Homeಸಾಮಾಜಿಕವೇಶ್ಯೆಯ ಗರ್ಭದಲ್ಲಿ ಮುದುಕನ ಆತ್ಮ !

ವೇಶ್ಯೆಯ ಗರ್ಭದಲ್ಲಿ ಮುದುಕನ ಆತ್ಮ !

- Advertisement -
- Advertisement -

ಬುರುಡೆ ಜೋಯಿಸರು ಜನರನ್ನು ಹೆದರಿಸಲು ಎಂತೆಂತಹ ದೋಷಗಳು, ಗಂಡಗಳು, ಪೀಡೆಗಳು, ಕಾಟಗಳು ಇತ್ಯಾದಿ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ, ಅವುಗಳ ಸಂಖ್ಯೆಯನ್ನು ಹೇಳಿದರೆ ನಿಮಗೆ ಅಜೀರ್ಣವಾದೀತು! ಅವುಗಳ ಪರಿಣಾಮಗಳನ್ನು ಹೇಳಿದರೆ ಹೆದರಿ ಸ್ಮೃತಿ ತಪ್ಪಿಬೀಳುವಿರಿ! ಪರಿಹಾರಗಳನ್ನು ವಿವರವಾಗಿ ಬಣ್ಣಿಸಿ ವಿಶ್ಲೇಷಿಸಿರೆ, ನೀವು ನಕ್ಕುನಕ್ಕು ಸುಸ್ತಾಗಿ ‘ಜಠರದೋಷ’ದಿಂದ ಹೊಟ್ಟೆಯಲ್ಲಿ ಹುಣ್ಣಾಗುವ ಸಂಭವವಿದೆ!
ಮನುಷ್ಯನ ಭಯ, ಆತಂಕ, ಲಾಲಸೆ, ಮೌಢ್ಯ ಎಲ್ಲವುಗಳ ಆಳವಾದ ಸಂಶೋಧನೆಗಳನ್ನು ಮಾಡಿರುವ ಜೋಯಿಸರು ಜಾತಕ ದೋಷ, ಮೃತ್ಯುದೋಷ, ಅಪಮೃತ್ಯು ದೋಷ, ಪಿತೃದೋಷ, ಗ್ರಹದೋಷ, ನಕ್ಷತ್ರದೋಷ ಇತ್ಯಾದಿಯಾಗಿ ಹುಟ್ಟಿದರೂ, ಸತ್ತರೂ ಲೆಕ್ಕವಿಲ್ಲದಷ್ಟು ದೋಷಗಳನ್ನು ಕಂಡುಹಿಡಿದಿದ್ದಾರೆ ಮತ್ತು ನಿಮ್ಮಲ್ಲಿ ಎಷ್ಟು ರಸವಿದೆ ಎಂದು ನೋಡಿಕೊಂಡು ನಿಮಗೆ ನೋವಾಗದಂತೆ ಹಿಂಡುವ ಸಲುವಾಗಿ ಬೇರೆಬೇರೆ ಗಾತ್ರದ ಮಾಡೆಲ್‍ಗಳ ಜ್ಯೂಸ್ ತೆಗೆಯುವ ಯಂತ್ರತಂತ್ರಗಳ ಆವಿಷ್ಕಾರಗಳನ್ನೂ ಮಾಡಿದ್ದಾರೆ.
ಕಳೆದ ಸಂಚಿಕೆಯಲ್ಲಿ ನಾವು ಸ್ಮಶಾನಯಾತ್ರೆ ಮಾಡಿ, ಅಲ್ಲಿ ಪಿಂಡಶಾಸ್ತ್ರ ವರ್ಚುವಲ್ ಪೇಮೆಂಟ್ ಮುಂತಾದ ಆವಿಷ್ಕಾರಗಳನ್ನು ನೋಡಿರುವುದರಿಂದ ಈ ಸಂಚಿಕೆಯಲ್ಲಿ ಮೃತ್ಯುವಿನ ಸುತ್ತಲೇ ಕ್ಷುದ್ರಗ್ರಹಗಳಂತೆ ಒಂದು ಸುತ್ತು ಹಾಕೋಣ.
