Homeಮುಖಪುಟಕೊರೊನಾ: ಭೀತಿ ಬೇಡ, ಆದರೆ ನಿಮಗಿದು ತಿಳಿದಿರಬೇಕು - ಡಾ. ಶ್ರೀನಿವಾಸ ಕಕ್ಕಿಲ್ಲಾಯ

ಕೊರೊನಾ: ಭೀತಿ ಬೇಡ, ಆದರೆ ನಿಮಗಿದು ತಿಳಿದಿರಬೇಕು – ಡಾ. ಶ್ರೀನಿವಾಸ ಕಕ್ಕಿಲ್ಲಾಯ

- Advertisement -
- Advertisement -

ಡಿಸೆಂಬರ್ 2019ರ ಕೊನೆಯಲ್ಲಿ ಚೀನಾ ದೇಶದಲ್ಲಿ ದೃಢಪಟ್ಟ ಹೊಸ ಕೊರೊನಾ ವೈರಸ್ 19 ಸೋಂಕು ಅಲ್ಲಿಂದ ಹೊರಗೆ ಹರಡಿ ಈಗ 149 ದೇಶಗಳಲ್ಲಿ 190000ಕ್ಕೂ ಹೆಚ್ಚು ಜನರಿಗೆ ತಗುಲಿದ್ದು, 7500 ಸಾವುಗಳಿಗೆ ಕಾರಣವಾಗಿದೆ. ಭಾರತದಲ್ಲೂ 120ಕ್ಕೂ ಹೆಚ್ಚು ಪ್ರಕರಣಗಳು ದೃಢ ಪಟ್ಟಿದ್ದು ಮೂವರು ಸಾವನ್ನಪ್ಪಿದ್ದಾರೆ. ಕೊರೊನಾ ಬಗ್ಗೆ ಭಯವೇ ಬೇಡ, ಭಾರತದಲ್ಲಿ ಅದರಿಂದ ಏನೂ ಆಗುವುದಿಲ್ಲ ಎನ್ನುತ್ತಿದ್ದವರೇ ಈಗ ಹೋಮ-ಹವನಗಳ ಮೊರೆ ಹೋಗಿದ್ದಾರೆ, ಅತಿ ಮುಂಜಾಗ್ರತೆಯ ಮಂತ್ರಗಳನ್ನು ಪಠಿಸುತ್ತಿದ್ದಾರೆ.

ವಾಸ್ತವವೆಂದರೆ, ಮುಂದಿನ ವಾರಗಳಲ್ಲಿ ಕೊರೊನಾ ಸೋಂಕು ಭಾರತದಲ್ಲೂ ಹರಡಲಿದೆ, ಅದನ್ನು ತಡೆಯುವಲ್ಲಿ ಪ್ರತಿಯೊಬ್ಬರಿಗೂ ಪಾತ್ರವಿದೆ, ಆದರೆ ಭಯಭೀತರಾಗಿ ಮನೆಯೊಳಗೆ ಕುಳಿತುಕೊಳ್ಳಬೇಕಾಗಿಲ್ಲ. ಕೊರೊನಾ ಬಗ್ಗೆ ವಿಷಯ ಸ್ಪಷ್ಟತೆ ಇರಲಿ, ನಮ್ಮ ಜವಾಬ್ದಾರಿಗಳ ಬಗ್ಗೆ ಸ್ಪಷ್ಟವಾದ ಅರಿವಿರಲಿ, ಅದನ್ನು ನಿಭಾಯಿಸುವ ಬದ್ಧತೆಯೂ ಇರಲಿ.

