ಕರ್ನಾಟಕ ಕರಾವಳಿಯನ್ನು ಹಿಂದುತ್ವದ ಯಜ್ಞಕುಂಡವಾಗಿ ಕಾಪಿಟ್ಟುಕೊಂಡು ಧರ್ಮಕಾರಣ ನಿರಾಯಾಸವಾಗಿ ಸಾಧಿಸುತ್ತಿರುವ ಸಂಘಪರಿವಾರದ ಪುರೋಹಿತ ಪಠಾಲಮ್ ಮೊನ್ನೆ (11-01-2020) ಉಡುಪಿಯಲ್ಲಿ ನಡೆಯಬೇಕಿದ್ದ ಬಿಲ್ಲವ-ಮುಸ್ಲಿಂ ಸ್ನೇಹ ಸಮ್ಮೇಳನಕ್ಕೆ ಕಲ್ಲು ಹಾಕಿ ಕೇಕೆ ಹಾಕುತ್ತಿದೆ!! ಹಿಂದೂ-ಮುಸ್ಲಿಂ ಮಧ್ಯೆ ಸಂಘರ್ಷ ತಂದಿಟ್ಟರಷ್ಟೇ ಅಧಿಕಾರ ಅಬಾಧಿತವೆಂಬ ಸತ್ಯ ಸಾಕ್ಷಾತ್ಕಾರಗೊಂಡಿರುವ ಇವರು ತಮ್ಮ ಗುಲಾಮರಂತೆ ಇರುವ ಒಂದಿಷ್ಟು ಹುಂಬ ಬಿಲ್ಲವ ಪುಢಾರಿಗಳನ್ನೇ ಅಂತರ್ ಧರ್ಮೀಯ ಸಮಾವೇಶದ ವಿರುದ್ಧ ಛೂಬಿಟ್ಟು ಮಜಾ ಅನುಭವಿಸುತ್ತಿದ್ದಾರೆ.

ಸಮಾವೇಶದ ಸಂಘಟಕರಿಗೆ ಮತ್ತು ಅದರಲ್ಲಿ ಭಾಗವಹಿಸುವ ಮಾನವತಾವಾದಿಗಳಿಗೆ ಭೂಗತರಿಂದ ಕೊಲ್ಲುವ ಬೆದರಿಕೆ ಹಾಕಿಸುವ ಲೆವೆಲ್ಲಿಗೂ ಪರಿವಾರ ಪರಾ’ಕ್ರಿಮಿ’ಗಳು ಇಳಿದಿರುವುದು ನೋಡಿದರೆ ಕೆಳಸ್ತರದ ಹಿಂದೂ-ಮುಸ್ಲಿಂ ಜನಸಾಮಾನ್ಯರು ಹೊಂದಿಕೊಂಡು ಬಾಳುವ ಪ್ರಯತ್ನ ಕೇಸರಿ ಕೋಮು ರಾಜಕಾರಣಿಗಳನ್ನು ಅದೆಷ್ಟು ಕಂಗೆಡಿಸಿದೆ ಎಂಬುದು ಅರ್ಥವಾಗುತ್ತದೆ. ಜೊತೆಗೆ ಸಂಘಪರಿವಾರಕ್ಕೆ ಪಾಠ ಕಲಿಸಲು ಇಂಥಾ ಸ್ನೇಹ ಸಮಾವೇಶಗಳೇ ಸರಿಯಾದ ದಿಕ್ಕು ಎಂಬುದನ್ನೂ ಪ್ರಗತಿಪರರಿಗೆ ಮನನ ಮಾಡಿಸುತ್ತಿದೆ.

