HomeUncategorizedಹೂಗಳ ಶವಯಾತ್ರೆಯಲಿ

ಹೂಗಳ ಶವಯಾತ್ರೆಯಲಿ

- Advertisement -
- Advertisement -
   –ಡಾ. ವಿನಯಾ ಒಕ್ಕುಂದ

‘ನಂಗೆ ತಡ ಆಗ್ತಿದೆ. ಏನ್ ನೀನು.. ಬೆಳಿಗ್ಗೆ ಬೆಳಿಗ್ಗೆಯೇ ಫೇಸ್‍ಬುಕ್ಕಾ$’ ಎಂದು ಒಂದಿಷ್ಟು ಜರ್ಬಿನಲ್ಲಿಯೇ ಮಗಳ ರೂಂ ಹೊಕ್ಕಿದ್ದೆ. ಅವಳು ತಾನು ನೋಡುತ್ತಿದ್ದ ಮೊಬೈಲ್‍ನ್ನು ನನ್ನೆದುರು ಹಿಡಿದಳು. ಅಲ್ಲಿ ಮುದ್ದಾದ ಹುಡುಗಿಯೊಬ್ಬಳಿದ್ದಳು. ‘ಹೂಂ ಚಂದಿದ್ದಾಳೆ’ ಅಂದೆ. ಅವಳ ರೇಪ್ ಆಗಿ ಮರ್ಡರ್ ಆಗಿದೆಯಂತಮ್ಮಾ- ಅಂದಳು. ಏನು ಎಲ್ಲಿ ಎಲ್ಲ ಅರೆಬರೆ. ಯಾರೋ ಅಂಟುರಾಳ ಕುದಿಸಿ ಗಂಟಲಿಗೆ ಹೊಯ್ದಿದ್ದಾರೆ ಅನ್ನುವಂತೆ ನೋವಿನ ಅಮಲೇರಿತ್ತು. ತೊಡೆಗುಂಟ ನಡುಕ. ಯಾಕೆ ಇಷ್ಟು ದುರ್ಬಲವಾಗುತ್ತಿದ್ದೇನೆ ಎಂದೂ ತಿಳಿಯದಷ್ಟು. ಸಂಜೆಯಷ್ಟೊತ್ತಿಗೆ ಮಗಳು ಕಥುವಾದ 8 ವರ್ಷದ ಮುದ್ದು ಮಗು ಆಸೀಫಾಳ ಚಿತ್ರ ಬರೆಯುತ್ತ ಕೂತಿದ್ದಳು. ಸ್ನಾನವನ್ನೂ ಮಾಡಿರಲಿಲ್ಲ. ಕೇಳಿದರೆ ‘ಮಾಡಬೇಕು ಅನ್ನಿಸಲಿಲ್ಲ’ ಎಂದಳು. ಯಾತನೆಯನ್ನು ಅದುಮಿಡುವ ಒರಟುತನದಲ್ಲಿ. ಈಗ ಸಂಭಾಳಿಸಿಕೊಂಡಿದ್ದೇವೆ. ನಮನಮಗೆ ನಾವೇ. ಅವಳು ಫೇಸ್‍ಬುಕ್ ವಿಷಯಗಳನ್ನು ಮುಂದೆ ಹಿಡಿಯುತ್ತ ನಾನು ಪೇಪರ್‍ನ ಸುದ್ದಿಗಳನ್ನು ತೋರಿಸುತ್ತ…. ಅಂತ್ಯವೇ ಇಲ್ಲದ ಜುಗಲ್‍ಬಂದಿಯ ತಡಬಡಿಕೆಯಲ್ಲಿ.
ಇದು ಆರಂಭವೂ ಅಲ್ಲ. ಅಂತ್ಯವು ಅಲ್ಲ. ದೇಶದಲ್ಲಿ ಸಹಬಾಳ್ವೆಯ ಬಗ್ಗೆ ಆಕಾರಣ ತ್ವೇಷಮಯ ಸ್ಥಿತಿ ಉಲ್ಬಣಿಸತೊಡಗಿದಂತೆ ಆ ಉರಿಕೆನ್ನಾಲಿಗೆಗೆ ಹೆಣ್ಣುಮಕ್ಕಳು ಬಲಿಯಾಗುತ್ತಾರೆ.  ಅಸಹನೆ ವೈಯಕ್ತಿಕವಾಗಿರಲಿ, ಕೌಟುಂಬಿಕವಾಗಿರಲಿ, ಮತೀಯವಾಗಿರಲಿ, ರಾಷ್ಟ್ರೀಯವಾಗಿರಲಿ… ಅದರ ವಿಷಫಲವನ್ನು ಹೆಣ್ಣು ಅನುಭವಿಸಬೇಕಿದೆ. ದುರಂತವೆಂದರೆ, ದಿನದಿಂದ ದಿನಕ್ಕೆ ವಿಕೃತತೆ ಬೆಳೆಯುತ್ತಲೂ ಇದೆ. ನಾಗರಿಕ ಸಮಾಜದಲ್ಲಿ ಬಾಳುತ್ತಿದ್ದೇವೆಯೇ ಎಂದು ಅನುಮಾನಿಸಿಕೊಳ್ಳುವಂತೆ. ಕಥುವಾದ ಮಗುವನ್ನು ದೇವಸ್ಥಾನದಲ್ಲಿ ಬಂಧಿಸಿಟ್ಟು ನಿರಂತರ ಅತ್ಯಾಚಾರ ಮಾಡಿದವರು, ಹಿಂದೂ ಧರ್ಮದ ಭಾರತವನ್ನು ರಕ್ಷಿಸುತ್ತಿದ್ದೇವೆ- ಎಂದು ಭ್ರಮಿಸಿದವರು. ದೇವಸ್ಥಾನದ ಪಾವಿತ್ರ್ಯ, ತಮ್ಮ ನೀಚ ಕೆಲಸ ಹೇಗೆ ತಾಳೆಯಾದೀತೆಂಬ ಅನುಮಾನವೂ ಅವರನ್ನು ಕಾಡಲಿಲ್ಲ. ಈ ಆರೋಪಿಗಳು ಸಮಾಜದ ಮುಖ್ಯವಾಹಿನಿಯಲ್ಲಿರುವ ಸಭ್ಯ ನಾಗರಿಕರು. ಆ ಮಗುವಿನಂಥದೇ ಹೆಣ್ಣು ಮಕ್ಕಳಿರುವ ತಂದೆಯಂದಿರು. ದೂರದ ಊರಿನ ಸಂಬಂಧಿಗೆ- ಹೀಗೊಂದು ರೇಪ್ ಅವಕಾಶವಿದೆ ಬರುತ್ತೀಯಾ? – ಎಂದು ಹಂಚಿಕೊಂಡು ಅನುಭವಿಸುವ ಸಂಸ್ಕøತಿವಂತರು. ಕಡೆಯ ಬಾರಿ ಒಮ್ಮೆ ರೇಪ್ ಮಾಡಿ ಆಮೇಲೆ ಪ್ರಾಣ ತೆಗೆದರಾಯಿತು ಎಂದು ಪೂರ್ಣ ಪ್ರಯೋಜನ ಪಡೆದುಕೊಳ್ಳುವ ತಿಳಿವಳಿಕಸ್ಥರು. ಅವರು ಮಗುವನ್ನು ಹಸಿವಿನಿಂದ ನೀರಡಿಕೆಯಿಂದ ಬಳಲಿಸಿದರು. ಬಲವಂತವಾಗಿ ಮದ್ಯಪಾನ ಮಾಡಿಸಿ ಆ ಪುಟ್ಟ ದೇಹವನ್ನು ಛಿದ್ರ ಮಾಡಿದರು. ಮಗುವಿನ ದೇಹದ ಒಳಹೊರಗುಗಳನ್ನು ರಣಗಾಯವಾಗಿರಿಸಿದರು. ಆ ಪೈಶಾಚಿಕ ವರ್ತನೆಯನ್ನು ಕೇಳಿದರೆ ‘ಸದ್ಯ ಮಗು ಉಳಿಯಲಿಲ್ಲವಲ್ಲ. ಅಷ್ಟು ಸಾಕು’ – ಎಂದು ಉಸಿರಿಡುವಂತಾಗುತ್ತದೆ. ಜಮ್ಮು-ಕಾಶ್ಮೀರದಲ್ಲಿ ಹಿಂದೂ-ಮುಸ್ಲಿಂರ ನಡುವೆ ಹೆಚ್ಚುತ್ತಿರುವ ಜನಾಂಗೀಯ ದ್ವೇಷದ ಉರಿಯಿದು ಈ ಮಗು ಬಕ್ರೆವಾಲಾ ಎಂಬ ಕುರಿಗಾಹಿ ಅಲೆಮಾರಿ ಕುಟುಂಬಕ್ಕೆ ಸೇರಿದ್ದು. ಅವರು ಮುಸ್ಲಿಂ ಮತಾನುಯಾಯಿಗಳು. ಭಾರತದ ಯಾವ ಮೂಲೆಯಲ್ಲಿರುವ ಮುಸ್ಲಿಂರನ್ನೂ ಪಾಕಿಸ್ತಾನದ ಏಜೆಂಟರು ಎಂದು ಗುಲ್ಲೆಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಕೋಮುವಾದಿಗಳಿಗೆ ಸಾಧ್ಯವಾಗಿರುವಾಗ ಪಾಕಿಸ್ತಾನದ ಗಡಿಯ ಬಡ ಮುಸ್ಲಿಮರ ಮೇಲೆ ಈ ಆರೋಪ ಹೊರಿಸುವುದು ಅಲ್ಲಿಯ ಹಿಂದೂ ಏಕತಾ ಮಂಚ್ ಮತ್ತು ಭಾರತ ಬಚಾವೊ ರಥಯಾತ್ರೆಯ ಸಂಘಟನೆಗಳಿಗೆ ಕಷ್ಟವಲ್ಲ. ಒಮ್ಮೆ ದೊಡ್ಡದನಿಯಲ್ಲಿ ಆರೋಪವನ್ನು ಹೊರೆಸಿ, ಪ್ರಚಾರಕ್ಕೆ ತಂದರೆ ಮುಕ್ಕಾಲು ಕೆಲಸ ಆಯಿತೆಂದೇ ಲೆಕ್ಕ. ಪ್ರಚಾರವೇ ಅಧಿಕೃತತೆಯಾದ ಕಾಲದಲ್ಲಿ ಶಿಕ್ಷಿಸುವ ಅಧಿಕಾರ ದತ್ತವಾಗುತ್ತದೆ. ಸಂವಿಧಾನಾತ್ಮಕ ಕಾನೂನು ಏನೇ ಹೇಳಲಿ, ಮತೀಯತೆಯೇ ಕಾನೂನಾದವರಿಗೆ ಅದರ ಹಂಗೇ ಇಲ್ಲ. ತಮ್ಮೊಳಗಿನ ಧರ್ಮಾಂಧತೆ ಮತ್ತು ಕಾಮುಕ ವಿಕೃತಿಗೆ ರಾಷ್ಟ್ರಭಕ್ತಿಯ ತೆಳು ಪರದೆ ಹೊದ್ದು ರಕ್ಷಣಾತ್ಮಕ ಯುದ್ಧದ ವರಸೆಗಳನ್ನು ಹಾಕುತ್ತಲೇ ಇದ್ದಾರೆ. ಕಟುವಾದ ಘಟನೆಗೆ ಏನೆಲ್ಲ ಮೊನಚುಗಳಿವೆ. ಎಳೆಯ ಹೂವಿನಂತಹ ಮಗುವಿನ ದೇಹ ಅನುಭವಿಸಿರಬಹುದಾದ ಯಾತನೆಯ ವಿದ್ರಾವಕತೆ, ಮತೀಯ ಭ್ರಮೆ ಮನುಷ್ಯರನ್ನು ಅದೆಷ್ಟು ಕ್ರೂರಿಗಳನ್ನಾಗಿಸಬಹುದೆಂಬ ಭೀಕರತೆ, ದೇಶದ ನ್ಯಾಯಾಂಗವನ್ನು ರಕ್ಷಿಸುವ ಹೊಣೆ ಹೊತ್ತ ವಕೀಲರು, ರಕ್ಷಕರಾಗಿರಬೇಕಿದ್ದ ಪೋಲಿಸರು, ಶಾಸಕಾಂಗದ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಆರೋಪಿಗಳ ರಕ್ಷಣೆಗೆ ಪಣತೊಟ್ಟಿರುವ ಅಧಃಪತಗಳೆಲ್ಲ ಸೇರಿದ ಜಟಿಲ ಹೆಣಿಗೆಯಿದು. ರಾಜ್ಯದಲ್ಲಿ ನ್ಯಾಯಸಿಗದು, ಮಗುವಿನ ಸಮಾಧಿಯೂ ಸುರಕ್ಷಿತವಲ್ಲ – ಎಂದು ಬಡ ಕುಟುಂಬ ಕಣ್ಣೀರು ಹಾಕುತ್ತಿದ್ದರೆ; ಇಂತಹ ಹೇಯ ಘಟನೆಗಳಿಗೆ ಮೌನದಿಂದಲೇ ಸ್ಪಂದಿಸುವ, ಕಡೆಗೊಂದು ತೇಪೆಯ ಮಾತು ಹಚ್ಚುವ ಜನನಾಯಕರಿರುವ ರಾಷ್ಟ್ರವಿದು. ಅಲೆಮಾರಿ ಜನಾಂಗದ ಮಗುವಿನ ಈ ಬರ್ಬರ ಹಿಂಸೆಯ ಪಾಪವನ್ನು ಮಾನ್ಯ ಪ್ರಧಾನಿಗಳು ಬುಡಕಟ್ಟು ಮಹಿಳೆಯೊಬ್ಬರ ಕಾಲಿಗೆ ಚಪ್ಪಲಿ ತೊಡಿಸುವ ಮೂಲಕ ಪರಿಹರಿಸಿಕೊಳ್ಳಲು ಬಯಸಿದರೇನೋ. ಪಾಪ ಪರಿಹಾರವಾಯಿತೇ? ಗೊತ್ತಿಲ್ಲ. ಜನರ ಮನಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದರೂ ವಿಚಲಿತಗೊಳಿಸಿ ತಮ್ಮ ಉದಾರ ವ್ಯಕ್ತಿತ್ವದ ನಾಟಕ ಮುಂದುವರಿಸುವಲ್ಲಿಯಂತೂ ಆ ದೃಶ್ಯ ಸಹಾಯ ಮಾಡಿರಬಹುದು. ಒಬ್ಬರು ಸಂವಿಧಾನದ ಸಾಧ್ಯತೆಯನ್ನು ಪ್ರಶ್ನಿಸುತ್ತಾರೆ. ಇನ್ನೊಬ್ಬರು ಅಂಬೇಡ್ಕರರನ್ನು ಸಂತ – ಋಷಿ ಎಂದೆಲ್ಲ ಕರೆದು ಹೂ ಏರಿಸಿ ಮತಬೇಟೆಗೆ ಯತ್ನಿಸುತ್ತಾರೆ. ಎರಡೂ ಕೆಲಸ ಒಂದೇ ಚಿಂತನೆಯ ಜನರದ್ದೇ. ಜನ ಬರೀ ಪ್ರೇಕ್ಷಕರು. ಗೋಣಾಡಿಸುವವರು.

ಉನ್ನಾವ್‍ದ ಘಟನೆಯಂತೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥನ ಸಂಪುಟ ಸಚಿವರಿಗೆ ನೇರ ಸಂಬಂಧಿಸಿದ್ದು. ಸುಮಾರು ಒಂದು ವರ್ಷದ ಹಿಂದಿನ ಪ್ರಕರಣವನ್ನು ಮುಚ್ಚಿಹಾಕುವ ರಾಜಕಾರಣ ನಿಚ್ಚಳವಾಗಿದೆ. ಈ ಘಟನೆಗಳಲ್ಲಿ ಭಾರತದ ಆತ್ಮಗೌರವವನ್ನು ಎತ್ತಿಹಿಡಿದ ಎರಡು ಉಳಿಕೆಗಳಿವೆ. ಉನ್ನಾವ್ ಘಟನೆಯನ್ನು ನಿರ್ವಹಿಸುತ್ತಿರುವ ಹೈಕೋರ್ಟ್ ಮತ್ತು ಕಟುವಾ ಪ್ರಕರಣವನ್ನು ತನಿಖೆ ನಡೆಸಿದ್ದ ಉನ್ನತ ಅಧಿಕಾರಿ ರಮೇಶ ಜಾಲ ಅವರು ತಮ್ಮೆಲ್ಲ ಒತ್ತಡಗಳ ನಡುವೆಯೂ ಮಗುವಿನ ನ್ಯಾಯಕ್ಕಾಗಿ ಪ್ರಯತ್ನಿಸಿದ ರೀತಿ. ಅವರು ಉಗ್ರವಾದಿಗಳ ದಾಳಿಗೆ ಒಳಗಾಗಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿದ್ದರು ಮತ್ತು ಅವರು ಹುಟ್ಟಿನಿಂದ ಕಾಶ್ಮೀರಿ ಪಂಡಿತ ಸಮುದಾಯದವರು ಎನ್ನುವುದು ಕಣ್ಣಿವೆಯನ್ನು ಒದ್ದೆಯಾಗಿಸುತ್ತದೆ. ಆದಿತ್ಯನಾಥನನ್ನು ನಾಥ ಪಂಥದಯೋಗಿ ಎನ್ನುವವರಿಗೆ, ನಾಥ ಪಂಥದ ಮೂಲಸತ್ವದ ಅರಿವಿದೆಯೋ? ಎಂದು ಕೇಳಬೇಕೆನಿಸುತ್ತದೆ. ಶಾಲೆ, ಕಾಲೇಜು, ಅಂಗಡಿ, ಮುಂಗಟ್ಟು, ಮಸೀದಿ ಕಡೆಗೆ ಅಂಬೇಡ್ಕರ ಮೂರ್ತಿಗೂ ಕೇಸರಿ ಬಣ್ಣ ಬಳಿವ ದಾಷ್ಟ್ರ್ಯವನ್ನು ತೋರುವ ಸರ್ವಾಧಿಕಾರಿ ಯಾವ ಸಾಧಕ ಸಂಪ್ರದಾಯ ಸೇರಲು ಸಾಧ್ಯ? ನನಗಂತೂ ಆ ವ್ಯಕ್ತಿಯ ಹೆಸರು ಕೇಳಿದಾಗೆಲ್ಲ ಗೋರಖಪುರವೇ ನೆನಪಾಗುತ್ತದೆ. “ನಾನು ಶವಯಾತ್ರೆಯಲಿ ಹೂಗಳನು ಕಂಡಿದ್ದೆ. ನಿನ್ನೆ ಗೋರಖಪುರದಲ್ಲಿ ಹೂಗಳ ಶವಯಾತ್ರೆ ಕಂಡೆ” – ಎಂಬ ಗುಲ್ಜಾರರ ಕವಿತೆಯೂ. ಅದ್ಯಾಕೆ ಒಂದು ನಿರ್ದಿಷ್ಟ ಸಮುದಾಯದ ಬಡವರೇ ಹೆಚ್ಚಿರುವ ಪ್ರದೇಶದ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟುಬಿಟ್ಟಿತು? ಎಂದು ಕೇಳಬೇಕೆನಿಸುತ್ತದೆ. ರಾಜೇಂದ್ರ ಚೆನ್ನಿಯವರು ಉಲ್ಲೇಖಿಸುವ ನಾಓಮಿಕ್ಲೀನ್ ಬರೆದ ಖಿhe shoಛಿಞ ಜoಛಿಣಡಿiಟಿe ಕೃತಿಯಲ್ಲಿ
ಅಮೆರಿಕದ ನಗರವೊಂದನ್ನು ಚಂಡಮಾರುತ ಅಪ್ಪಳಿಸಿ ಕೆಳಮಧ್ಯಮ ವರ್ಗದ ಬಡಾವಣೆಗಳನ್ನು ಗುಡಿಸಿಹಾಕುತ್ತದೆ. ಜನ ಬೀದಿಗೆ ಬೀಳುತ್ತಾರೆ. ರಾಜಕೀಯ ಧುರೀಣರು ಮಾತ್ರ ‘ನಾವು ಮಾಡಲಾಗದ್ದನ್ನು ದೇವರೇ ಮಾಡಿದ’ ಎಂದು ಸಂತಸಪಡುತ್ತಾರೆ. ಅಲ್ಲಿ ಕಾರ್ಪೊರೇಟ್ ಕಂಪನಿಗಳಿಂದ ಟೂರಿಸ್ಟ ರೆಸಾರ್ಟುಗಳ ಯೋಜನೆ ಸಿದ್ಧವಾಗುತ್ತದೆ. “ಒಂದು ಅತ್ಯಾಚಾರವನ್ನು ದೊಡ್ಡದು ಮಾಡಬೇಡಿ ದೇಶದ ಪ್ರವಾಸೋದ್ಯಮಕ್ಕೆ ಧಕ್ಕೆ ಆಗುತ್ತದೆ- ಎಂದು ‘ಅಧಿಕಾರಸ್ಥರು’ ಮಾತಾಡುವಾಗ ಈ ಎಲ್ಲವುಗಳಿಗೆ ಇರುವ ಸಹ ಸಂಬಂಧ ಮನಸ್ಸನ್ನು ಚುಚ್ಚತೊಡಗುತ್ತಿದೆ.
ಇಂದಿನ ಬೆಳಗು, ಸೂರತ್ ಪೊದೆಯಲ್ಲಿ ಹೆಣ್ಣು ಮಗುವೊಂದರ ಮೃತದೇಹ ಪತ್ತೆಯಾಗಿದ್ದು 86 ಗಾಯಗಳಿದ್ದ ಮತ್ತು ಸತತ ಭೀಕರ ಅತ್ಯಾಚಾರಕ್ಕೊಳಗಾದ ದೇಹ ಎನ್ನಲಾಗಿದೆ. ಮಗುವಿನ ದಾತಾರರೂ ಗುರುತಿಲ್ಲ. – ಮನಸ್ಸು ನಡುಗುತ್ತಿದೆ. ನನ್ನ ಮಗಳೀಗ ಚಿತ್ರದ ಯಾವ ರೇಖೆಯಲ್ಲಿದ್ದಾಳೋ, ಅದೇನು ಕೇಳುತ್ತಾಳೋ…. ಅಥವಾ ಜೀವ ರೋಸಿ ವಾಸ್ತವದ ನಿಷ್ಠುರತೆಗೆ ಬೆನ್ನುಹಾಕಿ ಅದೆಂಥದೋ ಮನರಂಜನೆಯ ಚೆನಲ್‍ಗೆ ಕಣ್ಣು ಕೀಲಿಸಿದರೆ…. ಗುಲ್ಜಾರ್, ಹೂಗಳ ಶವಯಾತ್ರೆ ಎಂದು ಕರೆದದ್ದು ಯಾವೆಲ್ಲದ್ದಕ್ಕೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...