ವಿದೇಶದಿಂದ ಬಂದವರಲ್ಲಿ ಸೋಂಕನ್ನು ಗುರುತಿಸಿ, ಪ್ರತ್ಯೇಕಿಸಿಟ್ಟು, ಅವರ ಸಂಪರ್ಕಕ್ಕೆ ಬಂದವರನ್ನೂ ಗುರುತಿಸಿ ನಿಗಾವಣೆಯಲ್ಲಿಟ್ಟು ಸೋಂಕು ಹರಡದಂತೆ ಮಾಡಲು ಅರೋಗ್ಯ ಇಲಾಖೆಯು ಶತಪ್ರಯತ್ನಗಳನ್ನು ಮಾಡುತ್ತಿದೆ. ಹಾಗಿದ್ದರೂ ಮುಂದಿನ ವಾರಗಳಲ್ಲಿ ಸೋಂಕು ಇನ್ನಷ್ಟು ವ್ಯಾಪಕವಾಗುವ ಸಾಧ್ಯತೆಗಳು ಇದ್ದೇ ಇವೆ. ಬಹು ಕ್ಷಿಪ್ರವಾಗಿ ಹರಡುವ ಸೋಂಕಾಗಿರುವುದರಿಂದ 2-3 ವಾರಗಳಲ್ಲಿ ಇನ್ನಷ್ಟು ಜನರಿಗೆ ಹರಡಬಹುದು. ಅತಿ ಹೆಚ್ಚು ಜನಸಂಖ್ಯೆ ಹಾಗೂ ಜನಸಂದಣಿಯಿರುವ ನಮ್ಮ ದೇಶದಲ್ಲಿ ಕೊರೊನಾ ಹರಡುವುದನ್ನು ತಡೆಯುವುದು ಸುಲಭವಿಲ್ಲ.

ಈ ಹೊಸ ಕೊರೊನಾ ಸೋಂಕಿದರೆ ಏನಾಗುತ್ತದೆ, ಯಾರಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ಚೀನಾದಲ್ಲೂ, ಇತರ ದೇಶಗಳಲ್ಲೂ ಈಗಾಗಲೇ ಸೋಂಕಿತರಾದ ಪ್ರಕರಣಗಳ ಆಧಾರದಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದೆ. ಆದ್ದರಿಂದ ಭಾರತದಲ್ಲಿ ಈ ಸೋಂಕು ಹರಡಿದಾಗ ಇಲ್ಲೂ ಅದೇ ರೀತಿ ಕಂಡುಬರಬಹುದು.

ನೆಗಡಿ, ಕೆಮ್ಮು, ಗಂಟಲು ಕೆರೆತ ಅಥವಾ ನೋವು, ಜ್ವರ ಮತ್ತು ಸಮಸ್ಯೆ ತೀವ್ರವಾದಲ್ಲಿ ಉಸಿರಾಟದ ಸಮಸ್ಯೆ ಇವೇ ಕೊರೊನಾ ಸೋಂಕಿನ ಲಕ್ಷಣಗಳು.

ಸೋಂಕಿತರು ಕೆಮ್ಮಿದಾಗ ಅವರ ಹತ್ತಿರವಿದ್ದವರ ಮುಖಕ್ಕೆ ಶ್ವಾಸಾಂಗದ ದ್ರವವು ಸಿಂಪಡಣೆಯಾಗಿ ಸೋಂಕು ಹರಡುತ್ತದೆ. ಸೋಂಕಿತರು ತಮ್ಮ ಕೈಯೊಳಕ್ಕೆ ಸೀನಿ/ಕೆಮ್ಮಿ, ಅದೇ ಕೈಯಿಂದ ಬಾಗಿಲು, ಮೇಜು, ಕುರ್ಚಿ ಇತ್ಯಾದಿಗಳನ್ನು ಮುಟ್ಟಿದಾಗ ಅವುಗಳಿಗೆಲ್ಲ ವೈರಸ್ ಇರುವ ಸ್ರಾವವು ಮೆತ್ತಿಕೊಳ್ಳುತ್ತದೆ, ಸೋಂಕಿತರ ಬಟ್ಟೆಗಳಿಗೂ ಮೆತ್ತಿಕೊಳ್ಳುತ್ತದೆ, ವೈರಾಣುಗಳು ಹಲವು ಗಂಟೆಗಳ ಕಾಲ ಅವುಗಳಲ್ಲೇ ಉಳಿದುಕೊಳ್ಳುತ್ತವೆ ಮತ್ತು ಅವುಗಳ ಸಂರ‍್ಕಕ್ಕೆ ಬಂದವರ ಕೈಗಳಿಗೆ ತಗುಲಿ, ಅವರು ತಮ್ಮ ಮುಖವನ್ನು ಒರೆಸಿಕೊಂಡರೆ ಅವರ ಮೂಗು-ಬಾಯಿಗಳ ಮೂಲಕ ಪ್ರವೇಶಿಸಿ ಅವರಿಗೂ ಸೋಂಕನ್ನುಂಟು ಮಾಡುತ್ತವೆ. ಆದ್ದರಿಂದ ತಮಗೆ ತಗುಲಿರುವ ಸೋಂಕು ತಮ್ಮ ಮನೆಯವರಿಗಾಗಲೀ, ನೆಂಟರಿಷ್ಟರಿಗಾಗಲೀ, ಇನ್ನಿತರರಿಗಾಗಲೀ ಹರಡದಂತೆ ತಡೆಯುವ ಸಂಪರ‍್ಣ ಜವಾಬ್ದಾರಿಯು ಸೋಂಕಿತರದ್ದಾಗಿರುತ್ತದೆ.