ಕರಾವಳಿಯ ಮುಸ್ಲಿಮ್ ಒಕ್ಕೂಟ ಕಳೆದ 18 ವರ್ಷದಿಂದ ಹಿಂದೂ ಮುಸ್ಲಿಂ ಐಕ್ಯತೆಗಾಗಿ ಒಂದಲ್ಲ ಒಂದು ಕಾರ್ಯಕ್ರಮ ಹಾಕಿಕೊಳ್ಳುತ್ತಲೇ ಬಂದಿದೆ. ಜಮಾತೆ ಇಸ್ಲಾಮಿ ಹಿಂದ್‌ನವರು ಹಿಂದೂ ಮುಸ್ಲಿಂ ಸಮಾವೇಶ ಹಲವು ಸಲ ಆಯೋಜಿಸಿದ್ದರು; ಕುರಾನ್ ಕನ್ನಡ ಅವತರಣಿಕೆಯನ್ನು ಇತರ ಧರ್ಮೀಯರಿಗೆ ಪರಿಚಯಿಸುವ ಹಿಂದೂ-ಮುಸ್ಲಿಂ ಸಮಾಗಮ ಏರ್ಪಡಿಸಲಾಗಿತ್ತು. ಇದರಲ್ಲಿ ಜಿಲ್ಲಾ ವಿಎಚ್‌ಪಿ ಅಧ್ಯಕ್ಷರಾಗಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮಿ, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀ…. ಮುಂತಾದ ಹಿಂದೂ ಧಾರ್ಮಿಕ ಸೆಲೆಬ್ರಿಟಿಗಳು ಭಾಗವಹಿಸಿದ್ದೂ ಇದೆ. ಪೇಜಾವರ ವಿಶ್ವೇಶತೀರ್ಥ ಸ್ವಾಮಿಯಂತೂ ಅವರ ಜೊತೆ ಮಠದಲ್ಲೇ ಇಫ್ತಾರ್ ಕೂಟ ನಡೆಸುತ್ತಿದ್ದರು.

ವಿಪರ್ಯಾಸವೆಂದರೆ ಸಾಮರಸ್ಯ ಪ್ರಯತ್ನದ ನಡುವೆಯೂ ಹಿಂದೂ ಸಮುದಾಯದ ಹಿಂದುಳಿದ ವರ್ಗದ ತರುಣ-ತರುಣಿಯರಲ್ಲಿ ಮುಸ್ಲಿಮರ ಬಗ್ಗೆ ಅಂತರ ಹೆಚ್ಚುತ್ತಾ ಹೋಯಿತು. ಹಿಂದುಳಿದ ವರ್ಗದ ಯುವ ಸಮೂಹದಲ್ಲಿ ವಿನಾಕಾರಣ ಮುಸ್ಲಿಂ ದ್ವೇಷ ತುಂಬಲು ಕರಾವಳಿ ಆರೆಸ್ಸೆಸ್ ರಿಂಗ್‌ಮಾಸ್ಟರ್ ಕಲ್ಲಡ್ಕ ಪ್ರಭಾಕರ ಭಟ್ಟನ ಬೆಟಾಲಿಯನ್ ಯಶಸ್ವಿಯಾಗಿತ್ತು. ಕಲ್ಲಡ್ಕ ಭಟ್ಟನ ಹುಸಿ ಹಿಂದುತ್ವದ ಹೊಡೆದಾಟಕ್ಕೆ ಕಾಲಾಳುಗಳಾಗಿ ತಯಾರಾದ ಬ್ರಾಹ್ಮಣೇತರ ಹುಡುಗರು ಸಾಬರ ಆಹುತಿ ಪಡೆಯುವ ರೊಚ್ಚಿನಲ್ಲಿ ತಾವೇ ಹತರಾಗತೊಡಗಿದರು ಅಥವಾ ಜೈಲು ಪಾಲಾದರು. ಈ ರೋಗವಾಸಿಗೆ ಹಿಂದುಳಿದ ವರ್ಗದ ತಾರುಣ್ಯ ವಲಯದ ಮನೋಭಾವ ಬದಲಾವಣೆಗೆ ಪ್ರಯತ್ನವೊಂದೇ ಮದ್ದೆಂಬ ಯೋಚನೆ ಹಿಂದೂ-ಮುಸ್ಲಿಂ ಎರಡೂ ಕಡೆಯ ಮನುಷ್ಯತ್ವವಾದಿಗಳಲ್ಲಿ ಸಹಜವಾಗೇ ಮೊಳೆಯಿತು.

