Homeಮುಖಪುಟನಟ ಸೋನು ಸೂದ್ ಟ್ರಾಕ್ಟರ್ ಕೊಡಿಸಿದ್ದ ದಲಿತ ಕುಟುಂಬಕ್ಕೆ ರಾಜಕೀಯ ಕಿರುಕುಳ!

ನಟ ಸೋನು ಸೂದ್ ಟ್ರಾಕ್ಟರ್ ಕೊಡಿಸಿದ್ದ ದಲಿತ ಕುಟುಂಬಕ್ಕೆ ರಾಜಕೀಯ ಕಿರುಕುಳ!

"ಒಂದು ವೇಳೆ ನಾನು ದಲಿತನಾಗಿರದಿದ್ದರೆ, ಶ್ರೀಮಂತನಾಗಿದ್ದರೆ, ನನ್ನ ಆದಾಯದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೆ?" ಎಂದು ಅವರು ಪ್ರಶ್ನಿಸುತ್ತಾರೆ.

- Advertisement -
- Advertisement -

ನಟ ಸೋನು ಸೂದ್ ಅವರು ಟ್ರಾಕ್ಟರ್ ಕೊಡಿಸಿದ ಮತ್ತು ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನೆರವಿನ ಘೋಷಣೆ ಮಾಡಿದ  ಬೆನ್ನಲ್ಲೇ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದಲಿತ ರೈತ ಕುಟುಂಬಕ್ಕೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಮತ್ತು ಅಧಿಕಾರಿಗಳಿಂದ ಕಿರುಕುಳ ಆರಂಭವಾಗಿದ್ದು, ಅವರ “ಅರ್ಹತೆ” ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗುತ್ತಿದೆ.

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಕಳೆದ ವಾರ ಒಬ್ಬ ವ್ಯಕ್ತಿ ಹೊಲ ಉಳುವ ಮತ್ತು ಆತನ ಇಬ್ಬರು ಹೆಣ್ಣುಮಕ್ಕಳು ಕೈಗಳಿಂದ ನೇಗಿಲು ಎಳೆಯುವ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಕೋವಿಡ್ ಪಿಡುಗಿನ ಬಳಿಕ ಎಲ್ಲಾ ಕುಟುಂಬಗಳಂತೆ ಈ ಕುಟುಂಬವೂ ಹಣಕಾಸಿನ ಬಿಕ್ಕಟ್ಟು ಅನುಭವಿಸುತ್ತಿದ್ದು, ಅವರ ಬಳಿ ಗದ್ದೆ ಉಳಲು ಟ್ರ್ಯಾಕ್ಟರ್ ಅಥವಾ ಎತ್ತುಗಳ ಬಾಡಿಗೆ ಕೊಡಲು ಹಣವಿರಲಿಲ್ಲ. ಈ ವಿಡಿಯೋ ಹೇಗೋ ನಟ ಸೋನು ಸೂದ್ ಅವರ ಕಣ್ಣಿಗೆ ಬಿತ್ತು. ಇತ್ತೀಚಿನ ದಿನಗಳಲ್ಲಿ ಅವರು ಹಲವಾರು ಸಂದರ್ಭಗಳಲ್ಲಿ ಮಾಡಿರುವಂತೆ, ತಕ್ಷಣವೇ ಸ್ಪಂದಿಸಿದ ಸೋನು ಸೂದ್, ಈ ಕುಟುಂಬಕ್ಕೆ ನೆರವಾಗಲು ಮುಂದೆ ಬಂದರು.


ಓದಿ: ಸೋನು ಸೂದ್ ನಮ್ಮ ಪಾಲಿಗೆ ದೇವರಿದ್ದಂತೆ: ಟ್ರಾಕ್ಟರ್ ಉಡುಗೊರೆ ಪಡೆದ ರೈತನ ಕೃತಜ್ಞತೆ


ಸೋನು ಸೂದ್ ಖರೀದಿಸಿದ ಟ್ರ್ಯಾಕ್ಟರ್ ಕಳೆದ ಭಾನುವಾರ ಆ ಕುಟುಂಬದ ಮನೆಯೆದುರು ನಿಂತಿತು. ಆ ವೈರಲ್ ವಿಡಿಯೋದಲ್ಲಿದ್ದ ದಲಿತ ರೈತ ವಿ. ನಾಗೇಶ್ವರ ರಾವ್ ಆ ರಾತ್ರಿ ನೆಮ್ಮದಿಯ ನಿದ್ದೆ ಮಾಡಿದರು. ಆ ದಿನ ನೆರೆಹೊರೆಯವರು, ಸ್ಥಳೀಯ ಪತ್ರಕರ್ತರು ಅವರಿಗೆ ಶುಭಾಶಯ ಹೇಳಿದ್ದರು.

