Homeಸಾಮಾಜಿಕಬ್ರಿಟಿಶರ ಎದೆ ನಡುಗಿಸಿದ್ದ ಆ ದಲಿತ ಸೇನಾಧಿಪತಿ ಹೆಣ್ಣಿನ ಹೆಸರು ವೀರಮಂಗೈ ಕುಯಿಲಿ

ಬ್ರಿಟಿಶರ ಎದೆ ನಡುಗಿಸಿದ್ದ ಆ ದಲಿತ ಸೇನಾಧಿಪತಿ ಹೆಣ್ಣಿನ ಹೆಸರು ವೀರಮಂಗೈ ಕುಯಿಲಿ

- Advertisement -
- Advertisement -

ಪರಿಮಳಾ ವಾರಿಯರ್ |

ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರ ಹೆಸರು ಹೇಳಿ ಎಂದರೆ ನಮಗೆಲ್ಲರಿಗೂ ಒಂದರ ಹಿಂದೊಂದು ರಾಜರು-ಪುರುಷ ನಾಯಕರ ಹೆಸರು ಬರುತ್ತವೆ. ಆ ನಂತರ ಒಂದೆರಡು ಮಹಿಳೆಯರ ಹೆಸರು ನೆನಪಾಗಬಹುದು. ಅಪ್ಪಿತಪ್ಪಿಯೂ ಒಬ್ಬ ಜನಸಾಮಾನ್ಯ, ಕೆಳ ಸಮುದಾಯದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ನಮಗೆ ನೆನಪಾಗುವುದೇ ಇಲ್ಲ. ಯಾಕೆಂದರೆ ನಾವೆಲ್ಲರೂ ಕಲಿತಿರುವ ಇತಿಹಾಸದ ಪುಟಗಳಲ್ಲಿ ಇವರ ಉಲ್ಲೇಖಗಳೇ ಇಲ್ಲ. ಚರಿತ್ರೆಯ ದಾಖಲಾತಿಯೇ ಹಾಗೆ. ಅದು ಕಾಲಘಟ್ಟವೊಂದರ ಸ್ಥಿತ್ಯಂತರಗಳ ಮುಂಚೂಣಿಯಲ್ಲಿ ನಿಂತವರ ಹೆಸರನ್ನು ಮಾತ್ರ ಜತನವಾಗಿ ನೆನಪಿಟ್ಟುಕೊಳ್ಳುತ್ತದೆ. ಮುಂಚೂಣಿಯಲ್ಲಿ ನಿಂತವರು ಗೆಲ್ಲಲು ಕಾರಣವಾದ ಜೀವಗಳನ್ನು ನಿರ್ದಯದಿಂದ ದೂರವುಳಿಸುತ್ತದೆ. ಹೀಗೆ ಚರಿತ್ರೆಯ ಪುಟಗಳಿಂದಲೇ ಅಳಿಸಿಹೋದ ವೀರರು, ವೀರಮಹಿಳೆಯರನ್ನು ಹುಡುಕುತ್ತ ಹೋದರೆ ಲೆಕ್ಕಕ್ಕೆ ಸಿಗದಷ್ಟು ವೀರಚರಿತೆಗಳು ನಮಗೆ ಸಿಗುತ್ತವೆ. ಅವುಗಳಲ್ಲಿ ತಮಿಳುನಾಡಿನ ‘ವೀರಮಂಗೈ ಕುಯಿಲಿ’ ಎಂಬ ದಲಿತ ಹೆಣ್ಣುಮಗಳೂ ಒಬ್ಬಳು. ಆಕೆಯದ್ದು ಯಾವ ವೀರಾಧಿವೀರ ರಾಜ ಮಹಾರಾಜರಿಗೇನೂ ಕಡಿಮೆ ಶೌರ್ಯದ ಕಥೆಯಲ್ಲ. 17ನೇ ಶತಮಾನದ ಆವತ್ತಿಗೆ ರೈತಕೂಲಿಗಳ ಮಗಳಾಗಿ ಹುಟ್ಟಿದಾಕೆ ಕುಯಿಲಿ. ಬ್ರಿಟಿಶರ ದಾಳಿಯಿಂದ ಗಂಡನನ್ನೂ ತನ್ನ ಸಾಮ್ರಾಜ್ಯವನ್ನೂ ಕಳೆದುಕೊಂಡ ರಾಣಿಯೊಬ್ಬಳು ತನ್ನ ರಾಜ್ಯವನ್ನು ಪುನಃ ಗೆದ್ದುಕೊಳ್ಳಲು ಅವಳ ಜೊತೆ ನಿಂತಾಕೆ ಕುಯಿಲಿ. ಬ್ರಿಟಿಶರಿಗೆ ಯುದ್ಧದಲ್ಲಿ ಮಣ್ಣು ಮುಕ್ಕಿಸಲು ತನ್ನ ಜೀವವನ್ನೇ ಅಕ್ಷರಶಃ ಬಲಿ ಕೊಟ್ಟು ಬಡಿದಾಡಿದವಳು ‘ವೀರ ಮಂಗೈ ಕುಯಿಲಿ.’

ದಲಿತ ಹೆಣ್ಣುಮಗಳು ವೀರಮಂಗೈ ಕುಯಿಲಿಯ ಬದುಕನ್ನು ಅರಿಯಬೇಕೆಂದರೆ ನಾವು 17ನೇ ಶತಮಾನಕ್ಕೆ ವಾಪಸ್ಸು ಹೋಗಬೇಕು. ಅದು 1772ರಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯವನ್ನು ‘ಮುತ್ತು ವಡುಗನಾಥ ತೇವರ್’ ಅನ್ನುವ ದ್ರಾವಿಡ ರಾಜನೊಬ್ಬ ಆಳುತ್ತಿದ್ದ ಕಾಲ. ಆಗ ಆರ್ಕಾಟ್ ನವಾಬರೊಟ್ಟಿಗೆ ಸೇರಿ ಬ್ರಿಟಿಶರು ಶಿವಗಂಗೈ ಪ್ರಾಂತ್ಯವನ್ನು ದಾಳಿಮಾಡಿ ‘ಮುತ್ತು ವಡುಗನಾಥ ತೇವರ್’ ರಾಜನ್ನು ಕೊಲ್ಲುತ್ತಾರೆ. ಶಿವಗಂಗೈ ಪಟ್ಟಣ ಪ್ರಾಂತ್ಯವನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಾರೆ. ಈ ರಾಜನ ಪತ್ನಿಯಾಗಿದ್ದ ರಾಣಿ ‘ವೇಲು ನಾಚ್ಚಿಯಾರ್’ ತನ್ನ ಮಗಳು ‘ವೆಳ್ಳಾಚ್ಚಿ’ಯೊಡನೆ ದಿಂಡುಗಲ್ ಪಕ್ಕದ ವಿರೂಪಾಚ್ಚಿ ಎಂಬಲ್ಲಿಗೆ ಹೋಗಿ ಅಜ್ಞಾತವಾಸದಲ್ಲಿ ಬದುಕುತ್ತಿರುತ್ತಾಳೆ. ಒಂದು ಕಡೆ ಗಂಡ ಮತ್ತು ರಾಜ್ಯ ಕಳೆದುಕೊಂಡ ದುಃಖ, ಮತ್ತೊಂದು ಕಡೆ ತನ್ನದೇ ನಾಡಿನಲ್ಲಿ ತಲೆಮರೆಸಿಕೊಂಡು ಬದುಕಬೇಕಾದ ಸಂಕಷ್ಟ ಇದೆಲ್ಲದರಿಂದ ಕುದ್ದು ಹೋದ ರಾಣಿ ‘ವೇಲು ನಾಚ್ಚಿಯಾರ್’ ಬ್ರಿಟಿಶ್ ಮತು ಆರ್ಕಾಟ್ ನವಾಬರ ಮೇಲೆ ಸೇಡು ತೀರಿಸಿಕೊಂಡು ತನ್ನ ರಾಜ್ಯ ವಾಪಸ್ ಪಡೆಯಲು ಪ್ರಯತ್ನ ಶುರುವಿಡುತ್ತಾಳೆ. ಅಜ್ಞಾತವಾಸದಲ್ಲಿದ್ದುಕೊಂಡೇ ಮಹಿಳೆಯರದ್ದೊಂದು ಸೈನ್ಯ ಕಟ್ಟಿ ಅವರಿಗೆ ಯುದ್ಧಕಲೆ ಕಲಿಸಿ ಯುದ್ಧವೊಂದಕ್ಕೆ ಸಜ್ಜುಗೊಳಿಸುತ್ತಾಳೆ. ಆ ಸಂದರ್ಭದಲ್ಲಿ ರಾಣಿ ‘ವೇಲು ನಾಚ್ಚಿಯಾರ್’ಗೆ ದೇವರಂತೆ ಸಿಗುವ ದಲಿತ ಮಹಿಳೆಯೇ ‘ವೀರಮಂಗೈ ಕುಯಿಲಿ.’

ಕುಯಿಲಿ ಆಗಿನ ರಾಜಾಡಳಿತದ ಶಿವಗಂಗೈ ಪ್ರಾಂತ್ಯದ ‘ಕುಡಂಚವಾಡಿ’ ಎಂಬ ಹಳ್ಳಿಯೊಂದರಲ್ಲಿ ರೈತಕೂಲಿಗಳಾಗಿ ಬದುಕುತ್ತಿದ್ದ ‘ಪೆರಿಯ ಮುತ್ತನ್’ ಮತ್ತು ‘ರಾಕು’ ಎಂಬ ದಲಿತ ದಂಪತಿಯ ಮಗಳು. ಕುಯಿಲಿಯ ತಾಯಿ ‘ರಾಕು’ ತಾನು ಕೂಲಿಯಾಗಿ ದುಡಿಯುತ್ತಿದ್ದ ಹೊಲಗದ್ದೆಗಳಿಗೆ ನುಗ್ಗಿ ಬೆಳೆನಾಶ ಮಾಡುತ್ತಿದ್ದ ಕಾಡುಕೋಣಗಳನ್ನು ಓಡಿಸಲು ಅವುಗಳೊಡನೆ ಬಡಿದಾಡುವ ಸಂದರ್ಭದಲ್ಲಿ ಪ್ರಾಣ ಬಿಡುತ್ತಾಳೆ. ಇದಾದನಂತರ ವಯಸ್ಸಿಗೆ ಬಂದಿದ್ದ ಕುಯಿಲಿಯನ್ನು ಕರೆದುಕೊಂಡು ಅವಳ ತಂದೆ ಪೆರಿಯ ಮುತ್ತನ್ ಹುಟ್ಟೂರು ಬಿಟ್ಟು ಶಿವಗಂಗೈ ಪಟ್ಟಣಕ್ಕೆ ಬರುತ್ತಾನೆ. ಅಲ್ಲಿ ಅದಾಗಲೇ ರಾಜ್ಯ ಪಡೆಯಲು ಹರಸಾಹಸ ಮಾಡುತ್ತಿದ್ದ ರಾಣಿ ವೇಲು ನಾಚ್ಚಿಯಾರ್’ಳ ಗೂಢಚಾರಿಯಾಗಿ ಸೇರಿಕೊಳ್ಳುತ್ತಾನೆ. ನವಾಬರು ಮತ್ತು ಬ್ರಿಟಿಶ್ ಸೈನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಣಿಗೆ ತಲುಪಿಸುವುದು ಪೆರಿಯ ಮುತ್ತನ್ ಕೆಲಸವಾಗಿತ್ತು. ಈ ಸಂದರ್ಭದಲ್ಲಿ ಕುಯಿಲಿಯೂ ರಾಣಿಯ ಸಂಪರ್ಕಕ್ಕೆ ಬರುತ್ತಾಳೆ. ಬ್ರಿಟಿಶರು ಮತ್ತು ನವಾಬರು ರಾಣಿಯನ್ನು ಕೊಲ್ಲಲು ಒಂದರ ಹಿಂದೊಂದು ಪ್ರಯತ್ನ ನಡೆಸುತ್ತಿದ್ದ ಸಂದರ್ಭದಲ್ಲಿ ಒಮ್ಮೆ ರಾಣಿ ವೇಲು ನಾಚ್ಚಿಯಾರ್‍ಳನ್ನು ಕೊಂದೇಬಿಡುವ ಪ್ರಯತ್ನವೊಂದಕ್ಕೆ ಕೈಹಾಕುತ್ತಾರೆ. ಆಗ ಅವರೊಡನೆ ಬಡಿದಾಡುವ ಕುಯಿಲಿ ಆ ಹಂತಕರನ್ನು ಹಿಮ್ಮೆಟ್ಟಿಸಿ ರಾಣಿಯ ಪ್ರಾಣರಕ್ಷಣೆ ಮಾಡುತ್ತಾಳೆ. ರಾಣಿಯ ಸೈನ್ಯಕ್ಕೆ ಸಿಲಂಬಂ (ದೊಣ್ಣೆವರಸೆ ವಿದ್ಯೆ) ಕಲಿಸುತ್ತಿದ್ದ ಗುರುವೊಬ್ಬ ಬ್ರಿಟಿಶರ ಗೂಢಚಾರನಾಗಿ ರಾಣಿಯನ್ನು ಕೊಲ್ಲಲೆತ್ನಿಸಿದಾಗ ಅವನನ್ನು ಕುಯಿಲಿ ಕೊಂದು ರಾಣಿಯ ಪ್ರಾಣ ಉಳಿಸುತ್ತಾಳೆ. ಆಗಿನಿಂದ ರಾಣಿಯ ಖಾಸಗಿ ಅಂಗರಕ್ಷಕಿಯಾಗಿ ಕುಯಿಲಿ ನೇಮಕಗೊಳ್ಳುತ್ತಾಳೆ.

ಕುಯಿಲಿ ರಾಣಿಯೊಡನೆ ಇರುವರೆಗೂ ಅವಳನ್ನು ಕೊಲ್ಲಲಾಗದೆಂದು ಅರಿತ ಬ್ರಿಟಿಶರು ಮತ್ತು ಅರ್ಕಾಟ್ ನವಾಬರು ಕುಯಿಲಿಯನ್ನು ತಮ್ಮ ಕಡೆಗೆ ಬಂದು ರಾಣಿ ಕೊಲ್ಲಲು ನೆರವಾಗಿ ಕುಯಿಲಿಗೆ ಆಮಿಷಗಳ ಸರಮಾಲೆಯನ್ನೇ ಒಡ್ಡಿದರೂ ಅದನ್ನು ನಿರಾಕರಿಸುವ ಕುಯಿಲಿ ರಾಣಿಯ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುತ್ತಾಳೆ. ಇದಕ್ಕೆ ಪ್ರತಿಯಾಗಿ ಬ್ರಿಟಿಶರು ಮತ್ತು ನವಾಬರು ಕುಯಿಲಿ ಪ್ರತಿನಿಧಿಸುವ ದಲಿತರಿಗೆ ಪರಿಪರಿಯಾಗಿ ಹಿಂಸಿಸಿ ಪೀಡಿಸುತ್ತಾರೆ. ಇದ್ಯಾವುದಕ್ಕೂ ಜಗ್ಗದ ಕುಯಿಲಿ ರಾಣಿಯ ಜೊತೆಗೆ ಬ್ರಿಟಿಶರ ವಿರುದ್ಧ ಹೋರಾಡಲು ಮುನ್ನುಗ್ಗುತ್ತಾಳೆ. ಕುಯಿಲಿಯ ರಾಜನಿಷ್ಠೆ ಮತ್ತು ಪರಾಕ್ರಮಕ್ಕೆ ಉಡುಗೊರೆಯಾಗಿ ರಾಣಿ ‘ವೇಲು ನಾಚ್ಚಿಯಾರ್’ ಅವಳನ್ನು ತನ್ನ ಸೈನ್ಯದ ಮಹಿಳಾ ಸೇನಾಧಿಪತಿಯಾಗಿ ನೇಮಿಸುತ್ತಾಳೆ. 