Homeಮುಖಪುಟಕಾನೂನಿನಂತೆ ರಾಷ್ಟ್ರದ್ರೋಹ ಯಾವುದು? : ಮಾಜಿ ಐಪಿಎಸ್ ಅಧಿಕಾರಿ ಎನ್.ಸಿ.ಅಸ್ತಾನರಿಂದ ವಿವರಣೆ

ಕಾನೂನಿನಂತೆ ರಾಷ್ಟ್ರದ್ರೋಹ ಯಾವುದು? : ಮಾಜಿ ಐಪಿಎಸ್ ಅಧಿಕಾರಿ ಎನ್.ಸಿ.ಅಸ್ತಾನರಿಂದ ವಿವರಣೆ

- Advertisement -
- Advertisement -

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

2014ರ ಬಳಿಕ ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧನಗಳು ಏಕಾಏಕಿಯಾಗಿ ಏರಿವೆ. ಚಿಕ್ಕಪುಟ್ಟ ಕಾರಣಗಳಿಗೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ, ಕೇರಳ ಡಿಜಿಪಿ ಮತ್ತು ದೀರ್ಘಕಾಲ ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನ ಹೆಚ್ಚುವರಿ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದ ಎನ್.ಸಿ.ಅಸ್ತಾನ ಅವರ ಲೇಖನ ಇಲ್ಲಿ ಪ್ರಕಟವಾಗಿತ್ತು. ಅವರು ನೀಡಿರುವ ಇನ್ನಷ್ಟು ಕುತೂಹಲಕಾರಿ ವಿವರಗಳು ಇಲ್ಲಿವೆ.

ಎಪ್ರಿಲ್ 2015ರಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನ ಬಾರ್ ಅಸೋಸಿಯೇಷನ್ ಅಧ್ಯಕ್ಷ ಮಿಯಾಂ ಅಬ್ದುಲ್ ಖಯ್ಯೂಂ ಅವರು ಸಾಕ್ಷ್ಯ ನೀಡುತ್ತಾ, ತಾನು ಭಾರತದ ಪ್ರಜೆಯಲ್ಲ ಮತ್ತು ಅದರ ಸಂವಿಧಾನದಲ್ಲಿ ತನಗೆ ನಂಬಿಕೆಯಿಲ್ಲ ಎಂದು ಹೇಳಿದ್ದರು. ಅವರನ್ನು 1990, 2010 ಮತ್ತು 2016ರಲ್ಲಿ ಬಂಧಿಸಲಾಗಿದ್ದರೂ, “ನಾನೊಬ್ಬ ಭಾರತೀಯನಲ್ಲ” ಎಂದು ಹೇಳಿದ್ದಕ್ಕೆ ಅವರ ಮೇಲೆ ಯಾವ ಆರೋಪವನ್ನು ಹೊರಿಸಲಾಗಿರಲಿಲ್ಲ. ಅದರ ಅರ್ಥವೆಂದರೆ, ಹಾಗೆ ಹೇಳುವುದರಿಂದ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಮತ್ತು ಖಂಡಿತವಾಗಿಯೂ ಅದು ರಾಷ್ಟ್ರದ್ರೋಹವೆಂದು ಹೈಕೋರ್ಟ್ ಭಾವಿಸಿಲ್ಲ ಎಂದಾಯಿತು.

ಇನ್ನು “ತುಕ್ಡೇ ತುಕ್ಡೇ ಗ್ಯಾಂಗ್” ಆರೋಪದಲ್ಲಿ ಏನಾದರೂ ಹುರುಳಿದೆಯೆ? ಇಂತಹಾ ಒಂದು ಗ್ಯಾಂಗ್ ಇರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲವೆಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ಹಕ್ಕು ಕಾಯಿದೆಯ ಪ್ರಕಾರ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದೆ. ಆದರೂ, ಈ ಮಾತು ಬಿಜೆಪಿ ನಾಯಕರ ಬಾಯಿಯಲ್ಲಿ ಇನ್ನೂ ಹೊರಳಾಡುತ್ತಿದೆ.