ಸೋಂಕು ತಗುಲಿದ 2 ರಿಂದ 14 ದಿನಗಳಲ್ಲಿ ರೋಗಲಕ್ಷಣಗಳು ಕಂಡುಬರುತ್ತವೆ. ಆದರೆ ರೋಗಲಕ್ಷಣಗಳು ಕಂಡುಬರುವುದಕ್ಕೆ ಒಂದೆರಡು ದಿನಗಳ ಮೊದಲೇ ಸೋಂಕಿತರ ಶ್ವಾಸಾಂಗದಿಂದ ಅದು ಹರಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆ ಕಾರಣಕ್ಕೆ, ಸೋಂಕಿತರ ಸಂಪರ್ಕಕ್ಕೆ ಬಂದವರೆಲ್ಲರೂ ಆ ದಿನದಿಂದಲೇ ಇತರರಿಗೆ ಸೋಂಕು ಹರಡದಂತೆ ಜಾಗ್ರತೆ ವಹಿಸಬೇಕು.

ಕೊರೊನಾ ಸೋಂಕಿನ ರೋಗಲಕ್ಷಣಗಳು ವೈರಸ್ ಮತ್ತು ನಮ್ಮ ದೇಹದ ರೋಗರಕ್ಷಣಾ ವ್ಯವಸ್ಥೆಗಳ ನಡುವಿನ ತಾಕಲಾಟದ ಪರಿಣಾಮದಿಂದ ಉಂಟಾಗುತ್ತವೆ. ಮೂಗು, ಗಂಟಲಿನ ಸೋಂಕಿನಿಂದ ಜ್ವರ, ಕೆಮ್ಮು, ನೆಗಡಿ, ಮೈಕೈ ನೋವು ಸಾಮಾನ್ಯ ಲಕ್ಷಣಗಳಾಗಿದ್ದು, ಶ್ವಾಸಕೋಶಗಳಿಗೆ ಸಮಸ್ಯೆಯಾದವರಲ್ಲಿ ಉಸಿರಾಟಕ್ಕೆ ತೊಂದರೆ ಕಾಣಿಸಿಕೊಳ್ಳಬಹುದು. ಅಪರೂಪದ ಪ್ರಕರಣಗಳಲ್ಲಿ ವಾಂತಿ-ಬೇಧಿಯೂ ಇರಬಹುದು.

ರೋಗರಕ್ಷಣಾ ವ್ಯವಸ್ಥೆಯು ಸುವ್ಯವಸ್ಥಿತವಾಗಿ, ಸನ್ನದ್ಧವಾಗಿ ಇರುವವರಲ್ಲಿ ಕೊರೊನಾ ಸೋಂಕು ಯಾವುದೇ ಸಮಸ್ಯೆಗಳನ್ನುಂಟು ಮಾಡುವುದಿಲ್ಲ, ಅಂಥವರಲ್ಲಿ ರೋಗಲಕ್ಷಣಗಳೂ ಹೆಚ್ಚಿರುವುದಿಲ್ಲ. ಇದೇ ಕಾರಣಕ್ಕೆ ಮಕ್ಕಳಲ್ಲೂ, 30 ವರ್ಷಕ್ಕಿಂತ ಕಿರಿವಯಸ್ಕರಲ್ಲೂ ಹೊಸ ಕೊರೊನಾ ಸೋಂಕು ಹೆಚ್ಚು

