ಉಡುಪಿ ಅಷ್ಟಮಠದ ಭಂಡ ಬಂಡಾಯಗಾರನಂತಿದ್ದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥಸ್ವಾಮಿಯನ್ನು ವಿಷ ಉಣಿಸಿಯೇ ಕೊಂದು ಹಾಕಲಾಗಿದೆ ಎಂಬ ಬಗ್ಗೆ ಯಾರಿಗೂ ಯಾವ ಅನುಮಾನವೂ ಉಳಿದಿಲ್ಲ! ಪೊಲೀಸು ತನಿಖೆಯಲ್ಲಿ ಸಾವಿನ ಕಾರಣ ಏನೆಂದು ಬರುತ್ತದೋ ಗೊತ್ತಿಲ್ಲ. ಕೇಂದ್ರದ ಹಿಂದುತ್ವ ಆಸ್ಥಾನದ ಪಂಡಿತಾಗ್ರೇಸ ಪೇಜಾವರ ಸ್ವಾಮಿ ಗಾಬರಿ ಬಿದ್ದು ಲಕ್ಷ್ಮೀವರ ಸ್ವಾಮಿಯದು ಸಹಜ ಸಾವೆಂದು ತಿಣುಕಾಡುತ್ತಿರುವುದರಿಂದ ಸತ್ಯ ಸರಿಯಾಗಿ ಹೊರಬರುತ್ತದೆಂಬ ಭರವಸೆಯಿಲ್ಲ. ಆದರೆ ಜನರು ಮಾತ್ರ ಶಿರೂರುಸ್ವಾಮಿ ವಿಷಪ್ರಾಶನದಿಂದಲೇ ಸತ್ತಿದ್ದಾರೆಂಬ ದೃಢ ತೀರ್ಮಾನಕ್ಕೆ ಬಂದಿದ್ದು, ಕೊಲೆ ಪಾತಕಿಗಳು ಯಾರಿರಬಹುದೆಂಬ ಚರ್ಚೆ ಜಿಜ್ಞಾಸೆಯಲ್ಲಿ ತೊಡಗಿದ್ದಾರೆ.
ಸರ್ವಸಂಗಪರಿತ್ಯಾಗಿ ಸಂತರ ಪುಣ್ಯಧಾಮ ಎಂಬ “ಆರೋಪ”ದ ಅಷ್ಟ ಮಠದ ಅಂಗಳದಲ್ಲಿ ನಡೆದ ಪಾಪ-ಪಾತಕವೇ ಇಲ್ಲ ಎಂಟು ಸಂತರ ದಾಯಾದಿ ಮತ್ಸರದ ಹೊಡೆದಾಟ, ಬಳೆ-ಗೆಜ್ಜೆನಿನಾದ, ಬಾಟಲಿ ಗ್ಲಾಸುಗಳ ಸದ್ದು, ಅಕ್ರಮ ಸಂತಾನದ ಕಲರವ, ಅನೈತಿಕ ಸಂಸಾರದ ಮಹಿಮೆಯ ಲೌಕಿಕ ಪರಂಪರಾಗತವಾಗಿ ಕೃಷ್ಣಮಠದಲ್ಲಿ ನಡೆದುಕೊಂಡು ಬಂದಿದೆ! ಸೆಕ್ಸ್ ಸಂಬಂಧಿ ಕೊಲೆ, ಆಸ್ತಿಗಾಗಿ ಕೋರ್ಟು ಕಚೇರಿ ವ್ಯಾಜ್ಯ, ಅಕ್ರಮ ಸಂತಾನಕ್ಕೆ ಮಠದ ಉತ್ತರಾಧಿಕಾರದ ತಗಾದೆ, ಬೂಟಾಟಿಕೆ, ಬ್ರಹÀ್ಮಚರ್ಯೆ ಕಿತ್ತಾಟ, ಸಮುದ್ರೋಘನ ಸಮರ………. ಒಂದೇ ಎರಡೇ ನಾನಾನಮೂನೆಯ ಜಿದ್ದು ಅಷ್ಟ ಮಠದ ಯತಿಗಳ ನಿತ್ಯಕರ್ಮ ಎಂಬಂತಾಗಿಹೋಗಿದೆ!! ಉಡುಪಿ ಮುಖ್ಯ ಪ್ರಾಣನಿಗೆ ತುಳಸಿ ಅರ್ಪಣೆಯಾದರೂ ತಪ್ಪೀತು ಅಷ್ಟ ಮಠಾಧೀಶರ ಮೋಹ, ಮದ, ಮಾತ್ಸರ್ಯದ ಬೀದಿಕಾಳಗ ನಡೆಯದ ದಿನವೇ ಇಲ್ಲ!
ಒಬ್ಬನ ತಲೆ ಕಂಡರೆ ಮತ್ತೊಬ್ಬನಿಗಾಗದ ಈ ಎಂಟು ಢೋಂಗಿ ಸಂತರ ಅನುಕೂಲಕ್ಕೆ ತಕ್ಕಂತೆ ಗ್ಯಾಂಗ್ ಕಟ್ಟಿಕೊಂಡು ಕುಸ್ತಿಗೂ ಇಳಿಯುತ್ತಾರೆ. ಇಲ್ಲಿ ಪೀಠತ್ಯಾಗ ಆಗಿದೆ; ಪೀಠದಿಂದ ಬಲವಂತವಾಗಿ ಎಳೆದು ಕೆಳಗಿಳಿಸಿ ತಮಗೆ ಬೇಕಾದವರ ಪ್ರತಿಷ್ಠಾಪಿಸಿದ್ದೂಯಿದೆ. ವಿದೇಶ ಪ್ರವಾಸ ಮಾಡಿದ್ದಾನೆಂಬ “ತಪ್ಪಿ”ಗೆ “ದಂಡ” ತೆತ್ತವರೂ ಇದ್ದಾರೆ. ಸಮುದ್ರೋಲ್ಲಂಘನ ಅಪರಾಧಕ್ಕಾಗಿ ಕೃಷ್ಣ ಪೂಜಾಧಿಕಾರ ತಪ್ಪಿಸಿದ್ದೂಯಿದೆ. ಆದರೆ ಮಠದಲ್ಲಿ ಹೆಂಡ, ಹೆಣ್ಣು, ಹಣದ ಸಾಂಗತ್ಯದಲ್ಲಿ ಮೈಮರೆತ ಯತಿಗೆ ಶಿಕ್ಷೆಯಾದ ನಿದರ್ಶನವಿಲ್ಲ. ಅಷ್ಟ ಮಠದಲ್ಲಿ ಸೆಕ್ಸ್, ಸಂಸಾರ, ವಾಣಿಜ್ಯೋದ್ಯಮ ಸಂತರ ಧರ್ಮಾಚರಣೆಯ ಪ್ರಮುಖ ಅನುಷ್ಠಾನ ಭಾಗ!! ದುಡ್ಡು, ದೇಹಸುಖ, ಒಣಪ್ರತಿಷ್ಠೆ ಅಷ್ಟ ಸಂತರ ಧರ್ಮಸೂಕ್ಷ್ಮ. ಹೀಗಾಗಿಯೇ ಇಲ್ಲಿ ಬರ್ಬರ, ಬುರ್ನಾಸ್ ಬಡಿದಾಟ ಸದಾ ನಡೆದೇ ಇರುತ್ತದೆ.
