Homeಅಂತರಾಷ್ಟ್ರೀಯನ್ಯಾಯಾಂಗ ’ಸುಧಾರಣೆ’ಗಳ ವಿರುದ್ಧ ಪ್ರತಿಭಟಿಸುತ್ತಿರುವ ಇಸ್ರೇಲ್

ನ್ಯಾಯಾಂಗ ’ಸುಧಾರಣೆ’ಗಳ ವಿರುದ್ಧ ಪ್ರತಿಭಟಿಸುತ್ತಿರುವ ಇಸ್ರೇಲ್

- Advertisement -
- Advertisement -

ಜನವರಿ 7 2023ರಂದು ಇಸ್ರೇಲಿನಾದ್ಯಂತ ಪ್ರತಿಭಟನೆಗಳು ಭುಗಿಲೆದ್ದು, ರಾಜಧಾನಿ ಟೆಲ್ ಅವೀವ್ ಮತ್ತು ಇತರ ನಗರಗಳ ಜನರು ಬೀದಿಗಿಳಿದರು. ಈಗ ಈ ಪ್ರತಿಭಟನೆ 11ನೇ ವಾರಕ್ಕೆ ಕಾಲಿಟ್ಟಿದೆ. ನ್ಯಾಯಾಂಗ ಸುಧಾರಣೆ ಎಂದು ಸರಕಾರ ಹೇಳುತ್ತಿರುವ, ಆದರೆ ಇಸ್ರೇಲಿನಲ್ಲಿ ಸರ್ವಾಧಿಕಾರದ ಕಡೆಗೆ ಇನ್ನೊಂದು ಹೆಜ್ಜೆ ಇದೆಂದು ಬಹುಜನರು ಭಾವಿಸುತ್ತಿರುವ ಸಂವಿಧಾನದ ತಿದ್ದುಪಡಿಯ ವಿರುದ್ಧ ಈ ಪ್ರತಿಭಟನೆಗಳು ನಡೆಯುತ್ತಿದ್ದವು. ಸುಧಾರಣೆ ಎಂದು ಹೇಳಲಾಗುತ್ತಿರುವ ಈ ಕ್ರಮವು 1992ರ ಆಹ್ರೋನ್ ಬರಾಕ್ ಸಾಂವಿಧಾನಿಕ ತಿದ್ದುಪಡಿಯನ್ನು ಇಲ್ಲವಾಗಿಸಿ, ಇಸ್ರೇಲಿ ಸುಪ್ರೀಂಕೋರ್ಟಿನ ಅಧಿಕಾರವನ್ನು ಸೀಮಿತಗೊಳಿಸುತ್ತದೆ. ಈ ಸುಧಾರಣೆಗಳು (ಇವುಗಳನ್ನು ಮುಂದೆ ಸುಧಾರಣೆಗಳ ಬದಲು ಬದಲಾವಣೆಗಳು ಎಂದೇ ಬರೆಯಲಾಗುವುದು) ನೇಮಕಾತಿ ಮತ್ತು ಸಾಂವಿಧಾನಿಕ ಅಧಿಕಾರಗಳಲ್ಲಿ ಶಾಸಕಾಂಗಕ್ಕೆ ನ್ಯಾಯಾಂಗಕ್ಕೂ ಮೀರಿದ ಹೆಚ್ಚಿನ ಮಹತ್ವ ನೀಡುವುದು, ಅಲ್ಲದೇ ನ್ಯಾಯಾಂಗದ ಪುನರ್‌ವಿಮರ್ಶೆಯ ಅವಕಾಶವನ್ನು ಸೀಮಿತಗೊಳಿಸುವುದು.