ರೋಗಲಕ್ಷಣಗಳನ್ನುಂಟು ಮಾಡದೆ ಸುಲಭದಲ್ಲಿ ಗುಣ ಹೊಂದುತ್ತದೆ. ಅರವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ, ಮೊದಲೇ ಶ್ವಾಸಕೋಶಗಳ ಸಮಸ್ಯೆಯಿದ್ದವರಲ್ಲಿ ಅಥವಾ ಇತರ ರೋಗಗಳಿದ್ದವರಲ್ಲಿ ಹೊಸ ಕೊರೊನಾ ಸೋಂಕು ತೀವ್ರಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಶೇ.15ರಷ್ಟು ಸೋಂಕಿತರಲ್ಲಿ, ಅದರಲ್ಲೂ ಮಕ್ಕಳಲ್ಲಿ, ಯಾವುದೇ ರೋಗಲಕ್ಷಣಗಳಿಲ್ಲದೆಯೇ ಅಥವಾ ಅತ್ಯಲ್ಪ ಲಕ್ಷಣಗಳೊಂದಿಗೆ ಕೊರೊನಾ ಸೋಂಕು ಗುಣಮುಖವಾಗಿದೆ. ಹಿರಿವಯಸ್ಕರಲ್ಲೂ ಹೆಚ್ಚಿನವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಶೇ.10ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶಗಳ ಸಮಸ್ಯೆಯಾಗಿ ಆಮ್ಲಜನಕ ನೀಡಬೇಕಾಗುತ್ತದೆ, ಶೇ.5ರಷ್ಟು ಪ್ರಕರಣಗಳಲ್ಲಿ ಕೃತಕ ಉಸಿರಾಟದ ಅಗತ್ಯವಿರುತ್ತದೆ, ರೋಗಲಕ್ಷಣಗಳಿದ್ದವರಲ್ಲಿ ಶೇ.1-2ರಷ್ಟು, ಅವರಲ್ಲಿ ಹೆಚ್ಚಿನವರು 25 ವರ್ಷಕ್ಕೆ ಮೇಲ್ಪಟ್ಟವರು, ಸಾವನ್ನಪ್ಪುತ್ತಾರೆ. 60ರಿಂದ 80ರ ವಯಸ್ಸಿನೊಳಗಿನವರಲ್ಲಿ ಸಾವನ್ನಪ್ಪಿದವರ ಪ್ರಮಾಣವು ಶೇ 4-7ರಷ್ಟಿದ್ದರೆ, 80ಕ್ಕೆ ಮೇಲ್ಪಟ್ಟವರಲ್ಲಿ ಶೇ.15ರಷ್ಟಿದೆ.

ಕೊರೊನಾ ಸೋಂಕನ್ನು ಹರಡದಂತೆ ತಡೆಯುವುದರಲ್ಲಿ ಸೋಂಕಿತರ ಪಾತ್ರವು ಅತ್ಯಂತ ಮುಖ್ಯವಾಗಿದೆ. ಅಮೆರಿಕ, ಇಂಗ್ಲೆಂಡ್ ಮತ್ತು ನಮ್ಮ ಕೇರಳದ ಸರಕಾರಗಳು ಕೊರೊನಾ ಸೋಂಕಿನ ಬಗ್ಗೆ ಸವಿವರವಾದ ಮಾರ್ಗದರ್ಶಿಯನ್ನು ಪ್ರಕಟಿಸಿದ್ದು, ಕೊರೊನಾ ರೋಗಲಕ್ಷಣಗಳಿರುವವರು 7 ದಿನಗಳ ಕಾಲ ಮನೆಯೊಳಗೇ ಇರಬೇಕೆಂದು ಸೂಚಿಸಿವೆ. ಜ್ವರ, ಕೆಮ್ಮು ಇದ್ದ ಮಾತ್ರಕ್ಕೆ ಆರೋಗ್ಯ ಸಹಾಯವಾಣಿಗೆ ಕರೆ ಮಾಡುವ ಅಗತ್ಯವಿಲ್ಲ, ಆ ಹಂತದಲ್ಲಿ ಕೊರೊನಾ ಸೋಂಕಿಗೆ ಪರೀಕ್ಷೆಗಳನ್ನು ನಡೆಸುವ ಅಗತ್ಯವೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ರೋಗಲಕ್ಷಣಗಳು ಉಲ್ಬಣಗೊಳ್ಳುತ್ತಿರುವಂತೆ ಅನಿಸಿದರೆ, ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಅನಿಸಿದರೆ, ಏಳು ದಿನಗಳ ಬಳಿಕವೂ ಕೆಮ್ಮು ಮುಂದುವರೆದರೆ ಆರೋಗ್ಯ ಸಹಾಯವಾಣಿಯನ್ನು ಸಂಪರ್ಕಿಸಬೇಕು ಎಂದು ಹೇಳಲಾಗಿದೆ.

ಹೆಚ್ಚಿನ ಹೊಸ ಕೊರೊನಾ ಸೋಂಕಿತರು ಯಾವುದೇ ಸಮಸ್ಯೆಗಳಾಗದೆ, ಯಾವುದೇ ಚಿಕಿತ್ಸೆಯ ಅಗತ್ಯವೂ ಇಲ್ಲದೆ ವಾರದೊಳಗೆ ವಾಸಿಯಾಗುವುದರಿಂದ ಅಂಥವರು ಒಂದು ವಾರ ಮನೆಯೊಳಗೇ ಇದ್ದು ಇತರರಿಗೆ ಸೋಂಕು ಹರಡದಿರಲು ನೆರವಾಗಬೇಕು; ಯಾವುದೇ ಸಮಸ್ಯೆಗಳಿಲ್ಲದವರು ಅನಗತ್ಯವಾಗಿ ಆರೋಗ್ಯ ಸಹಾಯವಾಣಿಗೆ ಕರೆ ಮಾಡುವುದರಿಂದ ಆರೋಗ್ಯ ಸೇವೆಗಳ ಮೇಲೆ ಅನಗತ್ಯವಾದ ಒತ್ತಡವುಂಟಾಗುತ್ತದೆಯಾದ್ದರಿಂದ ಅದನ್ನು ತಪ್ಪಿಸಬೇಕು; ಸಮಸ್ಯೆಯಿಲ್ಲದವರು ಆಸ್ಪತ್ರೆಗಳಿಗೋ, ವೈದ್ಯರನ್ನೋ ಕಾಣಲು ಹೋಗುವುದರಿಂದ ಎಲ್ಲೆಡೆಯೂ ಸೋಂಕು ಹರಡಲು ಕಾರಣವಾಗುತ್ತದೆ; ಸಮಸ್ಯೆಯಿದ್ದರೆ ತಾವಾಗಿ ಆಸ್ಪತ್ರೆಗೆ ಹೋಗುವುದಿದ್ದರೂ ಅವರು ಹೋಗುವ ವಾಹನಗಳ ಸೀಟು ಇತ್ಯಾದಿಗಳಿಗೆ ವೈರಸ್ ಮೆತ್ತಿಕೊಂಡು ಸೋಂಕು ಹರಡಲು ಕಾರಣವಾಗುವುದರಿಂದ, ಅದನ್ನೂ ಮಾಡದೆ ಆರೋಗ್ಯ ಸೇವೆಗಳ ಮೂಲಕವೇ ಆಸ್ಪತ್ರೆಗೆ ಹೋಗಬೇಕು ಎನ್ನುವ ಉದ್ದೇಶಗಳನ್ನಿಟ್ಟುಕೊಂಡು ಈ ಸೂಚನೆಗಳನ್ನು ನೀಡಲಾಗಿದೆ.

