Homeಮುಖಪುಟಐತಿಹಾಸಿಕ ಜಿಡಿಪಿ ಕುಸಿತಕ್ಕೆ ಕೊರೊನಾ ಮಾತ್ರ ಕಾರಣವೆ? ಕರ್ನಾಟಕದ ತಜ್ಞರು ಏನಂತಾರೆ?

ಐತಿಹಾಸಿಕ ಜಿಡಿಪಿ ಕುಸಿತಕ್ಕೆ ಕೊರೊನಾ ಮಾತ್ರ ಕಾರಣವೆ? ಕರ್ನಾಟಕದ ತಜ್ಞರು ಏನಂತಾರೆ?

ಕೊರೊನಾ ಕಾಲದಲ್ಲಿ ಚೀನಾವೊಂದನ್ನು ಬಿಟ್ಟು ವಿಶ್ವದ ಪ್ರಮುಖ ದೇಶಗಳ ಜಿಡಿಪಿ ಇಳಿಕೆಯಾಗಿದೆ. ಅದರಂತೆ ಕೊರೊನಾ ಕಾರಣದಿಂದ ಭಾರತದ ಜಿಡಿಪಿ ಕೂಡಾ ಇಳಿದಿದೆ ಎನ್ನಬಹುದಾದರೂ ಭಾರತರ ಜಿಡಿಪಿ ಕಳೆದ 4 ವರ್ಷಗಳಿಂದ ಇಳಿಯುತ್ತಲೆ ಇರುವುದನ್ನು ಮರೆಯಬಾರದು.

- Advertisement -
- Advertisement -

ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ -23.9% ( ಗಮನಿಸಿ ಮೈನಸ್ ಇಪ್ಪತ್ತಮೂರು ಪಾಯಿಂಟ್ ಒಂಬತ್ತು) ಜಿಡಿಪಿ ಇಳಿಕೆಯಾಗಿದೆ. ಮಾಧ್ಯಮಗಳು ಹಾಗೂ ಸರ್ಕಾರಗಳು ಇದಕ್ಕೆ ಕೊರೊನಾ, ಲಾಕ್‌ಡೌನ್‌ ಇನ್ನು ಮುಂದೆ ಹೋಗಿ ದೇವರು ಕಾರಣ ಎಂದು ಸಮರ್ಥನೆ ಮಾಡಿಕೊಳ್ಳುತ್ತಿವೆ. ಈ ಮಟ್ಟದ ಕುಸಿತಕ್ಕೆ ಕೊರೊನಾ ಸಹ ಕಾರಣ ಎಂಬುದು ಅರ್ಧಸತ್ಯ ಮಾತ್ರ. ಉಳಿದ ಅರ್ಧ ಸತ್ಯವನ್ನು ಹೊರತೆಗೆಯುವ ಪ್ರಯತ್ನ ಈ ಲೇಖನವಾಗಿದೆ.

ಜಿಡಿಪಿ ಎಂದರೇನು?

ಜಿಡಿಪಿ ಎಂದರೆ Gross Domestic Product ಅರ್ಥಾತ್ ಒಟ್ಟು ದೇಶೀಯ ಉತ್ಪನ್ನ. ಅಂದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದೊಳಗೆ ಉತ್ಪಾದನೆಯಾಗುವ ಸರಕು ಮತ್ತು ಸೇವೆಗಳ ಒಟ್ಟು ಮಾರುಕಟ್ಟೆ ಮೌಲ್ಯವಾಗಿದೆ. ಇದರೊಂದಿಗೆ ದೇಶದಲ್ಲಿ ಜಿಡಿಪಿ ಇಳಿಕೆಯಾಗಿದೆ ಎಂದರೆ ದೇಶದಲ್ಲಿ ಉತ್ಪಾದನೆಗಳು ಕಡಿಮೆಯಾಗಿದೆ ಎಂದರ್ಥ.

ದೇಶದ ಜಿಡಿಪಿ ಈ ಹಿಂದಿನಿಂದ ಹೇಗಿತ್ತು?

