ಮೌಲ್ಯಾಧಾರಿತ ಜೀವನವನ್ನು ನಡೆಸಿಕೊಂಡು ಬಂದು ನೈತಿಕ ವ್ಯಕ್ತಿತ್ವವನ್ನು ಉಸಿರಾಡಿದವರ ಸಿಟ್ಟಿಗೆ ನೂರಾರು ಉರಿನಾಲಗೆ ಇರುತ್ತದೆ. ಅಂತಹವರ ಸಿಟ್ಟನ್ನು ತಣಿಸಲು, ಸರ್ಕಾರಗಳು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕಷ್ಟೇ. ಸುಳ್ಳಿನ ಮಾರ್ಗವನ್ನು ತೊರೆದು ಸತ್ಯದ ಮಾರ್ಗವನ್ನು ಮತ್ತೆ ತುಳಿಯಬೇಕಷ್ಟೇ. ಅದನ್ನು ಬಿಟ್ಟು ಅಂತಹ ನೈತಿಕ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರ ಫಲ ಕೊಡುವುದು ಅನುಮಾನವೇ.

ಸ್ವಾತಂತ್ರ್ಯ ಹೋರಾಟಗಾರ, ಚಳವಳಿಗಳ ಮುಂದಾಳು, ಗಾಂಧೀವಾದಿ, ಶತಾಯುಷಿ ಎಚ್.ಎಸ್.ದೊರೆಸ್ವಾಮಿಯವರು ‘ನಕಲಿ ಸ್ವಾತಂತ್ರ್ಯ ಹೋರಾಟಗಾರ, ಅವರು ಪಾಕಿಸ್ತಾನಿ ಏಜೆಂಟ್’ ಎಂಬಿತ್ಯಾದಿಯಾಗಿ ಬಿಜೆಪಿ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಳ್ಳಿನ ಅಸಹನೆಯ ಕಂತೆಯನ್ನು ಸುರುಳಿಸುರುಳಿಯಾಗಿ ಹರಿಬಿಟ್ಟಿರುವುದು ರಾಜ್ಯದ ಜನತೆಗೆ ಆಘಾತ ಮತ್ತು ಆಕ್ರೋಶವನ್ನು ತಂದಿದೆ. ಇದರ ಬೆನ್ನಿನಲ್ಲೆ ಸಚಿವ ವಿ.ಸೋಮಣ್ಣ ಮತ್ತು ಎಸ್.ಸುರೇಶ್ ಕುಮಾರ್‌ರವರಂತಹ ಇನ್ನಿತರ ಬಿಜೆಪಿ ಮತ್ತು ಆರ್.ಎಸ್.ಎಸ್ ಮುಖಂಡರು ಯತ್ನಾಳ್ ಅವರ ಶುದ್ಧ ಸುಳ್ಳಿನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ಏಕೆ? ಶತಾಯುಷಿ ಎಚ್.ಎಸ್.ದೊರೆಸ್ವಾಮಿಯೇ ಇವರುಗಳ ಟಾರ್ಗೆಟ್ ಆಗಿರುವುದು ಏಕೆ?

ಎಚ್.ಎಸ್.ದೊರೆಸ್ವಾಮಿಯವರು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಸಾಕ್ಷಿಪ್ರಜ್ಞೆಯಾಗಿ ನಾಗರಿಕರ ಹಕ್ಕುಗಳನ್ನು ಕಾಯ್ದುಕೊಳ್ಳಲು ಸದಾ ಹೋರಾಟಕ್ಕೆ ಮುಂದಾಗಿರುವುದು ಸರ್ಕಾರಗಳ ಅಸಹನೆಗೆ ಮುಖ್ಯ ಕಾರಣವಾಗಿ ಕಾಣುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಸರ್ಕಾರ, ತುರ್ತುಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿಯವರ ಸರ್ಕಾರ, ಹಲವು ಕರ್ನಾಟಕದ ರಾಜ್ಯ ಸರ್ಕಾರಗಳು ಮತ್ತು ಈಗಿನ ಕೇಂದ್ರ ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿದ್ದಾರೆ. ಹಿಂದೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಭುತ್ವದ ಸಂಸ್ಥೆಗಳೇ ದೊರೆಸ್ವಾಮಿಯವರ ಮೇಲೆ ಮುಗಿಬಿದ್ದಿದ್ದರೆ, ಈಗಿನ ಪ್ರಭುತ್ವ ತಮ್ಮ ನೆಚ್ಚಿನ ಅಸ್ತ್ರವಾದ ನಕಲಿ ಸುದ್ದಿಗಳ ಪ್ರಚಾರದ ಮೊರೆ ಹೋಗಿದೆ. ಅದಕ್ಕಾಗಿ ಯತ್ನಾಳ್ ಅಂತಹವರ ಬೆಂಬಲ ತೆಗೆದುಕೊಂಡು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡಲು ಹಲವು ಐಟಿ ಸೆಲ್‍ಗಳು ತೊಡಗಿಸಿಕೊಂಡಿವೆ.

ಸದ್ಯಕ್ಕೆ ಎಚ್.ಎಸ್.ದೊರೆಸ್ವಾಮಿ ಅವರು ಸದರಿ ಕೇಂದ್ರ ಸರ್ಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವುದು, ಸಿಎಎ ವಿರೋಧ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದರಿಂದ. ದೇಶದಾದ್ಯಂತ ಸಿಎಎ, ಎನ್‍ಪಿಆರ್ ಮತ್ತು ಎನ್‍ಆರ್‌ಸಿ ವಿರೋಧಿ ಚಳವಳಿಗಳು ಚುರುಕು ಪಡೆದುಕೊಂಡು, ದೇಶದ ಆರ್ಥಿಕ ಪರಿಸ್ಥಿತಿಯ ಹಿನ್ನಡೆಯ ಸಂದರ್ಭದಲ್ಲಿ ಸರ್ಕಾರಕ್ಕೆ ಹೆಚ್ಚೆಚ್ಚು ಮುಜುಗರ ತಂದಿವೆ. ರಾಜಧಾನಿ ದೆಹಲಿಯಲ್ಲಿಯೇ ಬಿಜೆಪಿ ಪಕ್ಷದ ಕೆಲವು ಮುಖಂಡರ ಪ್ರಚೋದನಕಾರಿ ಹೇಳಿಕೆಗಳಿಂದ ಪ್ರೇರಣೆಯಾಗಿ ಗಲಭೆಗಳಾಗಿ ಹತ್ತಾರು ಸಾವುಗಳು ಸಂಭವಿಸಿವೆ. ಇಂತಹ ಮುಖಂಡರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರ್ಟ್ ಹಾಲಿನಲ್ಲಿಯೇ ಪೊಲೀಸರಿಗೆ ವಿಡಿಯೋ ತೋರಿಸಿ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಮುರುಳೀಧರ್ ಅವರ ವರ್ಗಾವಣೆ ರಾತ್ರೋರಾತ್ರಿ ನಡೆದಿದೆ. ನ್ಯಾಯಮೂರ್ತಿ ಮುರುಳೀಧರ್ ಅವರು ಕಾಂಗ್ರೆಸ್ ಮುಖಂಡರಾದ ಸೋನಿಯಾಗಾಂಧಿ ಅವರಿಗೆ ಆಪ್ತರು ಎಂಬ ನಕಲಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡಲಾಗುತ್ತಿದೆ. ಹೀಗೆ ನಕಲಿ ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುವ ಗುಂಪು ಈಗ ದೊರೆಸ್ವಾಮಿ ಅವರ ವಿರುದ್ಧ ಕೂಡ ಸೆಣೆಸಲು ತನ್ನೆಲ್ಲಾ ಬತ್ತಳಿಕೆಯನ್ನು ಬಳಸುತ್ತಿದೆ. ಎಚ್.ಎಸ್.ದೊರೆಸ್ವಾಮಿ ಅವರು ಈಗಿನ ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಸಿಡಿದು ಜೈಲೋ ಭರೋ ಚಳವಳಿಗೆ ಕರೆ ಕೊಡುವ ಮುನ್ಸೂಚನೆ ಇವರನ್ನೆಲ್ಲ ಅಲುಗಾಡಿಸಿದೆ. ಸಂವಾದ ಮಾಡುವುದು ಇರಲಿ ಸಣ್ಣ ಟೀಕೆಯನ್ನೂ ಕೇಳಿಸಿಕೊಳ್ಳದ ಸರ್ಕಾರ ಮತ್ತು ಅದನ್ನು ಬೆಂಬಲಿಸುವ ಮುಖೇಡಿ ಐಟಿಸೆಲ್‍ಗಳು ಈಗ ಜಾಗೃತವಾಗಿವೆ.