ಮನುಷ್ಯನ ಜೀವನದಲ್ಲಿ ಹುಟ್ಟು ಮತ್ತು ಸಾವು ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಂತೆ ಅನಿವಾರ್ಯ! ಆದುದರಿಂದ ಜೋಯಿಸರಿಗೆ ಆದಾಯದ ನಿರಂತರ ಮೂಲ. ಸತ್ತಮೇಲೆ ಮನುಷ್ಯ ಒಂದೋ ಡಿಸ್ಟಿಂಕ್ಷನ್‍ನಲ್ಲಿ ಪಾಸಾಗಿ ಸ್ವರ್ಗ ಸೇರುತ್ತಾನೆ. ಇಲ್ಲವೇ ಕಡಿಮೆ ಮಾರ್ಕು ತೆಗೆದು ಫೇಲಾಗಿ ನರಕ ಸೇರುತ್ತಾನೆ. ಅವುಗಳಿಗೆ ಬೇರೆಬೇರೆ ಕ್ರಿಯಾಕರ್ಮಗಳುಂಟು. ಅವುಗಳಿಗೆ ಮತ್ತು ಅವುಗಳಿಂದ ‘ಅರ್ಥ’ ಕಲ್ಪಿಸುವ ಅರ್ಥಶಾಸ್ತ್ರಜ್ಞರೇ ಜೋಯಿಸರು. ಹೀಗೆ ಸತ್ತವರ ಕೆಲಸಗಳು ನಿಮ್ಮಲ್ಲಿ ಎಷ್ಟು ದಮ್ಮಡಿ ಇದೆ ಎಂಬುದರ ಮೇಲೆ ಅವಲಂಬಿಸಿವೆ. ಅದು ಒಮ್ಮೆಗೇ ಮುಗಿಯಬಹುದು. ಅಥವಾ ವರ್ಷಕ್ಕೊಮ್ಮೆ ಶ್ರಾದ್ಧ, ಶಾಂತಿ ಹೋಮದಂತಹ ಡೆತ್‍ಡೇ ಪಾರ್ಟಿಗಳನ್ನು ಕೊಡಬೇಕಾಗಿ ಬರಬಹುದು! ಅವುಗಳ ಕಂತ್ರಾಟು ಪಡೆಯಲು ಜೋಯಿಸರು ಬೇರೆ ಬೇರೆ ಮೆನುಗಳೊಂದಿಗೆ ಸದಾ ಸಿದ್ಧರಿರುತ್ತಾರೆ.
ಸಮಸ್ಯೆ ಇರುವುದು ನಡುವೆಯೇ ಶಾಲೆ ಬಿಟ್ಟವರು ಮತ್ತು ಒಂದೆರಡು ಸಬ್ಜೆಕ್ಟ್‍ಗಳಲ್ಲಿ ಫೇಲಾಗಿ ತ್ರಿಶಂಕುಗಳಂತೆ ಸ್ವರ್ಗವನ್ನೂ ಸೇರದೆ, ನರಕವನ್ನೂ ಸೇರದೆ ಅಂತರ್ಭೂತಗಳಾಗಿ ತಿರುಗುವ ಆತ್ಮಗಳದ್ದು. ಇವರು ಸಪ್ಲಿಮೆಂಟರಿ ಪರೀಕ್ಷೆ ಕಟ್ಟುವ ಗಿರಾಕಿಗಳು. ಇವರನ್ನು ಕುಲೆ, ಪಿಶಾಚಿ, ದೆವ್ವ, ಅಂತರ ಬೆಂತರ ಇತ್ಯಾದಿ ಮನಮೋಹಕ ಹೆಸರುಗಳಿಂದ ಕರೆಯಲಾಗುತ್ತದೆ. ಇವರು ಸಪ್ಲಿಮೆಂಟರಿಯಲ್ಲಿ ಪಾಸಾಗಿ ಸ್ವರ್ಗ ಅಥವಾ ನರಕ ಸೇರಿಸಲು ಕೋಚಿಂಗ್ ಕೊಡಬೇಕಾಗುತ್ತದೆ. ಇಂತಹ ವಿದ್ಯಾದಾನದ ಪುಣ್ಯಕಾರ್ಯಕ್ಕೆ ಜೋಯಿಸರು ಸದಾ ಟೊಂಕಕಟ್ಟಿ ನಿಂತಿರುತ್ತಾರೆ. ಇದಕ್ಕೆ ದೊಡ್ಡ ಪೀಸೂ ಉಂಟು.
