Homeಮುಖಪುಟಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?

ಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?

- Advertisement -
- Advertisement -

“ಮತ್ತು ಒಮ್ಮೆ ಬಿರುಗಾಳಿ ಮುಗಿದ ನಂತರ, ನೀವು ಅದನ್ನು ಹೇಗೆ ನಿಭಾಯಿಸಿದಿರಿ, ಹೇಗೆ ಬದುಕುಳಿಯಲು ಸಾಧ್ಯವಾಯಿತು ಎಂದು ನಿಮಗೆ ನೆನಪು ಬರುವುದಿಲ್ಲ. ಬಿರುಗಾಳಿ ನಿಜವಾಗಿಯೂ ಸ್ತಬ್ಧವಾಗಿದೆ ಎಂಬುದರ ಬಗ್ಗೆ ನಿಮಗೆ ಖಚಿತವಾಗಿ ಏನೂ ತಿಳಿಯುವುದಿಲ್ಲ. ಆದರೆ ಖಚಿತವಾದ ಒಂದು ವಿಷಯವೇನೆಂದರೆ ನೀವು ಬಿರುಗಾಳಿಯ ಬಿರುಸಿನಿಂದ ಹೊರಬಂದಾಗ ನೀವು ಮುಂಚೆ ಇದ್ದ ವ್ಯಕ್ತಿಯಾಗಿರುವುದಿಲ್ಲ. ಇದೇ ಬಿರುಗಾಳಿಯ ನಿಜವಾದ ಮುಖ.”

-ಹರುಕಿ ಮುರಕಾಮಿ, ಕಾಫ್ಕಾ ಆನ್ ದಿ ಶೋರ್

ಇಂಗ್ಲೀಷ್ ಮೂಲಮಾಧುರಿಲತಾ ಬಸು ಮತ್ತು ಸಿಬಾಜಿ ಪ್ರತಿಮ್ ಬಸು  (‘ಬಾರ್ಡರ್ಸ್ ಆಫ್ ಆನ್ ಎಪಿಡಮಿಕ್’ ಇಂಗ್ಲೀಷ್ ಪುಸ್ತಕದಿಂದ)
ಕನ್ನಡಕ್ಕೆ – ವಿಜಯಕುಮಾರ್ ಎಂ. ಬೋರಟ್ಟಿ

ಕೊರೊನಾ ಸಮಯದಲ್ಲಿ
ನೋಟ್ ಬ್ಯಾನ್ ಮತ್ತು ಮೋದಿ

ಭಾರತದ ಪ್ರಧಾನ ಮಂತ್ರಿ ಆ ದಿನ ಸಂಜೆಯ ಮತ್ತು ಮಧ್ಯ ರಾತ್ರಿಯ ಪ್ರಕಟಣೆಗಳ ಪರಿಣಾಮಗಳನ್ನು ನಾವು ಊಹಿಸಲು ಮಾತ್ರ ಸಾಧ್ಯ. ನವೆಂಬರ್ 8, 2016 ರಂದು ನೋಟು ಅಮಾನ್ಯೀಕರಣದ ಪ್ರಕಟನೆಯ ಶುರುವಿನಲ್ಲಿ ಅವರು ಮಾಡಿದ ‘ಮಿತ್ರೋಂ’ ಎಂಬ ಪ್ರಸಿದ್ಧ ಭಾಷಣ, ಅಥವಾ 30 ಜೂನ್/1 ಜುಲೈ 2017 ರ ಮಧ್ಯರಾತ್ರಿಯಲ್ಲಿ ಜಿ.ಎಸ್.ಟಿ.ಯನ್ನು ಪ್ರಾರಂಭಿಸುವ ಮೊದಲು ಆಡಿದ ಮಾತುಗಳು ನಿಮಗೆ ಜ್ಙಾಪಕವಿದೆಯೇ? ಈಗ ಮಾರ್ಚ್ 24 ರಂದು ಕೋವಿಡ್-19 ರೋಗವನ್ನು ಎದುರಿಸಲು 21 ದಿನಗಳ ಲಾಕ್‌ಡೌನ್ ಸಂಜೆ ಪ್ರಕಟಿಸಿದ್ದು, ಅದನ್ನು ಕೂಡ ಮಧ್ಯರಾತ್ರಿಯ ನಂತರವೇ ಜಾರಿಗೆ ತಂದದ್ದು. ಸ್ವಾತಂತ್ರ್ಯದ ಮುನ್ನಾದಿನದಂದು ಜವಹರ ಲಾಲ್ ನೆಹರು (ಪ್ರಧಾನ ಮಂತ್ರಿಯ ‘ಆತ್ಮೀಯ ಶತ್ರು ಅಥವಾ ಬಹುಶಃ ಆಲ್ಟರ್-ಅಹಂ) ರವರ ‘ಮಿಡ್ನೈಟ್ ಸ್ಪೀಚ್’ನ ಸ್ಮರಣೆ ಪ್ರಧಾನ ಮಂತ್ರಿಯನ್ನು ಕಾಡುತ್ತಿರಬಹುದು. ಹಾಗಾಗಿ ಮಾರ್ಚ್ 24-25 ರ ಮಧ್ಯರಾತ್ರಿಯಿಂದ ಲಾಕ್-ಡೌನ್ ಅನ್ನು ದೇಶದಾದ್ಯಂತ ಕಾರ್ಯಗತಗೊಳಿಸಲಾಯಿತು.ದೇಶದಾದ್ಯಂತ ಲಕ್ಷಾಂತರ ಜನರಿಗೆ, ರಾಜ್ಯ ಸರ್ಕಾರಗಳಿಗೆ ಮತ್ತು ಈ ಸಾಂಕ್ರಮಿಕ ರೋಗವನ್ನು ಧೈರ್ಯದಿಂದ ಮುಂಚೂಣಿಯಲ್ಲಿ ಎದುರಿಸುತ್ತಿರುವ ಆರೋಗ್ಯ ಇಲಾಖೆಯ ಆಡಳಿತಗಳಿಗೆ ಕನಿಷ್ಠ ಸಿದ್ಧತೆಗಾಗಿ ಸ್ವಲ್ಪ ಮಟ್ಟಿನ ಸಮಯವಕಾಶವನ್ನೂ ನೀಡದೆ ಲಾಕ್-ಡೌನ್ ಪ್ರಕಟಣೆಯನ್ನು ಮಾಡಲಾಯಿತು. ಸರ್ಕಾರವು ಕೂಡ ಯಾವುದೇ ತರದ ತಯಾರಿಯನ್ನು ಮಾಡಿಕೊಂಡಿದ್ದರ ಬಗ್ಗೆ ಕಂಡುಬರಲಿಲ್ಲ. ಮೊದಲ ವಾರದಲ್ಲಿ ಈ ದೇಶದ ಬಡ ಜನರು, ನಿರ್ಗತಿಕರು ಮತ್ತು ಕೂಲಿ-ಕಾರ್ಮಿಕರು ಅನುಭವಿಸಿದ ಅನುಭವಗಳು ಒಂದು ದುಸ್ವಪ್ನದ ಹಾಗೆ ಗೋಚರಿಸಿವೆ. ಈ ಕೋವಿಡ್ ವೈರಸ್ ಮಾನವನನ್ನು ಮಾತ್ರವಲ್ಲ, ಅವರ ಅಸ್ತಿತ್ವವನ್ನು ಅಲುಗಾಡಿಸಿದೆ.

ವಲಸೆ ಕಾರ್ಮಿಕರ ನಡೆ

ಉದಾಹರಣೆಗೆ ವಲಸೆ ಕಾರ್ಮಿಕರ ಪ್ರಕರಣವನ್ನು ತೆಗೆದುಕೊಳ್ಳೊಣ. “ಅಭೂತ ಪೂರ್ವ” ಲಾಕ್‌ಡೌನ್‌ನ ಆತುರದ ಘೋಷಣೆಯು ನೂರಾರು ಮಿಲಿಯನ್ ಭಾರತೀಯರಿಗೆ ಮಾನಸಿಕವಾಗಿ ಅಥವಾ ಭೌತಿಕವಾಗಿ ತಯಾರಾಗಲು ಕೇವಲ ನಾಲ್ಕು ಗಂಟೆಗಳಿಗಿಂತ ಕಡಿಮೆ ಸಮಯವನ್ನು ನಿಗದಿಪಡಿಸಿತು. ಈ ಲಾಕ್‌ಡೌನ್‌ ಸಮಯದಲ್ಲಿ ಅಗತ್ಯ ಸೇವೆಗಳು ಮುಂದುವರಿಯಲಿವೆ ಎಂದು ಪ್ರಧಾನಿ ಭಾರತೀಯರಿಗೆ ಭರವಸೆ ನೀಡಿದರೂ ಕೂಡ, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಜನರು ಹೇಗೆ ಖರೀದಿಸಲು ಸಾಧ್ಯ ಎನ್ನುವುದರ ಬಗ್ಗೆ ಚಕಾರ ಎತ್ತಲೇ ಇಲ್ಲ. ಇದರ ಪರಿಣಾಮವೇನಾಯಿತೆಂದರೆ, ಸುಗ್ರೀವಾಜ್ಞೆ ಜಾರಿಗೆ ಬರುವ ಮೊದಲೇ ಜನರು ಅಂಗಡಿಗಳಿಗೆ ತಂಡೋಪತಂಡವಾಗಿ, ಲಗುಬಗೆಯಿಂದ ಧಾವಿಸಿದರು. ತಡರಾತ್ರಿ ಅಂಗಡಿಗಳ ಹೊರಗೆ ಜನರು ಸಾಲುಗಟ್ಟಿ ನಿಂತಿದ್ದರಿಂದ ಮತ್ತು ಜನರ ದಟ್ಟಣೆಯಿಂದ ಟ್ರಾಫಿಕ್‌ಗೆ ತೊಂದರೆಯಾಗಿದ್ದು ದೇಶದಾದ್ಯಂತ ಕಂಡು ಬಂದ ದೃಶ್ಯಗಳಾಗಿದ್ದವು.

ಈ ಸಮಸ್ಯೆಗಳ ಬಗ್ಗೆ ಅನೇಕರು ವರದಿಗಳನ್ನು ನೀಡಿದುದು ಎಲ್ಲರಿಗೂ ಗೊತ್ತಿರುವ ವಿಷಯವೆ ಸರಿ. ಭೀತಿ, ಕೊರತೆ, ಆತಂಕ ಮತ್ತು ಅನಿಶ್ಚಿತತೆಯ ಈ ಪರಿಸ್ಥಿತಿಯಲ್ಲಿ ಲಾಕ್‌ಡೌನ್ ಭಾರಿ ಪ್ರಮಾಣದಲ್ಲಿ ದೊಡ್ಡ , ದೊಡ್ಡ ನಗರಗಳಿಂದ ಕೂಲಿ ಕಾರ್ಮಿಕರು ದೂರದಲ್ಲಿರುವ ತಮ್ಮ ತಮ್ಮ ಊರುಗಳಿಗೆ ಅಥವಾ ಹಳ್ಳಿಗಳಿಗೆ ವಲಸೆ ಹೋಗುವಂತೆ ಪ್ರಚೋದಿಸಿದೆ. ಕರ್ಫ್ಯೂ / ಲಾಕ್‌ಡೌನನ್ನು ಧಿಕ್ಕರಿಸಿ, ವಲಸೆ ಕಾರ್ಮಿಕರು ತಮ್ಮ ಉಳಿವಿಗಾಗಿ, ಕನಿಷ್ಠ , ಮೂಲಭೂತ ಅಗತ್ಯತೆಗಳಿಲ್ಲದೆ ದೆಹಲಿಯಿಂದ ವಲಸೆ ಹೋಗುವಂತೆ ಆಯಿತು. ಜೊತೆಗೆ ಹಲವಾರು ರಾಜ್ಯಗಳ ರಾಜಧಾನಿಯಲ್ಲಿ ಕೂಲಿ-ನಾಲಿಗಳನ್ನು ಮಾಡುತಿದ್ದ ಕಾರ್ಮಿಕರು ತಮ್ಮ ದೂರದ ಮನೆಗೆ ಹಿಂದಿರುಗಲು ಹೆದ್ದಾರಿಗಳಲ್ಲಿ ಮೈಲಿಗಳಷ್ಟು ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಅನೇಕ ಕಡೆ ಕಂಡು ಬಂದವು (ಕೆಲವರು 900 ಕಿಲೋಮೀಟರ್‌ಗಳವರೆಗೆ ನಡೆದು ಹೋದ ಉದಾಹರಣೆಗಳಿವೆ).

ಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?
ವಲಸೆ ಹೋಗುತ್ತಿರುವ ಕಾರ್ಮಿಕರು

ಈ ಬಡ ವಲಸಿಗರಲ್ಲಿ ಹೆಚ್ಚಿನವರು ದೈನಂದಿನ ಕೂಲಿ ಕಾರ್ಮಿಕರಾಗಿದ್ದು, ದಿನನಿತ್ಯದ ಯಾವುದೇ ವ್ಯವಹಾರಗಳು ಮತ್ತು ವಾಣಿಜ್ಯ ಸಂಸ್ಥೆಗಳು ಸ್ಥಗಿತಗೊಂಡಿರುವುದರಿಂದ ಇವರೆಲ್ಲರು ಈಗ ಕೆಲಸವಿಲ್ಲದೆ ಹೊರಗುಳಿದಿದ್ದಾರೆ. ಹಣ ಮತ್ತು ಉದ್ಯೋಗಗಳಿಲ್ಲದೆ, ಯಾವುದೇ ಆಹಾರ, ಹಣದ ಉಳಿತಾಯ, ಅಥವಾ ಆಶ್ರಯವಿಲ್ಲದೆ ಇರುವುದರಿಂದ ಅವರು ತಮ್ಮ ತಮ್ಮ ಗ್ರಾಮಗಳನ್ನು ತಲುಪಲಾಗದೆ ಹತಾಶರಾಗಿದ್ದಾರೆ.

“ಭಾರತದ ಬಡವರ ಉಳಿಯುವ ಶಕ್ತಿ ಬಹಳ ಕಡಿಮೆ. ಸಾಮಾನ್ಯ ಕಾರ್ಮಿಕರು, ರಿಕ್ಷಾ ಎಳೆಯುವವರು ಮತ್ತು ವಲಸೆ ಕಾರ್ಮಿಕರಂತಹ ಜನರು ಮೂಲತಃ ಕೈಯಿಂದ ಬಾಯಿಗೆ ಆಗುವಷ್ಟು ಮಾತ್ರ ಗಳಿಸಿ ಬದುಕುವಂತವರು” ಎಂದು ಎನ್‌ಪಿಆರ್‌ಗೆ ನೀಡಿದ ಟೆಲಿಫೋನಿಕ್ ಸಂದರ್ಶನದಲ್ಲಿ ಜೀನ್ ಡ್ರೆಜ್ ಹೇಳಿದ್ದಾರೆ. ಮುಂದುವರೆಯುತ್ತಾ ಅವರು ಹೇಳುವುದೇನೆಂದರೆ “ಈಗ ಇದ್ದಕ್ಕಿದ್ದಂತೆ ರಾತ್ರಿಯಿಡೀ ಅವರು ತಮ್ಮ ಮನೆಗಳ ಒಳಗೆ 21 ದಿನಗಳನ್ನು ಕಳೆಯಬೇಕಾಗಿದೆ ಎಂದು ಹೇಳಲಾಗುತ್ತಿದೆ? ಅವರಲ್ಲಿ ಹಲವರು ಈಗಾಗಲೇ ಆಹಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ”.

ಲಾಕ್‌ಡೌನ್ ನಿಂದ ರೈಲ್ವೆ ಮತ್ತು ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ, ತಮ್ಮ ಬಟ್ಟೆ-ಬರೆಗಳನ್ನು ಗಂಟು-ಮೂಟೆ ಕಟ್ಟಿ ತಮ್ಮ, ತಮ್ಮ ಮನೆಗಳಿಗೆ ಹಿಂದಿರುಗದೆ ಬೇರೆ ಗತ್ಯಂತರವಿಲ್ಲದಂತೆ ಆಗಿದೆ. ಅವರಿಗೆ ಇರುವ ಆಯ್ಕೆಗಳು ಬಹಳ ಕಡಿಮೆ. ಲಾಕ್‌ಡೌನ್ ಮಧ್ಯೆ ಸಾಮಾಜಿಕ-ಅಂತರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕರನ್ನು ಪೊಲೀಸರು ಲಾಠಿಯ ರುಚಿ ತೋರಿಸಿ, ಗಡಿ ದಾಟದಂತೆ ವಾಪಸ್ ಕಳುಹಿಸುತ್ತಿದ್ದಾರೆ. ತಮ್ಮ ಊರುಗಳಿಗೆ ನಡೆದುಕೊಂಡು ಹೋಗುತ್ತಿದ್ದ ಅನೇಕರು ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.

ಇಲ್ಲಿಯವರೆಗೆ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಎಂಬ ಅಂದಾಜು ಇದೆ. ದಾರಿಗುಂಟ ಊಟ, ಆಹಾರ ಮತ್ತು ನೀರಿಲ್ಲದೆ ಅನೇಕರು ನಡೆದುಕೊಂಡು ಹೋಗುತ್ತಿದ್ದಾರೆ. ಇನ್ನು ಕೆಲವರು ಪೊಲೀಸ್ ದೌರ್ಜನ್ಯವನ್ನು ಎದುರಿಸಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಸೂರತ್ತಿನಲ್ಲಿ ವಲಸೆ ಕಾರ್ಮಿಕರನ್ನು ಪೊಲೀಸರು ಟೀಯರ್ ಗ್ಯಾಸನ್ನು ಬಳಸಿ ಹತ್ತಿಕ್ಕಿದ್ದು ಮತ್ತು ಬಂಧಿಸಿದ್ದು. ಉತ್ತರಪ್ರದೇಶದಲ್ಲಿ ಹಿಂತಿರುಗುತ್ತಿದ್ದ ಕಾರ್ಮಿಕರ ಮೇಲೆ ವೈರಸನ್ನು ಸಾಯಿಸುವ ನೆಪದಿಂದ ಬ್ಲೀಚ್‌ನಂತಹ ಔಷಧಿಗಳನ್ನು ಸಿಂಪಡಿಸಿದ ಅತಿಮಾನುಷ ಕೃತ್ಯವು ಪೋಲಿಸರಿಂದ ನಡೆಯಿತು.

ಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?
ರೈಲು ಹರಿದು ವಲಸೆ ಕಾರ್ಮಿಕರ ಸಾವು

ಮಾನವೀಯ ಬಿಕ್ಕಟ್ಟು ಉಲ್ಪಣವಾಗುತ್ತಿದ್ದಂತೆ, ವಲಸೆ ಕಾರ್ಮಿಕರ ಭೀಕರ ಅವಸ್ಥೆ ಮುಂದುವರೆದಿದೆ. ಮಾಧ್ಯಮಗಳು ಮತ್ತು ನಾಗರಿಕ ಸಮಾಜವು ಈ ಸಮಸ್ಯೆಯ ವಿರುದ್ಧ ದನಿ ಎತ್ತಿದ್ದರಿಂದ ಅಂತಿಮವಾಗಿ ವಲಸಿಗರನ್ನು ತಮ್ಮ ಗ್ರಾಮಗಳಿಗೆ ಕರೆದೊಯ್ಯಲು ಬಸ್‌ಗಳ ವ್ಯವಸ್ಥೆ ಮಾಡಲಾಯಿತು. ಏತನ್ಮಧ್ಯೆ, ಈಗ ಇದ್ದಕ್ಕಿದ್ದಂತೆ ಗೋಚರಿಸುವ ವಲಸಿಗರಿಗೆ ಪಡಿತರ ಮತ್ತು ಆಶ್ರಯವನ್ನು ಒದಗಿಸಲು ರಾಜ್ಯ ಸರ್ಕಾರಗಳು ಸ್ಥಳೀಯ ಸಮುದಾಯಗಳ ಸಹಭಾಗಿತ್ವದಲ್ಲಿ ಹೆಣಗಾಡುತ್ತಿವೆ. ಈ ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸದೆ ಇರುವುದರಿಂದ ಬಡವರು ನಗರಗಳಲ್ಲಿ ಕೆಲಸ ಹುಡುಕಿಕೊಂಡು ಹೋಗುವ ಅಥವಾ ಕೆಲಸ ಮಾಡುವ ಅನಿವಾರ್ಯಯನ್ನು ತೀರ್ವವಾಗಿ ಕ್ಷೀಣಿಸುವಂತೆ ಮಾಡಿದೆ.

ಜನಗಣತಿ ಮತ್ತು ರಾಷ್ಟ್ರೀಯ ಮಾದರಿ ಸಮೀಕ್ಷೆಯ ನಿರ್ವಾಹಕರ ದೃಷ್ಟಿಯಲ್ಲಿ ಸದಾ ಅಗೋಚರವಾಗಿರುವ ಈ ಕೂಲಿ-ಕಾರ್ಮಿಕ ವಲಸಿಗರು ಭಾರತದ ನಗರ-ಪಟ್ಟಣಗಳ ಕರಾಳ ನಿರಾಶಾದಾಯಕ ವಾಸ್ತವತೆಯನ್ನು ದಟ್ಟವಾಗಿ ತೋರಿಸುತ್ತಿದ್ದಾರೆ. ಇವರು ಕಡಿಮೆ ಸಂಬಳ ಮತ್ತು ಅನೌಪಚಾರಿಕ ಮಾರುಕಟ್ಟೆ ಉದ್ಯೋಗಗಳಾದ ಕಟ್ಟಡ ನಿರ್ಮಾಣ, ಹೋಟೆಲ್‌ಗಳು, ಜವಳಿ, ಉತ್ಪಾದನೆ, ಸಾರಿಗೆ, ಇತರ ಸೇವೆಗಳು ಮತ್ತು ದೇಶೀಯ ಸ್ಥರದ ಕ್ಷೇತ್ರಗಳಲ್ಲಿ ಹೆಚ್ಚಾಗಿ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರು ಅತ್ಯಂತ ಕಡಿಮೆ ವಯಸ್ಸಿನಲ್ಲಿ ಉದ್ಯೋಗ ಮಾರುಕಟ್ಟೆಗೆ ಪ್ರವೇಶ ಮಾಡುವದರಿಂದ ಮತ್ತು ಅವರಲ್ಲಿ ಉದ್ಯೋಗ ಕುಶಲತೆ ಕಡಿಮೆ ಇರುವುದರಿಂದ ಅವರು ಜೀವನದಲ್ಲಿ ಮೇಲ್ಮುಖ ಚಲನಶೀಲತೆಯನ್ನು ಹೊಂದುವ ಸಾಧ್ಯತೆ ಬಹಳ ಕಡಿಮೆ. ಅವರು ಪ್ರಸ್ತುತದಲ್ಲಿ ಮಾಡುವ ಕೆಲಸ-ಕಾರ್ಯಗಳಲ್ಲೇ (ಅಂದರೆ ಕೌಶಲ್ಯರಹಿತ ಮತ್ತು ಕಡಿಮೆ ಸಂಬಳ) ಸದಾ ಕಾಲ ಸಿಲುಕಿಕೊಳ್ಳುವ ಹಾಗೆ ಆಗುತ್ತದೆ.

