Homeಮುಖಪುಟಸಾಂಕ್ರಾಮಿಕ ಪಿಡುಗು ಸಮಯದಲ್ಲಿಯೂ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ

ಸಾಂಕ್ರಾಮಿಕ ಪಿಡುಗು ಸಮಯದಲ್ಲಿಯೂ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ

ಪರಿಸರದ ವಿರುದ್ಧ ನಾವು ಸಾರಿರುವ ಈ ಯುದ್ಧದಲ್ಲಿ ನಾವು ಗೆದ್ದದ್ದೇ ಆದರೆ ಅದೇ ನಮ್ಮ ಸೋಲಿಗೆ ಸೋಪಾನ, ನಾವು ಪರಿಸರವನ್ನು ಗೆಲ್ಲಲು ಬಿಟ್ಟರೆ ಅದು ನಮ್ಮ ಗೆಲುವು ಕೂಡ!

- Advertisement -
- Advertisement -

ಕೊರೊನಾ ಪಿಡುಗಿನ ದೆಸೆಯಿಂದ ದೇಶಾದ್ಯಂತ ಲಾಕ್‍ಡೌನ್ ಆಗಿ ಕೆಲವಾರಗಳಷ್ಟೇ ಕಳೆದಿತ್ತು, ಆಗಷ್ಟೇ ಈ ದಿಗ್ಬಂಧನದಿಂದ ಹೇಗೆ ಪರಿಸರ ಮತ್ತು ವನ್ಯಜೀವಿಗಳಿಗೆ ತಾತ್ಕಾಲಿಕವಾಗಿಯಾದರೂ ಅನುಕೂಲಗಳಾಗಿವೆ ಎಂಬ ಸುದ್ದಿಗಳು ಒಂದೊಂದಾಗಿ ಬರುತ್ತಿದ್ದವು. ಅದೇ ಸಮಯಕ್ಕೆ ಸರಿಯಾಗಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಭೆಯ ನಂತರ ಅತ್ಯಂತ ಹೆಮ್ಮೆಯಿಂದ, ಹೇಗೆ ತಾವು 11 ರಾಜ್ಯಗಳನ್ನು ಸಂರಕ್ಷಿತ ಪ್ರದೇಶಗಳಲ್ಲಿ ಅನೇಕ ಯೋಜನೆಗಳಿಗೆ ಅನುಮೋದನೆ ನೀಡಿದೆವು ಎಂದು ಟ್ವೀಟ್ ಮಾಡಿದ್ದರು!

ನಮ್ಮ ದೇಶದ ಒಟ್ಟು ಭೂಪ್ರದೇಶದ ಸುಮಾರು 5%ಕ್ಕೂ ಕಡಿಮೆ ಇರುವ, ವನ್ಯಜೀವಿಗಳಿಗೆ ಆವಾಸವಾಗಿರುವ ಸಂರಕ್ಷಿತ ಪ್ರದೇಶಗಳ ಹಿತವನ್ನು ಕಾಯುವುದೇ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಘನ ಉದ್ದೇಶಗಳಲ್ಲಿ ಒಂದು. ಆದರೆ ಮಂತ್ರಿಗಳ ಈ ಒಂದು ಟ್ವೀಟ್ ಆ ಆಶಯವನ್ನೇ ಬುಡಮೇಲು ಮಾಡಿತ್ತು. ಜೀವವೈವಿಧ್ಯದ ನಾಶವು ಅನೇಕ ಸಾಂಕ್ರಾಮಿಕ ಪಿಡುಗುಗಳಿಗೆ ನಾಂದಿ ಹಾಡಬಹುದು ಎಂಬ ವೈಜ್ಞಾನಿಕ ಸುದ್ದಿಯು, ಆಳುವ ವರ್ಗದಲ್ಲಿ ಪರಿಸರ ಮತ್ತು ವನ್ಯಜೀವಿಗಳ ಕುರಿತ ಯೋಚನಾಲಹರಿಯಲ್ಲಿ ಏನಾದರೂ ಒಳ್ಳೆಯ ಬದಲಾವಣೆ ತರಬಹುದು ಎಂಬ ಸಣ್ಣ ಆಶಾಭಾವವೊಂದನ್ನು ಬಹುತೇಕ ಪರಿಸರಪ್ರಿಯರಲ್ಲಿ ಹುಟ್ಟುಹಾಕಿತ್ತು. ಆದರೆ ಮಂತ್ರಿಗಳ ಈ ಒಂದು ಸಂದೇಶ, ಈ ಆಶಾಭಾವ ಕೇವಲ ಒಂದು ರಮ್ಯ ಕಲ್ಪನೆಯಷ್ಟೇ ಎಂದು ಮುಖಕ್ಕೆ ರಾಚುವಂತೆ ಸ್ಪಷ್ಟಪಡಿಸಿತ್ತು. ಅಷ್ಟೇಅಲ್ಲದೆ ಇಂತಹ ಸಂಕಷ್ಟದ ಸಮಯದಲ್ಲಿ ಜನರ ಗಮನ ಬೇರೆಡೆ ಇರುವಾಗ ಹಿಂಬಾಗಿಲಿನಿಂದ ಪರಿಸರಕ್ಕೆ ವಿನಾಶಕಾರಿಯಾದ ಯೋಜನೆಗಳಿಗೆ ಅವಸರದಲ್ಲಿ ಕೊಟ್ಟ ಅನುಮೋದನೆಯು ಮುಂಬರುವ ದುರಂತ ದಿನಗಳ ಕೈಗನ್ನಡಿ ಕೂಡ ಆಗಿತ್ತು.

ಮೇಲಿನ ಘಟನೆಯು ಕೇವಲ ಒಂದು ಉದಾಹರಣೆಯಷ್ಟೇ. ನಾವು ಕಳೆದ 6 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗಮನಿಸುತ್ತಾ ಬಂದರೆ ಭಾರತದ ಪರಿಸರಕ್ಕೆ ಸಂಬಂಧಿಸಿದ ಕಾನೂನುಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಾ ಬರಲಾಗಿದೆ ಮತ್ತು ಆ ಪ್ರಕ್ರಿಯೆ ಇನ್ನು ಮುಂದೆ ಕೂಡಾ ಜಾರಿಯಲ್ಲಿರುತ್ತದೆ. ಈ ಮುಂಚೆ ಭಾರತದ ಪರಿಸರ ಸಂಬಂಧಿ ಕಾನೂನುಗಳು ಸಾಕಷ್ಟು ಪರಿಣಾಮಕಾರಿಯಾಗಿಯೇ ಇದ್ದವು. ತಳಮಟ್ಟದಲ್ಲಿ ಅವು ಸಮರ್ಪಕವಾಗಿ ಕಾರ್ಯಗತವಾಗದಿದ್ದರೂ ಕೂಡ ಅವು ಕಾನೂನಾತ್ಮಕವಾಗಿ ವನ್ಯಜೀವಿಗಳು ಮತ್ತು ಒಟ್ಟಾರೆ ಪರಿಸರದ ರಕ್ಷಣೆಗೆ ಅನೇಕ ಮಾರ್ಗಗಳನ್ನು ಹಾಕಿಕೊಟ್ಟಿದ್ದವು. ಆದರೆ ಈ ಕಾನೂನುಗಳನ್ನು ಒಂದೊಂದಾಗಿ ದುರ್ಬಲಗೊಳಿಸುವ ಮತ್ತು ಅಪ್ರಸ್ತುತಗೊಳಿಸುವ ಪ್ರಯತ್ನ ಕಳೆದ ಆರು ವರ್ಷಗಳಿಂದ ಸಾಗುತ್ತಲೇ ಇದೆ.

