*ನೀರು* (ಪುಟ್ಕತೆ)

- Advertisement -
- Advertisement -

‘ಬೇಕೇ ಬೇಕು ನೀರೂ ಬೇಕು’ ಹೀಗೆ ಸುತ್ತ ಎಂಬತ್ತಾರು ಹಳ್ಳಿ ಜನ ಘೋಷಣೆ ಕೂಗುತ್ತ ಸತ್ಯಾಗ್ರಹಕ್ಕೆ ಕುಳಿತಿದ್ದರು. ಕುಡಿಯೊ ನೀರಿಗಾಗಿ ಎಂಟು ವರ್ಷದಿಂದ ಅರ್ಜಿ ಕೊಟ್ಟು ಸಾಕಾಗಿ ಹೋಗಿತ್ತು. ಇನ್ನೆರಡು ತಿಂಗಳಲ್ಲಿ ಚುನಾವಣೆ. ನೂರನೇ ದಿನದ ಸತ್ಯಾಗ್ರಹಕ್ಕೆ ಮಿನಿಸ್ಟರ್, ಅಧಿಕಾರಿಗಳು ಬಂದರು. ಜನರ ಗದ್ದಲ ಹೆಚ್ಚಾಯಿತು. ಯಾರೋ ‘ಭಾರತ್ ಮಾತಾಕಿ’ ಅಂದರು. ಜನ ‘ಜೈ’ ಅಂದು ನಿಶ್ಯಬ್ಧರಾದರು.

ಮಿನಿಸ್ಟರ್ ಮೈಕ್ ಹಿಡಿದು ‘ಮಹಾಜನಗಳೇ, ನಿಮ್ಮ ನೋವು ನನಗರ್ಥವಾಗತ್ತೆ. ಈ ಮಣ್ಣಿಗೆ ನೀರು ತರದೆ ನಾನು ಸಾಯಲಾರೆ’ ಎಂದು ಸ್ವಲ್ಪ ಹೊತ್ತು ಸುಮ್ಮನಾದರು. ಮಿನಿಸ್ಟರ್ ಹಿಂಬಾಲಕರು, ಅಧಿಕಾರಿಗಳನ್ನು ಬಿಟ್ಟು ಯಾರೂ ಚಪ್ಪಾಳೆ ತಟ್ಟಲಿಲ್ಲ. ‘ಇನ್ನೆರಡೇ ತಿಂಗಳು. ನನಗೆ ಮತ್ತೆ ಅಧಿಕಾರ ಕೊಡಿ. ನಿಮ್ಮ ಋಣ ತೀರಿಸದೇ ಸಾಯೋದಿಲ್ಲ’ ಎಂದರು. ಅಷ್ಟರಲ್ಲಿ ಮದ್ಯೆ ಬಾಯಿ ಹಾಕಿದ ಜನತೆ.

‘ಸಾಯೆಬ್ರೆ ಎಂಟು ವರ್ಷದಿಂದ ಒಂದು ಹನಿ ಮಳೆ ಬಿದ್ದಿಲ್ಲ’

‘ಸಾಯೆಬ್ರೆ ಕುಡಿಯೋ ನೀರಿಗೆ ಏಳು ಮೈಲಿ ನಡಿಬೇಕಾಗ್ಯದ’

‘ಸಾಯೆಬ್ರೆ ಮಕ್ಕಳು ಸಾಲಿ ಬಿಟ್ಟು ನೀರು ಹೊರಾಕತ್ತೇರ’

‘ಸಾಯೆಬ್ರೆ ಎಂಟು ವರ್ಷ ಆತ್ರಿ. ನಿಮ್ಮನ್ನ ಎರಡು ಸಲ ಗೆಲ್ಸಿವಿ ನೆಪ್ಪಿರ್ಲಿ’

ಪೊಲೀಸ್ ಎಲ್ಲರನ್ನು ಗದರಿಸಿ ಕೂರಿಸಿದರು.
ಮಿನಿಸ್ಟರ್ : ಮಹಾಜನಗಳೆ 100 ಕಿಲೋಮೀಟರಿಂದ ನದಿ ನೀರು ತರಬೇಕಂದ್ರೆ ಅಷ್ಟು ಸುಲಭವಲ್ಲ. ಆದ್ರೂ ನಾನು ಪ್ರಾಮಾಣಿಕ ಪ್ರಯತ್ನ ಮಾಡಿ ಫೈಲ್ ಮೂವ್ ಮಾಡ್ಸಿದಿನಿ. ಸರ್ಕಾರ ಹಣ ಬಿಡುಗಡೆ ಮಾಡಿದ ತಕ್ಷಣ ಕಾಮಗಾರಿ ಚಾಲೂ ಮಾಡ್ತಿನಿ’

ಜನತೆ : ಅಲ್ಲಿಮಟ ನಮ್ಕತಿ? ಸಾಯೆಬ್ರೆ ಅಂತರ್ಜಲ ಇಲ್ಲದಂಗಾಗ್ಯದ. ಬೋರ್ ಬಾವಿ ಬರಿದಾಗ್ಯವ. ಕೆರೆ, ಕುಂಟೆ ಬಾಯ್ಬಿಟ್ಕಂಡ್ ನೀರು ನೀರು ಅಂತಾವೆ. ದನಕರುಗಳಿಗಾದ್ರೂ ಕುಡಿಯೋ ನೀರು ವ್ಯವಸ್ಥೆ ಮಾಡ್ರಿ

ಮಿನಿಸ್ಟರ್: ಅದಕ್ಕೆ ಇನ್ನೂರು ಕೋಟಿ ಬೇಕು. ಸರ್ಕಾರ ಸಾಲದಲ್ಲಿದೆ. ಯಾವ್ದುಕ್ಕೂ ಎರಡು ತಿಂಗಳು ಸಮಯ ಕೊಡಿ ದಯಮಾಡಿ

ಜನತೆ ಮಾತಾಡಬೇಕೆಂದುಕೊಂಡರೂ ಪೊಲೀಸ್ ಬಿಡಲಿಲ್ಲ. ಅಧಿಕಾರಿಗಳು ಮಿನಿಸ್ಟರ್ ಕಿವಿಲಿ ಏನೋ ಹೇಳಿದಾಗ
ಮಿನಿಸ್ಟರ್: ಮಹಾಜನಗಳೇ ನಿಮಗೊಂದು ಸಂತಸದ ಸುದ್ಧಿ.

ಮಿನಿಸ್ಟರ್ ಮಾತು ಕೇಳಿ ಅಲ್ಲಿದ್ದ ರೈತರಿಗೆ ಬೆಳೆ ಕಂಡಂಗಾಯ್ತು. ಕೂಲಿ ಜನಗಳಿಗೆ ಕೆಲಸ ಕಂಡಂಗಾಯ್ತು. ಮಹಿಳೆಯರಿಗೆ ಮೋಡ ಕಟ್ಟಿದಂಗಾಯ್ತು. ಮಕ್ಕಳಿಗೆ ಬರಿಮೈಲಿ ಈಜು ಹೊಡೆದಂಗಾಯ್ತು. ಜನರ ಕಿವಿಗಳೆಲ್ಲ ನೆಟ್ಟಗಾದವು.

ಮಿನಿಸ್ಟರ್: ಈ ಸಾಧನೆ ಅಮೆರಿಕಾ, ಚೀನಾ, ರಷ್ಯಾ ಅಷ್ಟೇ ಮಾಡಿದ್ದು. ಈಗ ಆ ಸಾಧನೇನ ನಮ್ಮ ದೇಶ ಮಾಡುತ್ತಿದೆ. ಇವತ್ತು ರಾತ್ರಿ ಚಂದ್ರನ ಮೇಲೆ ಉಪಗ್ರಹ ಕಳಿಸುತ್ತಿದ್ದಾರೆ. ಸಾವಿರ ಕೋಟಿ ಪ್ರಾಜೆಕ್ಟ್ ಈ ಚಂದ್ರಯಾನ. ಎಲ್ಲರೂ ನೋಡಿ ಹಾರೈಸಿ. ದೇಶದ ಕೀರ್ತಿ ಪ್ರಚಾರ ಮಾಡಿ.

ಮಿನಿಸ್ಟರ್ ಮಾತು ಕೇಳಿ ಜನತೆಯಲ್ಲೊಬ್ಬ ‘ಸಾಯೆಬ್ರೆ ಸಾವ್ರ ಕೋಟಿಯಾ’ ಎಂದೊಡನೆ ಅದ್ಯಾರೋ ‘ಭಾರತ್ ಮಾತಾಕಿ’ ಅಂದರು. ಜನ ‘ಜೈ’ ಅಂದರು. ಮಿನಿಸ್ಟರ್ ಕಾರು ಹತ್ತುವವರೆಗೆ ಘೋಷಣೆ ಮೊಳಗುತ್ತಲೇ ಇತ್ತು. ಅಲ್ಲೆ ಸಂದಿಯಲ್ಲಿ ನುಗ್ಗಿ ಸೂಟು ತೊಟ್ಟ ಅಧಿಕಾರಿಯೊಬ್ಬರ ಕೈ ಹಿಡಿದುಕೊಂಡ ಶಾಲೆ ಯೂನಿಪಾರ್ಮ್ ತೊಟ್ಟ ಹುಡುಗಿ ‘ಸಾರ್ ಚಂದ್ರಯಾನ ಯಾಕೆ’ ಎಂದು ಕೇಳಿದಳು. ಅಧಿಕಾರಿ ಹೆಮ್ಮೆಯಿಂದ ಹೇಳಿದ ‘ ಚಂದ್ರನಲ್ಲಿ ನೀರು ಹುಡುಕೋಕೆ ಪುಟ್ಟ’.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ತಾರತಮ್ಯ; ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆಕೊಟ್ಟ ಡಿಎಂಕೆ

0
ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ದ್ರೋಹ ಬಗೆಯಲಾಗಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರದ ನಡೆ ಖಂಡಿಸಿ ಆಡಳಿತಾರೂಢ ಡಿಎಂಕೆ ಶನಿವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್...