11 ಮತ್ತು 12 ನೇ ಪಂಚವಾರ್ಷಿಕ ಯೋಜನೆಗಳಲ್ಲಿ ನಗರ ಸೌಕರ್ಯಕ್ಕಾಗಿ ಮತ್ತು ಮೂಲಭೂತ ಸವಲತ್ತುಗಳಿಗಾಗಿ ಮುಡಿಪಾಗಿರುವ ಯೋಜನೆಗಳನ್ನು ಪರಿಗಣಿಸುವುದಾದರೆ ಆಂತರಿಕ ವಲಸೆ-ನಿರತ ಜನಸಂಖ್ಯೆಯನ್ನು ಸರ್ಕಾರ ನಿರ್ಲಕ್ಷಿಸುವುದು ಬಾಲಿಶ ಮತ್ತು ಉದಾಸೀನತೆಯನ್ನು ಪ್ರದರ್ಶಿಸುತ್ತದೆ. ಈ ಮೂಲ ಸೌಕರ್ಯಗಳು ಆಶ್ರಯ, ಜಲ, ನೈರ್ಮಲ್ಯ, ಶೌಚಾಲಯಗಳು, ರಸ್ತೆಗಳನ್ನು ಒಳಗೊಂಡಿವೆ. ಆದಾಗ್ಯು ಈ ಮೂಲಸೌಕರ್ಯ ಸೌಲಭ್ಯಗಳು ಮತ್ತು ಪ್ರಯೋಜನಗಳು ಸ್ಪಷ್ಟವಾಗಿ ವಲಸೆಗಾರರು ಮತ್ತು ಇತರ ಕೂಲಿ-ಕಾರ್ಮಿಕರನ್ನು ತಲುಪುತ್ತಿಲ್ಲ. ಇದಕ್ಕೆ ಕಾರಣ ಆಡಳಿತಶಾಹಿಯ ನಿರಾಸಕ್ತಿ, ಅಸಮರ್ಪಕತೆ ಅಥವಾ ನೀತಿ ನಿರೂಪಕರ ದೃಷ್ಟಿದೋಷಗಳು ಕಾರಣ ಎಂದು ದೂಷಿಸಬಹುದು.

ಈಗಿರುವ ಅವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸಲು, ವಲಸೆಯನ್ನು ಹೆಚ್ಚಾಗಿ ‘ದೇಸಿ’ ರಾಜಕೀಯದ ಭಾಗವಾಗಿ ಪರಿಗಣಿಸಲಾಗುತ್ತದೆ. ಆಂತರಿಕ ವಲಸೆಯನ್ನು ಆಗಾಗ್ಗೆ ಭಾರತದಾದ್ಯಂತದ ನಡೆಯುವ ವಲಸೆ-ವಿರೋಧಿ ರಾಜಕಾರಣದೊಂದಿಗೆ ತಳಕು ಹಾಕಲಾಗುತ್ತದೆ (ಶಿವಸೇನೆ ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನಾದಂತಹ ರಾಜಕೀಯ ಪಕ್ಷಗಳು ವಲಸೆ-ವಿರೋಧಿ ರಾಜಕಾರಣದ ಮೇಲೆ ತಮ್ಮ ಅಸ್ತಿತ್ವಕ್ಕಾಗಿ ಅವಲಂಬಿತವಾಗಿರುತ್ತವೆ). ಇಂತಹ ರಾಜಕೀಯ ಪಕ್ಷಗಳು ನೇಟಿವಿಸ್ಟ್ ಭಾವನೆಗಳನ್ನು ಪ್ರೋತ್ಸಾಹಿಸುತ್ತವೆ. ಇಷ್ಟೇ ಅಲ್ಲದೆ ಇಂತಹ ಭಾವನೆಯನ್ನು ಹಾರೈಸಲು ಅಥವಾ ಪೂರೈಸಲು ಮತ್ತಷ್ಟು ರಾಜಕೀಯ ಪಕ್ಷಗಳ ಜನ್ಮ ತಾಳುತ್ತವೆ.

ಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?
ಬಜಾವೋ ಪುಂಗಿ ಹಟಾವೋ ಲುಂಗಿ ಸಭೆಯಲ್ಲಿ ಠಾಕ್ರೆ

ವಲಸೆ ಕಾರ್ಮಿಕರ ಬಗ್ಗೆ ರಾಜ್ಯ ಆಡಳಿತ ವರ್ಗಗಳ ಪಾತ್ರ ಮತ್ತು ಧೋರಣೆಯನ್ನು ಇತ್ತೀಚಿನ ಅಂತರರಾಜ್ಯ ವಲಸೆ ನೀತಿ ಸೂಚ್ಯಂಕ 2019 ((IMPEX, 2019) ದಿಂದ ತಿಳಿದುಕೊಳ್ಳಬಹುದು. ಈ ಸೂಚ್ಯಂಕವನ್ನು ಮುಂಬೈ ಮೂಲದ ಲಾಭರಹಿತ ಸಂಸ್ಥೆಯಾದ ಇಂಡಿಯಾ ಮೈಗ್ರೇಶನ್ ನೌ ಸಂಗ್ರಹಿಸಿದೆ. ರಾಜ್ಯದ ಹೊರಗಿನಿಂದ ಬರುವ ವಲಸಿಗರನ್ನು ಆಯಾ ರಾಜ್ಯಗಳಲ್ಲಿ ಹೇಗೆ ಏಕೀಕೃತಗೊಳಿಸಲಾಗುತ್ತದೆಯೆಂದು ರಾಜ್ಯಮಟ್ಟದ ನೀತಿಗಳನ್ನು ಈ ಸಂಸ್ಥೆ ವಿಶ್ಲೇಷಿಸುತ್ತದೆ. ರಾಜ್ಯ ಮಟ್ಟದ ನೀತಿ ನಿರೂಪಕರು ವಲಸಿಗರ ಬಗ್ಗೆ ತಾಳಿರುವ ವ್ಯಾಪಕ ನಿರಾಸಕ್ತಿ, ತಾರತಮ್ಯತೆ ಮತ್ತು ವಲಸಿಗರ ಬಗ್ಗೆ ಸಹಾನುಭೂತಿಯಿಲ್ಲದ ನೀತಿಗಳನ್ನು ರೂಪಿಸಿರುವುದರ ಬಗ್ಗೆ ಅದು ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

“ಬಹುತೇಕ ಎಲ್ಲ ರಾಜ್ಯಗಳು ವಲಸಿಗರ ಅಗತ್ಯತೆಗಳ ಬಗ್ಗೆ ನಿರಾಸಕ್ತಿಯಿಂದ ಕೂಡಿರುತ್ತವೆ. ಈ ಧೋರಣೆಯು ವಲಸಿಗರ ಅಥವಾ ಕೂಲಿ-ಕಾರ್ಮಿಕರ ಉದ್ಯೋಗ, ಶಿಕ್ಷಣ, ಅವರ ಕಲ್ಯಾಣಕ್ಕೆ ಬೇಕಾಗುವ ಅರ್ಹತೆಗಳು, ವಸತಿ, ಆರೋಗ್ಯ ಸೌಲಭ್ಯಗಳು ಮತ್ತು ಮತದಾನದ ಹಕ್ಕುಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ” ಎಂದು ಈ ವರದಿ ತಿಳಿಸುತ್ತದೆ.

“ಆಗಾಗ್ಗೆ, ರಾಜ್ಯಗಳು ವಲಸಿಗರಿಗಾಗಿ ಅನೇಕ ಪ್ರಯೋಜನಾತ್ಮಕ ಯೋಜನೆಗಳು ಮತ್ತು ಸಹಾಯವನ್ನು ರೂಪಿಸಿದ್ದರೂ ಸಹ, ವಲಸಿಗರಿಗೆ ಸಂಬಂಧಿತ ಯೋಜನೆಗಳು ಮತ್ತು ನೀತಿಗಳ ಬಗ್ಗೆ ಅರಿವು ಮೂಡಿಸಲು ಅಥವಾ ಇವುಗಳ ಪ್ರಯೋಜನೆಯನ್ನು ಪಡೆಯಲು ಅನುಕೂಲವಾಗುವಂತಹ ಯಾವುದೇ ಕ್ರಮಗಳನ್ನು ಸರಿಯಾಗಿ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ರಾಜ್ಯಮಟ್ಟದ ಬೆಂಬಲ ಅಥವಾ ಯೊಜನೆಗಳನ್ನು ಈ ವಲಸಿಗರಿಗೆ ತಲುಪುವ ಸಾಧ್ಯತೆಗಳು ಕಡಿಮೆ. ಸ್ಥಳೀಯ ಕಾನೂನು ಜಾರಿ ವಿಭಾಗ ಮತ್ತು ರಾಜಕಾರಣಿಗಳಿಂದ ಆಗಾಗ್ಗೆ ಅವರು ಬಲಿಪಶುಗಳಾಗುತ್ತಾರೆ. ಅವರಿಗೆ ಕಡಿಮೆ ವೇತನ ಕೊಡಲಾಗುತ್ತದೆ; ಅಲ್ಪ ಅರ್ಹತೆಯುಳ್ಳವರನ್ನಾಗಿ ಮಾಡಲಾಗುತ್ತದೆ ಮತ್ತು ಸಂಪೂರ್ಣ ಉತ್ಪಾದಕ ಶಕ್ತಿಯುಳ್ಳವರನ್ನಾಗಿ ಮಾಡುವುದೇ ಇಲ್ಲ”.

ಆರೈಕೆದಾರರ ಬಿಕ್ಕಟ್ಟು

” ಒಬ್ಬ ಜ್ಞಾನೋದಯಕ್ಕೊಳಗಾಗುವುದು ಬೆಳಕಿನ ಆಕೃತಿಯನ್ನು ಕಲ್ಪಿಸಿಕೊಳ್ಳುವುದರ ಮೂಲಕ ಅಲ್ಲ. ಆದರೆ ಕತ್ತಲೆಯನ್ನು ಅಸಂಗತಗೊಳಿಸುವ ಮೂಲಕ.”

-ಕಾರ್ಲ್ ಗುಸ್ತಾವ್ ಜಂಗ್, ದಿ ಫಿಲಾಸಫಿಕಲ್ ಟ್ರೀ (1945).

ಇಡೀ ಪ್ರಪಂಚವು ಕೋವಿಡ್ 19 ರ ವಿರುದ್ಧ ಹೋರಾಡುತ್ತಿರುವ ಜೊತೆಗೆ, ಜನಾಂಗೀಯ ಭೇದ ಮತ್ತು ವರ್ಣ ಭೇದದ ವಿರುದ್ಧವೂ ಕೂಡ ಹೋರಾಡುತ್ತಿದೆ. ಹಳದಿ ಜ್ವರ ಸಾಂಕ್ರಾಮಿಕ ರೋಗ ಅಮೆರಿಕವನ್ನು ಅಪ್ಪಳಿಸಿದಾಗ, ಅಲ್ಲಿ ನೆಲೆಸಿದ್ದ ಯುರೋಪಿಯನ್ ವಲಸಿಗರು ಅಮೆರಿಕದವರಲ್ಲ ‘ಇತರರು’ ಎಂಬ ಕಳಂಕವನ್ನು ಎದುರಿಸಬೇಕಾಯಿತು. ಸಾರ್ಸ್ ರೋಗದ ಸಮಯದಲ್ಲಿ ಚೀನಿಯರು, ಎಬೊಲ ಸಮಯದಲ್ಲಿ ಆಫ್ರಿಕನ್ನರು ಮತ್ತು ಈಗ ಕರೋನಾದ ಸಮಯದಲ್ಲಿ ಮತ್ತೊಮ್ಮೆ ಚೀನೀ ಅಥವಾ ಏಷ್ಯನ್ ವಲಸಿಗರು ಈ ಕಳಂಕವನ್ನು ಎದುರಿಸುತ್ತಿವೆ. ಭಾರತದೊಳಗೆ ಕೂಡ ಮಂಗೋಲಾಯ್ಡ್ ವೈಶಿಷ್ಟ್ಯಗಳನ್ನು ಹೊಂದಿರುವ ಜನರು ಈ ಕಳಂಕವನ್ನು ಎದುರಿಸುತ್ತಿದ್ದಾರೆ.

