತಮುತ್ತಲೇ ಸ್ಥಿರವಾಗಿದೆ. ಇದು ಒಂದು ಬಲವಾಗಿರುವಂತೆ ದೌರ್ಬಲ್ಯವೂ ಹೌದು. ಯಾವುದೇ ಸಂದರ್ಭದಲ್ಲಿ ಅದು 18 ಶೇಕಡಾ ಮತಗಳನ್ನು ಗಳಿಸಿಯೇ ಗಳಿಸುತ್ತಿತ್ತು ಮತ್ತು ಒಂದು ಗಣನೀಯ ಶಕ್ತಿಯಾಗಿ ಉಳಿಯುತ್ತಿತ್ತಾದರೂ, ಅದನ್ನು ಹೆಚ್ಚಿಸಲು ಮತ್ತು ಸ್ವಂತವಾಗಿ ಗೆಲ್ಲುವ ಸಾಮರ್ಥ್ಯವಿರುವ ಪಕ್ಷವಾಗಲು ದಯನೀಯವಾಗಿ ವಿಫಲವಾಗಿತ್ತು. ಇದುವೇ ಆರ್‌ಜೆಡಿ ವರ್ಷಗಳಿಂದ ಅನುಭವಿಸುತ್ತಿರುವ “ಎಂವೈ ಪಾತಳಿಯ ಶಾಪ”. ಈ ಬಾರಿಯ ಮತದಾರರ ಶೇಕಡಾವಾರು ಯಾವುದೇ ಸೂಚನೆ ನೀಡಿದೆ ಎಂದಾದಲ್ಲಿ- ಅದು ಆರ್‌ಜೆಡಿಯು ಖಂಡಿತವಾಗಿಯೂ ಈ ಶಾಪದಿಂದ ವಿಮೋಚನೆ ಹೊಂದಿದೆ ಎಂಬುದು. ಈ ಬಾರಿಯ ಚುನಾವಣಾ ಆಯೋಗದ ದತ್ತಾಂಶಗಳ ಪ್ರಕಾರ ಅದು 23.11% ಮತಗಳನ್ನು ಗಳಿಸಿದೆ. ಈ ಸುಮಾರು 5% ಮತಗಳ ಹೆಚ್ಚಳ, ಇಬಿಸಿ ಮತ್ತು ಮಹಾದಲಿತ ಮತದಾರರ ಒಂದು ವಿಭಾಗವು ಆರ್‌ಜೆಡಿ ಪಕ್ಷವನ್ನು ಬೆಂಬಲಿಸದೇ ಇದ್ದರೆ ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ.

ಬಿಹಾರ
Photo Courtesy: OneIndia

ನಿತೀಶ್ ಕುಮಾರ್ ದುರಂತ ಪ್ರಕರಣ

ನಿತೀಶ್ ಕುಮಾರ್ ಮತ್ತವರ ಜೆಡಿಯು ಮೈತ್ರಿಕೂಟವೊಂದರಲ್ಲಿ ಈ ಸಲ ತನ್ನ ಅತ್ಯಂತ ಕಳಪೆ ಸಾಧನೆ ತೋರಿದಂತಾಗಿದೆ. ಪಕ್ಷವು 15.39% ಮತಗಳನ್ನು ಪಡೆದು ಕೇವಲ 43 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. 2015ರಲ್ಲಿ ಅದು 16.83% ಮತಗಳನ್ನು ಪಡೆದು 72 ಸ್ಥಾನಗಳನ್ನು ಗೆದ್ದಿದ್ದರೆ, 2010ರಲ್ಲಿ ಅದು 22% ಮತಗಳನ್ನು ಪಡೆದು 115 ಸ್ಥಾನಗಳನ್ನು ಗಳಿಸಿತ್ತು. ಈ ಭಾರೀ ಇಳಿಕೆಯು ಮೈತ್ರಿಕೂಟವನ್ನು ಉಳಿಸುವಲ್ಲಿ ಅಥವಾ ಅಳಿಸುವಲ್ಲಿ ನಿರ್ಣಾಯಕವೆನಿಸಿದ ಇಬಿಸಿ-ಮಹಾದಲಿತ ಮತದಾರರ ಮೇಲೆ ಅವರ ನಿಯಂತ್ರಣ ಮುಗಿದುಹೋಗಿದೆ ಎಂದು ಸೂಚಿಸುತ್ತದೆಯೆ? ಇನ್ನೂ ಇಲ್ಲ ಎಂದು ನಾನು ಹೇಳುವೆ. ಇಬಿಸಿ-ಮಹಾದಲಿತರ ಒಂದು ವಿಭಾಗ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ಗೆ ಬೆಂಬಲ ನೀಡಿರುವುದು ಸೂಚಿಸುವಂತೆ, ಇಬಿಸಿ-ಮಹಾದಲಿತ ಮತಗಳ ಮೇಲೆ ನಿತೀಶ್ ಹಿಡಿತ ಖಂಡಿತವಾಗಿಯೂ ಸಡಿಲವಾಗಿದೆ. ಆದರೆ, ಇನ್ನೂ ಕೊನೆಗೊಂಡಿಲ್ಲ.

ಬಿಹಾರ
Patna: Bihar Chief Minister Nitish Kumar at Bihar Assembly, in Patna on July 12, 2019. (Photo: IANS)

ಇದಕ್ಕೆ ಯಾವುದೇ ಸಾಕ್ಷ್ಯಾಧಾರ ಇದ್ದರೆ, ಅದನ್ನು ಬಿಜೆಪಿ ಈ ಬಾರಿ 74 ಸ್ಥಾನಗಳನ್ನು ಗಳಿಸಿರುವುದರಲ್ಲಿ ಕಾಣಬಹುದು. ಮೂಲತಃ ಬಿಹಾರದಲ್ಲಿ ಮೇಲ್ಜಾತಿ ಮತ್ತು ಬನಿಯಾಗಳ ಪಕ್ಷವಾದ ಬಿಜೆಪಿಗೆ ನಿತೀಶ್ ಕುಮಾರ್ ಅವರ ಮತಗಳು ತನ್ನ ಅಭ್ಯರ್ಥಿಗಳಿಗೆ ವರ್ಗಾವಣೆ ಆಗದೇ ಇದ್ದರೆ ಈ ಫಲಿತಾಂಶವನ್ನು ಪಡೆಯುವುದು ಖಂಡಿತವಾಗಿಯೂ ಸಾಧ್ಯವಿರಲಿಲ್ಲ. ನಿತೀಶ್ ಕುಮಾರ್ ಅವರು 2015ರಲ್ಲಿ ಆರ್‌ಜೆಡಿ ಮತ್ತು ಈಗ ಬಿಜೆಪಿ ಸೇರಿದಂತೆ ಯಾವಾಗಲೂ ತನ್ನ ಪಾಲುದಾರ ಪಕ್ಷವು ಹೆಚ್ಚಿನ ಯಶಸ್ಸು ಕಾಣಲು ಸಹಕರಿಸಿದ್ದಾರೆ. (2015ರಲ್ಲಿ ಆರ್‌ಜೆಡಿಯು ಜೆಡಿಯು ಜೊತೆ ಮೈತ್ರಿಯಿಂದ 80 ಸ್ಥಾನಗಳನ್ನು ಗಳಿಸಿತ್ತು.) ಈ ಬಾರಿಯ ಅವರ ನಿರಾಶಾದಾಯಕ ಸಾಧನೆಗೆ ನೀಡಬಹುದಾದ ವಿವರಣೆ ಎಂದರೆ, ನಿತೀಶ್ ಕುಮಾರ್ ಮತಗಳು ಬಿಜೆಪಿಗೆ ವರ್ಗಾವಣೆಗೊಂಡಂತೆ, ಬಿಜೆಪಿಯ ಮತಗಳು ಜೆಡಿಯುಗೆ ವರ್ಗಾವಣೆಗೊಂಡಿಲ್ಲ. ಎಲ್‌ಜೆಪಿಯು ಜೆಡಿಯು ಸ್ಪರ್ಧಿಸಿದ್ದ ಸ್ಥಾನಗಳಲ್ಲಿ ವಿಶೇಷವಾಗಿ ಮೇಲ್ಜಾತಿಯ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಅದು 5.6% ಮತಗಳನ್ನು ಪಡೆದಿರುವುದು ಜೆಡಿಯು ಅಭ್ಯರ್ಥಿಗಳು ಇದ್ದಲ್ಲೆಲ್ಲಾ ಮೇಲ್ಜಾತಿಯ ಮತಗಳು ವಿಭಜನೆಗೊಂಡು ನಿತೀಶ್ ಕುಮಾರ್ ಅವರ ಬಲವನ್ನು ಕುಂದಿಸಿತು ಎಂಬುದನ್ನು ತೋರಿಸುತ್ತದೆ.

ಇದರ ಅರ್ಥವೆಂದರೆ, ನಿತೀಶ್ ಕುಮಾರ್ ಮೈತ್ರಿಕೂಟಕ್ಕೆ ತಾನು ಪಡೆದುದಕ್ಕಿಂತ ಕೊಟ್ಟಿರುವುದೇ ಹೆಚ್ಚು. ಅವರ ಕಳಪೆ ಸಾಧನೆಯ ಶ್ರೇಯಸ್ಸು ಅವರ ಮಿತ್ರ ಬಿಜೆಪಿಯ ಹೊರತಾಗಿ ಬೇರಾರಿಗೂ ಹೋಗುವುದಿಲ್ಲ. ಬಿಜೆಪಿಯು ಎಲ್ಲಾ ಸಂಪನ್ಮೂಲ ಸಾಧ್ಯತೆಗಳಿದ್ದರೂ, ಎಲ್‌ಜೆಪಿಯನ್ನು ನಿಯಂತ್ರಿಸಲು ವಿಫಲವಾಯಿತು ಅಥವಾ ಬಹುಶಃ ನಿತೀಶ್ ಅವರನ್ನು ತೊಲಗಿಸಲು ತಾನು ಎಲ್‌ಜೆಪಿಯೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡಿರುವ ಭಾವನೆಯನ್ನು ದೂರಮಾಡಲು ಬೇಕೆಂದೇ ಪ್ರಯತ್ನಿಸಲಿಲ್ಲ.

ಇದನ್ನೂ ಓದಿ: ಬಿಹಾರ: ಈ ಗೆಲುವು ಮೋದಿಯವರದ್ದು; ನಿತೀಶ್‌ಗೆ ಒಳ ಏಟು ನೀಡಿದ ಚಿರಾಗ್ ಪಾಸ್ವಾನ್?


“ಉತ್ತರಾಧಿಕಾರಿ”ಯ ಆಗಮನ

ಈ ಇನ್ನೊಂದು ದೊಡ್ಡ ಅಂಶವೆಂದರೆ, ಚುನಾವಣೆಯ ಪ್ರಚಾರದುದ್ದಕ್ಕೂ ತೇಜಸ್ವಿ ತಂದ ತಿರುವುಗಳು ನಿರ್ಣಾಯಕವಾಗಿರುವುದರಲ್ಲಿ ಸಂಶಯವಿಲ್ಲ. ಅವರು ಈ ಚುನಾವಣೆಯನ್ನು ಎನ್‌ಡಿಎಗೆ ಸುಲಭದ ಸಾಧ್ಯತೆ ಎನ್ನುತ್ತಿದ್ದನ್ನು, ಕ್ಷೇತ್ರದಿಂದ ಕ್ಷೇತ್ರಕ್ಕೆ ಬಿರುಸಿನ ಸ್ಪರ್ಧೆಯನ್ನಾಗಿ ಬದಲಿಸಿದರು. ತನ್ನ ತಂದೆಯ ಒರಟು ಮತ್ತು ತಿರುಗೇಟಿನ ಶೈಲಿಗೆ ವ್ಯತಿರಿಕ್ತವಾಗಿ ಅವರು ಉದಾರವಾದಿ ಇಮೇಜನ್ನು ತನ್ನದಾಗಿಸಿಕೊಂಡು, ಯಾವುದೇ ಜನವರ್ಗಕ್ಕೆ ಅಸಮಾಧಾನ ಉಂಟಾಗದಂತೆ ಎಚ್ಚರಿಕೆ ವಹಿಸಿದರು. ಅವರು ತನ್ನ ವಿಚಾರದ ಪಕ್ಷಗಳ ಜೊತೆ ಸಂಪರ್ಕ ಬೆಳೆಸಿ, ಮೈತ್ರಿಕೂಟವನ್ನು ಜೊತೆಯಾಗಿಡುವ ಸಲುವಾಗಿ ಬಿಟ್ಟುಕೊಡುವ ಮನೋಭಾವ ತೋರಿಸಿದರು. ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ನೀರಾವರಿ ಕುರಿತು ಅವರ ಒತ್ತು ಬಿಜೆಪಿಯಂತಹ ಅನುಭವಿಗಳನ್ನೂ ಹಿಂದಡಿಯಿಡುವಂತೆ ಮಾಡಿತು.

ತನ್ನ ಪ್ರಚಾರಕ್ಕೆ ಅವರು ತುಂಬಿದ ಶಕ್ತಿ ಮತ್ತು ಬದ್ಧತೆ ಬಿಹಾರ ದ ರಾಜಕೀಯದಲ್ಲಿ ಅಲೆಗಳನ್ನು ಎಬ್ಬಿಸಿತು. ಹೆಚ್ಚಿನ ಸಂಪನ್ಮೂಲ ಮತ್ತು ದೊಡ್ಡದಾದ ಸಾಮಾಜಿಕ ವಲಯಗಳನ್ನು ಹೊಂದಿರುವ ಎನ್‌ಡಿಎಗೆ ಈಗ ಪ್ರತಿಪಕ್ಷವಾಗಿರಬೇಕಾಗಿರುವುದರ ಹೊರತಾಗಿಯೂ, ಆರ್‌ಜೆಡಿಯು ಅವರ ನಾಯಕತ್ವದಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಮಹಾದಲಿತ ಮತ್ತು ಇಬಿಸಿ ಮತಗಳನ್ನು ಪಡೆಯುವುದರ ಮೂಲಕ ಅವರು ಆರ್‌ಜೆಡಿಯನ್ನು ಮುಸ್ಲಿಂ-ಯಾದವ ವೇದಿಕೆಯ ಸೀಮಿತತೆಯ ಶಾಪದಿಂದ ಹೊರತರಲು ಶಕ್ತರಾಗಿದ್ದಾರೆ ಎಂಬದನ್ನು ಪಕ್ಷವು ಪಡೆದ ಮತಗಳ ಶೇಕಡಾವಾರಿನಲ್ಲಿ ಗಮನಾರ್ಹ ಹೆಚ್ಚಳವು ಸ್ಪಷ್ಟವಾಗಿ ತೋರಿಸುತ್ತದೆ. ನಿತೀಶ್ ನಂತರ ಯಾರು ಎಂಬ ಬಿಹಾರದ ಅತ್ಯಂತ ದೊಡ್ಡ ರಾಜಕೀಯ ಪ್ರಶ್ನೆಗೆ ಈಗ ಉತ್ತರ ಸ್ಪಷ್ಟವಾಗಿದೆ. ಅದು ತೇಜಸ್ವಿ ಅಲ್ಲದೇ ಬೇರಾರೂ ಆಗಿರಲು ಸಾಧ್ಯವಿಲ್ಲ.

ಮುಂದಿರುವ ಡೋಲಾಯಮಾನ ಕಾಲ

ಕೊನೆಯದಾಗಿ, ಆಡಳಿತ ಪಕ್ಷವು ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದುದಕ್ಕಿಂತ ಕೇವಲ ಮೂರು ಸ್ಥಾನಗಳನ್ನು ಹೆಚ್ಚಾಗಿ ಹೊಂದಿದೆ ಮತ್ತು ಅತ್ಯಂತ ದೊಡ್ಡ ಪಕ್ಷವು ಪ್ರತಿಪಕ್ಷದಲ್ಲಿ ಕುಳಿತಿರುತ್ತದೆ ಎಂಬುದನ್ನು ನಾವು ನೆನಪಿಡಬೇಕು. ಎನ್‌ಡಿಎಯು ಏದುಸಿರು ಬಿಡುತ್ತಾ ಜಯದ ಗುರಿಯನ್ನು ಮುಟ್ಟಿರಬಹುದು; ಆದರೆ, ಅದಕ್ಕೆ ಸರಿಯಾದ ಜನಾದೇಶವಿಲ್ಲ. ಅಲ್ಲದೇ ಈ ಬಾರಿ ಪ್ರತಿಪಕ್ಷದಲ್ಲಿ 16 ಮಂದಿ ಎಡಪಂಥೀಯರೂ ಇದ್ದಾರೆ. (ಅವರಲ್ಲಿ ಹೆಚ್ಚಿನವರು ಯುವಕರು) ಮತ್ತು ಭದ್ರ ನೆಲೆಯಿರುವ, ತೇಜಸ್ವಿಯಂತಹ ಯುವ ನಾಯಕತ್ವ ಇರುವ ಆರ್‌ಜೆಡಿ ಪ್ರತಿಪಕ್ಷವಾಗಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಸೇವೆ ಮತ್ತು ಆತ್ಮಗೌರವ ಅತ್ಯಂತ ಮುಖ್ಯ ವಿಷಯವಾಗಿರುವ ಬಿಹಾರದಂತಹ ರಾಜ್ಯದಲ್ಲಿ, ಸದ್ಯ ಆಡಳಿತದಲ್ಲಿ ಇರುವ ಸರಕಾರವು ಈ ಬಾರಿ ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದ ಆಡಳಿತ ವಿರೋಧಿ ಅಲೆಯನ್ನು ಎದುರಿಸಿರುವಾಗ, ನಿತೀಶ್‌ ಕುಮಾರ್ ಅವರ ನಾಲ್ಕನೇ ಅವಧಿಯು ಖಂಡಿತವಾಗಿಯೂ ತ್ರಾಸದಾಯಕ ಪ್ರಯಾಣವಾಗಲಿದೆ.

–  ರಂಜನ್ ಪಾಂಡೆ

(ಗೌಹಾಟಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದ ಉಪನ್ಯಾಸಕರು.)

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಮೋದಿ-ಶಾ ಜೋಡಿಗೆ ಬೆವರಿಳಿಸಿದ ಬಿಹಾರ! – ಡಿ.ಉಮಾಪತಿ

Also Read: Key Takeaways from the tightly contested Bihar Elections 2020

LEAVE A REPLY

Please enter your comment!
Please enter your name here