Homeಅಂಕಣಗಳುಶಾರದೆ ಪೂಜೆ ಸಂವಿಧಾನದಲ್ಲೇ ಅದೆ ಕಂಡ್ರಿ !

ಶಾರದೆ ಪೂಜೆ ಸಂವಿಧಾನದಲ್ಲೇ ಅದೆ ಕಂಡ್ರಿ !

- Advertisement -
- Advertisement -

ದಷ್ಟಪುಷ್ಟವಾಗಿ ಬೆಳೆದ ಹಳ್ಳಿಕಾರ ಹೋರಿಯ ಬೀಜದಂತೆ ಕಾಣುವ ಈ ಸರಕಾರವನ್ನು ನೋಡಿದ ಬಿಜೆಪಿ ನರಿಗಳು ಖುಷಿಯಿಂದ ಊಳಿಡುತ್ತಿರಬೇಕಾದರೆ, ಅತ್ತ ದೇವೇಗೌಡರು ಮತ್ತು ಕುಮಾರಣ್ಣನವರು ಶೃಂಗೇರಿಯ ಶಾರದಾಂಬೆಯ ಆವರಣದಲ್ಲಿ ರವಿಕೆ ಹಾಕದ ವಡ್ಡರಂತೆ ಕುಳಿತು ಅದೇನೇನೋ ಮಾಡುತ್ತಿರುವ ದೃಶ್ಯ ನೋಡಿ ಫೋನು ಮಾಡಿ ಕೇಳಬೇಕೆನಿಸಿತ್ತಲ್ಲಾ. ಕೂಡಲೇ ಫೋನ್ ಮಾಡಲಾಗಿ ಕುಮಾರಣ್ಣನ ಫೋನ್ ರಿಂಗಾಯ್ತು.
ರಿಂಗ್ ಟೋನ್- “ಎಂಥ ಅಂದ ಎಂಥ ಚಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನಮಗೆ ಸಾಲದಮ್ಮ…………..

ಹಲೋ ಯಾರ್ರಿ ಮಾತಾಡದು”
“ತಾವ್ಯಾರು ಸಾರ್”
“ನಾನು ಭೋಜೆಗೌಡ.”
“ಭೋಜೆಗೌಡ್ರೆ ಕುಮಾರಣ್ಣನಿಗೆ ಫೋನ್ ಕೊಡಿ ನಾನು ಯಾಹೂ.”
“ಕೊಟ್ಟೆ ಮಾತಾಡಿ.”
“ನಮಸ್ಕಾರ ಕುಮಾರಣ್ಣರಿಗೆ ನಾನು ಯಾಹೂ.”
“ಏನೇಳ್ರಿ ಯಾಹೂ ಟೈಮಿಲ್ಲ.”
“ಒಂದೆರಡು ಮಾತು ಸಾರ್.”
“ಕೇಳಿ.”
“ಶೃಂಗೇರಿಲಿ ನಿಮ್ಮನ್ನ ಅಂಥ ಆಕಾರದಲ್ಲಿ ನೋಡಿ ಬಾಳ ಖುಷಿಯಾಯ್ತು ಸಾರ್. ಪೂಜೆ ಚೆನ್ನಾಗಿತ್ತಾ?”
“ಚೆನ್ನಾಗಿತ್ತು ಕಂಡ್ರಿ, ಕರ್ನಾಟಕ ಸರಕಾರದ ಕೆಲಸ ಮಾಡದರ ಜೊತೆಗೆ ಆಗಾಗ್ಗೆ ಬಂದು ಶಾರದಾಂಬೆ ಪೂಜೆ ಮಾಡತಕ್ಕಂತ ಪರಿಪಾಠವನ್ನ ಇಟ್ಟುಗೊಬೇಕು ಅಂತ ಅನ್ನಸ್ತು.”
“ಅದು ಸಹಜ ಸಾರ್, ವಿದ್ಯೆ ಬುದ್ಧಿಯ ಕೊರತೆ ಇದ್ದೋರು ಶಾರದೆ ಪೂಜೆ ಮಾಡ್ತಾರೆ.”
“ಅಂಗೇನು ಇಲ್ಲ. ನಮಿಗೆಲ್ಲಾ ಬುದ್ಧಿ ಕೊಡತಕ್ಕಂತ ಶಾರದೆ ನನ್ನ ಸರಕಾರದ ವಿರುದ್ಧ ಏನು ಅಪಸ್ವರಗಳಿಂದ ಮಾತನಾಡ್ತಾರೆ, ಅಂತವರಿಗೆಲ್ಲಾ ಒಳ್ಳೆ ಬುದ್ಧಿ ಕೊಡ್ಲಿ ಅಂತ ಹೇಳಿ ನಾನು ನಮ್ಮ ತಂದೆಯವರ ಸಲಹೆ ಮೇರೆಗೆ ಇಲ್ಲಿಗೆ ಬಂದು ಪೂಜೆ ಮಾಡಿ ಬೆಳಗಾವಿಗೆ ಹೋದೆ.”
“ಕುಮಾರಣ್ಣಂಗೆ ಬುದ್ಧಿ ಕೊಡುವವನು ಗಣೇಶ, ವಿದ್ಯೆ ಕೊಡೋಳು ಸರಸ್ವತಿ, ದುಡ್ಡು ಕೊಡೋಳು ಲಕ್ಷ್ಮಿ. ನಿಮಗೆ ಲಕ್ಷ್ಮಿ ಕೊರತೆ ಇಲ್ಲ ವಿದ್ಯೆ ಬುದ್ದಿ ಕೊರತೆ ಎದ್ದು ಕಾಣ್ತಾಯಿದೆ ಅಂತ ಕರ್ನಾಟಕದ ಜನ ಆಡಿಕೊಳ್ತ ಅವುರೆ.”
“ಆಡಿಕೊಳ್ತಕಂತ ಜನಗಳಿಗೆ ನಾವು ತಲೆ ಕೆಡಿಸಿಕೋಬೇಕಾಗಿಲ್ಲ ಅವರು ಸುಮ್ಮನಿದ್ರು ಆಡಿಕೊಳ್ತಾರೆ ಹೀಗೆ ಪೂಜೆ ಮಾಡಿದ್ರು ಆಡಿಕೊಳ್ತಾರೆ.”
“ಅಲ್ಲ ಸಾರ್, ಆ ಶೃಂಗೇರಿ ಬಿಜೆಪಿ ಪಾರ್ಟಿಯ ಬ್ರಾಂಚ್ ತರ ಕೆಲಸ ಮಾಡುತ್ತೆ. ಅವುರು ಏನೇ ಮಾಡಿದ್ರು ಅದು ಶ್ರೇಣೀಕೃತ ಸಮಾಜದ ಕಳಸದಂಗಿರೊ ಬ್ರಾಹ್ಮಣರಿಗಾಗಿ ಇರೊ ಮಠ ಗೊತ್ತ.”
“ನಿಮ್ಮ ಆಪಾದನೆ ನಾನು ಅಲ್ಲಗಳೀತಿನಿ.”
“ನೀವು ಅಲ್ಲಗಳೆಯೋದು ಸಹಜ. ದೇವಸ್ಥಾನದ ಹೊಸಿಲಲ್ಲೇ ಮೂರು ಕಮಲದ ಚಿತ್ರ ಕೆತ್ತಿದಾರೆ. ಆ ಕಮಲ ಬಿಜೆಪಿ ಸಿಂಬಲ್ಲು ಗೊತ್ತ.”
“ನಾನು ಹೊಸಲು ದಾಟಿಕೊಂಡೋದೆ ನೋಡಲಿಲ್ಲ.”
“ವಿದ್ಯೆ ಬುದ್ಧಿ ಕೊರತೆ ಇದ್ದಾಗ ಅಂಥವು ಅರಿವಿಗೇ ಬರದಿಲ್ಲ ಇರ್ಲಿ. ಈ ಹಿಂದೆ ಶಾರದಾಂಬೆನ ಬಂಡೆ ಮೇಲೆ ಕೂರಿಸಿದ ಚಿತ್ರ ಬರಿತಿದ್ರು.”
“ಹೌದೆ.”
“ಹೌದು ಸಾರ್ ವಿದ್ಯೆ ಬಂಡೆ ಇದ್ದಂಗೆ ನಾವು ಸಾಯೋವರಿಗೂ ಆ ಬಂಡೆ ಮೇಲೆ ಕೂತಗಂಡು ದೇಶ ಆಳಬಹುದು ಅನ್ನೊ ಸಂಕೇತ ಆ ಬಂಡೆ.”
“ಹೌದೆ.”
“ಈಗ ಬಿಜೆಪಿ ಆರ್ಟಿಸ್ಟುಗಳು ಏನು ಮಾಡ್ಯವುರೆ ಗೊತ್ತ ಸಾರ್, ಶೃಂಗೇರಿ ಶಾರದಾಂಬೆನ ಕಮಲದ ಮೇಲೆ ಕೂರಿಸಿದಾರೆ. ಅಷ್ಟೇ ಅಲ್ಲ, ಪೀಠದ ಮೇಲಿದ್ದ ಗಣಪತಿನೂ ಕಮಲದ ಮೇಲೆ ಕೂರಿಸಿದಾರೆ, ಇನ್ನು ಲಕ್ಷ್ಮಿಯಂತೂ ಯಾವಾಗ್ಲೂ ಕಮಲದ ಮೇಲಿದ್ಲು. ಅವುಳ ಅಂಗೇ ಬರದವುರೆ. ಇನ್ನ ಮುಂದೆ ಈ ಚೆಡ್ಡಿ ಕಲಾವಿದರು ನಮ್ಮ ಎಲ್ಲಾ ದೇವರುಗಳನ್ನ ಕಮಲದ ಮೇಲೆ ಕೂರುಸ್ತಾರೆ ಸಾರ್.”
“ಕೂರುಸ್ಲಿ ಬಿಡಿ.”
“ಅಲ್ಲ ಸಾರ್, ಈಗಾಗ್ಲೆ ಕಾರಿನ ಹಿಂಬದಿ ಗಾಜಿನಲ್ಲಿ ಮೆಡ್ಡಗಣ್ಣಿನ ಆಂಜನೇಯನ ಫೋಟಾ ಬರ್ಯೆಕತ್ತಾ ಅವುರೆ. ಪಾಪ ಆಂಜನೇಯನ ಆಕಾರನ ಹಾಳು ಮಾಡಿದ ಜನ, ಮುಂದೆ ಏನಾದ್ರೂ ಮಾಡ್ತಾರೆ. ನೀವು ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ಎಚ್ಚರಿಕೆಯಿಂದಿರಬೇಕು.”
“ಎಚ್ಚರಿಕೆ ಅಂದ್ರೆ.”
“ಆ ಶೃಂಗೇರಿಗ್ಯಾಕೊಯ್ತಿರಿ ಅದರ ಬದ್ಲು ಜಾರಕಿಹೊಳಿ ಮಾತಾಡಿಸಿ. ಎಂ.ಬಿ ಪಾಟೀಲ, ಬಿ.ಸಿ ಪಾಟೀಲನ ಮಾತಾಡಿಸಿ. ಅವುರ ಕೈಗೊಂದು ಉಂಗುರ ಕೊಡಿ, ಮುತ್ತು ಕೊಡಿ ಅದು ಬುಟ್ಟು ಆ ಶೃಂಗೇರಿ ಬ್ರಾಹ್ಮಣರಿಗೆ ಕೇಳಿದಷ್ಟು ಒಡವೆ ವಸ್ತ್ರ ಕೊಡ್ತಿರಲ್ಲಾ ಟಿಪ್ಪು ಸುಲ್ತಾನ್ ತರ, ನಿಮ್ಮ ಸರಕಾರ ಉಳಿತಾದ ಸಾರ್”
“ನಮ್ಮ ತಂದೆಯವರು ಹೇಳಿದ ಪ್ರಕಾರ ಶೃಂಗೇರಿ ಶಾರದಾಂಬೆ ಕೃಪೆಯಿಂದ ನಮ್ಮ ಸರಕಾರ ರಚನೆಯಾಯ್ತಂತೆ. ಆಕೆಯ ಅನುಗ್ರಹ ಇದ್ರೆ ಮುಂದೆ ಅವುಳೆ ಸರಕಾರನ ಕಾಪಾಡ್ತಳೆ ಅಂತ ಪೂಜೆ ಮಾಡಿಸಿದ್ದು. ಪೂಜೆ ಮಾಡದÀು ತಪ್ಪಾ.”