ಪಶ್ಚಿಮದ ಅಭಿವೃದ್ಧಿ ಹೊಂದಿದ ಅನೇಕ ದೇಶಗಳಲ್ಲಿ ತರಬೇತಿ ಪಡೆದ ದಾದಿಯರ ಪಟ್ಟಿಯಲ್ಲಿ ಫಿಲಿಪಿನೋ ದೇಶದ ದಾದಿಯರು ಅಗ್ರಸ್ಥಾನದಲ್ಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಲಸೆಯ ಹೆಚ್ಚಳಕ್ಕೆ ಆರೋಗ್ಯ ಕಾರ್ಯಕರ್ತರ ಕೊರತೆ ಮತ್ತು ಆರೋಗ್ಯ ಕಾರ್ಯಕರ್ತರ ಅಸಮ ಸಂಖ್ಯೆಯೇ ಕಾರಣವಾಗಿದೆ. ಇದು ವಲಸೆಯ ಸಂಕೀರ್ಣತೆಯನ್ನು ಕೂಡ ಹೆಚ್ಚಿಸಿದೆ. ಉದಾಹರಣೆಗೆ 2016 ರ ಅಂಕಿ ಅಂಶದ ಪ್ರಕಾರ ಅಮೆರಿಕದಲ್ಲಿ ಒಟ್ಟು ನೋಂದಾಯಿತ ದಾದಿಯರಲ್ಲಿ ಮೂವತ್ತು ಪ್ರತಿಶತ ಜನರು ಫಿಲಿಪೈನ್ಸ್‌ನವರಾಗಿದ್ದರೆ, ಭಾರತದಲ್ಲಿ ಅವರ ಸಂಖ್ಯೆ ಆರು ಪ್ರತಿಶತ ಮತ್ತು ನೈಜೀರಿಯಾದಲ್ಲಿ ಐದು ಪ್ರತಿಶತ ಫಿಲಿಪೈನ್ಸ್‌ನವರು. ಯು.ಕೆ. ವಿಷಯದಲ್ಲಿ ಹೇಳುವುದಾದರೆ ಕ್ರಮವಾಗಿ ಫಿಲಿಪೈನ್ಸ್ ಮತ್ತು ಭಾರತ ಮೂಲದ ದಾದಿಯರೇ ಹೆಚ್ಚು. ಫಿಲಿಪೈನ್ಸ್ ಮತ್ತು ಭಾರತ ಒಟ್ಟಾಗಿ ಸುಮಾರು ನಲವತ್ತು ಪ್ರತಿಶತದಷ್ಟು ಪ್ರಮಾಣದಲ್ಲಿ ತರಬೇತಿ ಪಡೆದ ದಾದಿಯರು ಈ ದೇಶದಲ್ಲಿದ್ದಾರೆ. ದಾದಿಯರ ಪರಿಸ್ಥಿತಿ ಈ ದೇಶಗಳಲ್ಲಿ ಅಷ್ಟೇನು ಉತ್ತಮವಾಗಿಲ್ಲ. ಅಂತರಾಷ್ಟ್ರೀಯ ವಲಸೆಯು ಅವರ ಸ್ಥಿತಿಯನ್ನು ಮತ್ತಷ್ಟು ಹದಗೆಡೆಸಿದೆ. ವೈಯಕ್ತಿಕ ಮತ್ತು ವೃತ್ತಿಪರ ಯೋಗಕ್ಷೇಮಕ್ಕಾಗಿ ಇತರ ಪರದೇಶದಲ್ಲಿ ತರಬೇತುಗೊಂಡವರ ಜೊತೆ ಸಂಪರ್ಕ ಏರ್ಪಡಿಸಿಕೊಂಡಾಗ್ಯು ಕೂಡ ಅವರ ಸ್ಥಿತಿ ಅಷ್ಟೇನು ಅನುಕೂಲಕರವಾಗಿ ಬದಲಾಗಿಲ್ಲ.

ಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?
ಅಮೇರಿಕಾ ಅಧ್ಯಕ್ಷ ಕೊರೊನಾವನ್ನು ಚೀನೀ ವೈರಸ್ ಎಂದು ಹೇಳಿದ್ದರು

ಮೊದಲೆ ತಿಳಿಸಿದ ಹಾಗೆ, ಕರೋನಾ ದೆಸೆಯಿಂದ ನಮ್ಮ ಕರಾಳ ವ್ಯಕ್ತಿತ್ವದ ಮುಖಗವಚವನ್ನು ಬಹಿರಂಗಗೊಳಿಸಿದಂತಾಗಿದೆ. ಬಿಬಿಸಿಯ ವರದಿಯಂತೆ ಇತ್ತೀಚೆಗೆ ಇಂಗ್ಲೆಂಡ್‌ನ ಫಿಲಿಪಿನೋ ದಾದಿಯೊಬ್ಬರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಸುತ್ತಿದ್ದಾಗ ಅವಳ ಕಡೆ ಕೆಲವರು ಜನಾಂಗೀಯ ದೃಷ್ಟಿಯಿಂದ ಕೂಗಾಡಿರುವುದು ತಿಳಿದು ಬಂದಿದೆ. ಅವಳ ಮುಖವನ್ನು ನೋಡಿದಾಕ್ಷಣ ಕರೋನ ವೈರಸ್ ಹರಡುವುದನ್ನು ನಿಲ್ಲಿಸುವಂತೆ ಚೀರಲಾಯಿತು. ಮತ್ತೊಂದು ಪ್ರಕರಣದಲ್ಲಿ, ರಾಯಲ್ ಚಿಲ್ಡ್ರನ್ಸ್ ಆಸ್ಪತ್ರೆಯ ಪೋಷಕರು ಏಷ್ಯನ್ ವೈಶಿಷ್ಟ್ಯಗಳನ್ನು ಹೊಂದಿರುವ ವೈದ್ಯರು ಮತ್ತು ದಾದಿಯರು ತಮ್ಮ ಮಕ್ಕಳಿಗೆ ಚಿಕಿತ್ಸೆ ನೀಡುವುದನ್ನು ನಿರಾಕರಿಸಿದ್ದಾರೆ. ಜರ್ಮನಿಯಿಂದ ಬಂದ ವರದಿಗಳ ಪ್ರಕಾರ, ಜರ್ಮನ ರೋಗಿಗಳು ಲಾಬಿಯಲ್ಲಿ ಏಷ್ಯಾದ ಇತರ ರೋಗಿಗಳಿದ್ದರೆ ಅವರ ಜೊತೆ ತಮ್ಮ ಪಾಳೆಗಾಗಿ ಕಾಯಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತದೊಳಗೂ ಕೂಡ ಬೆಂಗಳೂರು, ಕೋಲ್ಕತಾ, ಚೆನ್ನೈ ಮತ್ತು ಇತರ ಹಲವು ಭಾಗಗಳಲ್ಲಿ ಇರುವ ಈಶಾನ್ಯ ರಾಜ್ಯದ ದಾದಿಯರ ಮೇಲೆ ಮಾಡಿದ ಅವಹೇಳನಕಾರಿ ಹೇಳಿಕೆಗಳು ಅಥವಾ ಅವರು ಕೆಲಸ ಮಾಡುವ ನಗರಗಳಲ್ಲಿ ಬಾಡಿಗೆಗೆ ಪಡೆದ ಅಪಾರ್ಟ್ಮೆಂಟ್‌ಗಳನ್ನು ವಿನಾಕಾರಣ ಖಾಲಿ ಮಾಡುವಂತೆ ನೀಡಿದ ಆದೇಶಗಳನ್ನು ನೋಡಿದಾಗ ಮಾನವಕುಲವು ಯಾವ ರೀತಿಯಲ್ಲಿ ತನ್ನ ಕರಾಳ ಮುಖವನ್ನು ಪ್ರದರ್ಶಿಸಬಲ್ಲದು ಎಂದು ಗೋಚರಿಸುತ್ತದೆ. ಆರೋಗ್ಯ ಕಾರ್ಯಕರ್ತರ ಮೇಲೆ ಜನಾಂಗೀಯ ನಿಂದನೆಯ ಮಾತುಗಳು, ಮತೀಯ ಜನಾಧಾರಿತ ಅಂಕಿ-ಅಂಶಗಳ ಸಂಗ್ರಹಣೆ ಮತ್ತು ಅದರೊಟ್ಟಿಗಿರುವ ಕಳಂಕಿತತೆಯು ಪ್ರಸ್ತುತ ಸಮಯದಲ್ಲಿ ದುಃಖಕರವಾದ ಮತ್ತು ಕ್ರೂರತೆಯ ಭಯಂಕರ ನಿದರ್ಶನಗಳಾಗಿವೆ. ಇದು ಸಾಕಾಗುವುದಿಲ್ಲ ಎಂಬಂತೆ, ಮತ್ತೊಂದು ಅಪರಾಧ ಕೃತ್ಯವು ಆರೋಗ್ಯ ಕಾರ್ಯಕರ್ತರನ್ನು ಮತ್ತಷ್ಟು ಅಪಾಯಕ್ಕೆ ದೂಡುತ್ತಿದೆ. ಇದಕ್ಕೆ ಸರ್ಕಾರವೇ ಕಾರಣವಾಗಿದೆ. ದಾದಿಯರ ರಕ್ಷಣೆಗೆ ಇದರಿಂದ ಕುತ್ತು ಒದಗಿದೆ.

ವೈಯಕ್ತಿಕ ರಕ್ಷಣಾ ಸಾಧನಗಳ ಕೊರತೆಯ ಬಗ್ಗೆ ದಾದಿಯರು ಮತ್ತು ವೈದ್ಯರು ದೂರು ನೀಡಿದ್ದಾಗ್ಯೂ ಕೂಡ, ಸುರಕ್ಷಿತ ಗೇರ್‌ಗಳನ್ನು ತಯಾರಿಸುವ ಜವಾಬ್ದಾರಿಯನ್ನು ನೀಡಲಾದ ಸಂಸ್ಥೆಗಳು ಲಾಕ್‌ಡೌನ್ ಘೋಷಣೆಯಿಂದಾಗಿ ಕೆಲಸ ನಿರ್ವಹಿಸದಂತಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಲಕರಣೆಗಳ ತೀವ್ರ ಕೊರತೆಯಿಂದ ಮತ್ತು ಅವುಗಳನ್ನು ತಯಾರಿಸಲು ಬೇಕಾಗುವ ಬಂಡವಾಳದ ಕೊರತೆಯಿಂದ ಈ ಸಂಸ್ಥೆಗಳು ಬಳಲುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಜವಳಿ ಸಚಿವಾಲಯವು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದ್ದು, ಸುರಕ್ಷತಾ ಗೇರ್‌ಗಳನ್ನು ತಯಾರಿಸುವ ಹನ್ನೊಂದು ತಯಾರಕ ಸಂಸ್ಥೆಗಳಲ್ಲಿ ಉಂಟಾಗಿರುವ ಬಂಡವಾಳ ಬಿಕ್ಕಟ್ಟಿನ ಅಂಶವನ್ನು ಪರಿಶೀಲಿಸುವಂತೆ ಕೇಳಿಕೊಂಡಿದೆ. ಇದೆಲ್ಲರ ಪರಿಣಾಮದಿಂದಾಗಿ ಸುರಕ್ಷತಾ ಗೇರ್‌ಗಳನ್ನು ತಯಾರಿಸಲು ಬೇಕಾಗುವ ಕೇಂದ್ರಾಡಳಿತದ ಅನುಮತಿಯಲ್ಲಿ ವಿಳಂಬವಾಗಿದೆ. ಭಾರತವು ರಕ್ಷಣಾ ವಿಭಾಗಕ್ಕೆ ವ್ಯಯಿಸುವ ಹಣದ ಖರ್ಚು ಆರೋಗ್ಯ ವಿಭಾಗಕ್ಕಿಂತ ಐದು ಪಟ್ಟು ಹೆಚ್ಚು ಇದೆ. 2017-18 ರಲ್ಲಿ ರಕ್ಷಣಾ ವಿಭಾಗದ ವೆಚ್ಚ 5.3 ಪಟ್ಟು ಇತ್ತು. 2018-19 ರಲ್ಲಿ ಅದು 5.17 ಪಟ್ಟು ಹೆಚ್ಚು ಆಯಿತು. 2019-2020ರಲ್ಲಿ ಇದು 4.7 ಪಟ್ಟು ಹೆಚ್ಚಾಗಿದೆ.