ಕೆಲವು ಸಲ ಈ ಸಪ್ಲಿಮೆಂಟರಿ ಗಿರಾಕಿಗಳು ಸಹವಾಸದೋಷಕ್ಕೆ ಒಳಗಾಗಿ, ಭೂತಗಳ ಗ್ಯಾಂಗುಗಳ ಕೈಗೆ ಸಿಗುವುದುಂಟು. ಇಂತವರ ಜುಟ್ಟು ಅವುಗಳ ಕೈಯಲ್ಲಿರುವುದರಿಂದ ಈ ಹೋಪ್‍ಲೆಸ್ ಗಿರಾಕಿಗಳನ್ನು ಪಾಸು ಮಾಡಲು ಭೂತಗಳಿಗೂ ಪರೀಕ್ಷಾ ಮಂಡಳಿಯ ಸಿಬ್ಬಂದಿಗಳಿಗೆ ಕೊಡುವಂತೆ ಸಮ್‍ಥಿಂಗ್ ಕೊಟ್ಟು ತೃಪ್ತಿಪಡಿಸಿ ಮಾರ್ಕು ತಿದ್ದಬೇಕಾಗುತ್ತದೆ. ಭೂತಗಳ ಕೈಯಿಂದ ಬಿಡಿಸಬೇಕಾಗುತ್ತದೆ. ಇವೆಲ್ಲವನ್ನೂ ಜೋಯಿಸರು ತಮ್ಮ ಮಂತ್ರಶಕ್ತಿಯಿಂದ ಮಾಡುತ್ತಾರೆ. ಒಂದು ವೇಳೆ ಎಂದೂ ಪಾಸಾಗದ ಮಂದಬುದ್ಧಿಯ ಪಿಶಾಚಿಗಳು ಇದ್ದರೆ, ಅವುಗಳನ್ನು ಉಪಾಯವಾಗಿ ಅವುಗಳ ಸೈಜಿಗೆ ತಕ್ಕಂತೆ ಕ್ವಾರ್ಟರ್, ಹಾಫ್, ಫುಲ್ ಇಲ್ಲವೇ, ಬಿಯರ್ ಬಾಟಲಿಗೆ ಹಾಕಿ ಬಿರಡೆ ಮುಚ್ಚಿ ಬಂದೋಬಸ್ತ್ ಮಾಡಿ ನದಿ, ಸಮುದ್ರಗಳಲ್ಲಿ ತೇಲಿಬಿಡುವ ಜೋಯಿಸರೂ ಇದ್ದು, ನಿಮ್ಮ ಗಿರಾಕಿಯ ಪ್ರಯಾಣ ಭತ್ತೆ ನೀವವರಿಗೆ ಕೊಟ್ಟರಾಯಿತು. ನಿಮ್ಮ ದೆವ್ವಗಳು ನಿರಾಯಾಸವಾಗಿ ಸಮುದ್ರಯಾನ ಮಾಡಿ ಆಫ್ರಿಕಾ, ಅಮೇರಿಕಾ ತೀರ ತಲುಪುತ್ತವೆ. ಅಲ್ಲಿ ಪಾಸ್ಪೋರ್ಟ್, ವೀಸಾ ಇಲ್ಲದೇ ಅವು ಮರಳಿಬಂದು ನಿಮ್ಮನ್ನು ಪೀಡಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ನೀವು ಮಾಡಬೇಕಾದುದು ಇಷ್ಟೇ- ಜೋಯಿಸರು ಹೇಳಿದ್ದಕ್ಕೆ ಭಯಭಕ್ತಿಯಿಂದ ತಲೆ ಅಲ್ಲಾಡಿಸಬೇಕು ಮತ್ತು ಗಂಟುಬಿಚ್ಚಬೇಕು!
ಇಲ್ಲದಿದ್ದಲ್ಲಿ ಇವರು ವಿಕ್ರಮಾದಿತ್ಯನನ್ನು ಕಾಡಿದ ಬೇತಾಳದಂತೆ ನಿಮ್ಮನ್ನು ಕಾಡುತ್ತಿರುತ್ತಾರೆ. ಬ್ರಹ್ಮಕಪಾಳದಂತೆ ನಿಮ್ಮ ಕುತ್ತಿಗೆಗೆ ಕಚ್ಚಿಕೊಂಡಿರುತ್ತಾರೆ. ನೀವು ಹೆದರದೇ ಇದ್ದರೆ, ಕೆಲವು ಸ್ಯಾಂಪಲುಗಳನ್ನು ಇಲ್ಲಿ ಕೊಡುತ್ತೇನೆ.