ವಿಶೇಷವಾಗಿ ದೇಶವು ಜಾಗತೀಕರಣಕ್ಕೆ ತೆರೆದುಕೊಂಡ 1992 ರಿಂದ ಮಾಹಿತಿ ಪಡೆಯುವುದಾದರೆ ದೇಶದ ಜಿಡಿಪಿ 5.48% ಇತ್ತು. ನಂತರದ ವರ್ಷಗಳಲ್ಲಿ ದೇಶದ ಜಿಡಿಪಿ ಏರಿದರೂ ಜಾಗತೀಕರಣದ ಐದು ವರ್ಷದ ನಂತರ ಅಂದರೆ 1997 ರಲ್ಲಿ ದೇಶದ ಜಿಡಿಪಿ ಮತ್ತೇ 4.5% ಕ್ಕೆ ಇಳಿಯಿತು. ಈ ವರ್ಷವನ್ನು ಏಷಿಯನ್ ಆರ್ಥಿಕ ಬಿಕ್ಕಟ್ಟು ಎನ್ನುತ್ತಾರೆ, ಏಷ್ಯಾದ ಎಲ್ಲಾ ರಾಷ್ಟ್ರಗಳಲ್ಲಿ ಜಿಡಿಪಿ ಇಳಿಕೆ ಕಂಡ ವರ್ಷವಾಗಿದೆ.

ಇದನ್ನೂ ಓದಿ: 1 ನೇ ಆರ್ಥಿಕ ತ್ರೈಮಾಸಿಕ ಜಿಡಿಪಿ 23.9% ಇಳಿಕೆ; ಐತಿಹಾಸಿಕ ಇಳಿಕೆ ಕಂಡ ಭಾರತ

ಇದಾದ ನಂತರ ದೇಶದ ಜಿಡಿಪಿ 3.84% ಇಳಿದಿದ್ದು 2000 ನೇ ಇಸವಿಯಲ್ಲಿ, ಈ ವರ್ಷದಲ್ಲಿ ಕೂಡಾ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವರ್ಷವಾಗಿದೆ. ಇದರ ನಂತರ ದೇಶದ ಜಿಡಿಪಿ ಸಮಾನಾಂತವಾಗಿ ಏರಿಕೆ ಕಂಡು 2007 ರ ಹೊತ್ತಿಗೆ ದೇಶದ ಜಿಡಿಪಿ 7.66% ಕ್ಕೆ ತಲುಪಿತ್ತು. ಇದರ ನಂತರದ ವರ್ಷ ದೇಶದ ಜಿಡಿಪಿ 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿದ್ದರೂ ಭಾರತದ ಜಿಡಿಪಿ 3.9% ಕ್ಕಿಂತ ಕಡಿಮೆಯಾಗಿರಲಿಲ್ಲ. ಇದರ ನಂತರ ಭಾರತದ ಜಿಡಿಪಿ ಈ ಮಟ್ಟದ ಇಳಿಕೆ ಕಾಣದಿದ್ದರೂ 2011 ರ ನಂತರ ಭಾರತದ ಜಿಡಿಪಿ ನಿರಂತರವಾಗಿ ಏರುತ್ತಲೇ ಹೋಗಿದೆ.

ಭಾರತದ ಜಿಡಿಪಿ (ಆಧಾರ: ವಲ್ಡ್‌ ಬ್ಯಾಂಕ್)

2011 ರಿಂದ ಭಾರತದ ಜಿಡಿಪಿ ನಿರಂತರವಾಗಿ ಏರುತ್ತಲೇ ಇದ್ದು ಮತ್ತೆ ಕುಸಿದಿದ್ದು 2016 ರ ನಂತರ, ಅಲ್ಲಿಂದ ಒಂದೇ ಸಮನೇ ಭಾರತದ ಜಿಡಿಪಿ ಇಳಿಕೆಯ ಹಾದಿಯಲ್ಲೇ ಇದೆ. 2016 ರಲ್ಲಿ ನೋಟ್‌ ಬ್ಯಾನ್‌ ಆಗಿದೆ ಮತ್ತು 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳೋಣ.

ಭಾರತದ ಜಿಡಿಪಿ( ಆಧಾರ: ವಲ್ಡ್‌ ಬ್ಯಾಂಕ್)

ಇದೀಗ 2020-21 ಆರ್ಥಿಕ ವರ್ಷದ ಮೊದಲ ತ್ರೈಮಾಸಿದ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ -23.9 ರಷ್ಟು ಇಳಿಕೆಯಾಗಿದೆ. ಭಾರತವು ತ್ರೈಮಾಸಿಕ ಅಂಕಿ ಅಂಶಗಳನ್ನು ಪ್ರಕಟಿಸಲು ಪ್ರಾರಂಭಿಸಿದ 1996 ರಿಂದೀಚೆಗೆ ಇದೇ ಮೊದಲ ಭಾರಿಗೆ ಆರ್ಥಿಕತೆ ಈ ಪ್ರಮಾಣದ ಇಳಿಕೆ ದಾಖಲಾಗಿದೆ. ಅಷ್ಟೇ ಅಲ್ಲದೆ ಏಷ್ಯಾದ ಪ್ರಮುಖ ಆರ್ಥಿಕತೆಯಲ್ಲಿ ಇದು ಅತ್ಯಂತ ಕೆಟ್ಟದಾದ ಆರ್ಥಿಕ ಕುಸಿತವಾಗಿದೆ.

2019–20 ರ ಇದೇ ಅವಧಿಯಲ್ಲಿ ದೇಶದ ಜಿಡಿಪಿ ಶೇ 5.2 ರಷ್ಟು ಬೆಳವಣಿಗೆ ಕಂಡಿತ್ತು ಎಂದು ಅಂಕಿ ಅಂಶ ಹೇಳುತ್ತದೆ.


ಆಧಾರ: tradingeconomics.com

ಋಣಾತ್ಮಕವಾಗಿ ಇಳಿಯುತ್ತಿರುವ ಜಿಡಿಪಿ ಕೊರೊನಾ ಕೊಡುಗೆಯೆ?

ಕೊರೊನಾ ಕಾಲದಲ್ಲಿ ಚೀನಾವೊಂದನ್ನು ಬಿಟ್ಟು ವಿಶ್ವದ ಪ್ರಮುಖ ದೇಶಗಳ ಜಿಡಿಪಿ ಇಳಿಕೆಯಾಗಿದೆ. ಅದರಂತೆ ಕೊರೊನಾ ಕಾರಣದಿಂದ ಭಾರತದ ಜಿಡಿಪಿ ಕೂಡಾ ಇಳಿದಿದೆ ಎನ್ನಬಹುದಾದರೂ ಭಾರತರ ಜಿಡಿಪಿ ಕಳೆದ 4 ವರ್ಷಗಳಿಂದ ಇಳಿಯುತ್ತಲೆ ಇರುವುದನ್ನು ಮರೆಯಬಾರದು.

ಈ ಬಗ್ಗೆ ನಾನುಗೌರಿ ಜೊತೆ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ನಿವೃತ್ತ ಪ್ರಾಧ್ಯಾಪಕರದ ಡಾ. ಚಂದ್ರ ಪೂಜಾರಿಯವರು, “ಕೊರೊನಾ ಕಾರಣದಿಂದ ವಿಶ್ವದಾದ್ಯಂತ ಜಿಡಿಪಿ ಇಳಿಯುತ್ತಲೆ ಇದೆ ಎಂಬುವುದು ನಿಜವಾದರು, ಭಾರತದಲ್ಲಿ ಜಿಡಿಪಿ ಇಳಿಯಲು 2018 ರಿಂದಲೇ ವೇದಿಕೆ ಸಿದ್ದವಾಗಿತ್ತು. ದೇಶದ ಆರ್ಥಿಕತೆ ಪಾತಾಳಕ್ಕೆ ಹೋಗುವ ಪ್ರಕ್ರಿಯೆ ನೋಟ್ ಬ್ಯಾನ್ ಆದಾಗಲೆ ಪ್ರಾರಂಭವಾಗಿದೆ. ಜಿಎಸ್‌ಟಿಯನ್ನು ಅವಸರವಸರವಾಗಿ ತಂದ ನಂತರ ಅದಕ್ಕೆ ಇನ್ನೂ ವೇಗ ಸಿಕ್ಕಿದೆ. ಪ್ರಸ್ತುತ ಕೊರೊನಾ ಇದಕ್ಕೆ ಇನ್ನಷ್ಟು ಕೊಡುಗೆ ನೀಡಿದೆ ಎನ್ನುವ ಅವರು, ಎಲ್ಲವನ್ನು ಕೊರೊನಾ ಮೇಲೆ ಹಾಕುವ ಹಾಗೂ ಇಲ್ಲ. ಏಕೆಂದರೆ ಸರ್ಕಾರ ಹೇರಿದ ಯಾವುದೇ ತಯಾರಿಯಿಲ್ಲದ ಲಾಕ್‌ಡೌನ್ ಕೂಡ‌ ಇದಕ್ಕೆ ಕೊಡುಗೆ ನೀಡಿದೆ” ಎಂದಿದ್ದಾರೆ.