ಮಠದೊಳಗಣ ಬೆಕ್ಕು ಪುಟ ನೆಗೆಯುವುದನ್ನು ಶಿರೂರು ಸ್ವಾಮಿ ಒಬ್ಬ ಬಿಟ್ಟು ಬೇರ್ಯಾರು ಒಪ್ಪುತ್ತಿರಲಿಲ್ಲ ಲಕ್ಷ್ಮೀವರಸ್ವಾಮಿ ತನ್ನ ದೌರ್ಬಲ್ಯ, ಕಾವಿ ಧರಿಸಿಕೊಂಡೇ ಇಷ್ಟಾರ್ಥಕಾಮ ಸಾಧಿಸಿಕೊಳ್ಳುತ್ತಿದ್ದುದನ್ನು ಯಾವ ಮುಚ್ಚು-ಮರೆಯಿಲ್ಲದೆ ಹೇಳಿಕೊಳ್ಳುತ್ತಿದ್ದರು. ಉಳಿದವರು ತಮ್ಮ ಅನಾಚಾರ, ದಿವ್ಯತೆ, ದೈವಪ್ರೇರಣೆ, ಭಕ್ತಕೋಟಿಯ ಉದ್ಧಾರದ ಸಬೂಬಿನಿಂದ ಮರೆಮಾಚುತ್ತ ಬಂದಿದ್ದಾರೆ. ಸಟೆಯ ಸನ್ಯಾಸಿಗಳು ಒಂದೆಡೆಯಾದರೆ, ದಿಟ್ಟತೆಯ ಹುಂಬ ಲಕ್ಷ್ಮೀವರ ಒಂದೆಡೆ ನಿಂತು ಸೆಣಸಾಡುತ್ತಿದ್ದರು. ಸಮುದ್ರದಾಟಿ ವಿದೇಶಕ್ಕೆ ಹೋದದ್ದಕ್ಕೆ ಕೃಷ್ಣ ಪೂಜಾರ್ಹತೆ ಇಲ್ಲವೆಂಬ ಉಳಿದ ಆರು ಸಂತರ ಫರ್ಮಾನಿಂದ ಬದಿಗೆ ತಳ್ಳಲ್ಪಟ್ಟಿರುವ ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮಿ ಆಗಾಗ ಲಕ್ಷ್ಮೀವರರ ಪರ ನಿಲ್ಲುತ್ತಿದ್ದರು. ಹಾಗೆ ನೋಡಿದರೆ ಈ ಸುಗುಣೇಂದ್ರ ಅಷ್ಟ ಮಠದ ಅಪಸವÀ್ಯದಿಂದ ದೂರವೇ!
ಊರಿಗೆಲ್ಲಾ ಬುದ್ದಿ ಹೇಳುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಯದು ಸದಾ ಎಡಬಿಡಂಗಿತನ. ಲಕ್ಷ್ಮೀವರನ ನೇರಾನೇರ ದಾಳಿಗೆ ಪೇಜಾವರ ಸ್ವಾಮಿ ಕಂಗಾಲಾಗಿದ್ದರು. ಆತ ತನ್ನ ಬಂಡವಾಳವನ್ನು ಬಿಚ್ಚಿಡುತ್ತಾನೆಂಬ ಭಯ ಪೇಜಾವರರ ನಿದ್ದೆಯಲ್ಲೂ ಬೆಚ್ಚಿಬೀಳಿಸುತ್ತಿತ್ತು. ಸನ್ಯಾಸ ಧರ್ಮಪಾಲಿಸದ್ದಕ್ಕೆ ಲಕ್ಷ್ಮೀವರಗೆ ಆತನ ಪಟ್ಟದೇವರನ್ನು ಕೊಡದೆ ಕಾಡಿದ ಐದು ಸ್ವಾಮಿಗಳ ಕುತಂತ್ರದ ಹಿಂದಿನ ಪ್ರೇರಣಾ ಶಕ್ತಿಯೇ ಈ ಪೇಜಾವರ ಎಂಬುದು ಕೃಷ್ಣಮಠದ ಕಂಬಕಂಬವೂ ಪಿಸುಗುಡುತ್ತದೆ. ಶಿರೂರು ಮಠದ ದ್ವಂದ್ವ ಮಠ, ಸೋಧೆಮಠ ಇದರ ಸ್ವಾಮಿ ವಿಶ್ವವಲ್ಲಭ ಮತ್ತು ಲಕ್ಷ್ಮೀವರ ತೀರ್ಥರು ಬದ್ಧ ವೈರಿಗಳು. ಆರು ವರ್ಷದ ಹಿಂದೆ ನಡೆದ ಪರ್ಯಾಯದ ಹೊತ್ತಲ್ಲಿ ರಥಕ್ಕಾಗಿ ಈ ಲಕ್ಷ್ಮೀವರ ಮತ್ತು ವಿಶ್ವವಲ್ಲಭರ ನಡುವೆ ಜಗಳ ನಡೆದಿತ್ತು. ಆ ದ್ವೇಷ ಹಾಗೇ ಹೊಗೆಯಾಡುತ್ತಲೇ ಇತ್ತು. ಪಟ್ಟದೇವರನ್ನು ಲಕ್ಷ್ಮೀವರಗೆ ಕೊಡದಂತೆ ಹಠ ಹಿಡಿದದ್ದೇ ವಿಶ್ವವಲ್ಲಭ. ಅದಕ್ಕೆ ಉಳಿದ ಐದು ಮಠಾಧೀಶರು ಬೆಂಬಲವಾಗಿ ನಿಂತಿದ್ದರು. ಹೆಡ್‍ಮಾಸ್ಟರ್ ಪೇಜಾವರ ಇದೇ ಸುಸಂದರ್ಭ “ಉದ್ಧಟ” ಲಕ್ಷ್ಮೀವರನಿಗೆ ಪಾಠ ಕಲಿಸಲೆಂದು ಧಾವಿಸಿದ್ದರು.