ಪ್ರಸ್ತಾಪಿತ ಈ ಬದಲಾವಣೆಗಳು ವ್ಯಾಪಕವಾದ ವಿರೋಧವನ್ನು ಎದುರಿಸುತ್ತಿವೆ. ಈತನಕ 150ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಪ್ರತಿಭಟನೆಯು ಎಡಪಂಥೀಯರಿಂದ ಹಿಡಿದು ಬಲಪಂಥೀಯರ ತನಕ ಹಲವು ವಲಯಗಳಿಂದ ಬೆಂಬಲ ಪಡೆದಿದೆ. ಆಡಳಿತ ವ್ಯವಸ್ಥೆಯ ಒಳಗೇ ಹಲವು ಧ್ವನಿಗಳು ಈ ಬದಲಾವಣೆಗಳನ್ನು ವಿರೋಧಿಸಿವೆ. ಆಡಳಿತ ವ್ಯವಸ್ಥೆ ಮತ್ತು ಸೇನೆಯ ಹಲವಾರು ಸದಸ್ಯರು ಈ ಬದಲಾವಣೆಗಳನ್ನು ಕಾನೂನು ಆಡಳಿತದ ಅಂತ್ಯವೆಂದೇ ಭಾವಿಸಿದ್ದಾರೆ. ಪ್ರತಿಪಕ್ಷಗಳ ಸದಸ್ಯರು ಇದನ್ನು ಪ್ರಜಾಪ್ರಭುತ್ವಕ್ಕೆ ಬಿದ್ದಿರುವ ದೊಡ್ಡ ಹೊಡೆತ ಎಂದೇ ಟೀಕಿಸಿದ್ದಾರೆ. ರಾಜಕೀಯದ ಎಲ್ಲಾ ಬಣ್ಣಗಳ ಜನರು ಈ ಬದಲಾವಣೆಗಳನ್ನು ವಿರೋಧಿಸಿದ್ದಾರೆ. ಪ್ರತಿಭಟನೆಗಳು ಮತ್ತು ಈ ಸಾಂವಿಧಾನಿಕ ಬದಲಾವಣೆಗಳ ಹರವು ಆರ್ಥಿಕ ಅಭದ್ರತೆ ಮತ್ತು ಅಸ್ಥಿರತೆಗೂ ಕಾರಣವಾಗಿವೆ.

ಕೆಸ್ತೆನ್‌ಬಾಮ್ ಸಿದ್ಧಾಂತ

ಈ ಸಾಂವಿಧಾನಿಕ ಬದಲಾವಣೆಗಳ ಮೂಲ ಉದ್ದೇಶವೆಂದರೆ, 1992ರ ಸಾಂವಿಧಾನಿಕ ಕ್ರಾಂತಿಯೆಂದು ಕರೆಯಲಾಗುವ ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಆಹ್ರೋನ್ ಬರಾಕ್ ಅವರ ನೇತೃತ್ವದಲ್ಲಿ ನಡೆದ ತಿದ್ದುಪಡಿಯನ್ನು ಇಲ್ಲವಾಗಿಸುವುದು. ಅವರೇ ಕೆಸ್ತೆನ್‌ಬಾಮ್ ಸಿದ್ಧಾಂತವನ್ನು ರೂಪಿಸಿದವರು. ಅದರ ಪ್ರಕಾರ ಮಾನವ ಹಕ್ಕುಗಳ ತತ್ವಗಳೇ ವೈಯಕ್ತಿಕ ಕಾನೂನಿನ ನಿರ್ದೇಶಕ ತತ್ವಗಳಾಗಿರಬೇಕು.