ಆದರೆ, ಮರುದಿನ ಬೆಳಿಗ್ಗೆಯೇ ಅವರ ಬಡತನದ ಬಗ್ಗೆ ಸಂಶಯ ಹುಟ್ಟಿಸುವ, ಅವರ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವ ಋಣಾತ್ಮಕ ಪ್ರತಿಕ್ರಿಯೆಗಳು ಬರಲಾರಂಭಿಸಿದವು. ಇವೆಲ್ಲವೂ ಆರಂಭವಾದುದು, ಭಾನುವಾರ ರಾತ್ರಿ ತೆಲುಗುದೇಶಂ ಪಕ್ಷದ ಮುಖ್ಯಸ್ಥ  ಚಂದ್ರಬಾಬು ನಾಯ್ಡು ಅವರು, ನಾಗೇಶ್ವರ ರಾವ್ ಅವರ ಮಕ್ಕಳಾದ ವನ್ನೆಲಾ ಮತ್ತು ಚಂದನಾ ಅವರ ಶಿಕ್ಷಣಕ್ಕೆ ನೆರವು ನೀಡುವುದಾಗಿ ಘೋಷಿಸಿದ ನಂತರ.

ಸೋಮವಾರ ಬೆಳಿಗ್ಗೆ ಕಂದಾಯ ಅಧಿಕಾರಿಗಳು ನಾಗೇಶ್ವರ ರಾವ್ ಅವರ ಮನೆಯ ಮುಂದೆ ಪ್ರತ್ಯಕ್ಷರಾದರು. ಅವರ ಹಣಕಾಸು ಪರಿಸ್ಥಿತಿ, ಅವರ ಹೆಸರಿನಲ್ಲಿ ಯಾವುದಾದರೂ ಆಸ್ತಿ ಇದೆಯೇ ಎಂಬ ಕುರಿತು ‘ತನಿಖೆ’ ನಡೆಸಿದರು.

ನಾಗೇಶ್ವರ ರಾವ್ ಅವರು ಹಿಂದೆ ನಾಗರಿಕ ಹಕ್ಕು ಹೋರಾಟದ ಕಾರ್ಯಕರ್ತರಾಗಿದ್ದರು. ಅವರು 12 ವರ್ಷಗಳಿಗೂ ಹೆಚ್ಚು ಕಾಲದಿಂದ ಚಿತ್ತೂರು ಜಿಲ್ಲೆಯ ಮದನಪಳ್ಳಿ ಪಟ್ಟಣದಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದರು. ಕೊರೋನ ಲಾಕ್‌ಡೌನ್ ಆವರ ಆದಾಯಕ್ಕೆ ಭಾರೀ ಹೊಡೆತ ನೀಡಿತು. ಅವರು ಅದೇ ಜಿಲ್ಲೆಯ ಕಂಬಂವಾರಿಪಳ್ಳಿ ಮಂಡಲದ ಮಹಲ್‌ರಾಜುಪಳ್ಳಿ ಎಂಬ ಹಳ್ಳಿಯಲ್ಲಿರುವ ತನ್ನ ಹೆತ್ತವರ ಮನೆಗೆ ಮರಳಬೇಕಾಯಿತು.

ನಾನು ಯಾವತ್ತೂ ನೆರವು ಕೇಳಿಲ್ಲ ಎಂದು ಹೇಳುವ ಅವರು ಈ ವೈರಲ್ ವಿಡಿಯೋ ಚಿತ್ರೀಕರಣವಾದ ಸಂದರ್ಭವನ್ನು ವಿವರಿಸುತ್ತಾರೆ. “ಹಿಂದಿನ ದಿನ ನಾನು ನಮ್ಮ ಹಣಕಾಸು ಸ್ಥಿತಿಯನ್ನು ಗಮನಿಸಿ, ಈ ಸಲ ಕೃಷಿ ಮಾಡುವುದು ಬೇಡ ಎಂದು ಕುಟುಂಬದವರಿಗೆ ಹೇಳಿದೆ. ಆಗ ನನ್ನ ಹೆಣ್ಣುಮಕ್ಕಳು, ಮಾರುವುದಕ್ಕಲ್ಲವಾದರೂ, ಉಣ್ಣುವುದಕ್ಕಾದರೂ ಸ್ವಲ್ಪ ಬಿತ್ತನೆ ಮಾಡಬೇಕು ಎಂದು ಒತ್ತಾಯಿಸಿದರು. ಟ್ರ್ಯಾಕ್ಟರ್ ಅಥವಾ ಎತ್ತುಗಳ ಬಾಡಿಗೆ ಹೆಚ್ಚಾಗಿರುವುದರಿಂದ ಬಾಡಿಗೆ ಕೊಡಲು ನನ್ನಲ್ಲಿ ಹಣವಿಲ್ಲವೆಂದು ನಾನು ಹೇಳಿದೆ. ಆಗ ಮಕ್ಕಳು ತಾವು ನೆರವಾಗುವುದಾಗಿ ಹೇಳಿದರು. ಆಗ ಮನೆಗೆ ಬಂದಿದ್ದ ನನ್ನ ಅಳಿಯಂದಿರು ಕೂಡಾ ತಾವೂ ನೆರವಾಗುವುದಾಗಿ ಹೇಳಿದರು” ಎಂದವರು ವಿವರಿಸುತ್ತಾರೆ.

ನಂತರ ನಡೆದ್ದೇನೆಂದರೆ, ಈ ಹುಡುಗಿಯರು ಮತ್ತವರ ಸೋದರ ಸಂಬಂಧಿಗಳು ಸರತಿಯಂತೆ ನೇಗಿಲು ಎಳೆಯಲು ಆರಂಭಿಸಿದರು. ವಯೋಸಹಜವಾಗಿ ಒಬ್ಬರು ಇನ್ನೊಬ್ಬರ ವಿಡಿಯೋ ಮಾಡಿದರು. ಹುಡುಗರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರು. ಅದು ಮಾಧ್ಯಮಗಳ ಕಣ್ಣಿಗೆ ಬಿದ್ದು, ಅವರು ನಾಗೇಶ್ವರ ರಾವ್ ಅವರನ್ನು ಸಂಪರ್ಕಿಸದೆಯೇ ತಮಗೆ ತೋಚಿದಂತೆ ವಿವರಿಸಿದ ಪರಿಣಾಮವಾಗಿ ವಿಡಿಯೋ ವೈರಲ್ ಆಯಿತು.


ಇದನ್ನೂ ಓದಿ: ಸೋನು ಸೂದ್‌ ಬಳಿ ಸಹಾಯ ಕೇಳಿದ ಮಾಜಿ ಸಚಿವ, ಹಾಲಿ BJP ಶಾಸಕ : ಕಾಂಗ್ರೆಸ್‌ ಟೀಕೆ


“ಕೆಲವರು ನಾನು ಮದನಪಳ್ಳಿ ಗ್ರಾಮೀಣ ಗ್ರಾಮದಲ್ಲಿ ಟೊಮ್ಯಾಟೋ ಬೆಳೆಯುತ್ತಿದ್ದೇನೆಂದು ಬರೆದರು. ನಾನು ಟೊಮ್ಯಾಟೋ ಬೆಳೆಯುತ್ತಲೂ ಇಲ್ಲ; ಇದು ಮದನಪಳ್ಳಿ ಗ್ರಾಮೀಣವೂ ಅಲ್ಲ” ಎಂದು ಅವರು ಮಾಧ್ಯಮಗಳ ಧಾವಂತದ ಬಗ್ಗೆ ಹೇಳುತ್ತಾರೆ.

ಈ ವಿಡಿಯೋಗೆ ಋಣಾತ್ಮಕ ಟೀಕೆಗಳೂ ಬಂದಿದ್ದವು. “ಹುಡುಗಿಯರು ದಪ್ಪಗಿದ್ದಾರೆ, ಬಿಳಿ ಇದ್ದಾರೆ, ನಗುತ್ತಿದ್ದಾರೆ, ಇದೊಂದು ನಾಟಕ” ಇತ್ಯಾದಿ ಕಮೆಂಟುಗಳೂ ಬಂದವು. ಮಕ್ಕಳಿಗೆ ಆಯಾಸ ಗೊತ್ತಾಗಬಾರದು ಎಂದು ನಾನು ಏನಾದರೂ ತಮಾಷೆ ಮಾಡುತ್ತಿದ್ದೆ ಎಂದು ಹೇಳುವ ನಾಗೇಶ್ವರ ರಾವ್, “ಅವರು ನಮ್ಮ ದೇಹ ಮತ್ತು ಬಣ್ಣದಿಂದ ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೋ?” ಎಂದು ಬಿಬಿಸಿ ತೆಲುಗು ಸಂದರ್ಶನದಲ್ಲಿ ಕೇಳಿದ್ದರು.

