Homeಚಳವಳಿಕವಿಗೋಷ್ಠಿಯಿಂದ ಹಿಂದೆಸರಿದ ಸಂಶೋಧನಾ ವಿದ್ಯಾರ್ಥಿಯ ಮನದಾಳದ ಅಳಲು: ಸಾಮರಸ್ಯ ಇದ್ದರಷ್ಟೇ ಸಾಹಿತ್ಯ ಸಂಭ್ರಮ

ಕವಿಗೋಷ್ಠಿಯಿಂದ ಹಿಂದೆಸರಿದ ಸಂಶೋಧನಾ ವಿದ್ಯಾರ್ಥಿಯ ಮನದಾಳದ ಅಳಲು: ಸಾಮರಸ್ಯ ಇದ್ದರಷ್ಟೇ ಸಾಹಿತ್ಯ ಸಂಭ್ರಮ

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಸಾಂಸ್ಕೃತಿಕ ಇತಿಹಾಸವಿರುವುದು ಕನ್ನಡತನಕ್ಕೆ ಹೆಮ್ಮೆಯ ಸಂಗತಿ. ಇದು ಕನ್ನಡತ್ವವನ್ನು ಪಸರಿಸುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಪರಿಷತ್ತಿನ ಮುಂದಾಳತ್ವದಲ್ಲಿ ಪ್ರತಿ ವರ್ಷವೂ ನಡೆಯುವ ಸಾಹಿತ್ಯ ಸಮ್ಮೇಳನಗಳ ಬಹುದೊಡ್ಡ ಜವಾಬ್ದಾರಿ ರಾಜಕೀಯವಾಗಿ ಹರಿದು ಹಂಚಿಹೋಗಿರುವ ಕನ್ನಡ ಜನರನ್ನು ಭಾವನಾತ್ಮಕವಾಗಿ ಒಂದುಗೂಡಿಸುವುದು. ಕನ್ನಡವನ್ನು ಕಟ್ಟುವ ಕೆಲಸವೆಂದರೆ, ಕನ್ನಡಿಗರನ್ನು ಒಟ್ಟುಗೂಡಿಸುವುದು ಎಂದರ್ಥ. ಈ ಕನ್ನಡತ್ವದಲ್ಲಿ ಜಾತಿ, ಧರ್ಮ, ಲಿಂಗ ರಾಜಕಾರಣ ಮಾಡಿದ್ದೆ ಆದರೆ, ಸಾಹಿತ್ಯ ಪರಿಷತ್ತಿನ ಗದ್ದುಗೆಯಲ್ಲಿ ನುರಿತ ರಾಜಕಾರಣಿಯೊಬ್ಬ ಕೂತಿದ್ದಾನೆ ಎಂದೇ ಹೇಳಬೇಕು. ರಾಜಕೀಯ ಪುಡಾರಿಗಷ್ಟೇ ತಿಳಿದಿರಬಹುದಾದ ಪಟ್ಟುಗಳು ಇವು. ಆದರೆ, ಪ್ರಸ್ತುತ ಸಮಾಜದ ಸಾಂಕ್ರಾಮಿಕ ರೋಗಗಳಾದ ಕೋಮುವಾದ ಹಾಗೂ ತಾರತಮ್ಯಗಳು ಹಿಂದಿಗಿಂತಲೂ ಇಂದು ಅತ್ಯಂತ ವೇಗವಾಗಿ ಹರಡುತ್ತಿರುವುದು ವಿಪರ್ಯಾಸ. ಮನುಷ್ಯ ಕೇಂದ್ರಿತ ಪ್ರಜ್ಞೆಯನ್ನು ಇಲ್ಲವಾಗಿಸಿ, ಸಮುದಾಯವೊಂದರ ಮೇಲಿನ ರಾಜಕೀಯ ಪ್ರೇರಿತ ದ್ವೇಷವನ್ನು ಇಮ್ಮಡಿಗೊಳಿಸುವ ಹಿಡನ್ ಅಜೆಂಡಾವನ್ನು ಇಟ್ಟುಕೊಂಡಿರುವ ರಾಜಕೀಯ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾಣಿಸಿಕೊಳ್ಳುತ್ತಿದೆ. ಸರ್ವಧರ್ಮ ಸಮನ್ವಯತೆ ಬೆಳೆಯಬೇಕಿದ್ದ ನಾಡಿನಲ್ಲಿ ತಾರತಮ್ಯವನ್ನು ಯಾವುದೇ ಭಯವಿಲ್ಲದೆ ಮಾಡುವುದು ಈಗ ಈ ಸಂಸ್ಥೆಯ ಚುಕ್ಕಾಣಿ ಹಿಡಿದವರ ಹುಟ್ಟು ಗುಣವಿದ್ದಹಾಗಿದೆ.

