Homeಮುಖಪುಟನಾಜಿ ಜರ್ಮನಿ-IBM, ಫೇಸ್‌ಬುಕ್ ಭಾರತ-BJP: ‘ಸುಮಧುರ ಬಾಂಧವ್ಯ’ದ ಕತೆ

ನಾಜಿ ಜರ್ಮನಿ-IBM, ಫೇಸ್‌ಬುಕ್ ಭಾರತ-BJP: ‘ಸುಮಧುರ ಬಾಂಧವ್ಯ’ದ ಕತೆ

ಹಿಟ್ಲರ್ ಆಡಳಿತ ನಡೆಸುತ್ತಿದ್ದ ಎಲ್ಲಾ ಕ್ರೌರ್ಯಗಳ ಬಗ್ಗೆ ಐಬಿಎಂ ಏಕೆ ಕಣ್ಣುಮುಚ್ಚಿ ಕುಳಿತಿತ್ತೆಂಬ ಪ್ರಶ್ನೆಗೆ ಇರುವುದು ಒಂದೇ ಉತ್ತರ. ಬಹುಶಃ ಎಲ್ಲಾ ಬಹುರಾಷ್ಟ್ರೀಯ ಬಂಡವಾಳಶಾಹಿಗಳ ಬಳಿ ಉತ್ತರವೂ ಇದುವೇ. ನಿರಂತರವಾಗಿ ಲಾಭವನ್ನು ಹೆಚ್ಚಿಸಿಕೊಳ್ಳುವುದು!

- Advertisement -
- Advertisement -

ಬಲಪಂಥೀಯ ಒಲವುಳ್ಳ ಅಂಖಿ ದಾಸ್ ಫೇಸ್‌ಬುಕ್ ಭಾರತದ ನೀತಿ ನಿರ್ದೇಶಕಿಯಾಗಿದ್ದಕ್ಕೂ ಬಿಜೆಪಿಯ ಜೊತೆಗೆ ಫೇಸ್‌ಬುಕ್‌ಗೆ ಇರುವ ‘ಸುಮಧುರ ಬಾಂಧವ್ಯ’ಕ್ಕೂ ಸಂಬಂಧ ಕಲ್ಪಿಸಲಾಗುತ್ತಿದೆ. ಫೇಸ್‌ಬುಕ್‌ನ ಮಾರುಕಟ್ಟೆ 750 ಶತಕೋಟಿ ಡಾಲರುಗಳು. ಭಾರತೀಯರ ರೂಪಾಯಿಗಳಲ್ಲಿ ಅದನ್ನು ಹೇಳುವುದಕ್ಕೂ ಕಷ್ಟವಿದೆ. ಐದರ ಮುಂದೆ ಹದಿಮೂರು ಸೊನ್ನೆಗಳನ್ನು ಹಾಕಬೇಕಾದಷ್ಟು ದೊಡ್ಡ ಸಂಖ್ಯೆಯದು. ಇಂಥದ್ದೊಂದು ಕಂಪೆನಿ ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಿಗೆ ನೀತಿ ನಿರ್ದೇಶಕರನ್ನು ನೇಮಿಸುವಾಗಲೇ ಅವರ ರಾಜಕೀಯ ಒಲವುಗಳನ್ನು ಅರಿಯದೇ ಇರುವ ತಪ್ಪನ್ನು ಮಾಡುವುದಿಲ್ಲ. ಅಂದರೆ ಅಂಖಿ ದಾಸ್‌ಗೆ ಬಿಜೆಪಿಯ ಪರ ಒಲವಿದ್ದರೆ ಅದು ತನಗೆ ಲಾಭ ತಂದುಕೊಡುತ್ತದೆ ಎಂಬ ಕಾರಣಕ್ಕಾಗಿಯೇ ಫೇಸ್‌ಬುಕ್ ಅವರನ್ನು ನೇಮಕ ಮಾಡಿಕೊಂಡಿರುತ್ತದೆ.

