ಪ್ರಧಾನಿ ನೀಡುತ್ತಿರುವ ಐತಿಹಾಸಿಕ ಉಡುಗೊರೆ ರೈತರಿಗೆ ಬೇಡ: ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್

ದೂರದಿಂದ ರೈತ ಹೋರಾಟವನ್ನು ಮತ್ತು ಅದನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾವನ್ನು ನೋಡುತ್ತಿರುವವರಿಗೆ ಇದೊಂದು ಅತ್ಯಾಶ್ಚರ್ಯಕರ ಸುದ್ದಿಯಾಗಿರುತ್ತದೆ. ಯೋಗೇಂದ್ರ ಯಾದವ್‌ರನ್ನು ಸಂಯುಕ್ತ ಕಿಸಾನ್ ಮೋರ್ಚಾವು ಒಂದು ತಿಂಗಳ ಕಾಲ ಅಮಾನತ್ತಿನಲ್ಲಿಟ್ಟಿದೆ. ಬಹುಕಾಲದವರೆಗೆ ಸಂಯುಕ್ತ ಕಿಸಾನ್ ಮೋರ್ಚಾದ ಎರಡು ಮುಖ್ಯ ವ್ಯಕ್ತಿಗಳಾಗಿ ಯೋಗೇಂದ್ರ ಯಾದವ್ ಮತ್ತು ಡಾ.ದರ್ಶನ್‌ಪಾಲ್‌ರೇ ದೂರದಲ್ಲಿರುವವರಿಗೆ ಕಾಣುತ್ತಿದ್ದರು. ಜನವರಿ 26ರ ನಂತರ ಉತ್ತರ ಪ್ರದೇಶದ ರಾಕೇಶ್ ಟಿಕಾಯಿತ್ ಸಹಾ ಇದರ ಪ್ರಮುಖ ಮುಖಗಳಲ್ಲೊಬ್ಬರೆನಿಸಿದರು. ಅಖಿಲ ಭಾರತ ಕಿಸಾನ್ ಸಭಾದ ಹನ್ನನ್ ಮೊಲ್ಲಾರೂ ಸೇರಿದಂತೆ ಹಲವಾರು ಮುಖಂಡರು ಎಸ್‌ಕೆಎಂನ 7 ಜನರ ಸಮಿತಿಯ ಭಾಗ. ವಾಸ್ತವದಲ್ಲಿ ಈ ಹೋರಾಟದ ಪ್ರಧಾನ ಶಕ್ತಿ ಪಂಜಾಬಿನ ರೈತರದ್ದು ಎಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಪಂಜಾಬಿನ ಹಲವು ಬಿಕೆಯು (ಭಾರತೀಯ ಕಿಸಾನ್ ಯೂನಿಯನ್)ಗಳಲ್ಲಿ ಅತಿ ದೊಡ್ಡ ಶಕ್ತಿ ಬಿಕೆಯು ಉಗ್ರಾಹನ್ ಗುಂಪಿನದ್ದು. ಅದರ ನಂತರ ಬಿಕೆಯು ಡಕೌಂಡಾ, ರಾಜೇವಾಲ್ ಇತ್ಯಾದಿ ಗುಂಪುಗಳದ್ದು. ಅಷ್ಟು ದೊಡ್ಡ ಗುಂಪಿನವರಲ್ಲದ ಡಾ.ದರ್ಶನ್ ಪಾಲ್ ಇದರ ಮುಂಚೂಣಿ ವ್ಯಕ್ತಿಯಾಗಿ ಹೊರಹೊಮ್ಮಿದ್ದು, ಅವರು ಅಷ್ಟು ದೊಡ್ಡ ಗುಂಪಿನವರಲ್ಲದ ಕಾರಣಕ್ಕೇ ಇರಬಹುದು. ನಂತರದ ದಿನಗಳಲ್ಲಿ ಪ್ರಧಾನವಾಗಿ ಕೇಳಿಬಂದ ಹರಿಯಾಣಾದ ಚದೌನಿ ಸಹಾ 7 ಜನರ ಸಮಿತಿಯ ಭಾಗವೇ.

