Homeಅಂಕಣಗಳುಎರಡೂ ಪಕ್ಷದವರು ಸೋಲುವ ಸಂಗ್ರಾಮ ಪಬ್ಲಿಕ್ ವರ್ಸಸ್ ರಿಪಬ್ಲಿಕ್

ಎರಡೂ ಪಕ್ಷದವರು ಸೋಲುವ ಸಂಗ್ರಾಮ ಪಬ್ಲಿಕ್ ವರ್ಸಸ್ ರಿಪಬ್ಲಿಕ್

- Advertisement -
- Advertisement -

ಇತ್ತೀಚೆಗೆ ಮಾತನಾಡಿದ ಪತ್ರಕರ್ತರೊಬ್ಬರು ಇಂದಿನ ದಿನಮಾನದ ವಾಸ್ತವದ ಪ್ರತೀಕವೆಂಬಂತೆ ತೋರಿದರು. ಜಾತಿಯ ಕಾರಣಕ್ಕೆ ಅವರು ಸಿದ್ದರಾಮಯ್ಯನವರ ವಿರುದ್ಧ ಕುದಿಯುತ್ತಿದ್ದರು. ಅದು ಯಾವ ಪ್ರಮಾಣಕ್ಕಿತ್ತೆಂದರೆ, ಅವರ ಜೊತೆ ಕೈ ಜೋಡಿಸಿದ್ದಕ್ಕಾಗಿ ಸ್ವಜಾತಿಯ ಗೌಡರ ಕುಟುಂಬದ ವಿರುದ್ಧವೂ ತೀವ್ರ ಅಸಹನೆ ಬೆಳೆಸಿಕೊಂಡಿದ್ದಾರೆ. ತಾನು ಪ್ರಜಾಪ್ರಭುತ್ವದ ಪರವಾಗಿ ಮಾತಾಡುತ್ತಿದ್ದೇನೆ ಎಂದು ತೋರಿಸಿಕೊಳ್ಳುವ ಅಗತ್ಯವೂ ಅವರಿಗಿರುವುದರಿಂದ, ತನಗೆ ಸಂಖ್ಯಾಬಲ ಇಲ್ಲದಿರುವ ಈ ಸರ್ಕಾರವು ಒಂದು ಕ್ಷಣವೂ ಅಧಿಕಾರದಲ್ಲಿ ಉಳಿಯಬಾರದು ಎಂದು ಗುಡುಗುತ್ತಿದ್ದರು. ಆದರೆ, ವಿಧಾನಸಭೆ ವಿಸರ್ಜನೆ ಆಗಲಿ ಎಂದು ಅವರು ಅಪ್ಪಿತಪ್ಪಿಯೂ ಹೇಳಲಿಲ್ಲ. ಯಡಿಯೂರಪ್ಪನವರು ಅಥವಾ ಬಿಜೆಪಿಯಿಂದ ಯಾರಾದರೂ ಮುಖ್ಯಮಂತ್ರಿಯಾಗುವುದೇ ನೈತಿಕವಾಗಿ ಸರಿ ಎಂಬುದು ಅವರ ಪ್ರತಿಪಾದನೆ.

ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರವು ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಬಲವನ್ನು ಕಳೆದುಕೊಂಡಿದೆಯೆಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ, ಆ ಸರ್ಕಾರವನ್ನು ರೂಪಿಸಿರುವ ಎರಡು ಪಕ್ಷಗಳಿಗೆ ಸೇರಿದ 15 ಜನ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಇನ್ನೂ ಅಂಗೀಕಾರವಾಗದಿರುವುದು ತಾಂತ್ರಿಕ ಪ್ರಶ್ನೆ ಮಾತ್ರ. ಆಮಿಷ ಅಥವಾ ಒತ್ತಡಕ್ಕೆ ಒಳಗಾಗಿರಬಹುದಾದರೂ, ಅವರನ್ನು ಉಳಿಸಿಕೊಳ್ಳಲು ಯತ್ನಿಸುತ್ತಿರುವವರೂ ಸಹಾ ಆಮಿಷವನ್ನೇ ಒಡ್ಡುತ್ತಿದ್ದಾರೆ. ಆದ್ದರಿಂದ ಸರ್ಕಾರವು ಒಂದು ವೇಳೆ ಉಳಿದುಕೊಂಡರೆ ಅದು ಬಹಳ ನೈತಿಕ ಶಕ್ತಿ ಹೊಂದಿರುವ ಸರ್ಕಾರ ಎಂದು ಯಾರೂ ಹೇಳಲಾಗದು.

ಆದರೆ, ಇದನ್ನು ವಿರೋಧಿಸುತ್ತಿರುವವರು ಸಹಾ ನೈತಿಕ ನಿಲುವನ್ನು ಹೊಂದಿಲ್ಲ. ರಾಮಲಿಂಗಾರೆಡ್ಡಿಯಂತಹ ಹಿರಿಯ ಶಾಸಕರು ರಾಜೀನಾಮೆ ಕೊಟ್ಟರು; ಆದರೆ ಮುಂಬೈಗೆ ಹೋಗಿ ಅವಿತುಕೊಳ್ಳಲಿಲ್ಲ. ಬಹುಶಃ ರೆಡ್ಡಿಯವರಷ್ಟೇ ಹಿರಿಯರಾದ, ಅವರಿಗಿಂತ ಹೆಚ್ಚು ಸಂವಿಧಾನ, ಪ್ರಜಾತಂತ್ರ ಇತ್ಯಾದಿಗಳ ಕುರಿತು ಮಾತನಾಡುವ, ಎರಡು ಪುಸ್ತಕಗಳನ್ನೂ ಬರೆದಿರುವ ಎಚ್.ವಿಶ್ವನಾಥ್ ಮಾತ್ರ ಮುಂಬೈ ಹೋಟೆಲ್‍ಗೆ ಹೋಗಿ ಅವಿತುಕೊಂಡರು. ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿಯವರು ಬಂದು ಹೋಟೆಲ್ ಮೇಲೆ ದಾಳಿ ಮಾಡಬಹುದು, ಹಾಗಾಗಿ ರಕ್ಷಣೆ ಬೇಕು ಎಂದು ಪೊಲೀಸರಿಗೆ ಬರೆದ ದೂರಿಗೆ ಅವರ ಸಹಿಯೂ ಇತ್ತು. ಅಂದರೆ, ಆಡಳಿತ ನಡೆಸುತ್ತಿರುವ ಪಕ್ಷಗಳ ಬಲಾಢ್ಯರು ಬಂದು ಒತ್ತಾಯಿಸಿದರೆ ವಾಪಸ್ ಹೋಗಿಬಿಡಬಹುದು (ರಾಮಲಿಂಗಾರೆಡ್ಡಿಯವರ ರೀತಿ) ಎಂಬ ಹೆದರಿಕೆಯಿಂದ ಅವರನ್ನು ಬಚ್ಚಿಟ್ಟುಕೊಳ್ಳುತ್ತಿರುವ ಪಕ್ಷ ಬಿಜೆಪಿ.

ಇದರ ನಂತರದ ಪ್ರಶ್ನೆಯೆಂದರೆ ಸುಪ್ರೀಂಕೋರ್ಟಿನ ತೀರ್ಪಿನದು. ಮೇಲ್ನೋಟಕ್ಕೆ ‘ಶಾಸಕರನ್ನು ಸದನದಲ್ಲಿ ಭಾಗವಹಿಸಲೇಬೇಕೆಂಬ ಒತ್ತಾಯ ಮಾಡಬಾರದು’ ಎಂಬ ತೀರ್ಪಿನಲ್ಲಿ ಅಂತಹ ತಪ್ಪೇನಿಲ್ಲ. ಅದರಲ್ಲೂ ಅವರು ಈಗಾಗಲೇ ರಾಜೀನಾಮೆ ಕೊಟ್ಟಿರುವ ಶಾಸಕರು. ಆದರೆ ಇಲ್ಲಿ ಎರಡು ಪ್ರಶ್ನೆ ಉದ್ಭವಿಸುತ್ತದೆ. ಒಂದು, ಈಗಾಗಲೇ ಚರ್ಚಿತವಾಗಿರುವ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಶಾಸಕಾಂಗ ಪಕ್ಷದ ನಾಯಕರ ವಿಪ್ ಚಲಾಯಿಸುವ ಅಧಿಕಾರವನ್ನು ಮೊಟಕುಗೊಳಿಸುವುದು. ಎರಡು, ರಾಜ್ಯದ ಭವಿಷ್ಯಕ್ಕೆ ಸಂಬಂಧಿಸಿದ ಬಹುಮುಖ್ಯ ಸಂಗತಿ ಚರ್ಚೆಯಾಗಬೇಕಾದರೆ ಅಲ್ಲಿ ಹೋಗಿ ಚರ್ಚೆಯಲ್ಲಿ ಭಾಗವಹಿಸಿ (ಪರ ಅಥವಾ ವಿರೋಧವಾಗಿ) ಮತ ಹಾಕುವ ಜವಾಬ್ದಾರಿಯೂ ಈ ಶಾಸಕರಿಗೆ ಬೇಡವೇ? ಈ ಶಾಸಕರು ಅದರಿಂದ ತಪ್ಪಿಸಿಕೊಳ್ಳಲೆಂದೇ ಸುಪ್ರೀಂಕೋರ್ಟಿಗೆ ಬಂದಿದ್ದಾರೆಂದು ಕೋರ್ಟಿಗೆ ಗೊತ್ತಾಗಲಿಲ್ಲವೇ?