ಆಹ್ರೋನ್ ಬರಾಕ್

ಆದರೆ, ಇದು ನ್ಯಾಯಾಧೀಶರಿಗೆ ಅತಿಯಾದ ಅಧಿಕಾರವನ್ನು ಕೊಡುತ್ತದೆ ಎಂದು ಟೀಕಿಸಲಾಗಿತ್ತು. ನ್ಯಾಯಾಧೀಶರು ಇಲ್ಲಿ ಪ್ರಮುಖವಾಗುವುದರಿಂದ, ಅವರು ಒಂದು ಕಾನೂನು ಖಟ್ಲೆಯಲ್ಲಿ ಆ ತನ್ನ ನ್ಯಾಯದ ವೈಯಕ್ತಿಕ ತಿಳಿವಳಿಕೆಯ ಆಧಾರದಲ್ಲಿ ತೀರ್ಪು ನೀಡುತ್ತಾರೆ ಮತ್ತು ಈ ನ್ಯಾಯದ ವ್ಯಾಖ್ಯಾನವು ಕಾನೂನು ವಿಷಯದಲ್ಲಿ ಅನಿಶ್ಚಿತತೆಯನ್ನು ಉಂಟುಮಾಡಬಹುದು ಎಂದು ವಿಮರ್ಶಿಸಲಾಗಿತ್ತು. ಪ್ರಸ್ತಾಪಿತ ಬದಲಾವಣೆಯು ಈ ಅಧಿಕಾರವನ್ನು ಮಿತಿಗೊಳಿಸುವ ಉದ್ದೇಶ ಹೊಂದಿದೆ ಎಂದು ಸರಕಾರ ಹೇಳಿದರೆ, ಆದರೆ ಈ ಬದಲಾವಣೆಯ ಟೀಕಾಕಾರರು ಇದು ಪ್ರಜಾಪ್ರಭುತ್ವಕ್ಕೆ ಒಂದು ಹಿನ್ನಡೆಯೆಂದು ಹೇಳುತ್ತಾರೆ. ಇಸ್ರೇಲ್‌ನಲ್ಲಿ ಒಂದು ಸ್ಥಿರವಾದ ಸರ್ಕಾರವನ್ನು ಸ್ಥಾಪಿಸಲು ಒದ್ದಾಡುತ್ತಿರುವ ಪರಿಸ್ಥಿತಿಯಲ್ಲಿ ಈ ಸಾಂವಿಧಾನಿಕ ಬದಲಾವಣೆಗಳು ಬಂದಿವೆ. ಈ ಸುಧಾರಣೆಗಳು ಅಥವಾ ಬದಲಾವಣೆಗಳ ಉದ್ದೇಶ ಸರಕಾರದ ಹಲವಾರು ಅಂಗಗಳ ಅಧಿಕಾರವನ್ನು ಹೆಚ್ಚಿಸುವುದಾಗಿದೆ.

ಇಸ್ರೇಲಿ ಸರಕಾರವು 2018ರಿಂದ ಅಸ್ಥಿರವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಐದು ದಿಢೀರ್ ಚುನಾವಣೆಗಳು ನಡೆದಿವೆ. ಯಾವುದೇ ಪಕ್ಷವೂ ಬಹುಮತ ಪಡೆಯಲು ಸಾಧ್ಯ ಆಗಿಲ್ಲ. ಹಲವಾರು ಸಾಂಪ್ರದಾಯಿಕ ಪಕ್ಷಗಳು ಈಗಿನ ಪ್ರಧಾನಿ ನೆತನ್ಯಾಹು ಜೊತೆಗಿಲ್ಲ. ಯಾಕೆಂದರೆ, ಇಸ್ರೇಲಿನಲ್ಲಿ ಹಲವಾರು ವಿಧಗಳ ಸಾಂಪ್ರದಾಯಿಕ ಪಕ್ಷಗಳು ಇವೆ.

ಭ್ರಷ್ಟಾಚಾರ

2019ರಲ್ಲೀ ನೆತನ್ಯಾಹುವನ್ನು ಮೋಸ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ತಪ್ಪಿತಸ್ಥ ಎಂದು ಘೋಷಿಸಲಾಗಿತ್ತು. 2020ರಲ್ಲಿ ಆತ ನ್ಯಾಯಾಂಗದ ಮುಂದೆ ತಪ್ಪೊಪ್ಪಿಕೊಂಡು ಚೌಕಾಸಿ ಮಾಡಿದ್ದರು (ಇದನ್ನು ಪ್ಲೀ ಡೀಲ್ ಎಂದು ಕರೆಯುತ್ತಾರೆ). 2021ರಲ್ಲಿ ಆಧಿಕಾರ ಕಳೆದುಕೊಂಡರು. ಆದರೆ ಡಿಸೆಂಬರ್ 2022ರಲ್ಲಿ ಮೈತ್ರಿಕೂಟ ರಚಿಸಿ, ಸರಕಾರ ಸ್ಥಾಪಿಸಿ, ಮತ್ತೆ ಇಸ್ರೇಲಿನ ಪ್ರಧಾನಿಯಾಗಿ ಅಧಿಕಾರಕ್ಕೆ ಮರಳಿದರು. ಈ ಒಕ್ಕೂಟವು ಸಾರ್ವಜನಿಕ ಜೀವನದಲ್ಲಿ ಧರ್ಮದ ಪಾತ್ರವನ್ನು ವಿಸ್ತರಿಸುವ ಭರವಸೆಗಳನ್ನು ನೀಡಿತು.