ಈ ಸದಾಶಯದ ಹಿನ್ನೆಲೆಯಲ್ಲಿ ಕರಾವಳಿಯ ಹಿಂದುಳಿದ ವರ್ಗದ ಜಾತಿಗಳ ಜತೆ ಪ್ರತ್ಯೇಕವಾಗಿ ಮುಸ್ಲಿಮರು ಬೆರೆತು ಅಸಮಾಧಾನ ಅನುಮಾನ ಹೋಗಲಾಡಿಸಿಕೊಳ್ಳುವ ಸಮ್ಮಿಲನ ಸಂಘಟಿಸಲು ಸ್ಥಳೀಯ ಮುಸ್ಲಿಂ ಒಕ್ಕೂಟದವರು ಮುಂದಾದರು. ಮೊದಲಿಗೆ ಬಿಲ್ಲವರೊಂದಿಗೆ ಸಮರಸದ ಸಮಾವೇಶ ಮಾಡಲು ತೀರ್ಮಾನಿಸಲಾಯಿತು. ಇದಕ್ಕೆ ಬಿಲ್ಲವ ಸಮುದಾಯದ ಮುಂಚೂಣಿ ಮುಖಂಡರಿಂದ ತೆರೆದ ಹೃದಯದ ಸಮ್ಮತಿ ಸಹಕಾರವೂ ಸಿಕ್ಕಿತು. ಕೇಸರಿ ಕರಾಮತ್ತುಗಾರರ ಹಿಂದುತ್ವ ಮಾರಣಹೋಮಕ್ಕೆ ಹೆಚ್ಚಾಗಿ ಬಿಲ್ಲವ ಹುಡುಗರೇ ಹವಿಸ್ಸಾಗುತ್ತಿರುವುದರಿಂದ ಇಂಥದ್ದೊಂದು ಸಮಾವೇಶ ಅರ್ಥಪೂರ್ಣವೂ ಅನಿವಾರ್ಯವೂ ಆಗಿತ್ತು! ಜಿಲ್ಲೆಯ ಅಷ್ಟೂ ತಾಲೂಕಿನ ಮುಸ್ಲಿಂ ಒಕ್ಕೂಟದ ಘಟಕಗಳಲ್ಲಿನ ಸಂಘಟನೆಗಳನ್ನು ಸಂಪರ್ಕಿಸಿ ತಮ್ಮ ವಿಚಾರ ಹಂಚಿಕೊಂಡರು. ಇದಕ್ಕೆ ಎಲ್ಲಿಯೂ ವಿರೋಧ ವ್ಯಕ್ತವಾಗಲಿಲ್ಲ. ಹಾಗಾಗಿ ಸಮಾವೇಶಕ್ಕಾಗಿ ಪೂರ್ವಭಾವಿ ಜಿಲ್ಲಾಮಟ್ಟದ ಬಿಲ್ಲವ ಮುಸ್ಲಿಂ ಸಮುದಾಯದ ಸಮಾಲೋಚನಾ ಸಭೆಯನ್ನು ಉಡುಪಿಯ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲೇ ಕರೆಯಲಾಗಿತ್ತು.

