Homeಮುಖಪುಟಇಂದು ಭಾರತದ ಸ್ವಧರ್ಮದ ಮೇಲೆ ಅತ್ಯಂತ ಘೋರ ದಾಳಿಯಾಗುತ್ತಿದೆಯೇ? - ಯೋಗೇಂದ್ರ ಯಾದವ್

ಇಂದು ಭಾರತದ ಸ್ವಧರ್ಮದ ಮೇಲೆ ಅತ್ಯಂತ ಘೋರ ದಾಳಿಯಾಗುತ್ತಿದೆಯೇ? – ಯೋಗೇಂದ್ರ ಯಾದವ್

ಯಾರು ಮಾತನಾಡುವ ಗುಂಡಿಗೆ ತೋರಿಸುತ್ತಾರೋ, ಅವರಿಗೆ ಸೆರೆಮನೆಯ ದಾರಿ ತೋರಿಸಲಾಗುತ್ತಿದೆ. ರಷ್ಯಾ ಮತ್ತು ಟರ್ಕಿಯಲ್ಲಿ ಇರುವಂತೆಯೇ ಇಲ್ಲಿಯೂ ಪ್ರಜಾಪ್ರಭುತ್ವದ ಚುನಾವಣೆಯ ಔಪಚಾರಿಕತೆ ಬಾಕಿ ಇದೆ.

- Advertisement -
- Advertisement -

ಇಂದು ಭಾರತದಲ್ಲಿ ಆಗುತ್ತಿರುವುದೆಲ್ಲವನ್ನು ಭಾರತದ ಸ್ವಧರ್ಮದ ಮೇಲೆ ಆಗುತ್ತಿರುವ ದಾಳಿ ಎಂದು ಹೇಗೆ ಹೇಳಬಹುದು? ಈ ಲೇಖನದ ಹಿಂದಿನ ಮೂರು ಕಂತುಗಳಲ್ಲಿ ನಾವು ನೋಡಿದ್ದೇನೆಂದರೆ, ಇಂದಿನ ಪರಿಸ್ಥಿತಿಯ ಮೌಲ್ಯಮಾಪನದ ಮಾನದಂಡವು ಒಂದು ಪುಸ್ತಕ ಅಥವಾ ವಿಚಾರಧಾರೆ ಅಥವಾ ಒಬ್ಬ ವ್ಯಕ್ತಿಯ ವಿಚಾರಗಳು ಆಗಿರಲು ಸಾಧ್ಯವಿಲ್ಲ. ಭಾರತದ ಸ್ವಧರ್ಮವೇ ಇಂದು ದೇಶದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮಾನದಂಡ ಆಗಲು ಸಾಧ್ಯ. ಸಹಾನುಭೂತಿ, ಸ್ನೇಹ ಹಾಗೂ ನಮ್ರತೆಯ ತ್ರಿವೇಣಿ ಸಂಗಮವು ಭಾರತದ ಸ್ವಧರ್ಮವನ್ನು ವ್ಯಾಖ್ಯಾನಿಸುತ್ತದೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಸಮಾಜವಾದ, ಸೆಕ್ಯುಲರ್‌ವಾದ ಹಾಗೂ ಲೋಕತಂತ್ರ ನಮ್ಮ ಸಭ್ಯತೆ/ನಾಗರಿಕತೆಯ ಈ ಮೂರು ಆದರ್ಶಗಳ ಆಧುನಿಕ ರೂಪವಾಗಿದೆ. ಅಂದರೆ ಇಂದು ಈ ಮೂರು ಮೌಲ್ಯಗಳ ಮೇಲೆಯೇ ದಾಳಿ ಆಗುತ್ತಿದೆಯೇ? ಈ ದಾಳಿ ಎಷ್ಟು ಅಪಾಯಕಾರಿ ಆಗಿದೆ? ಇಂತಹದ್ದರಲ್ಲಿ ನಮ್ಮ ಧರ್ಮ ಏನು?

ಸ್ವಾತಂತ್ರದ ನಂತರ ಭಾರತದ ಸ್ವಧರ್ಮದ ಬಗ್ಗೆ ಚಿಂತಿಸುವ ಪ್ರತಿಯೊಬ್ಬ ವ್ಯಕ್ತಿಯು ಇದರ ಆರಂಭವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡಬೇಕು. ವಾಸ್ತವ ಏನೆಂದರೆ, ಕಳೆದ 75 ವರ್ಷಗಳಲ್ಲಿ ದೇಶದಲ್ಲಿ ಭಾರತದ ಸ್ವಧರ್ಮದೊಂದಿಗೆ ಎಂದೂ ನ್ಯಾಯ ಒದಗಿಸಲಾಗಿಲ್ಲ. ಅಧಿಕಾರ ಯಾವ ಪಕ್ಷದ ಬಳಿಯೇ ಇರಲಿ, ಅವರು ಧರ್ಮದ ಹೆಸರಿನಲ್ಲಿ ಅಧರ್ಮವನ್ನೇ ಹಬ್ಬಿಸುವ ಕೆಲಸ ಮಾಡಿವೆ. ಇಂತಹದ್ದರಲ್ಲಿ, ಇಂದು ಏನೆಲ್ಲ ಆಗುತ್ತಿದೆಯೋ ಅದನ್ನು ಅತ್ಯಂತ ಘೋರ ದಾಳಿ ಎಂದು ಕರೆಯಬಹುದೇ?

ಎಲ್ಲಕ್ಕಿಂತ ಮುನ್ನ, ಸ್ನೇಹ ಅಥವಾ ಮೈತ್ರಿಯ ಆದರ್ಶವನ್ನು ತೆಗೆದುಕೊಳ್ಳುವ, ಅದರ ಮೇಲೆಯೇ ನಮ್ಮ ಸರ್ವಧರ್ಮ ಸಮಭಾವದ ಅಡಿಪಾಯ ನಿಂತಿದೆ. ವಿಭಜನೆಯ ಜರ್ಜರಿತ ನೋವಿನಿಂದ ಹುಟ್ಟಿದ ದೇಶಕ್ಕೆ ಎಲ್ಲಕ್ಕಿಂತ ದೊಡ್ಡ ಸವಾಲು ಇದ್ದಿದ್ದು, ಕೋಮು ಸೌಹಾರ್ದತೆಯದ್ದು, ಅದರಲ್ಲೂ ವಿಶೇಷವಾಗಿ ಹಿಂದೂ ಮುಸ್ಲಿಂ ಏಕತೆಯನ್ನು ಕಾಪಾಡಿಕೊಂಡು ಹೋಗುವುದು. ಕಳೆದ 75 ವರ್ಷಗಳಲ್ಲಿ ಈ ಆದರ್ಶದ ಮೇಲೆ ಪದೇಪದೇ ಘೋರವಾದ ದಾಳಿಗಳಾಗಿವೆ. ಹಿಂದೂ ಮುಸ್ಲಿಂ ಏಕತೆಗೆ ಸವಾಲೊಡ್ಡುವ ಎಲ್ಲಾ ಘಟನೆಗಳು ಮತ್ತು ದಂಗೆಗಳೂ ಆಗಿವೆ ಹಾಗೂ ಅದರೊಂದಿಗೆಯೇ ಪೊಲೀಸ್ ವ್ಯವಸ್ಥೆ ಹಾಗೂ ರಾಜಕೀಯ ಮುಖಂಡರು ಏಕಪಕ್ಷೀಯವಾಗಿ ಪಾತ್ರ ವಹಿಸಿದ ದೊಡ್ಡ ದೊಡ್ಡ ಘಟನೆಗಳೂ ಆಗಿವೆ. ಅದು 1984 ರ ದೆಹಲಿಯ ನರಸಂಹಾರ ಆಗಿರಲಿ ಅಥವಾ ನೆಲ್ಲಿ ಹತ್ಯಾಕಾಂಡ, ಮಲಿಯಾನಾ ಅಥವಾ ಗುಜರಾತಿನಲ್ಲಾದ ಮಾರಣಹೋಮ ಅಥವಾ ಕಶ್ಮೀರಿ ಪಂಡಿತರನ್ನು ಬಲವಂತವಾಗಿ ವಲಸೆ ಮಾಡಿರುವುದು ಆಗಿರಲಿ, ಇವೆಲ್ಲವೂ ಭಾರತದ ಸ್ವಧರ್ಮದ ಮೇಲೆ ಆದ ದಾಳಿಗಳೇ ಆಗಿವೆ.

ಆದರೆ ಕಳೆದ ಕೆಲವು ವರ್ಷಗಳಲ್ಲಿ ಸ್ನೇಹದ ಆದರ್ಶ ಹಾಗೂ ಸರ್ವಧರ್ಮ ಸಮಭಾವದ ಸಂವೈಧಾನಿಕ ಮೌಲ್ಯಗಳ ಮೇಲೆ ಆದ ದಾಳಿಗಳೂ ಹಿಂದೆಂದೂ ಕಾಣದಂತಹ ದಾಳಿಗಳಾಗಿವೆ. ಮೊದಲ ಬಾರಿಗೆ ಪೌರತ್ವದ ಕಾಯಿದೆಯ ಮೇಲೆ ತಿದ್ದುಪಡಿ ಮಾಡಿ, ಧರ್ಮದ ಆಧಾರದ ಮೇಲೆ ಎರಡು ವರ್ಗಗಳ ನಾಗರಿಕತೆಯನ್ನು ರಚಿಸಲಾಯಿತು. ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯಿಂದ ಧರ್ಮದ ಹೆಸರಿನ ಮೇಲೆ ನರಸಂಹಾರ ಮಾಡಲು ಆಹ್ವಾನ ನೀಡಲಾಯಿತು. ಬೀದಿಗಳಲ್ಲಿ ಗುರುತಿಸಿ ಲಿಂಚಿಂಗ್ ಘಟನೆಗಳು ಆಗುತ್ತಿವೆ. ಧಾರ್ಮಿಕ ಭೇದಭಾವವನ್ನು, ತಾರತಮ್ಯವನ್ನು ಅಪವಾದ ಎಂದು ಕಾಣಬೇಕಿದ್ದ ಜಾಗದಲ್ಲಿ ಈಗ ಅದನ್ನು ಸಾಮಾನ್ಯ ನಿಯಮವನ್ನಾಗಿಸಲಾಗಿದೆ, ಅಧಿಕಾರದಲ್ಲಿ ಸ್ಥಾನದಲ್ಲಿದ್ದುಕೊಂಡು ಬಹಿರಂಗವಾಗಿ ಅಲ್ಪಸಂಖ್ಯಾತರ ವಿರುದ್ಧ ಸಾರ್ವಜನಿಕ ಅಭಿಪ್ರಾಯಗಳನ್ನು ಪ್ರಚೋದಿಸಲಾಗಿದೆ. ಮೊದಲ ಬಾರಿಗೆ ಎಲ್ಲಾ ಧರ್ಮಗಳಿಗೆ ಸಮಾನ ಸ್ಥಾನ ನೀಡುವುದರ ಬದಲಿಗೆ ಒಂದು ಸಮುದಾಯದ ಪ್ರಭಾವಕಾರಿ ಸಿದ್ಧಾಂತವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಮನೆಯಲ್ಲಿ ಬೆಂಕಿ ಹಚ್ಚಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ದೇಶದ್ರೋಹ ರಾಜಕೀಯದ ಪ್ರಾಬಲ್ಯ ಹೆಚ್ಚಿದೆ.

ಸಹಾನುಭೂತಿಯ ಆದರ್ಶವೇ ಲೋಕಕಲ್ಯಾಣ, ಅಂತ್ಯೋದಯ ಹಾಗೂ ಸಮಾಜವಾದದ ವಿಚಾರಗಳ ಮೂಲದಲ್ಲಿದೆ. ಸ್ವತಂತ್ರ ಬಾರತದಲ್ಲಿ ಈ ಆದರ್ಶವನ್ನು ಕಡೆಗಣಿಸಲಾಗಿದೆ ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. 75 ವರ್ಷಗಳ ನಂತರವೂ ಬಡತನ, ಹಸಿವು ಹಾಗೂ ಅಪೌಷ್ಟಿಕತೆ ಇದೆ ಎಂದರೆ ಅದು ಸಮಾನತೆಯ ಆದರ್ಶದ ಮೇಲೆ ಕಪ್ಪು ಚುಕ್ಕೆ ಇದ್ದಂತೆ. ಆದರೆ ಇಲ್ಲಿಯೂ ಕಳೆದ ಎಂಟು ವರ್ಷಗಳಲ್ಲಿ ಹಿಂದೆಂದೂ ಕಾಣದಷ್ಟು ಕುಸಿತ ಕಂಡಿದೆ. ಇತ್ತೀಚಿಗೆ ಬಹಿರಂಗಪಡಿಸಲಾದ ಅಂಕಿಅಂಶಗಳಿಂದ ತಿಳಿಯುವುದೇನೆಂದರೆ, ಅಪೌಷ್ಟಿಕತೆ ಮತ್ತು ಹಸಿವು, ಇವೆರಡೂ ದಶಕಗಳಿಂದ ಕಡಿಮೆಆಗುತ್ತಿದ್ದವು. ಆದರೆ ಈಗ ಮೊದಲ ಬಾರಿಗೆ ಇವುಗಳ ಅನುಪಾತದಲ್ಲಿ ಹೆಚ್ಚಳ ಕಂಡಿದೆ. ನಿರುದ್ಯೋಗದ ದರ ದಾಖಲೆ ಸೃಷ್ಟಿಸಿದೆ, ಒಂದೇ ಹೊಡೆತದಲ್ಲಿ 5 ಐದು ಕೋಟಿ ಜನರು ಬಡತನದ ರೇಖೆಯ ಕೆಳಗೆ ತಳ್ಳಲ್ಪಟ್ಟಿದ್ದಾರೆ. ಲಾಕ್ಡೌನ್ ನಂತರ ಎರಡು ವರ್ಷಗಳಲ್ಲಿ ದೇಶದ 97% ಕುಟುಂಬಗಳ ಆದಾಯ ಕಡಿಮೆಯಾಗಿದೆ ಆದರೆ ಕಳೆದ ಎರಡೂವರ್ಷಗಳಲ್ಲಿ ಪ್ರಧಾನಮಂತ್ರಿಯ ಖಾಸಾ ಗೌತಮ್ ಅದಾನಿಯ ಸಂಪತ್ತು 66 ಸಾವಿರ ಕೋಟಿಗಳಿಂದ ಹೆಚ್ಚುತ್ತ 12 ಲಕ್ಷ ಕೋಟಿಯಾಗಿದೆ. ಅಂದರೆ, ಕೇವಲ ಹೆಚ್ಚಳ ಕಂಡಿಲ್ಲ, 18 ಪಟ್ಟು ಜಿಗಿತ ಕಂಡುಬಂದಿದೆ. ಸಮಾನತೆಯ ಸಂವೈಧಾನಿಕ ಆದರ್ಶದ ಇಂತಹ ಉಲ್ಲಂಘನೆ ದೇಶವು ಎಂದಿಗೂ ಕಂಡಿರಲಿಲ್ಲ.