ಸಾಧಾರಣ ಗಾತ್ರದ ದೇಶವೊಂದರ ಆರ್ಥಿಕತೆಯಷ್ಟೇ ಅಥವಾ ಅದಕ್ಕಿಂತ ದೊಡ್ಡ ಪ್ರಮಾಣದ ಮಾರುಕಟ್ಟೆಯನ್ನು ಹೊಂದಿರುವ ಫೇಸ್‌ಬುಕ್‌ನಂಥ ಸಂಸ್ಥೆಗಳ ಗುರಿ ಒಂದೇ. ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವುದು. ಯಾವ ಬಗೆಯ ಸರ್ಕಾರವಿರಬೇಕು, ಯಾವ ರಾಜಕೀಯ ಸಿದ್ಧಾಂತ ತಮಗೆ ಅನುಕೂಲಕರ ಎಂಬುದನ್ನೆಲ್ಲಾ ಅವು ಆಲೋಚಿಸುತ್ತವೆ. ಇದೇನು ಹೊಸ ವಿಚಾರವಲ್ಲ ಇತಿಹಾಸದುದ್ದಕ್ಕೂ ಇದು ನಡೆಯುತ್ತಲೇ ಬಂದಿದೆ.

ಅಂಕಿ ದಾಸ್ ಮತ್ತು ಮಾರ್ಕ್ ಝುಗರ್‌ಬರ್ಗ್. Courtesy: The Indian Express

ಐಬಿಎಂ ಹಾಗೂ ಅದರ ಯೂರೋಪಿನ ಅಂಗಸಂಸ್ಥೆಗಳು ಹಿಟ್ಲರ್ ಜೊತೆಗೂ ಮಧುರ ಬಾಂಧವ್ಯವನ್ನೇ ಹೊಂದಿದ್ದವು. ಅಮೆರಿಕ ಒಂದು ರಾಷ್ಟ್ರವಾಗಿ ಜರ್ಮನಿಯ ವಿರುದ್ಧವಾಗಿತ್ತು. ಆದರೆ ಅಮೆರಿಕ ಮೂಲದ ಬಹುರಾಷ್ಟ್ರೀ ಕಂಪೆನಿಯಾಗಿದ್ದ ಐಬಿಎಂ ಮಾತ್ರ ಥರ್ಡ್ ರೈಶ್ ಎಂದು ಕರೆಯಲಾಗುವ ಹಿಟ್ಲರ್ ನೇತೃತ್ವದ ಸರ್ಕಾರಕ್ಕೆ ಹೊಲ್ಲೆರಿಥ್ ಮೆಷೀನ್ ಎಂದು ಕರೆಯಲಾಗುತ್ತಿದ್ದ ಗಣಕಯಂತ್ರಗಳನ್ನು ಭೋಗ್ಯಕ್ಕೆ ಕೊಡುವ ಒಪ್ಪಂದ ಮಾಡಿಕೊಳ್ಳುತ್ತಿತ್ತು! ಈ ಯಂತ್ರಗಳು ಹಿಟ್ಲರ್ ಯೋಜಿಸಿದ “ಅಂತಿಮ ಪರಿಹಾರ”ಕ್ಕೆ ಬೇಕಿರುವ ಬಲಿಪಶುಗಳನ್ನು ಗುರುತಿಸುವುದಕ್ಕೆ ಬಳಕೆಯಾಯಿತು.

ಹೊಲ್ಲೆರಿಥ್ ಮೆಷೀನ್ ಎಂಬುದು ಈಗಿನ ಡಿಜಿಟಲ್ ಕಂಪ್ಯೂಟರುಗಳು ಹುಟ್ಟುವುದಕ್ಕೆ ಮುನ್ನವೇ ಬಳಕೆಗೆ ಬಂದ ಗಣಕಯಂತ್ರ. ಇದನ್ನು ಕಂಡುಹಿಡಿದು ಅಭಿವೃದ್ಧಿಪಡಿಸಿದ್ದು ಅಮೆರಿಕದ ಜನಗಣತಿ ಕಾರ್ಯಾಲಯದ ನೌಕರ ಹರ್ಮನ್ ಹೊಲ್ಲೆರಿಥ್. 1880ರ ಆರಂಭದಲ್ಲಿ ಇದನ್ನಾತ ರೂಪಿಸಿದ. ಜನಗಣತಿಯಂತ ಸಂಕೀರ್ಣ ಪ್ರಕ್ರಿಯೆಯನ್ನು ಇದು ಸುಲಭಗೊಳಿಸುತ್ತಿತ್ತು. ನಿರ್ದಿಷ್ಟ ವಿನ್ಯಾಸದಲ್ಲಿ ತೂತುಗಳನ್ನು ಕೊರೆದಿರುವ ಕಾರ್ಡ್ಗಳನ್ನು ಬಳಸಿಕೊಂಡು ಸಂಖ್ಯಾಶಾಸ್ತ್ರೀಯ ವಿಂಗಡಣೆಗಳನ್ನು ಮಾಡುವುದು ಈ ಯಂತ್ರದಲ್ಲಿ ಸಾಧ್ಯವಿತ್ತು. ಇವುಗಳು ಆರಂಭದಲ್ಲಿ ನಿಮಿಷವೊಂದಕ್ಕೆ 150 ಕಾರ್ಡ್ಗಳಲ್ಲಿರುವ ಮಾಹಿತಿಯನ್ನು ವಿಂಗಡಿಸುವ ಸಾಮರ್ಥ್ಯ ಹೊಂದಿದ್ದವು. 1930ರಿಂದ ಆಚೆಗೆ ನಡೆದ ಸುಧಾರಣೆಗಳು ಈ ವೇಗವನ್ನು ಮತ್ತಷ್ಟು ಹೆಚ್ಚಿಸಿತು. ಪೆನ್ನು ಮತ್ತು ಪೇಪರು ಹಿಡಿದು ಮಾಡುವ ಕೆಲಸಕ್ಕೆ ಹೋಲಿಸಲಾಗದಷ್ಟು ವೇಗದಲ್ಲಿ ದತ್ತಾಂಶ ವಿಶ್ಲೇಷಣೆ ಸಾಧ್ಯವಾಯಿತು.

Courtesy: HNF

ಹೊಲ್ಲೆರಿಥ್ ಈ ಯಂತ್ರವನ್ನು ಕಂಡುಹಿಡಿದು ಅದನ್ನೊಂದು ವ್ಯಾಪಾರವಾಗಿ ಮಾಡಿಕೊಂಡ. ಆಗ ಯಂತ್ರಗಳನ್ನು ಮಾರಾಟ ಮಾಡುತ್ತಿರಲಿಲ್ಲ. ಇವುಗಳನ್ನು ಬಳಸುವವರಿಗೆ ಭೋಗ್ಯಕ್ಕೆ
ಕೊಡಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಈಗಿನ ಎಸ್‌ಎಎಸ್ (ಸಾಫ್ಟ್ವೇಸ್ ಆಸ್ ಸರ್ವೀಸ್) ವಿಧಾನಕ್ಕೆ ಹೋಲಿಸಬಹುದು. ಯಂತ್ರಗಳನ್ನು ಭೋಗ್ಯಕ್ಕೆ ಪಡೆದವರು ಅದನ್ನು ಬಳಸಬಹುದಿತ್ತು. ಅದರ ಸುಧಾರಣೆ, ದುರಸ್ತಿ ಮತ್ತು ಬಳಕೆಗೆ ಬೇಕಿರುವ ತರಬೇತಿ ಇತ್ಯಾದಿಗಳನ್ನೆಲ್ಲಾ ಹೊಲ್ಲೆರಿಥ್‌ನ ಸಂಸ್ಥೆಯೇ ಒದಗಿಸುತ್ತಿತ್ತು.

ಈ ಸಂಸ್ಥೆ 1910ರಲ್ಲಿ ಜರ್ಮನ್ ಹೊಲ್ಲೆರಿಥ್ ಮೆಷಿನ್ ಕಾರ್ಪೊರೆಷನ್ ಮೂಲಕ ತನ್ನ ವ್ಯಾಪಾರವನ್ನು ಯೂರೋಪಿಗೆ ವಿಸ್ತರಿಸಿತು. ಇದಾದ ಒಂದೇ ವರ್ಷದಲ್ಲಿ ಹೊಲ್ಲೆರಿಥ್ ತಮ್ಮ ಕಂಪೆನಿಯನ್ನೇ ಚಾರ್ಲ್ಸ್ ಫ್ಲಿಂಟ್ ಎಂಬ ಉದ್ಯಮಿಗೆ ಮಾರಾಟ ಮಾಡಿದ. ಆಗ ಇದು ಕಂಪ್ಯೂಟಿಂಗ್-ಟ್ಯಾಬ್ಯುಲೇಟಿಂಗ್-ರೆಕಾರ್ಡಿಂಗ್ ಕಂಪೆನಿ ಎಂಬ ಹೆಸರು ಪಡೆಯಿತು. 1924ರಲ್ಲಿ ಈ ಸಂಸ್ಥೆ ಐಬಿಎಂ ಎಂಬ ಹೆಸರು ಪಡೆಯಿತು. ಈಗಲೂ ಅಸ್ತಿತ್ವದಲ್ಲಿರುವ ಈ ಸಂಸ್ಥೆ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಹೆಸರು.

