ಈ ಸರ್ಕಾರ ಬಂದ ಹೊಸತರಲ್ಲೇ ಅತಿಹೆಚ್ಚು ಚರ್ಚೆಗೊಳಗಾಗಿರುವ ವಿಷಯಗಳಲ್ಲಿ ಶಿಕ್ಷಣದ ವಿಷಯವೂ ಒಂದು. ಈಗಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಚಳವಳಿ ಹಿನ್ನೆಲೆಯವರೂ ಆಗಿರುವುದರಿಂದ ಅವರ ಮೇಲಿರಬಹುದಾದ ಹೆಚ್ಚುವರಿ ನಿರೀಕ್ಷೆಗಳ ಕಾರಣಕ್ಕೆ ಮತ್ತು ಈ ಹಿಂದಿನ ಸರ್ಕಾರಗಳ ಅವಧಿಗಳಲ್ಲಿ ಸಾರ್ವಜನಿಕ ಶಿಕ್ಷಣದ ಸುಧಾರಣೆಗಾಗಿ ಘೋಷಿಸಿದ್ದ ಕಾರ್ಯಕ್ರಮಗಳಲ್ಲಿ ಜಾರಿಯಾದದ್ದು ಅತ್ಯಲ್ಪ ಎಂಬ ವಸ್ತುಸ್ಥಿತಿಯ ಅರಿವಿನ ಕಾರಣಕ್ಕೂ, ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಹೋರಾಡುತ್ತಿರುವವರು ಈ ಸರ್ಕಾರದ ಘೋಷಣೆಗಳಿಂದ ಆತಂಕಗೊಂಡಂತೆ ಕಂಡುಬರುತ್ತಿದೆ. ಶಿಕ್ಷಣ ಸಚಿವರ ಸರ್ಕಾರಿ ಶಾಲೆಗಳ ವಿಲೀನದ ಘೋಷಣೆಯಿರಲಿ, ಬಜೆಟ್‍ನಲ್ಲಿ ಪ್ರಸ್ತಾಪಿಸಲಾದ ಇಂಗ್ಲೀಷ್ ಮಾಧ್ಯಮ ವಿಭಾಗ ಮತ್ತು ಶಾಲೆ ವಿಲೀನದ ವಿಚಾರವಿರಲಿ ಇದೇ ರೀತಿಯ ಆತಂಕದ ಪ್ರತಿಕ್ರಿಯೆಯನ್ನು ಹುಟ್ಟಿಸಿವೆ. ಅದೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದದ್ದು ಮತ್ತು ಗಂಭೀರವಾದ ಚಿಂತನ-ಮಂಥನಕ್ಕೆ ಕಾರಣವಾದದ್ದು ಸಚಿವರು ಪ್ರಸ್ತಾಪಿಸಿದ ‘ತೆರೆದ ಪುಸ್ತಕ ಪರೀಕ್ಷಾ ಪದ್ಧತಿ’ (Open Book Exam System)ಯ ಸಂಗತಿ.
ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಶಾಲಾ ಶಿಕ್ಷಣದೊಳಗೆ ಪರಿಚಯಿಸುವ ಪ್ರಸ್ತಾಪದ ಸುತ್ತ ಪರ-ವಿರೋಧವಾಗಿ ತೀವ್ರವಾದ ವಾಗ್ವಾದಗಳು ನಡೆಯುತ್ತಿವೆ. ಸಚಿವರು ತಮ್ಮ ಹೇಳಿಕೆಯಲ್ಲೇ ಸ್ಪಷ್ಟಪಡಿಸಿರುವಂತೆ, ಅವರು ಈ ಪದ್ಧತಿಯನ್ನು ಪರಿಚಯಿಸಲು ಬಯಸಿರುವುದು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ. ಗುಣಾತ್ಮಕ ಶಿಕ್ಷಣಕ್ಕೆ ಬೇಕಿರುವುದೆಲ್ಲವನ್ನೂ ಮಾಡಬೇಕು ಎಂಬುದು ಅವರ ಆಶಯ. ಆದರೆ ಈ ಬಗ್ಗೆ ಪರ-ವಿರೋಧಗಳು ಶುರುವಾಗಿವೆ, ವಿಚಾರದ ಹಲವು ಮಗ್ಗುಲುಗಳು, ವಿಭಿನ್ನ ನಿಲುವುಗಳೂ ಕೂಡಾ ಪ್ರಕಟಗೊಳ್ಳುತ್ತಿವೆ.
ಈ ಉದ್ದೇಶಿತ ಯೋಜನೆಯ ಹಲವು ಆಯಾಮಗಳನ್ನು ಓದುಗರಿಗೆ ಪರಿಚಯಿಸಲು ಆನಂದ್ ವರಹಳ್ಳಿ ಅವರು ಶಿಕ್ಷಣಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಎಚ್.ಎನ್.ವಿಶ್ವನಾಥ್‍ರವರ ಸಂದರ್ಶನ ನಡೆಸಿದ್ದಾರೆ. ವಿಶ್ವನಾಥ್ ಅವರು ಸಿಲೆಬಲ್ ರಚನಾ ಸಮಿತಿಯ ಸದಸ್ಯರಾಗಿದ್ದವರು, ಶಿಕ್ಷಣದ ಕುರಿತ ಸಂಪನ್ಮೂಲ ವ್ಯಕ್ತಿಯಾಗಿಯೂ ಹೆಸರು ಮಾಡಿದವರು. ಪ್ರಸ್ತುತ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿದ್ದಾರೆ.

ಪತ್ರಿಕೆ : ತೆರೆದ ಪಠ್ಯ ಪುಸ್ತಕ ಪರೀಕ್ಷೆಯ ಪರಿಕಲ್ಪನೆ ಏನು?
ವಿಶ್ವನಾಥ್ : ಶಿಕ್ಷಣ ಸಚಿವರು ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಹೇಳಿದಂದಿನಿಂದ ಆ ವಿಚಾರ ಬಹಳ ವಾಗ್ವಾದಕ್ಕೆ ಕಾರಣವಾಗಿದೆ. ವಾಸ್ತವದಲ್ಲಿ ತೆರೆದ ಪುಸ್ತಕ ಪರೀಕ್ಷೆ ಎಂಬುದು ಹಿಂದೆಂದೂ ಕೇಳಿರದ ಪದ್ಧತಿಯಲ್ಲ. ಈಗಾಗಲೇ ಜಗತ್ತಿನ ಹಲವು ದೇಶಗಳಲ್ಲಿ ಶಿಕ್ಷಣದ ವಿವಿಧ ಹಂತಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಭಾರತದಲ್ಲೂ ಈ ಪರಿಕಲ್ಪನೆ ಪರಿಚಿತವೇ. ಮೇಲ್ನೋಟಕ್ಕೆ ಕೇಳುವಂತೆ ಈ ಪದ್ಧತಿ ಯಾವುದೇ ಶೈಕ್ಷಣಿಕ ಹಂತದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕಗಳಲ್ಲಿ ಉತ್ತರ ಹುಡುಕಿ ಉತ್ತರಿಸುವುದಲ್ಲ. ವಾಸ್ತವಿಕವಾಗಿ ಇದರ ಪರಿಕಲ್ಪನೆಯೇ ಬೇರೆ. ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಅವರ ವಿಶ್ಲೇಷಣಾ ಸಾಮಥ್ರ್ಯ ಅಥವಾ ಅನ್ವಯಿಕವಾಗಿ ಚಿಂತನೆ ಮೂಲಕ ಉತ್ತರಿಸುವ ರೀತಿಯಲ್ಲಿ ಕೊಡಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯಲು ಅವರಿಗೆ ಆಕರ ಗ್ರಂಥಗಳನ್ನು ಬಳಸಲು ಅವಕಾಶ ನೀಡಲಾಗುತ್ತದೆ. ಇಂತಹ ವ್ಯವಸ್ಥೆಯಲ್ಲಿ ಪಠ್ಯವಸ್ತು ವಿಷಯಕ್ಕೆ ಸಂಬಂಧಿಸಿದಂತೆಯೇ ಪ್ರಶ್ನೆಗಳಿರುತ್ತವೆ. ಆದರೆ ಆ ಪ್ರಶ್ನೆಗಳಿಗೆ ನೇರವಾದ ಮತ್ತು ನಿರ್ದಿಷ್ಟವಾದ ಉತ್ತರಗಳು ಈ ಆಕರ ಗ್ರಂಥಗಳಲ್ಲಿ ಸುಲಭವಾಗಿ ಸಿಗುವುದಿಲ್ಲ. (ಅಂದರೆ ಈಗಿನ ಗೈಡ್‍ಗಳು/ಕ್ವಶ್ಚನ್ ಬ್ಯಾಂಕ್‍ಗಳಂತೆ ಒಂದು ಪ್ರಶ್ನೆಗೆ ಒಂದು ಉತ್ತರ ಎಂಬ ಸಿದ್ಧಮಾದರಿ ಇರುವುದಿಲ್ಲ). ಪರೀಕ್ಷೆಗೆ ಮೊದಲೇ ತಾವು ಅಧ್ಯಯನ ಮಾಡಿದ ವಿಷಯಗಳನ್ನು ಮತ್ತು ಆಕರ ಗ್ರಂಥಗಳಲ್ಲಿರುವ ವಿಚಾರಗಳನ್ನು ಅನ್ವಯಿಸಿ ಚಿಂತನೆ ಮಾಡಿ ಸ್ವನಿರ್ಧಾರಕ್ಕೆ ಬಂದು ಉತ್ತರ ರೂಪದಲ್ಲಿ ಬರೆಯಬೇಕಾದಂತ ಒಂದು ವ್ಯವಸ್ಥೆಯೇ ತೆರೆದ ಪಠ್ಯಪುಸ್ತಕ ಪರೀಕ್ಷೆಯಾಗಿದೆ. ಸರಳವಾಗಿ ಹೇಳಬೇಕೆಂದರೆ- ವಿದ್ಯಾರ್ಥಿಗಳು ಕೊಡಲಾಗುವ ಪ್ರಶ್ನೆಗಳಿಗೆ ತಮ್ಮದೇ ವಿವೇಚನೆಯಲ್ಲಿ ತರ್ಕಿಸಿ ತಮಗೆ ಸರಿ ಎನಿಸುವ ಉತ್ತರವನ್ನು ಬರೆಯುವ ವ್ಯವಸ್ಥೆಯಾಗಿದೆ.

ಪತ್ರಿಕೆ: ತೆರೆದ ಪಠ್ಯ ಪುಸ್ತಕ ಪರೀಕ್ಷೆ ಪದ್ಧತಿಯ ವೈಶಿಷ್ಟತೆಯೇನು?
ವಿಶ್ವನಾಥ್: ಮೂಲತಃ ಶಿಕ್ಷಣ ವ್ಯವಸ್ಥೆಯಲ್ಲಿ ನಾಲ್ಕು ಅಂತರ್ಗತ ಆಯಾಮಗಳಿರುತ್ತವೆ. ಅವುಗಳೆಂದರೆ, 1. ಶಿಕ್ಷಣದ ಮೂಲ ಮತ್ತು ಉದ್ದೇಶ. 2. ಇವುಗಳನ್ನು ಆಧರಿಸಿ ಪಠ್ಯಕ್ರಮ ರೂಪಿಸುವುದು. 3. ಈ ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು. 4. ಬಹುಮುಖ್ಯವಾಗಿ ಕಲಿಕೆಯನ್ನು ಒರೆಗೆ ಹಚ್ಚುವುದು ಅಥವಾ ಮೌಲ್ಯಮಾಪನ. ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಬೆಳವಣಿಗೆ ಈ ಮೌಲ್ಯಮಾಪನವನ್ನು ಆಧರಿಸುತ್ತದೆ. ಹಾಗಾಗಿ ಉಳಿದೆಲ್ಲ ಆಯಾಮಗಳಿಗಿಂತ ಈ ಆಯಾಮ ಅತೀ ಮುಖ್ಯವಾಗುತ್ತದೆ. ಶಿಕ್ಷಣ ನಿಂತ ನೀರಾಗದೆ ಕಾಲಾನುಕ್ರಮದಲ್ಲಿ ಬದಲಾವಣೆಯಾಗುತ್ತಾ ಹೋಗುತ್ತದೆ. ಮೌಲ್ಯಮಾಪನ ವ್ಯವಸ್ಥೆಯಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಭಾರತವೂ ಸೇರಿದಂತೆ ಪ್ರಪಂಚದಲ್ಲಿ ಹೆಚ್ಚಿನ ರಾಷ್ಟ್ರಗಳು ಸಾಂಪ್ರದಾಯಿಕ ಮೌಲ್ಯಮಾಪನ ತಂತ್ರ ಸಾಧನಗಳ ಬದಲಾಗಿ ಅಧುನಿಕವಾದ ಮೌಲ್ಯ ಮಾಪನ ಕಾರ್ಯತಂತ್ರ ಸಾಧನಗಳನ್ನು ಬಳಸುತ್ತಿವೆ. ಸಾಂಪ್ರದಾಯಿಕ ಮೌಲ್ಯಮಾಪನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಮರಣಶಕ್ತಿ ಆಧಾರಿತ ಮತ್ತು ಮಾಹಿತಿಯಾಧಾರಿತ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು, ಮೌಲ್ಯಮಾಪನ ಸಮಗ್ರವೆನಿಸುತ್ತಿಲ್ಲ. ಕಲಿಯಬೇಕಾದ ವಿಷಯದಲ್ಲಿ ಆಳವಾದ ಜ್ಞಾನವಿಲ್ಲದೆಯೂ, ಯಾಂತ್ರಿಕವಾಗಿ ಉರು ಹೊಡೆದು ನಿಖರವಾಗಿ ಉತ್ತರ ಬರೆಯುವವರಿಗೆ ಹೆಚ್ಚಿನ ಅಂಕಗಳೊಂದಿಗೆ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಪ್ರತಿರೋಧವನ್ನು ಎದುರಿಸುತ್ತಿದೆ. ಜೊತೆಗೆ ಅಸಮಗ್ರ ಮೌಲ್ಯಮಾಪನ ಕ್ರಮ ಎಂಬ ಟೀಕೆಗೂ ಗುರಿಯಾಗಿದೆ.
ಇಂತಹ ಸಾಂಪ್ರದಾಯಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದಾಗ, ಅವರಿಗೆ ಕೌಶಲ ಅಭಿವೃದ್ಧಿ, ಸೃಜನಶೀಲತೆ ಲಭಿಸುವುದು ಕಡಿಮೆ ಇರುತ್ತದೆ. ವಿದ್ಯಾರ್ಥಿಗಳಿಗೆ ಮಾನಸಿಕ ಸಾಮಥ್ರ್ಯಗಳಾದ ತಾರ್ಕಿಕ ಚಿಂತನೆ, ಸಂಶೋಧನಾ ಪ್ರವೃತ್ತಿ, ಪರೀಕ್ಷಿಸುವ ಮನೋಭಾವನೆ, ಸತ್ಯಾನ್ವೇಷಣೆಯ ಜಾಗೃತ ಮನಸ್ಥಿತಿ ಮತ್ತು ಬೌದ್ಧಿಕ ಕೌಶಲಗಳು ಅದರಲ್ಲೂ ವಿಮರ್ಶಾತ್ಮಕ ಚಿಂತನೆ ಇನ್ನೂ ಮುಂತಾದವು ತೆರೆದ ಪಠ್ಯ ಪುಸ್ತಕದ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ದೊರಕುತ್ತವೆ.
ಇದು ವಿದ್ಯಾರ್ಥಿಗಳ ಕಲಿಕೆಯ ಸಮಗ್ರ ಮೌಲ್ಯಮಾಪನ ಮಾಡುವಂತಹದ್ದು. ಎಲ್ಲ ವಿದ್ಯಾರ್ಥಿಗಳ, ವಿಶಿಷ್ಟತೆಯನ್ನು ಬಹಳ ಪರಿಣಾಮಕಾರಿಯಾಗಿ ಅನ್ವಯಿಸಲಾಗುವುದು. ಹಾಗೆಯೇ ನೈಜ ಸಾಮಥ್ರ್ಯವನ್ನು ಪರೀಕ್ಷಿಸುವ ವಸ್ತುನಿಷ್ಠ ವಿಧಾನವಾಗಿದೆ. ವಿದ್ಯಾರ್ಥಿಗಳ ಬೌದ್ಧಿಕ ಕೌಶಲವನ್ನು ಪರೀಕ್ಷಿಸುವಿಕೆ ಆದ್ಯತೆಯಾಗಿರುತ್ತದೆ. ನಿರ್ದಿಷ್ಟ ಪ್ರಶ್ನೆಗಳಿಗೆ ಏಕ ಪ್ರಕಾರವಾದ ಉತ್ತರಗಳಿಗಿಂತ ವಿದ್ಯಾರ್ಥಿಗಳು ತಮ್ಮ ಸ್ವಯಂ ಆಲೋಚನೆ ನಡೆಸಿ ವಿವೇಚನಾ ಸಹಿತವಾಗಿ ಸಂಭಾವ್ಯ ಉತ್ತರಗಳನ್ನು ತಮ್ಮದೇ ರೀತಿಯಲ್ಲಿ ಬರೆಯುವ ಅವಕಾಶ ಈ ತೆರೆದ ಪಠ್ಯ ಪುಸ್ತಕ ಪರೀಕ್ಷಾ ಪದ್ಧತಿಯಲ್ಲಿ ಒದಗುತ್ತದೆ.