ಬಡತನದ ತನಿಖೆ!

ಸೋಮವಾರ ಮಂಡಲ ಕಂದಾಯ ಅಧಿಕಾರಿ (ಎಂಆರ್‌ಓ), ಮಂಡಲ ಪರಿಷತ್ತ್ ಅಭಿವೃದ್ಧಿ ಅಧಿಕಾರಿ (ಎಂಪಿಡಿಓ) ನಾಗೇಶ್ವರ ರಾವ್ ಅವರ ಮನೆಗೆ ಬಂದು, ಹಿಂದಿನ ದಿನ ಟ್ರ್ಯಾಕ್ಟರ್ ಪಡೆದಿರುವ ಹಿನ್ನೆಲೆಯಲ್ಲಿ ಅವರ ಹಣಕಾಸು ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಹೇಳಿದ್ದಾರೆ ಎಂದು ತಿಳಿಸಿದರು.

“ನಾನು ಯಾರಿಗೂ ಮೋಸ ಮಾಡಿಲ್ಲ. ಸರಕಾರದಿಂದಲೂ ಏನನ್ನೂ ಪಡೆದುಕೊಂಡಿಲ್ಲ. ಯಾರೋ ನನಗೆ ದಾನಮಾಡಿದ್ದಾರೆ. ಹೀಗಿರುವಾಗ ತನಿಖೆಯ ಅಗತ್ಯ ಏನಿದೆ?” ಎಂಬ ನಾಗೇಶ್ವರ ರಾವ್ ಅವರ ಪ್ರಶ್ನೆಯಲ್ಲಿ ನ್ಯಾಯವಿದೆ.

ಎಂಆರ್‌ಓ ತನ್ನ ಹೆಸರಲ್ಲಿ ಯಾವುದೇ ಜಾಗವಿಲ್ಲ ಎಂದು ಖಾತರಿ ಪಡಿಸುವುದರ ಜೊತೆಗೆ, ಕೆಲವು ಪೂರ್ವಗ್ರಹದ ಪ್ರಶ್ನೆಗಳನ್ನೂ ಕೇಳಿದರು ಎಂದು ಅವರು ಹೇಳುತ್ತಾರೆ.

“ಅವರು ನಾನು ಹಿಂದೊಮ್ಮೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಗ್ಗೆ, ನನ್ನ ಹಿರಿಯ ಮಗಳಿಗೆ ವೈದ್ಯಕೀಯ ಶಿಕ್ಷಣ ನೀಡುವ ಕನಸಿನ ಬಗ್ಗೆ ಮನನೋಯುವಂತಹ ಪ್ರಶ್ನೆಗಳನ್ನು ಕೇಳಿದರು. ನೀವು ನಿಜಕ್ಕೂ ಬಡವರಾಗಿದ್ದರೆ ಚುನಾವಣೆಗೆ ಹೇಗೆ ಸ್ಪರ್ಧಿಸಿದಿರಿ? ಮಗಳಿಗೆ ಅಷ್ಟು ದುಬಾರಿ ಶಿಕ್ಷಣ ಕೊಡಿಸುವ ಬಗ್ಗೆ ಹೇಗೆ ಯೋಚಿಸಿದಿರಿ? ಇತ್ಯಾದಿಯಾಗಿ ಅವರು ಕೇಳಿದರು” ಎಂದವರು ವಿವರಿಸುತ್ತಾರೆ.

2009ರಲ್ಲಿ ತಾನು ಜಯ ಪ್ರಕಾಶ್ ನಾರಾಯಣ್ ಅವರ ಲೋಕಸತ್ತಾ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು ಹೌದಾದರೂ, ಅಂತಹ ಪಕ್ಷಗಳಿಂದ ಸ್ಪರ್ಧಿಸಲು ಹಣವೇನೂ ಬೇಕಾಗಿಲ್ಲ ಎಂದು ಹೇಳುವ ಅವರು, ತಾನು ಬಡವನಾಗಿದ್ದು ಕನಸು ಕಾಣುವುದು ಕೂಡಾ ತಪ್ಪೇ ಎಂದವರು ಕೇಳುತ್ತಾರೆ.

ರಾಜಕೀಯದ ಅಡಕತ್ತರಿಯಲ್ಲಿ…

ಚಂದ್ರಬಾಬು ನಾಯ್ಡು ಅವರು ನೆರವು ಘೋಷಿಸಿದ ತಕ್ಷಣದಿಂದ ಅವರ ವಿರೋಧಿಯಾದ ಆಡಳಿತ ಪಕ್ಷವಾದ ವೈಆರ್‌ಎಸ್‌ಸಿಪಿಯ ಕಾರ್ಯಕರ್ತರು ಅವರ ಹಿಂದೆ ಬಿದ್ದಿದ್ದಾರೆ. ಅವರು ರೈತರೂ ಅಲ್ಲ, ಬಡವರೂ ಅಲ್ಲ, ಅವರ ಹೆತ್ತವರು ಸರಕಾರದ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ, ಕಿರಿಯ ಮಗಳು “ಅಮ್ಮ ವೋದಿ” ಯೋಜನೆಯಲ್ಲಿ ಶಾಲೆಯ ಶುಲ್ಕ ವಿನಾಯಿತಿ ಪಡೆದಿದ್ದಾಳೆ ಇತ್ಯಾದಿಯಾಗಿ ಹೇಳಲಾಗುತ್ತಿದೆ.

ಮುಖ್ಯಮಂತ್ರಿ ಜಗನ್ ಕುಟುಂಬದ ಮಾಲಕತ್ವದ ಸಾಕ್ಷಿ ಮೀಡಿಯಾ ಪ್ರತ್ಯಕ್ಷವಾಗಿಯೇ ಆಡಳಿತ ಪಕ್ಷವಾದ ವೈಆರ್‌ಎಸ್‌ ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಅದೂ ಕೂಡ ನಾಗೇಶ್ವರ ರಾವ್ ಅವರ ವಿರುದ್ಧ ಇಂತಹಾ ಪ್ರಚಾರದಲ್ಲಿ ತೊಡಗಿದೆ.

ಎಲ್ಲರಿಗೂ ಸಿಗುವಂತದ್ದನ್ನು ತಾನು ಪಡೆದಿದ್ದೇನೆ; ಇದರಲ್ಲಿ ವಿಶೇಷವೇನಿದೆ ಎನ್ನುವ ನಾಗೇಶ್ವರ ರಾವ್ ಅವರು, ತಾನು ತೆಲುಗುದೇಶಂ ಪಕ್ಷದ ಸದಸ್ಯನೂ ಅಲ್ಲ ಎನ್ನುತ್ತಾರೆ. ವಾಸ್ತವವಾಗಿ ಅವರು ತೆಲುಗುದೇಶಂ ಆಡಳಿತದ ವೇಳೆ ದಬ್ಬಾಳಿಕೆಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಚಂದ್ರಬಾಬು ನಾಯ್ಡು ಅವರ ಮೇಲೆ 2003 ರಲ್ಲಿ ಆಲಿಪಿರಿ ಎಂಬಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅವರನ್ನು ಬಂಧಿಸಿಯೂ ಇದ್ದರು.

“ಒಂದು ವೇಳೆ ನಾನು ದಲಿತನಾಗಿರದಿದ್ದರೆ, ಶ್ರೀಮಂತನಾಗಿದ್ದರೆ, ನನ್ನ ಆದಾಯದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೆ?” ಎಂದು ಅವರು ಬಿಬಿಸಿ ತೆಲುಗು ಸಂದರ್ಶನದಲ್ಲಿ ಕೇಳಿದ್ದ ಪ್ರಶ್ನೆ ಯೋಚನೆಗೆ ಅರ್ಹವಾಗಿವೆ.


ಓದಿ: ಸೋನು ಸೂದ್‌ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್‌


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಂಧ್ರಪ್ರದೇಶ: 7 ಮತಗಟ್ಟೆಗಳಲ್ಲಿ ಇವಿಎಂ ಧ್ವಂಸ ಮಾಡಿದ ಶಾಸಕ

0
ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ನೆಲಕ್ಕೆ ಎಸೆದು ಒಡೆದು ಹಾಕಿರುವ ಘಟನೆಯ ವಿಡಿಯೋ ವೈರಲ್‌ ಆಗಿದೆ. ಇದೇ ರೀತಿ 7 ಮತಗಟ್ಟೆಗಳಲ್ಲಿ ಶಾಸಕ ಇವಿಎಂ ಯಂತ್ರವನ್ನು...