Courtesy: Amazon.com

ಎಡ್ವಿನ್ ಬ್ಲಾಕ್ ಎಂಬ ಪತ್ರಕರ್ತ ಐಬಿಎಂ ಮತ್ತು ಹಿಟ್ಲರ್‌ನ ಆಡಳಿತದ ನಡುವಣ ಸಂಬಂಧವನ್ನು ತಮ್ಮ ಪುಸ್ತಕ “ಐಬಿಎಂ ಅಂಡ್ ದ ಹೊಲೊಕಾಸ್ಟ್”ನಲ್ಲಿ ಬಹಳ ವಿವರವಾಗಿ ದಾಖಲಿಸಿದ್ದಾರೆ. ವರ್ಷಗಳ ಕಾಲ ನಡೆಸಿದ ದಾಖಲೆಗಳ ಪರಿಶೀಲನೆ ಮತ್ತು ಸಾಕ್ಷ್ಯಾಗಳೊಂದಿಗೆ ಎಡ್ವಿನ್ ಬ್ಲಾಕ್ ತಮ್ಮ ತೀರ್ಮಾನಗಳಿಗೆ ಬಂದಿದ್ದಾರೆ. ಇವುಗಳಲ್ಲಿ ಒಂದನ್ನೂ ಈತನಕ ಐಬಿಎಂ ಅಲ್ಲಗಳೆದಿಲ್ಲ. ಆದರೆ ಪದೇ ಪದೇ ಅಮೆರಿಕದ ಮೂಲ ಸಂಸ್ಥೆಗೂ ಜರ್ಮನಿಯಲ್ಲಿದ್ದ ಅಂಗ ಸಂಸ್ಥೆಗೂ ಸಂಪರ್ಕವಿರಲಿಲ್ಲ ಎಂದು ಹೇಳಲು ಪ್ರಯತ್ನಿಸಿದೆ. ಆದರೆ ದಾಖಲೆಗಳು ಹೇಳುವಂತೆ ನಾಜಿಗಳು ರೂಪಿಸಿದ ಗಣತಿ ವಿಧಾನಕ್ಕೆ ಅನುಗುಣವಾದ ಕಾರ್ಡ್ಗಳನ್ನು ವಿನ್ಯಾಸಗೊಳಿಸುವುದಕ್ಕೆ ಅಮೆರಿಕದಲ್ಲಿದ್ದ ಮೂಲ ಸಂಸ್ಥೆಯ ಜೊತೆಗೆ ನಿರಂತರವಾಗಿ ಸಂವಹನ ನಡೆದಿರುವುದನ್ನು ಬ್ಲಾಕ್ ಅವರ ಪುಸ್ತಕ ತೆರೆದಿಟ್ಟಿದೆ.

ನಾಜಿಗಳು ನಡೆಸಿದ ನರಮೇಧ ಸಾಮಾನ್ಯವಾದುದಾಗಿರಲಿಲ್ಲ. ಜನಾಂಗೀಯ ಪರಿಶುದ್ಧತೆಯನ್ನು ಸಾಧಿಸುವುದಕ್ಕಾಗಿ ಅದು ರೂಪಿಸಿದ “ಅಂತಿಮ ಪರಿಹಾರ”ವೇ ನರಮೇಧ. ಇದಕ್ಕಾಗಿ ಯಾರನ್ನು ಕೊಲ್ಲಬೇಕೆಂದು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಹೊಲ್ಲೆರಿಥ್ ಮೆಷಿನ್ ಬಳಕೆಯಾಯಿತು. 1933ರ ಏಪ್ರಿಲ್‌ನಲ್ಲಿ ಆರಂಭಗೊಂಡ ಜನಗಣತಿಯ ಮುಖ್ಯ ಉದ್ದೇಶವೇ ಯಹೂದಿಗಳು, ಜಿಪ್ಸಿಗಳು ಮತ್ತು ಇತರ ‘ಪರಿಶುದ್ಧವಲ್ಲದ’ ಜನಾಂಗಗಳನ್ನು ಇಲ್ಲದಂತಾಗಿಸುವುದು. ಯಹೂದಿಗಳೆಂದರೆ ಕೇವಲ ಯಹೂದ್ಯ ಧರ್ಮವನ್ನು ಆಚರಿಸುತ್ತಿದ್ದವರಷ್ಟೇ ಅಲ್ಲ. ‘ಯಹೂದ್ಯ ರಕ್ತ’ ಯಾರಲ್ಲಿದೆಯೋ ಅವರನ್ನೆಲ್ಲಾ ಇಲ್ಲವಾಗಿಸಬೇಕೆಂಬುದು ನಾಜಿಗಳ ಉದ್ದೇಶ. ಯಹೂದ್ಯರು ಮತಾಂತರ, ಅಂತರ್ ಧರ್ಮೀಯ ವಿವಾಹಗಳು ಇತ್ಯಾದಿಗಳ ಮೂಲಕ ತಮ್ಮ ಧಾರ್ಮಿಕ ಅಸ್ಮಿತೆಯನ್ನೇ ಕಳೆದುಕೊಂಡಿದ್ದರೂ ನಾಜಿಗಳ ಪಾಲಿಗೆ ಅವರು ಯಹೂದ್ಯ ರಕ್ತವುಳ್ಳವರು. ಇಂಥವರನ್ನೆಲ್ಲಾ ಪತ್ತೆ ಹಚ್ಚುವುದಕ್ಕಾಗಿ ಜನಗಣತಿ ನಡೆಯಿತು.

 

ಯಹೂದ್ಯರನ್ನು ಯಾತನಾ ಶಿಬಿರಕ್ಕೆ ಕರೆದೊಯ್ಯುತ್ತಿದ್ದ ವಿಧಾನ ಇತಿಹಾಸಕಾರರಿಗೆ ಬಹುಕಾಲ ಆಶ್ಚರ್ಯ ಹುಟ್ಟಿಸಿತ್ತು. ಇದ್ದಕ್ಕಿದ್ದಂತೆ ನಗರದ ನಿರ್ದಿಷ್ಟ ಬೀದಿಗಳಿಗೆ ಬರುತ್ತಿದ್ದ ಎಸ್‌ಎಸ್ ಪೊಲೀಸರು (ನಾಜಿ ಪಕ್ಷದ ಖಾಸಗಿ ಸೇನೆ) ಪಟ್ಟಿಯೊಂದನ್ನು ತೆಗೆದು ಅದರಲ್ಲಿರುವ ಹೆಸರುಗಳನ್ನು ಕೂಗಿ ಕರೆಯುತ್ತಿದ್ದರು. ಈ ಹೆಸರುಗಳೆಲ್ಲವೂ ಯಹೂದ್ಯರದ್ದೇ ಆಗಿರುತ್ತಿತ್ತು. ಅವರೆಲ್ಲರನ್ನೂ ಗುಂಪು ಸೇರಿಸುವ ಹೊತ್ತಿಗೆ ರೈಲು ಸಿದ್ಧವಾಗಿರುತ್ತಿತ್ತು. ಈ ಪಟ್ಟಿಯನ್ನು ಅಷ್ಟೊಂದು ನಿಖರವಾಗಿ ಹೇಗೆ ತಯಾರಿಸಲಾಗಿತ್ತು ಎಂಬುದರಿಂದ ಆರಂಭಿಸಿ ರೈಲ್ವೇ ವ್ಯವಸ್ಥೆಯನ್ನೂ ಅಷ್ಟೊಂದು ನಿಖರವಾಗಿ ಹೇಗೆ ರೂಪಿಸಲು ಸಾಧ್ಯ ಎಂಬುದರ ಬಗ್ಗೆ ಇತಿಹಾಸಕಾರರು ತಲೆಕೆಡಿಸಿಕೊಂಡಿದ್ದರು. ಬಹಳ ಕಾಲದ ನಂತರ ಹೊಲೆರಿಥ್ ಮೆಷಿನ್‌ನ ವಿಷಯ ಬಯಲಿಗೆ ಬಂತು. ಊರು, ಬೀದಿ, ಹುಟ್ಟು, ರಕ್ತಸಂಬಂಧ ಮತ್ತು ಮನೆ-ಮನೆಯ ತನಕದ ವಿವರಗಳು ಹೊಲೆರಿಥ್ ಮೆಷಿನ್‌ನಲ್ಲಿ ಅಡಕವಾಗಿತ್ತು. ಹೆಸರುಗಳಂಥ ಅಕ್ಷರಗಳಿರುವ ಕಾರ್ಡ್ಗಳನ್ನು ನಿಮಿಷಕ್ಕೆ 150ರಂತೆ ಓದುವ ಸಾಮರ್ಥ್ಯವಿದ್ದ ಯಂತ್ರಗಳು ಪಟಪಟನೆ ಯಹೂದ್ಯರ ಹೆಸರುಗಳನ್ನು ಹುಡುಕಿ ಪಟ್ಟಿಯನ್ನು ತಯಾರಿಸಿ ಕೊಡುತ್ತಿದ್ದವು.

ಈ ಸಂಬಂಧ ಕೇವಲ ಯಂತ್ರಗಳನ್ನು ಮಾರಾಟ ಮಾಡುವುದಕ್ಕೆ ಸೀಮಿತವಾಗಿರಲಿಲ್ಲ. ಹಿಟ್ಲರ್ ಆಡಳಿತದ 12ವರ್ಷಗಳ ಕಾಲವೂ ಐಬಿಎಂ ತನ್ನ “ಸುಮಧುರ ಬಾಂಧವ್ಯ”ವನ್ನು ಮುಂದುವರೆಸಿತ್ತು. ಜರ್ಮನಿಯಲ್ಲಿ ಏನಾಗುತ್ತದೆ ಎಂಬುದರ ಪ್ರತಿಯೊಂದು ವಿವರವೂ ನ್ಯೂಯಾರ್ಕ್‌ನಲ್ಲಿ ಕುಳಿತಿದ್ದ ಮಾಲೀಕರಿಗೆ ತಿಳಿಯುತ್ತಿತ್ತು. ಆದರೆ ಅವರು ಏನನ್ನೂ ಕೇಳದ ಅಥವಾ ಏನನ್ನೂ ಹೇಳದ ನೀತಿಯನ್ನು ಪಾಲಿಸುತ್ತಿದ್ದರಷ್ಟೆ. ಹಿಟ್ಲರ್ ಆಡಳಿತ ನಡೆಸುತ್ತಿದ್ದ ಎಲ್ಲಾ ಕ್ರೌರ್ಯಗಳ ಬಗ್ಗೆ ಐಬಿಎಂ ಏಕೆ ಕಣ್ಣುಮುಚ್ಚಿ ಕುಳಿತಿತ್ತೆಂಬ ಪ್ರಶ್ನೆಗೆ ಇರುವುದು ಒಂದೇ ಉತ್ತರ. ಬಹುಶಃ ಎಲ್ಲಾ ಬಹುರಾಷ್ಟ್ರೀಯ ಬಂಡವಾಳಶಾಹಿಗಳ ಬಳಿ ಉತ್ತರವೂ ಇದುವೇ. ನಿರಂತರವಾಗಿ ಲಾಭವನ್ನು ಹೆಚ್ಚಿಸಿಕೊಳ್ಳುವುದು!