ಹೀಗಿದ್ದೂ, ಅಷ್ಟೇನೂ ದೊಡ್ಡ ರೈತ ಸಂಘಟನೆಯ ನೇತಾರರಲ್ಲದ ಯೋಗೇಂದ್ರ ಯಾದವ್ ಇದರ ಪ್ರಮುಖ ವ್ಯಕ್ತಿಯಾಗಿದ್ದು ಕೇವಲ ಅವರ ಮಾತುಗಾರಿಕೆಯ ಕಾರಣಕ್ಕಾ? ಅಥವಾ ಟಿವಿಗಳಲ್ಲಿ ಹೆಚ್ಚು ಕಾಣುತ್ತಾರೆ ಎನ್ನುವ ಕಾರಣಕ್ಕಾ? ಎರಡೂ ಅಲ್ಲ. ವಾಸ್ತವದಲ್ಲಿ ಯೋಗೇಂದ್ರ ಯಾದವ್‌ರನ್ನು ಟೀಕಿಸುವ ಹಲವರು ಇದನ್ನೇ ಮುಂದೆ ಮಾಡಿ, ಅವರು ರೈತರನ್ನು ಪ್ರತಿನಿಧಿಸುವುದು ತಪ್ಪು ಎಂಬಂತೆ ತೀವ್ರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಹಾಗೆ ನೋಡಿದರೆ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರನ್ನು ಒಳಗೊಂಡಂತೆ (ಸ್ವಾತಂತ್ರ್ಯ ಪೂರ್ವದಲ್ಲಿ ಸ್ವತಃ ಗಾಂಧಿ, ಪಟೇಲ್‌ರೂ ಸೇರಿದಂತೆ) ರೈತರನ್ನು ಸಮರ್ಥವಾಗಿ ಪ್ರತಿನಿಧಿಸಿದ ಹಲವರು ಸ್ವತಃ ರೈತರಲ್ಲ.

ಡಾ.ದರ್ಶನ್ ಪಾಲ್

ಯೋಗೇಂದ್ರ ಯಾದವ್‌ರು ರೈತ ಚಳವಳಿಯ ಮುಂಚೂಣಿಯಲ್ಲಿ ಬಂದು ನಿಂತಿದ್ದು 2020ರಲ್ಲಲ್ಲ. 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು, ರೈತ ಸಮೂಹದ ವಿರೋಧವನ್ನು ಎದುರಿಸಿದಾಗ ಅದಕ್ಕೊಂದು ರೂಪ ಕೊಟ್ಟಿದ್ದು ಯೋಗೇಂದ್ರ ಯಾದವ್‌ರ ನೇತೃತ್ವದ ಸ್ವರಾಜ್ ಅಭಿಯಾನ್. ಅದರ ರೈತ ವಿಭಾಗವಾದ ಜೈ ಕಿಸಾನ್ ಆಂದೋಲನದ ವತಿಯಿಂದ ದೇಶದ ಎಲ್ಲೆಡೆ ಜಾಥಾಗಳನ್ನು ನಡೆಸಿ ದೆಹಲಿಯಲ್ಲಿ ಬೃಹತ್ ರೈತ ಹೋರಾಟವನ್ನು ಸಂಘಟಿಸಿದ್ದರು. ಆ ಹೊತ್ತಿಗೆ ಆಪ್‌ನಿಂದ ಹೊರಗಿದ್ದ ಅವರು ದೇಶದ ವಿವಿಧ ಭಾಗಗಳಿಂದ ಸಣ್ಣ ಕುಡಿಕೆಗಳಲ್ಲಿ ಮಣ್ಣು ಸಂಗ್ರಹಿಸಿ ದೆಹಲಿಯ ಜಂತರ್ ಮಂತರ್‌ಗೆ ತಂದಿದ್ದರು. ಸಾವಿರಾರು ರೈತರ ಜೊತೆಗೆ ಆ ಮಣ್ಣನ್ನು ಅಲ್ಲಿ ಸ್ತೂಪವೊಂದನ್ನು ಮಾಡಲು ಬಳಸುವುದಾಗಿ ಘೋಷಿಸಿದ ಅವರು, ಬೃಹತ್ ನೇಗಿಲೊಂದನ್ನು ಸರದಿಯಲ್ಲಿ ಹೊತ್ತು ನಿಂತ ರೈತರ ಜೊತೆಗೆ ಅಹೋರಾತ್ರಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು. ಕರ್ನಾಟಕದ ಸಾಗರದ ಶಿವಾನಂದ ಕುಗ್ವೆ, ವಸಂತ್ ಕುಮಾರ್ ಇತ್ಯಾದಿಗಳೂ ಜೊತೆಗೂಡಿದ್ದ ಆ ರಾತ್ರಿ, ಯೋಗೇಂದ್ರರನ್ನು ಇತರ ಸತ್ಯಾಗ್ರಹಿಗಳ ಜೊತೆಗೆ ಬಂಧಿಸಲಾಗಿತ್ತು.