ಕಾನೂನಿನ ನಿಲುವು ಏನೆಂದರೆ, ಕೇವಲ ಭಾರತಕ್ಕೆ ಕೆಡುಕನ್ನು ಬಯಸುವುದು- ಅದು ಎಷ್ಟೇ ಅನಪೇಕ್ಷಣೀಯವಾಗಿರಲಿ- ರಾಷ್ಟ್ರದ್ರೋಹವಾಗುವುದಿಲ್ಲ. “ಭಾರತ್ ತುಕ್ಡೇ ತುಕ್ಡೇ ಹೋಂಗೆ” ತರದಲ್ಲಿ ತುಂಡು ತುಂಡಾಗಲಿ, ಪರಮಾಣು ಯುದ್ಧ ಅಥವಾ ನೈಸರ್ಗಿಕ ಪ್ರಕೋಪದಿಂದ ನಾಶವಾಗಲಿ ಎಂದು ಬಯಸಿದಲ್ಲಿ ಅದು ಕೆಟ್ಟ ಅಭಿರುಚಿ, ಅಮಾನವೀಯ ಎನಿಸಿಕೊಳ್ಳಬಹುದೇ ಹೊರತು, ಕಾನೂನಿನ ಪ್ರಕಾರ ರಾಷ್ಟ್ರದ್ರೋಹವಾಗುವುದಿಲ್ಲ. ಅಂತವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬಹುದೇ ಹೊರತು ಕೇಸು ಜಡಿಯುವಂತಿಲ್ಲ.

ಬಲವಂತ್ ಸಿಂಗ್ ಮತ್ತು ಇನ್ನೊಬ್ಬರ ವಿರುದ್ಧ ಪಂಜಾಬ್ ರಾಜ್ಯ (1995) ಪ್ರಕರಣದಲ್ಲಿ “ಖಾಲಿಸ್ತಾನ್ ಜಿಂದಾಬಾದ್” ಮುಂತಾದ ಘೋಷಣೆ ಕೂಗುವುದು ರಾಷ್ಟ್ರದ್ರೋಹವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಘಟನೆಯು ಇಂದಿರಾಗಾಂಧಿಯವರ ಹತ್ಯೆ ನಡೆದ ದಿನವೇ ನಡೆದಿತ್ತು ಎಂಬುದು ತೀರ್ಪಿನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಸಿಮ್ರನ್ಜಿತ್ ಮಾನ್ ವಿರುದ್ಧ ಪಂಜಾಬ್ ರಾಜ್ಯ(2009),  ಗರ್‌ಜತೀಂದರ್ ಪಾಲ್ ಸಿಂಗ್ ವಿರುದ್ಧ ಪಂಜಾಬ್ ರಾಜ್ಯ (2009), ಕಾಶ್ಮೀರ್ ಸಿಂಗ್ ಮತ್ತಿತರರ ವಿರುದ್ಧ ಪಂಜಾಬ್ ರಾಜ್ಯ (2009) ಪ್ರಕರಣಗಳಲ್ಲಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಇದೇ ತೀರ್ಪನ್ನು ಪುನರುಚ್ಛರಿಸಿದೆ. ಅಳವಿ ವಿರುದ್ಧ ಕೇರಳ ರಾಜ್ಯ (1982) ಪ್ರಕರಣದಲ್ಲಿ ಕೇರಳ ಹೈಕೋರ್ಟ್ ತೀರ್ಪು ನೀಡಿ, “ಪ್ರಸ್ತುತ ನ್ಯಾಯಾಂಗ ವ್ಯವಸ್ಥೆ ಅಥವಾ ಸಂಸತ್ತು ಅಥವಾ ವಿಧಾನ ಮಂಡಲಗಳ ಕಾರ್ಯವಿಧಾನವನ್ನು ಟೀಕಿಸುವುದು ಕಾನೂನು ಪ್ರಕಾರ ಸ್ಥಾಪಿತವಾದ ಸರಕಾರದ ವಿರುದ್ಧ ದ್ವೇಷ, ಅವಿಧೇಯತೆ, ಅಸಂತೋಷ ಉಂಟುಮಾಡುವುದು ಅಥವಾ ಹಾಗೆ ಮಾಡುವ ಪ್ರಯತ್ನ ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.

ಕಾಶ್ಮೀರ ಕುರಿತು ಪಂಕಜ್ ಬೂತಾಲಿಯ ಎಂಬವರು ನಿರ್ಮಿಸಿದ್ದ “ದಿ ಟೆಕ್ಸ್ಚರ್ಸ್ ಆಫ್‌ ಲಾಸ್” ಎಂಬ ಸಾಕ್ಷ್ಯಚಿತ್ರದಲ್ಲಿ “ಈ ರೀತಿಯ ಭಾರತವು ಹಾಳಾಗಿಹೋಗಲಿ. ಇಲ್ಲಿನ ನಮ್ಮ ಸರಕಾರ ಮತ್ತು ಅವರ ಕುಟುಂಬಗಳು, ಅವರು ನಮ್ಮ ಕುಟುಂಬವನ್ನು ನಾಶ ಮಾಡಿದಂತೆಯೇ ನಾಶವಾಗಲಿ ಎಂದು ಅಲ್ಲಾಹನನ್ನು ಬೇಡಿಕೊಳ್ಳುತ್ತೇನೆ” ಎಂಬ ಮಾತು ಇತ್ತು. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ ಮತ್ತು ಇನ್ನೊಬ್ಬರು ವಿರುದ್ಧ ಪಂಕಜ್ ಬೂತಾಲಿಯ ಮತ್ತು ಇನ್ನೊಬ್ಬರು (2016) ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ತೀರ್ಪು ನೀಡಿ, ಈ ಹೇಳಿಕೆಯನ್ನು ಸೆನ್ಸಾರ್ ಮಂಡಳಿ ಮತ್ತು ಮೇಲ್ಮನವಿ ಪ್ರಾಧಿಕಾರ ಕಿತ್ತುಹಾಕಿದ್ದು ತಪ್ಪು ಎಂದು ತೀರ್ಪು ನೀಡಿತ್ತು.

The Textures of Loss ಸಿನಿಮಾದ ದೃಶ್ಯ

ಕಾನೂನು ಪ್ರಕಾರ ರಾಷ್ಟ್ರದ್ರೋಹಿ ಯಾರು?

ಉದ್ಯಮಿ ರಾಹುಲ್ ಬಜಾಜ್ ಅವರು ಸರಕಾರದ ವಿರುದ್ಧ ಮಾತನಾಡಲು ಜನರು ಹೆದರುತ್ತಿದ್ದಾರೆ ಎಂದು ಹೇಳಿದಾಗ, “ಅವರು ತಮ್ಮ ಸ್ವಂತ ಅಭಿಪ್ರಾಯವನ್ನು ಸ್ವಲಾಭಕ್ಕಾಗಿ ಹರಡುತ್ತಿದ್ದಾರೆ. ಇದರಿಂದ ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಯಾಗಬಹುದು” ಎಂದು ಟೀಕಿಸಲಾಗಿತ್ತು. ಮೊತ್ತಮೊದಲಾಗಿ ಪ್ರಶ್ನೆಯೆಂದರೆ, ಯಾರು ರಾಷ್ಟ್ರೀಯ ಹಿತಾಸಕ್ತಿಯ ವ್ಯಾಖ್ಯಾನ ಮಾಡಿದ್ದಾರೆ ಮತ್ತದು ಎಲ್ಲಿದೆ? ರಾಷ್ಟ್ರೀಯ ಹಿತಾಸಕ್ತಿಯನ್ನು ವ್ಯಾಖ್ಯಾನ ಮಾಡುವುದು ತನ್ನ ಏಕಸ್ವಾಮ್ಯ ಹಕ್ಕು ಎಂದು ಈಗ ಅಧಿಕಾರ ಹಿಡಿದಿರುವ ಪಕ್ಷ ಹೇಳಲು ಬಯಸುತ್ತದೆಯೇ? ಯಾರು ಬೇಕಾದರೂ ತನ್ನ ಸ್ವಂತ ಅಭಿಪ್ರಾಯವನ್ನು ಹರಡಬಹುದು ಮತ್ತು ಅದರಿಂದ ಸ್ವಲಾಭವಾದರೆ ಅದು ಅವರ ತಪ್ಪಲ್ಲ. ಅದಲ್ಲದೇ, ವಾಟ್ಸಾಪ್ ಯುನಿವರ್ಸಿಟಿ ಮಾತ್ರ ತನ್ನ ಅಭಿಪ್ರಾಯಗಳನ್ನು ಹರಡಬಹುದು ಮತ್ತು ಅದರಿಂದ ಸ್ವಲಾಭ ಪಡೆಯಬಹುದು ಎಂದು ಹೇಳುವ ಯಾವುದೇ ಕಾನೂನು ಇಲ್ಲ.