ಐಬಿಎಂ ಮತ್ತು ಹಿಟ್ಲರ್ ನಡೆಸಿದ ನರಮೇಧದ ಸಂಬಂಧಗಳನ್ನು ವಿವರಿಸುವ ಎಡ್ವಿನ್ ಬ್ಲಾಕ್ ಅವರ ಪುಸ್ತಕ 2001ರಲ್ಲಿ ಪ್ರಕಟವಾಯಿತು. ಆಮೇಲೆ ಎರಡು ಪರಿಷ್ಕೃತ ಆವೃತಿಗಳನ್ನು ತಂದಿದ್ದಾರೆ. ಇತ್ತೀಚಿನ ಆವೃತಿ 2012ರಲ್ಲಿ ಪ್ರಕಟವಾಗಿತ್ತು. ಎಡ್ವಿನ್ ಅವರ ಪುಸ್ತಕದಲ್ಲಿರುವ ಮಾಹಿತಿಯನ್ನು ಐಬಿಎಂ ಅಲ್ಲಗಳೆದಿಲ್ಲ. ಆದರೆ ಇಡೀ ಪ್ರಕರಣವನ್ನು ಬೇರೆ ಬೇರೆ ರೀತಿಯಲ್ಲಿ ನೋಡುವ ಪ್ರಯತ್ನಗಳಂತೂ ನಡೆದಿವೆ. ಐಬಿಎಂನ ಈ ವರ್ತನೆಯ ಬಗ್ಗೆ ಇರುವ ಒಂದು ವಾದ ಬಹಳ ಸರಳವಾಗಿದೆ. ಈ ಯಂತ್ರಗಳನ್ನು ಐಬಿಎಂ ಒದಗಿಸದೇ ಹೋಗಿದ್ದರೂ ಹಿಟ್ಲರ್‌ನ ನರಮೇಧ ನಡೆಯುತ್ತಿತ್ತು. ಯಾತನಾ ಶಿಬಿರಗಳು ಇರುತ್ತಿದ್ದವು. ಹಾಗಾಗಿ ಇಲ್ಲಿ ಐಬಿಎಂ ಕೇವಲ ನಿಮಿತ್ತ ಮಾತ್ರ ಎಂಬುದು ಈ ವಾದದ ತಿರುಳು.

ಫೇಸ್‌ಬುಕ್ ಮತ್ತು ಬಿಜೆಪಿಯ ಸಂಬಂಧದ ಬಗ್ಗೆಯೂ ಇಂಥದ್ದೇ ಒಂದು ವಾದ ಕೇಳಿಬರುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ಅಧಿಕಾರದಲ್ಲಿ ಇರುವವರಿಗೆ ಸಲಾಮು ಹಾಕುತ್ತವೆ ಎಂಬ ವಾದವನ್ನು ಹಿರಿಯ ಪತ್ರಕರ್ತ ಶೇಖರ್ ಗುಪ್ತ ಅವರಾದಿಯಾಗಿ ಅನೇಕರು ಮಂಡಿಸಿದ್ದಾರೆ. ಇದು ಅರ್ಧ ಸತ್ಯ. ಬಿಜೆಪಿ ಮತ್ತು ಫೇಸ್‌ಬುಕ್ ಬಾಂಧವ್ಯ ಬಿಜೆಪಿ ಅಧಿಕಾರಕ್ಕೇರುವ ಮುಂಚಿನಿಂದಲೇ ಇದೆ. ಅಂದರೆ ಭಾರತದಲ್ಲಿಯೂ ಒಂದು ಕೇಂಬ್ರಿಜ್ ಅನಾಲಿಟಿಕಾ ಹಗರಣವೇ ನಡೆದಿದೆ ಎಂದರ್ಥವಲ್ಲವೇ? ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಕೇಂಬ್ರಿಜ್ ಅನಾಲಿಟಿಕಾ ಎಂಬ ಮೂರನೇ ಸಂಸ್ಥೆ ಫೇಸ್‌ಬುಕ್ ಬಳಸಿಕೊಂಡು ಮತದಾರರ ಮನಸ್ಸನ್ನು ಪ್ರಭಾವಿಸಿತ್ತು. ಆದರೆ ಇಲ್ಲಿ ಸ್ವತಃ ಫೇಸ್‌ಬುಕ್ ನಿರ್ದಿಷ್ಟ ರಾಜಕೀಯ ಸಿದ್ಧಾಂತದ ಜೊತೆ ಕೈಜೋಡಿಸಿದೆಯಲ್ಲವೇ?