ಹೇಗಾದರೂ ಮಾಡಿ ಚುನಾವಣೆ ಗೆಲ್ಲುವುದು. ಒಂದು ವೇಳೆ ಅಗತ್ಯ ಬಹುಮತ ಇಲ್ಲದಿದ್ದಲ್ಲಿ ಹೇಗಾದರೂ ಮಾಡಿ ಸಂಖ್ಯಾಬಲವನ್ನು ಹೊಂದಿಸಿಕೊಳ್ಳುವುದು – ಇದು ಇಂದಿನ ‘ಪ್ರಜಾಪ್ರಭುತ್ವದ ರೀತಿ’ಯಾಗಿದೆ. ಚುನಾವಣೆಯಲ್ಲಿ ಜನರ ಬದುಕಿನ ವಿಚಾರಗಳನ್ನು ಮುಂದಿಡುವುದು ಅಥವಾ ವಿರೋಧ ಪಕ್ಷಗಳ ನೀತಿಗಳಲ್ಲಿನ ಜನವಿರೋಧಿತನವನ್ನು ಬಯಲುಗೊಳಿಸುವುದು ಇವೆಲ್ಲದರ ಅಗತ್ಯವೇ ಇಲ್ಲ. ಚುನಾವಣೆಗೆ ಮಾರ್ಕೆಟಿಂಗ್ ತಂತ್ರವನ್ನು ಹೊಸೆದು, ಪ್ಯಾಕೇಜ್ ರೂಪಿಸಿ ಜನರ ಮನಸ್ಸಿನಲ್ಲಿ ಗೊಂದಲವನ್ನೋ ಅಥವಾ ಭರವಸೆಯನ್ನೋ ಮೂಡಿಸಲು ಅದರಲ್ಲಿ ಪಳಗಿರುವ ಸಂಸ್ಥೆಗಳನ್ನು ನಿಯೋಜಿಸಿಕೊಳ್ಳುವ ಪ್ರಯತ್ನ ಶುರುವಾಗಿ ಬಹಳ ಕಾಲವಾಗಿದೆ. ಇವೆಲ್ಲವೂ ಪ್ರಜಾತಂತ್ರವನ್ನು ಸೋಲಿಸುತ್ತವೆ.

ಯಡಿಯೂರಪ್ಪನವರು ಸದನದಲ್ಲಿ ಸ್ಪೀಕರ್‍ರನ್ನು ಉದ್ದೇಶಿಸಿ, ‘ಆಡಳಿತ ಪಕ್ಷದವರಿಗೆ ವಿಶ್ವಾಸಮತದ ಮೇಲೆ ಚರ್ಚೆ ಮಾಡಲು ಎಷ್ಟು ಬೇಕಾದರೂ ಅವಕಾಶ ಕೊಡಿ. ನಾವ್ಯಾರೂ ಮಾತಾಡುವುದಿಲ್ಲ. ಒಂದೈದು ನಿಮಿಷ ಮಾತಾಡಬಹುದಷ್ಟೇ. ಬೇಗನೇ ಮತಕ್ಕೆ ಹಾಕಿ’ ಎಂದು ಹೇಳಿದುದರ ಅರ್ಥವೇನು? ಪ್ರಜಾತಂತ್ರವೆಂದರೆ ಸಂಖ್ಯೆಯಷ್ಟೇ, ಬೇರೇನೂ ಅಲ್ಲ ಎಂದು ಅವರು ಸ್ಪಷ್ಟಪಡಿಸುತ್ತಿದ್ದರು. ಆದರೆ, ಇದೇ ಸಂಖ್ಯೆ ಈ ಹಿಂದೆ ಅವರಿಗೆ ಮುಖ್ಯವಾಗಿರಲಿಲ್ಲ. ಅಂದರೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿದಾಗ ಅವರಿಗೆ ಬಹುಮತಕ್ಕೆ ಬೇಕಾದ 113 ಸಂಖ್ಯೆಯ ಶಾಸಕರ ಬೆಂಬಲ ಇತ್ತು. 104 ಶಾಸಕರನ್ನು ಹೊಂದಿದ್ದ ಬಿಜೆಪಿ ಮತ್ತದರ ನಾಯಕ ಯಡಿಯೂರಪ್ಪನವರಿಗೆ ಇರಲಿಲ್ಲ. ಆದರೂ ಇವೆರಡೂ ಪಕ್ಷಗಳು ಸೇರಿ ನಡೆಸಿದ ಸರ್ಕಾರವು ಸಂವಿಧಾನಬದ್ಧ ಎಂದು ಅವರಿಗೆ ಅನಿಸಿಯೇ ಇರಲಿಲ್ಲ. ಬದಲಿಗೆ ಅದು ಪರಸ್ಪರ ಸೆಣೆಸಾಡಿದ್ದ ಎರಡು ಪಕ್ಷಗಳು ಚುನಾವಣೋತ್ತರ ಕಾಲದಲ್ಲಿ ಮಾಡಿಕೊಂಡ ಅನೈತಿಕ ಮೈತ್ರಿ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಈಗ ಸಂಖ್ಯೆಯ ಜೊತೆಗೆ ನೈತಿಕ ಪ್ರಶ್ನೆಗಳನ್ನೆತ್ತಿ ಚರ್ಚಿಸುವುದೂ ಅವರಿಗೆ ಬೇಡವಾಗಿದೆ. ಕೇವಲ ಮತಕ್ಕೆ ಹಾಕುವುದು ಮಾತ್ರವೇ ಮುಖ್ಯ.

ಈ ಸಂದರ್ಭದಲ್ಲಿ ಇನ್ನೂ ಒಂದು ಅಂಶವನ್ನೂ ಗಮನಿಸಬೇಕು. ತಾನು ಸಭ್ಯ ಎಂದು ತೋರಿಸಿಕೊಳ್ಳಬಯಸುವ ರಾಜಾಜಿನಗರ ಶಾಸಕ ಸುರೇಶ್‍ಕುಮಾರ್‍ರ ಆಷಾಢಭೂತಿತನ ಸದನದಲ್ಲಿ ಬೆಳಕಿಗೆ ಬಂದಿತು. ಅವರು ಕುಮಾರಸ್ವಾಮಿಯವರು ಬಹುಮತದ ಕುರಿತು ಸಂದೇಹವಿರುವಾಗ ವಿಶ್ವಾಸಮತ ಯಾಚಿಸುವ ಪ್ರಸ್ತಾಪವನ್ನು ಮಾಡಿದ್ದುದರ ಕುರಿತು ಮಾತನಾಡಿದರು. ಅದನ್ನು ಪ್ರಸ್ತಾಪಿಸಿದ್ದ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಮುಖ್ಯವಾದ ಫೈಲ್‍ಗಳ ವಿಲೇವಾರಿ ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಸರಿಯಾದದ್ದು. ಕುಮಾರಸ್ವಾಮಿ ಮತ್ತವರ ಸೋದರ ರೇವಣ್ಣನವರ ಫೈಲ್ ವಿಲೇವಾರಿಯ ಹಿಂದೆ ಹಣದ ಲೂಟಿಯ ಉದ್ದೇಶ ಮಾತ್ರ ಇದೆಯೆಂದು ನಂಬಲು ಕಾರಣಗಳಿವೆ. ಆದರೆ, ಈ ವಿಧಾನಸಭೆಯು ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಬಹುಮತವೇ ಇಲ್ಲದೇ, ರಾಜ್ಯಪಾಲರ ಪಕ್ಷಪಾತದ ಕಾರಣದಿಂದಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪನವರು ಮಾಡಿದ್ದು ನೆನಪೇ ಇಲ್ಲದಂತೆ ಸುರೇಶ್‍ಕುಮಾರ್ ವರ್ತಿಸುತ್ತಿದ್ದಾರೆ. ವಿಶ್ವಾಸಮತ ಯಾಚನೆಗೂ ಮುಂಚೆ ಯಡಿಯೂರಪ್ಪನವರು ಅಧಿಕಾರಿಗಳ ವರ್ಗಾವಣೆಯನ್ನೂ ಮಾಡಿದ್ದರು!

ಅಂದರೆ, ಪ್ರಜಾಪ್ರಭುತ್ವ, ಸಂವಿಧಾನ, ನೀತಿ ಸಂಹಿತೆ ಇತ್ಯಾದಿಗಳೆಲ್ಲವೂ ಅನುಕೂಲಸಿಂಧು ರಾಜಕಾರಣದ ಅಸ್ತ್ರಗಳಾಗಿ ಮಾತ್ರ ಬಳಕೆಯಾಗುತ್ತಿವೆ. ಇಂದು ಹೇಗಾದರೂ ಮಾಡಿ ಅಧಿಕಾರ ಹಿಡಿದಿರುವ ಬಿಜೆಪಿಯು ತನಗೆ ಜನರ (ಪಬ್ಲಿಕ್) ಬೆಂಬಲವಿದೆ ಎಂದು ಸಾರುತ್ತಿದೆ. ಈ ಜನರ ಬೆಂಬಲವನ್ನು ಗಣರಾಜ್ಯದ ಮೂಲ ಆಶಯಗಳಿಗೆ ವಿರುದ್ಧವಾಗಿ ಅದು ಬಳಸುತ್ತಿದೆ. ಈ ಕಾರಣಕ್ಕಾಗಿಯೇ ಮುಂದಿನ ದಿನಗಳಲ್ಲಿ ಪಬ್ಲಿಕ್ ವರ್ಸಸ್ ರಿಪಬ್ಲಿಕ್ ಆಗಲಿದೆ ಎಂದು ಖ್ಯಾತ ರಾಜಕೀಯ ಚಿಂತಕ ಯೋಗೇಂದ್ರ ಯಾದವ್ ಹೇಳಿದ್ದು.

ಈ ಪಬ್ಲಿಕ್ ಏನು ಯೋಚಿಸಬೇಕೆಂದು ನಿರ್ದೇಶಿಸುವ, ಏನು ಯೋಚಿಸುತ್ತಾರೆಂದು ಬಿಂಬಿಸುವ ಕೆಲಸ ಮಾಡುವ ಮಾಧ್ಯಮವೂ ರಿಪಬ್ಲಿಕ್‍ನ ಆಶಯಗಳಿಗೆ ಪೂರಕವಾಗಿಲ್ಲ. ಹಾಗಾಗಿ ಅಂತಿಮವಾಗಿ ಇದು ಯಾವ ಜನರು ಓಟು ಹಾಕಿ ಗೆಲ್ಲಿಸಿದ್ದಾರೋ ಆ ಜನರ ವಿರುದ್ಧವೇ ತಿರುಗುತ್ತದೆ. ಇದನ್ನು ಪರಿಹರಿಸುವ ನೈತಿಕ ಶಕ್ತಿಯಾಗಲೀ, ಸಾಧ್ಯತೆಯಾಗಲೀ ಈ ದೇಶದ ವಿರೋಧಪಕ್ಷಗಳಿಗಿಲ್ಲವಾಗಿದೆ. ಇದೇ ಈ ಹೊತ್ತಿನ ದುರಂತ. ಆದ್ದರಿಂದ ಪಬ್ಲಿಕ್ ಮತ್ತು ರಿಪಬ್ಲಿಕ್ ಎರಡೂ ಸೋಲುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...