ಸೌಹಾರ್ದ ಸಮಾವೇಶ ಏರ್ಪಡಿಸುವ ಉದ್ದೇಶದಿಂದ ಸಭೆ ಸೇರಿದ್ದ ಬಿಲ್ಲವ ಮುಖಂಡರಲ್ಲಿ ಬಿಜೆಪಿಯೂ ಒಳಗೊಂಡು ಅಷ್ಟ್ಟೂ ಪಕ್ಷದವರಿದ್ದರು. ಅದೊಂದು ಪಕ್ಷಾತೀತವಾದ ಶುದ್ಧ ಬಿಲ್ಲವ ಮತ್ತು ಮುಸ್ಲಿಂ ನೇತಾರರ ಸಮಾಲೋಚನೆಯಾಗಿತ್ತು. ಅಲ್ಲಿ ಕಾಂಗ್ರೆಸ್‌ನ ಮಾಜಿ ಮಂತ್ರಿ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ತೋನ್ಸೆ, ಹಿರಿಯ ಸಾತ್ವಿಕ ರಾಜಕಾರಣಿಯೂ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆಗಿರುವ ಮಾಣಿ ಗೋಪಾಲ, ಮಾಜಿ ಶಾಸಕ ಗೋಪಾಲ ಪೂಜಾರಿಯ ಬಲಗೈ ಬಂಟನೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷನೂ ಆಗಿರುವ ಬೈಂದೂರಿನ ರಾಜು ಪೂಜಾರಿ, ಇನ್ನೊಬ್ಬ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ – ಹಾಲಿ ಬಿಜೆಪಿ ಹಿಂದುಳಿದ ವರ್ಗದ ಘಟಕದ ಜಿಲ್ಲಾಧ್ಯಕ್ಷ ಬಿ.ಎನ್ ಶಂಕರ ಪೂಜಾರಿ, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಕಾರ್ಕಳದ ಡಿ ಆರ್ ರಾಜು, ಕುಂದಾಪುರದ ನಾರಾಯಣ ಬಿಲ್ಲವ….. ಮುಂತಾದ ಬಿಲ್ಲವರ ಮುಂಚೂಣಿ ಲೀಡರ್‌ಗಳ ಜತೆ ಅದೇ ಸಮುದಾಯದ ನೂರಾರು ಮಂದಿ ಒಟ್ಟುಗೂಡಿದ್ದರು. ಇವರೊಂದಿಗೆ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಆಹ್ಮದ್ ಯಾಸೀನ್, ಮಹ್ಮದ್ ಇಬ್ರಾಹಿಂ ಹೂಡೆ ಇನ್ನಿತರರಿದ್ದರು.

ಬಿಲ್ಲವ ಮುಸ್ಲಿಂ ಜಂಟಿ ಸಮಾವೇಶ ಆಯೋಜಿಸುವುದಕ್ಕೆ ಸದ್ರಿ ಸಭೆಯಲ್ಲಿ ಒಂದೇಒAದು ಆಕ್ಷೇಪ ವ್ಯಕ್ತವಾಗಿರಲಿಲ್ಲ. ಅನೈತಿಕ ಪೊಲೀಸ್‌ಗಿರಿ, ಕೌ ಬ್ರಿಗೇಡ್, ಬಜರಂಗದಳದ ಧರ್ಮೋನ್ಮಾದದ ದೊಂಬಿ, ಗಲಭೆ, ರಕ್ತಪಾತದಿಂದ ಕಂಗೆಟ್ಟಿರುವ ಬಿಲ್ಲವರಿಗೆ ಸೌಹಾರ್ದ ಸಮ್ಮೇಳನ ಬೇಕೆನಿಸಿತ್ತು. 2020ರ ಜನವರಿ 11ರಂದು ಸಮ್ಮೇಳನ ನಡೆಸುವ ತೀರ್ಮಾನ ತೆಗೆದುಕೊಂಡು ವಿನಯ್ ಕುಮಾರ್ ಸೊರಕೆ ಅಧ್ಯಕ್ಷತೆಯಲ್ಲಿ 16 ಮಂದಿಯ ಸ್ವಾಗತ ಸಮಿತಿ ರಚಿಸಲಾಯಿತು. ಈ ಸಮಿತಿ ನಾಲ್ಕು ಬಾರಿ ಬಿಲ್ಲವ ಸಮುದಾಯದ ಚಡ್ಡಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿಯನ್ನು ಭೇಟಿಯಾಗಿ ಸಮ್ಮೇಳನ ಉದ್ಘಾಟನೆ ಮಾಡುವಂತೆ ಕೇಳಿಕೊಂಡಿತ್ತು. ಮಂತ್ರೀಜಿಯ ಒಪ್ಪಿಗೆ ಪಡೆಯಲು ಬಿಜೆಪಿಯ ಬಿಎಂ ಶಂಕರ ಪೂಜಾರಿ ಜತೆ ಕಾಂಗ್ರೆಸ್‌ನ ತೋನ್ಸೆ, ಇದ್ರಿಸ್ ಹೂಡೆ, ಎಂ.ಎ.ಮೌಲಾನಾ, ಮಂತ್ರಿಗಳ ಕೋಟದ ಮನೆ ಪಕ್ಕದ ಇಬ್ರಾಹಿಂ ಸಾಹೇಬರು ಹೋಗಿದ್ದರು. ಸಚಿವ ಪೂಜಾರಿ ಆನಂದದಿಂದಲೇ ಆಹ್ವಾನ ಸ್ವೀಕರಿಸಿ ತನ್ನ ದಿನಾಂಕ ಹೊಂದಿಸಿಕೊಟ್ಟಿದ್ದರು.