ಭಾರತದಂತಹ ದೇಶವು ಬದುಕುಳಿಯಲು, ದೇಶದ ಜನರನ್ನು ಐಕ್ಯವಾಗಿಡಲು, ಪರರ(ಪರ ದೇಶದ) ಬಗ್ಗೆ ಭಯವನ್ನು ಸೃಷ್ಟಿಸಿ, ಬೆಳೆಸಿದರೆ ಮಾತ್ರ ಸಾಧ್ಯವೆನಿಸುವಂತ ಸ್ಥಿತಿಗೆ ತಲುಪಿದೆ. ಭೌಗೋಳಿಕವಾಗಿ, ರಾಜಕೀಯವಾಗಿ ಹೇಳುವುದಾದರೆ ಈ ಪರರು ಯಾವ ದೇಶವೆಂದರೆ ಪಾಕಿಸ್ತಾನ ಅಥವಾ ಚೀನಾ. ಸಾಮುದಾಯಿಕವಾಗಿ ಹೇಳುವುದಾದರೆ ಈ ಭಯವು ಮುಸ್ಲಿಂರಿಂದ ಎಂದು ಪ್ರಚಾರ ಮಾಡಲಾಗುತ್ತಿದೆ. ಈಗಿನ ಕರೋನಾದ ಸಮಯದಲ್ಲಿಯೂ ಸಹ ನಮಗೆ ಪರರಿಂದ ಉಂಟಾಗುವ “ಭಯ”ದ ಅಗತ್ಯವಿದೆ ಅನಿಸುತ್ತದೆ. ಹಾಗಾಗಿ ಮುಸ್ಲಿಂರನ್ನು ವೈರಸ್‌ನ ವಾಹಕರು ಎಂದು ಸಮಾಜದಲ್ಲಿ ಭೀತಿಯನ್ನು ಹಬ್ಬಿಸಲಾಗುತ್ತಿದೆ.

ಕೆಲವೊಮ್ಮೆ ಭೀತಿಯನ್ನು ಉಂಟುಮಾಡುವವರು ಮುಸ್ಲಿಂರಲ್ಲದೆ ವಲಸೆ ಕಾರ್ಮಿಕರು ಅಥವಾ ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ಸ್ಥಳೀಯ ಉದ್ಯೋಗಿಗಳು ಕೂಡ ಆಗಿರುತ್ತಾರೆ. ಅವರು ಕೊಳಕರು, ಸ್ವಚ್ಛತಾ ಭಾವನೆ ಅಥವಾ ಅರಿವು ಇಲ್ಲದವರು. ಹಾಗಾಗಿ ಅವರು ವೈರಸ್ ವಾಹಕರು ಎಂಬ ಅನುಮಾಗಳು ದಟ್ಟವಾಗಿವೆ! ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ. ಜೆಟ್ ವಿಮಾನಗಳಲ್ಲಿ ಹಾರುವ ಶ್ರೀಮಂತ ವರ್ಗಗಳಿಂದ ಕರೋನಾ ವೈರಸ್ ಪ್ರಪಂಚದಾದ್ಯಂತ ಹರಡಿರುವ ವಿಷಯ ಸ್ಪಷ್ಟ ವೇದ್ಯ. ವಿಷಮ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರನ್ನು ಸಹ ಇದೇ ರೀತಿಯ ಸಂಶಯದಿಂದ ನೋಡಲಾಗುತ್ತಿದೆ. ವಿಶೇಷವಾಗಿ ಆರೈಕೆ ಮಾಡುವವರು ಭಾರತದ ಈಶಾನ್ಯ ಮೂಲದವರಾಗಿದ್ದರೆ ಮತ್ತು ಕೆಲವು “ಮಂಗೋಲಾಯ್ಡ್” ಭೌತಿಕ ಲಕ್ಷಣಗಳನ್ನು ಹೊಂದಿದ್ದರೆ ಅವರನ್ನು ಪರಕೀಯರಂತೆ ನೋಡುವ ವಿಲಕ್ಷಣ ಧೋರಣೆಯನ್ನು ನಾವು ನೋಡತ್ತಿದ್ದೇವೆ. ಕೋಲ್ಕತ್ತಾದಲ್ಲಿ, ಇವರಲ್ಲಿ ಕೆಲವರನ್ನು “ಚೈನೀಸ್” ಮತ್ತು “ಕೋವಿಡ್ 19’ ರ ಮೂಲ ವಾಹಕರೆಂದು ಜರಿಯಲಾಯಿತು ಮತ್ತು ದೂರವಿಡಲಾಯಿತು.

ಆಶಿಸ್ ನಂದಿಯವರ ವಿಚಾರಗಳು ಈಗಿನ ಪರಿಸ್ಥಿತಿಯ ತಿರುಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗಬಹುದು: “ಭೂತಕಾಲವು ಸಾಮಾಜಿಕ ಪ್ರಜ್ಞೆಯನ್ನು ಉಂಟುಮಾಡದಿದ್ದರೆ ಮತ್ತು ಭವಿಷ್ಯವು ಈಗ ಪ್ರಾರಂಭವಾದರೆ, ವರ್ತಮಾನವು ಒಂದು ಐತಿಹಾಸಿಕ ಕ್ಷಣ. ಈ ಕ್ಷಣ ಶಾಶ್ವತವಿದ್ದರು ಇದು ಬದಲಾಗುತ್ತಿರುವ ಬಿಕ್ಕಟ್ಟಿನ ಮತ್ತು ಸೂಕ್ತ ಆಯ್ಕೆಯ ಕ್ಷಣವನ್ನು ಸೂಚಿಸುತ್ತದೆ”.

ಕರೋನಾ ಮತ್ತು ಸಮುದಾಯ: ನಿಜಾಮುದ್ದೀನ್‌ನ ಘಟನೆ

ಲಕ್ಷಾಂತರ ವಲಸೆ ಕಾರ್ಮಿಕರ ಅಸಹನೀಯ ದೃಶ್ಯಗಳು ಭಾರತ ಮತ್ತು ಭಾರತದಾಚೆಗಿನ ಮಾಧ್ಯಮಗಳ (ವ್ಯಾಪಕವಾದ ಸಾಮಾಜಿಕ ಮಾಧ್ಯಮವನ್ನು ಒಳಗೊಂಡು) ವಿವಾದಾತ್ಮಕ ಗಮನವನ್ನು ಸೆಳೆಯುತ್ತಿದ್ದಾಗ ದೆಹಲಿಯ ನಿಜಾಮುದ್ದೀನ್ ಪ್ರದೇಶದಿಂದ ಉದ್ಭವಿಸಿದ ಭಿನ್ನವಾದ ಘಟನೆ ನಮಗೆ ಆಘಾತವನ್ನುಂಟು ಮಾಡಿದೆ. ಈ ಘಟನೆ ವಲಸೆ ಕಾರ್ಮಿಕರ ಜ್ವಲಂತ ಹಾಗು ದುರಂತ ಸಮಸ್ಯೆಯಿಂದ ನಮ್ಮ ಗಮನವನ್ನು ಬೇರೆಡೆ ಸೆಳೆಯಿತು.

ಭಾರತ ಮತ್ತು ವಿಶ್ವದಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಮಾರ್ಚ್ ಆರಂಭದಲ್ಲಿ ನಿಜಾಮುದ್ದೀನ್ ಪ್ರಕರಣ ಶುರುವಾಯಿತು. ದೆಹಲಿಯ ನಿಜಾಮುದ್ದೀನ್ ಪ್ರದೇಶದ ಆರು ಅಂತಸ್ತಿನ ಕಟ್ಟಡದಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಪ್ರಾರ್ಥನಾ ಸಭೆಗಳಲ್ಲಿ ಹಲವಾರು ದೇಶದ ರಾಷ್ಟ್ರೀಯತೆಗಳಿಗೆ ಸೇರಿದ ಸುಮಾರು 2,500 ಮುಸ್ಲಿಂ ಜನರು ಭಾಗವಹಿಸಿದ್ದರು. ತಬ್ಲಿಘಿ ಜಮಾತ್ ಎಂಬುದು ಒಂದು ಇಸ್ಲಾಮಿಕ್ ಚಳುವಳಿ. ಭಾರತೀಯ ಮೂಲದ್ದು. 1927 ರಲ್ಲಿ (?) ಗುರುಗ್ರಾಮ್ ಬಳಿಯ ಮೇವಾಟ್‌ನಿಂದ ಈ ಜಾಗತಿಕ ಇಸ್ಲಾಮಿಕ್ ಇವಾಂಜೆಲಿಕಲ್ ಆಂದೋಲನ ಶುರುವಾಯಿತು.

ಈ ಜಮಾತ್‌ನ ಧಾರ್ಮಿಕ ಸಭೆಗೆಂದು ಭಾರತದ ಕಡಗೆ ಹೊರಟ ಇಸ್ಲಾಮಿಕ್ ಮಿಷನರಿಗಳಿಗೆ ಮರ್ಕಜ್ ಎಂಬ ಜಾಗ ಸಾರಿಗೆ-ಸಂಪರ್ಕದ ಕೇಂದ್ರವಾಗಿತ್ತು. ಸಭೆಯ ನಂತರ ಈ ಯಾತ್ರಿಕರು ಇಲ್ಲಿಂದ ತಮ್ಮ, ತಮ್ಮ ರಾಜ್ಯಗಳಿಗೆ ಗುಂಪು, ಗುಂಪುಗಳಲ್ಲಿ ಹೊರಟರು. ಅಲ್ಲಿ ಹೋದಾಗ ಅವರು ಪದ್ಧತಿಯಂತೆ ಸ್ಥಳೀಯ ಮಸೀದಿಗಳಲ್ಲಿ ತಂಗುತ್ತಾರೆ. ಧಾರ್ಮಿಕತೆಯ ಕಾರಣದಿಂದ ವರ್ಷದುದ್ದಕ್ಕೂ ನಿಜಾಮುದ್ದೀನ್ ಸ್ಥಳದಲ್ಲಿ ತಂಗುವ ನಂಬಿಗಸ್ತ ತಬ್ಲೀಘಿಗಳೂ ಕೂಡ ಇದ್ದಾರೆ. ಆದರೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ದೇಶ ಮತ್ತು ವಿದೇಶಗಳಿಂದ ನಿಜಾಮುದ್ದೀನ್ ಸ್ಥಳವನ್ನು ಭೇಟಿ ನೀಡುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತು. ಲಭ್ಯವಿರುವ ವರದಿಗಳ ಪ್ರಕಾರ, ನಿಗದಿತ ಸಭೆಯು ಜಮಾತ್‌ನ ಮರ್ಕಜ್ ಅಥವಾ ಜಮಾತ್‌ನ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಮಾರ್ಚ್ 8 ಮತ್ತು 13 ರ ನಡುವೆ ನಡೆಯುವಂತೆ ನಿಗದಿಯಾಗಿತ್ತು. ಹಾಗಾಗಿ ಮಾರ್ಚ್ 10 ರ ಹೊತ್ತಿಗೆ ತಬ್ಲೀಘಿಗಳು ನಿಜಾಮುದ್ದೀನ್‌ನಲ್ಲಿ ಸೇರಲು ಪ್ರಾರಂಭಿಸಿದರು.

ಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?
ಮರ್ಕಜ್ ನಿಂದ ಹೊರಗೆ ಬರುತ್ತಿರುವ ತಬ್ಲೀಘೀ ಜಮಾಅತ್ ಸದಸ್ಯರು

ಸಭೆಯಲ್ಲಿ ಭಾಗವಹಿಸಲು ಇಂಡೋನೇಷ್ಯಾ, ಜೋರ್ಡಾನ್, ಯೆಮೆನ್, ಸೌದಿ ಅರೇಬಿಯಾ, ಚೀನಾ, ಉಕ್ರೇನ್, ಮಲೇಷ್ಯಾ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದವರಾಗಿದ್ದರು. “ಲಾಕ್ ಡೌನ್ ನಂತರ ಅವರಲ್ಲಿ ಹಲವರು ಸ್ಥಳವನ್ನು ತೊರೆದರು. ಆದರೆ ಸುಮಾರು 1,600 ಮಂದಿ (200 ವಿದೇಶಿಯರನ್ನು ಒಳಗೊಂಡಂತೆ) ಎಲ್ಲಿಯೂ ಹೋಗದಂತೆ ಕಟ್ಟಡದೊಳಗೆ ಉಳಿದುಕೊಳ್ಳಬೇಕಾಗುವ ಪರಿಸ್ಥಿತಿ ಉಂಟಾಯಿತು” ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪರಿಣಾಮವಾಗಿ, ಅನೇಕರು ಭಾವಿಸುವ ಹಾಗೆ ಮರ್ಕಜ್ ಪ್ರದೇಶವು ಈಗ ಕೊರೊನ ವೈರಸ್‌ನ ‘ಸೂಪರ್-ಸ್ಪ್ರೆಡರ್’ ಆಗಿ ಬಿಟ್ಟಿದೆ. ಕಾಶ್ಮೀರದಿಂದ ಅಂಡಮಾನ್ ದ್ವೀಪದವರೆಗೆ ಸೋಂಕು ಮತ್ತು ಸಾವಿನ ಹಾದಿಯನ್ನು ಇದು ಉಂಟುಮಾಡಿದೆ. ಮಾರ್ಚ್ ಮೊದಲ ಎರಡು ವಾರಗಳಲ್ಲಿ ಮರ್ಕಜ್‌ನಲ್ಲಿದ್ದ ಕನಿಷ್ಠ 10 ಜನರು ಈ ಕಾಯಿಲೆಗೆ ಬಲಿಯಾಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ತಮಿಳುನಾಡಿನ 50, ದೆಹಲಿಯ 24, ಕಾಶ್ಮೀರದ 18, ತೆಲಂಗಾಣದ 15 ಮತ್ತು ಅಂಡಮಾನ್ ಮತ್ತು ನಿಕೋಬಾರ್ ನ ಒಂಬತ್ತು ಮಂದಿ ಸೇರಿದಂತೆ 100 ಕ್ಕೂ ಹೆಚ್ಚು ಮಂದಿಗೆ ಕೊರೊನ ವೈರಸ್ ಸೋಂಕಿದೆ ಎಂದು ತಿಳಿದು ಬಂದಿದೆ.