ನೆತನ್ಯಾಹು ಇನ್ನೂ ಕೂಡ ಬಹಳಷ್ಟು ಭ್ರಷ್ಟಾಚಾರಗಳ ಆರೋಪ ಎದುರಿಸುತ್ತಿದ್ದಾರೆ. ಈ ಸಾಂವಿಧಾನಿಕ ಬದಲಾವಣೆಗಳು ಆತನಿಗೆ ತನ್ನ ವಿರುದ್ಧ ಇರುವ ಭ್ರಷ್ಟಾಚಾರಗಳ ಆರೋಪಗಳ ವಿರುದ್ಧ ಹೋರಾಡಲು ಬೇಕಾದ ಹಣವನ್ನು ದಾನದ ಮೂಲಕ ಪಡೆಯಲು ಅವಕಾಶ ಒದಗಿಸುತ್ತದೆ.

ಇದನ್ನೂ ಓದಿ: ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಚಿತ್ರಣ

ನೆತನ್ಯಾಹು ಸರಕಾರ ಏನು ಹೇಳುತ್ತಿದೆ ಎಂದರೆ ಈ ಸಾಂವಿಧಾನಿಕ ಬದಲಾವಣೆಗಳು ತನ್ನ ಸರಕಾರಕ್ಕೆ ಹೆಚ್ಚಿನ ಸ್ಥಿರತೆ ತರುತ್ತದೆಂದು. ಈ ಬದಲಾವಣೆಗಳನ್ನು ಕಾನೂನು ಸಚಿವ ಯಾರಿವ್ ಲೆವಿನ್ ಘೋಷಿಸಿದರು. ಈತ ತೀರಾ ಇತ್ತೀಚೆಗೆ ನೇಮಕಗೊಂಡ ಒಬ್ಬ ಸಚಿವ. ಇದೇ ವರ್ಷದ 4ನೇ ಜನವರಿಯಲ್ಲಿ ಆತ ಈ ಸಾಂವಿಧಾನಿಕ ಬದಲಾವಣೆಗಳನ್ನು ಘೋಷಿಸಿದ್ದರು. ಅವರ ಈ ಸಾಂವಿಧಾನಿಕ ಬದಲಾವಣೆಗಳ ಯೋಜನೆಯೇ ಪ್ರಸ್ತುತ ಪ್ರತಿಭಟನೆಗಳಿಗೆ ಕಾರಣವಾದದ್ದು.

ಈಗ ಇಸ್ರೇಲಿನಾದ್ಯಂತ ಪ್ರತಿಭಟನೆಗಳು ನಡೆದಿದ್ದು ಇದನ್ನು ಬರೆಯುವ ಹೊತ್ತಿಗಾಗಲೇ 150ಕ್ಕೂ ಹೆಚ್ಚು ಜನ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಎಡ ಬಲ ಮತ್ತು ಮಧ್ಯ ಹಾಗೂ ಪ್ರತಿಭಟನೆಗಳು