ಸನ್ಯಾಸ ಧರ್ಮದಿಂದ ವಿಮುಖನಾಗಿರುವ, ಹೆಂಡತಿ, ಮಕ್ಕಳಿರುವ ಬಗ್ಗೆ ಸ್ವಯಂ ಘೋಷಿಸಿಕೊಂಡಿರುವ ಲಕ್ಷ್ಮೀವರಗೆ ಪಟ್ಟದೇವರು ಕೊಡಲಾಗದೆಂಬುದು ಪೇಜಾವರರ ವಾದ. ಇದರರ್ಥ ಅಷ್ಟಮಠದಲ್ಲಿ ಅಸಹ್ಯ, ಅಧರ್ಮ, ಅಕ್ರಮ, ಅನೈತಿಕತೆಯಿದೆ ಎಂದು ಪೇಜಾವರರು ಒಪ್ಪಿಕೊಂಡಂತಲ್ಲವಾ? ಪೇಜಾವರರು ತನ್ನ ಶಿಷ್ಯ ವಿಶ್ವವಿಜೇತ ವಿದೇಶಕ್ಕೇ ಹಾರಿದ್ದನೆಂದು ಪೀಠದಿಂದ ಕಿತ್ತೆಸೆದಿದ್ದರು. ಆಗ ವಿಶ್ವವಿಜೇತ ನ್ಯಾಯಾಲಯಕ್ಕೆ ಹೋಗಿದ್ದರು. ಪೇಜಾವರರು ಆ ಕೇಸ್ ವಿಚಾರಣೆ ಹೊತ್ತಲ್ಲಿ ಅಷ್ಟಮಠದಲ್ಲಿ ಎಲ್ಲ ಸ್ವಾಮಿಗಳು ಪರಿಶುದ್ಧರು ಮಠದಲ್ಲಿ ಅನಾಚಾರ, ಅಧರ್ಮ ಇಲ್ಲವೆಂದು ಅಫಿಡವಿತ್ ಸಲ್ಲಿಸಿದ್ದರು. ಈಗ ಅದೇ ಪೇಜಾವರರು ಶಿರೂರು ಸ್ವಾಮಿಗೆ ಹೆಣ್ಣು, ಹೆಂಡದ ಚಟವಿತ್ತು. ಈ ದೌರ್ಬಲ್ಯದಿಂದಲೇ ಆತನಿಗೆ ಸಾವು ಬಂದಿರಬಹುದೆಂದು ತರ್ಕಿಸುತ್ತಿದ್ದಾರೆ. ಹೇಗಿದೆ ಪೇಜಾವರ ಅನುಕೂಲ ಸಿಂಧು ಆಲಾಪ; ಇದೇ ದ್ವಂದ್ವ ಪೇಜಾವರರ ದೈತ ಸಿದ್ಧಾಂತವಾ?
ಅಷ್ಟ ಮಠದೊಳಗಿನ ಅಕ್ರಮ-ಅನೈತಿಕತೆ-ಅಧರ್ಮವೆಲ್ಲ ಪೇಜಾವರರಿಗೆ ಪರಿಚಿತವೇ. ಅಸಲಿಗೆ ಪೇಜಾವರರ ಸನ್ಯಾಸಧೀಕ್ಷೆಯೇ ಮಾಧ್ವ ಮಠದ ಪದ್ಧತಿಯಂತೆ ನಡೆದಿಲ್ಲವೆಂಬ ಪುಕಾರಿದೆ. ಪೇಜಾವರರ ಹಿರಿಯ ಗುರುಗಳಿಗೆ ಇಡ್ಲಿಯಲ್ಲಿ ವಿಷ ಬೆರೆಸಿಕೊಟ್ಟು ಕೊಲ್ಲಲಾಗಿತ್ತು. ಪೇಜಾವರ ಸ್ವಾಮಿಗೆ ಮಾಧ್ವ ಪೀಠದ ಯತಿಗಳ್ಯಾರು ದೀಕ್ಷೆ ನೀಡಿಲ್ಲ. ಸುಬ್ರಮಣ್ಯ ಮಠದ ಸ್ವಾಮಿ ವಿಶ್ವಜ್ಞತೀರ್ಥರು ಪೇಜಾವರರಿಗೆ ದೀಕ್ಷೆ ನೀಡಿದ್ದು. ಇದು ಮಧ್ವ ಪರಂಪರೆಯ ಪೀಠವೇ ಹೊರತು ಮಧ್ವಾ ಪೀಠವಲ್ಲ. ಕಾಣಿಯೂರು ಮಠದ ಹಿಂದಿನ ಪೀಠಾಧೀಶ ವಿದ್ಯಾವಾರಿಧಿಗೆ ಹೇಳಿಲ್ಲ ಮಗುವೊಂದು ಆತ ಸಾಯುವ ಹೊತ್ತಲ್ಲಿತ್ತು. ಮಠದಲ್ಲೇ ಆತನ ಹೆಂಡತಿ ಇರುತ್ತಿದ್ದರು. ಆತ ಸತ್ತ ದಿನವೇ ಪೇಜಾವರ ಸ್ವಾಮಿ ಈ ಪಾಪದ ತಾಯಿ-ಮಗಳಿಗೆ ಹೊಡೆದು-ಬಡಿದು ಮಠದಿಂದ ಓಡಿಸಿದ್ದರು. ಈ ವಿದ್ಯಾವಾರಿಧಿ ಸಲಿಂಗಕಾಮಿ ಎಂಬ ಸುದ್ದಿಯಾಗಿತ್ತು. ಎರಡು ವರ್ಷದ ಹಿಂದೆ “ಅಧಮ” ಸ್ವಾಮಿಯೊಬ್ಬ ಇಂದ್ರಾಳಿ ಬಳಿಯ ಅಮಾಯಕ ಹುಡುಗಿಗೆ ಗರ್ಭದಾನ ಮಾಡಿದ್ದ. ಆಗ ಭೂಗತ ರೌಡಿಗಳು ಮಠಕ್ಕೆ ಎಂಟ್ರಿ ಹೊಡೆದು ರಾಜಿ ಪಂಚಾಯ್ತಿ ನಡೆಸಿದ್ದರು. ಇದು ಪೇಜಾವರರಿಗೆ ಗೊತ್ತಿರುವ ಸಂಗತಿಯೇ.
ಪೇಜಾವರ ಹಿರಿತನದ ಕಣ್ಣಳತೆಯಲ್ಲಿ ಪಾಪದ ಕೃತ್ಯಗಳು ನಡೆಯುತ್ತಲೇ ಇದೆ. ಸೋದೆ ಮಠಾಧೀಶ ವಿಶ್ವವಲ್ಲಭ ಒಂಥರಾ ದಾದಾಗಿರಿಸ್ವಾಮಿ ಎಂದೇ ಚಿರಪರಿಚಿತ. ಲಕ್ಷ್ಮೀವರರ ಕಂಡಾಗೆಲ್ಲಾ ಕಾಲು ಕೆರೆದು ಮೈ ಮೇಲೆ ಬೀಳುತ್ತಿದ್ದ ಈತ ತನ್ನ ಸ್ವಂತ ತಮ್ಮನೇ ಕಾಲೇಜಿನಲ್ಲಿ ಕಡಿಮೆ ಅಂಕ ಪಡೆದನೆಂಬ ಸಿಟ್ಟಿಂದ ಹೊಟ್ಟೆಗೆ ಒದ್ದಿದ್ದನಂತೆ. ಆತ ಆ ನೋವು ತಾಳಲಾರದೆ ಸತ್ತೇಹೋಗಿದ್ದನಂತೆ. ಈ ಸ್ವಾಮಿಯ ಇನ್ನೊಬ್ಬ ತಮ್ಮನೂ ಮಠದ ದಿವಾನನೂ ಆಗಿರುವಾತ ರಥಬೀದಿಯಲ್ಲಿ ಬೆದೆ ಬಸವನಂತೆ ಅಂಡಲೆಯುತ್ತಾನೆಂಬುದು ಇಡೀ ಉಡುಪಿಗೆ ಗೊತ್ತಿರುವ ಸತ್ಯ. ಈ ಕಾರಣಕ್ಕೆ ಆತನ ಹೆಂಡತಿ ಸಿಟ್ಟುಗೊಂಡು ವಿಚ್ಛೇದನಕ್ಕೂ ಮುಂದಾಗಿದ್ದರಂತೆ. ಸೋದೆ ಮಠವೆಂದರೆ ಪಾಡಿಗಾರತಂತ್ರಿ (ವಿಶ್ವವಲ್ಲಭನ ತಂದೆ) ಸಂಸಾರದ ಸುಖಭೋಗದ ಮನೆಯಂತಾಗಿದೆ. ಇದೆಲ್ಲಾ ಲಕ್ಷ್ಮೀವರ ತೀರ್ಥಸ್ವಾಮಿ ಕಂಡ-ಕಂಡವರ ಮುಂದೆ ಹೇಳುತ್ತಾ ಪೇಜಾವರರ ಡಬ್ಬಲ್ ಗೇಮ್ ಧರ್ಮ ಹೀಯಾಳಿಸುತ್ತಿದ್ದರು.
ತನ್ನ ಮುಗಿಸಲು ಸೋದೆ ಸ್ವಾಮೀ ಶತ್ರುಸಂಹಾರ ಯಾಗ, ಮನ್ನಿಸೂಕ್ತ ಹೋಮ ಮಾಡಿಸಿದ್ದಾರೆಂದು ಲಕ್ಷ್ಮೀವರಸ್ವಾಮಿ ಆಪ್ತರಲ್ಲಿ ಹೇಳಿದ್ದೂಯಿದೆ. ಒಬ್ಬ ದಸ್ತಾವೇಜು ಬರಹಗಾರ ಮತ್ತೊಬ್ಬ ಗ್ಯಾಸ್ ಏಜೆನ್ಸಿ ಪುಂಡನ ಬಲದಿಂದ ತನ್ನ ಕಾಡುತ್ತಾನೆಂದು ಆತ ಸಿಟ್ಟುಗೊಂಡಿದ್ದರು. ಇಂಥ ರೌಡಿಗಿರಿಯ ಸೋದೆ ಸ್ವಾಮಿ ಶಿರೂರು ಮಠಕ್ಕೆ ಶಿಷ್ಯ ಸ್ವೀಕರಿಸಿ ಕೊಡುವುದನ್ನ ಲಕ್ಷ್ಮೀವರ ಕೊನೆವರೆಗು ಒಪ್ಪಲೇ ಇಲ್ಲ. ಪೇಜಾವರರಿಗೆ ಇದು ದೊಡ್ಡ ತಲೆನೋವು ತಂದಿಟ್ಟಿತ್ತು. ಸನ್ಯಾಸ ತ್ಯಜಿಸುವಂತೆ ತನಗೆ ಹೇಳೋರೆಲ್ಲ ತನಗಿಂತ ದೊಡ್ಡ ದೊಡ್ಡ ಅಪರಾಧ-ತಪ್ಪು ಮಾಡಿದ್ದಾರೆಂದು ಲಕ್ಷ್ಮೀವರ ತೀರ್ಥ ಬೊಬ್ಬೆ ಹೊಡೆಯುತ್ತಿದ್ದರು. ಒಂದು ಸುದ್ದಿಯ ಪ್ರಕಾರ ಸೋದೆ ಸ್ವಾಮಿ ಕಣ್ಣು ಶಿರೂರು ಮಠದ ಹದಿಮೂರುವರೆ ಎಕರೆ ಜಾಗದ ಮೇಲೆ ಬಿದ್ದಿತಂತೆ ಮಣಿಪಾಲದ ಪ್ರೈಮ್ ಲೊಕೇಷನ್-ಕುಂಡೇಲು ಘಾಟ್‍ನ ಈ ಜಾಗದ ಮಾರುಕಟ್ಟೆ ಬೆಲೆ ಕಮ್ಮಿಯೆಂದರೂ 1500 ಕೋಟಿ! ಮಂಚಕಲ್ ಎಂಬಲ್ಲಿ ಬರೋಬ್ಬರಿ 80 ಕೋಟಿ ಸಾಲಮಾಡಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿರುವ ವಿಶ್ವವಲ್ಲಭ ಶಿರೂರು ಮಠದ ಆಸ್ತಿ ಮೇಲೆ ಹಿಡಿತ ಸ್ಥಾಪಿಸುವ ಸ್ಕೆಚ್ ಹಾಕಿದ್ದರಂತೆ. ಇನ್ನೊಂದೆಡೆ ಪಟ್ಟದೇವರ ಪಡೆಯಲು ಲಕ್ಷ್ಮಿವರ ನ್ಯಾಯಾಲಯಕ್ಕೆ ಹೋದರೆ ಕಟಕಟೆಯಲ್ಲಿ ನಿಲ್ಲುವ ಅಪಮಾನದ ದಿನ ಬರುತ್ತದೆಂಬ ಆತಂಕ ಪೇಜಾವರರಿಗೆ ಶುರುವಾಗಿತ್ತು.
ಹಿಂದೂ ಮನೆಯ ನಾಯಿ-ದನ ಸತ್ತರೂ ತಕ್ಷಣ ಶೋಕ ಸಂದೇಶ ಒಗಾಯಿಸುವ ಪೇಜಾವರ ಸ್ವಾಮಿ ತನ್ನ ಮಠದ ಪರಿಸರದಲ್ಲಿ ಹಲವು ವರ್ಷ ಒಡನಾಡಿಯಾಗಿದ್ದ ತನ್ನಂತೆಯೇ “ಸನ್ಯಾಸಿ” ಅನ್ನಿಸಿಕೊಂಡಿದ್ದ ಕಾವಿ ಜೀವಿಯೊಬ್ಬ ಹಠಾತ್ ಸತ್ತಾಗ ಸೌಜನ್ಯಕ್ಕೂ ದುಃಖದ ಮುಖ ಮಾಡಲಿಲ್ಲ; ಆತನ ಹೆಣ ನೋಡಲು ಬರಲಿಲ್ಲ, ಬದಲಿಗೆ ಸತ್ತವನ ಬಗ್ಗೆ ಕೆಟ್ಟದ್ದನೇ ಆಡಿದರು. ಶಿರೂರು ಸ್ವಾಮಿ ಜೀವಂತ ಇರುವತನಕ ಆತನ ಉಸಾಬರಿ ಬೇಡವೆಂದು ಹೆದರಿಕೊಂಡಿದ್ದ ಪೇಜಾವರ ಸ್ವಾಮಿ ಆತನ ಸಮಾಧಿಯಾಗುತ್ತಲೇ ರಂಗಿಲಾ ಬದುಕು ಅನಾವರಣ ಮಾಡುವ “ತಾಕತ್ತು” ತೋರಿಸಿದ್ದಾರೆ! ಲಕ್ಷ್ಮಿವರ ಕುಡಿದು-ಕುಡಿದು ಲಿವರ್, ಕಿಡ್ನಿ ಕೆಡಿಸಿಕೊಂಡು ಸತ್ತಿದ್ದಾನೆ. ಇಲ್ಲವೇ ಆತನ ಜತೆಗಿದ್ದ ಇಬ್ಬರು ಹೆಂಗಸರ ನಿಭಾಯಿಸಲಾಗದೆ ಸಾವು ಕಂಡಿದ್ದಾನೆಂದು ಪೇಜಾವರ ಹೇಳಿರುವುದು ಆಕಾಶ ನೋಡಿ ಉಗುಳಿದಂತಾಗಿದೆ ಎಂದು ಮಠದ ಪ್ರಜ್ಞಾವಂತ ಭಕ್ತರೇ ಆಡಿಕೊಳ್ಳುತ್ತಿದ್ದಾರೆ.
ಮುಂಬೈನ ದೋಖಾ ಉದ್ಯಮಿ ಜಯಕೃಷ್ಣ ತೋತ್ಸೆ ಮತ್ತು ಭಾಸ್ಕರ್ ಶೆಟ್ಟಿ ಜತೆ ಸೇರಿ ಬಿಲ್ಡರ್ ಉದ್ಯಮಕ್ಕೆ ಶಿರೂರು ಸ್ವಾಮಿ ಕೈ ಹಾಕಿದ್ದರು. ಕನಕ ಮಾಲ್ ನಿರ್ಮಾಣದಲ್ಲಿ 12 ಕೋಟಿಯಷ್ಟು ಹಣ ಜಯಕೃಷ್ಣ ಸ್ವಾಮಿಗೆ ವಂಚಿಸಿದ್ದ. ಭಾಸ್ಕರ್ ಶೆಟ್ಟಿ 14 ಕೋಟಿ ಕೊಡಬೇಕಿತ್ತು. ಸ್ವಾಮಿ ಸಾಲದಿಂದ ಹೈರಾಣಾಗಿ ಹೋಗಿದ್ದರು. ಮಾಲ್‍ನಲ್ಲಿ ಅಂಗಡಿಮಳಿಗೆ ಕೊಡುವೆನೆಂದು ಹಲವರ ಹತ್ತಿರ ಮುಂಗಡ ಪಡೆದು ಇಕ್ಕಟ್ಟಿಗೆ ಸಿಲುಕಿದ್ದರು. ಒಂದುಕಡೆ ಎದುರಾಳಿ ಸ್ವಾಮಿ ಗ್ಯಾಂಗ್, ಮತ್ತೊಂದೆಡೆ ರಿಯಲ್ ಎಸ್ಟೇಟ್ ಕುಳಗಳ ತಂಡ, ಮಗದೊಂದೆಡೆ ಇಬ್ಬರು ಸಖಿಯರ ಕಾಟದಿಂದ ಲಕ್ಷ್ಮಿವರನ ಪರಿಸ್ಥಿತಿ ಚಕ್ರವ್ಯೂಹಕ್ಕೆ ಸಿಲುಕಿದಂತಾಗಿತ್ತು. ಇವರ್ಯಾರೋ ಮಠದ ಒಳಗೇ ಫಿಟ್ಟಿಂಗ್ ಇಟ್ಟು ಲಕ್ಷ್ಮೀವರಗೆ ವಿಷ ಹಾಕಿಸಿದರಾ? ಒಂದೂವರೆ ವರ್ಷದ ಹಿಂದೆ ಶಿರೂರು ಮೂಲಮಠಕ್ಕೆ ಬಂದು ಸೇರಿಕೊಂಡಿದ್ದ ರಮ್ಯಾಶೆಟ್ಟಿ ಎಂಬ 32ರ ಆಸುಪಾಸಿನ ಚಂದದ ಹರಯದ ಹೆಂಗಸಿನ ಮೇಲೆ ಸಂಶಯ ಬರುವಂತ ತಂತ್ರಗಾರಿಕೆಯ ಮಾತು ಪೇಜಾವರ ಬಾಯಿಂದ ಬಂದಿದೆ. ಸುಳ್ಯದ ಪೆರ್ವಜೆ ಎಂಬಲ್ಲಿನ ಈ ಹೆಂಗಸು ವಿಚ್ಛೇದಿತೆ. ಈಕೆ ಜತೆ ರಸಿಕ ಲಕ್ಷ್ಮಿವರ ಅನ್ಯೋನ್ಯವಾಗಿ-ಸಲುಗೆಯಿಂದ ಚಕ್ಕಂದವಾಡುತ್ತಿದ್ದದ್ದು ಶಿರೂರು ಮಠದ ಪಟ್ಟ ದೇವರು ವಿಠಲನಿಗೂ ಗೊತ್ತಿದ್ದ ರಹಸ್ಯವಾಗಿತ್ತು.
ಈಗ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬರುತ್ತಿರುವ ಸುದ್ದಿ ಪ್ರಕಾರ ಆಕೆಗೆ ಲಕ್ಷ್ಮಿವರ ಉಡುಪಿಯಲ್ಲಿ ಮನೆ ಖರೀದಿಸಿ ಕೊಟ್ಟಿದ್ದ: ಬಂಗಾರದ ಮಜಬೂತಾದ ಕಡಗ, ದಾಗೀನು ಮಾಡಿಸಿಕೊಟ್ಟಿದ್ದರು. ಕಾರು ಕೊಡಿಸಿದ್ದರು. ಆದರೆ ಸ್ವಾಮಿ ತನ್ನ ಖಾಸಾಜನರೊಂದಿಗೆ ಹೇಳಿದಂತೆ-ಆಕೆಗೆ ಗಂಡನ ಕಡೆಯಿಂದ ಮೂರ್ನಾಲ್ಕು ಕೋಟಿಯಷ್ಟು ಪರಿಹಾರ ಬಂದಿತ್ತು. ಅದರಲ್ಲಿ ಆಕೆ ಎರಡು ಕೋಟಿಯಷ್ಟು ಲಕ್ಷ್ಮೀವರಗೆ ಕೊಟ್ಟಿದ್ದಳಂತೆ. ಲಕ್ಷ್ಮೀವರ ಆಕೆಗೆ ತಾನು ಧರಿಸುತ್ತಿದ್ದಂಥದ್ದೇ ಚಿನ್ನದ ಕಡಗ ಮಾಡಿಸಿಕೊಟ್ಟಿದ್ದರು. ಆಕೆ ಮಠದ ಪಾರುಪತ್ಯ ವಹಿಸಿಕೊಂಡಿದ್ದರು. 9 ವರ್ಷದಿಂದ ಮಠದ ಮ್ಯಾನೇಜರಿಕೆ ಮಾಡುತ್ತಿದ್ದ ಸುನೀಲ್‍ಕುಮಾರ್ ಎಂಬಾತನ ಓಡಿಸಿದ್ದಳು. ಆತನಿಗೂ ಸ್ವಾಮಿಗೂ ಸರಿಯಿರಲಿಲ್ಲ. ಈ ಸುನೀಲ್ ಈಗ ರಮ್ಯಾಶೆಟ್ಟಿಯೇ ಸ್ವಾಮಿಯ ಸಾವಿಗೆ ಕಾರಣವೆಂದು ಹೇಳುತ್ತಿದ್ದಾನೆ. ಈತನ ಹಿಂದೆ ಲಕ್ಷ್ಮೀವರರ ವಿರೋಧಿಸನ್ಯಾಸಿ ತಂಡದ ನೆರಳಿದೆ.
ಒಂದಂತೂ ಖರೆ, ರಮ್ಯಾಶೆಟ್ಟಿ ತನ್ನ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಂತಿದ್ದ ಶಿರೂರು ಸ್ವಾಮಿಗೆ ವಿಷವಿಕ್ಕಲು ಸಾಧ್ಯವೇ ಇಲ್ಲ. ಇದು ಪೊಲೀಸರಾದಿಯಾಗಿ ಸಾಮಾನ್ಯರೂ ಮಂಡಿಸುವ ಸರಳ ಲಾಜಿಕ್. ಹಾಗೊಮ್ಮೆ ಸ್ವಾಮಿಯ ಮಠದಿಂದ ಬರುವ ಲಾಭ-ಅನುಕೂಲಕ್ಕಿಂತಲೂ ದೊಡ್ಡ ಡೀಲು ಆಕೆ ಜತೆ ವಿರೋಧಿಗಳು ಕುದುರಿಸಿ ಸುಪಾರಿ ಕೊಟ್ಟಿರಬೇಕು. ಆಗ ಆಕೆ ಸ್ವಾಮಿ ಸಂಹಾರಕ್ಕೆ ರೆಡಿಯಾಗಬಹುದು. ಸ್ವಾಮಿ ಜತೆ ಹಲವು ವರ್ಷದಿಂದ ಇದ್ದ ಶಾರದಾ ಎಂದ ಹೆಂಗಸು ಪಾಪದವಳು. ಆಕೆಗೆ ಲಕ್ಷ್ಮೀವರ ಕರುಣಿಸಿದ ಸಂತಾನವೂ ಇದೆ. ಈಕೆ ತನ್ನ ಸರ್ವಸ್ವವಾಗಿದ್ದ ಲಕ್ಷ್ಮೀವರರಿಗೆ ದ್ರೋಹ ಬಗೆಯುವ ಪಾತಕ ಮಾಡಲು ಸಾಧ್ಯವೂ ಇಲ್ಲ. ಆಕೆಯ ಗುಣಸ್ವಭಾವವೂ ಅಂಥದ್ದಲ್ಲವೆಂದು ಶಿರೂರು ಮಠದ ಹತ್ತಿರದ ಭಕ್ತರು ಹೇಳುತ್ತಾರೆ!
ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲಿ ಆರೋಗ್ಯ ಕೆಟ್ಟ ನಂತರ ಲಕ್ಷ್ಮೀವರ ಸ್ವಾಮಿ ಹಣ್ಣಿನ ರಸವನ್ನೇ ಹೆಚ್ಚು ಹೆಚ್ಚಾಗಿ ಕುಡಿಯುತ್ತಿದ್ದರು. ಸದಾ ಪ್ರಿಡ್ಜ್‍ನಲ್ಲಿ ಹಣ್ಣಿನ ರಸ ತಯಾರಿಸಿಟ್ಟುಕೊಳ್ಳುತ್ತಿದ್ದರು. ಇದನ್ನು ಕರಾರುವಾಕ್ಕಾಗಿ ಗ್ರಹಿಸಿದ ಶತ್ರುಗಳು ಮಠದೊಳಗಿನವರ ಬಳಸಿಕೊಂಡು ಪ್ರಿಡ್ಜ್‍ನೊಳಗಿನ ಹಣ್ಣಿನ ರಸಕ್ಕೆ ವಿಷ ಬೆರೆಸಿದ್ದಾರೆಂಬ ಮಾತೀಗ ಉಡುಪಿಯಲ್ಲಿ ಕೇಳಿಬರುತ್ತಿದೆ. ಇಂಥ ಷಡ್ಯಂತ್ರ ಮೂರು ಕಡೆಯಿಂದಾಗಿರುವ ಸಾಧ್ಯತೆಯಿದೆ. ಒಂದು, ಕಡುಶತ್ರುಗಳಾದ ಮಠಾಧೀಶರ ತಂಡದಿಂದ; ಎರಡು, ಲಕ್ಷ್ಮಿವರಗೆ ದೋಖಾ ಮಾಡಿದ್ದ ಭೂಮಾಫಿಯಾದಿಂದ; ಮೂರು, ಆತನ ಹೊಸ ಸಖಿಯಿಂದ. ಈ ರೋಚಕ ಒಗಟು ಬಿಡಿಸಬೇಕಾಗಿರುವುದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾತ್ರ; ಕಡಕ್ ಅಧಿಕಾರಿಯಾದ ನಿಂಬರಗಿ ಮೇಲೆ ಎಲ್ಲರೂ ವಿಶ್ವಾಸವಿಟ್ಟು ಸತ್ಯಕ್ಕಾಗಿ ಕಾದಿದ್ದಾರೆ.

ಪೇಜಾವರ ಪುರಾಣ ಹೇಳುವ ಆಡಿಯೋ!

ಶಿರೂರು ಸ್ವಾಮಿ ನಿಗೂಢವಾಗಿ ಸತ್ತ ಬೆನ್ನಿಗೇ ಅಷ್ಟಮಠಗಳು ಕರ್ಮಕಾಂಡಗಳು ಒಂದೊಂದಾಗಿ ಬಯಲಿಗೆ ಬೀಳುತ್ತಿವೆ. ಇತ್ತೀಚೆಗಷ್ಟೆ ಶಿರೂರು ಸ್ವಾಮಿ ಮಾತಾಡಿದ್ದೆನ್ನಲಾದ ಮತ್ತೊಂದು ಆಡಿಯೋ ಹೊರಬಂದಿದ್ದು ಅದರಲ್ಲಿ ಪೇಜಾವರರ ಮಾನ ಹರಾಜು ಹಾಕಿದ್ದಾರೆ.
“ಅಜ್ಜನಿಗೂ ಮೂರು ಮಕ್ಕಳಿದ್ದಾರೆ. ಒಬ್ಬರು ಡಾ.ಉಷಾ ಅಂತ ಚೆನೈನಲ್ಲಿ ವೈದ್ಯರಾಗಿದ್ದಾರೆ. ತಮಿಳುನಾಡಿನ ಮಹಿಳೆ ಜತೆ ಪ್ರೇಮವಿತ್ತು. ನಿಮಗೆ ತೊಂದರೆಯಾದರೆ ನಿಮ್ಮ ಜೊತೆ ಬರ್ತೇವೆ ಎಂದಿದ್ರು. ಎನ್‍ಡಿಎ ಪರೀಕ್ಷೆಗೂ ಸಿದ್ದವೆಂದು ಉಷಾ ಹೇಳಿದ್ದರು. ಸ್ವಾಮೀಜಿಗಳು ಶಾಸ್ತ್ರದ ಪ್ರಕಾರ ಕುದುರೆ ಮೇಲೆ ಕುಳಿತುಕೊಳ್ಳುವಂತಿಲ್ಲ, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಲಾಗುತ್ತಿದೆ. ನಾನು ಅವರ ನಂಬಿ ಪಟ್ಟದ ದೇವರ ಕೊಟ್ಟಿದ್ದೆ. ವಿಶ್ವಾಸಘಾತತನ ಮಾಡಿದರು. ನಾನು ಸನ್ಯಾಸ ತ್ಯಜಿಸಬೇಕೆಂದು ಹೇಳಲು ಇವರ್ಯಾರು ಒಂದು ವಿಷಯ ನೆನಪಿರಲಿ ದಾಖಲೆಗಳನ್ನು ತೆಗೆದುನೋಡಿ, ನಿರಂತರ 47 ವರ್ಷ ಕೃಷ್ಣನ ಪೂಜೆ ಮಾಡಿದ್ದು ನಾನು ಮಾತ್ರ. ವಿಶ್ವೇಶ್ವರ ತೀರ್ಥರೂ ಪೂಜೆ ಮಾಡಿಲ್ಲ. ಆಗ ತಪ್ಪುಸಿಗಲಿಲ್ಲ. ಚುನಾವಣೆಗೆ ನಿಲ್ಲುತ್ತೇನೆಂದ ಮಾತ್ರಕ್ಕೆ ನಾನು ಬೇಡಾದೆನೆ?
ಮಠದ ಒಂದು ಇತಿಹಾಸ ಹೇಳುತ್ತೇನೆ. ಅದಮಾರು ಮಠದ ವಿಭುದೇಶತೀರ್ಥರಿಗೆ ಕೊಂಕಣಿ ಹೆಂಗಸೊಬ್ಬಳ ಜತೆ ಸಂಪರ್ಕವಿತ್ತು. ಎರಡು ಮಕ್ಕಳಿದ್ದರು. ಅವರ ಗುರುಗಳಾದ ವಿಭುದಪ್ರಿಯರಿಗೆ ರಾಜವಾಡೆ ಎಂಬ ಮಹಿಳೆ ಸಂಪರ್ಕವಿತ್ತು. ಅವರ ಹಿಂದಿನವರಾದ ವಿಭುದಮಾನ್ಯರನ್ನು ಹೆಣ್ಣಿನ ವಿಚಾರದಲ್ಲಿ ಕೊಲೆ ಮಾಡಲಾಗಿತ್ತು. ಪಲಿಮಾರು ಮಠದ ರಘುವಲ್ಲಭರು ನನ್ನ ಅಣ್ಣನ ಪತ್ನಿಯ ಸಹೋದರ. 1970ರಲ್ಲಿ 5 ಲಕ್ಷ ಕೊಟ್ಟು ಪೀಠದಿಂದ ಎಬ್ಬಿಸಲಾಯಿತು. ಬಳಿಕ ಅಜ್ಜ ತನ್ನ ಗುರುಗಳಾದ ಬಂಡಾರಕೇರಿ ಮಠದ ವಿದ್ಯಾಮಾನ್ಯರನ್ನು ಪಲಿಮಾರು ಮಠಕ್ಕೆ ತಂದು ಕೂರಿಸಿದರು. ಇದು ನನ್ನ ಗುರುದಕ್ಷಿಣೆ ಎಂದು ಬೀಗಿದರು. ಇದು ಅಜ್ಜ ಮಾಡಿದ ಮೊದಲ ಜೀವಂತ ಕೊಲೆ. ರಘುವಲ್ಲಭರು ವಿದೇಶದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ವಿಶ್ವವಿಜಯರನ್ನು ಉದ್ದೇಶಪೂರ್ವಕವಾಗಿ ವಿದೇಶಕ್ಕೆ ಕಳುಹಿಸಿ ಬಂದಬಳಿಕ ವಿದೇಶ ಪ್ರಯಾಣ ಮಾಡಿದ ಕಾರಣಕ್ಕೆ ಪೀಠದಿಂದ ಹೊರಹಾಕಲಾಯಿತು. ಇದು ಎರಡನೇ ಜೀವಂತ ಕೊಲೆ.
ಪುತ್ತಿಗೆಯವರದು ಅಜ್ಜ ಮಾಡಿದ ಮೂರನೆ ಜೀವಂತ ಕೊಲೆ. ಆಚೆ ವ್ಯಾಸರಾಯ ಮಠದ ಸ್ವಾಮಿಗಳನ್ನ ತಗೆದು ಹಾಕಿದರು. ಇವರನ್ನು ನೇಮಕ ಮಾಡಿದ್ದು ಪುಷ್ಕರಾಚಾರ್ಯರು. ಅವರನ್ನೂ ತೆಗೆದು ಹಾಕಿದರು. ಪ್ರಹ್ಲಾದಾಚಾರ್ಯ ಎಂಬುವರಿಗೂ ಸಮಸ್ಯೆ ಮಾಡಿದರು. ಈಗ ನನ್ನನ್ನು ಮುಗಿಸಲು ಮುಂದಾಗಿದ್ದಾರೆ. ಇದನ್ನು ನಾನು ಲಕ್ಷ್ಯಕ್ಕೆ ತೆಗೆದುಕೊಳ್ಳುವುದಿಲ್ಲ. ಇವರ ಎಲ್ಲ ಬಂಡವಾಳ ಬಯಲು ಮಾಡುತ್ತೇನೆ……”
ಇದು ಶಿರೂರು ಆಡಿಯೋದಲ್ಲಿನ ಸ್ಫೋಟಕ ಮಾತುಗಳು. ಈ ಆಡಿಯೋಗಳೀಗ ಕರಾವಳಿಯಲ್ಲಷ್ಟೇ ಅಲ್ಲ, ಕೃಷ್ಣಮಠದ ಭಕ್ತಕೋಟಿಯ ನಡುವೆ ವೈರಲ್ ಆಗಿದೆ. ಇದು ಅಷ್ಟಮಠದ ಇತಿಹಾಸ.

– ವರದಿಗಾರ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here