ಅಲ್ಲಿಂದಾಚೆಗೆ ನಿರಂತರವಾಗಿ ರೈತ ಹೋರಾಟದಲ್ಲಿ ಅವರಿದ್ದೇ ಇದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ತೀವ್ರ ಬರ ತಲೆದೋರಿದಾಗ ಸಂವೇದನಾಯಾತ್ರೆಯನ್ನು ನಡೆಸಿದ ಅವರು, ಕರ್ನಾಟಕದ ಯಾದಗಿರಿಯಿಂದ ಅದನ್ನು ಪ್ರಾರಂಭಿಸಿ ದೆಹಲಿಯವರೆಗೆ ಹೋಗಿದ್ದರು. ಯುವಜನರು, ವಿದ್ಯಾರ್ಥಿಗಳು ‘ಬರ ಕರ್ತವ್ಯ’ದ ಇಂಟರ್ನ್ಶಿಪ್ ಮಾಡಲು ಕಲೆಹಾಕಿ ರೈತಾಂದೋಲನಕ್ಕೆ ಹೊಸ ರೂಪ ಕೊಡುವ ಪ್ರಯತ್ನ ಮಾಡಿದ್ದರು. ಆದರೆ ಇದು ದೊಡ್ಡ ಸ್ವರೂಪ ಪಡೆದುಕೊಂಡಿದ್ದು, ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಮಂಡ್ಸೂರ್‌ನಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿ ಕೊಂದಾಗ. ಅಲ್ಲಿಗೆ ಧಾವಿಸಿದ್ದ ಯೋಗೇಂದ್ರ ಯಾದವ್ ಮತ್ತಿತರರು ನಂತರ ‘ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ – ಎಐಕೆಎಸ್‌ಸಿಸಿ’ ಸ್ಥಾಪಿಸಿದರು. ಅದು ದೇಶಾದ್ಯಂತದ 175ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾಗಿತ್ತು. ಎಡ ಸಂಘಟನೆಗಳು, ವಿವಿಧ ರೀತಿಯ ರೈತ ಸಂಘಟನೆಗಳು ಅದರ ಭಾಗವಾಗಿದ್ದರೂ, ಪಂಜಾಬಿನ ರೈತ ಸಂಘಟನೆಗಳು ತಾಂತ್ರಿಕವಾಗಿ ದೊಡ್ಡ ಪ್ರಮಾಣದಲ್ಲಿ ಅದರ ಜೊತೆಯಾಗಿರಲಿಲ್ಲ. ಆದರೆ, 2018ರ ಕೊನೆಯ ಭಾಗದಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತ್ರ ಪಂಜಾಬಿನ ರೈತರು ಭಾಗವಹಿಸಿದ್ದರು. ಅಂದಿನ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಹುಲ್‌ಗಾಂಧಿ, ಕೇಜ್ರಿವಾಲ್, ಶರದ್ ಯಾದವ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಭಾಗವಹಿಸಿದ್ದರು.

ಎಐಕೆಎಸ್‌ಸಿಸಿ ದೇಶದ ಅತಿ ದೊಡ್ಡ ರೈತ ಒಕ್ಕೂಟವಾಗಿ ಸ್ಥಾಪಿತವಾಗಿತ್ತು ಮತ್ತು ಪಂಜಾಬಿನ ರೈತ ಸಂಘಟನೆಗಳೂ ಇದರಲ್ಲಿ ಸಕ್ರಿಯವಾಗತೊಡಗಿದ್ದವು. ಇದೇ ಎಐಕೆಎಸ್‌ಸಿಸಿ 2020ರ ನವೆಂಬರ್ 25-26ಕ್ಕೆ ದೆಹಲಿ ಚಲೋ ಹೋರಾಟಕ್ಕೆ ಕರೆ ನೀಡಿದ್ದು ಮತ್ತು ಪಂಜಾಬಿನಿಂದ ಟ್ರ್ಯಾಕ್ಟರ್‌ಗಳ ಮೇಲೆ ಸಾವಿರ ಸಾವಿರ ಸಂಖ್ಯೆಯಲ್ಲಿ ರೈತರು ಬಂದಿದ್ದು. ಹೀಗಿದ್ದೂ, ಯೋಗೇಂದ್ರ ಯಾದವ್‌ರ ನೇತೃತ್ವದ ಜೈಕಿಸಾನ್ ಆಂದೋಲನವು ಭಾರೀ ದೊಡ್ಡ ಸಂಘಟನೆಯಾಗಿರಲಿಲ್ಲ ಎಂಬುದೂ ವಾಸ್ತವ. ಆದರೆ ಮೇಲೆ ಹೇಳಲಾದ ಎಲ್ಲಾ ಕಾರಣಗಳಿಂದ ಮತ್ತು ರೈತರ ಸಮಸ್ಯೆಗಳ ಕುರಿತು ಅತ್ಯಂತ ಸಮರ್ಥವಾಗಿ ವಿಚಾರ ಮಂಡನೆ ಮಾಡಬಲ್ಲ ಸಾಮರ್ಥ್ಯದ ಕಾರಣದಿಂದ ಹಾಗೂ ದೀರ್ಘಕಾಲದ ರಾಜಕೀಯ ವಿಶ್ಲೇಷಕ/ಕಾರ್ಯಕರ್ತನಾಗಿ ತನ್ನದೇ ವರ್ಚಸ್ಸು ಹೊಂದಿದ್ದರಿಂದ, ಈ ದೆಹಲಿ ಚಲೋದ ನಂತರದಲ್ಲೂ ಅವರಿಗೊಂದು ಮುಖ್ಯ ಪಾತ್ರವಿದ್ದಿತ್ತು. ಎಐಕೆಎಸ್‌ಸಿಸಿಯಲ್ಲಿ ಇಲ್ಲದಿದ್ದ ಇನ್ನೂ ಹಲವಾರು ದೊಡ್ಡ ರೈತ ಸಂಘಟನೆಗಳು ಈ ಹೊತ್ತಿಗೆ ಜೊತೆಯಾಗಿದ್ದರಿಂದ, ಅದಕ್ಕೊಂದು ಹೊಸ ಹೆಸರಿನ ಅಗತ್ಯ ಬಿದ್ದಿತು. ಅದೇ ಎಸ್‌ಕೆಎಂ. ಮೊದಲು ಅದರಲ್ಲಿ ಇಲ್ಲದಿದ್ದ ಟಿಕಾಯತ್ ಅವರ ಸಂಘಟನೆಯೂ ನಂತರ ಇದರ ಜೊತೆಗೂಡಬೇಕಾದ ಮಟ್ಟಕ್ಕೆ ಪಂಜಾಬಿನ ರೈತರ ಶಕ್ತಿಯು ದೆಹಲಿಯ ಸುತ್ತ ಬೀಡುಬಿಟ್ಟಿದ್ದು ಈಗ ಇತಿಹಾಸ.

