Homeಮುಖಪುಟಕರ್ತವ್ಯನಿಷ್ಠ, ಪ್ರಾಮಾಣಿಕ ಪ್ರತಿಭಾನ್ವಿತ ವೈದ್ಯ ಹೋರಾಟಗಾರ ಡಾ. ಕಫೀಲ್‌ಖಾನ್

ಕರ್ತವ್ಯನಿಷ್ಠ, ಪ್ರಾಮಾಣಿಕ ಪ್ರತಿಭಾನ್ವಿತ ವೈದ್ಯ ಹೋರಾಟಗಾರ ಡಾ. ಕಫೀಲ್‌ಖಾನ್

ಸತತ ಪರಿಶ್ರಮದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ತೇರ್ಗಡೆಯಾದ ಆನಂತರ ಕರ್ನಾಟಕದ ಅತ್ಯುತ್ತಮ ವೈದ್ಯಕೀಯ ಕಾಲೇಜೊಂದರಲ್ಲಿ ಪರಿಶ್ರಮಪಟ್ಟು ಓದಿದ ಹೀರೊ ವೈದ್ಯರವರು.

- Advertisement -
- Advertisement -

ಡಾ. ಕಫೀಲ್‌ಖಾನ್ ಒಬ್ಬ ಹೋರಾಟಗಾರ ವೈದ್ಯ. ಅವರು ನಮ್ಮೆಲ್ಲರಿಗಾಗಿ ಮತ್ತು ಉಜ್ವಲ ಭಾರತಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಬಿಆರ್‌ಡಿ (ಬಾಬಾ ರಾಘವ ದಾಸ್) ಆಸ್ಪತ್ರೆಯಲ್ಲಿ ಗ್ಯಾಸ್ ದುರಂತ ನಡೆದ ದುರ್ದಿನ ನನಗೆ ಕಣ್ಣಿಗೆ ಕಟ್ಟಿದಂತೆ ನೆನಪಿದೆ. ಆಮ್ಲಜನಕದ ಕೊರತೆಯಿಂದಾಗಿ ಅಂದು ಅನೇಕ ಮುಗ್ಧ ಜೀವಗಳು ಕಣ್ಮುಚ್ಚಿದವು. ಸರ್ಕಾರದ ಅಸಮರ್ಥತೆ ಮತ್ತು ಅದಕ್ಷತೆಯಿಂದಾಗಿ ಮಕ್ಕಳು ಮರಣ ಹೊಂದಿದವು. ಈ ಅಮೂಲ್ಯ ಜೀವಗಳನ್ನು ಕಾಪಾಡಲು ಈ ಯುವ ವೈದ್ಯ ಮತ್ತು ಆತನ ತಂಡ ತಮಗೆದುರಾದ ಪ್ರತಿಯೊಂದು ಅಡೆ-ತಡೆಯನ್ನು ಮೆಟ್ಟಿ ಹೋರಾಡಿದರು. ಇಂಥ ದಯನೀಯ ಸನ್ನಿವೇಶವನ್ನು ಎದುರಿಸಬೇಕಾದ ವೈದ್ಯನೊಬ್ಬನಿಗೆ ಇದು ಎಂತಹಾ ಘಾಸಿಗೊಳಿಸುವ ಅನುಭವವೆಂಬುದನ್ನು ನಾವು ಊಹಿಸಬಹುದು ಆದರೂ ಆತ ಎದೆಗುಂದದೇ ತನ್ನ ಸ್ವಂತ ಹಣದಿಂದ ಆಮ್ಲಜನಕದ ಸಿಲಿಂಡರುಗಳನ್ನು ವ್ಯವಸ್ಥೆ ಮಾಡಲು ಲಭ್ಯವಿರುವ ಎಲ್ಲಾ ಬಾಗಿಲುಗಳನ್ನೂ ಬಡಿದರು. ಒಬ್ಬ ಅಪಾರ ಬದ್ಧತೆಯಿರುವ ಮಕ್ಕಳ ವೈದ್ಯರಾಗಿ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಲಷ್ಟೇ ಅವರು ಪ್ರಯಾಸಪಟ್ಟದ್ದು. ಅವರು ಹೋರಾಟ ನಡೆಸಿ ಅನೇಕ ಜೀವಗಳನ್ನು ಕಾಪಾಡಿದ್ದನ್ನು ಕೆಲ ಮಾಧ್ಯಮಗಳು ವರದಿ ಮಾಡಿದವು. ಹೀಗಾಗಿ ಬೆಳಗಾಗುವುದರೊಳಗೆ ಅವರೊಬ್ಬ ‘ಹೀರೊ’ ಆಗಿ ಅಥವಾ ಮಕ್ಕಳ ಪಾಲಿನ ದೇವದೂತನಾಗಿ ಉದಯಿಸಿದರು.