ಮೇಲೆ ಹೇಳಿದ್ದು ಅಲ್ಲದೆ, ಜೋಯಿಸರು ಹೇಳುವಂತೆ “ಮನೆತನದಲ್ಲಿ ಯಾರಾದರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ, ಯಾರಾದರೂ ನೇಣು ಹಾಕಿಕೊಂಡು ಅಥವಾ ಅಪಘಾತದಿಂದ ಸಾವನ್ನಪ್ಪಿದ್ದರೆ, ಇಂತಹವರ ಮನೆಯಲ್ಲಿ ಒಂದು ಪೀಳಿಗೆ ಬಿಟ್ಟು ಮುಂದಿನ ಪೀಳಿಗೆಯವರು ಭಯಂಕರ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.” ಎಷ್ಟರಮಟ್ಟಿಗೆ ಈ ಉಪದ್ರಗಳಿರುತ್ತವೆ ಎಂದರೆ, ಬೆಳಿಗ್ಗೆ ನೀವು ಶೌಚಕ್ಕೆ ಹೋದಾಗ ಹಿಂದಿನ ದಿನ ತಿಂದ ಚಿಕನ್, ಮಟನ್ ಇತ್ಯಾದಿ ಹೊರಗೆ ಬರದಂತೆ ದಿಗ್ಭಂಧನ ವಿಧಿಸುವ ತಾಕತ್ತೂ ಈ ದೆವ್ವ ಪಿಶಾಚಿಗಳಿಗಿವೆ!
ಇಲ್ಲಿರುವ ಒಂದು ರಿಲೇಟಿವಿಟಿ ಥಿಯರಿಯೂ ಒಂದು ದೊಡ್ಡ ಆವಿಷ್ಕಾರವೇ. ನಿಮ್ಮ ಕುಟುಂಬದಲ್ಲಿ ನಿಮ್ಮ ಕಾಲದಲ್ಲಿ ಯಾರೂ ಅಪಮರಣಕ್ಕೆ ತುತ್ತಾಗಿರದಿದ್ದರೂ ನಿಮಗೆ ಮುಕ್ತಿಯಿಲ್ಲ! ನೀವೂ ಕಂಡೂ, ಕೇಳಿಯೂ ಇಲ್ಲದ ಅಜ್ಜನ ಮುತ್ತಜ್ಜ ಮುತ್ತಜ್ಜಿಯರನ್ನು ಜ್ಯೋತಿಷ್ಯ ಪ್ರಶ್ನೆಯ ಮೂಲಕ ನಿದ್ದೆಯಿಂದ ಒದ್ದೆಬ್ಬಿಸಿ ಈ ಜ್ಯೋತಿಷಿಗಳು ಕರೆತರುತ್ತಾರೆ.
ನಿಮಗೆ ನಂಬಿಕೆ ಇಲ್ಲದಿದ್ದರೆ, ಒಂದು ಸತ್ಯ ಘಟನೆ ಹೇಳುತ್ತೇನೆ. ಮೂರು ದಶಕಗಳ ಹಿಂದೆ ನಾನು ಮುಂಬಯಿಯಲ್ಲಿದ್ದೆ. ನಾವಿದ್ದ ಚಾಳ್ (ಒಂದರ ಪಕ್ಕ ಒಂದಿರುವ ಎರಡು ಅರೆಕೋಣೆಗಳ ಮನೆಗಳು)ನ ಪಕ್ಕದ ರೂಮಿನಲ್ಲಿ ನಮ್ಮದೇ ಕರಾವಳಿಯ ಒಬ್ಬರು ‘ಪ್ರಖಾಂಡ’ ಜೋಯಿಸರಿದ್ದರು. ಬ್ರಾಹ್ಮಣರಲ್ಲದ ಅವರು ತಮ್ಮ ಡ್ಯೂಟಿಯ ಅವಧಿಯಲ್ಲಿ ಜನಿವಾರ, ಕಚ್ಚೆ, ನಾಮಗಳಿಂದ ಭೂಷಿತರಾಗಿ, ಮಾರುಕಟ್ಟೆ ಇರುವ ನೂರಾರು ದೇವರುಗಳ ಫೋಟೋ, ವಿಗ್ರಹಗಳನ್ನು ಬೆಳ್ಳಿ ಮಚ್ಚಿದ ಮಹಾಮಂಟಪಗಳಲ್ಲಿ ಹೂ, ಕುಂಕುಮ, ಅರಿಶಿನಗಳ ಅಲಂಕಾರಗಳೊಂದಿಗೆ ಇಟ್ಟುಕೊಂಡು, ಥಳಥಳ ಹೊಳೆಯುವ ತಾಮ್ರ, ಹಿತ್ತಾಳೆ, ಕಂಚಿನ ತಟ್ಟೆ, ಹರಿವಾಣ, ಗಿಂಡೆಗಳಿಂದ ಪರಿವೃತ್ತರಾಗಿ ಬಂದವರ ದೋಷ ಪರಿಹಾರಾರ್ಥವಾಗಿ ಸನ್ನದ್ಧರಾಗಿ ತಮ್ಮ ಏಜೆನ್ಸಿಯಲ್ಲಿ ಬೆಳಿಗ್ಗಿನಿಂದ ತಡರಾತ್ರಿವರೆಗೆ ಕುಳಿತು, ಕೆಲವು ಸಲ ಹೋಮಗಳ ಹೊಗೆ ಹಾಕುತ್ತಾ ಸೊಳ್ಳೆಗಳನ್ನು ಓಡಿಸುವುದಲ್ಲದೆ, ಅಕ್ಕಪಕ್ಕದವರ ಉಸಿರನ್ನೂ ಕಟ್ಟಿಸುತ್ತಿದ್ದರು. ಅವರ ವೇದೋಪನಿಷತ್ ಅಧ್ಯಯನ ಫುಟ್‍ಪಾತ್‍ಗಳಲ್ಲಿ ಸಿಗುವ ಮಂತ್ರದ ಪುಸ್ತಕಗಳಿಗೆ ಸೀಮಿತವಾಗಿದ್ದರೂ ಅವರು ಅವುಗಳ ನಡುವೆ ಉದಾರವಾಗಿ ಹ್ರಾಂ, ಹ್ರೀಂ, ಫಟ್, ಘಟ್, ಷಟ್! ಶಿಟ್! ಇತ್ಯಾದಿಗಳನ್ನು ‘ಕರಿಮಣಿ ಸರದೊಳ್ ಹವಳವಂ ಕೋದಂತೆ’ ಸೇರಿಸುತ್ತಿದ್ದರಿಂದ ಗಿರಾಕಿಗಳು ಪ್ರಭಾವಿತರಾಗಿ ಮನೋರಮೆಯಂತೆ ತಲೆದೂಗುತ್ತಿದ್ದರು. ಇವೆಲ್ಲವುಗಳ ವಿವರ ಮುಂದೆ ಹೇಳುವೆ. ಈಗ ಮುಖ್ಯ ವಿಷಯಕ್ಕೆ ಬರೋಣ.
ಇವರಿಗೆ ಬರುವ ಗಿರಾಕಿಗಳಲ್ಲಿ ಕಾಮಾಟಿಪುರ ಮುಂತಾದ ರೆಡ್‍ಲೈಟ್ ಏರಿಯಾದ ಮಹಿಳೆಯರು ಮತ್ತು ಅವರ ಮೇಡಂಗಳೂ ಇದ್ದರು. ವ್ಯಾಪಾರ ಅಭಿವೃದ್ಧಿ, ಗರ್ಭಪಾತ ದೋಷ, ರೋಗಬಾಧೆ ಇತ್ಯಾದಿಗಳ ಪರಿಹಾರಾರ್ಥ ಬಂದು ತಮ್ಮ ಮನಸ್ಸನ್ನೂ, ಪರ್ಸನ್ನೂ ಹಗುರ ಮಾಡಿಕೊಂಡುಹೋಗುತ್ತಿದ್ದರು.
ಯಾವತ್ತೂ ಬರುವ ಒಬ್ಬಳು ಮೇಡಂ, ಒಂದು ದಿನ ಸಖಿ ಪರಿವಾರ ಸಮೇತಳಾಗಿ ಬಂದಳು. ಅವಳಿಗೆ ಮಹಾ ಆತಂಕವಾಗಿತ್ತು. ಅವಳ ಅಡ್ಡೆಗೆ ಒಬ್ಬ ಶ್ರೀಮಂತ ಮಾರ್ವಾಡಿ ವರ್ಷಗಳಿಂದ ಬರುತ್ತಿದ್ದನಂತೆ. ಅವಳ ಮೇಲೆ ಭಾರೀ ಪ್ರೀತಿಯಂತೆ. ಅವಳಿಗೆ ವಯಸ್ಸಾದರೂ, ಆಗಾಗ ಅವಳ ಸಂಗವನ್ನೂ ಬಯಸುತ್ತಿದ್ದನಂತೆ. ಒಂದು ದಿನ ಬಂದ ಈ ಹಣ್ಣುಹಣ್ಣು ಮುದುಕ ‘ನೀನೇ ಬೇಕು’ ಎಂದು ಯುವತಿಯರನ್ನೆಲ್ಲಾ ತಿರಸ್ಕರಿಸಿ, ಅವಳ ಜೊತೆ ಮಲಗಿ, ಖಕ್ ಪಕ್ ಎಂದು ಕೆಮ್ಮುತ್ತಾ ಆಟವಾಡುತ್ತಿದ್ದವನು ಅವಳೊಳಗೇ ಪ್ರಾಣಬಿಟ್ಟನಂತೆ!