17ನೇ ಶತಮಾನದ ಕಾಲಘಟ್ಟದಲ್ಲಿ ದಲಿತ ಯುವತಿಯೊಬ್ಬಳು ಸೈನ್ಯವೊಂದರ ಉಸ್ತುವಾರಿ ವಹಿಸಿಕೊಂಡದ್ದು ಅತ್ಯಂತ ಕ್ರಾಂತಿಕಾರಕ ಬೆಳವಣಿಗೆಯಾಗಿತ್ತು. ನಂತರ ಪಾಂಡ್ಯರಾಜರು, ಮರುದು ಪಾಂಡಿಯರ್ ದೊರೆಗಳು, ಗೋಪಾಲ ನಾಯ್ಕರ್ ಮತ್ತು ಹೈದರ್ ಆಲಿಯೊಡನೆ ರಾಜತಾಂತ್ರಿಕ ಸಂಬಂಧ ಬೆಳೆಸುವ ರಾಣಿ ‘ವೇಲು ನಾಚ್ಚಿಯಾರ್’ ಅವರೊಡನೆ ಸೈನ್ಯದ ನೆರವನ್ನು ಪಡೆಯುತ್ತಾಳೆ. ಬ್ರಿಟಿಶರು ಮತ್ತು ನವಾಬರ ಮೇಲೆ ಕುಯಿಲಿಯ ನೇತೃತ್ವದ ಸೈನ್ಯವನ್ನು ಮುನ್ನುಗ್ಗಿಸಿ ಮುಗಿಬಿದ್ದು ಹಲವಾರು ಯುದ್ಧಗಳನ್ನು ಮಾಡಿ ಗೆಲ್ಲುತ್ತಾಳೆ.

ಅದಾಗಲೇ ತನ್ನ ಗಂಡನನ್ನು ಗೆದ್ದು ಶಿವಗಂಗೈ ಪಟ್ಟಣ ಮತ್ತು ಕೋಟೆಯನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಬ್ರಿಟಿಶರು ಮತ್ತು ನವಾಬರಿಂದ ಕೋಟೆಯೊಂದನ್ನು ವಶಪಡಿಸಿಕೊಂಡರೆ ಶಿವಗಂಗೈ ಪ್ರಾಂತ್ಯ ಸಂಪೂರ್ಣ ಕೈಗೆ ಬರುವಷ್ಟರಮಟ್ಟಿಗೆ ಸೇನಾಧಿಪತಿ ಕುಯಿಲಿ ಮತ್ತು ರಾಣಿ ‘ವೇಲು ನಾಚ್ಚಿಯಾರ್’ ಬ್ರಿಟಿಶರಿಗೆ ತಲೆನೋವಾಗಿ ಪರಿಣಮಿಸುತ್ತಾರೆ. ಬ್ರಿಟಿಶರ ಆಧುನಿಕ ಬಂದೂಕು ಮತ್ತು ಮದ್ದುಗುಂಡಿನ ಸೈನ್ಯದೆದುರು ತಮ್ಮ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಅಂತಿಮ ಯುದ್ಧವನ್ನು ಗೆಲ್ಲುವುದು ಅಸಾಧ್ಯವೆಂದು ಅರಿತಿದ್ದ ಕುಯಿಲಿ ಅದಕ್ಕೊಂದು ಅಪಾಯಕಾರಿ ಯುದ್ಧವ್ಯೂಹವೊಂದನ್ನು ರಚಿಸುತ್ತಾಳೆ. ಶಿವಗಂಗೈ ಕೋಟೆಯೊಳಗೆ ಇದ್ದ ಬ್ರಿಟಿಶರ ಮದ್ದುಗುಂಡು ದಾಸ್ತಾನಿನ ಆಯುಧಾಗಾರದ ದಾಸ್ತಾನನ್ನು ಧ್ವಂಸಗೊಳಿಸಿ, ನಂತರ ಅವರ ಮೇಲೆ ಮುಗಿಬಿದ್ದರೆ ಯುದ್ಧದಲ್ಲಿ ಬ್ರಿಟಿಶರಿಗೆ ಆಯುಧಗಳೇ ಇಲ್ಲದೆ ಗೆಲುವು ನಮ್ಮದಾಗುತ್ತದೆಂದು ಯೋಚಿಸಿದ ಕುಯಿಲಿ ಆ ದಿಸೆಯಲ್ಲಿ ಒಂದು ಉಪಾಯವೊಂದನ್ನು ಹೊಸೆಯುತ್ತಾಳೆ. ಅದು ವಿಜಯದಶಮಿಯ ಕಾಲ. ಕೋಟೆಯೊಳಗಿದ್ದ ‘ರಾಜರಾಜೇಶ್ವರಿ ಅಮ್ಮನ್’ ದೇವಸ್ಥಾನಕ್ಕೆ ತನ್ನ ಸೈನ್ಯದ ಕೆಲವು ಮಹಿಳಾ ಸೈನಿಕರೊಡನೆ ದೈವಭಕ್ತೆಯರಂತೆ ತೆರಳುತ್ತಾಳೆ. ಹೋಗುವಾಗ ಹೂವಿನ ಬುಟ್ಟಿ, ಹಣ್ಣಿನ ಬುಟ್ಟಿ, ತುಪ್ಪದಡಬ್ಬಿ, ಎಣ್ಣೆದೀಪಗಳನ್ನು ದೇವರಪೂಜೆಯ ನೆಪದಲ್ಲಿ ದೇವಾಲಯದೊಳಗೆ ತೆಗೆದುಕೊಂಡು ಹೋಗುವಲ್ಲಿ ಕುಯಿಲಿ ಯಶಸ್ವಿಯಾಗುತ್ತಾಳೆ. ಹೂವು-ಹಣ್ಣಿನ ಬುಟ್ಟಿಯಲ್ಲಿ ಅಡಗಿಸಿಕೊಂಡಿದ್ದ ಆಯುಧಗಳಿಂದ ಕೋಟೆಯೊಳಗಿನ ಬ್ರಿಟಿಶ್ ಕಾವಲು ಸೈನಿಕರನ್ನು ಕೊಂದು ಬ್ರಿಟಿಶ್ ಸೈನ್ಯದ ಆಯುಧಾಗಾರದ ದಾಸ್ತಾನುಕೋಣೆಯನ್ನು ಪತ್ತೆ ಹಚ್ಚುತ್ತಾಳೆ. ಆ ನಂತರ ತಂದಿದ್ದ ತುಪ್ಪ ಮತ್ತು ಎಣ್ಣೆಯನ್ನು ತನ್ನ ದೇಹದ ಮೇಲೆ ಸುರಿದುಕೊಳ್ಳುವ ಕುಯಿಲಿ ತನ್ನ ಮೈಗೆ ಬೆಂಕಿ ಹಚ್ಚಿಕೊಳ್ಳುತ್ತಾಳೆ. ಬ್ರಿಟಿಶರ ಆಯುಧಾಗಾರದಲ್ಲಿದ್ದ ಮದ್ದುಗುಂಡು ಬಂದೂಕುಗಳ ದಾಸ್ತಾನು ಕುಯಿಲಿಯೊಡನೆಯೇ ಸುಟ್ಟು ಭಸ್ಮವಾಗುತ್ತದೆ. ಕುಯಿಲಿ ತನ್ನ ಸೈನ್ಯ ಮತ್ತು ರಾಣಿ ಗೆಲ್ಲಲು ತನ್ನ ಜೀವವನ್ನೇ ಬಲಿ ಕೊಡುತ್ತಾಳೆ.

ಆ ನಂತರ ಕೋಟೆಯೊಳಗೆ ಸೈನ್ಯದೊಡನೆ ನುಗ್ಗುವ ರಾಣಿ ‘ವೇಲು ನಾಚ್ಚಿಯಾರ್’ ಮತ್ತು ಬೆಂಬಲಿಗ ರಾಜರ ಪಡೆಯು ಆಯುಧಗಳೇ ಇಲ್ಲದೆ ಖಾಲಿಕೈನಲ್ಲಿ ಎದುರಾದ ಬ್ರಿಟಿಶರ ಸೈನ್ಯವನ್ನು ಬಗ್ಗುಬಡಿದು ತಮ್ಮ ರಾಜವಂಶದ ಶಶಿವರ್ಣ ತೇವರ್ ಕಟ್ಟಿದ್ದ ಶಿವಗಂಗೈ ಕೋಟೆ ಮತ್ತು ಪಟ್ಟಣವನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಾರೆ. ದಲಿತ ಸೇನಾಧಿಪತಿ ಕುಯಿಲಿಯ ಹುತಾತ್ಮನಡೆಯೊಂದು ನಡೆಯದೇ ಹೋಗಿದ್ದರೆ ಈ ಯುದ್ಧ ಗೆಲ್ಲುವುದು ರಾಣಿಗೆ ಸುಲಭಸಾಧ್ಯವಿರಲಿಲ್ಲ. ಈ ಮೂಲಕ ಕುಯಿಲಿಯನ್ನು ‘ವೀರಮಂಗೈ ಕುಯಿಲಿ’ (ವೀರಮಹಿಳೆ ಕುಯಿಲಿ)ಯೆಂದು ತಮಿಳುನಾಡು ಕರೆಯುತ್ತದೆ. ಕುಯಿಲಿಯ ವೀರಮರಣದಿಂದ ರಾಜ್ಯ ವಾಪಸ್ ಪಡೆಯುವ ರಾಣಿ ‘ವೇಲು ನಾಚ್ಚಿಯಾರ್’ ಆ ನಂತರ ದಶಕಗಳ ಕಾಲ ಶಿವಗಂಗೈ ಪ್ರಾಂತ್ಯವನ್ನು ಆಳಿ 1796ರಲ್ಲಿ ಮೃತಪಡುತ್ತಾಳೆ. ಆಕೆಯ ಸಾವಿನ ಶತಮಾನಗಳ ನಂತರ ಭಾರತ ಸರ್ಕಾರ ರಾಣಿ ‘ವೇಲು ನಾಚ್ಚಿಯಾರ್’ ಹೆಸರಿನಲ್ಲಿ ಪೋಸ್ಟ್‍ಸ್ಟಾಂಪನ್ನು ಬಿಡುಗಡೆ ಮಾಡುತ್ತದೆ. ಈ ಅರಸೊತ್ತಿಗೆಯ ಮೆರೆದಾಡುವ ಧಾವಂತದಲ್ಲಿ ಕುಯಿಲಿಯ ತ್ಯಾಗ ಬಲಿದಾನ ಯಾರ ಗಮನಕ್ಕೂ ಬರದೆ ಚರಿತ್ರೆಯ ಮೂಲೆಯೊಂದರಲ್ಲಿ ಹಾಗೇ ಉಳಿದುಬಿಟ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...