courtesy: Boomlive

ಈ ಪ್ರಶ್ನೆಗಳ ಉತ್ತರ ಹೌದು ಎಂದಾದರೂ ಆಶ್ಚರ್ಯ ಪಡಬೇಕಾದುದೇನೂ ಇಲ್ಲ. ಫೇಸ್‌ಬುಕ್, ಅಮೆಜಾನ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಎಂಬ ಹೊಸ ಕಾಲದ ಬಹುರಾಷ್ಟ್ರೀಯ ಉದ್ಯಮಗಳೆಲ್ಲವೂ ನಡೆಸುತ್ತಿರುವುದು ದತ್ತಾಂಶದ ಗಣಿಗಾರಿಕೆ. ಭಾರತದಂಥ ದೊಡ್ಡ ಸಂಖ್ಯೆಯ ಜನರಿರುವ ದೇಶದಲ್ಲಿ ಅದು ಹೆಚ್ಚು ಸಿಗುತ್ತದೆ. ದಕ್ಷಿಣ ಅಮೆರಿಕಾ, ಅರಬ್ ದೇಶಗಳು, ಆಫ್ರಿಕಾ ಎಲ್ಲೆಲ್ಲಿ ತೈಲ ಮತ್ತು ಇತರ ಬೆಲೆಬಾಳುವ ಖನಿಜಗಳ ಗಣಿಗಾರಿಕೆ ಸಾಧ್ಯವಿದೆಯೋ ಅಲ್ಲೆಲ್ಲಾ ತಮಗೆ ಬೇಕಾದ ಸರ್ಕಾರಗಳನ್ನು ತರಬಹುದಾದ ಬಹುರಾಷ್ಟ್ರೀಯ ಕಂಪೆನಿಗಳಿವೆ ಎಂಬುದು ನಮಗೆ ಯಾವತ್ತಾದರೂ ಆಶ್ಚರ್ಯ ಹುಟ್ಟಿಸಿದೆಯೇ? ಈಸ್ಟ್ ಇಂಡಿಯಾ ಕಂಪೆನಿಯ ಅಡಿಯಾಳಾಗಿದ್ದ ಇತಿಹಾಸ ನಮ್ಮದೇಶಕ್ಕೇ ಇಲ್ಲವೇ. ಹಾಗೆಯೇ ದತ್ತಾಂಶ ಹೊಸ ತೈಲ. ಅದು ಭಾರತದಲ್ಲಿ ಹೆಚ್ಚಿದೆ. ತೈಲ ಬಾವಿಗಳಿರುವ ದೇಶಗಳ ರಾಜಕಾರಣ ಹೇಗಿದೆ ಎಂದು ನೋಡಿದರೆ
ನಮ್ಮ ಭವಿಷ್ಯದ ಬಗ್ಗೆಯೂ ಸಣ್ಣ ಒಳನೋಟ ದೊರೆಯುತ್ತಿದೆಯಲ್ಲವೇ?

  • ಗೌತಮ್ ಶರ್ಮ

ಇದನ್ನೂ ಓದಿ: ಫೇಸ್‌ಬುಕ್-ಬಿಜೆಪಿ ಸಖ್ಯದ ವಾಲ್ ಸ್ಟ್ರೀಟ್ ವರದಿ: ವಿಚಾರಣೆ ಆರಂಭಿಸಿದ ದೆಹಲಿ ಅಸೆಂಬ್ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬುಲ್ಡೋಝರ್ ಬಳಸಿ ಮನೆ ಧ್ವಂಸ ಪ್ರಕರಣ : ಐದು ಕುಟುಂಬಗಳಿಗೆ 30 ಲಕ್ಷ ರೂ....

0
ನಾಗಾಂವ್‌ ಜಿಲ್ಲೆಯಲ್ಲಿ 2022ರಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆಯ ಬಳಿಕ ಐದು ಮುಸ್ಲಿಂ ಕುಟುಂಬಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಸರ್ಕಾರ ಧ್ವಂಸಗೊಳಿಸಿತ್ತು. ಇದೀಗ ಮನೆ ಕಳೆದುಕೊಂಡವರಿಗೆ ಪರಿಹಾರವಾಗಿ 30 ಲಕ್ಷ ರೂಪಾಯಿಗಳನ್ನು...