ವಿಶ್ವದ ಇತರ ಪ್ರಮುಖ ದೇಶಗಳ ಜಿಡಿಪಿ ಕುಸಿದರೂ ಭಾರತದಷ್ಟು ಕುಸಿದಿಲ್ಲ ಎಂದು ಚಂದ್ರ ಪೂಜಾರಿ ಉಲ್ಲೇಖಿಸಿದ್ದಾರೆ. “ಒಂದನೆಯದಾಗಿ ಸರ್ಕಾರ ಆರ್ಥಿಕತೆಯನ್ನು ಸರಿಯಾಗಿ ನಿಭಾಯಿಸಿಲ್ಲ, ಎರಡನೆಯದಾಗಿ ಕೊರೊನಾವನ್ನೂ ಸರಿಯಾಗಿ ನಿಭಾಯಿಸಿಲ್ಲ, ಒಟ್ಟಾರೆಯಾಗಿ ಇದು ಸರ್ಕಾರದ ವೈಫಲ್ಯ” ಎಂದು ಅವರು ಹೇಳಿದ್ದಾರೆ.

ಇದರ ಬಗ್ಗೆ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ಡಾ.ಟಿ.ಆರ್‌. ಚಂದ್ರಶೇಖರ್‌, “ಸರ್ಕಾರಕ್ಕೆ ಸರಿಯಾದ ಆರ್ಥಿಕ ನೀತಿಗಳೇ ಇಲ್ಲ. ಅವರಿಗೆ ಇರುವುದು ಸಾಮಾಜಿಕ ಅಜೆಂಡ ಮಾತ್ರ, ಪ್ರಸ್ತುತ ಇಳಿಕೆಯಾಗಿರುವ ಜಿಡಿಪಿ ಸರಿಯಾಗುತ್ತದೆ ಎಂಬ ನಂಬಿಕೆ ನನಗಿಲ್ಲ” ಎಂದು ಹೇಳಿದ್ದಾರೆ.

ಜಿಡಿಪಿ ಮೇಲೆತ್ತಲು ಸರ್ಕಾರ ಮಾಡಬೇಕಾದದ್ದೇನು?

ಜಿಡಿಪಿ ಇಳಿಕೆಗೆ ಕೊರೊನಾವನ್ನು ದೂರಿದ ಕೇಂದ್ರ ಸರ್ಕಾರ, ಇದನ್ನು ನಿಭಾಯಿಸಲು 20 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಇದ್ಯಾವುದು ಸಾಮಾನ್ಯ ಜನರ ಕೈಗಳಿಗೆ ತಲುಪಿಲ್ಲ. ಹಾಗಾಗಿ ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಜನರು ಕೊಳ್ಳದಿದ್ದ ಮೇಲೆ ಉತ್ಪಾದನೆ ಆಗುವುದು ಹೇಗೆ? ಹಾಗಾಗಿ ಜಿಡಿಪಿ ಪಾತಾಳಕ್ಕೆ ಕುಸಿದಿದೆ ಎಂದು ಪ್ರಾಧ್ಯಾಪಕ ಹಾಗೂ ಸಾಮಾಜಿಕ ಚಿಂತಕ ನಾಗೇಗೌಡ ಕೀಲಾರ ಶಿವಲಿಂಗಯ್ಯ ಹೇಳುತ್ತಾರೆ.