ಸಮ್ಮೇಳನದ ತಯಾರಿ ಭರದಿಂದ ಸಾಗಿತ್ತು. ತಳಮಟ್ಟದ ಬಿಲ್ಲವ ಮತ್ತು ಸಾಬರನುಸೀ ಸಭೆ ಸೆಳೆಯುವ ಸಕಲ ಸೂಚನೆ ಗೋಚರಿಸಲಾರಂಭಿಸಿತ್ತು. ಬಿಲ್ಲವ ಜಾತಿಯಲ್ಲಂತೂ ದೊಡ್ಡಮಟ್ಟದ ಸ್ಪಂದನ ಶುರುವಾಗಿತ್ತು. ಇದು ಸಂಘ ಪರಿವಾರದ ಜನಿವಾರಿಗಳ ಕಣ್ಣು ಕೆಂಪಾಗಿಸಿತು. ಬಿಲ್ಲವ ಮತ್ತು ಮುಸ್ಲಿಮರ ಒಂದುಮಾಡುವ ಸಮಾವೇಶ ತಮ್ಮ ಹುಸಿ ಹಿಂದುತ್ವಕ್ಕೆ ಗಂಡಾಂತರಕಾರಿ ಎಂಬ ಆತಂಕಕ್ಕೆ ಬಿದ್ದ ಕೇಸರಿ ಕಲಿಗಳು ಹೇಗಾದರೂ ಮಾಡಿ ಅದನ್ನು ನಡೆಸಲು ಬಿಡಬಾರದೆಂದು ಷಡ್ಯಂತ್ರ ಶುರುಹಚ್ಚಿಕೊಂಡರು.

ಸಮ್ಮೇಳನಕ್ಕೆ ಇನ್ನೇನು ಒಂದು ವಾರವೂ ಇಲ್ಲವೆಂದಾಗ ಸಂಘಿಗಳ ಗುಲಾಮರಾದ ಒಂದಿಷ್ಟು ಬಿಲ್ಲವ ಪುಢಾರಿಗಳಿಂದ ಅಪಸ್ವರ ಹಾಡಿಸಲಾಯಿತು. ಹಿಂದುತ್ವಕ್ಕೆ ವಿರುದ್ಧ ಸಂಸ್ಕೃತಿಯ ಸಾಬರ ಸಂಗಡ ಬಿಲ್ಲವರು ಸೇರುವುದು ಸರಿಯಲ್ಲ; ಜಿಲ್ಲಾಡಳಿತ ಈ ಸಮಾವೇಶ ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆಂದು ಧಮ್ಕಿ ಹೇಳಿಕೆಗಳು ಬರತೊಡಗಿದವು. ಬಿಲ್ಲವರ ಒಳಿತಿಗೆ ಹೋರಾಡಿದ ಸಾಸ್ತಾನದ ದಿವಂಗತ ಚಂದು ಪೂಜರಿ ಮೊಮ್ಮಗನನ್ನು ಚಡ್ಡಿಗಳು ಬಳಸಿಕೊಂಡಿದ್ದು ತಮಾಷೆಯಾಗಿದೆ. ಈ ಪೆದ್ದು ಹುಡುಗನಿಂದ ಸೌಹಾರ್ದ ಸಮ್ಮಿಲನದ ವೇದಿಕೆಗೆ ತನ್ನಜ್ಜನ ಹೆಸರಿಟ್ಟಿರುವುದನ್ನು ತಕ್ಷಣ ತೆಗೆಯಬೇಕು ಎಂದು ಹೇಳಿಸಲಾಯಿತು.