ಅವಳಿದನ್ನು ಹೇಳುತ್ತಿದ್ದಂತೆ, ನಮ್ಮ ಜೋಯಿಸರು ಆಕಾಶವೇ ತಲೆಯಮೇಲೆ ಬಿದ್ದಂತೆ ಉದ್ಘಾರ ತೆಗೆದು, ”ಆತನ ಆತ್ಮ ಇನ್ನೂ ನಿನ್ನ ಗರ್ಭದಲ್ಲಿದೆ, ನಿನ್ನ ಮೇಲೆ ಅಷ್ಟು ಮೋಹ ಇರುವವನು ನೀನು ಸತ್ತರೂ ನಿನ್ನನ್ನು ಬಿಡಲಾರ!” ಎಂದು ಖಡಾಖಂಡಿತವಾಗಿ ಘೋಷಿಸಿದಾಗ ಆತನ ಈ ಅಮರಪ್ರೇಮಕ್ಕೆ ಅನಂದಭಾಷ್ಪ ಸುರಿಸಬೇಕಾಗಿದ್ದವಳು ಸಂತೋಷಾತಿರೇಕದಿಂದ ರೈತರು ಯೂರಿಯಾ ಎಂದು ಕರೆಯುವ ಅಮೋನಿಯಂ ಮಿಶ್ರಿತ ದ್ರಾವಣವನ್ನು ಕುಳಿತಲ್ಲೇ ಇಷ್ಟಗಲಕ್ಕೆ ಸ್ರವಿಸಿದಳಂತೆ!
ನಂತರ ಆಕೆಯ ದೇಹದಿಂದ ಆ ಅಮರಪ್ರೇಮಿ ಮುದುಕ ಮಾರ್ವಾಡಿಯನ್ನು ಓಡಿಸಲು ಆ ಕಾಲಕ್ಕೇ ಒಂದೂವರೆ ಲಕ್ಷ ರೂ.ಗಳ ಮಹಾಪೂಜೆ ಮಾಡಿಸಲಾಯಿತು. ಇದು ನನಗೆ ಗೊತ್ತಾದುದು ನಮ್ಮ ರೂಮಿನಲ್ಲೇ ಇದ್ದ ಕಸಿನ್‍ನಿಂದ. ಆತ ಅಗತ್ಯ ಬಿದ್ದಾಗ ದಿಢೀರ್ ಜನಿವಾರ ಹಾಕಿ ಪರಿಚಾರಕ ಮಾಣಿಯಾಗಿ ಹೋಗುತ್ತಿದ್ದ! ಬಾಲ್ಯದಲ್ಲೇ ಮುಂಬಯಿಗೆ ಓಡಿ ಫುಟ್‍ಪಾತಲ್ಲಿ ಮಲಗಿ, ರಾತ್ರಿ ಶಾಲೆಯಲ್ಲಿ ಕಲಿತ ಈ ಜೋಯಿಸರು ಒಂದು ವಿಷಯದಲ್ಲಿ ಪ್ರಾಮಾಣಿಕರು. ನಮಗೆ ನಂಬಿಕೆ ಇಲ್ಲ ಎಂದು ಗೊತ್ತಾದದ್ದೇ, ಅವರು ರಾತ್ರಿ ಎಲ್ಲರೂ ಹೋದ ಮೇಲೆ ರಿಲಾಕ್ಸಾಗಿ ಇಂತಹ ಕತೆಗಳನ್ನು ಹೇಳುತ್ತಿದ್ದರು. ಇದರ ವಿವರ ತಿಳಿಸಿದ್ದೂ ಅವರೇ. “ಮಾರ್ವಾಡಿಯಿಂದ ಅವಳು ಪೀಕಿಸಿದ್ದಾಳೆ. ಅವಳಿಂದ ಸ್ವಲ್ಪ ನಾನು ಅಷ್ಟೇ!” ಇದು ಅವರ ಫಿಲಾಸಫಿ. ಇಂತಹ ಇನ್ನೂ ಅನೇಕ ಆವಿಷ್ಕಾರಗಳನ್ನು ಮುಂದೆ ನೋಡೋಣ.