ಈ ಮುಂಚೆ ವನ್ಯಜೀವಿ ಮತ್ತದರ ಆವಾಸಗಳು ಸುರಕ್ಷಿತವಾಗಿದ್ದವೇ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುತ್ತದೆ. ಆಗಲೂ ಕಾಲಕಾಲಕ್ಕೆ ಅವುಗಳಿಗೆ ಸಂಕಷ್ಟವೊದಗಿ ಬರುತ್ತಲೇ ಇತ್ತು ಆದರೆ ಎಲ್ಲಿಯೂ ಸಾರಾಸಗಟಾಗಿ ಅವುಗಳಿಗೆ ರಕ್ಷಾಕವಚದಂತಿದ್ದ ಕಾನೂನನ್ನೇ ದುರ್ಬಲಗೊಳಿಸುವ ಪ್ರಯತ್ನ ಈ ಪ್ರಮಾಣದಲ್ಲಿ ನಡೆದಿರಲಿಲ್ಲ. ಸಂರಕ್ಷಿತ ಪ್ರದೇಶಗಳ ಸುತ್ತ ಕೈಗೊಳ್ಳುವ ಯೋಜನೆಗಳಲ್ಲಿ ಆ ಪ್ರದೇಶದ ಜನರ ಅಭಿಪ್ರಾಯ ಮತ್ತು ಹಿತಾಸಕ್ತಿ ತುಂಬಾ ಮುಖ್ಯವಾಗಿರುತ್ತದೆ, ಏಕೆಂದರೆ ಭವಿಷ್ಯದಲ್ಲಿ ಆ ಯೋಜನೆಯ ಪರಿಣಾಮಗಳನ್ನು ಅನುಭವಿಸುವವರು ಅವರೇ ಆಗಿರುತ್ತಾರೆ. ಅದು ಮಾನವ ವನ್ಯಜೀವಿ ಸಂಘರ್ಷದ ಮೂಲಕವೇ ಇರಬಹುದು, ಆಯಾ ಯೋಜನೆಯ ಮಾಲಿನ್ಯದ ದುಷ್ಪರಿಣಾಮವೇ ಇರಬಹುದು ಅಥವಾ ಆ ಯೋಜನೆಯ ಪರಿಣಾಮವಾಗಿ ಅವರು ನಿರ್ವಸತಿಗೂ ಒಳಗಾಗಬಹುದು. ಆದರೆ ವ್ಯವಸ್ಥಿತವಾಗಿ ಇಂತಹ ಯೋಜನೆಗಳ ಕುರಿತು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಜನರ ಪಾತ್ರವನ್ನು ಕಡಿತಗೊಳಿಸುತ್ತಾ ಬರಲಾಗುತ್ತಿದೆ.

ನಮ್ಮ ದೇಶದಲ್ಲಿ ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸುವ ಮುಂಚೆ ಅದರಿಂದ ಪರಿಸರದ ಮೇಲೆ ಉಂಟಾಗುವ ಅಧ್ಯಯನ ಮಾಡಬೇಕಾಗುತ್ತದೆ. ಅದರ ವರದಿಯನ್ನು ಸಾರ್ವಜನಿಕರ ಅಹವಾಲಿಗೆ ಇಟ್ಟು ಅದರ ಕುರಿತ ಆಕ್ಷೇಪಣೆಗಳೇನಾದರೂ ಇದ್ದರೆ ಅದನ್ನು ಸಲ್ಲಿಸಬಹುದಾಗಿದೆ. ಇಲ್ಲಿ ಒಟ್ಟಾರೆಯಾಗಿ ಜನರ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯವಾದ ಘಟ್ಟವಾಗಿದೆ. ಇದಕ್ಕೆ ಒಂದು ಉದಾಹರಣೆಯನ್ನು ಕೊಡಬೇಕಾದರೆ ಸುಮಾರು ಆರೇಳು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 209 ವಿಸ್ತರಣೆಯ ಕುರಿತ ಸಾರ್ವಜನಿಕ ಸಭೆಯನ್ನು ಕರೆಯಲಾಗಿತ್ತು. ಅಷ್ಟೊತ್ತಿಗಾಗಲೇ ಅನೇಕ ಸುಳ್ಳು ಮಾಹಿತಿಗಳನ್ನು ಒಳಗೊಂಡ ಪರಿಸರ ಪರಿಣಾಮದ ಅಧ್ಯಯನದ ವರದಿಯನ್ನೂ ಬಿಡುಗಡೆ ಮಾಡಲಾಗಿತ್ತು. ಹೆದ್ದಾರಿಯು ಸ್ಪಷ್ಟವಾಗಿ BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುತ್ತಿದ್ದರೂ, ವರದಿಯಲ್ಲಿ 10 ಕಿಮೀ ಒಳಗಡೆ ಯಾವುದೇ ಸಂರಕ್ಷಿತ ಪ್ರದೇಶ ಬರುವುದಿಲ್ಲ ಎಂದು ಉಲ್ಲೇಖಿಸಲಾಗಿತ್ತು. ನಾವು ಆ ವರದಿಯ ಪ್ರತಿ ಮತ್ತು ನಮ್ಮ ಆಕ್ಷೇಪಣೆಗಳನ್ನು ಒಳಗೊಂಡ ಪತ್ರವನ್ನು ಅಲ್ಲಿ ಸಲ್ಲಿಸಿದೆವು. ಆಗ ಅದನ್ನು ಪರಿಗಣಿಸಿ ಆ ಯೋಜನೆಯ ಪರಿಸರ ಪರಿಣಾಮದ ವರದಿಯನ್ನು ಬದಲಾಯಿಸಲಾಯಿತು ಮತ್ತು ಹುಲಿ ಸಂರಕ್ಷಿತ ಪ್ರದೇಶದ ಒಳಗಡೆ ಹೆದ್ದಾರಿಯ ವಿಸ್ತರಣೆಯನ್ನು ಕೈಬಿಡಲಾಯಿತು. ಇದು ಜನರ ಪಾಲ್ಗೊಳ್ಳುವಿಕೆಗೆ ನಮ್ಮ ಕಾನೂನಿನಲ್ಲಿ ಇದ್ದ ಅವಕಾಶಗಳ ಸ್ಪಷ್ಟ ಉದಾಹರಣೆ. ಆದರೆ ಇದೇ ಲಾಕ್‍ಡೌನ್ ಸಮಯದಲ್ಲಿ ಪ್ರಸ್ತುತ ಕೇಂದ್ರ ಸರ್ಕಾರ, ಪರಿಸರ ಪರಿಣಾಮಗಳ ಅಧ್ಯಯನ ಕಾಯ್ದೆ (Environmental  Impact  Assesment) – 2020ರ ಕರಡನ್ನು ಬಿಡುಗಡೆಗೊಳಿಸಿದೆ. ಅದರ ಪ್ರಕಾರ ಯಾವುದೇ ರಸ್ತೆಯು 100 ಕಿಮೀಗಿಂತ ಕಡಿಮೆ ಇದ್ದರೆ ಅದಕ್ಕೆ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸುವ ಅವಶ್ಯಕತೆ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಒಂದು ವೇಳೆ ರಾಷ್ಟ್ರೀಯ ಹೆದ್ದಾರಿ 209 ರ ವಿಸ್ತರಣೆ ಈ ಕಾಯ್ದೆ ಅನುಮೋದನೆಯಾದ ಮೇಲೆ ಜಾರಿಯಾಗುತ್ತಿದ್ದರೆ ನಮಗೆ ಅದರ ಕುರಿತು ಆಕ್ಷೇಪಣೆ ಸಲ್ಲಿಸುವ ಅವಕಾಶವೇ ಇರುತ್ತಿರಲಿಲ್ಲ ಮತ್ತು ಅವರ ಸುಳ್ಳು ವರದಿಯನ್ನು ಬಯಲಿಗೆಳೆಯಲು ಆಗುತ್ತಲೂ ಇರಲಿಲ್ಲ.

ಈ ಹೊಸ ಕಾಯ್ದೆಯ ಮೂಲ ಉದ್ದೇಶವೇ ಕೈಗಾರಿಕೆಗಳಿಗೆ ಇದ್ದ ಅಡೆತಡೆಗಳನ್ನು ಕಡಿಮೆ ಮಾಡುವುದಾಗಿದೆ. ಇದನ್ನು ಸಾಧಿಸಲು ಆಯ್ದುಕೊಂಡ ಮಾರ್ಗಗಳೆಂದರೆ, ಆದಷ್ಟು ಜನರ ಪಾಲ್ಗೊಳ್ಳುವಿಕೆಯನ್ನು ಕಡಿಮೆ ಮಾಡುವುದು, ಈಗಾಗಲೇ ಅಕ್ರಮವೆಸಗಿ ಅನುಮತಿಯಿಲ್ಲದೇ ಕೆಲಸವನ್ನು ಆರಂಭಿಸಿದ್ದರೆ ಅದಕ್ಕೆ ಅನುಮತಿ ನೀಡಿ ಸಕ್ರಮಗೊಳಿಸಲು ಅವಕಾಶ ನೀಡುವುದು. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಒಳನಾಡು ಜಲಸಾರಿಗೆ, 50000 ಚದರ ಮೀಟರ್‍ನಷ್ಟು ವಿಸ್ತೀರ್ಣದ ಕಟ್ಟಡ ನಿರ್ಮಾಣ ಮತ್ತು ಅನೇಕ ಕಿರುಜಲ ವಿದ್ಯುತ್ ಯೋಜನೆ ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ಕಿರು ಯೋಜನೆಗಳಿಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯನ್ನೇ ಕೈಬಿಡಲಾಗಿದೆ. ಹೀಗಾಗಿ ವರದಿಗಳಲ್ಲಿ ಉದ್ದೇಶಪೂರ್ವಕವಾಗಿಯೇ ತಪ್ಪುಗಳನ್ನು ಮಾಡಿದ್ದರೂ ಕೂಡ ಅವು ಬೆಳಕಿಗೆ ಬರುವುದೇ ಇಲ್ಲ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ನಿಯಮಗಳಂತೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳು ಮತ್ತು ಅಭಿವೃದ್ಧಿಗೆ ಪ್ರಮುಖವಾದ ಯೋಜನೆಗಳಿಗೂ ವಿನಾಯಿತಿ ನೀಡಲಾಗಿದೆ. ಇಲ್ಲಿ ಮುಖ್ಯವಾದ ಅಂಶವೆಂದರೆ ಅಭಿವೃದ್ಧಿಗೆ ಪೂರಕವಾದ ಪ್ರಮುಖ ಯೋಜನೆಗಳು ಯಾವವು ಎಂಬ ಸ್ಪಷ್ಟನೆಯೇ ಇಲ್ಲ. ಒಟ್ಟಾರೆಯಾಗಿ ಈ ತಿದ್ದುಪಡಿಗಳನ್ನು ಯೋಜನೆಗಳಿಗೆ ಅನುಮತಿಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪಡೆಯಲು ಮಾಡಿದಂತಿವೆ. ಅದರಿಂದ ಉಂಟಾಗುವ ಪರಿಣಾಮಗಳ ಅಧ್ಯಯನಕ್ಕೆ ಇಲ್ಲಿ ಅತ್ಯಂತ ಕಡಿಮೆ ಒತ್ತು ಕೊಡಲಾಗಿದೆ.

ಭೂಪ್ರದೇಶಗಳಷ್ಟೇ ಅಲ್ಲ ನಮ್ಮ ಕರಾವಳಿ ಮತ್ತು ಸಾಗರದ ಪರಿಸರ ವ್ಯವಸ್ಥೆಯ ಸಂರಕ್ಷಣೆಗೆ ಇದ್ದ ಕಾನೂನುಗಳನ್ನೂ ದುರ್ಬಲಗೊಳಿಸಲಾಗುತ್ತಿದೆ. ಸಮುದ್ರದ ದಡದಲ್ಲಿ ರಿಯಲ್ ಎಸ್ಟೇಟ್ ಉದ್ಯಮ, ಪ್ರವಾಸೋದ್ಯಮ, ಬಂದರು ನಿರ್ಮಾಣ ಮತ್ತು ಕೈಗಾರಿಕೆಗಳಿಗೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲು Coastal Regulation Zone 2018 ತಿದ್ದುಪಡಿಗಳನ್ನು ಮಾಡಲಾಗಿದೆ. ಇದರಿಂದ ಸಾಗರಗಳ ರಕ್ಷಣಾ ಗೋಡೆಯಂತಿದ್ದ ಮ್ಯಾಂಗ್ರೋವ್ ಕಾಡು ಅಥವಾ ಕಾಂಡ್ಲ ವನಗಳಿಗೆ ಸಂಕಷ್ಟ ಎದುರಾಗಲಿದೆ. ಅಷ್ಟೇ ಅಲ್ಲದೆ ಸಮುದ್ರದ ದಡದಲ್ಲಿ ಎಗ್ಗಿಲ್ಲದೆ ನಿರ್ಮಾಣಗಳಿಗೆ ಅವಕಾಶ ಕೊಟ್ಟು ಜನರ ಜೀವದ ಜೊತೆಯೂ ಚೆಲ್ಲಾಟವಾಡಲಾಗುತ್ತಿದೆ. ಸಾಗರಕ್ಕೆ ತೀರಾ ಹತ್ತಿರವಾಗಿ ಜನರ ವಸತಿ ಕಟ್ಟಡಗಳ ಎತ್ತರವನ್ನು ಏರಿಸುವ ಪ್ರಸ್ತಾಪವೂ ಇದೆ. ಇದು ಜಾರಿಯಾದದ್ದೇ ಆದರೆ ಸುನಾಮಿ ಮತ್ತು ಕಡಲ್ಕೊರೆತದಂತಹ ಸನ್ನಿವೇಶದಲ್ಲಿ ಉಂಟಾಗುವ ಅನಾಹುತಗಳನ್ನು ಊಹಿಸಲೂ ಆಗುವುದಿಲ್ಲ. ಜಗತ್ತಿನಾದ್ಯಂತ ಸಮುದ್ರದ ಮಟ್ಟದ ಏರಿಕೆ, ಸುನಾಮಿಯ ಆತಂಕ ಮತ್ತು ಒಳನಾಡಿನ ಸಿಹಿನೀರಿನ ಮೂಲಗಳು ಉಪ್ಪಾಗಿ ಪರಿಣಮಿಸುತ್ತಿರುವುದು ಎಲ್ಲೆಡೆ ಚರ್ಚೆಗೆ ಒಳಗಾಗುತ್ತಿವೆ. ಇವೆಲ್ಲದರಿಂದ ಪಾರಾಗುವುದು ಹೇಗೆ ಎಂದು ಗಂಭೀರವಾಗಿ ಆಲೋಚಿಸಲಾಗುತ್ತಿದೆ ಆದರೆ ಇಲ್ಲಿ ಪ್ರಸ್ತುತ ಸರ್ಕಾರದ ಯೋಜನೆಗಳು ಮತ್ತು ನಿಯಮಗಳು ಇದಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿವೆ. ಸಮುದ್ರದ ತಡೆಗೋಡೆಯಂತೆ ಇರುವ ಕಾಂಡ್ಲವನಗಳನ್ನು ನಾಶಗೊಳಿಸಿ ನಾವು ಎಲ್ಲೆಡೆ ಬಂದರುಗಳನ್ನು, ಕೈಗಾರಿಕೆಗಳನ್ನು ನಿರ್ಮಿಸಿದ್ದೇ ಆದರೆ ನಾವು ಪರಿಸರ ವ್ಯವಸ್ಥೆಯನ್ನಷ್ಟೇ ಅಲ್ಲ, ಕರಾವಳಿಯ ಜನರ ಜೀವನ ಮತ್ತು ಜೀವನೋಪಾಯವನ್ನೂ ಕಸಿಯಲಿದ್ದೇವೆ. ಅಲ್ಪಾವಧಿ ಲಾಭಕ್ಕೆ ನಾವು ಜನರ ಹಿತಾಸಕ್ತಿಯನ್ನೇ ಬಲಿಕೊಡುತ್ತಿದ್ದೇವೆ.

ಇತ್ತೀಚೆಗಷ್ಟೇ ಕಲ್ಲಿದ್ದಲು ಗಣಿಗಳನ್ನು ಖಾಸಗೀಕರಣಗೊಳಿಸುವ ಯೋಜನೆಯನ್ನು ಮಾನ್ಯ ಪ್ರಧಾನಮಂತ್ರಿಗಳೇ ಘೋಷಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಇಡೀ ಜಗತ್ತೇ ಕಲ್ಲಿದ್ದಲನ್ನು ಬದಿಗಿರಿಸಿ ಸ್ವಚ್ಛ ಇಂಧನಗಳತ್ತ ಮುಖಮಾಡುತ್ತಿದೆ. ಹಾಗಿರುವಾಗ ನಾವು ಕಲ್ಲಿದ್ದಲಿನ ಮೇಲೆ ಅವಲಂಬನೆ ಹೆಚ್ಚಿಸುವುದರಿಂದ ನಾವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಅಷ್ಟೇಅಲ್ಲದೆ ಈ ಕಲ್ಲಿದ್ದಲನ್ನು ತೆಗೆಯಲು ನಾವು ಮಧ್ಯ ಮತ್ತು ಈಶಾನ್ಯ ಭಾರತದ ದಟ್ಟ ಅರಣ್ಯಗಳನ್ನು ನಾಶಮಾಡಬೇಕಾಗುತ್ತದೆ. ಈ ಅರಣ್ಯಗಳಲ್ಲಿ ಹಿಂದಿನ ಸರ್ಕಾರವು ಸಂರಕ್ಷಿಸಿದ್ದ ಛತ್ತೀಸ್‍ಗಡದ ಅರಣ್ಯಗಳನ್ನು ಒಳಗೊಂಡ ಹಾಸ್ದೇವ್ ಆರಂಡ್ ಅರಣ್ಯವೂ ಸೇರಿದೆ. ಈ ಪ್ರದೇಶವು ಅತ್ಯಂತ ದಟ್ಟವಾದ ಅರಣ್ಯಗಳಿಂದ ಕೂಡಿದ್ದು ಮಧ್ಯ ಭಾರತದಲ್ಲಿ ಪ್ರಮುಖವಾದ ಆನೆಗಳ ಕಾರಿಡಾರ್ ಕೂಡ ಆಗಿದೆ.