ಸರ್ಕಾರದ ಮುಂದಿನ ಗುರಿ ಮಾಧ್ಯಮಗಳು, ನೀವು ಉಳಿಯಬೇಕಿದ್ದರೇ ನಮ್ಮ ಜೊತೆಯಾಗಿ: ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್

ಹೀಗೆಲ್ಲಾ ಇದ್ದೂ, ಮೊದಲಿಂದಲೂ ಯೋಗೇಂದ್ರ ಯಾದವ್‌ರ ನಿಲುವಿನ ಕುರಿತು ತೀವ್ರ ಅಸಮಾಧಾನ ಅಥವಾ ಭಿನ್ನಾಭಿಪ್ರಾಯ ಅಥವಾ ಅಸಹನೆ ಹಲವರಲ್ಲಿ ಇದೆ. ಅದಕ್ಕೆ ಅವರ ‘ಲಿಬರಲ್’ ಗುಣವೇ ಕಾರಣ ಎಂಬುದು ರ‍್ಯಾಡಿಕಲ್’ ಆಲೋಚನೆಗಳುಳ್ಳವರ ತಕರಾರು. ಈ ಟೀಕೆ ಯಾವ ಪ್ರಮಾಣಕ್ಕೆ ಇದೆಯೆಂದರೆ ಅವರುಗಳು ಯೋಗೇಂದ್ರ ಯಾದವ್‌ರನ್ನು ಬಿಜೆಪಿಯ ಏಜೆಂಟ್ ಎಂದೂ ಕೆಲವು ಬಾರಿ ಕರೆದಿದ್ದಾರೆ. ಎಸ್‌ಕೆಎಂನ ಜೊತೆಗೆ ಸರ್ಕಾರವು ಮಾತುಕತೆಗೆ ಮುಂದಾದಾಗ, ಸ್ವತಃ ಅಮಿತ್‌ಶಾ ರೈತ ಹೋರಾಟದ ಮುಂಚೂಣಿ ನಾಯಕರಲ್ಲೊಬ್ಬರಾದ ರಾಜೇವಾಲ್‌ರಿಗೆ ಫೋನ್ ಮಾಡಿ (ಆ ಸಂದರ್ಭದಲ್ಲಿ ರಾಜೇವಾಲ್ ಯೋಗೇಂದ್ರ ಯಾದವ್ ಸೇರಿದಂತೆ ರೈತ ಮುಖಂಡರ ಜೊತೆಗೇ ಇದ್ದರು) ಮಾತುಕತೆಗೆ ಯೋಗೇಂದ್ರ ಯಾದವ್‌ರನ್ನು ಕರೆತರಬಾರದು ಎಂದು ಸೂಚಿಸಿದ್ದರು. ಈ ಪ್ರಮಾಣಕ್ಕೆ ಬಿಜೆಪಿ ಸರ್ಕಾರದ ವಿರೋಧ ಕಟ್ಟಿಕೊಂಡಿರುವ ಅವರನ್ನು ಉಳಿದ ಕೆಲವರು ಏಕೆ ಒಪ್ಪುವುದಿಲ್ಲ? ಏಕೆಂದರೆ ಬಿಜೆಪಿ ಮತ್ತು ಆರೆಸ್ಸೆಸ್‌ಅನ್ನು ವಿರೋಧಿಸುವ ಒಂದು ‘ಸಾಂಪ್ರದಾಯಿಕ’ ಮಾದರಿ ಯೋಗೇಂದ್ರ ಯಾದವ್‌ರದ್ದಲ್ಲ ಮತ್ತು ಅವರ ‘ಮಾತುಗಾರಿಕೆ’ಯ ಕಾರಣಕ್ಕೆ ಅವರು ತಳಮಟ್ಟದ ಕೆಲಸ ಮಾಡದೆ ದೆಹಲಿ ರಾಜಕಾರಣದ ಮೂಲಕ ದೊಡ್ಡ ಫೋಕಸ್ ಪಡೆದುಕೊಳ್ಳುತ್ತಾರೆ ಎಂಬುದು ಅಂಥವರ ಆಕ್ಷೇಪ.