ಪ್ರತಿಭಟನಾಕಾರರಲ್ಲಿ ಬಹಳ ಸಂಖ್ಯೆಯ ಇಸ್ರೇಲಿ ಮಿಲಿಟರಿ ಸದಸ್ಯರೂ ಇದ್ದಾರೆ. ಅವರೀಗ ಪ್ಯಾಲೆಸ್ತೀನ್ ಹೋರಾಟದಲ್ಲಿ ಇಲ್ಲ. ಪ್ಯಾಲೆಸ್ತೀನ್ ಧ್ವನಿಗಳು ಇಲ್ಲಿಯತನಕ ಹೆಚ್ಚಾಗಿ ಈ ಪ್ರತಿಭಟನೆಗಳಿಂದ ದೂರವೇ ಉಳಿದಿವೆ. ಯಾಕೆಂದರೆ ಬಹಳಷ್ಟು ಜನರು ತಥಾಕಥಿತ ಕರಾಳ ಸಾಂವಿಧಾನಿಕ ಬದಲಾವಣೆಗಳು ಮತ್ತು ಉದಾರವಾದಿ ಪ್ರಜಾಪ್ರಭುತ್ವದ ನಡುವಿನ ವ್ಯತ್ಯಾಸ ತೀರಾ ಕಡೆಗಣಿಸಬಹುದಾದಂಥದದ್ದು ಎಂದು ಚಿಂತಿಸುತ್ತಿದ್ದಾರೆ. ಇಸ್ರೇಲಿ ನ್ಯಾಯಾಂಗವು ಯಾವತ್ತೂ ಪ್ಯಾಲೆಸ್ತೀನೀಯರಿಗೆ ಸಮಸ್ಯೆಯಾಗುವ ತರಹದಲ್ಲಿಯೇ ತೀರ್ಪು ನೀಡಿದೆ. ಈಗಿನ ಇಸ್ರೇಲಿ ಸಾಂವಿಧಾನಿಕ ಬದಲಾವಣೆಯು ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ’ಪ್ರತಿಭಟನೆಗಳು ಇರದಂತೆ ಸರಿದಾರಿ’ಗೆ ತರುವ ಉದ್ದೇಶ ಮಾತ್ರವೇ ಹೊಂದಿದೆ ಎಂದು ಭಾವಿಸಲಾಗುತ್ತಿದೆ.

ನೆತನ್ಯಾಹು

ಪ್ರತಿಭಟನೆಗಳು ತೀವ್ರವಾಗಿ ನಡೆಯುತ್ತಿದ್ದು, ಮಾರ್ಚ್ ತಿಂಗಳಲ್ಲಿ ಲಕ್ಷಾಂತರ ಪ್ರತಿಭಟನಾಕಾರರು ರಸ್ತೆಗಳನ್ನು ಮುಚ್ಚಿದ್ದಾರೆ. ಈ ಸಾಂವಿಧಾನಿಕ ಬದಲಾವಣೆಗಳು ಪ್ರಜಾಪ್ರಭುತ್ವದ ಆಗತ್ಯವಾದ ಸಮತೋಲನಕ್ಕೆ

ಮಾರಕವೆಂದು ಅನೇಕ ಅಂತಾರಾಷ್ಟ್ರೀಯ ವೀಕ್ಷಕರು ಭಾವಿಸಿರುವುದರಿಂದ ಈ ಪ್ರತಿಭಟನೆಗಳಿಗೆ ವ್ಯಾಪಕ ಅಂತಾರಾಷ್ಟ್ರೀಯ ಬೆಂಬಲ ವ್ಯಕ್ತವಾಗಿದೆ. ಇಸ್ರೇಲಿ ಸರ್ಕಾರ ಹೋಗುತ್ತಿರುವ ದಿಕ್ಕಿನ ಬಗ್ಗೆ ಹಲವು ದೇಶಗಳ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಾಂವಿಧಾನಿಕ ಬದಲಾವಣೆಗಳು ಕಾನೂನು ಆಡಳಿತ ಮತ್ತು ಪ್ರಜಾಪ್ರಭುತ್ವದ ಆಧಾರ ಸಂಸ್ಥೆಗಳಿಗೇ ಮಾರಕ ಎಂದು ಭಾವಿಸಲಾಗುತ್ತಿದೆ ಮತ್ತು ಇಸ್ರೇಲಿ ಸರಕಾರವು ತನ್ನ ನಿಲುವನ್ನು ಮರುಪರಿಶೀಲಿಸಬೇಕೆಂಬ ಒತ್ತಡ ಹೇರಲಾಗುತ್ತಿದೆ.