ಆದರೆ, ಇದರಲ್ಲಿ ಗಮನಿಸಬೇಕಾದ ವಿಚಾರಗಳೂ ಸಾಕಷ್ಟಿವೆ! ತೆರೆದ ಪುಸ್ತಕ ಮೌಲ್ಯಮಾಪನವು ಶಿಕ್ಷಣದ ಕೆಳಹಂತದಿಂದ ಉನ್ನತ ಹಂತದವರೆಗೂ ಕ್ರಮಬದ್ಧವಾಗಿ ಯೋಜಿಸಿದರೆ ಮಾತ್ರ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ. ಇದೊಂದು ಮೌಲ್ಯಮಾಪನ (ಪರೀಕ್ಷಾ) ಪದ್ಧತಿ ಮಾತ್ರ ಎಂಬುದು ನಿಜವೇ ಆದರೂ, ಅದರ ಯಶಸ್ಸು ಕೇವಲ ಪರೀಕ್ಷೆಯ ವಿಚಾರದ ಮೇಲಷ್ಟೇ ನಿಂತಿರುವುದಿಲ್ಲ. ಶಾಲಾ ಶಿಕ್ಷಣದ ಆರಂಭದಿಂದಲೂ ವಿಮರ್ಶಾತ್ಮಕ ಚಿಂತನೆಯನ್ನೂ ಸ್ವತಂತ್ರ ಒಳನೋಟಗಳನ್ನೂ ವಿದ್ಯಾರ್ಥಿಗಳು ರೂಪಿಸಿಕೊಳ್ಳುವಂತೆ ಉತ್ತೇಜಿಸುವ ಶಿಕ್ಷಣ ವಿಧಾನ ಮೊದಲ ಅಗತ್ಯವಾಗಿರುತ್ತದೆ. ಜೊತೆಗೆ ಆ ಮಟ್ಟದ ಪ್ರಬುದ್ಧತೆಯೊಂದಿಗೆ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸಬಲ್ಲವರಾಗಿ ನಮ್ಮ ಶಿಕ್ಷಕರನ್ನು ಸಿದ್ಧಪಡಿಸಿಕೊಳ್ಳುವ ಅಗತ್ಯವೂ ಇರುತ್ತದೆ. ಅಂದರೆ, ಇಡೀ ಶಿಕ್ಷಣ ವ್ಯವಸ್ಥೆಯಲ್ಲೇ ಆಮೂಲಾಗ್ರ ಬದಲಾವಣೆ ತರಬೇಕಾಗುತ್ತದೆ.

ಪತ್ರಿಕೆ: ಹಾಗಿದ್ದರೆ ಈಗಿನ ಸನ್ನಿವೇಶದಲ್ಲಿ ತೆರೆದ ಪುಸ್ತಕ ಪರೀಕ್ಷೆ ಪದ್ಧತಿಯು ಕಾರ್ಯಸಾಧುವೇ?