ಈ ಘಟನೆಯಾದ ಕೆಲವೇ ಗಂಟೆಗಳಲ್ಲಿ ಆಪಾದನೆ-ಆರೋಪಗಳ ಭರಾಟೆ ಪ್ರಾರಂಭವಾಯಿತು. ಹಲವರು ಭಾವಿಸುವ ಪ್ರಕಾರ ದೆಹಲಿ ಪೊಲೀಸರು, ದೆಹಲಿ ಸರ್ಕಾರ ಮತ್ತು ಕೇಂದ್ರವು ಸಮಯೋಚಿತ ಕ್ರಮಗಳನ್ನು ತೆಗೆದುಕೊಂಡಿದ್ದರೆ ಸಾವಿರಾರು ತಬ್ಲೀಘಿ-ಪ್ರಚಾರಕರು ದೇಶದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಬಹುದಾಗಿತ್ತು ಎಂದು. ಮಾರ್ಚ್ 21 ರಂದು ಗೃಹ ಸಚಿವಾಲಯವು ಮರ್ಕಜ್ ‌ಗೆ ಭೇಟಿ ನೀಡಿತು. ಅಲ್ಲಿ ದೊರೆತ ಮಾಹಿತಿ ಪ್ರಕಾರ ಇತರ ರಾಜ್ಯಗಳಿಗೆ ಪ್ರಯಾಣಿಸಿದ 824 ವಿದೇಶಿ ಪ್ರಜೆಗಳ ಬಗ್ಗೆ ಗೃಹ ಸಚಿವಾಲಯವು ಆಯಾಯ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಿತು. ಆದರೆ ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರು ಯಾವುದೇ ವ್ಯಕ್ತಿಯ ಪ್ರವೇಶವನ್ನು ತಡೆಯುವ ಅಥವಾ ಖಾಲಿ ಮಾಡುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ವರದಿಯಾಗಿದೆ.

ತಮ್ಮ ಮೇಲೆ ಮಾಡಲ್ಪಟ್ಟ ‘ನಿರ್ಲಕ್ಷ್ಯ’ ದ ಆರೋಪವನ್ನು ನಿರಾಕರಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ಈ ಧಾರ್ಮಿಕ ಸಭೆ ನಡೆಸಿದ್ದು “ಕ್ರಿಮಿನಲ್ ನಿರ್ಲಕ್ಷ್ಯ” ಕ್ಕೆ ಸಮಾನ ಎಂದು ಜರೆದಿದ್ದಾರೆ. ಆದರೆ ಮರ್ಕಜ್ ಅಧಿಕಾರಿಗಳು ತಮ್ಮ ಆವರಣದಲ್ಲಿ ಉಳಿದುಕೊಂಡಿದ್ದವರ ಬಗ್ಗೆ ದೆಹಲಿ ಪೊಲೀಸ್ ಮತ್ತು ದೆಹಲಿ ಸರ್ಕಾರಕ್ಕೆ ಮೊದಲೇ ಮಾಹಿತಿ ನೀಡಿದ್ದವು ಎಂದು ಹೇಳಿಕೆಯನ್ನು ನೀಡಿದ್ದಾರೆ. ಮರ್ಕಜ್ ನ ಹೇಳಿಕೆಯೊಂದರಲ್ಲಿ: “ಮಾರ್ಚ್ 21 ರಂದು ರೈಲ್ವೆ ಮೂಲಕ ನಿರ್ಮಿಸಮಿಸಬೇಕಾದ ದೊಡ್ಡ ಗುಂಪು ಲಾಕ್‌ಡೌನ್‌ ಇದ್ದ ಕಾರಣ ಮರ್ಕಜ್ ನಲ್ಲಿ ಸಿಲುಕಿಕೊಂಡಿತು” ಎಂದು ತಿಳಿಸಲಾಗಿದೆ.

ಕರೋನಾ ಸಾಂಕ್ರಾಮಿಕ ರೋಗವು ವಿಶ್ವದ ವಿವಿಧ ಭಾಗಗಳಲ್ಲಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿರುವ ಸಂದರ್ಭದಲ್ಲಿ, ನಿಜಾಮುದ್ದೀನ್ ಘಟನೆ ನಡೆದಿರಬೇಕೆಂಬುದರಲ್ಲಿ ಸಂದೇಹವಿಲ್ಲ. ಆದರೆ ಸೋಷಿಯಲ್ ಮೀಡಿಯಾ ಮತ್ತು ಟಿವಿ ಚಾನೆಲ್‌ಗಳಲ್ಲಿ ಇದರ ಬಗ್ಗೆ ಆಗಿರುವ ವರದಿಗಳನ್ನು ನೋಡಿದರೆ ಅವುಗಳ ಉದ್ದೇಶ ಕೋಮುವಾದವನ್ನು ಕೆರಳಿಸುವುದು ಎಂದು ಅನಿಸುತ್ತದೆ. ಇದಕ್ಕಾಗಿ ಈ ಮಾಧ್ಯಮಗಳು ಕ್ಷುಲ್ಲಕ ಹಾಗು ಮಿಥ್ಯೆಗಳನ್ನು ಬಳಸಿಕೊಂಡವು ಎಂದು ಹೇಳಬಹುದು.

ಈ ವಿದ್ಯಾಮಾನ ಏಕ ಗುರಿಯನ್ನು ಹೊಂದಿತ್ತು: ಕರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೋಮು ಬಣ್ಣವನ್ನು ನೀಡುವುದು. ಈ ದೆಸೆಯಲ್ಲಿ “ಕೊರೊನಾ ಜಿಹಾದ್” ಟ್ವಿಟ್ಟರಿನಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ವಿಷಯಗಳಲ್ಲಿ ಒಂದಾಗಿದೆ. ಬಿಜೆಪಿ ನಾಯಕರಾದ ಗೌತಮ್ ಗಂಭೀರ್, ಬಿ.ಎಲ್.ಸಂತೋಷ್ ಮತ್ತು ಸಂಬಿತ್ ಪತ್ರಾ ಅವರು ಇಂತಹ ಕೋಮುವಾದದ ಬಣ್ಣಗಳಿಗೆ ಉತ್ತೇಜನ ನೀಡಿದರು. ಮೇಲೆ ಉಲ್ಲೇಖಿಸಲ್ಪಟ್ಟ “ಕ್ರಿಮಿನಲ್ ನಿರ್ಲಕ್ಷ್ಯ”ದಿಂದ “ದೈತ್ಯಾಕಾರದ ವಿಪತ್ತು” ಉಂಟಾಗುವುದು ಖಂಡಿತ ಎಂದು ಅವರು ಎಚ್ಚರಿಕೆ ನೀಡಿದರು. ಭಾರತವನ್ನು ಸೋಲಿಸಲು ಮುಸ್ಲಿಂರು ಈ ಪಿತೂರಿಯನ್ನು ಎಸಗಿದ್ದಾರೆಂದು ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಬೆಂಕಿಗೆ ತುಪ್ಪ ಸುರಿಯುವಂತೆ ವರದಿ ಬಿತ್ತರಿಸಿದರು. ನಂತರ ಇವರ ಮಾರ್ಗವನ್ನು ಹೆಚ್ಚಿನ ಇಂಗ್ಲಿಷ್ ಮತ್ತು ಹಿಂದಿ ಸುದ್ದಿ ವಾಹಿನಿಗಳು ಅನುಸರಿಸಿದವು.

ಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?
ರಿಪಬ್ಲಿಕ್ ಟಿವಿ ಮತ್ತು ದ್ವೇಷ ಹರಡುವ ಅದರ ಸುದ್ದಿ

ಆದರೆ ಇದೇ ಸಮಯದಲ್ಲಿ ದೇಶದ ಇತರ ಭಾಗಗಳಲ್ಲಿ ಆದ ಇತರ ಧರ್ಮದ ಧಾರ್ಮಿಕ ಕೂಟಗಳ ಬಗ್ಗೆ ಅಥವಾ ಸಭೆಗಳ ಬಗ್ಗೆ ಯಾರು ಚಕಾರ ಎತ್ತಲಿಲ್ಲ. ಅರ್ನಾಬ್ ಗೋಸ್ವಾಮಿ ಮತ್ತು ಅವರಂತಹ ಇತರ ಅನುಯಾಯಿಗಳು ಈ ವಿಷಯದ ಬಗ್ಗೆ ಕಣ್ಣುಮುಚ್ಚಿ ಕೂತರು. ಉದಾಹರಣೆಗೆ ತಬ್ಲಿಘಿ ಸಭೆಯ ಸಮಯದಲ್ಲಿ ತಿರುಪತಿ ದೇವಾಲಯವು ಹತ್ತಾರು ಭಕ್ತರಿಗೆ ಮುಕ್ತವಾಗಿತ್ತು. ಇದರ ಬಗ್ಗೆ ಗಮನ ಹರಿಸದೆ ಕೆಲವು ಮುಸ್ಲಿಮರ ಬೇಜವಾಬ್ದಾರಿತನವನ್ನು ಭೀತಿಗೊಳಿಸುವ ಘಟನೆಯಂತೆ ಎಲ್ಲಾ ಕಡೆ ಅನಾವಶ್ಯಕವಾಗಿ ಪ್ರಚಾರ ಮಾಡಲಾಯಿತು. ಮಾರ್ಚ್ 24 ರಂದು ಲಾಕ್‌ಡೌನ್‌ನ ಮೊದಲ ದಿನವನ್ನು ಧಿಕ್ಕರಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ನಡೆದ ರಾಮ ನವಮಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡರು. ಅವರು ಈ ಕಾರ್ಯಕ್ರಮದ ಫೋಟೋಗಳನ್ನು ತಮ್ಮ ಟ್ವಿಟರ್‌ನಲ್ಲಿ ಹಾಕಿದ್ದಾರೆ. ಈ ಕಾರ್ಯಕ್ರಮದ ದೆಸೆಯಿಂದ “ವೈಭವಯುತ ರಾಮ ಮಂದಿರ” ದ ಮೊದಲ ಹಂತವನ್ನು ಸಾಧಿಸಿದಂತಾಯಿತು ಎಂದು ಅವರು ಹೆಮ್ಮೆ ಪಟ್ಟಿಕೊಂಡಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಸಂಕುಚಿತ ರಾಷ್ಟ್ರೀಯತೆಯಿಂದ ಪ್ರಭಾವಿತವಾದ ಭಾರತೀಯ ರಾಜಕಾರಣಗಳ ವಾತಾವರಣವನ್ನು ಶುದ್ಧೀಕರಿಸಲು ಕರೋನವೈರಸ್ ಸೂಕ್ತವಾದ ಅವಕಾಶವನ್ನು ಒದಗಿಸಿದ್ದು ವಿರೋಧಾಭಾಸವಾಗಿದ್ದರೂ, ನಾವು ಮತ್ತೆ ಅದೇ ವ್ಯವಸ್ಥಗೆ ಮರಳಿದ್ದೇವೆ ಎಂದು ತೋರುತ್ತದೆ. ನಿಜಾಮುದ್ದೀನ್ ಘಟನೆ ಬೆಳಕಿಗೆ ಬರುವ ಮೊದಲು ಮತ್ತು ಈ ಘಟನೆಯನ್ನು ಬಳಸಿಕೊಂಡು ಕೋಮು ಪ್ರಚಾರಕ್ಕೆ ಇಳಿಯುವ ಮೊದಲು, ಪಕ್ಷಪಾತದ ಗಾಯಗಳನ್ನು ಸಾಮೂಹಿಕವಾಗಿ ಮರೆಮಾಚುವಂತೆ ಕರೋನದ ಹರಡುವಿಕೆಯು ಒಂದು ಶುಭಾರಂಭವನ್ನು ಒದಗಿಸಿತು. ಆದರೆ ಆಗಿದ್ದೆ ಬೇರೆ.