ಇಸ್ರೇಲಿನ ಪ್ರತಿಭಟನೆಗಳು ಇಡೀ ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಇಳಿಮುಖವನ್ನು ಪ್ರತಿಫಲಿಸುತ್ತದೆ. ಪ್ರಜಾಪ್ರಭುತ್ವದ ವಿಧಿವಿಧಾನಗಳು ಮತ್ತು ಸಂಸ್ಥೆಗಳ ಸವಕಳಿಯು ಇಂದು ಒಂದು ಜಾಗತಿಕ ವಿದ್ಯಮಾನವಾಗಿದೆ. ಇಸ್ರೇಲ್ ಈ ವಿದ್ಯಮಾನ ಕೇವಲ ಒಂದು ಉದಾಹರಣೆಯಾಗಿದೆ. ಸರ್ವಾಧಿಕಾರಿ ನಾಯಕರು ಮತ್ತು ಜನಮರುಳು (ಪಾಪ್ಯುಲಿಸ್ಟ್) ಚಳವಳಿಗಳು, ಪ್ರಜಾಸತ್ತಾತ್ಮಕ ಸಂಸ್ಥೆಗಳ ಶಿಥಿಲೀಕರಣದ ಜೊತೆಗೆ ಸೇರಿ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಗಳಾಗಿವೆ. ನಾವೆಲ್ಲರೂ ಸೇರಿ ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಸುಧಾರಣೆ ಅಗತ್ಯ ಆದರೆ, ಈ ರೀತಿಯಲ್ಲಲ್ಲ

ಬಹುತೇಕ ಇಸ್ರೇಲಿಗರು ಅಲ್ಲಿನ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹತಾಶೆ ಹೊಂದಿದ್ದಾರೆ ಮತ್ತು ಬದಲಾವಣೆ ಬಯಸಿದ್ದಾರೆ ಎಂದು ಜನಮತಗಣನೆಗಳು ಹೇಳಿವೆ. ಆದರೂ ಇದೇ ಹೊತ್ತಿಗೆ ಬಹುತೇಕ ಇಸ್ರೇಲಿಗರು ಈಗಿನ ಬದಲಾವಣೆಗಳನ್ನು ವಿರೋಧಿಸುತ್ತಾರೆ. ವಿರೋಧಗಳು ಹಲವಾರು ಕಡೆಗಳಿಂದ ಮತ್ತು ಹಲವಾರು ವಲಯಗಳಿಂದ ಬರುತ್ತಿರುವುದರಿಂದ ಇಸ್ರೇಲಿ ಜನತೆಗೆ ಯಾವರೀತಿಯ ಬದಲಾವಣೆ ಅಥವಾ ಸುಧಾರಣೆಗಳು ಬೇಕಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇಸ್ರೇಲಿನಲ್ಲಿ ಕೇಂದ್ರೀಕರಣ ಮತ್ತು ಸಾರ್ವಜನಿಕ ಜೀವನದಲ್ಲಿ ಜುದಾಯಿಸಂಗೆ ಹೆಚ್ಚಿನ ಸ್ಥಾನಮಾನ ಸಿಗಬೇಕು ಎಂಬುದಕ್ಕೆ ಬಲವಾದ ಬೆಂಬಲವಿದೆ. ಆದರೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಕಾಳಜಿ ಇಲ್ಲದೆ, ಇಸ್ರೇಲಿ ಜನರ ಸಂಕಲ್ಪವು ಕುಸಿಯುತ್ತಿದೆ. ಇಸ್ರೇಲಿ ಆಡಳಿತದಲ್ಲಿ ಬಲವಾದ ಧಾರ್ಮಿಕ ಮತ್ತು ಮಿಲಿಟರಿ ಅಸ್ತಿತ್ವ ಇದ್ದು ಯಾವತ್ತೂ ಪ್ರಜಾಪ್ರಭುತ್ವದ ಚೇತನಕ್ಕೆ ವಿರುದ್ಧವಾಗಿಯೇ ಇದೆ ಮತ್ತು ಇಸ್ರೇಲಿ ಜನರು ಇನ್ನೂ ಇದರ ಜೀವಾಳವಾಗಿದ್ದಾರೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...