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲ್ ‘ಡಕಾಯಿತಿ’: 54,000 ಕೋಟಿಗೂ ಹೆಚ್ಚಿನ ಹಣ ವಂಚನೆ: ಎಸ್‌ಒಪಿ ರಚಿಸಲು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ

ನವದೆಹಲಿ: ಡಿಜಿಟಲ್ ವಂಚನೆಯಿಂದ 54,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸುವುದು ಸಂಪೂರ್ಣ "ದರೋಡೆ ಅಥವಾ ಡಕಾಯಿತಿ" ಎಂದು ಸುಪ್ರೀಂ ಕೋರ್ಟ್ ಸೋಮವಾರ ಬಣ್ಣಿಸಿದೆ ಮತ್ತು ಅಂತಹ ಪ್ರಕರಣಗಳನ್ನು ನಿಭಾಯಿಸಲು ಆರ್‌ಬಿಐ, ಬ್ಯಾಂಕುಗಳು...

ಪಾಕಿಸ್ತಾನ ನಂಟು : ಸಿಎಂ ಶರ್ಮಾ ಆರೋಪ ನಿರಾಧಾರ, ಸಿ-ಗ್ರೇಡ್ ಸಿನಿಮಾ ಎಂದ ಗೌರವ್ ಗೊಗೊಯ್

ತಮಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಆರೋಪಗಳನ್ನು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ತಳ್ಳಿಹಾಕಿದ್ದು, ಎಸ್‌ಐಟಿ ವರದಿಯು ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿ ಬಳಿಯೇ ಇದೆ....

ಪಂಜಾಬ್: ತರಗತಿಯೊಳಗೆ ವಿದ್ಯಾರ್ಥಿನಿಯನ್ನು ಕೊಂದು, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿ

ಚಂಡೀಗಢ: ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಶಾಲಾ ಕೋಣೆಯೊಳಗೆ ವಿದ್ಯಾರ್ಥಿನಿಯ ತಲೆಗೆ ಗುಂಡು ಹಾರಿಸಿ ಕೊಂದ ಘಟನೆ ಸೋಮವಾರ ನಡೆದಿದೆ. ಸಹಪಾಠಿಗಳು ಭಯಭೀತರಾಗಿ ನೋಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಯನ್ನು...

ಅಸ್ಸಾಂ ಸಿಎಂ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ : ಗೌರವ್ ಗೊಗೊಯ್

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಸ್ಲಿಮರ ವಿರುದ್ದ ದ್ವೇಷ ಹರಡುತ್ತಿದ್ದಾರೆ, ಅವರ ಜನಾಂಗೀಯ ಹತ್ಯೆಗೆ ಪ್ರಚೋದಿಸುತ್ತಿದ್ದಾರೆ ಎಂದು ಅಸ್ಸಾಂ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹಾಗೂ ಸಂಸದ ಗೌರವ್ ಗೊಗೊಯ್ ಹೇಳಿದ್ದಾರೆ. ಅಸ್ಸಾಂ...