ರಾಹುಲ್ ಬಜಾಜ್

ಪ್ರಿಯಾ ಪರಮೇಶ್ವರನ್ ಪಿಳ್ಳೈ ವಿರುದ್ಧ ಭಾರತ ಸರಕಾರ ಮತ್ತು ಇತರರು (2015) ಪ್ರಕರಣದಲ್ಲಿ, ಆದಿವಾಸಿಗಳ ಜೊತೆಗೆ ಕೆಲಸ ಮಾಡುವ ಪ್ರಿಯಾ ವಿರುದ್ಧ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದಲ್ಲಿ ಹುಡುಕಾಟದ ಸುತ್ತೋಲೆ (ಲುಕ್‌ಔಟ್ ಸರ್ಕ್ಯೂಲರ್ ಅಥವಾ ಎಲ್‌ಓಸಿ) ಹೊರಡಿಸಲಾಗಿತ್ತು. ಒಂದು ನಿರ್ದಿಷ್ಟ ಜನ ವಿಭಾಗದ ಅಭಿಪ್ರಾಯಗಳನ್ನು ಸಮರ್ಥಿಸುವುದನ್ನು ರಾಷ್ಟ್ರವಿರೋಧಿ ಅಥವಾ ಜನಸಾಮಾನ್ಯರಲ್ಲಿ ಅಸಮಾಧಾನ ಹರಡುವುದು ಎಂದು ಪರಿಗಣಿಸಲಾಗದು ಎಂದು ದಿಲ್ಲಿ ಹೈಕೋರ್ಟ್ ಈ ಪ್ರಕರಣದಲ್ಲಿ ತೀರ್ಪು ನೀಡಿತ್ತು.

ನ್ಯಾಯಾಲಯವು ಹೇಳಿದ ಇತರ ಮುಖ್ಯ ಅಂಶಗಳೆಂದರೆ, “ರಾಷ್ಟ್ರವಿರೋಧಿ” ಅಥವಾ “ರಾಷ್ಟ್ರೀಯ ಹಿತಾಸಕ್ತಿ” ಎಂಬ ಅಭಿವ್ಯಕ್ತಿಯನ್ನು ಸಂವಿಧಾನದ ವಿಧಿ 19(2)ರಲ್ಲಿ ಎಲ್ಲಿಯೂ ಬಳಸಲಾಗಿಲ್ಲ. ಆದುದರಿಂದ, ಪೊಲೀಸರು “ರಾಷ್ಟ್ರ ವಿರೋಧಿ ಶಕ್ತಿಗಳು” ಇತ್ಯಾದಿಗಳನ್ನು “ಹೆಚ್ಚಿನ ರಾಷ್ಟ್ರೀಯ ಹಿತಾಸಕ್ತಿ” ಇತ್ಯಾದಿಗಳನ್ನು ಉಲ್ಲೇಖಿಸಿ ಹೊರಡಿಸಿದ ಎಲ್‌ಓಸಿಯಂತಹ ಕಚೇರಿ ಸುತ್ತೋಲೆಗಳು ಸಂವಿಧಾನದ ವಿಧಿ 19(2) ಅಡಿಯಲ್ಲಿ ಯಾವುದೇ ರೀತಿಯಲ್ಲಿ “ಸಮಂಜಸ ಪ್ರತಿಬಂಧ” ಆಗುವುದಿಲ್ಲ ಎಂದು ಹೇಳಿದೆ.

ನ್ಯಾಯಾಲಯವು ಇನ್ನೂ ಮುಂದುವರಿದು, ದೇಶದ ಸಂಪ್ರದಾಯ, ಪರಂಪರೆ, ನಡೆನುಡಿ ಇತ್ಯಾದಿಗಳ ಬಗ್ಗೆ ವಿರುದ್ಧಾಭಿಪ್ರಾಯಗಳನ್ನು ಹೊಂದಿರುವ ಜನವರ್ಗವನ್ನು ರಾಷ್ಟ್ರವಿರೋಧಿಗಳು ಎಂದು ಕರೆಯಲಾಗದು ಎಂದು ಹೇಳಿದೆ.

ಯಾರ ಮೇಲಾದರೂ ರಾಷ್ಟ್ರದ್ರೋಹದ ಆರೋಪ ಹೊರಿಸಬೇಕಿದ್ದರೆ, ಸಂವಿಧಾನದ ವಿಧಿ 19(2) ವಿಧಿಸಿರುವಂತೆ ರಾಷ್ಟ್ರದ ಭದ್ರತೆಯೊಂದಿಗೆ ನಿಕಟ ಸಂಬಂಧ ಹೊಂದಿರಬೇಕು. ಈ ರಾಷ್ಟ್ರೀಯ ಭದ್ರತೆ ಎಂದರೆ ಏನು?

ರಾಷ್ಟ್ರೀಯ ಭದ್ರತೆ ಎಂಬುದನ್ನು ರೊಮೇಶ್ ಥಾಪರ್ ವಿರುದ್ಧ ಮದ್ರಾಸ್ ಸರಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ವ್ಯಕ್ತವಾಗಿದೆ. “ಅತಿರೇಕದ ಪೂರ್ವಗ್ರಹಪೀಡಿತ ಚಟುವಟಿಕೆಗಳು” ಸರಕಾರದ ಬುಡಕ್ಕೇ ನೀರು ತಂದರೆ, ನಾಗರಿಕರ ದೇಹ ಮತ್ತು ಜೀವಕ್ಕೆ ಬೆದರಿಕೆ ಒಡ್ಡಿದರೆ, ಆತ ರಾಷ್ಟ್ರ ದ್ರೋಹಿಯಾಗುತ್ತಾನೆ.


ಇದನ್ನೂ ಓದಿ: ವಿರೋಧಿಗಳ ದಮನಕ್ಕೆ ರಾಷ್ಟ್ರದ್ರೋಹ ಕಾಯಿದೆ ದುರ್ಬಳಕೆಯಾಗುತ್ತಿದೆ: ಮಾಜಿ ಐಪಿಎಸ್ ಎನ್.ಸಿ.ಅಸ್ತಾನ


ಅರ್ಥವಿಷ್ಟೇ! ಯಾವುದೇ ಸರಕಾರಕ್ಕೆ ಅಧಿಕಾರ ಕೊಟ್ಟರೆ ಭಾರತೀಯ ಪ್ರಜೆಗಳನ್ನು ಬ್ರಿಟಿಷರಂತೆಯೇ ದಮನಿಸಬಹುದು ಎಂಬುದು. ಎಲ್ಲಾ ಸರಕಾರಗಳು ತನ್ನ- ಆದರೆ ದೇಶದ ಅಲ್ಲ- ಮಾತನಾಡುವವರನ್ನು ದೇಳಶದ್ರೋಹಿ ಎಂದು ಕರೆಯುತ್ತವೆ. ಇದರಿಂದ ನಮ್ಮದೇ ಸಂವಿಧಾನ, ಕಾನೂನು ಮತ್ತು ನ್ಯಾಯಾಲಯಗಳು ಅಂತರರಾಷ್ಟ್ರೀಯವಾಗಿ ನಗೆಪಾಟಲಾಗಿ, ನಾವು ಭಾರತೀಯರು ಅವಮಾನಕ್ಕೀಡಾಗುತ್ತೇವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...