ಕೇವಲ ಕ್ಯಾಂಡಲ್‌ ಸುಡುವುದಲ್ಲ, ಅತ್ಯಾಚಾರಿಗಳನ್ನೂ ಸುಡುವುದಲ್ಲ: ಸುಡಬೇಕಾದ್ದು…

ಅಂತಹ ಶಿಕ್ಷೆ ಕೊಡುವ ದೇಶಗಳಲ್ಲೂ ಅತ್ಯಾಚಾರ ಪ್ರಕರಣಗಳು ಮತ್ತು ಲೈಂಗಿಕ ಹಿಂಸಾಚಾರಗಳು ಹಲವು ವಿಕೃತ ರೂಪಗಳಲ್ಲಿ ಚಾಲ್ತಿಯಲ್ಲಿವೆ ಎಂಬುದನ್ನು ಮರೆಯಬಾರದು.

0
12

ಅತ್ಯಾಚಾರಗಳು ಖಚಿತವಾಗಿ ಮಾನವ ಜಗತ್ತಿನ ವಿಕೃತ ಬೆಳವಣಿಗೆಗಳು. ಹಿಂಸೆ ಅಥವಾ ಕ್ರೌರ್ಯವೆಂಬುದು ವಿಶ್ವಕ್ಕೆ ಹೊಸದಲ್ಲ; ಪ್ರಾಣಿಪ್ರಪಂಚವೂ ಅದಕ್ಕೆ ಹೊರತಲ್ಲ! ಆದರೆ, ಸೃಷ್ಟಿಯ ಅತ್ಯಂತ ‘ಬುದ್ಧಿವಂತ’ ಪ್ರಾಣಿಯಾಗಿ ಬೆಳೆದ ಮಾನವ, ಇನ್ಯಾವ ಜೀವಜಂತುವೂ ಕಂಡುಕೇಳರಿಯದ ವಿಕೃತತೆಯನ್ನೂ ಬೆಳೆಸಿದ್ದಾನೆ. ಬಲಾತ್ಕಾರದ ಲೈಂಗಿಕತೆ ಮತ್ತು ಅದಕ್ಕಾಗಿ ನಡೆಯುವ ಹಿಂಸೆಯೆಂಬುದನ್ನು ಇಡೀ ಜೀವಸೃಷ್ಟಿಯಲ್ಲಿ ಮನುಷ್ಯಜೀವಿಗಳಲ್ಲಿ ಮಾತ್ರ ಕಾಣಲು ಸಾಧ್ಯ! ಹೈದರಾಬಾದ್‌ ಪಶುವೈದ್ಯೆಯ ಮೇಲಿನ ಅತ್ಯಾಚಾರದ ಭೀಕರತೆ ಮತ್ತು ಬರ್ಬರವಾದ ಆಕೆಯ ಕೊಲೆಯಿಂದಾಗಿ ಈ ಬಗೆಯ ವಿಕೃತತೆಯನ್ನು ಸೃಷ್ಟಿಸಿರುವ ಮನುಷ್ಯ ಜೀವಿಗೆ ಈ ಭೂಮಿಯ ಮೇಲೆ ಬದುಕುವ ಹಕ್ಕೇನಿದೆ ಎಂಬ ಆಕ್ರೋಶವನ್ನು ಹುಟ್ಟಿಸಿದೆ. ಅದರಿಂದಾಗಿಯೇ ಮರಣದಂಡನೆಯ ವಾಗ್ವಾದವು ಮತ್ತೆ ಬಲ ಪಡೆದುಕೊಂಡಿದೆ. ಅದಕ್ಕೆ ವಿರುದ್ಧವಾಗಿ ಮತ್ತೊಮ್ಮೆ, ಈ ಬಗೆಯ ಹಿಂಸೆಯ ಮೂಲದಲ್ಲಿರಬಹುದಾದ ಮಾನಸಿಕತೆ ಚರ್ಚೆಗೆ ಬಂದಿದೆ.

ಈ ಸದ್ಯ ಹೈದರಾಬಾದ್‌ ಪಶುವೈದ್ಯೆಯೆಂಬ ಇನ್ನೊಬ್ಬ ಹೆಣ್ಣುಮಗಳು ತನ್ನಂತಹ ನತದೃಷ್ಟ ಹಿರಿಯ ಕಿರಿಯ ಸಹೋದರಿಯರ ಸಾಲಿಗೆ ಸೇರಿಹೋಗಿರುವ ಘಟನೆ; ಆ ತಕ್ಷಣದಲ್ಲಿ ಅದೇ ನೆಪದಲ್ಲಿ ನಡೆದ ಕೀಳುಮಟ್ಟದ ಕೋಮುರಾಜಕಾರಣ ಮತ್ತು ನಂತರ ಬಿರುಸಾಗಿರುವ ನೊಂದ ಮನಸ್ಸುಗಳಿಂದಲೇ ಹೊರಟ ಆದರೆ ತಪ್ಪಾದ ಪ್ರತಿಕ್ರಿಯೆ-ಇವೆಲ್ಲವೂ ಸೇರಿ ಹುಟ್ಟಿಸಿರುವ ಒಂದು ಬಗೆಯ ಪಿಚ್ಚೆನ್ನಿಸುವ, ಕುಟುಕುವ, ರೇಜಿಗೆಯ ಮನಸ್ಥಿತಿಯಲ್ಲಿ, ಇಂತಹ ಬರಹಗಳಿಂದಾದರೂ ಏನು ಪ್ರಯೋಜನ ಎಂಬ ಹತಾಶೆಯೂ ಆಳದಲ್ಲಿದೆ. ಈ ಬಗೆಯ ಸಾವಿರಾರು ಬರಹಗಳನ್ನೂ, ಪ್ರತಿಭಟನಾ ಕಾವ್ಯಗಳನ್ನೂ ರಚಿಸುತ್ತಾ, ಪ್ರತಿಭಟನೆಗಳನ್ನೂ ನಡೆಸುತ್ತಲೇ ಬಂದ ನನ್ನಂತಹ ಅನೇಕರು, ಕಣ್ಣೆದುರಿನಲ್ಲೇ ಈ ದೌರ್ಜನ್ಯ ಪಡೆದುಕೊಂಡ ಭೀಕರ ಸ್ವರೂಪವನ್ನು, ಈ ಹಿಂಸೆ-ಸಾವುಗಳ ಕ್ರೌರ್ಯವನ್ನು ಅರಗಿಸಿಕೊಳ್ಳಲಾಗದ ಸಂಕಟದಲ್ಲಿದ್ದೇವೆ. ಅದೇ ಆಳದ ಸಂಕಟದಲ್ಲೇ ಇವಕ್ಕೆಲ್ಲ ಪ್ರತಿಕ್ರಿಯಿಸಲೇಬೇಕಾದ ಅನಿವಾರ್ಯತೆಗೂ ಸಿಲುಕಿದ್ದೇವೆ.

ಹೈದರಾಬಾದ್‌ ಪಶುವೈದ್ಯೆಯ ಸಾವಿನ ಸಂದರ್ಭದಲ್ಲಿ ಸಾಮಾನ್ಯವಾಗಿ ಜೋರಾಗಿ ಕೇಳಿಬರುತ್ತಿದ್ದ ‘ಅತ್ಯಾಚಾರಕ್ಕೆ ಹೆಣ್ಣುಮಕ್ಕಳೇ ಕಾರಣ’, ‘ಮಹಿಳೆಯರು ಧರಿಸುವ ಉಡುಪುಗಳ ಕಾರಣಕ್ಕೆ ಅತ್ಯಾಚಾರಗಳು ನಡೆಯುತ್ತವೆ’, ಹೆಣ್ಣಮಕ್ಕಳು ಸಂಜೆ-ರಾತ್ರಿ ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಹೊರಹೋಗದೆ ಭದ್ರವಾಗಿ ಮನೆಯಲ್ಲೇ ಇದ್ದರೆ, ಇಂತಹವೆಲ್ಲ ನಡೆಯುವುದಿಲ್ಲ’………………. ಇವೇ ಮೊದಲಾದ ಎಲೆ-ಅಡಿಕೆಯಂತೆ ಬಾಯಲ್ಲಿ ಅಗೆದು ಸವಕಲಾಗಿರುವ ವಾದಗಳು ಅಷ್ಟಾಗಿ ಕೇಳಲಿಲ್ಲ. ಇದಕ್ಕೆ ಹಿಂದೆ ‘ಮೀ ಟೂ’ ಆಂದೋಲನ ನಡೆದಾಗ ನಡೆದಂತಹ ದಾಳಿಗಳು ಈಗ ನಡೆಯಲಿಲ್ಲ. ಆದರೆ, ಮಹಿಳೆಯರ ನೋವುಗಳ ಹತ್ತಿರಕ್ಕೂ ಎಂದೂ ಸುಳಿಯದಿದ್ದ ಅನೇಕ ಕೂಗುಮಾರಿಗಳು, ಅವರ ಪಟಾಲಂನ ರಾಜಕಾರಣಿಗಳು ಪ್ರಿಯಾಂಕಳ ಸಾವನ್ನು ಖಂಡಿಸುತ್ತಾ, ನ್ಯಾಯಕ್ಕಾಗಿ ಒತ್ತಾಯಿಸತೊಡಗಿದರು. ಇದರಿಂದ ನಮಗೆ ಕೆಲವು ಸಂಗತಿಗಳು ಸ್ಪಷ್ಟವಾದವು: ಕರ್ನಾಟಕದ ಸೂಲಿಬೆಲೆಯಿಂದ ಶುರುವಾಗಿ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸಾಮಿಯ ತನಕ, ಕೂಗುಮಾರಿಗಳೂ ಹೋರಾಟಕ್ಕಿಳಿಯಬೇಕೆಂದರೆ ಅತ್ಯಾಚಾರಿ ಕ್ರೂರಿಗಳಲ್ಲಿ ಒಬ್ಬನಾದರೂ ಮುಸ್ಲಿಮನಿರಬೇಕು; ಇಡೀ ಸಮಾಜವೇ ಅತ್ಯಾಚಾರದ ಘಟನೆಯ ವಿರುದ್ಧ ದನಿಯೆತ್ತಬೇಕಾದರೆ ಆ ಘಟನೆ ಅತ್ಯಂತ ಕ್ರೂರವಾಗಿರಬೇಕು, ಆ ಮಹಿಳೆ ಪಡಬಾರದ ಹಿಂಸೆಯನುಭವಿಸಿ ಸಾವಿಗೀಡಾಗಿರಬೇಕು. ಆಕೆ ಸಮಾಜದ ಪ್ರಬಲ ವರ್ಗಗಳಿಗೆ ಸೇರಿದ್ದರಂತೂ ಎಲ್ಲರ ಗಮನ ಆ ಕಡೆ ಹರಿಯುವುದು ಖಚಿತ!! ಈ ಸಂದರ್ಭದಲ್ಲೂ ಪ್ರಿಹೈದರಾಬಾದ್‌ ಪಶುವೈದ್ಯೆ ತನ್ನ ನೋವು-ಸಾವುಗಳಿಂದಲೇ ಸಮಾಜವನ್ನು ಕಲಕಿದ್ದಾಳೆ; ಅದರಿಂದ ಹುಟ್ಟಿರುವ ಪ್ರಶ್ನೆಗಳಿಗೆ ವಸ್ತುನಿಷ್ಠ ನೆಲೆಯಲ್ಲಿ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ.

ಅತ್ಯಾಚಾರಗಳಿಗೆ ಕಾರಣವಾಗುವ ಸಂಗತಿಗಳನ್ನು ಅನುಲೋಮಕ್ರಮದಲ್ಲಿ ಜೋಡಿಸಿದರೆ ಅವು ಹೀಗಿರುತ್ತವೆ:

1. ಪೊಳ್ಳು ‘ಗಂಡಸುತನ/ಪೌರುಷ’ದ ಪರಿಕಲ್ಪನೆ (ಮಿಸೋಜಿನಿ)-ಸುಳ್ಳುಸುಳ್ಳಾಗಿ ಹುಟ್ಟಿಸಲ್ಪಟ್ಟಿರುವ ಗಂಡಸುತನ ಅಥವಾ ಪೌರುಷದ ಕಲ್ಪನೆಯು, ಹೆಣ್ಣನ್ನು ಬಲಾತ್ಕಾರದಿಂದ ವಶಪಡಿಸಿಕೊಳ್ಳುವುದನ್ನು ಅಥವಾ ಸೋಲಿಸುವುದನ್ನು ಅನಿವಾರ್ಯಗೊಳಿಸುತ್ತದೆ.