ವಿಶ್ವನಾಥ್: ಇದೊಂದು ವಿಭಿನ್ನ, ನವೀನ, ಸೃಜನಶೀಲ ಚಿಂತನೆಯಾದರೂ ಸಹ ಈ ಪದ್ಧತಿಯನ್ನು ಈಗಿರುವ ಪರಿಸ್ಥಿತಿಯಲ್ಲಿ ಏಕಾಏಕಿ ಜಾರಿ ಮಾಡುವುದು ಕಷ್ಠ ಸಾಧ್ಯ. ಜೊತೆಗೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಶಿಕ್ಷಕರನ್ನು ಬಹುಮುಖ್ಯವಾಗಿ ತೆರೆದ ಪಠ್ಯ ಪುಸ್ತಕ ಮತ್ತು ಮೌಲ್ಯಮಾಪನಕ್ಕೆ ಅಗತ್ಯವಿರುವ ಮಟ್ಟಕ್ಕೆ ಸನ್ನದ್ಧರನ್ನಾಗಿಸಬೇಕು. ಉನ್ನತ ಹಂತದ ತಾರ್ಕಿಕ ಚಿಂತನೆ, ಅನ್ವಯಿಕ ಸಾಮಥ್ರ್ಯ, ವಿಶ್ಲೇಷಣಾ ಸಾಮಥ್ರ್ಯ ಮುಂತಾದವುಗಳನ್ನು ಒರೆಗೆ ಹಚ್ಚುವಂತೆ ಪ್ರಶ್ನೆಗಳನ್ನು ತಯಾರಿಸುವ ಸಾಮಥ್ರ್ಯವನ್ನು ಶಿಕ್ಷಕರಲ್ಲಿ ರೂಪಿಸುವುದು ಹೇಗೆ ಎನ್ನುವ ಸಮಸ್ಯೆ ಮುಖ್ಯವಾಗಿ ಎದುರಾಗುತ್ತದೆ. ಎರಡನೇ ಸವಾಲು ಪೋಷಕರನ್ನು ಇದಕ್ಕೆ ಮಾನಸಿಕವಾಗಿ ಸಿದ್ಧಪಡಿಸುವುದು. ಹಾಗೆಯೆ ವಿದ್ಯಾರ್ಥಿಗಳನ್ನು ಕೂಡ ಇಂತಹ ಉನ್ನತ ಮಟ್ಟದ ಸಾಮಥ್ರ್ಯಕ್ಕೆ ಒಳಪಡಿಸುವ ಸಮಸ್ಯೆಯೂ ಬಹುಮುಖ್ಯವಾಗಿ ಕಾಡುತ್ತದೆ. ಪರೀಕ್ಷಾ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳ ಹೊರತಾಗಿ ಅನುಮೋದಿತವಾದ ಉನ್ನತ ಹಂತದ ಪರಾಮರ್ಶನ ಗ್ರಂಥಗಳನ್ನು ಒದಗಿಸುವ ಸಮಸ್ಯೆಯೂ ಪ್ರಮುಖವಾಗುತ್ತದೆ. ಇಂದು ಆರ್ಥಿಕ ಸಮಸ್ಯೆಯಿಂದಾಗಿ ಪಠ್ಯಪುಸ್ತಕಗಳನ್ನೆ ಸರ್ಕಾರಿ ಶಾಲೆಗಳಿಗೆ ಒದಗಿಸಲಾಗದ ಅನಿವಾರ್ಯತೆಯಲ್ಲಿ ನಮ್ಮ ಸರ್ಕಾರಗಳು ಇರುವಾಗ ಇದು ಹೆಚ್ಚು ದಿನ ಉಳಿಯುತ್ತದೆಯೇ ಎಂದು ಅನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಿನದಾಗಿ ವಿದ್ಯಾರ್ಥಿಗಳು ಉತ್ತರಿಸುವ ಅಂಶಗಳು ಅವರ ಸ್ವಯಂ ಆಲೋಚನೆ ಮತ್ತು ವಿವೇಚನಾಧಾರಿತವಾಗಿ ರೂಪಿತವಾಗುವುದರಿಂದ, ವ್ಯಕ್ತಿಗಳ ಚಿಂತನಶೀಲತೆ ವೈಯಕ್ತಿಕವಾಗಿ ಭಿನ್ನವಾಗಿರುವುದರಿಂದ, ಇಂತಹುದೇ ಮಾದರಿ ಎಂದು ಮೌಲ್ಯಮಾಪನ ಮಾಡುವುದೇ ಅತ್ಯಂತ ಕಷ್ಠ ಸಾಧ್ಯ ಅನಿಸುತ್ತದೆ. ಪ್ರತಿ ವರ್ಷವೂ ಕೂಡ ಹೊಸ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುವುದು, ಅವುಗಳಿಗೆ ಮಾದರಿ ಉತ್ತರಗಳನ್ನು ರೂಪಿಸುವ ಸಮಸ್ಯೆ ಹೆಚ್ಚುತ್ತಾ ಹೋಗುತ್ತದೆ.
ಅಂದರೆ ಪರೀಕ್ಷಾ ಪದ್ಧತಿಯಾಗಿ ಇದು ಉತ್ತಮ ಅನಿಸಿದರೂ, ನಮ್ಮ ಈಗಿನ ಶೈಕ್ಷಣಿಕ ವ್ಯವಸ್ಥೆಯೊಳಗೆ ದಿಢೀರನೆ ತೂರಿಸಿಬಿಡಬಹುದಾದಷ್ಟು ಸರಳವಾದ ಸಂಗತಿಯಲ್ಲ ಎಂಬುದು ನನ್ನ ಅನಿಸಿಕೆ.

ಪತ್ರಿಕೆ: ತೆರೆದ ಪಠ್ಯಪುಸ್ತಕ ಪರೀಕ್ಷೆ ಪದ್ಧತಿಯನ್ನು ಯಾವ ಹಂತಗಳಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು?
ವಿಶ್ವನಾಥ್: ತೆರೆದ ಪಠ್ಯ ಪುಸ್ತಕ ಮೌಲ್ಯಮಾಪನ ವ್ಯವಸ್ಥೆಯು ಎಲ್ಲಾ ಹಂತಗಳಲ್ಲೂ ಅಳವಡಿಸಿಕೊಳ್ಳಬಹುದಾದರೂ ಕೂಡಾ, ಹೆಚ್ಚು ಪರಿಣಾಮಕಾರಿಯಾಗಿ ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ಸಾಧ್ಯವಾಗುತ್ತದೆ. ಏಕೆಂದರೆ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಎಲ್ಲಾ ವಿದ್ಯಾರ್ಥಿಗಳ ಮನಸ್ಸುಗಳು ಹೆಚ್ಚು ಪರಿಪಕ್ವವಾಗಿರುವುದಿಲ್ಲ. ವೈಯಕ್ತಿಕವಾಗಿ ಮತ್ತು ಮಾನಸಿಕವಾಗಿ ಸಾಮಥ್ರ್ಯಗಳಲ್ಲಿ ವ್ಯತ್ಯಾಸವನ್ನು ಹೆಚ್ಚಿನ ಮಟ್ಟದಲ್ಲಿ ಕಾಣುತ್ತೇವೆ. ಹಾಗಾಗಿ ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ಹೆಚ್ಚು ಸೂಕ್ತವಾಗುತ್ತದೆ.
ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣ ಹಂತದಲ್ಲಿ ವೃತ್ತಿಯಾಧಾರಿತ ಕೋರ್ಸುಗಳಲ್ಲಿ ಆ ವೃತ್ತಿಗೆ ಸಂಬಂಧಿಸಿದ ಮಾನಸಿಕ ಸಂದರ್ಭಗಳನ್ನು ಪರೀಕ್ಷಿಸಲು ಈ ವ್ಯವಸ್ಥೆಯು ಸೂಕ್ತವಾಗುತ್ತದೆ. ಈಗಾಗಲೇ ಚಾಲ್ತಿಯಲ್ಲಿ ಇರುವಂತೆ ಇಲಾಖಾವಾರು ಬಡ್ತಿಗೆ ಸಂಬಂಧಿಸಿದ ಹಾಗೆ ಇಂತಹ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕೆನಡಾ, ಅಸ್ಟ್ರೇಲಿಯಾ, ಜರ್ಮನಿ, ಸ್ವಿಜರ್‍ಲ್ಯಾಂಡ್ ಮುಂತಾದ ರಾಷ್ಟ್ರಗಳಲ್ಲಿ ಶಿಕ್ಷಣದ ಬಹುತೇಕ ಮಟ್ಟದಲ್ಲಿ ಮೌಲ್ಯಮಾಪನದ ಒಂದು ಬಗೆಯಾಗಿ ಇದನ್ನು ಬಳಕೆ ಮಾಡುತ್ತಿರುವುದನ್ನು ನೋಡುತ್ತೇವೆ.
ನಮ್ಮ ದೇಶದಲ್ಲಿ ಇದನ್ನು ಅಳವಡಿಸಬೇಕಾದರೆ ಸಾಕಷ್ಟು ಪೂರ್ವಸಿದ್ಧತೆಯ ಅಗತ್ಯವಿದೆ.

ಸಂದರ್ಶನ:
ಆನಂದ್ ವರಹಳ್ಳಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here