ಇದು ಬಹಿರಂಗ ಬೊಬ್ಬೆಯಾದರೆ, ರಹಸ್ಯವಾಗಿ ಸಮ್ಮೇಳನಕ್ಕೆ ಅಡ್ಡಗಾಲು ಹಾಕಲು ಚಡ್ಡಿಗಳು ಮಾಡಿದ್ದ ಮಸಲತ್ತು ಒಂದೆರಡಲ್ಲ! ಸಮಾವೇಶದ ತಯಾರಿಯಲ್ಲಿ ತೊಡಗಿದ್ದ ಬಿಲ್ಲವ ಮುಖಂಡರ ಆತ್ಮಸ್ಥೈರ್ಯ ಕೆಡಿಸುವ ಭಯೋತ್ಪಾದನೆ ನಡೆಯಿತು. ಸ್ವಾಗತ ಸಮಿತಿಯ ಪದಾಧಿಕಾರಿಗಳು ಮತ್ತು ಸಮಾವೇಶದ ಅತಿಥಿ ಭಾಷಣ ಕಾರಣರಾಗಿದ್ದ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಮತ್ತಿತರರ ಬಗ್ಗೆ ಕೊಳಕು ಕಥೆಕಟ್ಟಿ ಹರಿಬಿಡಲಾಯಿತು. ಸಮಾವೇಶದಿಂದ ಹಿಂದೆ ಸರಿಯುವಂತೆ ಮಾನಸಿಕ ಒತ್ತಡ ಮತ್ತು ದೈಹಿಕ ಹಲ್ಲೆ ಬೆದರಿಕೆ ಒಡ್ಡಲಾಯಿತು. ಸ್ವಾಗತ ಸಮಿತಿಯಲ್ಲಿದ್ದ ಒಂದಿಬ್ಬರು ಬಿಜೆಪಿ ಒಲವಿನವರು ಹೆದರಿ ಪಲಾಯನವೂ ಮಾಡಿದರು. ಉದ್ಘಾಟನೆಗೆ ಬರುತ್ತೇನೆ ಎಂದಿದ್ದ ಸಚಿವ ಶ್ರೀನಿವಾಸ ಪೂಜಾರಿ, ಗುರು ಕಲ್ಲಡ್ಕ ಭಟ್ಟರ ಕಣ್ಸನ್ನೆಗೆ ಕಂಗಾಲಾಗಿ ಸಮಾವೇಶಕ್ಕೆ ಹೋಗುವುದಿಲ್ಲ ಎಂದುಬಿಟ್ಟರು; ತನಗೆ ಹೇಳದೆ-ಕೇಳದೆ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಹೆಸರು ಹಾಕಲಾಗಿದೆ ಎಂದು ಆತ್ಮವಂಚನೆಯ ಸಬೂಬು ಹೇಳಿದರು!!