ಇತ್ತೀಚೆಗಷ್ಟೇ ಕ್ಯಾರವಾನ್ ಪತ್ರಿಕೆ ಮಹಾತ್ಮ ಗಾಂಧಿ ಹತ್ಯೆಯ ಮುಖ್ಯ ರೂವಾರಿ ನಾಥೂರಾಮ್ ಗೋಡ್ಸೆ, ಆರ್‌ಎಸ್‍ಎಸ್ ತೊರೆದೇ ಇರಲಿಲ್ಲ ಎಂಬುದಕ್ಕೆ ಹೊಸ ಪುರಾವೆಗಳು ಸಿಕ್ಕಿವೆ ಎಂಬ ಒಂದು ದೀರ್ಘ ಲೇಖನವನ್ನು ಪ್ರಕಟ ಮಾಡಿತ್ತು. ಗಾಂಧಿ ಹತ್ಯೆಯಾದಾಗಲಿಂದಲೂ ಆರ್‌ಎಸ್‍ಎಸ್, ಗೋಡ್ಸೆಯಿಂದ ದೂರ ಸರಿಯಲು ಪ್ರಯತ್ನಿಸಿದೆ. ಆದರೆ ಪತ್ರಕರ್ತರೂ ಆಗಿದ್ದ ಎಚ್.ಎಸ್.ದೊರೆಸ್ವಾಮಿ ಅವರು ಗಾಂಧಿ ಹತ್ಯೆಯ ಮುಂಚಿನ ಇತಿಹಾಸವನ್ನೂ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇತಿಹಾಸವನ್ನು ನಿಖರವಾಗಿ ಅರಿತಿರುವ ಎಚ್.ಎಸ್.ದೊರೆಸ್ವಾಮಿ, ನಾಥೂರಾಮ್ ಗೋಡ್ಸೆ ಮತ್ತು ಆರ್‌ಎಸ್‍ಎಸ್ ಸಂಬಂಧದ ಬಗ್ಗೆ ಹಲವಾರು ವರ್ಷಗಳಿಂದ ಹೇಳುತ್ತಾ, ಬರೆಯುತ್ತಾ ಬಂದಿದ್ದಾರೆ. ಅಲ್ಲದೆ ಗಾಂಧಿ ಹತ್ಯೆಯಲ್ಲಿ ಆರೋಪಿಯಾಗಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾದ ವಿ.ಡಿ.ಸಾವರ್ಕರ್ ಅವರ ವಿರುದ್ಧ, ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರವನ್ನು ಬರೆದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೆ ಇದ್ದುದರ ಬಗ್ಗೆ ಬಹಳ ನಿಷ್ಠುರವಾಗಿ ನುಡಿಯುವ ಗಾಂಧಿವಾದಿ ದೊರೆಸ್ವಾಮಿಯವರ ಬಗ್ಗೆ ಕೋಪ, ದ್ವೇಷ, ಅಸೂಯೆಗಳು ಸಂಘ ಪರಿವಾರದವರಿಗೆ ಹುಟ್ಟಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲದೆ ಹೋದರೂ ಆತಂಕಕಾರಿ ವಿಷಯವಾಗಿದೆ. ವಿಶ್ವದ ನಾಯಕರ ಮುಂದೆ ಗಾಂಧಿಯನ್ನು ಹೊಗಳುವ, ಅವರದೇ ಬೈಠಕ್‍ಗಳಲ್ಲಿ ಗೋಡ್ಸೆ ಮತ್ತು ಸಾವರ್ಕರ್ ಅವರುಗಳನ್ನು ಆರಾಧಿಸುವ ಮಂದಿಗೆ ದೊರೆಸ್ವಾಮಿಯವರು ಸತ್ಯದ ದಾಖಲೆಗಳೊಂದಿಗೆ ಕಟ್ಟಿಕೊಡುವ ಇತಿಹಾಸ ಸಮಸ್ಯೆ ಸೃಷ್ಟಿಸಿದೆ.

ಸ್ವ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ, ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಬರೆದು ಜೈಲಿಗೆ ಸೇರಿದ್ದ ದೊರೆಸ್ವಾಮಿಯವರಿಗೆ ಹೆದರಿಸಿ ಮೂಲೆಗುಂಪು ಮಾಡಲು ಸರ್ಕಾರಗಳಿಗೆ ಬೇರೆ ಯಾವುದೇ ಮಾರ್ಗ ಇಲ್ಲವಾಗಿದೆ. ಪ್ರಜಾಪ್ರಭುತ್ವವಾದಿಯಾಗಿರುವ ಶತಾಯುಷಿಗಳಿಗೆ ಯಾವುದೇ ಸರ್ಕಾರದ ಸರ್ವಾಧಿಕಾರದ ಧೋರಣೆಯನ್ನು ಸುಮ್ಮನೆ ನೋಡಿಕೊಂಡು, ಸಹಿಸಿಕೊಂಡು ಅಥವಾ ಕೇವಲ ಬಾಯಿಮಾತಿನಲ್ಲಿ ಟೀಕಿಸಿಕೊಂಡು ನಂತರ ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವ ಇರುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುವುದು, ಜನಾಭಿಪ್ರಾಯ ಮೂಡಿಸುವುದು ಅವರ ಮೂಲಗುಣ. ಗಾಂಧಿಯವರ ಜೊತೆಗಿನ ಹೋರಾಟದಲ್ಲಿ ಅವರು ರೂಢಿಸಿಕೊಂಡ ಧೋರಣೆ. ಬಹುಶಃ ಇದನ್ನು ಒಬ್ಬ ಅಥವಾ ಇಂತಹ ಸಾವಿರಾರು ಯತ್ನಾಳ್‍ಗಳಿಂದ ಬದಲಿಸಲು ಅಥವಾ ಬೆದರಿಸಲು ಸಾಧ್ಯವಿಲ್ಲವೇನೋ.

