ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಶೇ.50ರಷ್ಟು ಹೆಚ್ಚಿಸಲಾಗುವುದು ಮತ್ತು 1971ರ ಜನಗಣತಿ ಆಧಾರಿತ ಪ್ರಾತಿನಿಧ್ಯದ ಅನುಪಾತ ಮುಂದಿನ 25 ವರ್ಷಗಳವರೆಗೆ (2051ರವರೆಗೆ) ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗುವುದು ಎಂಬ ಪ್ರಮುಖ ಭರವಸೆಗಳನ್ನು ನೀಡುವ ಮೂಲಕ ಕೇಂದ್ರ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಬೆಂಬಲವನ್ನು ಪಡೆದಿದೆ.
ಡಿಎಂಕೆ ಕೂಡ ಕೇಂದ್ರದ ಎರಡು ಭರವಸೆಗಳನ್ನು ತಮಿಳುನಾಡಿಗೆ ಮತ್ತು ಇಡೀ ದಕ್ಷಿಣ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಎಂದು ಹೇಳಿಕೊಳ್ಳುತ್ತಿದೆ. ಇದು ನಮ್ಮ ಹೋರಾಟಕ್ಕೆ ಸಂದ ಗೆಲುವು ಎನ್ನುತ್ತಿದೆ. ಎರಡು ಭರವಸೆಗಳ ಬಳಿಕ ಪರಿಷ್ಕೃತ ಮಸೂದೆಗೆ ‘ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆ’ (fair delimitation ) ಎಂದು ಹೇಳಲಾಗ್ತಿದೆ.
ಆದರೆ, ಇಷ್ಟಕ್ಕೆ ವಿಪಕ್ಷಗಳು ಮೈಮರೆಯಬಾರದು ಎಂದು ರಾಜಕೀಯ ವಿಶ್ಲೇಷಕ ಮತ್ತು ಹೋರಾಟಗಾರ ಯೋಗೇಂದ್ರ ಯಾದವ್ ಎಚ್ಚರಿಸಿದ್ದಾರೆ.
ಶುಕ್ರವಾರ (ನ.27) ರಾತ್ರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಸಂದೇಶದಲ್ಲಿ ಯಾದವ್ ಅವರು, ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ಬಿಜೆಪಿ ‘ಒಂದೇ ಕಲ್ಲಿನಲ್ಲಿ ನಾಲ್ಕು ಹಕ್ಕಿಗಳನ್ನು ಹೊಡೆಯಲು’ ಹೊಂಚು ಹಾಕಿತ್ತು ಎಂದಿದ್ದಾರೆ. ದಕ್ಷಿಣ ಮತ್ತು ಪೂರ್ವ ಭಾರತದ ಬಿಜೆಪಿಗೆ ಕಡಿಮೆ ಸ್ಥಾನಗಳು ಸಿಗುವ ರಾಜ್ಯಗಳಲ್ಲಿ ಕ್ಷೇತ್ರಗಳನ್ನು ಕಡಿಮೆ ಮಾಡುವುದು ಈ ಮಸೂದೆಯ ಮೊದಲ ಉದ್ದೇಶವಾಗಿತ್ತು. ಆದರೆ ಏಪ್ರಿಲ್‌ನಲ್ಲಿ ಈ ಪ್ರಯತ್ನ ಬಯಲಾದ ಬಳಿಕ, ಹಿಂಬಾಗಿಲ ಮೂಲಕ ಅಥವಾ ಬೇರೆ ರೀತಿಯಲ್ಲಿ ಇದನ್ನು ತರಲು ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
ಉಳಿದಿರುವ ‘ಮೂರು ಅಪಾಯಗಳು’ ಯಾವುವು?
ಮೊದಲ ಗುರಿ ತಪ್ಪಿದ್ದರೂ, ಮಸೂದೆಯಲ್ಲಿ ಅಡಗಿರುವ ಮೂರು ದೊಡ್ಡ ಆತಂಕಗಳು ಇನ್ನೂ ಹಾಗೆಯೇ ಇವೆ ಎಂದು ಯಾದವ್ ವಿವರಿಸಿದ್ದಾರೆ:
1. ಕ್ಷೇತ್ರಗಳ ಮರುರಚನೆ ಮತ್ತು ಜೆರಿಮ್ಯಾಂಡರಿಂಗ್ (Gerrymandering): ದೇಶದ ಪ್ರತಿಯೊಂದು ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರದ ಗಡಿಗಳನ್ನು ಬಿಜೆಪಿಗೆ ಅನುಕೂಲವಾಗುವಂತೆ ಹೊಸದಾಗಿ ರಚಿಸುವ ಅಪಾಯವಿದೆ. ಇಡೀ ದೇಶದ ಚುನಾವಣಾ ನಕ್ಷೆಯನ್ನು ಬದಲಾಯಿಸುವ ಸಿದ್ಧತೆ ಈಗಾಗಲೇ ನಡೆದಿದ್ದು, ಕ್ಷೇತ್ರ ಪುನರ್ವಿಂಗಡಣೆ ಆಯೋಗವು ಕೇವಲ ಅದಕ್ಕೆ ಅಧಿಕೃತ ಮುದ್ರೆ ಒತ್ತುವ ಕೆಲಸ ಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಅಸ್ಸಾಂನ ಕ್ಷೇತ್ರಗಳ ವಿಚಿತ್ರ ಆಕಾರಗಳನ್ನು ಅವರು ಪ್ರಸ್ತಾಪಿಸಿದ್ದಾರೆ. 2023ರಲ್ಲಿ ಅಸ್ಸಾಂನಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆಯ ಬಳಿಕ, ಮುಸ್ಲಿಮರು ನಿರ್ಣಾಯಕ ಪ್ರಭಾವ ಹೊಂದಿದ್ದ ಸುಮಾರು 35 ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 20ಕ್ಕಿಂತ ಸ್ವಲ್ಪ ಹೆಚ್ಚಿನ ಮಟ್ಟಕ್ಕೆ ಇಳಿದಿದೆ ಎಂಬ ವರದಿಗಳನ್ನು ಉಲ್ಲೇಖಿಸಲಾಗಿದೆ. ಆರ್‌ಜೆಡಿ ರಾಜ್ಯಸಭಾ ಸಂಸದ ಪ್ರೊ. ಮನೋಜ್ ಕುಮಾರ್ ಝಾ ಕೂಡ ಅಸ್ಸಾಂ ಮಾದರಿಯ ರಾಜಕೀಯ ಪ್ರೇರಿತ ಗಡಿ ಬದಲಾವಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
2. ಮೀಸಲಾತಿ ನೆಪದಲ್ಲಿ ವಿಪಕ್ಷ ನಾಯಕರ ಕಡಿತ: ಎಸ್‌ಸಿ, ಎಸ್‌ಟಿ ಮತ್ತು ಈಗ ಮಹಿಳಾ ಮೀಸಲಾತಿಯನ್ನು ಬಳಸಿಕೊಂಡು, ವಿಪಕ್ಷ ನಾಯಕರ ಕ್ಷೇತ್ರಗಳನ್ನು ಬದಲಾಯಿಸುವ ಅಥವಾ ತಪ್ಪಿಸುವ ತಂತ್ರ ನಡೆಯಬಹುದು; ಮಹಿಳಾ ಮೀಸಲಾತಿಯ ಮರೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ನಡೆಯುವ ಅಪಾಯವಿದೆ ಎಂದು ಯಾದವ್ ಹೇಳಿದ್ದಾರೆ.
3. ಬಿಜೆಪಿ ಪುರುಷ ನಾಯಕರ ಸ್ಥಾನ ಭದ್ರತೆ: ಲೋಕಸಭೆಯ ಗರಿಷ್ಠ ಸಾಮರ್ಥ್ಯವನ್ನು 850ಕ್ಕೆ ಏರಿಸಲು (ರಾಜ್ಯಗಳಿಂದ 815 ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35) ಪ್ರಸ್ತಾಪಿಸಲಾಗಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಲಾಗುತ್ತಿದ್ದರೂ, ತಮ್ಮ ಕ್ಷೇತ್ರ ಕೈತಪ್ಪಬಹುದು ಎಂಬ ಬಿಜೆಪಿಯ ಪುರುಷ ಸಂಸದರ ಆತಂಕವನ್ನು ನಿವಾರಿಸುವುದೇ ಇದರ ಹಿಂದಿನ ನಿಜವಾದ ಲೆಕ್ಕಾಚಾರ ಎನ್ನುವುದು ಯಾದವ್ ಅವರ ವಾದ. 850 ಸದಸ್ಯ ಬಲದಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಿದರೂ ಸುಮಾರು 567 ಮೀಸಲಲ್ಲದ ಕ್ಷೇತ್ರಗಳು ಉಳಿಯುತ್ತವೆ. ಇದು ಈಗಿರುವ ಲೋಕಸಭೆಯ 543 ಸದಸ್ಯ ಬಲಕ್ಕಿಂತಲೂ ಹೆಚ್ಚು.
ದಕ್ಷಿಣದ ಪ್ರಮುಖ ಪಕ್ಷಗಳ ನಿಲುವು
ಮತ್ತೊಂದೆಡೆ, ಈ ಮಸೂದೆಯ ಕೆಲವು ಅಂಶಗಳನ್ನು ದಕ್ಷಿಣದ ಪ್ರಮುಖ ಪಕ್ಷಗಳು ಸ್ವಾಗತಿಸಿವೆ:
ಡಿಎಂಕೆ (DMK): ನವೆಂಬರ್ 28ರಂದು ನಡೆದ ಸಂಸದೀಯ ಸಮಿತಿ ಸಭೆಯಲ್ಲಿ ಹೊಸ ಮಸೂದೆಗೆ ಬೆಂಬಲ ನೀಡಲು ಡಿಎಂಕೆ ನಿರ್ಧರಿಸಿದೆ. 2024ರಿಂದ ತಾವು ನಡೆಸಿದ ನಿರಂತರ ಹೋರಾಟಕ್ಕೆ ಸಿಕ್ಕ ಜಯ ಇದು ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಹೇಳಿದ್ದು, 1971ರ ಜನಗಣತಿ ಆಧಾರದ ಮೇಲೆ ಎಲ್ಲಾ ರಾಜ್ಯಗಳ ಕ್ಷೇತ್ರಗಳಲ್ಲಿ 50% ಹೆಚ್ಚಳ ಮಾಡುವ ಈ ಕ್ರಮ ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನುಕೂಲಕರವಾಗಿದೆ ಎಂದಿದ್ದಾರೆ.
ಬಿಆರ್‌ಎಸ್ (BRS): ಮಸೂದೆಗೆ ಬೆಂಬಲ ನೀಡುವುದಾಗಿ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ತಿಳಿಸಿದ್ದು, ತಮ್ಮ ಪಕ್ಷದ ಮೂವರು ರಾಜ್ಯಸಭಾ ಸದಸ್ಯರು ಮಸೂದೆಯನ್ನು ಬೆಂಬಲಿಸಲಿದ್ದಾರೆ ಎಂದಿದ್ದಾರೆ. 2051ರವರೆಗೆ ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತ ಬದಲಾಗದಂತೆ ರಕ್ಷಣೆ ಇರುವುದರಿಂದ ದಕ್ಷಿಣ ಭಾರತದ ಪ್ರಾತಿನಿಧ್ಯ ಕಡಿಮೆಯಾಗುವುದಿಲ್ಲ ಮತ್ತು ತೆಲಂಗಾಣದ ಲೋಕಸಭಾ ಕ್ಷೇತ್ರಗಳು 17ರಿಂದ 26ಕ್ಕೆ ಏರಲಿವೆ ಎಂದು ಅವರು ಹೇಳಿದ್ದಾರೆ.