ಮೊದಲೇ ಹೇಳಿದಂತೆ, ಹಿರಿವಯಸ್ಕರು, ಶ್ವಾಸಾಂಗ, ಹೃದಯ, ಮೂತ್ರಪಿಂಡ ಇತ್ಯಾದಿಗಳ ಸಮಸ್ಯೆಗಳುಳ್ಳವರು, ಸಕ್ಕರೆ ಕಾಯಿಲೆಯುಳ್ಳವರು ಕೊರೊನಾ ಸೋಂಕಿನಿಂದ ಗಂಭೀರ ತೊಂದರೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಅಂಥವರು ಸೋಂಕು ತಗಲುವ ಸಂರ‍್ಭಗಳನ್ನು ತಪ್ಪಿಸಿಕೊಳ್ಳಬೇಕು: ಜನನಿಬಿಡ ಪ್ರದೇಶಗಳಿಗೆ, ಸಭೆ-ಸಮಾರಂಭಗಳಿಗೆ, ಆಸ್ಪತ್ರೆಗಳಿಗೆ, ಸರ‍್ವಜನಿಕ ವಾಹನಗಳಲ್ಲಿ ಹೋಗದಿರುವುದು ಒಳ್ಳೆಯದು. ಜ್ವರ, ಕೆಮ್ಮು ಇತ್ಯಾದಿಗಳಿಂದ ಬಳಲುತ್ತಿರುವ ತಮ್ಮ ಇಷ್ಟಮಿತ್ರರನ್ನು ಭೇಟಿ ಮಾಡಲು ಹೋಗಬಾರದು.

ಕೊರೊನಾ ಸೋಂಕಿನಿಂದ ಉಂಟಾಗುವ ಜ್ವರ, ನೆಗಡಿ, ಕೆಮ್ಮು, ಮೈಕೈ ನೋವು ಇತ್ಯಾದಿಗಳಿಗೆ ಯಾವುದೇ ಔಷಧವನ್ನು ಸೇವಿಸುವ ಅಗತ್ಯವಿಲ್ಲ, ಅವೆಲ್ಲವೂ ವಾರದೊಳಗೆ ತಾವಾಗಿ ಕಡಿಮೆಯಾಗುತ್ತವೆ, ಆದ್ದರಿಂದ ಕೊರೊನಾ ಲಕ್ಷಣಗಳಷ್ಟೇ ಇದ್ದು ಬೇರಾವುದೇ ಸಮಸ್ಯೆಗಳಾಗದವರು ಚಿಕಿತ್ಸೆಗೆಂದು ವೈದ್ಯರ ಬಳಿಗೆ ಹೋದರೆ ಅಥವಾ ಒಬ್ಬರ ಬಳಿಗೆ ಹೋಗಿ ರೋಗವಿನ್ನೂ ಕಡಿಮೆಯಾಗಲಿಲ್ಲವೆಂದು ಮತ್ತಷ್ಟು ವೈದ್ಯರ ಬಳಿಗೆ ಹೋಗುತ್ತಿದ್ದರೆ ಎಲ್ಲೆಡೆಯೂ ಸೋಂಕನ್ನು ಹರಡುವುದಕ್ಕೆ ಕಾರಣರಾಗುತ್ತಾರೆ. ಆದ್ದರಿಂದ ಕೊರೊನಾ ರೋಗಲಕ್ಷಣಗಳುಳ್ಳವರು ಆತಂಕಗೊಂಡು, ವೈದ್ಯರಿಂದ ವೈದ್ಯರನ್ನು ಹುಡುಕಿಕೊಂಡು ತಿರುಗಾಡಬಾರದು.

ಕೊರೊನಾ ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರು ಹೀಗೆ ತಾವಾಗಿ ಜಾಗರೂಕತೆಗಳನ್ನು ಪಾಲಿಸಿದರೆ ಇತರರಿಗೆ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಬಹುದು, ನಿಧಾನಗೊಳಿಸಬಹುದು. ನಮ್ಮಲ್ಲಿ ಶೇ.80ರಷ್ಟು ಜನವಸತಿಗಳು ಎರಡು ಅಥವಾ ಅದಕ್ಕಿಂತ ಕಡಿಮೆ ಕೋಣೆಗಳನ್ನು ಹೊಂದಿರುವುದರಿಂದ ಕೊರೊನಾ ಪೀಡಿತರನ್ನು ಪ್ರತ್ಯೇಕಿಸಿಡುವುದು ಸುಲಭವಲ್ಲ, ಅವರ ಸಂರ‍್ಕದಿಂದ ದೂರವಿರುವುದೂ ಸುಲಭವಲ್ಲ. ಆದರೆ ಸೋಂಕಿನಿಂದ ರಕ್ಷಿಸಿಕೊಳ್ಳಬೇಕಾದರೆ ನಮ್ಮ ದೇಶದ ಜನರು ಇಂಥ ಪರಿಸ್ಥಿತಿಗಳಲ್ಲೇ ಸೂಕ್ತ ಉಪಾಯಗಳನ್ನು ಮಾಡಬೇಕಾಗುತ್ತದೆ.

ಸರಕಾರವು ಏನೇ ಮಾಡುವುದಿದ್ದರೂ ಅದಕ್ಕೆ ಅದರದೇ ಆದ ಇತಿ-ಮಿತಿಗಳಿವೆ. ಆದ್ದರಿಂದ ಸೋಂಕಿತರು ತಮ್ಮನ್ನು ತಾವು ಪ್ರತಿಬಂಧಿಸಿಕೊಂಡು, ಇತರರಿಗೆ ಸೋಂಕನ್ನು ನೀಡದಂತೆ ಜಾಗ್ರತೆ ವಹಿಸಬೇಕಾದದ್ದು ಅತಿ ಮುಖ್ಯ. ಹಾಗೆಯೇ, ಸಮುದಾಯದಲ್ಲಿ ಮತ್ತು ಸರ‍್ವತ್ರಿಕವಾಗಿ ಸೋಂಕು ಹರಡತೊಡಗಿದಾಗ ಎಲ್ಲರಲ್ಲೂ ಕೊರೊನಾ ಪತ್ತೆಯ ಪರೀಕ್ಷೆಯನ್ನು ನಡೆಸುವುದು ಅಸಾಧ್ಯ, ಅನವಶ್ಯಕ ಮತ್ತು ಅತಿ ವೆಚ್ಚದಾಯಕ. ಆದ್ದರಿಂದ ಸಮುದಾಯದಲ್ಲಿ ಸೋಂಕು ಹರಡತೊಡಗಿದಾಗ, ಗಂಭೀರ ಸ್ವರೂಪದ ಸಮಸ್ಯೆಯಾದವರಲ್ಲಷ್ಟೇ ಕೊರೊನಾ ಪತ್ತೆಯ ಪರೀಕ್ಷೆಯನ್ನು ಮಾಡಿದರೆ ಸಾಕಾಗುತ್ತದೆ; ಪರೀಕ್ಷೆಯ ಸೌಲಭ್ಯಗಳಿಗಾಗಿ ಅಥವಾ ಪರೀಕ್ಷೆಯ ಸಾಧನಗಳಿಗಾಗಿ ವೆಚ್ಚ ಮಾಡುವ ಬದಲು ಚಿಕಿತ್ಸೆ ನೀಡುವ ವ್ಯವಸ್ಥೆಗಳಿಗೆ ವೆಚ್ಚ ಮಾಡುವುದು ಒಳ್ಳೆಯದು.