2. ದಮನ-ಮಹಿಳೆಯರನ್ನು ದಮನಿಸಬಹುದೆಂಬ ಅಥವಾ ಮಹಿಳಾ ಕುಲ ಇರುವುದೇ ದಮನಕ್ಕೊಳಗಾಗಲಿಕ್ಕೆಂಬ ನಮ್ಮ ಸಮಾಜದ ಅತ್ಯಂತ ಆಳವಾದ ನಂಬಿಕೆ

3. ಶೀಲ-ಹೆಣ್ಣಿನ ಶೀಲವನ್ನು ಆಕೆಯ ಇಡೀ ಅಸ್ತಿತ್ವವೆಂದು ಬಿಂಬಿಸಲಾಗಿರುವುದು

4. ಶಿಕ್ಷೆಯಾಗುವುದಿಲ್ಲವೆಂಬ ನಂಬಿಕೆ (ಇಂಪ್ಯೂನಿಟಿ); ಸಾಂಸ್ಕೃತಿಕ ಸಮರ್ಥನೆಗಳು-ಸಮಾಜದಲ್ಲಿ ಅಮಾನ್ಯಗೊಳ್ಳುವ ಅಥವಾ ಶಿಕ್ಷೆಗೊಳಗಾಗುವ ಆತಂಕವಿಲ್ಲದಿರುವುದು; ಬದಲಿಗೆ ಸಮಾಜದಲ್ಲಿರುವ ಸಾಂಸ್ಕೃತಿಕ ಮೌಲ್ಯಗಳು ತನ್ನನ್ನು ಸಮರ್ಥಿಸುತ್ತವೆಂಬ ಖಚಿತ ತಿಳಿವಳಿಕೆ.

5. ವಿಕೃತ ಲೈಂಗಿಕತೆ-ಸೆಕ್ಸ್ ಮತ್ತು ಕ್ರೈಂನ ಮಾರುಕಟ್ಟೆಯ ಮೂಲಕವೂ ಲಾಭ ಗಳಿಸುವ ವಿಕೃತ ಬಂಡವಾಳಿಗತನದ ಪರಿಣಾಮ

6. ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಸಮೂಹ ಕ್ರೌರ್ಯದ ಮನಸ್ಥಿತಿ

ಅತ್ಯಾಚಾರವೆಂಬ ‘ಬಲವಂತದ ಲೈಂಗಿಕ ಕ್ರಿಯೆ’ಯ ಹಿಂದಿರುವುದು ಬಹುತೇಕ ಸಂದರ್ಭಗಳಲ್ಲಿ ‘ತಡೆಯಲಸಾಧ್ಯವಾದ ಲೈಂಗಿಕ ಒತ್ತಡ’ವಲ್ಲ. ಅದೇ ವಾಸ್ತವವಾಗಿದಿದ್ದಲ್ಲಿ ಅದಕ್ಕೆ ಇನ್ನೂ ಸುಲಭದ, ಸರಳವಾದ, ಯಾವುದೇ ಆತಂಕಗಳಿಲ್ಲದ ಹಲವು ದಾರಿಗಳಿವೆ. ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರದ ಹಿಂದಿರುವುದು ಬಹಳ ಮುಖ್ಯವಾಗಿ ನಮ್ಮ ಸಮಾಜ ಹುಟ್ಟಿನಿಂದ ಕಟ್ಟಿಕೊಡುವ ಪೊಳ್ಳು ಪೌರುಷದ ಪರಿಕಲ್ಪನೆ. ಅದು, ಬಲವಂತದಿಂದ ಹೆಣ್ಣನ್ನು ನಿಯಂತ್ರಣದಲ್ಲಿಡಬಲ್ಲ ಮತ್ತು ಲೈಂಗಿಕತೆಯ ಪ್ರದರ್ಶನ ಮಾಡಬಲ್ಲ ಗಂಡಿನ ಸಾಮರ್ಥ್ಯವೆಂದು ನೇರವಾಗಿ ವಿವರಿಸಲ್ಪಡುತ್ತದೆ. ಹೆಣ್ಣಿನ ‘ಇಲ್ಲ’ ಎಂಬುದನ್ನು ಒಪ್ಪದಿರುವುದು ‘ಪೌರುಷದ ಪರಿಕಲ್ಪನೆ’ಯೊಳಗೆ ಒಂದು ಬಹುಮುಖ್ಯ ಮಾನದಂಡವೆನಿಸಿಕೊಳ್ಳುತ್ತದೆ ಹಾಗೂ ಮಹಿಳೆಯನ್ನು ನಿಜವಾದ ಅರ್ಥದಲ್ಲಿ ಗೌರವಿಸುವುದು-ತಮಗೆ ಬೇಕಾದಂತೆ ಹಾಡಿಹೊಗಳಿಕೊಂಡಿರುವ ‘ಮಮತೆಯ ತಾಯಿ, ಸುಂದರಿ ಸುಶೀಲೆ ಮಗಳು, ಸಾಧ್ವಿಮಣಿಯಾದ ಧರ್ಮಪತ್ನಿ ಇತ್ಯಾದಿ ಇತ್ಯಾದಿಯಾಗಿ ಅಲ್ಲ; ಆಯ್ಕೆಯ ಸ್ವಾತಂತ್ಯ್ರ ಮತ್ತು ಸಾಮರ್ಥ್ಯವುಳ್ಳ ಸ್ವತಂತ್ರ ವ್ಯಕ್ತಿಯಾಗಿ- ‘ಪುರುಷತ್ವದ ಪರಿಕಲ್ಪನೆ’ಯಲ್ಲಿ ದೌರ್ಬಲ್ಯದ ಸಂಕೇತವಾಗುತ್ತದೆ.