ಬಿಲ್ಲವ ಮುಸ್ಲಿಂ ಮಧ್ಯೆ ಎಂದೆಂದೂ ಪ್ರೀತಿ-ವಿಶ್ವಾಸ ಬೆಳೆಯಲೇಬಾರದೆಂಬ ದುರುದ್ದೇಶದ ಸಂಘಿಗಳು ಸೌಹಾರ್ದ ಸಮಾವೇಶ ಮಿಲನ ನಡೆಯದಂತೆ ಮಾಡಲು ಸದ್ಯಕ್ಕಂತೂ ಯಶಸ್ವಿಯಾಗಿದ್ದಾರೆ!! ಸಮ್ಮೇಳನವನ್ನು ಮುಂದೂಡಲಾಗಿದೆ. ಕರಾವಳಿಗೆ ಕಂಟಕವಾಗಿರುವ ಪರಿವಾರ ಈ ಸಮಾವೇಶಕ್ಕೆ ಹೆದರಿದ್ದದಾದರೂ ಏಕೆ? ದಿವಂಗತ ಪೇಜಾವರ ಸ್ವಾಮಿ ಇಫ್ತಾರ್ ಕೂಟ ಮಾಡಿದಾಗ ತಲೆಕೆಡಿಸಿಕೊಳ್ಳದೆ, ಬಿಜೆಪಿ ರಾಜ್ಯಾಧ್ಯಕ್ಷ ಹಣವಂತ ಬ್ಯಾರಿ ಉದ್ಯಮಿಗಳ ಹಾಡಿ ಹೊಗಳಿ ಸನ್ಮಾನ ಸ್ವೀಕರಿಸಿದಾಗ ಚಡಪಡಿಸಿದ ಕೇಸರಿ ಚಡ್ಡಿ ಚತುರರು ಸಾಮಾನ್ಯ ಸಾಬರು ಮತ್ತು ಬಿಲ್ಲವರು ಐಕ್ಯತೆಗೆ ಮನಸ್ಸು ಮಾಡಿದಾಗ ಬೆಚ್ಚಿಬಿದ್ದಿದ್ದಾದರು ಏಕೆ? ಏಕೆಂದರೆ ಕೆಳಹಂತದ ಹಿಂದೂ-ಮುಸ್ಲಿಂ ಒಂದಾದರೆ ತಮ್ಮ ಹುಳಿ ಹಿಂಡುವ ಹಿಕಮತ್ತು ವಿಫಲವಾಗಿ ವೋಟ್ ಬ್ಯಾಂಕ್ ಧರ್ಮಕಾರಣ ಮಕಾಡೆ ಮಲಗುತ್ತದೆಂಬ ದೂ(ದು)ರಾಲೋಚನೆಯ ಭಯ! ಬಿಲ್ಲವ ಮುಸ್ಲಿಂ ಸಮಾವೇಶಕ್ಕೆ ಸಂಘೀ ಸಂತಾನ ಅಡ್ಡಗಾಲು ಹಾಕಲು ಇದು ಅಸಲೀ ಕಾರಣ!!.

ದಿನೇಶ್ ಅಮೀನ್ ಮಟ್ಟುಗೆ “ಮಾತ್ರೆ” ಧಮ್ಕಿ!!

ಸಂಘಪರಿವಾರ ಸಂಚು ಹೂಡಿ ಅಡ್ಡಗಾಲು ಹಾಕಿದ ಉಡುಪಿಯ ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮೇಳನಕ್ಕೆ ವಿಚಾರವಾದಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟುರನ್ನು ಮುಖ್ಯ ಭಾಷಣಕಾರರಾಗಿ ಕರೆಯಲಾಗಿತ್ತು. ಈ ಸಮ್ಮೇಳನದ ಹಿಂದೆ ಮಟ್ಟು ಇದ್ದಾರೆ ಎಂಬ ಅನುಮಾನದಲ್ಲಿದ್ದ ಆರೆಸ್ಸೆಸ್ ಪ್ರಚಂಡರಿಗೆ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಕಂಡದ್ದೇ ಬೆಂಕಿ ಬಿದ್ದಂತಾಗಿದೆ! ಇಷ್ಟು ದಿನ ಬಿಲ್ಲವರ ಹುಡುಗರ ಹಾದಿ ತಪ್ಪಿಸಿ ಧರ್ಮಕಾರಣದ “ಕರ್ಮ” ಮಾಡುತ್ತಾ ಬಂದಿರುವ ಸಂಘಿಗಳಿಗೆ ಆ ಸಮುದಾಯದ ಮುಂದೆ ಮಟ್ಟು ತಮ್ಮ ಬಂಡವಾಳ ತೆರೆದಿಡುವ ಆತಂಕ ಆರಂಭವಾಗಿತ್ತು!