ಈ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಹೆಚ್ಚಿನ ಪಾಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗುತ್ತದೆ ಎನ್ನುತ್ತಾರಾದರೂ ಜನರು ವಸ್ತುಗಳನ್ನು ಕೊಳ್ಳದಿದ್ದ ಮೇಲೆ ಅವರು ಉತ್ಪಾದನೆ ಮಾಡಿಯಾದರೂ ಏನು ಪ್ರಯೋಜನ? ಈ ಅಮಾನವೀಯ ಲಾಕ್‌ಡೌನ್‌ನಿಂದಾಗಿ ಕೋಟ್ಯಂತರ ಜನರು ಉದ್ಯೋಗ, ಆದಾಯ ಕಳೆದುಕೊಂಡಿದ್ದಾರೆ. ಅವರು ವಸ್ತುಗಳನ್ನು ಕೊಳ್ಳಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜಿಡಿಪಿ ಪಾತಾಳದಲ್ಲಿದ್ದರೂ ಸುಳ್ಳು ಹೇಳುತ್ತಿರುವ ಕರ್ನಾಟಕ ಬಿಜೆಪಿ ;ಫ್ಯಾಕ್ಟ್‌ಚೆಕ್.

ಸರ್ಕಾರ ಎಲ್ಲಕ್ಕಿಂತ ಮೊದಲು ಎಪಿಎಲ್-ಬಿಪಿಎಲ್ ನೋಡದೆ ಎಲ್ಲರ ಹಸಿವನ್ನು ತಣಿಸುವ ಕೆಲಸ ಮಾಡಬೇಕು. ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮಾಡುವ ಬದಲು ಜನಸಾಮಾನ್ಯರ ಕೈಗೆ ಹಣ ನೀಡಬೇಕು. ಸರ್ಕಾರ ನೇರ ನಗದನ್ನು ಜನರ ಜೇಬಿಗಿಟ್ಟರೆ ಅವರು ಕೊಳ್ಳಲು ಮುಂದಾಗುತ್ತಾರೆ. ಆಗ ಉತ್ಪಾದನೆ ಚಾಲನೆಗೊಳ್ಳುತ್ತದೆ, ಉತ್ಪಾದನೆ ಹೆಚ್ಚಾದಂತೆ ಉದ್ಯೋಗಗಳು ಹೆಚ್ಚುತ್ತವೆ. ಉದ್ಯೋಗದಿಂದ ಗಳಿಸಿದ ಹಣವನ್ನು  ಜನ ಖರ್ಚು ಮಾಡುತ್ತಾರೆ, ಅಂದರೆ ಕೊಳ್ಳುತ್ತಾರೆ. ಈ ಸರಣಿ ಚಕ್ರ ಕೆಲಸ ಮಾಡಿದಾಗ ಮಾತ್ರ ಜಿಡಿಪಿ ಏರಿಕೆಯಾಗಲು ಸಾಧ್ಯ.

ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆ ಇರುವ ಹಾಗೆ ನಗರ ಪ್ರದೇಶದಲ್ಲೂ ಅಂತಹ ಯೋಜನೆಯನ್ನು ಪ್ರಾರಂಭಿಸಬೇಕು. ಈ ಎರಡಕ್ಕೂ ಹೆಚ್ಚಿನ ಅನುದಾನ ಒದಗಿಸಬೇಕು ಮತ್ತು ಪರಿಣಾಮಕಾರಿ ಭ್ರಷ್ಟಾಚಾರ ರಹಿತವಾಗಿ ಜಾರಿಗೆ ತರಬೇಕು. ದೇಶದ ಜಿಡಿಪಿಗೆ 50% ಕೊಡುಗೆ ನೀಡುವ ಅಸಂಘಟಿತ ವಲಯಕ್ಕೆ ಸರ್ಕಾರ ಬೆಂಬಲ ನೀಡಬೇಕು ಎಂದು ಚಂದ್ರ ಪೂಜಾರಿ ಹೇಳಿದ್ದಾರೆ.


ಇದನ್ನೂ ಓದಿ: ಭಾರತಕ್ಕಿಂತ ಅಮೆರಿಕ, ಜಪಾನ್ ಜಿಡಿಪಿ ಕುಸಿತ ಹೆಚ್ಚು?: ಸುಳ್ಳು ಹರಡುತ್ತಿರುವ ಪೋಸ್ಟ್ ಕಾರ್ಡ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...