ಇತ್ತೀಚೆಗೆ ಬಹಳ ಚರ್ಚೆಗೊಳಗಾದ ದೆಹಲಿ ಗಲಭೆಗಳು, ವಲಸಿಗರ ಅಸ್ತಿತ್ವದ ಪ್ರಶ್ನೆ, ಜೆಎನ್‌ಯು ಗಲಭೆ, ಕಾಶ್ಮೀರದ ಸಮಸ್ಯೆ, ಬಡವರಿಗೆ ಬೇಕಾಗಿರುವ ಅಗತ್ಯ ವಸ್ತುಗಳ ಪೂರೈಕೆ, ಇತ್ಯಾದಿ ವಿಷಯಗಳು ಈ ವೈರಸ್ ನ ಕಾರಣದಿಂದ ಜನರ ಜ್ಞಾನಪಟಲದಿಂದ ಮತ್ತೊಮ್ಮೆ ಕಣ್ಮರೆಯಾಗಿವೆ. ಪ್ರತಿಯೊಬ್ಬನು ಈಗ ಸಾಮಾನ್ಯ ಶತ್ರುವನ್ನು ಎದುರಿಸುತ್ತಿದ್ದಾನೆ, ಅದುವೆ “ವೈರಸ್”.

ನಿಜಾಮುದ್ದೀನ್ ಘಟನೆಯನ್ನು ಕೋಮುವಾದದ ಬಣ್ಣದಲ್ಲಿ ಬಿಂಬಿಸಿದ್ದರಿಂದ ಭವಿಷ್ಯದಲ್ಲಿ ಎರಡು ರೀತಿಯ ಪರಿಣಾಮಗಳು ಉಂಟಾಗಬಹುದು:

  • ಮೊದಲನೆಯದು, ಯೂರೋಪಿನಲ್ಲಿ (1348-1351) ತಲೆ ಎತ್ತಿದ ಬುಬೊನಿಕ್ ಪ್ಲೇಗ್ ನಂತರ ಯಹೂದಿಗಳಿಗೆ ಉಂಟಾದ ಅವಸ್ಥೆಯಂತೆ ಇಲ್ಲಿನ ಮುಸ್ಲಿಮರನ್ನು ಬಲಿಪಶುಗಳನ್ನಾಗಿ ನೋಡಲಾಗುತ್ತದೆ. ಅವರಿಂದಲೇ ಕರೊನಾ ವ್ಯರಸ್ ಹಬ್ಬಿತೆಂದು ಎಲ್ಲಾ ಕಡೆ ವರದಿ ಮಾಡಲಾಗುತ್ತದೆ.
  • ಎರಡನೆಯದು, ಭಾರತೀಯ ರಾಷ್ಟ್ರೀಯ ಮುಖ್ಯವಾಹಿನಿಯಿಂದ ಮುಸ್ಲಿಮರನ್ನು ಮತ್ತಷ್ಟು ದೂರ ತಳ್ಳಲಾಗುತ್ತದೆ.

ಕರೋನಾದ ಸಮಯದಲ್ಲಿ ಜನಪರ ನಾಯಕಿ

ನಮ್ಮನ್ನು ಅತ್ತಿತ್ತ ಅಲುಗಾಡದಂತೆ ಅಂಗವಿಕಲನ್ನರಾಗಿ ಮಾಡಿರುವ ಲಾಕ್‌ಡೌನ್ ಸಮಯದಲ್ಲಿ ಕೇಂದ್ರ ಕೇಂದ್ರ ಸರ್ಕಾರ ಮತ್ತು ಅದರ ಏಜೆನ್ಸಿಗಳಿಗಿಂತ ಹೆಚ್ಚಾಗಿ ರಾಜ್ಯ ಸರ್ಕಾರಗಳು ಸಾಂಕ್ರಾಮಿಕ ರೋಗದ ವಿರುದ್ಧ ಯುದ್ಧದ ರೀತಿಯಲ್ಲಿ ಮುಂದಿನ ಸಾಲಿನಲ್ಲಿ ನಿಂತು ಹೋರಾಡುತ್ತಿರುವ ಗಡಿನಾಡಿನ ಕರ್ನಲ್‌ಗಳಾಗಿವೆ ಎಂಬುದು ಹೇಳಬಹುದು. ಭಾರತದ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಿಂದೆಂದಿಗಿಂತಲೂ ಹೆಚ್ಚಾಗಿ ವೈರಸ್ ವಿರುದ್ಧ ಯುದ್ಧ ಮಾಡುತ್ತಿದ್ದಾರೆ. ಬೀದಿ-ಹೋರಾಟಗಾರ್ತಿ ಎಂದು ಕರೆಯಲ್ಪಡುವ ಬ್ಯಾನರ್ಜಿಯವರು ಈ ಯುದ್ಧದಲ್ಲಿ ಬಹಳ ದೂರ ಸಾಗಿದ್ದಾರೆ. ವಿಧ್ಯಾರ್ಥಿಗಳ ಫೈರ್‌ಬ್ರಾಂಡ್ ನೇತಾರಳಾಗಿ, ಯುವ ಮುಖಂಡರಿಂದ ಹಿಡಿದು ಜನಪ್ರಿಯ ಪ್ರತಿಭಟನಾ ಚಳುವಳಿಗಳ ಸಾಮೂಹಿಕ ನಾಯಕಳಾಗಿ ಮತ್ತು ಈಗ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿಯ ಪ್ರಯಾಣ ರೋಚಕ.

ತನ್ನ ಒಂಬತ್ತು ವರ್ಷಗಳ ಆಳ್ವಿಕೆಯಲ್ಲಿ ಅವರು ಜನಪ್ರಿಯ ರಾಜಕೀಯ-ನೀತಿ ಗುಣಲಕ್ಷಣಗಳನ್ನು ಔಪಚಾರಿಕ ಆಡಳಿತ ಮತ್ತು ಅದರ ಕಾರ್ಯವಿಧಾನ, ಪ್ರಕ್ರಿಯೆಗಳೊಂದಿಗೆ ಸಂಯೋಜಿಸಲು ಪ್ರಯತ್ನಿಸಿದ್ದಾರೆ. ಜೆ. ಬ್ರೂಮ್‌ಫಿಕ್ಲ್ಡ್ ಅವರ ಮಾತಿನಲ್ಲಿ ಹೇಳರುವುದಾದರೆ ಮಮತಾ ಬ್ಯಾನರ್ಜಿಯವರು ನಗರದ ಬಡ ಜನರ ಮತ್ತು ಗ್ರಾಮೀಣ ಜನರಿಂದ (ಹೆಚ್ಚಾಗಿ ಅಂಚಿನಲ್ಲಿರುವ ಮತ್ತು ಅರೆ-ಮಧ್ಯಮ ವರ್ಗದವರು) ಪ್ರಶಂಸೆಗೊಳಗಾದರು. ಜೊತೆಗೆ ವಿದ್ಯಾವಂತ ಗಣ್ಯರ ಮತ್ತು ಭದ್ರಲೋಕ ಸಮುದಾಯದ ಕೋಪಕ್ಕೂ ಒಳಗಾದರು. ಇಷ್ಟಾದಾಗ್ಯು ರಾಜ್ಯದಲ್ಲಿ ಕರೋನಾವನ್ನು ಎದುರಿಸುವಲ್ಲಿ ಅವರ ದಣಿವರಿಯದ ಪ್ರಯತ್ನವು ಜನಪರ ನಾಯಕನ ಹೊಸ ರೂಪವನ್ನು ಆವರಣಗೊಳಿಸಿದೆ.

ಕೊರೊನಾ ಸಮಯದಲ್ಲಿ ಜೀವನದ ನೋಟಗಳು ಹೇಗಿರಬೇಕಿತ್ತು ? ಹೇಗಿದೆ ?
ಕೊರೊನಾ ವಿರುದ್ದ ಬೀದಿಗಿಳಿದು ಜಾಗೃತಿ ಮೂಡಿಸುತ್ತಿರುವ ಮಮತ

ಮಮತಾ ಬ್ಯಾನರ್ಜಿಯವರು ಪಾದರಸದಂತೆ ಇರುವ ವ್ಯಕ್ತಿ ಎಂದು ಖ್ಯಾತಿಯನ್ನು ಹೊಂದಿರುವ ಜೊತೆಗೆ, ಸಾಮಾನ್ಯವಾಗಿ ಕಡಿಮೆ ತಾಳ್ಮೆಯಿರುವ ವ್ಯಕ್ತಿ ಎಂಬ ಅನ್ವರ್ಥ ನಾಮವನ್ನು ಕೂಡ ಹೊಂದಿದ್ದಾರೆ. ಆದರೆ ಕರೋನ ವೈರಸ್ ನ್ನು ಅವರು ಎದುರಿಸುತ್ತಿರುವ ಪರಿಯನ್ನು ನೋಡುತ್ತಿರುವ ಜನ ಆಕೆಯ ಮತ್ತೊಂದು ಮುಖಚರ್ಯೆಯನ್ನು ಕೂಡ ಗಮನಿಸುವ ಹಾಗಾಗಿದೆ. “ಫೈರ್‌ಬ್ರಾಂಡ್ ರಾಜಕಾರಣಿಯಿಂದ ಹಿಡಿದು, ಈಗ ತನ್ನನ್ನು ತಾನು ಮಾನವೀಯ ಸ್ಪರ್ಷವಿರುವ ಒಬ್ಬ ಸಮರ್ಥ ಆಡಳಿತಗಾರಳನ್ನಾಗಿ ಆಕೆ ಬಹು ಬೇಗ ಪರಿವರ್ತಿಸಿಕೊಂಡಿದ್ದಾಳೆ” ಎಂದು ಡೆಕ್ಕನ್ ಹೆರಾಲ್ಡ್ ನಲ್ಲಿ ಬರೆಯಲಾಗಿದೆ. ಅವರ ಸಂಯಮ ಮತ್ತು ದೃಡಭರಿತ ಹೇಳಿಕೆಗಳು, ಮನವಿಗಳು ಜನ ಸಾಮಾನ್ಯರ, ಮಾಧ್ಯಮಗಳ ಮತ್ತು ವಿರೋಧ ಪಕ್ಷಗಳ ಪ್ರಶಂಸೆಯನ್ನು ಪಡೆದಿವೆ. ಕರೋನ ವೈರಸ್ ರೋಗಿಗಳಿರುವ ಆಸ್ಪತ್ರೆಗಳಿಗೆ ಮತ್ತು ಅಲ್ಲಿ ಸಾಮಾಜಿಕ ಅಂತರಕ್ಕೊಳಗಾಗಿರುವರನ್ನು ಖುದ್ದಾಗಿ ಭೇಟಿಯಾಗಿ ಎಲ್ಲರಿಗು ಆಶ್ಚರ್ಯವಾಗುವ ರೀತಿಯಲ್ಲಿ ತಮ್ಮ ಕಾಳಜಿಯನ್ನು ಪ್ರದರ್ಶಿಸಿದ್ದಾರೆ.

ರಾಜಕೀಯ ಪ್ರತಿಸ್ಪರ್ಧಿಗಳ ಬಗ್ಗೆ ಬಹಿರಂಗವಾಗಿ ಟೀಕಿಸುವುದಕ್ಕೆ ಹಿಂಜರಿಯದ ಮುಖ್ಯಮಂತ್ರಿ ಈಗ ಕರೊನಾ ಸಮಸ್ಯೆಯ ಸಂದರ್ಭದಲ್ಲಿ ಅಂತಹ ಯಾವುದೇ ಟೀಕೆಗಳನ್ನು ಅನಾವಶ್ಯಕವಾಗಿ ಮಾಡದೆ ಎಚ್ಚರಿಕೆಯನ್ನು ವಹಿಸಿದ್ದಾರೆ. ಕರೋನ ವೈರಸ್ ಬಗ್ಗೆ ಚರ್ಚಿಸಲು ಇತ್ತೀಚೆಗೆ ವಿರೋಧ ಪಕ್ಷಗಳನ್ನೊಳಗೊಂಡಂತೆ ಎಲ್ಲ ಪಕ್ಷಗಳ ಜೊತೆ ಸಭೆ ಸೇರಿದಾಗ ಆ ಪಕ್ಷಗಳ ಜೊತೆ ಮಮತಾ ಬ್ಯ್ರಾನರ್ಜಿ ನಡದುಕೊಂಡ ರೀತಿ, ಅವರ ಸೌಹಾರ್ಧಯುತ ಸನ್ನೆಗಳು ವಿರೋಧ ಪಕ್ಷಗಳಿಂದ ಶ್ಲಾಘನೆಗೊಳಗಾದವು. ಆರಂಭದಿಂದಲೂ ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರನ್ನು ಆಯಾ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು ಮತ್ತು ಇಂತಹ ವಿಷಮ ದಿನಗಳಲ್ಲಿ ಅವರನ್ನು ತಮ್ಮ ಮೂಲ ಸ್ಥಳಗಳಿಗೆ ವಾಪಾಸು ಕಳುಹಿಸಬಾರದೆಂದು ಒತ್ತಾಯಿಸಿದವರಲ್ಲಿ ಅವರೇ ಮೊದಲಿಗರು. ಈ ಕಾಯಿಲೆಯು ಪ್ರಯಾಣ ಮಾಡುವವರ ಮೂಲಕ ಹರಡುವ ಸಾಧ್ಯತೆಗಳಿರುವುದರಿಂದ ವಿಮಾನ ಹಾರಾಟಗಳನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿರುವವರಲ್ಲಿ ಅವರು ಮೊದಲಿಗರು. ಅಷ್ಟೇ ಅಲ್ಲ. ಮುಂದಿನ ಕೆಲವು ತಿಂಗಳುಗಳಿಗಾಗುವಷ್ಟು ರಾಜ್ಯದ ಬಡ ವರ್ಗದ ಜನರಿಗೆ ಉಚಿತ ಪಡಿತರವನ್ನು ಅವರು ಈಗಾಗಲೇ ಏರ್ಪಡಿಸಿದ್ದಾರೆ.

ಲಾಕ್‌ಡೌನ್ ಅನುಷ್ಠಾನದಲ್ಲಿ ಅವರು ದೃಡವಾಗಿದ್ದರೂ, ಅದು ‘ನಿರ್ದಯ’ ಪ್ರಕ್ರಿಯೆಯಾಗಿ ತೋರಬಾರದು ಎಂಬ ವಿವೇಚನೆಯನ್ನು ಕೂಡ ಅವರು ಪ್ರದರ್ಶಿಸಿದ್ದಾರೆ. ಇತಿ-ಮಿತಿಯ ಹಣಕಾಸು ವ್ಯವಸ್ಥೆ ಮತ್ತು ಕಡಿಮೆ ಪ್ರಮಾಣದ ಮಾನವ ಸಂಪನ್ಮೂಲವನ್ನು ಹೊಂದಿರುವ ಈ ರಾಜ್ಯದಲ್ಲಿ ‘ದೀದಿ’ (ದೊಡ್ಡ ಅಕ್ಕ)ಯು ಈ ಬಿಕ್ಕಟ್ಟಿನ ಸಂಪರ್ಕದಲ್ಲಿ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತಾ, ಜನಪ್ರಿಯ ನಿರೀಕ್ಷೆಗಳನ್ನು ಪೂರೈಸುತ್ತಾ ಅವರು ಹೇಗೆ ಪ್ರಸ್ತುತ ಅಗ್ನಿ ಪರೀಕ್ಷೆಯಂತೆ ಇರುವ ಕರೋನ ವೈರಸ್ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಕಾದುನೋಡಬೇಕಾಗಿದೆ.

ಕೊನೆಯ ಮಾತುಗಳು

ಕರೋನದ ನಂತರ ಎಲ್ಲಿ? ಇದರ ನಂತರ ನಾವು ರಾಜಕೀಯೋತ್ತರ ಹಂತದತ್ತ ಸಾಗುತ್ತಿದ್ದೇವೆಯೇ? ನಾವು ಈಗಾಗಲೇ ಅದರಲ್ಲಿ ಹೆಜ್ಜೆ ಹಾಕಿದ್ದೇವೆ ಎಂದು ತೋರುತ್ತದೆ. “ಶತ್ರುಗಳ ವಿರುಧ್ಧ ಯುದ್ಧ” ಎಂಬ ಹೆಸರಿನಲ್ಲಿ ರಾಜ್ಯದ ಪ್ರತಿಯೊಂದು ಆದೇಶವನ್ನು ಪ್ರಶ್ನಿಸದೆ ವಿಧೇಯರಾಗಿ ಪಾಲಿಸುವ ಮೂಲಕ, ಶಿಸ್ತಿನ ಕಾರ್ಯವಿಧಾನಕ್ಕೆ ನಮ್ಮನ್ನು ಅಧೀನಗೊಳಿಸುವತ್ತ ಸಾಗಿದ್ದೇವೆಯೆ? ಇಂತಹ ವಿಷಮ, ಸಾಂಕ್ರಾಮಿಕ ಸಮಯದಲ್ಲಿಯೂ ಕೂಡ ಮಧ್ಯಪ್ರದೇಶದ ಸರ್ಕಾರವನ್ನು ಉರುಳಿಸಲು ಅಸೆಂಬ್ಲಿಯ 22 ಕಾಂಗ್ರೇಸ್ ಶಾಸಕರನ್ನು ಹೇಗೆ ರಸಾರ್ಟ್ ‌ನಲ್ಲಿ ಒತ್ತೆಯಾಳುಗಳಾಗಿ ಇರಿಸಲಾಗಿತ್ತು ಎಂಬ ವಿಷಯವನ್ನು ನಮ್ಮ ತರ್ಕಕ್ಕೆ ತರದೆ, ಮರೆಯುವಂತಹ ಜನರಾಗಿದ್ದೇವೆಯೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. “ವೈದ್ಯರಿಗೆ ನಮ್ಮ ಗೌರವವನ್ನು ಸಲ್ಲಿಸಲು” ನಾವು ಸಂಜೆಯ ಹೊತ್ತು ಉಕ್ಕಿನ ಫಲಕಗಳ ಮೇಲೆ ಚಪ್ಪಾಳೆ ತಟ್ಟಲು ಅಥವಾ “ಸಹ ದೇಶವಾಸಿಗಳೊಂದಿಗೆ ಒಗ್ಗಟ್ಟನ್ನು” ತೋರಿಸಲು ರಾತ್ರಿಯಲ್ಲಿ ಬೆಳಕಿನ ದೀಪಗಳನ್ನು ಹಚ್ಚಲು ಕೊಟ್ಟ ಆದೇಶವನ್ನು ಕುರುಡರಾಗಿ ಪಾಲಿಸುವಷ್ಟು ಬಾಲಿಶತನವನ್ನು ಅಥವಾ ಬಾಲಕತನವನ್ನು ಹೊಂದಿದ್ದೇವೆಯೆ ಎಂಬ ಅನುಮಾನ ನಮ್ಮಲ್ಲಿ ಉದ್ಭವಿಸುತ್ತದೆ.

ವಿಧ್ವಾಂಸ ಜಾರ್ಜಿಯೊ ಅಗಾಂಬೆನ್

ಇತ್ತೀಚೆಗೆ ಜಾರ್ಜಿಯೊ ಅಗಾಂಬೆನ್ ಎಂಬ ಪ್ರಸಿದ್ಧ ವಿದ್ವಾಂಸರು ಭಿನ್ನ ಸನ್ನಿವೇಶದಲ್ಲಿ ಆಡಿರುವ ಮಾತುಗಳು ಗಮನಾರ್ಹ, “ಈ ಹಿಂದೆ ಹೆಚ್ಚು ಗಂಭೀರವಾದ ಸಾಂಕ್ರಾಮಿಕ ರೋಗಗಳು ಕಂಡುಬಂದಿವೆ, ಆದರೆ ನಮ್ಮ ಚಲನೆಯನ್ನು ನಿರ್ಬಂದಿಸುವ ತರ್ತು ಪರಿಸ್ಥಿತಿಯನ್ನು ಘೋಷಿಸಲು ಯಾರೂ ನಿರ್ಧರಿಸಿರಲಿಲ್ಲ. ಜನರು ಧೀರ್ಘಕಾಲಿಕ ಬಿಕ್ಕಟ್ಟು ಮತ್ತು ಧೀರ್ಘಕಾಲಿಕ ತುರ್ತು ಪರಿಸ್ಥಿತಿಗಳಲ್ಲಿ ವಾಸಿಸುವಂತಹ ಪರಿಸ್ಥಿತಿಗೆ ಎಷ್ಟೊಂದು ಒಗ್ಗಿ ಹೋಗಿದ್ದಾರೆಂದರೆ ಅವರ ಜೀವನವು ಕೇವಲ ಜೈವಿಕ ಸ್ಥಿತಿಗೆ ಇಳಿದಿದೆ ಎಂಬ ವಿಷಯವಾಗಲಿ ಅಥವಾ ನಮಗೂ ಒಂದು ಸಾಮಾಜಿಕ ಮತ್ತು ರಾಜಕೀಯ ಆಯಾಮವಿದೆ ಎಂಬ ಅಂಶವಾಗಲಿ ನಮ್ಮ ಸ್ಮೃತಿ ಪಟಲಕ್ಕೆ ಬರದೇ ಹೋಗಿದೆ.”

“ಆರೋಗ್ಯ ಮತ್ತು ತುರ್ತು ಪರಿಸ್ಥಿತಿಯ ನಂತರವೂ ಒಂದು ವಿಷಯದ ಶೋಧನೆ ನಮ್ಮಲ್ಲಿ ಮುಂದುವರೆಯುತ್ತದೆ. ಅದು ಸರ್ಕಾರವು ವಾಸ್ತವದಲ್ಲಿ ಅಳವಡಿಸಲು ಸಾಧ್ಯವಾಗದ ಸಾಹಸಗಳಿಗೆ ಸಂಬಂಧಿಸಿದೆ. ಅಂದರೆ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳನ್ನು ಮುಚ್ಚುವುದು, ಆನ್‌ಲೈನ್‌ ಮೂಲಕ ಮಾತ್ರ ಪಾಠ-ಪ್ರವಚನಗಳನ್ನು ಏರ್ಪಡಿಸುವುದು, ಎಲ್ಲರೂ ಒಟ್ಟಿಗೆ ಸಭೆ ಸೇರಿ ರಾಜಕೀಯ ಅಥವಾ ಸಾಂಸ್ಕೃತಿಕ ಅಂಶಗಳ ಬಗ್ಗೆ ಚರ್ಚಿಸುವುದನ್ನು ಏಕಾಏಕಿ ನಿಲ್ಲಿಸುವುದು, ಇತರರೊಂದಿಗೆ ಡಿಜಿಟಲ್ ಸಂದೇಶಗಳನ್ನು ಮಾತ್ರ ವಿನಿಮಯ ಮಾಡಿಕೊಳ್ಳುವುದು, ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಮನುಷ್ಯರ ನಡುವಿನ ಪ್ರತಿಯೊಂದು ಸಂಪರ್ಕಕ್ಕೂ ಯಂತ್ರಗಳನ್ನು ಬಳಸುವುದು”.


ಇದನ್ನೂ ಓದಿ: ಹಠಾತ್ ಗೋಚರಕ್ಕೆ ಬಂದ ವಲಸೆ ಕಾರ್ಮಿಕ ಸಂಗ್ರಾಮ್ ಟುಡು


ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...