ಸಮಸ್ಯೆಗೊಳಗಾದ ಕೊರೊನಾ ಪೀಡಿತರು ದಾಖಲಾಗುವುದಕ್ಕೆ ಪ್ರತ್ಯೇಕ ಆಸ್ಪತ್ರೆಗಳನ್ನೇ ಸಿದ್ಧಪಡಿಸುವ ತರ‍್ತು ಜವಾಬ್ದಾರಿಯು ಸರಕಾರದ ಮೇಲಿದೆ. ಕೊರೊನಾ ಸೋಂಕಿತರು ಎಲ್ಲಾ ಆಸ್ಪತ್ರೆಗಳಿಗೆ ಹೋದರೆ, ಎಲ್ಲೆಡೆಯ ಇತರ ರೋಗಿಗಳಿಗೂ, ವೈದ್ಯರಿಗೂ ಹರಡುವ ಸಾಧ್ಯತೆಯಿರುತ್ತದೆ, ಅದರಿಂದ ಇಡೀ ಆರೋಗ್ಯ ಸೇವೆಗಳ ಮೇಲೆಯೇ ಬಹಳಷ್ಟು ಒತ್ತಡವುಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಇತರೆಲ್ಲಾ ರೋಗಿಗಳ ಚಿಕಿತ್ಸೆಗಳು ಮತ್ತು ಅಪಘಾತ ಇತ್ಯಾದಿ ತರ‍್ತು ಚಿಕಿತ್ಸೆಗಳು ನಿರಾತಂಕವಾಗಿ ನಡೆಯುವುದಕ್ಕೆ, ಜೊತೆಗೆ ಕೊರೊನಾ ಪೀಡಿತರಿಗೆ ಅತ್ಯುತ್ತಮ ಚಿಕಿತ್ಸೆಯು ದೊರೆಯುವುದಕ್ಕೆ ಪ್ರತ್ಯೇಕ ಆಸ್ಪತ್ರೆಗಳನ್ನು ಸಿದ್ಧಪಡಿಸುವುದೇ ಅಪೇಕ್ಷಣೀಯವಾಗಿದೆ. ಶಾಲೆ, ಕಾಲೇಜು, ಬಳಕೆಯಲ್ಲಿಲ್ಲದ ಕಟ್ಟಡಗಳನ್ನು ಇಂತಹಾ ವಿಶೇಷ ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿರ‍್ತಿಸಬಹುದು, ಮರ‍್ನಾಲ್ಕು ತಿಂಗಳಲ್ಲಿ ಕೊರೊನಾ ಹರಡುವಿಕೆಯು ಕಡಿಮೆಯಾದಾಗ ಅವನ್ನು ಮುಚ್ಚಬಹುದು. ಇವಕ್ಕೆ ಅಗತ್ಯವಿರುವ ಕೃತಕ ಉಸಿರಾಟದಂತಹ ಜೀವರಕ್ಷಕ ಉಪಕರಣಗಳನ್ನು ಒದಗಿಸುವುದಕ್ಕೂ, ವೈದ್ಯರಿಗೂ, ವೈದ್ಯಕೀಯ ಸಿಬ್ಬಂದಿಗೂ ಸೂಕ್ತ ತರಬೇತಿಯನ್ನು ಒದಗಿಸುವುದಕ್ಕೂ ಶೀಘ್ರ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

ಹಾಗೆಯೇ, ಈ ಆಸ್ಪತ್ರೆಗಳಿಗೆ ಸೋಂಕಿತರನ್ನು ಸಾಗಿಸುವುದಕ್ಕೆ ಪ್ರತ್ಯೇಕವಾದ ವಾಹನ/ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡುವ ಮೂಲಕ, ಸೋಂಕಿತರು ಸರ‍್ವಜನಿಕ ಸಾರಿಗೆಯನ್ನು ಬಳಸದಂತೆ, ಅಥವಾ ಇತರರಿಗೆ ಬಳಸುವ ಆಂಬುಲೆನ್ಸ್‌ಗಳನ್ನು ಬಳಸದಂತೆ ನೋಡಿಕೊಳ್ಳಬಹುದು.

ಒಟ್ಟಿನಲ್ಲಿ ಮುಂದಿನ ಮೂರು ವಾರಗಳಲ್ಲಿ ಕೊರೊನಾ ಸೋಂಕು  ಇನ್ನಷ್ಟು ಹರಡುವ ಸಾಧ್ಯತೆಗಳಿದ್ದು, ಅದು ಯಾವ ಮಟ್ಟದಲ್ಲಿ, ಎಷ್ಟು ಸಮಸ್ಯೆಯನ್ನುಂಟು ಮಾಡಬಹುದೆಂದು ಈಗಲೇ ಹೇಳಲಾಗದಿದ್ದರೂ, ಅದರಿಂದಾಗಿ ಹಿರಿವಯಸ್ಕರಲ್ಲಿ ಉಂಟಾಗಬಹುದಾದ ಪ್ರಾಣಾಪಾಯದ ಸಮಸ್ಯೆಗಳನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆಗಳನ್ನು ಸುಸನ್ನದ್ಧಗೊಳಿಸುವುದಕ್ಕೆ ಸರಕಾರವು ಈ ಕೂಡಲೇ ಕಾರ್ಯಪ್ರವೃತ್ತವಾಗಬೇಕು, ನಾವೆಲ್ಲರೂ ಕೊರೊನಾ ತಡೆಯುವ ಕೆಲಸದಲ್ಲಿ ಸಹಕರಿಸಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ ಜಾಮೀನು ಆದೇಶವನ್ನು ಮೇ 10ಕ್ಕೆ ಕಾಯ್ದಿರಿಸಿದ ಸುಪ್ರೀಂ...

0
ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್ ಮೇ 10 ರಂದು ತನ್ನ...