ಕನ್ನಡ ಸಾಹಿತ್ಯಕ್ಕೆ ಜೀವ ವಿರೋಧಿತನ ಎಂದಿಗೂ ಅಂಟಿಕೊಂಡಿದ್ದೆ ಇಲ್ಲ ಅಥವಾ ಇದ್ದರೂ ಅದು ಅಲ್ಪಮಟ್ಟದಲ್ಲಿತ್ತು ಎನ್ನಬಹುದು. ’ಮನುಷ್ಯ ಜಾತಿ ತಾನೊಂದೆ ವಲಂ’ ಎನ್ನುವ ಪಂಪನ ಮಾತಿನಿಂದ ಹಿಡಿದು ನಾಡಿಗೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪುವರೆಗೂ ಕನ್ನಡ ಸಾಹಿತ್ಯದಲ್ಲಿ ವಿಷಮತೆ ಅಷ್ಟು ತಲೆಯೆತ್ತಲು ಸಾಧ್ಯವಾಗಲಿಲ್ಲ. ಬದಲಿಗೆ ಅದು ಸಾಮರಸ್ಯ ಮತ್ತು ಸಹಬಾಳ್ವೆಯ ದಾರಿಯನ್ನಷ್ಟೇ ತೋರಿಸಿದೆ ಮತ್ತು ಅದು ಕನ್ನಡದ ಅಸ್ಮಿತೆಯೂ ಹೌದು. ಆದರೆ, ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಸಾಹಿತ್ಯ ಸಮ್ಮೇಳನವು ಸಂಪೂರ್ಣವಾಗಿ ತಾರತಮ್ಯದಿಂದ ಕೂಡಿದ ಸದ್ದುಗದ್ದಲ ಮಾತ್ರ. ಕನ್ನಡ ಸಾಹಿತ್ಯ ಪರಿಷತ್ತು ಅಲ್ಪಮಾನವತ್ವವನ್ನು ಪ್ರತಿಯೊಂದು ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ಪ್ರತಿಪಾದಿಸುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿರುವ ದಲಿತರ ಮೇಲಿನ ದೌರ್ಜನ್ಯ, ಸ್ತ್ರೀ ಶೋಷಣೆ, ಮುಸ್ಲಿಂ ಫೋಬಿಯಾವನ್ನು ಹಬ್ಬಿಸುತ್ತಿರುವುದು, ಲಿಂಗ ಅಲ್ಪಸಂಖ್ಯಾತರ ಘನತೆ, ಸರ್ಕಾರಿ ಶಾಲೆಗಳ ಸ್ಥಿತಿ ಗತಿ- ಹೀಗೆ ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ಸಮ್ಮೇಳನದಲ್ಲಿ ಇವುಗಳ ಕುರಿತ ಒಂದು ಗೋಷ್ಠಿಯೂ ಇಲ್ಲದಿರುವುದು, ಸಾಹಿತ್ಯ ಪರಿಷತ್ತಿನ ಜಾಣಕುರುಡುತನಕ್ಕೆ ಸಾಕ್ಷಿಯಂತಿದೆ. ಅಷ್ಟೇ ಅಲ್ಲದೆ ಸಮ್ಮೇಳನವು ಕನ್ನಡದ ಸಮಗ್ರತೆಯನ್ನು ಪ್ರತಿಪಾದಿಸಬೇಕೆ ಹೊರತು, ಒಡಕುತನವನ್ನು ದೊಡ್ಡದು ಮಾಡುವ ಸಣ್ಣತನವನ್ನು ತೋರಬಾರದು.