ಮಿಕ್ಕಿದ್ದನ್ನು ಪಕ್ಕಕ್ಕಿಡಬಹುದಾದರೂ, ಯೋಗೇಂದ್ರ ಯಾದವ್ ಕಳೆದ 7 ವರ್ಷಗಳಿಂದ ನಿರಂತರವಾಗಿ ರೈತ ಹೋರಾಟ, ಚಿಂತನೆಯ ಅತ್ಯಂತ ಅವಿಭಾಜ್ಯ ಅಂಗ. ಅವೆಲ್ಲವನ್ನೂ ಅವರು ಕೇವಲ ದೆಹಲಿಯಲ್ಲಿ ಕೂತು ಮಾಡಿದ್ದಲ್ಲ. ಸರ್ಕಾರವು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಯ ಕುರಿತಂತೆ ಈಗ ಸುಳ್ಳು ಹೇಳುವ ಎಷ್ಟೋ ಮೊದಲು ದೇಶದ ಹಲವು ರಾಜ್ಯಗಳ ಮಂಡಿ (ಮಾರುಕಟ್ಟೆ)ಗಳನ್ನು ಸ್ವತಃ ಸುತ್ತಿ, ಈಗಿನ ಎಂಎಸ್‌ಪಿಯೂ ರೈತರಿಗೆ ಲಭ್ಯವಾಗುತ್ತಿಲ್ಲ ಎಂಬುದನ್ನು ತೋರಿಸಿದವರು. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯಿಂದ ಆರಂಭಿಸಿ ವಿವಿಧ ರೈತ ವಿರೋಧಿ ನಡೆಗಳ ವಿರುದ್ಧ ನಿರಂತರವಾಗಿ ಸಾಧ್ಯವಿರುವ ರೀತಿಯಲ್ಲೆಲ್ಲಾ ದನಿಯೆತ್ತಿದವರು. ಹೀಗಿದ್ದೂ ಯೋಗೇಂದ್ರ ಯಾದವ್ ರೈತರನ್ನು ಪ್ರತಿನಿಧಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ಗೋದಿ ಮೀಡಿಯಾಕ್ಕಿಂತ ಹೆಚ್ಚು ಕೇಳಿದ್ದು ‘ರೈತ ಹೋರಾಟದ ಒಡನಾಡಿಗಳು, ಹಿತೈಷಿಗಳೇ’ ಆಗಿದ್ದರು.

ಅದೇನೇ ಇದ್ದರೂ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ನಡೆಯುತ್ತಿರುವ ರೈತ ಹೋರಾಟವು ಅಭೂತಪೂರ್ವವಷ್ಟೇ ಅಲ್ಲ, ನಮ್ಮ ಕಣ್ಣ ಮುಂದೆ ಅಸಾಧ್ಯವೊಂದು ಸಾಧ್ಯವಾಗಿರುವ ವಿದ್ಯಮಾನವೇ ಆಗಿದೆ. ಹತ್ತು ಹಲವು ಸಾಂದರ್ಭಿಕ ಕಾರಣಗಳಿಂದ ಬೆಳೆದು ನಿಂತಿರುವ ಈ ಹೋರಾಟವನ್ನು ಯಾವುದೇ ಒಂದು ಸಂಘಟನೆ ಕಟ್ಟಿ ನಿಲ್ಲಿಸಿದ್ದಲ್ಲ. ಅದು ಈ ಹೋರಾಟದ ಶಕ್ತಿಯೂ ಹೌದು; ಮಿತಿಯೂ ಹೌದು. ಇಲ್ಲಿ ಹತ್ತಾರು ಬಗೆಯ ಸಂಘಟನೆಗಳಿವೆ. ಅದೂ ಸಹಾ ಶಕ್ತಿ ಮತ್ತು ಸವಾಲು. ಈ ಸಂಘಟನೆಗಳಲ್ಲಿ ನಕ್ಸಲಿಸಂಅನ್ನು ಎತ್ತಿ ಹಿಡಿಯುವ ಯೂನಿಯನ್ನುಗಳಿಂದ ಹಿಡಿದು, ಫ್ಯೂಡಲ್ ಶಕ್ತಿಯನ್ನು ಆಧಾರವಾಗುಳ್ಳ ಗುಂಪುಗಳವರೆಗೆ ಹಲವಿವೆ. ಅದಂತೂ ಸವಾಲೇ. ಹೀಗಿದ್ದೂ ಒಗ್ಗಟ್ಟಿನಿಂದ 11 ತಿಂಗಳನ್ನು ಪೂರೈಸುವುದೆಂದರೆ ಅದೊಂದು ಅಸಾಧ್ಯ ಸಂಗತಿ. ಒಳಗೆ ನೂರೆಂಟು ಭಿನ್ನ ಅಭಿಪ್ರಾಯಗಳಿದ್ದರೂ, ಜನವರಿ 26ರಂತಹ ಹಲವಾರು ಸಂದಿಗ್ಧ ಸಮಸ್ಯೆಗಳು ಎದುರಾದರೂ ಈ ಒಗ್ಗಟ್ಟು ಮುರಿಯದೇ ಉಳಿದುಕೊಂಡಿದೆ. ಅದಕ್ಕಿರುವ ಕಾರಣಗಳು ಎರಡು. ಆರಂಭದಿಂದಲೂ ಈ ಹೋರಾಟದ ದಿಕ್ಕು ನಿರ್ಧಾರವಾಗುತ್ತಿರುವುದು ಅದರ ಭಾಗವಾಗಿರುವ ಸಾಮಾನ್ಯ ರೈತರಿಂದಲೇ ಹೊರತು ನಾಯಕರಿಂದಲ್ಲ. ಎರಡನೆಯದಾಗಿ ಇದನ್ನು ಮುನ್ನಡೆಸುತ್ತಿರುವ ನಾಯಕತ್ವವು ಹಲವು ಸಮಸ್ಯೆಗಳ ಹೊರತಾಗಿಯೂ ಪ್ರಬುದ್ಧತೆ ಹಾಗೂ ರಾಜಕೀಯ ಬದ್ಧತೆಗಳನ್ನು ಹೊಂದಿದೆ.

ಈಗ ಯೋಗೇಂದ್ರ ಯಾದವ್‌ರ ಅಮಾನತು ಸಹಾ ಅಂತಹುದೇ ಒಂದು ಸಂದರ್ಭ. ಇದಕ್ಕೂ ಮುಂಚೆ ಇನ್ನೂ ಒಂದು ಅಮಾನತು ಅಲ್ಲಿ ನಡೆದಿತ್ತು. ಈ ಜುಲೈನಲ್ಲಿ ಗುರ್ನಾಮ್ ಸಿಂಗ್ ಚದೌನಿಯವರನ್ನು ಒಂದು ವಾರ ಕಾಲ ಅಮಾನತು ಮಾಡಲಾಗಿತ್ತು. ಅದು ಹರಿಯಾಣಾದ ರೈತರು ದೊಡ್ಡ ಸಂಖ್ಯೆಯಲ್ಲಿ ಹೋರಾಟ ಸೇರಿಕೊಳ್ಳುತ್ತಿದ್ದ ಸಂದರ್ಭ. ಆದರೂ ‘ತಾವು ನಂಬಿದ್ದ ತತ್ವಕ್ಕೆ ಅನುಗುಣವಾಗಿ’ ಅವರನ್ನು ಅಮಾನತ್ತಿನಲ್ಲಿಡಲು ಎಸ್‌ಕೆಎಂ ನಾಯಕತ್ವ ಹಿಂಜರಿದಿರಲಿಲ್ಲ. ಚದೌನಿಯವರು ಈ ರೈತ ಹೋರಾಟವನ್ನು ಪ್ರತಿನಿಧಿಸಿದ ರೀತಿಯಲ್ಲಿ ಅವರು ಪಂಜಾಬಿನ ಶಾಸಕರ ನಿಯೋಗವೊಂದನ್ನು ಭೇಟಿಯಾಗಿದ್ದರು. ಅಲ್ಲಿ ಅವರು ತಮ್ಮ ರಾಜಕೀಯ ನಿಲುವನ್ನು (ಇಲ್ಲಿನ ಎಲ್ಲರಿಗೂ ಸ್ವತಂತ್ರವಾಗಿ ತಮ್ಮ ರಾಜಕೀಯ ನಿಲುವನ್ನು ವ್ಯಕ್ತಪಡಿಸಲು ಅವಕಾಶವಿದೆ) ರೈತ ಹೋರಾಟದ ರಾಜಕೀಯ ನಿಲುವಿನ ರೀತಿಯಲ್ಲಿ ಮುಂದಿಟ್ಟಿದ್ದರು ಎಂಬುದು ಅವರ ಮೇಲಿನ ಆರೋಪ. ಅಷ್ಟೇ ಅಲ್ಲದೇ ಎಸ್‌ಕೆಎಂನ ಪ್ರಮುಖ 7 ಜನರ ಸಮಿತಿಯ ಇನ್ನೊಬ್ಬ ಸದಸ್ಯ ಕಕ್ಕಾಜಿ (ಇವರು ಮಧ್ಯಪ್ರದೇಶದವರು, 2012ರವರೆಗೆ ಬಿಜೆಪಿಯ ರೈತಸಂಘದ ಮುಖ್ಯಸ್ಥರಾಗಿದ್ದರು. ನಂತರ ಅವರನ್ನು ಬಿಜೆಪಿಯೇ ಜೈಲಿಗೆ ಕಳಿಸಿತ್ತು. ಈಗ ಅದರಿಂದ ದೂರವಾಗಿದ್ದಾರೆ, ಹಲವು ಉತ್ತರದ ರಾಜ್ಯಗಳಲ್ಲಿ ಸಂಘಟನೆ ಹೊಂದಿದ್ದಾರೆ)ಯೂ ತಾನಾಡಿದ ಕೆಲವು ಮಾತುಗಳಿಗೆ ಕ್ಷಮಾಪಣೆ ಕೇಳಿದ್ದರು.

ಈಗ ಯೋಗೇಂದ್ರ ಯಾದವ್ ಅವರು ಮಾಡಿದ ‘ತಪ್ಪು’ ಏನು? ಉತ್ತರ ಪ್ರದೇಶದ ಲಖಿಂಪುರ್ ಖೇರಿ ಘಟನೆಯಲ್ಲಿ ಜೀಪು ಓಡಿಸಿ ರೈತರನ್ನು ಕೊಂದ ಬಿಜೆಪಿ ನಾಯಕನ ನಡೆಗೆ ಕ್ರೋಧಗೊಂಡು, ಆ ಜೀಪಿನ ನಂತರ ಬಂದ ಬಿಜೆಪಿ ಕಾರ್ಯಕರ್ತರನ್ನು ಅಲ್ಲಿದ್ದ ಪ್ರತಿಭಟನಾಕಾರರು ಕೊಂದರೆಂಬ ಆರೋಪವಿದೆ. ಮೇಲ್ನೋಟಕ್ಕೆ ಅದು ಸಾಂದರ್ಭಿಕ ಆಕ್ರೋಶವು ಮೇರೆ ಮೀರಿ ಕೊಲೆಗೆ ಕಾರಣವಾಗಿದ್ದಂತೆಯೇ ಇದೆ. ಸತ್ತ ಆ ಬಿಜೆಪಿ ಕಾರ್ಯಕರ್ತರ ವಿಚಾರದಲ್ಲೂ ನಮ್ಮ ಸಂತಾಪ ಇರಬೇಕು ಎಂಬುದು ಯೋಗೇಂದ್ರರ ನಿಲುವು. ಹಾಗಾಗಿಯೇ ಅವರು ರೈತರ ಸಾವಿನ ಶ್ರದ್ಧಾಂಜಲಿ ಕಾರ್ಯಕ್ರಮ ಮುಗಿಸಿ, ಸತ್ತ ಬಿಜೆಪಿ ಕಾರ್ಯಕರ್ತರ ಮನೆಗೂ ಭೇಟಿ ಕೊಟ್ಟಿದ್ದರು. ಯಾದವ್‌ರ ಈ ನಡೆಯ ವಿರುದ್ಧ ಅವರ ಯಾವಾಗಿನ ಟೀಕಾಕಾರರು ಮತ್ತು ಎಸ್‌ಕೆಎಂನ ಹಲವರು ಕಟುವಾಗಿ ಟೀಕಿಸಿದ್ದರು. ಅದೇ ವಿಚಾರಕ್ಕೆ ಎಸ್‌ಕೆಎಂನ ಸಭೆಯಲ್ಲಿ ಯೋಗೇಂದ್ರ ಯಾದವ್‌ರಿಗೆ ಕ್ಷಮಾಪಣೆ ಕೇಳಲು ಹೇಳಿ, ಅವರು ಕೇಳದೇ ಇದ್ದುದರಿಂದ ಅವರನ್ನು ಒಂದು ತಿಂಗಳ ಕಾಲ ಅಮಾನತ್ತಿನಲ್ಲಿಡಲಾಗಿದೆ. ಈ ಒಂದು ತಿಂಗಳಲ್ಲೇ ರೈತ ಹೋರಾಟದ 12ನೇ ಮಹತ್ವದ ತಿಂಗಳೂ ಬರಲಿದೆ.