ಯೋಗಿ ಅವರಿಗೆ ಈ ವಿಷಯ ತಿಳಿದುಬಂದಾಗ ಜೀವ ಕಳೆದುಕೊಂಡವರಿಗೆ ಪರಿಹಾರ ನೀಡುವುದು ಅಥವಾ ಸರ್ಕಾರದ ವೈಫಲ್ಯಕ್ಕೆ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಕ್ಕೆ ಬದಲಾಗಿ ಅವರು ಮಾಡಿದ್ದೇನೆಂದರೆ, “ನಿನ್ನನ್ನು ನೀನು ಹೀರೊ ಎಂದು ತಿಳಿದಿದ್ದೀಯಾ, ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂದದ್ದು. ಡಾ. ಕಫೀಲ್‌ಖಾನ್ ಮತ್ತು ಅವರ ಕುಟುಂಬದವರಿಗೆ ಕಿರುಕುಳ ನೀಡುವ ಮತ್ತು ಅವರನ್ನು ಅಪರಾಧಿಗಳನ್ನಾಗಿಸುವ ಸರಣಿ ಪ್ರಯತ್ನಗಳು ಶುರುವಾಗಿದ್ದು ಅಂದಿನಿಂದಲೇ. ಅವರನ್ನು ಬಲಿಪಶು ಮಾಡಲಾಯಿತು ಮತ್ತು ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಅಂದಿನ ಪ್ರಾಂಶುಪಾಲರು ಮತ್ತವರ ಪತ್ನಿ ಹಾಗೂ ಅವರ ಕೆಲ ಸಹೋದ್ಯೋಗಿ ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಜೈಲಿಗೆ ಕಳುಹಿಸಲಾಯಿತು.

ಅವರನ್ನು ಒಂಭತ್ತು ತಿಂಗಳ ಸುದೀರ್ಘ ಅವಧಿಗೆ ಸೆರೆಮನೆಗೆ ತಳ್ಳಲಾಯಿತು. ಮಕ್ಕಳ ಪ್ರಾಣ ಉಳಿಸಲು ತನ್ನೆಲ್ಲಾ ಶಕ್ತಿಮೀರಿ ಶ್ರಮಿಸಿದ ಅವರನ್ನು ಕರ್ತವ್ಯದಿಂದ ವಜಾಮಾಡಲಾಯಿತು. ಅವರಿಗೆ ಕಿರುಕುಳ ನೀಡುತ್ತಾ ಬಂದಿರುವುದು ಮತ್ತು ಆತನ ಕುಟುಂಬ, ಆತನ ತಾಯಿ, ಹೆಂಡತಿ ಮತ್ತು ಮಕ್ಕಳು ಕಷ್ಟಪಡುವಂತಾಗಿದ್ದು ನಿಜಕ್ಕೂ ದುರಂತ, ಅಕ್ಷಮ್ಯ ಮತ್ತು ಅಮಾನವೀಯ.

ತೊಂದರೆಗೀಡಾದ ಅವರು ನಿರ್ದೋಷಿಯೆಂದು ಸಾಬೀತಾದಮೇಲೂ ಮುಸ್ಲಿಂ ವೈದ್ಯನೆಂಬ ಕಾರಣಕ್ಕೆ ಕಷ್ಟಕೋಟಲೆಗಳು ಕೊನೆಗೊಳ್ಳಲಿಲ್ಲ. ಮುಖ್ಯಮಂತ್ರಿಗಳು ಗೋರಖ್‌ಪುರದಲ್ಲಿ ಹಾಜರಿದ್ದ ಸಂದರ್ಭದಲ್ಲೇ ಗೋರಖನಾಥ ದೇವಸ್ಥಾನದ ಬಳಿಯಲ್ಲಿ ಅವರ ಕಿರಿಯ ಸಹೋದರನಿಗೆ ಪುಂಡರು ಗುಂಡು ಹೊಡೆದರು. ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿ ಅವರಿಗೆ ಕೂಡಲೇ ಶುಶ್ರೂಷೆ ದೊರೆಯದಂತೆ ತಡೆಯಲು ಪೊಲೀಸರು ಯತ್ನಿಸಿದರು. 2018ರಲ್ಲಿ ಬಹ್ರೈಚ್‌ನಲ್ಲಿ ಎನ್‌ಸೆಫಲೈಟಿಸ್ ಕಾಯಿಲೆಗೀಡಾದ ರೋಗಿಗಳ ಸ್ಥಿತಿಯನ್ನು ಬಹಿರಂಗಗೊಳಿಸಲು ಯತ್ನಿಸಿದ ಅವರನ್ನು ಅವರ ಹಿರಿಯ ಸೋದರ ಅದೀಲ್ ಅಹಮದ್ ಖಾನ್ ಅವರೊಂದಿಗೆ ಪೊಲೀಸ್ ಅಧಿಕಾರಿಗಳು ಮತ್ತೊಮ್ಮೆ ಬಂಧಿಸಿದರು. ಇದರಿಂದ ಮತ್ತೊಮ್ಮೆ ಅವರ ಕುಟುಂಬದ ಸದಸ್ಯರು ಕೆಲ ತಿಂಗಳ ಕಾಲ ಮಾನಸಿಕ ಹಿಂಸೆಯನ್ನು ಅನುಭವಿಸುವಂತಾಯಿತು.

