Homeಮುಖಪುಟಸಮಸ್ಯೆ ಬಗೆಹರಿವವರೆಗೂ ಏಷ್ಯನ್ ಗೇಮ್ಸ್‌ನಲ್ಲಿ ಕುಸ್ತಿಪಟುಗಳು ಪಾಲ್ಗೊಳ್ಳುವುದಿಲ್ಲ: ಸಾಕ್ಷಿ ಮಲ್ಲಿಕ್

ಸಮಸ್ಯೆ ಬಗೆಹರಿವವರೆಗೂ ಏಷ್ಯನ್ ಗೇಮ್ಸ್‌ನಲ್ಲಿ ಕುಸ್ತಿಪಟುಗಳು ಪಾಲ್ಗೊಳ್ಳುವುದಿಲ್ಲ: ಸಾಕ್ಷಿ ಮಲ್ಲಿಕ್

- Advertisement -
- Advertisement -

“ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು, ಲೈಂಗಿಕ ಕಿರುಕುಳ ಪ್ರಕರಣ ಬಗೆಹರಿಯುವವರೆಗೂ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವುದಿಲ್ಲ” ಎಂದು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಶನಿವಾರ ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.

ಹರಿಯಾಣದ ಸೋನಿಪತ್‌ನಲ್ಲಿ ಕುಸ್ತಿಪಟುಗಳು ವಿವಿಧ ಖಾಪ್ ನಾಯಕರೊಂದಿಗೆ ಶನಿವಾರ ಮಹಾಪಂಚಾಯತ್ ಆಯೋಜಿಸಿದ ನಂತರ ಈ ಹೇಳಿಕೆ ಹೊರಬಿದ್ದಿದೆ.

ಓರ್ವ ಅಪ್ರಾಪ್ತ ಕುಸ್ತಿಪಟು ಸೇರಿದಂತೆ ಏಳು ಮಂದಿ ಕುಸ್ತಿಗಳಿಗೆ ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಎರಡು ಪ್ರಕರಣ ದಾಖಲಾಗಿದೆ. ಬ್ರಿಜ್ ಭೂಷಣ್‌ನ ಬಂಧನಕ್ಕಾಗಿ ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ.

“ದೂರನ್ನು ಹಿಂಪಡೆದು ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಬ್ರಿಜ್ ಭೂಷಣ್‌ ಸಿಂಗ್ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ” ಎಂದು ಅವರು ಆರೋಪಿಸಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ತಿಳಿಸಿದೆ.

“ಬ್ರಿಜ್ ಭೂಷಣ್‌ ಪೊಲೀಸ್ ಕಸ್ಟಡಿಯಲ್ಲಿದ್ದಿದ್ದರೆ, ಆತ ಒತ್ತಡ ಹೇರಲು ಸಾಧ್ಯವಿಲ್ಲ” ಎಂದು ಸಾಕ್ಷಿ ಮಲ್ಲಿಕ್‌ ತಿಳಿಸಿದ್ದಾರೆ. “ಇಲ್ಲದಿದ್ದರೆ, ಸಂತ್ರಸ್ತರು ಒಬ್ಬೊಬ್ಬರಾಗಿಯೇ ಹೊರಹೋಗುತ್ತಾರೆ. ಆತ ಒಳಹೋಗುವವರೆಗೂ ಭಯದ ವಾತಾವರಣ ಉಳಿದಿರುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರಿಜ್ ಭೂಷಣ್‌ ಕಿರುಕುಳ ನೀಡಿದ ವೇಳೆ ಕಿರಿಯ ಕುಸ್ತಿಪಟು ಅಪ್ರಾಪ್ತಳಾಗಿರಲಿಲ್ಲ ಎಂದು ಹೇಳಿಕೆಯನ್ನು ನೀಡುವಂತೆ ಅಪ್ರಾಪ್ತ ಕುಸ್ತಿಪಟುವಿನ ತಂದೆಗೆ ಒತ್ತಡ ಹೇರಲಾಗಿತ್ತು ಎಂದು ಒಲಿಂಪಿಕ್ ಪದಕ ವಿಜೇತೆ ದೂರಿದ್ದಾರೆ.

ಕಳೆದ ವಾರ ಅಪ್ರಾಪ್ತ ಬಾಲಕಿಯ ತಂದೆ ‘ದಿ ಹಿಂದೂ’ಗೆ ಪ್ರತಿಕ್ರಿಯಿಸಿ, “ನನ್ನ ಕುಟುಂಬ, ಮಗಳ ಬಗ್ಗೆ ಹೆದರಿ ಹೇಳಿಕೆ ಬದಲಿಸಲಾಗಿತ್ತು” ಎಂದು ತಿಳಿಸಿದ್ದರು.

ಒಲಿಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ ಶನಿವಾರ ಪ್ರತಿಕ್ರಿಯಿಸಿ, “ಕುಸ್ತಿಪಟುವಿಗೆ ಏನಾದರೂ ತೊಂದರೆಯಾಗಿದ್ದರೆ, ಆಕೆಯ ವಯಸ್ಸು ಎಷ್ಟೇ ಇದ್ದರೂ ಬ್ರಿಜ್‌ ಭೂಷಣ್ ಅವರನ್ನು ಶಿಕ್ಷಿಸಬೇಕು” ಎಂದಿದ್ದಾರೆ.

ಇದನ್ನೂ ಓದಿರಿ: ‘ಫೋಟೋ ತೆಗೆಸಿಕೊಳ್ಳುವಾಗ ಬ್ರಿಜ್‌ಭೂಷಣ್ ನಿತಂಬ ಸ್ಪರ್ಶಿಸಿದ್ದ’: ಕುಸ್ತಿಪಟುವಿನ ಆರೋಪ ದೃಢೀಕರಿಸಿದ ಅಂತಾರಾಷ್ಟ್ರೀಯ ರೆಫರಿ

“ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದೇವೆ. ನಮ್ಮ ಬೇಡಿಕೆಗಳನ್ನು ಪರಿಗಣಿಸುವುದಾಗಿ ಸರಕಾರ ಭರವಸೆ ನೀಡಿದೆ. ಅಗತ್ಯವಿದ್ದರೆ, ಜೂನ್ 15ರ ನಂತರ ನಾವು ಪ್ರತಿಭಟನೆ ಮಾಡುತ್ತೇವೆ. ನಾವು ನಮ್ಮ ಪ್ರತಿಭಟನೆಯನ್ನು ಪ್ರಾರಂಭಿಸಿದ ನಂತರ ಯಾವುದೇ ಕುಸ್ತಿಪಟುಗಳು ತಮ್ಮ ಸರ್ಕಾರಿ ಸೇವೆಗಳನ್ನು ಪುನರಾರಂಭಿಸುವುದಿಲ್ಲ. ನಾವು ನಮ್ಮ ಪ್ರತಿಭಟನೆಯನ್ನು ಪುನರಾರಂಭಿಸದಿದ್ದರೆ, ಎಲ್ಲಾ ಕುಸ್ತಿಪಟುಗಳು ತಮ್ಮ ಸರ್ಕಾರಿ ಉದ್ಯೋಗಗಳಿಗೆ ಮರಳುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರತಿಭಟನಾಕಾರರನ್ನು ಭೇಟಿ ಮಾಡಿದ ನಂತರ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌, “ಜೂನ್ 15ರೊಳಗೆ ಪೊಲೀಸ್ ತನಿಖೆಯನ್ನು ಪೂರ್ಣಗೊಳಿಸಲಾಗುವುದು. ಆರೋಪಪಟ್ಟಿ ಸಲ್ಲಿಸಲಾಗುವುದು” ಎಂದು ತಿಳಿಸಿದ್ದಾರೆ.

ಬ್ರಿಜ್ ಭೂಷಣ್‌ ವಿರುದ್ಧದ ಆರೋಪಗಳಿಗೆ ಪುರಾವೆಯಾಗಿ ಫೋಟೋಗಳು, ಆಡಿಯೋ ಮತ್ತು ವಿಡಿಯೋಗಳನ್ನು ನೀಡುವಂತೆ ದೆಹಲಿ ಪೊಲೀಸರು ಇಬ್ಬರು ಮಹಿಳಾ ಕುಸ್ತಿಪಟುಗಳಿಗೆ ಕಳೆದ ವಾರ ಸೂಚಿಸಿದ್ದರು.

“ಉಸಿರಾಟವನ್ನು ಪರೀಕ್ಷಿಸುವ ನೆಪದಲ್ಲಿ ಬ್ರಿಜ್ ಭೂಷಣ್‌ ನಮ್ಮ ಎದೆಯನ್ನು ಮುಟ್ಟಿ, ಹೊಟ್ಟೆಗೆ ಕೈ ಹಾಕಿದ್ದರು” ಎಂದು ಇಬ್ಬರು ಅಥ್ಲೀಟ್‌ಗಳು ಆರೋಪಿಸಿದ್ದಾರೆ. ಪುರಾವೆ ನೀಡುವಂತೆ ಜೂನ್ 5 ರಂದು ಪೊಲೀಸರು ಇಬ್ಬರು ಕುಸ್ತಿಪಟುಗಳಿಗೆ ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ಸೋನ್ ಪಾಪ್ಡಿಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...