ಇದನ್ನೂ ಓದಿ: ಅತ್ಯಾಚಾರವನ್ನು ತಡೆಗಟ್ಟಲು ಸಾಧ್ಯ! ತಡೆಗಟ್ಟಲೇಬೇಕು! ಅದರ ಮೂಲಬೇರುಗಳನ್ನು ಅರಿತಾಗ ಮಾತ್ರ…

ಈಗಲೂ, ಹಿಂದೆಯೂ ಅತ್ಯಾಚಾರದ ಚರ್ಚೆ ಬಂದಾಗೆಲ್ಲ ಅದನ್ನು ಲೈಂಗಿಕ ಕ್ರಿಯೆಗಷ್ಟೇ ಸೀಮಿತಗೊಳಿಸುವ ಚಾಳಿ ವ್ಯಾಪಕವಾಗಿ ಹಬ್ಬಿಕೊಂಡಿದೆ. ‘ಪುರುಷತ್ವ ಅಥವಾ ಗಂಡಸುತನದ ಪರಿಕಲ್ಪನೆ’ಯ ತಳಹದಿ ಇಲ್ಲದಿದ್ದರೆ ಇಂದು ನಡೆಯುತ್ತಿರುವ ಅತಿಕ್ರೂರವಾದ ಅತ್ಯಾಚಾರಗಳಲ್ಲಿ ಹೆಚ್ಚಿನವು ನಡೆಯಬಹುದಾದ ಮನಸ್ತಿತಿ ಮತ್ತು ಸನ್ನಿವೇಶವೇ ಇರುವುದಿಲ್ಲ.

ಆದ್ದರಿಂದ, ಅತ್ಯಾಚಾರವೆಂಬುದು ಎಲ್ಲ ಬಗೆಯ ಮೇಲುಕೀಳಿನ ಶ್ರೇಣೀಕರಣವನ್ನು ವಿಜೃಂಭಿಸುವ ನಮ್ಮ ಸಾಮಾಜಿಕ ಮೌಲ್ಯವ್ಯವಸ್ಥೆಯೊಂದಿಗೆ ನೇರವಾಗಿ ಅವಲಂಬಿಸಿದೆ. ಅದಿಲ್ಲದಿದ್ದರೆ, ಇವು ನಡೆಯಲು ಸಾಧ್ಯವಿಲ್ಲ.

ಹಾಗೆಂದು, ಸಮಾಜವು ಕಳೆದ ಹಲವು ದಶಕದಲ್ಲಿ ಚಲಿಸಿದ ಪರಿಯು, ಅತ್ಯಾಚಾರ, ಲೈಂಗಿಕ ಹಿಂಸಾಚಾರ ಮತ್ತಿತರ ಹಿಂಸೆಗಳನ್ನು ಪ್ರಭಾವಿಸಿಲ್ಲ ಅಥವಾ ಅದನ್ನು ಹೆಚ್ಚಾಗಿಸುವಲ್ಲಿ ಕೆಲಸ ಮಾಡಿಲ್ಲ ಎಂದು ನಾನು ಹೇಳುತ್ತಿಲ್ಲ. ಸೆಕ್ಸ್ ಅನ್ನು ಒಂದು ‘ಉದ್ದಿಮೆ’ (ಇಂಡಸ್ಟ್ರಿ) ಎಂದು ಕರೆಯಬಹುದಾದ ಮಾನ್ಯತೆ ಮತ್ತು ಮನಸ್ಥಿತಿಯನ್ನು ಕಳೆದ 3 ದಶಕದಲ್ಲಿ ನಮ್ಮ ದೇಶದಲ್ಲೂ, ಹೊರಗೂ ರೂಪಿಸಲಾಗಿದೆ. ಅದಕ್ಕೆ ಮಹಿಳೆ ಒಂದು ಅನಿವಾರ್ಯ ಕಚ್ಚಾವಸ್ತು. ಅದರಿಂದಾಗಿ ಮಕ್ಕಳು ತಮ್ಮ ಭಾವನೆಗಳನ್ನು ಅರಿಯಲು ಆರಂಭಿಸುವ ಹದಿವಯಸ್ಸಿನ ಹಲವು ಗೊಂದಲಗಳ ನಡುವೆ, ಈ ವಿಕೃತವಾದ ಲೈಂಗಿಕ ಪ್ರಚೋದನೆಗಳೂ ಸೇರಿ ಬಗೆಹರಿಸಲಾಗದ ಗೋಜಲಾಗಿದೆ.