ಅಧಿಕಾರದ ಗೌರವ ಹಾಗೂ ಪ್ರಜಾಪ್ರಭುತ್ವದ ಪರಿಕಲ್ಪನೆಯು ಹುಟ್ಟಿಕೊಂಡಿದ್ದು ನಮ್ರತೆಯ ಆದರ್ಶದಿಂದ. ಜವಾರಹಲಾಲ್ ನೆಹರು ಅವರ ಸಮಯದಲ್ಲಿ ಪ್ರಜಾತಾಂತ್ರಿಕ ಘನತೆಯ ಸ್ಥಾಪನೆ ಆಯಿತು ಹಾಗೂ ಅದನ್ನು ಹೆಚ್ಚುಕಡಿಮೆ ಪಾಲಿಸಲಾಯಿತು, ಆದರೆ ಇಂದಿರಾ ಗಾಂಧಿಯು ಅಧಿಕಾರಕ್ಕೆ ಬಂದ ನಂತರ ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ಕುಸಿತ ಕಂಡುಬಂದಿತು ಹಾಗೂ ತುರ್ತುಪರಿಸ್ಥಿತಿ ಎಂಬುದು ಭಾರತದ ಪ್ರಜಾಪ್ರಭುತ್ವದ ಮೇಲೆ ಅತ್ಯಂತ ದೊಡ್ಡ ಕಳಂಕವಾಗಿತ್ತು. ಅದರ ನಂತರ ತುರ್ತು ಪರಿಸ್ಥಿತಿಯಂತಹ ಕೆಲಸ ಯಾರೂ ಮಾಡಲಿಲ್ಲ. ಆದರೆ ನಾಗರಿಕರ ಸ್ವತಂತ್ರದ ಹಾಗೂ ಸಂವೈಧಾನಿಕ ಮೌಲ್ಯಗಳ ಉಲ್ಲಂಘನೆಗಳು ಆಗುತ್ತಲೇ ಇದ್ದವು. ಪ್ರಜೆಗಳ ಮೇಲೆ ತಂತ್ರದ ಪ್ರಾಬಲ್ಯ ಮುಂದುವರೆಯಿತು. ಈ ನಿಟ್ಟಿನಲ್ಲಿಯೂ ಕಳೆದ 8 ವರ್ಷಗಳಲ್ಲಿ ಹಾಗೂ ಅದರಲ್ಲಿ ವಿಶೇಷವಾಗಿ ಕಳೆದ ಮೂರು ವರ್ಷಗಳಲ್ಲಿ ಹಳೆಯ ಎಲ್ಲಾ ದಾಖಲೆಗಳನ್ನು ಮುರಿಯಲಾಗಿದೆ. ಸಿಬಿಐ ಮತ್ತು ಇಡಿ ಯಂತಹ ಸಂಸ್ಥೆಗಳ ದುರುಪಯೋಗ ಮುಂಚೆಯೂ ಆಗಿದೆ. ಆದರೆ ನೇರಾನೇರ ರಾಜಕೀಯ ವಿರೋಧಿಗಳನ್ನು ಗುರಿ ಮಾಡುವುದರಲ್ಲಿ ಈಗ ಯಾವ ಸಂಶಯವೂ ಉಳಿದಿಲ್ಲ. ಚುನಾವಣಾ ಆಯೋಗದ ಬಗ್ಗೆಯೂ ಇಂತಹ ಒಂದೇ ಪ್ರಶ್ನೆ ಉಳಿದಿದೆ; ಅದು ಆಡಳಿತರೂಢ ಸರಕಾರದ ಕಚೇರಿಯಾಗಿದೆಯೇ ಅಥವಾ ಪಕ್ಷ ಕಚೇರಿಯೋ? ನ್ಯಾಯಾಂಗವು ಸ್ವಯಂ ತನ್ನ ಪರಿಮಿತಿಗಳಲ್ಲಿ ರಾಜಿ ಮಾಡಿಕೊಂಡಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಬಹುತೇಕ ಸರಕಾರದ ಜೇಬಿನಲ್ಲಿವೆ, ಹಾಗೂ ಯಾರು ಮಾತನಾಡುವ ಗುಂಡಿಗೆ ತೋರಿಸುತ್ತಾರೋ, ಅವರಿಗೆ ಸೆರೆಮನೆಯ ದಾರಿ ತೋರಿಸಲಾಗುತ್ತಿದೆ. ರಷ್ಯಾ ಮತ್ತು ಟರ್ಕಿಯಲ್ಲಿ ಇರುವಂತೆಯೇ ಇಲ್ಲಿಯೂ ಪ್ರಜಾಪ್ರಭುತ್ವದ ಚುನಾವಣೆಯ ಔಪಚಾರಿಕತೆ ಬಾಕಿ ಇದೆ. ಹಂತ ಹಂತವಾಗಿ ನಾವು ಒಂದು ಚುನಾವಣಾ ಸರ್ವಾಧಿಕಾರ ಆಗುತ್ತಿದ್ದೇವೆ.