‘ಎಂಡಿಎಂಎ ಡ್ರಗ್ಸ್ ಕೇಂದ್ರವಾಗಿ ಮಾರ್ಪಟ್ಟ ಮಧ್ಯಪ್ರದೇಶ-ರಾಜಸ್ಥಾನ ಗಡಿ’: 13ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದ ಪೊಲೀಸರು. 

ಭೋಪಾಲ್: ದೇಶದ ಅಫೀಮು ಕೃಷಿ ಮತ್ತು ಕಳ್ಳಸಾಗಣೆ ಮಾರ್ಗವಾಗಿ ದೀರ್ಘಕಾಲದಿಂದ ಕುಖ್ಯಾತಿ ಗಳಿಸಿರುವ ಪಶ್ಚಿಮ ಮಧ್ಯಪ್ರದೇಶ ಮತ್ತು ಪಕ್ಕದ ಆಗ್ನೇಯ ರಾಜಸ್ಥಾನದ ಜಿಲ್ಲೆಗಳು ಈಗ MDMA ಸಂಶ್ಲೇಷಿತ ಡ್ರಗ್ಸ್ ಅಕ್ರಮ ಉತ್ಪಾದನೆ ಮತ್ತು...

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದ ವಿರೋಧ ಪಕ್ಷಗಳು: ವರದಿ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ವಿಪಕ್ಷ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ 'ಅನಿರೀಕ್ಷಿತ ಕೃತ್ಯ' ಎಸಗಲು ಸಂಚು...

ಮೆಟಾ-ವಾಟ್ಸಾಪ್ ಗೌಪ್ಯತೆ ನೀತಿ ಪ್ರಕರಣ: ಸುಪ್ರೀಂ ಕೋರ್ಟ್ ವಿಚಾರಣೆ ಫೆಬ್ರವರಿ 23ಕ್ಕೆ ಮುಂದೂಡಿಕೆ 

ನವದೆಹಲಿ: ಗೌಪ್ಯತೆ ನೀತಿಯ ಮೇಲೆ 213.14 ಕೋಟಿ ರೂ. ದಂಡ ವಿಧಿಸಿದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶದ ವಿರುದ್ಧ ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್ ಮತ್ತು ವಾಟ್ಸಾಪ್ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್...

ಪ್ರಬಲಜಾತಿ ಯುವತಿಯೊಂದಿಗೆ ಗ್ರಾಮ ತೊರೆದ ದಲಿತ ಯುವಕ; ಕುಟುಂಬದ ಮೇಲೆ ದಾಳಿ ಮಾಡಿದ ಹದಿಮೂರು ಜನರ ಬಂಧನ

ಸೂರತ್ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮತ್ತು ಆಕೆಯ ಇಬ್ಬರು ವಯಸ್ಕ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಶನಿವಾರ ಒಂದೇ ಕುಟುಂಬದ 13 ಸದಸ್ಯರನ್ನು ಬಂಧಿಸಿದ್ದಾರೆ. ಆಕೆಯ...

‘ದೆಹಲಿ ಖಾಲಿಸ್ತಾನವಾಗಲಿದೆ’: 10 ಶಾಲೆಗಳು, ಸಂಸತ್ತಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ನಂತರ ವಿದ್ಯಾರ್ಥಿಗಳ ಸ್ಥಳಾಂತರ

ಸೋಮವಾರ ರಾಷ್ಟ್ರ ರಾಜಧಾನಿ ಮತ್ತು ಸಂಸತ್ತಿನ ಕನಿಷ್ಠ 10 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಭಾರಿ ಭದ್ರತಾ ಪ್ರತಿಕ್ರಿಯೆ ನೀಡಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳು (ಡಿಎಫ್‌ಎಸ್) ತಿಳಿಸಿವೆ. ಡಿಎಫ್‌ಎಸ್ ಪ್ರಕಾರ, ಬೆಳಿಗ್ಗೆ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ರೈತರ ಪಾಲಿಗೆ ಮರಣಶಾಸನ: ಸಿಎಂ ಸಿದ್ದರಾಮಯ್ಯ

ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ...