2017ರಲ್ಲಿ ತಮ್ಮ ಸಾಹಿತ್ಯ ಕೃಷಿಗೆ ನೋಬೆಲ್ ಪಡೆದ ಕುಜಿವೊ ಇಶಿಗುರೊ ಮೂಲತಃ ಜಪಾನಿನ ನಾಗಸಾಕಿಯವರು. ತಂದೆಯ ಜೊತೆ ಬ್ರಿಟನ್ನಿಗೆ ವಲಸೆ ಬಂದು, ಅಲ್ಲಿಯೇ ವಿದ್ಯಾಭ್ಯಾಸ ಪಡೆದು ಬೆಳೆದ ಕಜುವೊ ಇಶಿಗುರೊ, ಬ್ರಿಟನ್ನಿನಲ್ಲಿದ್ದೂ ಜಪಾನಿಯರೆ! ಹಾಗೆಯೇ ಜಪಾನಿನ ಸಾಂಸ್ಕøತಿಕ ಒಲವು ಮತ್ತು ಅದರ ವಲಸೆಯನ್ನು ಪ್ರತಿಫಲಿಸುವ ಬ್ರಿಟನ್ ಬರಹಗಾರ. ಓರ್ವ ಲೇಖಕರಾಗಿ ತಮ್ಮ ಪ್ರೀತಿ ತುಂಬಿದ ಭಾವನೆಗಳ ಕಾದಂಬರಿಗಳಲ್ಲಿ ನಾವು ನಮ್ಮ ಸುತ್ತಲಿನ ಜಗತ್ತಿನ ಜೊತೆಗೆ ಹೊಂದಿರುವ ಭ್ರಮಾತ್ಮಕ ಸಂಬಂಧದ ದೊಡ್ಡ ಕಂದರವನ್ನು ತುಂಬಿದ್ದಾರೆ. ಎರಡನೆಯ ಮಹಾ ಯುದ್ದದಲ್ಲಿ ಅಮೆರಿಕಾ ಪರಮಾಣು ಬಾಂಬು ಬಿದ್ದ ನೆಲದಲ್ಲೇ 1954ರಲ್ಲಿ ಜಪಾನಿನ ನಾಗಸಾಕಿ ಪಟ್ಟಣದಲ್ಲಿ ಜನಿಸಿದರು. ನಾಗಸಾಕಿ ಇಶಿಗುರೊ ಅವರ ಹುಟ್ಟೂರು. ತನ್ನೂರಿನ ಮೇಲೆ ದ್ವೇಷದ ಮಹಾನ್ ಕಿಡಿಯ ಉರಿಯಿನ್ನೂ ಆರಿರದ ಆಸುಪಾಸಿನಲ್ಲಿ ಹುಟ್ಟಿ, ಬಾಲ್ಯದ ಐದು ವರ್ಷಗಳನ್ನಷ್ಟೇ ಅಲ್ಲಿ ಕಳೆದರು. ಬ್ರಿಟನ್ನಿಗೆ ಬಂದು 30 ವರ್ಷಗಳ ಕಾಲ ತಾಯಿನಾಡಿನ ನೆಲಕ್ಕೆ ಕಾಲಿಟ್ಟಿರಲಿಲ್ಲ. ಅಪ್ಪನ ಉದ್ಯೋಗ ಸಾಗರ ವಿಜ್ಞಾನಗಳ ಅಧ್ಯಯನ. ಅಪ್ಪ ಶಿಜಿಯೋ ಇಶಿಗುರೊ ಮತ್ತು ಅಮ್ಮ ಶಿಜುಕೋ ಜೊತೆಗೆ ತನ್ನಿಬ್ಬರು ಸಹೋದರಿಯರ ಜೊತೆ ಇಂಗ್ಲೆಂಡಿನ ಗಿಲ್ಡ್‍ಪೊರ್ಡ್ ನಗರದಲ್ಲಿ ಮೊದಲು ಬಂದು ನೆಲೆನಿಂತರು. ತನ್ನ ತಾಯಿನಾಡಿಗೆ 1945ರ ಆಗಸ್ಟ್‍ನಲ್ಲಿ ಬೆಂಕಿಯ ಉಂಡೆ ಬಿದ್ದ ಸಂಗತಿ ಬ್ರಿಟನ್ನಿನ ಪಠ್ಯಗಳಲ್ಲಿ ಓದದ ಹೊರತು ತಿಳಿದಿರಲಿಲ್ಲ. ಆದರೂ ಕಜುವೋ ಬರಹದಲ್ಲಿ ನಾಗಸಾಕಿಯ ದಟ್ಟ ವಿಷಾದ ಮಡುಗಟ್ಟಿದಂತಿದೆ. `A Pale View of Hills’ ಕಾದಂಬರಿಯು ಇಂಗ್ಲೆಂಡ್ ಮತ್ತು ನಾಗಸಾಕಿಯಲ್ಲಿ ಅರಳಿದ ಕಥಾನಕ.
ಕಜುವೋ, ಸಾಗರಗಳ ಮೇಲ್ಮೈ ವಿಜ್ಞಾನದ ರಾಷ್ಟ್ರೀಯ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ ಅಪ್ಪ ಮತ್ತು ಅಮ್ಮನ ಜೊತೆ ಬ್ರಿಟನ್ನಿಗೆ ಬಂದು ವಿದ್ಯಾಭ್ಯಾಸವನ್ನು ಆರಂಭಿಸಿದರು. ಅಪ್ಪ ತನ್ನ ವೃತ್ತಿ ನಿಮಿತ್ತವಾಗಿ ಇಂಗ್ಲೆಂಡಿನಲ್ಲಿದ್ದರೂ ಮುಂದೊಂದು ದಿನ ತಾಯಿನಾಡಿಗೆ ವಾಪಾಸ್ಸು ಹೋಗಲೆಬೇಕಾಗುವುದೆಂಬ ಆಶಯದಿಂದ ಮನೆಯ ವಾತಾವರಣದಲ್ಲಿ ಜಪಾನಿ ಸಂಸ್ಕøತಿಯಿಂದ ಹೊರಬರಲೇ ಇಲ್ಲ. ಮನೆಯಲ್ಲಿ ಜಪಾನಿ ಮಾತು ಹೊರಗೆ ಬಂದರೆ ಬೇರೊಂದು ಬೆರಗಿನ ಲೋಕ, ಇವೆರಡರ ಗೊಂದಲವೇ ಇಲ್ಲದ ಬ್ರಿಟಿಷ್ ಸಹಪಾಠಿಗಳ ಜೊತೆಗಿನ ಸ್ನೇಹ ಸೌಹಾರ್ದ. ಇಂತಹ ವಾತಾವರಣದಲ್ಲಿ ಬೆಳೆದ ಕಜುವೊ ಮುಂದೆ 30 ವರ್ಷಗಳಷ್ಟು ದೀರ್ಘಕಾಲ ಜಪಾನನ್ನು ನೋಡಲೇ ಇಲ್ಲ. ದಿನವೂ ಜಪಾನಿ ಮಾತು-ಇಂಗ್ಲಿಷ್ ಶಾಲೆಗಳ ಒಂದು ಬಗೆಯ ವಲಸೆಯ ಸಾಂಸ್ಕøತಿಕ ಪ್ರಪಂಚ ಕಜುವೊರನ್ನು ಬೆಳೆಸಿತು.
ಬ್ರಿಟನ್ನಿನ ಸರೈ ರಾಜ್ಯದಲ್ಲಿ ಆರಂಭಿಕ ಶಾಲೆಯ ವಿದ್ಯಾಭ್ಯಾಸ ನಡೆಸಿದರು. ನಂತರ ಒಂದು ವರ್ಷದ ಬಿಡುವು ಪಡೆದು ಅಮೆರಿಕಾ ಮತ್ತು ಕೆನಡಾಗಳಲ್ಲಿ ಸಂಚರಿಸಿ ಕೆಲವು ಪತ್ರಿಕೆಗಳಿಗೆ ಬರೆಯುವ ಹಾಗೂ ಬರೆದುದನ್ನು ರೆಕಾರ್ಡು ಮಾಡಿಯೂ ಕೆಲವು ಕಂಪನಿಗಳಿಗೆ ಕಳಿಸುವ ಸಾಹಸವನ್ನು ಮಾಡಿದರು. ನಂತರ ಕಲಿಕೆಯನ್ನು ಮುಂದುವರೆಸಿ 1974ರಲ್ಲಿ ಕೆಂಟ್ ವಿಶ್ವವಿದ್ಯಾಲಯವನ್ನು ಸ್ನಾತಕ ಪದವಿಗಾಗಿ ಸೇರಿದರು. ಅಲ್ಲಿ ಇಂಗ್ಲಿಷ್ ಮತ್ತು ತತ್ವಶಾಸ್ತ್ರದಲ್ಲಿ ಪದವಿಯನ್ನು ಗಳಿಸಿದರು. ಒಂದು ವರ್ಷದ ಕೆಲವು ಸೃಜನಶೀಲ ಬರಹಗಳ ನಂತರ ಶಿಕ್ಷಣವನ್ನು ಮುಂದುವರೆಸಿದರು. ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯವನ್ನು ಸೇರಿ ಸೃಜನಶೀಲ ಬರಹದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಪದವಿಯ ಥೀಸಿಸ್ ಒಂದು ಕಾದಂಬರಿಯಾಗಿ ರೂಪ ತಾಳಿತು. A Pale View of Hills’ ಎಂಬ ಶೀರ್ಷಿಕೆಯ ಕಾದಂಬರಿಯು 1982ರಲ್ಲಿ ಪ್ರಕಟವಾಯಿತು. ಕಜುವೊ ನಂತರ ಬ್ರಿಟಿಷ್ ಪ್ರಜೆಯಾದರು.
A Pale View of Hills’
“ಎ ಪೇಲ್ ವ್ಯೂ ಆಫ್ ಹಿಲ್ಸ್- ಬೆಟ್ಟಗಳ ಒಂದು ಮಸುಕು ನೋಟ”. ಹೆಸರಿನ ಈ ಕಾದಂಬರಿಯು 1982ರಲ್ಲಿ ಪ್ರಕಟಗೊಂಡಾಗ ವಿನಿಫ್ರೆಡ್ ಹಾಲ್ಟ್‍ಬೆ ಗೌರವ ಪುರಸ್ಕಾರಕ್ಕೆ ಪಾತ್ರವಾಗಿತ್ತು. ತಕ್ಷಣವೇ ಪ್ರಕಾಶಕರು ಒಂದು ಸಾವಿರ ಪೌಂಡುಗಳಷ್ಟು ಹಣವನ್ನು ಮುಂಗಡ ಕೊಟ್ಟು ಪ್ರಕಟಿಸಲು ಮುಂದಾದರು.
“ಎ ಪೇಲ್ ವ್ಯೂ ಆಫ್ ಹಿಲ್ಸ್” ಇಂಗ್ಲೆಂಡಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ಇತ್ಸುಕೊ ಎಂಬ ಹೆಣ್ಣು ಮಗಳ ಕಥೆ. ಕಥೆಯು ಆರಂಭವಾಗುವುದೇ ಇತ್ಸುಕೊ ತನ್ನ ಕಿರಿಯ ಮಗಳಾದ ನಿಕಿಯ ಜೊತೆಗಿನ ಸಂಭಾಷಣೆಯಿಂದ. ಆಕೆ ಮಗಳಿಗೆ ತನ್ನ ಹಿರಿಯ ಮಗಳು ಕಯಿಕೊ ಆತ್ಮಹತ್ಯೆಯ ಕುರಿತು ಮಾತಾಡುವ ಸಂದರ್ಭದಿಂದ ಕಾದಂಬರಿಯ ಕಥೆಯು ತೆರೆದುಕೊಳ್ಳುತ್ತದೆ. ತೀರಾ ಇತ್ತೀಚೆಗಷ್ಟೇ ಮಗಳನ್ನು ಕಳೆದುಕೊಂಡ ಅಮ್ಮನ ವ್ಯಕ್ತಿತ್ವದಲ್ಲಿನ ಸಾಂಸ್ಕøತಿಕ ವಲಸೆಯ ದಾರುಣ ಚಿತ್ರಗಳನ್ನು ಕಟ್ಟಿಕೊಡುತ್ತಾಳೆ.
ಇತ್ಸುಕೊ ಜಪಾನಿನಲ್ಲಿ ಜಿರೋ ಎಂಬಾತನನ್ನು ಮದುವೆಯಾಗಿ ಸಂಸಾರ ಸಾಗಿಸುವಾಗ ಹುಟ್ಟಿದ ಮಗಳು ಕಯಿಕೊ. ಮುಂದೆ ನಡೆಯುವ ಬದಲಾವಣೆಯಲ್ಲಿ ಇತ್ಸುಕೊ ಓರ್ವ ಬ್ರಿಟಿಷ್ ಪ್ರಜೆಯ ಭೇಟಿಯಿಂದ ಅವನೊಡನೆ ದೇಶ ಬಿಡಲು ಮುಂದಾಗುತ್ತಾಳೆ. ಮಗಳು ಕಯಿಕೊಳೊಂದಿಗೆ ಇಂಗ್ಲೆಂಡಿಗೆ ಬಂದು ನೆಲೆಸುತ್ತಾಳೆ. ಹೊಸ ಗಂಡನೊಡನೆ ವಲಸೆ ಬಂದು ಹೊಸ ಸಾಂಸ್ಕøತಿಕ ಜಗತ್ತಿಗೆ ತೆರೆದುಕೊಳ್ಳುವ ಹರೆಯದ ಆಸೆಯಿಂದ ಇತ್ಸುಕೊ ಅಣಿಯಾಗುತ್ತಿರುತ್ತಾಳೆ. ಇಂಗ್ಲೆಂಡಿನ ಗಂಡ ಆದರ್ಶವಾದಿ ಪತಿ. ಇತ್ಸುಕೊಳ ಮೊದಲ ಮಗಳಿಗೂ ಸಂತಸದ ಬದುಕು ಕೊಡಲು ಉತ್ಸುಕನಾಗೇ ಇರುತ್ತಾನೆ. ಇವರ ಪ್ರೀತಿಯಲ್ಲಿ ಹುಟ್ಟಿದ ಮಗಳೇ ಕಥೆಯ ಆರಂಭದಲ್ಲಿ ತಾಯಿಯೊಡನೆ ಸಂಭಾಷಣೆಯಲ್ಲಿ ತೊಡಗಿದ್ದ ಕಿರಿಯ ಮಗಳು. ಕಿರಿಯ ಮಗಳಿಗೆ ತಾಯಿಯು ಆಧುನಿಕತೆಯ ಹಿಂದೆ ಬಂದ ನೆಪದಿಂದ ಒಂದು ಆಧುನಿಕ ಹೆಸರಿಡುವ ಆಸೆ. ಆದರೆ ಇಂಗ್ಲೆಂಡಿನ ಪತಿಗೆ ಪೂರ್ವದ ಸಂಸ್ಕøತಿಯ ಸುವಾಸನೆಯನ್ನು ನೆನಪಿಸುವ ಹೆಸರನ್ನಿಡುವ ಖುಷಿ. ಇವೆರಡೂ ಮುಖಾಮುಖಿಯಾಗುವ ಹೆಸರಾಗಿ “ನಿಕಿ” ತೀರ್ಮಾನಗೊಂಡು ಅದೇ ಖಾಯಂ ಆಗುತ್ತದೆ. ಇತ್ಸುಕೊಗೆ ಇಂಗ್ಲಿಷ್ ಪದದಂತೆ ಸದ್ದು ಮೂಡಿಸುವ ಜೊತೆಗೆ ಗಂಡನಿಗೆ ಸ್ವಲ್ಪ ಜಪಾನಿ ಅನ್ನಿಸುವ “ನಿಕಿ” ಇತ್ಸುಕೊಳ ಆಧುನಿಕ ಬೆರಗಿನ ಆಶಯವಾದರೆ, ಗಂಡನಿಗೆ ಪೂರ್ವದ ಸಂಸ್ಕøತಿಯನ್ನು ಪಶ್ಚಿಮದಲ್ಲಿ ಅರಳಿಸುವ ಮಗು.
ಕಥೆಯು ಆರಂಭವಾದದ್ದೇ ಸಾವಿನ ಸುದ್ದಿಯಿಂದಲ್ಲವೇ. ಅದರ ಸುತ್ತ ಕಾರಣಗಳ ಹಾಗೂ ಸಂದರ್ಭ ಸನ್ನಿವೇಶಗಳ ಸಂಗತಿಯೇ ಪ್ರಬಲವಾದ ವಸ್ತು. ಸಾಂಸ್ಕøತಿಕ ವಲಸೆಯ ಸಂಘರ್ಷಗಳ ಪುನರಾವಲೋಕನದಲ್ಲಿ ಕಥೆಯು ಮುಂದುವರೆಯುತ್ತದೆ. ಇತ್ಸುಕೊ ಕಿರಿಯ ಮಗಳು ನಿಕಿಗೆ ಹೇಳುತ್ತಾಳೆ. `ನಿನ್ನ ಅಪ್ಪ ತುಂಬು ಆದರ್ಶಗಳ ಕನಸುಗಳನ್ನು ಹೊತ್ತ ವ್ಯಕ್ತಿ. ಜೀವತೆತ್ತ ಕಯಿಕೊ ಸುಖದ ಬದುಕನ್ನು ನಿರ್ವಹಿಸುವ ಎಲ್ಲ ಭವಿಷ್ಯತ್ತನ್ನೂ ಆಲೋಚಿಸಿದವರು, ಆದರೂ ಹೀಗಾಯಿತು.’ ಮುಂದುವರೆದು ಕಯಿಕೊಳ ಬಗೆಗೆ ತಿಳಿಸುತ್ತಾ ಸಾಗುವ ಇತ್ಸುಕೊ ಬಿಡಿ ಬಿಡಿಯಾಗಿ ಸಾಂಸ್ಕøತಿಕ ವಲಸೆಯೊಂದು ನಿರ್ಮಿಸುವ ಸಾಮಾಜಿಕ ಪರಿಸ್ಥಿತಿಯನ್ನು ತೆರೆಯುತ್ತಾಳೆ. ಗಂಡನೆಂದ ಹಾಗೆ ಕಯಿಕೊ ಸುಖವಾಗಿ ಇರಲು ಆಗಲಿಲ್ಲ. ಹೇಗಿದ್ದಾಳು, ನೆಲ, ಜನ, ಮಾತು ಎಲ್ಲವೂ ಹೊಸತು. ಅಪ್ಪನೂ ಎರಡನೆಯವನೇ! ಸುಖವೆಂಬುದನ್ನು ಅನುಕೂಲಗಳ ಪರಿಧಿಯಲ್ಲಿ ಅಳೆಯುವುದು ಹೇಗೆ? ಅಮ್ಮನೂ ಮತ್ತೊಬ್ಬನನ್ನು ಕಟ್ಟಿಕೊಂಡು ದೇಶ ಬಿಟ್ಟು ಬಂದು ಬದುಕು ಕಟ್ಟಿಕೊಂಡು ಆಧುನಿಕತೆಯ ಹಿಂದೆ ಇರುವಾಗ, ಮಗಳು ಊಟಕ್ಕೂ ಅಮ್ಮನನ್ನೂ ಬೇಡದಾದಳು. ತಾನಾಯಿತು ತನ್ನ ಪಾಡಾಯಿತು. ಬೆಳೆದಂತೆ ಅವಳು ಎಲ್ಲೋ ಹಸಿವೆಗೆಂದು ಅಮ್ಮನಿಟ್ಟ ತಾಟನ್ನು ಅಡುಗೆ ಮನೆಯಿಂದ ತೆಗೆದುಕೊಂಡು ಹೋಗಲು ಮಾತ್ರವೇ ಹೊರ ಬರುವುದನ್ನು ರೂಢಿಸಿಕೊಂಡಳು. ಒಟ್ಟಾರೆ ಏಕಾಂಗಿಯಾದಳು. ಏಕಾಂಗಿಯಾಗಿ ಬೆಳೆದ ಕಯಿಕೊ ಕೊನೆಗೂ ಜೀವ ಬಿಟ್ಟಳು.
ಕಯಿಕೊಗೆ ಜಪಾನಿನ ಸುಚಿಕೊ ಎಂಬ ಗೆಳತಿಯಿದ್ದಳು. ಆಕೆಗೆ ಮರಿಕೊ ಎಂಬ ಮಗಳೂ ಇದ್ದಳು. ಇತ್ಸುಕೊ ನೆನಪಿಸಿಕೊಳ್ಳವ ಹಾಗೆ ಮರಿಕೊ ಕೂಡ ಒಂಟಿ, ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಇಂತಹದುರಲ್ಲಿ ಸುಚಿಕೊ ಅಮೆರಿಕಾದ ಕನಸನ್ನು ಕಾಣತೊಡಗಿದಳು. ಫ್ರಾಂಕ್ ಎಂಬ ಸೈನಿಕನ ಗೆಳೆತನ ಎಲ್ಲವನ್ನೂ ಹುಟ್ಟಿಸಿತ್ತು. ಸುಚಿಕೊ ಅನುಭವವೂ ಇತ್ಸುಕೊಗಿಂತ ಬೇರೆ ಏನೂ ಆಗಿರಲಿಲ್ಲ.
ಕಥೆಯ ವಿವರಗಳು ಅಪ್ಪಟ ಸಾಂಸ್ಕøತಿಕ ವಲಸೆಯ ಪೂರ್ಣ ಚಿತ್ರಣವನ್ನು ಆಪ್ಯಾಯಮಾನವಾಗಿ ಕೊಡುವಲ್ಲಿ ಕುಜುವೊ ಇಶಿಗುರೊ ಪಶ್ಚಿಮದ ಜನತೆಗೆ ಹೊಸ ಲೋಕವನ್ನೇ ತೆರೆದಿಟ್ಟ ಭಾವುಕರಾಗಿ ಕಾಡಿದ್ದರಲ್ಲಿ ಅಚ್ಚರಿಯಿಲ್ಲ. ವಸ್ತುನಿಷ್ಠ, ವ್ಯಾಪಾರಿ-ವಸಾಹತು ಜಗತ್ತಿನ ಪಶ್ಚಿಮಕ್ಕೆ ತಮ್ಮದೇ ನಿರ್ಮಿತಿಯಲ್ಲಿನ ಪೂರ್ವದ ಈ ಬಗೆಯ ಶೋಧಗಳು ತೆರೆದಿಟ್ಟ ಸಾಮಾಜಿಕ ಸ್ಥಿತಿಗಳಿಗೆ ಹೊಸ ಓದುಗರು ಹಿಂದೆ ಬಿದ್ದುದರಲ್ಲಿ ಅಚ್ಚರಿಯೇನಿಲ್ಲ.
ಪೂರ್ವ ಮತ್ತು ಪಶ್ಚಿಮ ಸಮಾಜಗಳ ಸಾಂಸ್ಕøತಿಕ ಕೊಂಡಿಯಾಗಿ, ನೆಲೆನಿಂತ ಕಡೆಯಲ್ಲಿ ಕಳೆದುಹೋದದ್ದನ್ನು ಮತ್ತೆ ಕಟ್ಟಿಕೊಡುವ ಸಂಕಷ್ಟವನ್ನು ತಮ್ಮ ಬರಹಗಳಲ್ಲಿ ಧಾರಾಳವಾಗಿ ಬಳಸುತ್ತಾರೆ ಕಜಿವೊ ಇಶಿಗುರೊ. ತಮ್ಮ ಎರಡನೆಯ ಕಾದಂಬರಿಯಲ್ಲೂ ಜಪಾನಿಯ ಸಾಂಸ್ಕøತಿಕ ಚಿತ್ರಣ ಆವರಿಸುತ್ತದೆ. ಹಾಗಾಗಿ ತಮ್ಮ ಕಥನಗಳು ಜಪಾನಿಯಂತೆ ಕಾಣಲು ತಾವು ಬೆಳೆದ ತಮ್ಮ ಮನೆಯ ವಾತಾವರಣ ಎಂದು ದೃಢವಾಗಿ ಇಶಿಗುರೊ ನಂಬುತ್ತಾರೆ. ತಾನೆಂದೂ ಅಪ್ಪಟ ಬ್ರಿಟಿಷಿಗನಾಗದೆ ಎದೆಯೊಳಗೆ ಜಪಾನಿ ಸಂಸ್ಕøತಿಯ ಬೆಳಗನ್ನು ದಿನವೂ ಕಂಡ ಇಂಗ್ಲೀಷ್ ಪ್ರಜೆ ಎಂದು ಕರೆದುಕೊಳ್ಳುತ್ತಾರೆ. ಅವರ ಅಪ್ಪ-ಅಮ್ಮನಿಗೆ ಅಷ್ಟೊಂದು ದೂರ, ಅಷ್ಟೊಂದು ದಿನ ನೆಲೆಗೊಳ್ಳ್ಳುವ ಯಾವ ಸೂಚನೆಗಳೂ ಇರಲಿಲ್ಲವಂತೆ. ನಾಳೆಯನ್ನು ಜಪಾನಿನ ದಿನಗಳೆಂದೇ ಅಳೆಯುತ್ತಾ, ಪ್ರಸ್ತುತವನ್ನು ಅನುಭವಿಸುವ ವಿಚಿತ್ರ ಸ್ಥಿತಿಯಲ್ಲಿ ಬೆಳೆದದ್ದನ್ನು ನೆನಪಿಸಿಕೊಳ್ಳುತ್ತಾರೆ.
ಜನಗಳು ಯಾರೂ ಸಂಪೂರ್ಣರಲ್ಲ. ಮೂರರಲ್ಲಿ ಎರಡು ಮಾತ್ರ ಅವರು. ಇನ್ನುಳಿದದ್ದು ಬೇರೆಯೇ ಎನ್ನುತ್ತಾರೆ ಇಶಿಗುರೊ. ವ್ಯಕ್ತಿತ್ವ, ಸ್ವಭಾವ ಮತ್ತು ಅವರ ಹೊರನೋಟಗಳು ಹಾಗೇ ವಿಂಗಡಣೆಯಾಗುವುದಿಲ್ಲ. ಅವುಗಳೆಂದೂ ಬಿಡಿಬಿಡಿಯಾಗಿ ಪ್ರಕಟಗೊಳ್ಳ್ಳುವುದಿಲ್ಲ. ನಾವೆಲ್ಲ ಒಂದು ತಮಾಷೆಯ ಮಿಶ್ರಣವಾಗಿ ರೂಪುಗೊಳ್ಳುತ್ತೇವೆ. ಎಲ್ಲವೂ ಇಷ್ಟಿಷ್ಟೇ ಎಂದು ವಿಭಾಗಿಸಿಕೊಂಡು ಗೊತ್ತಾದ ಅನುಪಾತಗಳ ಮಿಶ್ರಣವಂತೂ ಸಾಧ್ಯವಾಗದು. ಆಧುನಿಕ ಜಗತ್ತಿನಲ್ಲಿ ತೆರೆದುಕೊಳ್ಳುತ್ತಿರುವ ಈ ಬದುಕಿನಲ್ಲಿ ಸಂಸ್ಕøತಿಗಳ ಮಿಶ್ರಣದ ಜೀವನವೇ ಕಾಣತೊಡಗುತ್ತದೆ. ಹಾಗಾಗಿ ಜಗತ್ತು ಈ ಮಿಶ್ರಣಗಳ ನೆಲೆಯನ್ನು ಅನುಸರಿಸುತ್ತಾ ಮುಂದುವರೆಯುತ್ತದೆ. ಇಂತಹ ದೃಢವಾದ ವಿಶ್ವಾಸವನ್ನು ಕುಜಿವೊ ಇಶಿಗುರೊ ಪ್ರಸ್ತಾಪಿಸುತ್ತಾರೆ.

– ಡಾ. ಟಿ. ಎಸ್. ಚನ್ನೇಶ್
ನಿರ್ದೇಶಕರು
ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ ಕೇಂದ್ರ,
ಬೆಂಗಳೂರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here