ನಿಮಗೆ ನೆನಪಿರಬಹುದು 2018ರಲ್ಲಿ ನಮ್ಮ ದೇಶದ ಪ್ರಧಾನಿಗಳಿಗೆ ವಿಶ್ವಸಂಸ್ಥೆಯು “ಚಾಂಪಿಯನ್ ಆಫ್ ಅರ್ಥ್” ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು. ಅದಕ್ಕೆ ದೊಡ್ಡ ಕಾರ್ಪೊರೆಟ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರವನ್ನೂ ನೀಡಲಾಯಿತು. ಆದರೆ ವಸ್ತುಸ್ಥಿತಿ ಮಾತ್ರ ಅದಕ್ಕೆ ತದ್ವಿರುದ್ಧವಾಗಿದೆ. ದೇಶದ ಪರಿಸರ ಕಾನೂನುಗಳನ್ನು ದುರ್ಬಲಗೊಳಿಸುವ ಪ್ರಯತ್ನ ಇಷ್ಟು ವ್ಯವಸ್ಥಿತವಾಗಿ ನಡೆಯುತ್ತಿದ್ದರೂ ಅದು ಹೆಚ್ಚಿನ ಜನರಿಗೆ ತಿಳಿಯದೆ ಇರುವುದು ನಿಜಕ್ಕೂ ದುರದೃಷ್ಟಕರ. ನಿಮಗೆ ನೆನಪಿರಲಿ, ಇವೆಲ್ಲ ಬದಲಾವಣೆಗಳನ್ನೂ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ಮಾಡಲಾಗುತ್ತಿದೆ. ಆದರೆ ನಾವು ಕಳೆದ ದಶಕದ ಅಂಕಿಅಂಶ ನೋಡಿದ್ದೇ ಆದರೆ ನೆರೆ ಮತ್ತು ಬರ ಪರಿಹಾರಗಳಿಗೆ ವಿನಿಯೋಗವಾಗುವ ಹಣದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಭಾರತ ಪ್ರತಿವರ್ಷ ನೈಸರ್ಗಿಕ ವಿಪತ್ತುಗಳಿಂದ ಸುಮಾರು 10 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸುತ್ತಿದೆ, ಅಂದರೆ ಸುಮಾರು 75 ಸಾವಿರ ಕೋಟಿ ರೂಪಾಯಿಗಳು! ಇನ್ನು ಇದರಿಂದ ಉಂಟಾದ ಪರಿಸರ ನಾಶ, ಭೂಕುಸಿತ ಮತ್ತು ಜನರ ಜೀವಹಾನಿಗೆ ಬೆಲೆಯನ್ನೂ ಕಟ್ಟಲಾಗದು. ಹಾಗಿದ್ದ ಮೇಲೆ ಈ ಎಲ್ಲ ‘ಅಭಿವೃದ್ಧಿ’ ಯಾರಿಗಾಗಿ ಎಂಬ ಪ್ರಶ್ನೆ ಬರದೇ ಇರದು.

ಒಂದು ವಿಷಯವನ್ನು ನಾವು ನೆನಪಿನಲ್ಲಿ ಇಡಬೇಕು, ಪರಿಸರದ ವಿರುದ್ಧ ನಾವು ಸಾರಿರುವ ಈ ಯುದ್ಧದಲ್ಲಿ ನಾವು ಗೆದ್ದದ್ದೇ ಆದರೆ ಅದೇ ನಮ್ಮ ಸೋಲಿಗೆ ಸೋಪಾನ, ನಾವು ಪರಿಸರವನ್ನು ಗೆಲ್ಲಲು ಬಿಟ್ಟರೆ ಅದು ನಮ್ಮ ಗೆಲುವು ಕೂಡ!

  • ಗುರುಪ್ರಸಾದ್ ತಿಮ್ಮಾಪುರ, ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರು.

ಇದನ್ನು ಓದಿ: ರೈಲ್ವೇ ಖಾಸಗೀಕರಣಕ್ಕೆ ಚಾಲನೆ: ಮುಂದಿನ ಕರಾಳ ದಿನಗಳಿಗೆ ಹಸಿರು ನಿಶಾನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಕಸ್ಟಡಿ ಅವಧಿ ಮೇ 31ರವರೆಗೆ ವಿಸ್ತರಿಸಿದ...

0
ದೆಹಲಿ ಮದ್ಯದ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 31 ರವರೆಗೆ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಮಂಗಳವಾರ ವಿಸ್ತರಿಸಿದೆ. ಫೆಬ್ರವರಿ 26,...