ಸಹಜವಾಗಿಯೇ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ಸ್ವಧರ್ಮದ ಮೇಲೆ ಇದು ಮೊದಲ ದಾಳಿ ಅಲ್ಲ. ಆದರೆ ಇಂದು ಆಗುತ್ತಿರುವ ದಾಳಿಯು ನಾಲ್ಕು ನಿಟ್ಟಿನಲ್ಲಿ ಹಿಂದೆಂದೂ ಕಾಣದಂತಹ ಅತ್ಯಂತ ಘೋರ ದಾಳಿಯಾಗಿದೆ. ಮೊದಲನೆಯದಾಗಿ, ನಾವು ಮೇಲೆ ನೋಡಿದಂತೆ, ಮೂರೂ ಆದರ್ಶಗಳ ಮೇಲೆ ಆಗುತ್ತಿರುವ ದಾಳಿಯು ಹಿಂದೆ ಆದ ದಾಳಿಗಳಿಂತ ಎಲ್ಲಾ ರೀತಿಯಲ್ಲಿ ಹೆಚ್ಚು ಬಲಶಾಲಿಯಾಗಿವೆ. ಎರಡನೆಯದಾಗಿ, ಹಿಂದಿನ ಸಮಯದಲ್ಲಿ ಮೂರರಲ್ಲಿ ಯಾವುದೇ ಒಂದು ಆದರ್ಶದ ಮೇಲೆ ದಾಳಿ ಆಗುತ್ತಿತ್ತು. ಈ ಬಾರಿ ಮೂರೂ ಆದರ್ಶಗಳ ಮೇಲೇ ಏಕಕಾಲಕ್ಕೆ ದಾಳಿ ಆಗುತ್ತಿದೆ. ಮೂರನೆಯದಾಗಿ, ಈ ದಾಳಿ ಯಾವುದೇ ಹೊರಗಿನ ಅಥವಾ ಅಂಚಿನಲ್ಲಿರುವ ತೀವ್ರಗಾಮಿ ಶಕ್ತಿಗಳಿಂದ ಆಗುತ್ತಿಲ್ಲ. ಈ ಬಾರಿ ಆಗುತ್ತಿರುವ ದಾಳಿಯು ಸವೈಂಧಾನಿಕ ಅಧಿಕಾರವನ್ನು ಕಬಳಿಸಿರುವ ಶಕ್ತಿಗಳಿಂದಲೇ ಪ್ರಾಯೋಜಿತ ದಾಳಿಯಾಗಿದೆ, ಅತ್ಯಂತ ವಿಶಾಲವಾದ ಸಂಘಟನಾ ಶಕ್ತಿ ಹಾಗೂ ಎಲ್ಲೆಯಿಲ್ಲದ ಧನಬಲದಿಂದ ಸಮರ್ಥವಾಗಿದೆ. ನಾಲ್ಕನೆಯದಾಗಿ, ಸ್ವಧರ್ಮದ ಮೇಲೆ ಆಗುತ್ತಿರುವ ಈ ದಾಳಿಯು ಕೇವಲ ಅಧರ್ಮವಾಗಿಲ್ಲ, ಅಂದರೆ, ಧರ್ಮವನ್ನು ಒಪ್ಪಿಕೊಳ್ಳುತ್ತ ವ್ಯವಹಾರದಲ್ಲಿ ಅದರ ಉಲ್ಲಂಘನೆ ಮಾಡುವ ಸಾಮಾನ್ಯವಾದ ಬೂಟಾಟಿಕೆ ಆಗಿಲ್ಲ. ಈ ಬಾರಿಯ ದಾಳಿಯು ಭಾರತದ ಮೇಲೆ ವೈಚಾರಿಕ ವಿಧರ್ಮದ ದಾಳಿಯಾಗಿದೆ ಅಂದರೆ ಸೈದ್ಧಾಂತಿಕ ರೂಪದಲ್ಲಿಯೇ ಸ್ವಧರ್ಮವನ್ನು ಅಲ್ಲಗೆಳೆಯುವ ವಿಚಾರದ ದಾಳಿಯಾಗಿದೆ.

ಇಂದು ಭಾರತೀಯ ಸಭ್ಯತೆಯ ಗೌರವಯುತ ಪರಂಪರೆ, ಭಾರತೀಯ ಸ್ವಾತಂತ್ರ ಸಂಗ್ರಾಮದ ಇತಿಹಾಸ ಹಾಗೂ ಭಾರತೀಯ ಸಂವಿಧಾನದ ಆದರ್ಶಗಳಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯಳಿ/ನಿಗೆ ಒಂದೇ ಧರ್ಮ ಇರಲು ಸಾಧ್ಯ: ತನು, ಮನ, ಧನ ಹಾಗೂ ಅವಶ್ಯಕತೆ ಬಿದ್ದರೆ ತನ್ನ ಪ್ರಾಣದಿಂದಲೂ ಸ್ವಧರ್ಮದ ರಕ್ಷಣೆ ಮಾಡುವುದು.

ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಇದನ್ನೂ ಓದಿ; 8ನೇ ತರಗತಿಯಲ್ಲಿ ಇದ್ದಾಗಿಂದ ನಾನು ಲೀಡರ್ರೇ ಆಗಿದ್ದೆ: ಮಲ್ಲಿಕಾರ್ಜುನ ಖರ್ಗೆಯವರ ಹಳೆಯ ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...