“ತಪ್ಪು ಸಾರ್, ನಿಮ್ಮ ಸರಕಾರ ರಚನೆ ಮಾಡಂಗೆ ಮಾಡಿದೋರು ಒಕ್ಕಲಿಗರು. ಅವುರು ಸಾಮೂಹಿಕವಾಗಿ ನಮ್ಮ ಕುಮಾರಣ್ಣನ ಮುಖ್ಯಮಂತ್ರಿ ಮಾಡಬೇಕು ಅಂತ ಓಟು ಮಾಡಿದ್ರು, ಶೃಂಗೇರಿ ಬ್ರಾಹ್ಮಣರಲ್ಲ. ನೀವು ಕೃತಜ್ಞತೆ ಸಲ್ಲಿಸಬೇಕಾದ್ದು ಜನಾಂಗದ ಮತದಾರರಿಗೆ, ಅದು ಬಿಟ್ಟು ಪುರೋಹಿತರ ದೇವರಿಗಲ್ಲ.”
“ಶಾರದಾಂಬೆ ಎಲ್ಲರಿಗೂ ದೇವರು ಗೊತ್ತ.”
“ಗೋಪಾಲಗೌಡ್ರು ಗೊತ್ತ ಸಾರ್”
“ಗೊತ್ತು ಅದೇ ಜಡಜು ಗೋಪಾಲಗೌಡ್ರು.”
“ಅವುರಲ್ಲ ಸಾರ್ ತೀರ್ಥಹಳ್ಳಿ-ಸಾಗರದಿಂದ ಮೂರು ಸಾರಿ ಗೆದ್ದು ಶಾಸಕರಾಗಿದ್ರು.”
“ಕೇಳಿದ್ದಿನಿ.”
“ಅವುರು ಮೂರು ಬಾರಿ ಶಾಸಕರಾಗಿದ್ರು ತೀರಿಕೊಂಡಾಗ ಒಂದು ಮನೆ ಇರಲಿಲ್ಲ, ಒಂದು ಸೈಟು ಇರಲಿಲ್ಲ, ಬ್ಯಾಂಕ್ ಅಕವುಂಟೇ ಇರಲಿಲ್ಲ.”
“ಪಾಪ ಯಾಕಂಗಿದ್ರು.”
“ಸೋಷಲಿಸ್ಟ್ ಪಾರ್ಟಿ ಕಟ್ಟೋರ ಸಿದ್ಧಾಂತ ಫಾಲೊ ಮಾಡಿ ಅಂಗಿದ್ರು. ಅವುರು ಹೇಳಿದ ಪ್ರಕಾರ ಕಾಗದವನ್ನ ಸರಸ್ವತಿ ಅನ್ನಕ್ಕಾಗಲ್ಲಾ ಈ ಬ್ರಾಹ್ಮಣರು ಹೊಟ್ಟೆಪಾಡಿಗೆ ಎಲ್ಲದಕ್ಕೂ ಒಂದು ಆಕಾರ ಕೊಟ್ಟು, ವಿಗ್ರಹ ಮಾಡಿ ಗರ್ಭಗುಡಿ ಮಾಡಿಕೊಂಡು ದಕ್ಷಿಣೆ ದತ್ತೀಲಿ ಜೀವನ ಮಾಡ್ತ ಅವುರಂತೆ, ಅಂತ ಜಾಗಕ್ಕೋಗಿ ಸರಕಾರ ಉಳಿಸಕ್ಕೆ ಪೂಜೆ ಮಾಡ್ತಾ ಸಮಯ ಹಾಳು ಮಾಡ್ತ ಕುಂತಿದ್ದೀರಲ್ಲಾ ಇದು ಸಂವಿಧಾನ ವಿರೋಧಿ ಕೆಲಸ ಅಲ್ಲವೆ?”
“ಪೂಜೆ ಮಾಡ್ತಕಂತ ವಿಷಯ ಏನಿದೆ ಅದು ನಮ್ಮ ಸಂವಿಧಾನದಲ್ಲೇ ಅದೆ ಕಂಡ್ರಿ.”
ಥೂತ್ತೇರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...