ಸತತ ಪರಿಶ್ರಮದಿಂದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ತೇರ್ಗಡೆಯಾದ ಆನಂತರ ಕರ್ನಾಟಕದ ಅತ್ಯುತ್ತಮ ವೈದ್ಯಕೀಯ ಕಾಲೇಜೊಂದರಲ್ಲಿ ಪರಿಶ್ರಮಪಟ್ಟು ಓದಿದ ಹೀರೊ ವೈದ್ಯರವರು. ಭಾರತದ ಜನರಿಗೆ ಸೇವೆ ಸಲ್ಲಿಸುವುದನ್ನೇ ತನ್ನ ಬದುಕಿನ ಗುರಿ ಮತ್ತು ಧ್ಯೇಯವಾಗಿಸಿಕೊಂಡ ವೈದ್ಯರು. ವಿಕೋಪಗಳಿಗೀಡಾದಾಗ ಭಾರತದ ಬಹುಪಾಲು ಎಲ್ಲಾ ರಾಜ್ಯಗಳಲ್ಲೂ ಅವರು ಹಲವಾರು ಆರೋಗ್ಯ ಶಿಬಿರಗಳನ್ನು ನಡೆಸಿದ್ದಾರೆ. ಬಿಹಾರದ ಚಮ್ಕಿ ಜ್ವರ ಪೀಡಿತರು, ಅಸ್ಸಾಂನ ಪ್ರವಾಹಪೀಡಿತ ಪ್ರದೇಶಗಳು, ಉತ್ತರಪ್ರದೇಶದ ಗ್ರಾಮೀಣಾ ಪ್ರಾಂತ್ಯಗಳ ಮೂಲೆ ಮುಡುಕುಗಳಲ್ಲೂ ಅವರು ಶಿಬಿರಗಳನ್ನು ನಡೆಸಿದ್ದಾರೆ. ತಮ್ಮ ಜೀವವನ್ನೇ ಪಣಕ್ಕೊಡ್ಡಿ ದೇಶಸೇವೆ ಮಾಡಿದ್ದಾರೆ. ಸಮಸ್ತ ವೈದ್ಯಕೀಯ ಸಮುದಾಯ ಅವರ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಾರೆ.

ಕೊರೊನಾ ಸಾಂಕ್ರಾಮಿಕ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿರುವ ಹೊತ್ತಲ್ಲಿ ಭಾರತಕ್ಕೆ ಸ್ವಚ್ಛ ಮನಸ್ಸಿನ, ಅತ್ಯಂತ ಪ್ರತಿಭಾನ್ವಿತ ಮತ್ತು ಪ್ರಾಮಾಣಿಕನಾದ ಶ್ರಮಜೀವಿ ಮಕ್ಕಳ ವೈದ್ಯನ ಅಗತ್ಯವಿದೆ.
ಆದರೆ ಈ ಕರ್ತವ್ಯನಿಷ್ಠ, ಪ್ರಾಮಾಣಿಕ ನಾಗರಿಕನೀಗ ಸೆರೆಮನೆಯಲ್ಲಿ ಕೊಳೆಯುತ್ತಿದ್ದಾರೆ. ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಟೆಯೇ ಅವರಲ್ಲಿರುವ ದೋಷ. ಇಂತಹ ಅತ್ಯುತ್ತಮ ವ್ಯಕ್ತಿಯೊಬ್ಬ ದೇಶಕ್ಕೆ ಹೇಗೆ ಬೆದರಿಕೆಯಾಗುತ್ತಾನೆ ಎಂಬ ಬಗ್ಗೆ ಕೊಂಚ ಯೋಚಿಸಿ.

– ಅದೀಲ್ ಖಾನ್
ಕನ್ನಡಕ್ಕೆ: ಮಾಧವಿ


ಇದನ್ನೂ ಓದಿ: ಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...