ಅದೇ ಸಂದರ್ಭದಲ್ಲಿ ಇದೇ ಮೂರು ದಶಕಗಳಲ್ಲಿ ಮೇಲೆದ್ದು ಬಂದಿರುವ ಬಲಪಂಥೀಯ ಫ್ಯಾಸಿಸ್ಟ್ ರಾಜಕೀಯ ವ್ಯವಸ್ಥೆಯು ಮುಸ್ಲಿಮರು, ಮಹಿಳೆಯರು, ದಲಿತರು ಮತ್ತು ಶೋಷಿತರ ಪರವಾಗಿ ದನಿಯೆತ್ತುವ ಎಲ್ಲರ ವಿರುದ್ಧ ಸಮಾಜದಲ್ಲಿ ರೂಪಿಸಿರುವ ಹಿಂಸಾತ್ಮಕ ಮನಸ್ಥಿತಿಯು ಅದಕ್ಕೊಂದು ಸಾಮಾಜಿಕ ಸಮರ್ಥನೆಯನ್ನು ಒದಗಿಸಿದೆ. ಇಂದು, ದನದ ಮಾಂಸ ಕೈಯ್ಯಲ್ಲಿ ಹಿಡಿದಿದ್ದನೆಂಬ ಆರೋಪದ ಮೇಲೆ ಜುನೈದನನ್ನು ಸಾರ್ವಜನಿಕವಾಗಿ ಸಾಯಿಸಿದಾಗ ಇದ್ದ ಅದೇ ಮನಸ್ಥಿತಿಯು, ಮಹಿಳೆಯರನ್ನು ತುಚ್ಛೀಕರಿಸುವಾಗ, ಅವರ ಹಕ್ಕುಗಳ ಪ್ರತಿಪಾದನೆಯನ್ನು ವಿರೋಧಿಸುವಾಗ, ಅವರ ಆಯ್ಕೆಯ ಸ್ವಾತಂತ್ಯ್ರವನ್ನು ಹತ್ತಿಕ್ಕುವಾಗ ಮತ್ತು ಅತ್ಯಾಚಾರಗಳನ್ನು ಸಮರ್ಥಿಸುವಾಗಲೂ ಕೆಲಸ ಮಾಡುತ್ತದೆ.

ಅದರಿಂದಾಗಿಯೇ ಇಂದು ಮಹಿಳೆಯರಲ್ಲೂ ಅತ್ಯಂತ ಅಂಚಿಗೊತ್ತಲ್ಪಟ್ಟ ಮುಸ್ಲಿಂ, ದಲಿತ, ಆದಿವಾಸಿ ಮಹಿಳೆಯರ ಮೇಲಾಗುವ ಇಂತಹ ಹಿಂಸೆಗಳು ಹೆಚ್ಚುತ್ತಲೇ ಇರುವುದು. ಹಾಗೆಯೇ, ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರಗಳಲ್ಲಿನ ಬರ್ಬರತೆಯೂ ಹೆಚ್ಚುತ್ತಿರುವುದು.

ಆದ್ದರಿಂದಲೇ, ಅತ್ಯಾಚಾರಕ್ಕೆ ಮರಣದಂಡನೆ ಪರಿಹಾರವಲ್ಲ ಎಂದು ಮಹಿಳಾ ಚಳವಳಿ ಮತ್ತು ಸಾಮಾಜಿಕ ಚಿಂತಕ ವಲಯ ವಾದಿಸುತ್ತಿರುವುದು. ಮರಣದಂಡನೆಯನ್ನು ಖಂಡಿಸುವುದಕ್ಕೆ ಇರುವ ಕಾರಣ ಕೇವಲ ವಿಕೃತ ಲೈಂಗಿಕತೆಯನ್ನು ಮಾರುತ್ತಿರುವ ಕಂಪೆನಿಗಳಿರುವಾಗ ವ್ಯಕ್ತಿಗಳನ್ನಷ್ಟೇ ಮರಣದಂಡನೆಗೆ ದೂಡುವುದು ಪರಿಹಾರವಲ್ಲ ಎಂಬುದು ಮಾತ್ರವಲ್ಲ; ಬದಲಿಗೆ ಅಂತಹ ಶಿಕ್ಷೆ ಕೊಡುವ ದೇಶಗಳಲ್ಲೂ ಅತ್ಯಾಚಾರ ಪ್ರಕರಣಗಳು ಮತ್ತು ಲೈಂಗಿಕ ಹಿಂಸಾಚಾರಗಳು ಹಲವು ವಿಕೃತ ರೂಪಗಳಲ್ಲಿ ಚಾಲ್ತಿಯಲ್ಲಿವೆ ಎಂಬುದು. ಎಲ್ಲರೂ ಸಾಮಾನ್ಯವಾಗಿ ಉದಾಹರಿಸುವ ವಿಷಯಗಳನ್ನೇ ನೋಡೋಣ. ಸೌದಿ, ಇರಾನ್, ಸಿರಿಯಾ, ಆಫ್ಘಾನಿಸ್ಥಾನದಂತಹ ದೇಶಗಳಲ್ಲಿ ಮರಣದಂಡನೆ ನೀಡಲಾಗುತ್ತದೆ ಎಂಬುದು ನಿಜ. ಆದರೆ, ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ ಮಹಿಳೆಯರಲ್ಲಿ ಶೇ.40ರಷ್ಟು ಮಹಿಳೆಯರ ಮೇಲೆ ವಿವಾಹಬಾಹಿರ ಲೈಂಗಿಕ ಸಂಬಂಧದ ಆರೋಪವನ್ನು ಪೊಲೀಸ್ ಯಂತ್ರಾಂಗವೇ ಹೊರಿಸಿ, ವಿಚಾರಣೆಗೆ ಜೈಲಿಗೆ ತಳ್ಳಿದೆ ಎಂದು ‘ಹ್ಯೂಮನ್ ರೈಟ್ಸ್ ವಾಚ್’ ಸಂಸ್ಥೆಯ ಅಧ್ಯಯನ ವರದಿ ಹೇಳುತ್ತದೆ. ಹಾಗೆಯೇ, ಯುದ್ಧಪೀಡಿತ ಪ್ರದೇಶಗಳಲ್ಲಿ ಅಥವಾ ಉಗ್ರಗಾಮಿಗಳೆಂದು ಬಂಧಿಸಲ್ಪಟ್ಟವರಲ್ಲಿ ಶೇ.70ರಷ್ಟು ಮಂದಿ (ಮಹಿಳೆಯರು ಮಾತ್ರವಲ್ಲ, ಮಕ್ಕಳು ಮತ್ತು ಪುರುಷರೂ ಕೂಡಾ) ಅತ್ಯಾಚಾರಕ್ಕೆ ಒಳಗಾಗಿಯೇ ಇರುತ್ತಾರೆಂದು ವರದಿ ಹೇಳುತ್ತದೆ. ಪುರುಷರಲ್ಲಿ ಈ ಸಂಖ್ಯೆ ಶೇ.37ರಷ್ಟಿದೆ!! ಅಂದರೆ, ಒಂದೆಡೆ ಮಹಿಳೆಯರನ್ನು ದಮನಿಸುವ ಸಾಮಾಜಿಕತೆ ಇದ್ದರೆ, ಅಲ್ಲಿ ಮರಣದಂಡನೆಯ ಆತಂಕ ಇರುವಾಗಲೂ ಹೇಗೆ ಅತ್ಯಾಚಾರಗಳಿಗೆ ಸಾಮಾಜಿಕ ಸಮರ್ಥನೆ ಮತ್ತು ಆಮೂಲಕ ಕಾನೂನಿನ ರಕ್ಷಣೆ ದೊರೆಯಬಹುದು ನೋಡಿ.

ಇದನ್ನೂ ಓದಿ: ಖೈರ್ಲಾಂಜಿ ದಲಿತರ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ನ್ಯಾಯಾಲಯ ನಡೆದುಕೊಂಡಿದ್ದಾದರೂ ಹೇಗೆ?

ಆದ್ದರಿಂದ, ಈಗ ಆಗಬೇಕಾದ ಕೆಲಸ ಬಹಳ ಮುಖ್ಯವಾಗಿ ಆಡಳಿತ ವ್ಯವಸ್ಥೆಯಲ್ಲಿ ಮತ್ತು ಸಮಾಜದಲ್ಲಿ ತುಂಬಿರುವ ಮಿಸೋಜಿಸಿ (ಪೌರುಷದ ಅಥವಾ ಪುರುಷ ಮೇಲಾಧಿಪತ್ಯದ ಮೌಲ್ಯ)ಯನ್ನು ಇಲ್ಲವಾಗಿಸುವ, ಮಹಿಳೆಯ ಅಧೀನ ಸ್ಥಾನಮಾನವನ್ನು ಬದಲಾಯಿಸುವ ಮತ್ತು ಒಟ್ಟಾರೆಯಾಗಿಯೇ ಒಪ್ಪಿತವಾಗಿರುವ ಜಾತಿ, ಲಿಂಗಗಳೆಂಬ ಶ್ರೇಣೀಕರಣಗಳನ್ನೇ ಬಲವಾಗಿ ಪ್ರಶ್ನಿಸುವ ಕೆಲಸ. ಹೋರಾಟದ ಒಡನಾಡಿ ವಿಕಾಸ್ ಆರ್ ಮೌರ್ಯ ಅವರು ಬರೆದಿರುವಂತೆ, ಪಠ್ಯದಲ್ಲಿ ಗಂಡುಮಕ್ಕಳಿಗೆ ಕಡ್ಡಾಯವಾಗಿ ಲೈಂಗಿಕ ಹಿಂಸೆಯ ವಿರುದ್ಧದ ವಿಚಾರಗಳನ್ನು ಕಲಿಸುವಂತಹ ದೂರಗಾಮಿ ಕ್ರಮಗಳು. 2017ರಲ್ಲಿ ಜಗತ್ತಿನಾದ್ಯಂತ ಉದ್ದೇಶಪೂರ್ವಕವಾಗಿ ಕೊಲ್ಲಲ್ಪಟ್ಟ ಮಹಿಳೆಯರಲ್ಲಿ ಶೇ.58 ಮಂದಿಯನ್ನು ಕೊಂದವರು ಅವರ ಕುಟುಂಬದ ಸದಸ್ಯರೇ ಆಗಿದ್ದಾರೆ ಮತ್ತು ಅವರು ಒಂದಲ್ಲ ಒಂದು ಬಗೆಯ ಮಹಿಳೆಯರ ಮೇಲಿನ ಹಿಂಸೆಯನ್ನು ತಮ್ಮ ಬಾಲ್ಯದಲ್ಲಿ ನೋಡಿ ಬೆಳೆದಿದ್ದಾಗಿ ಒಪ್ಪಿಕೊಂಡಿದ್ದಾರೆ (ವಿಶ್ವಸಂಸ್ಥೆಯ ‘ಎಂಡಿಂಗ್ ವಯಲೆನ್ಸ್ ಆನ್ ವಿಮೆನ್’ ವರದಿ). ಇದನ್ನು ನೋಡಿದಾಗ ದೂರಗಾಮಿ ಕ್ರಮಗಳ ಮುಖ್ಯಪಾತ್ರ ಅರಿವಾಗುತ್ತದೆ.

ಹಾಗಾದರೆ ಆ ತನಕ ನಡೆಯುವ ಘಟನೆಗಳಿಗೆ ಪ್ರತಿಭಟನೆಯೇ ಬೇಡವೇ? ಖಂಡಿತ ಬೇಕು. ಆದರೆ ಅವು ನಮ್ಮನ್ನು ‘ಯಾಕೆ ಯಾವಾಗಲೂ ಕ್ಯಾಂಡಲ್ ಸುಡಬೇಕು, ಒಮ್ಮೆ ಅತ್ಯಾಚಾರಿಗಳನ್ನು ಸುಡಿ’ ಎಂಬ ತಪ್ಪು ದಾರಿಗೆ ಒಯ್ಯಬಾರದು. ಸಂಸ್ಥಿಕ ಹಿಂಸೆಗೆ ಕೇವಲ ವ್ಯಕ್ತಿಗತ ಪರಿಹಾರ ಮಾತ್ರ ದೊರಕುವುದು ಸಾಧ್ಯವಿಲ್ಲ!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here