ಇಲ್ಲಿನ ವಿಶೇಷವೆಂದರೆ, ಇಂತಹ ದೊಡ್ಡ ನಾಯಕರು ತಮಗೆ ಸರಿಯೆನಿಸಿದ ರಾಜಕೀಯ ಅಥವಾ ತಾತ್ವಿಕ ನಿಲುವಿಗೆ ಅಂಟಿಕೊಳ್ಳುವುದು ಮತ್ತು ಅದಕ್ಕಾಗಿ ಸಮಿತಿಯ ಬಹುಮತದ ತೀರ್ಮಾನದಂತೆ ಶಿಕ್ಷೆಗೊಳಗಾಗಲು ತಯಾರಾಗುವುದು ಹಾಗೂ ಆ ನಂತರವೂ ರೈತ ಹೋರಾಟಕ್ಕೆ ಬದ್ಧತೆಯಿಂದ ಅಂಟಿಕೊಳ್ಳುವುದು. ಯೋಗೇಂದ್ರ ಯಾದವ್‌ರು ಮೃತ ಬಿಜೆಪಿ ಕಾರ್ಯಕರ್ತರ ಮನೆಗೆ ಹೋಗಬೇಕಿತ್ತೇ ಬೇಡವೇ ಎಂಬ ಚರ್ಚೆಗೆ ಇಲ್ಲಿ ಹೋಗುವುದಿಲ್ಲ. ಆದರೆ ಅದೊಂದು ತಾತ್ವಿಕ ನಿಲುವು. ಹೋರಾಟದ ಈ ಹಂತದಲ್ಲಿ ಹೋಗಬಾರದಿತ್ತು ಎಂಬುದು ಎಸ್‌ಕೆಎಂನ ಬಹುಮತದ (ಎಲ್ಲರ ಅಲ್ಲ) ನಿಲುವು. ತಮ್ಮ ನಿಲುವನ್ನು ಬದಲಿಸಿಕೊಳ್ಳಲು ಒಪ್ಪದ ಯೋಗೇಂದ್ರ ಯಾದವ್ ಶಿಕ್ಷೆಗೆ ತಯಾರಾಗಬೇಕು; ತಯಾರಾದರು. ಇಷ್ಟೇ ವಿಚಾರ.

ಯಾವುದಾದರೂ ಎರಡು ಸಂಘಟನೆಗಳನ್ನು ಒಟ್ಟುಗೂಡಿಸಿ ದೀರ್ಘಕಾಲ ಒಂದು ಚಟುವಟಿಕೆಯನ್ನು ಹಮ್ಮಿಕೊಳ್ಳುವುದೇ ಕಷ್ಟ. ಇನ್ನು ಅದನ್ನು ನಿಭಾಯಿಸುವುದು ಹೇಳತೀರದ ಸವಾಲು. ಹಾಗಿರುವಾಗ ಒಂದು ವರ್ಷ ಕಾಲ ಇಷ್ಟೆಲ್ಲಾ ಭಾರೀ ಸಂಕಷ್ಟಗಳನ್ನು ಎದುರಿಸಿ, ಬಹುಸಂಘಟನೆಗಳ ನೇತೃತ್ವದ ಒಂದು ಹೋರಾಟ ಉಳಿದುಕೊಂಡು ಬಂದಿರುವುದೇ ಒಂದು ವಿಸ್ಮಯ. ಎಸ್‌ಕೆಎಂನ ನಾಯಕತ್ವವು (ಒಳಗೆ ಇರುವ ಸೈದ್ಧಾಂತಿಕ, ರಾಜಕೀಯ, ಸಂಘಟನಾತ್ಮಕ ಹಾಗೂ ವ್ಯಕ್ತಿತ್ವಗಳ ನಡುವಿನ ಎಲ್ಲಾ ಗುದ್ದಾಟಗಳ ಹೊರತಾಗಿಯೂ) ಇದಕ್ಕಾಗಿ ಅಭಿನಂದನಾರ್ಹ. ಹಾಗೆಯೇ ತಮ್ಮ ನಿಲುವಿಗೆ ಅಂಟಿಕೊಂಡು ಶಿಕ್ಷೆ ಎದುರಿಸಲು ಸಿದ್ಧರಾಗಿರುವ ಯೋಗೇಂದ್ರ ಯಾದವ್‌ರೂ ಅಭಿನಂದನಾರ್ಹರು.

ಡಾ.ವಾಸು ಎಚ್.ವಿ

(ವೈದ್ಯರಾದ ಡಾ.ವಾಸು ಎಚ್.ವಿ ನ್ಯಾಯಪಥ ಪತ್ರಿಕೆಯ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ದಶಕಗಳ ಕಾಲ ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ)


ಇದನ್ನೂ ಓದಿ: ಸಂದರ್ಶನ; ಮುಖಂಡರಲ್ಲ, ರೈತರೇ ಈ ಆಂದೋಲನದ ನಿಜವಾದ ಚಾಲಕರಾಗಿದ್ದಾರೆ: ಯೋಗೇಂದ್ರ ಯಾದವ್

1 COMMENT

  1. ಯೋಗೇಂದ್ರ ಯಾದವ್ ಕುರಿತು ಹಲವು ಸಂಗತಿಗಳು ತಿಳಿದವು, ಅವರ ಮಾನವೀಯ ನಿಲುವು ಸ್ತುತ್ಯಾರ್ಹ..

LEAVE A REPLY

Please enter your comment!
Please enter your name here