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಅಸಹ್ಯ ಅಪಪ್ರಚಾರ ಮಾಡಿ ಮಟ್ಟುರನ್ನು ಸಮ್ಮೇಳನಕ್ಕೆ ಹೋಗದಂತೆ ತಡೆಯುವ ಪ್ರಯತ್ನ ನಡೆಸಿದ್ದ ಪರಿವಾರ ಅಂತಿಮವಾಗಿ ಅಂಡರ್‌ವರ್ಲ್ಡ್ ಅಸ್ತ್ರ ಪ್ರಯೋಗಿಸಿದೆ! ಸಮ್ಮೇಳನಕ್ಕೆ ಮೂರ್ನಾಲ್ಕು ದಿನವಿರುವಾಗ ಒಂದು ರಾತ್ರಿ ಹನ್ನೊಂದರ ಹೊತ್ತಿಗೆ ಬೆದರಿಕೆಯ ಫೋನ್ ಕರೆಯೊಂದು ಮಟ್ಟುರವರಿಗೆ ಬಂದಿದೆ. ಅತ್ತಲಿಂದ ತುಳುವಿನಲ್ಲಿ ಅರಚಾಡಿದ ಆಸಾಮಿ “…… ಆ ಸೊರಕೆ ಏನೋ ಮಾಡ್ತಾನಂತೆ….. ನೀನು ಅದಕ್ಕೆ ಹೋದ್ರೆ ನಿಂಗೆ ಆರು ಮಾತ್ರೆ (ಭೂಗತ ಭಾಷೆಯಲ್ಲಿ “ಗುಂಡು” ಎಂದರ್ಥ) ಹಾಕಬೇಕಾಗುತ್ತದೆ ಎನ್ನುವ ಬೆದರಿಕೆ ಉದುರಿಸಿದ್ದಾನೆ.

ಆತ ತನ್ನನ್ನು ಪುಣೆಯ ಬಿಲ್ಲವ ಸೇವಾಸಂಘದ ಅಧ್ಯಕ್ಷ ಕಡ್ತಲ ವಿಶ್ವನಾಥ ಪೂಜಾರಿ ಎಂದು ಘೋಷಿಸಿಕೊಂಡಿದ್ದಾನೆ. ತನ್ನ ಕೊಳಕು ಬೈಗುಳದ ಆಡಿಯೋ ಮಾಡಿಕೊಂಡು ಈತ ಸಾಮಾಜಿಕ ಜಾಲತಾಣಕ್ಕೆ ಏರಿಸಿರುವುದು ಕಂಡರೆ ಇದು ಸಂಘಿ ಸ್ಕೆಚ್ ಎಂಬುದು ಖಾತ್ರಿಯಾಗುತ್ತದೆ. ವೈರಲ್ ಆಗಿರುವ ಆಡಿಯೋ ಕೇಳಿ ಸ್ನೇಹ ಸಮ್ಮೇಳನದ ರೂವಾರಿಗಳ ಅಷ್ಟೇ ಅಲ್ಲ ಸಭೆಗೆ ಹೋಗುವವರು ಕೂಡಾ ಹೆದರಿಕೊಳ್ಳಲಿ ಎಂಬ ಷಡ್ಯಂತ್ರವಿದು. ಆದರೆ ಅದರ ವಿರುದ್ಧ ಮಟ್ಟುರವರು ದೂರು ನೀಡುವು ಮೂಲಕ ಇಂತವಕ್ಕೆಲ್ಲಾ ಹೆದರುವ ಮಾತೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

LEAVE A REPLY

Please enter your comment!
Please enter your name here