ಇದನ್ನೂ ಓದಿ: ಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

ಸಾಹಿತ್ಯ ಸಮ್ಮೇಳನದ ಯಾವ ಗೋಷ್ಠಿಯೂ ಕೂಡ ದಲಿತ ಸಾಹಿತ್ಯ ಸಂವೇದನೆಗಳ ಕುರಿತ ಚರ್ಚೆಗಳನ್ನು ಒಳಗೊಂಡಿಲ್ಲ. ಮುಸ್ಲಿಂ ಕವಿಗಳ ಪ್ರಾತಿನಿಧ್ಯದಲ್ಲಿ ತಾರತಮ್ಯ, ಅಲ್ಲದೇ, ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿಸುವ ಸಂಪನ್ಮೂಲ ವ್ಯಕ್ತಿಯಾಗಲಿ, ಕವಿಗಳಾಗಲಿ ಕಾಣಿಸುವುದೇ ಇಲ್ಲ. ಇದೊಂದು ಬಹಿರಂಗವಾದ ಅಸ್ಪೃಶ್ಯತೆಯ ಆಚರಣೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಇಂಥ ದುರಿತ ಕಾಲದಲ್ಲಿ

ಸಾಮರಸ್ಯವನ್ನು ಹಬ್ಬಿಸಬೇಕು ಹೊರತು, ಅದನ್ನು ಇಲ್ಲವಾಗಿಸುವ ಸಾಹಿತ್ಯ ಸಮ್ಮೇಳನವನ್ನು ಬಹಿಷ್ಕರಿಸಿಸುವುದು ಸಾಮಾಜಿಕ ಜವಾಬ್ದಾರಿ ಇರುವ ಪ್ರತಿಯೊಬ್ಬರ ಹೊಣೆಗಾರಿಕೆ ಎಂದು ನಾನು ನಂಬುತ್ತೇನೆ.
ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳದ ಯಾವ ಸಂಘ, ಸಂಸ್ಥೆ ಮತ್ತು ಸರ್ಕಾರವು ಜೀವ ವಿರೋಧಿಯ ದಂಧೆಕೋರನಾಗಿಯೇ ಉಳಿದಿರುತ್ತದೆ. ನೈತಿಕತೆಯ ಅರಿವು ಮತ್ತು ಕಡೆಗಣಿಸಲ್ಪಟ್ಟ ಸಂವೇದನೆಗಳನ್ನು ಒಟ್ಟಗೂಡಿಸಿ ನಡೆದರೆ ಮಾತ್ರ ಸಾಹಿತ್ಯ ಸಂಭ್ರವಾಗಬಲ್ಲದು, ಇಲ್ಲವೆಂದರೇ ಅದು ಸೂತಕವಾಗಿಯೇ ಕಾಣುತ್ತದೆ. ಅಷ್ಟಕ್ಕೂ ಜಾತಿ ಪ್ರತಿಷ್ಠೆಯಿಂದ ಅಧಿಕಾರ ಹಿಡಿದವರೆಲ್ಲ, ಸ್ವಜಾತಿ ಮೋಹಿಗಳಾಗಿ ಅಲ್ಪಸಂಖ್ಯಾತರನ್ನು “ಅನ್ಯರಂತೆ” ಕಾಣುವುದು ದುರಂತ. ಗುರು ಗೋವಿಂದ ಮತ್ತು ಷರೀಫರ ಸಾಮರಸ್ಯ ಇದ್ದಾಗಲೇ ಸಮ್ಮೇಳನವಾದೀತು. ಇಲ್ಲದಿದ್ದರೆ, ಉಡುಪಿ ಮಠದಿಂದ ಕನಕದಾಸರನ್ನು ಹೊರಗಿಟ್ಟಹಾಗೆಯೇ ನಯವಾದ ಜಾತಿ ರಾಜಕಾರಣವೇ ಗೆದ್ದೀತು!

ಚಾಂದ್ ಪಾಷ ಎನ್ ಎಸ್
ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ,
ಬೆಂಗಳೂರು ವಿ ವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...