ಟಿಪ್ಪುವಿನ ಬ್ರಿಟಿಷರ ವಿರುದ್ಧದ ಹೋರಾಟದ ಸಂಗತಿಗಳನ್ನು ತಿರುಚುವುದು, ಕೋಮುವಾದಿಗಳ ವಿರೋಧಿಗಳಾಗಿದ್ದ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅಂತಹ ನಾಯಕರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ತಂತ್ರ ಮಾಡುವುದು, ಗಾಂಧಿ ಹತ್ಯೆಯ ಸಂದರ್ಭದಲ್ಲಿ ಆರ್‍ಎಸ್‍ಎಸ್ ನಾಯಕರನ್ನು ಬಂಧಿಸಿ, ಆರ್‍ಎಸ್‍ಎಸ್ ನಿಷೇಧಿಸಲು ಅಂದಿನ ಪ್ರಧಾನಿ ಪಂಡಿತ್ ಜವಹರ್‌ಲಾಲ್ ನೆಹರು ಅವರಿಗೆ ಪತ್ರ ಬರೆದಿದ್ದ ಅಂದಿನ ಗೃಹಮಂತ್ರಿ ಸರ್ದಾರ್ ವಲ್ಲಭಾಯಿ ಪಟೇಲ್ ನೆಹರೂರ ವಿರೋಧಿಗಳಾಗಿದ್ದರು ಎಂಬಂತೆ ಬಿಂಬಿಸುವುದು, ನೆಹರೂವಿನಿಂದ ಹಿಡಿದು ಪ್ರಮುಖ ಪ್ರಗತಿಪರ ಮುಖಂಡರ ಕುರಿತು ಸುಳ್ಳು ವೈಯಕ್ತಿಕ ಸಂಗತಿಗಳನ್ನು ಸೃಷ್ಟಿಸಿ ಖಳನಾಯಕರಂತೆ ಬಿಂಬಿಸುವುದು, ದೇಶದ ಸಾಮರಸ್ಯಕ್ಕೆ ಧಕ್ಕೆ ಆಗುವಂತೆ ಸೈದ್ಧಾಂತಿಕ ಪೊಲರೈಸೇಶನ್‍ಅನ್ನು ವಿಪರೀತಕ್ಕೆ ತೆಗೆದುಕೊಂಡು ಹೋಗುವುದು, ಸಂವಿಧಾನ ಬರೆದದ್ದು ಅಂಬೇಡ್ಕರ್ ಅಲ್ಲ ಎಂಬಂತಹ ಸುಳ್ಳು ಸುದ್ದಿಗಳನ್ನು ಹರಿದುಬಿಡುವುದು ಇಂತಹ ಪ್ರೊಪಗಾಂಡದ ಭಾಗವಾಗಿಯೇ.

ಈಗ ನಮ್ಮೆಲ್ಲರ ನಡುವೆ ತಮ್ಮ 103ನೇ ವಯಸ್ಸಿನಲ್ಲಿ ಪ್ರತಿರೋಧದ ಮಹಾಮೂರ್ತಿಯಂತೆ ಬದುಕುತ್ತಿರುವ ದೊರೆಸ್ವಾಮಿ ಅವರ ವಿರುದ್ಧ ಕೆಸರೆರಚಾಟಕ್ಕೆ ಸಂಘಪರಿವಾರದ ಹಲವು ಮುಖಂಡರು ಎದ್ದುಕೂತಿದ್ದಾರೆ. ನೈತಿಕವಾಗಿ ಗಟ್ಟಿಯಿಲ್ಲದ ವ್ಯಕ್ತಿಯ ವಿರುದ್ಧ ಆಗಿದ್ದರೆ ಸಫಲರಾಗುತ್ತಿದ್ದರೇನೋ, ಆದರೆ ಈ ಬಾರಿ ಅವರು ತಮ್ಮ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡಿರುವ ವ್ಯಕ್ತಿತ್ವ ಮತ್ತು ಅವರನ್ನು ಗೌರವಿಸುವ ಲಕ್ಷಾಂತರ ನಾಗರಿಕರು ತಿರುಗಿಬಿದ್ದರೆ ತಾವು ಕಟ್ಟುವ ಸುಳ್ಳಿನ ಸೌಧ ನೆಲಸಮವಾಗಿ ಬೂದಿಯಾದೀತು!

LEAVE A REPLY

Please enter your comment!
Please enter your name here