Homeಮುಖಪುಟ”ರಾಮ ಮತ್ತು ಅಲ್ಲಾ ನಡುವೆ ಯಾವುದೇ ವ್ಯತ್ಯಾಸವಿಲ್ಲ": ಸದ್ದಾಂ ಹುಸೇನ್‌

”ರಾಮ ಮತ್ತು ಅಲ್ಲಾ ನಡುವೆ ಯಾವುದೇ ವ್ಯತ್ಯಾಸವಿಲ್ಲ”: ಸದ್ದಾಂ ಹುಸೇನ್‌

- Advertisement -
- Advertisement -

ಸುಪ್ರೀಂಕೋರ್ಟ್‌ ನೀಡಿರುವ ಅಯೋಧ್ಯೆ ತೀರ್ಪನ್ನು ಇಡೀ ದೇಶವೇ ಗೌರವಿಸಿದೆ. ಕೆಲ ಭಿನ್ನಾಭಿಪ್ರಾಯ, ಮುನಿಸಿನ ಮಧ್ಯೆಯೂ ಸುಪ್ರೀಂ ತೀರ್ಪಿಗೆ ಎಲ್ಲರೂ ತಲೆಬಾಗಿದ್ದಾರೆ. ಆದರೆ ಕೆಲವರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ಶಾಂತಿ, ನೆಮ್ಮದಿಯಿಂದ ನಾವೆಲ್ಲಾ ಒಂದೇ ಎಂಬ ಮಂತ್ರವನ್ನೇ ಜೀವನದ ಉಸಿರಾಗಿಸಿಕೊಂಡು ಬದುಕುತ್ತಿದ್ದಾರೆ. ಇದೇ ನಮ್ಮ ದೇಶದ ಭಾವೈಕ್ಯತೆಯ ಸಂದೇಶ ಕೂಡ.

ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ… ಬೆಂಗಳೂರಿನಲ್ಲಿ ಮುಸ್ಲಿಂ ಯುವಕನೊಬ್ಬ ಎಲ್ಲರಿಗೂ ಆದರ್ಶಪ್ರಾಯವಾಗುವಂಥ ಮಾತು ಹೇಳಿದ್ದಾನೆ. ಮಾತಷ್ಟೇ ಅಲ್ಲ, ಕೃತಿಯೂ ಕೂಡ ಹಾಗೇ ಇದೆ. ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಾಗಿರುವ ಸದ್ದಾಂ ಹುಸೇನ್‌ ಎಂಬ ಮುಸ್ಲಿಂ ಯುವಕ ಮಂದಿರ, ಮಸೀದಿಯಲ್ಲಿ ನನಗೆ ಯಾವುದೇ ವ್ಯತ್ಯಾಸ ಕಾಣುವುದಿಲ್ಲ ಎಂದು ಹೇಳಿದ್ದಾನೆ.

ಜಾತಿ, ಧರ್ಮ ಎಂದು ಹೊಡೆದಾಡುವವರು ತಲೆತಗ್ಗಿಸುವಂತಿದೆ 27 ವರ್ಷದ ಸದ್ದಾಂ ಹುಸೇನ್‌ ಬದುಕು. ಸದ್ದಾಂ ಮುಸ್ಲಿಂನಾದರೂ ಮಸೀದಿ ಮತ್ತು ಮಂದಿರ ಎರಡಕ್ಕೂ ಹೋಗುತ್ತಾನೆ. ನಮಾಜ್‌ ಮಾಡುತ್ತಾನೆ, ಪೂಜೆಯನ್ನೂ ಮಾಡುತ್ತಾನೆ. ದಿನ ಬೆಳಗಾದರೆ ಮಸೀದಿಗೆ ಹೋಗಿ ಸ್ವಚ್ಛತಾ ಕಾರ್ಯ ಮಾಡುತ್ತಾನೆ. ಹಾಗೆಯೇ ಹಬ್ಬ-ಹರಿದಿನಗಳಲ್ಲಿ, ಬಿಡುವು ಸಿಕ್ಕಾಗ ಮಂದಿರಗಳಿಗೂ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ನಿರತನಾಗುತ್ತಾನೆ.

’ನನಗೆ ಶಾಂತಿ, ನೆಮ್ಮದಿ ಮುಖ್ಯ. ಯಾವ ಧರ್ಮವಾದರೇನು, ಜಾತಿಯಾದರೇನು..? ನನಗೆ ಮಂದಿರ ಮತ್ತು ಮಸೀದಿ ಎರಡರಲ್ಲೂ ಸಂತೋಷ ಸಿಗುತ್ತದೆ’ ಎನ್ನುವುದು ಸದ್ದಾಂ ಅವರ ಮನದಾಳದ ಮಾತು. ’ನಾನು ಟಿವಿ ಹಾಗೂ ನ್ಯೂಸ್‌ ನೋಡುವುದಿಲ್ಲ. ನನ್ನ ಸಹೋದರ ಬಂದು ನನಗೆ ಅಯೋಧ್ಯೆ ತೀರ್ಪಿನ ಕುರಿತು ಹೇಳಿದ. ಆದರೆ ನನಗೆ ಅದ್ಯಾವುದಕ್ಕೂ ಏನೂ ಅನ್ನಿಸಲಿಲ್ಲ. ನನಗೆ ರಾಮ ಮತ್ತು ಅಲ್ಲಾ ನಡುವೆ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ’ ಅಂತಾರೆ ಸದ್ದಾಂ.

ರಂಜಾನ್‌ ಆಗಿರಲಿ ಅಥವಾ ರಾಮನವಮಿಯೇ ಬರಲಿ, ಎಲ್ಲರೂ ನನ್ನನ್ನು ಸ್ವಚ್ಛತಾ ಕೆಲಸಕ್ಕೆ ಕರೆಯುತ್ತಾರೆ. ಮಿನಾರ್‌ ಕಂಬಗಳನ್ನು ಹತ್ತಿ ಕ್ಲೀನ್‌ ಮಾಡಿದ್ದೇನೆ, ಮಸೀದಿ ಗೋಡೆಗಳಿಗೆ ಬಣ್ಣವನ್ನೂ ಬಳಿದಿದ್ದೇನೆ. ಮಂದಿರಗಳನ್ನು ಸ್ವಚ್ಛಗೊಳಿಸಿದ್ದೇನೆ. ರಂಜಾನ್‌ ದಿನಗಳಲ್ಲಿ ಉಪವಾಸ ಬಿಡುವ ಮುನ್ನ ಪ್ರಾರ್ಥನೆಗೆ ಬರುವ ಜನರಿಗೆ ಹಣ್ಣು-ಹಂಪಲು  ಹಂಚುತ್ತೇನೆ. ದೇವರ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ.

ಇಷ್ಟೇ ಅಲ್ಲ.. ರಾಮಮಂದಿರಕ್ಕೂ ಹೋಗುತ್ತೇನೆ. ಗೋಪುರಗಳನ್ನು ಹತ್ತಿ ಶುಚಿಗೊಳಿಸುತ್ತೇನೆ. ರಾಮನವಮಿ ಹಬ್ಬಕ್ಕೂ ಮೊದಲು ಮಂದಿರಕ್ಕೆ ಪೇಂಟಿಂಗ್‌ ಮಾಡುತ್ತೇನೆ ಎನ್ನುತ್ತಾನೆ. ಅಂದ ಹಾಗೇ ಸದ್ದಾಂ ಓದಿರುವುದು ಕೇವಲ ಎರಡನೇ ತರಗತಿ ಮಾತ್ರ. ಗಂದಿಗೆ ಹೆಸರಿನ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ತಾಯಿ ಮತ್ತು ಸಹೋದರನೊಂದಿಗೆ ವಾಸ್ತವ್ಯ ಹೂಡಿರುವ ಸದ್ದಾಂ ಏರಿಯಾ ಜನರಿಗೆ ಕೈಲಾದಷ್ಟು ಸಹಾಯ ಮಾಡುತ್ತಾನೆ. ಕಷ್ಟದಲ್ಲಿರುವವರಿಗೆ ಹೆಗಲು ಕೊಡುತ್ತಾನೆ.

ದೇವರು ಎಲ್ಲರಿಗೂ ಒಬ್ಬನೇ ಮತ್ತು ಒಂದೇ. ಹಿಂದೂ ಮತ್ತು ಮುಸ್ಲಿಂರು ಸಹೋದರರಿದ್ದಂತೆ ಎಂದು ನಂಬಿರುವ ಸದ್ದಾಂ ಅವರ ಗುಣಗಾನ ಮಾಡಿದ್ದಾರೆ ಗಂದಿಗೆ ಅಂಗಡಿ ಮಾಲೀಕ ವೆಂಕಟೇಶ್‌ ಬಾಬು. ನಾವೆಲ್ಲಾ ಸಮಾಜದ ಶಾಂತಿ, ಏಕತೆ, ಐಕ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಸಮಾಜಕ್ಕೆ ಧಕ್ಕೆ ಬಾರದಂತೆ ಜೀವಿಸಬೇಕು ಎನ್ನುವುದೇ ಸದ್ದಾಂ ಬದುಕಿನ ಉದ್ದೇಶ.

ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ಪತನ ಶುರು: ‘ಸೋನ್ ಪಾಪ್ಡಿ’ಯಿಂದ ಮೂವರಿಗೆ ಜೈಲು ಶಿಕ್ಷೆ

0
ಪತಂಜಲಿ ನವರತ್ನ ಎಲೈಚಿ ಸೋನ್ ಪಾಪ್ಡಿ(ಸಾಂಪ್ರದಾಯಿಕ ಸಿಹಿತಿಂಡಿ) ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಹಿನ್ನೆಲೆ ಉತ್ತರಾಖಂಡದ ನ್ಯಾಯಾಲಯವು ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ...