ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ನಡೆಸಿರುವ ಪುರೋಹಿತಶಾಹಿ ಹಿಂಸಾ ಮಾಧ್ಯಮ

‘ಪುರೋಹಿತಶಾಹಿ ಎಂಬುದು ಹೆಬ್ಬುಲಿ, ಕಲ್ಲುಗಳನ್ನೆಸೆದು ಅದನ್ನು ಹಿಮ್ಮೆಟ್ಟಿಸಲಾಗದು, ಜೋಡಿ ನಳಿಗೆಯ ಬಂದೂಕಿನಲ್ಲಿ ಅದನ್ನು ಉಡಾಯಿಸಿ ಕೆಡವಬೇಕು. ಅದು ಎಲ್ಲೋ ಅಲ್ಲ ನಿಮ್ಮ ತಲೆಯಲ್ಲಿ ನೆಲೆಗೊಂಡಿರುತ್ತದೆ. ಮೊದಲ ಗುಂಡು ಬೀಳಬೇಕಾದದ್ದು ನಿಮ್ಮ ತಲೆಗೆ ತಲೆ ತಲೆ - ಕುವೆಂಪು

2

| ಕೆ.ಪಿ ನಟರಾಜ್ |

ಪುರೋಹಿತರು ಮೆದುಳಿಗೆ ಕೈ ಹಾಕುವುದಕ್ಕೊಂದು ಇತಿಹಾಸವಿದೆ. ‘passion of Jesus’ ಚಿತ್ರದಲ್ಲಿ ಯಹೂದಿ ಪುರೋಹಿತರು ಮತ್ತು ಈ ಪುರೋಹಿತರಿಗೆ ಮೆದುಳನ್ನು ಅಡವಿಟ್ಟ ಜನಮಂದೆ ಏಸು ಕ್ರಿಸ್ತನನ್ನು ಹಿಡಿತರಿಸಿ ವಿಚಾರಣೆ ಮಾಡುವ ದೃಶ್ಯವಿದೆ. ಅದರಲ್ಲಿ ಆ ‘ಪುರೋಹಿತ’ ವರ್ಗ ಮತ್ತು ಅವರ ಹಿಂದೆ ಅಂಧರಾಗಿ ಬೆಂಲಿಸಿದ ಜನಸಮೂಹ ಏಸುವನ್ನು ಪಾಪಿಯ ಸ್ಥಾನದಲ್ಲಿ ನಿಲ್ಲಿಸುತ್ತದೆ.

ಅವತ್ತು ಜೀಸಸನ್ನು ಸುತ್ತುವರಿದು ಕೊಂದುಹಾಕಿದ ಜ್ಯೂ ಪುರೋಹಿತರು, ಹನ್ನೆರಡನೇ ಶತಮಾನದಲ್ಲಿ ಬಸವನನ್ನು ಕೊಂದ ಬ್ರಾಹ್ಮಣ ಪುರೋಹಿತರು, ಇಪ್ಪತ್ತನೆಯ ಶತಮಾನದ ನಡುವೆ ಗಾಂಧಿಯನ್ನು ಹೊಡೆದುಹಾಕಿದ ಗೋಡ್ಸೆ ಎಂಬ ಬ್ರಾಹ್ಮಣ….. ಇವರೆಲ್ಲ ಒಗ್ಗೂಡಿ ಸಮಕಾಲೀನ ಭಾರತದ ಪತ್ರಿಕೋದ್ಯಮವನ್ನು ಕಟ್ಡುತ್ತಿರುವಂತಿದೆ..

ಈ ಬಗೆಯ ಹಿಂಸ್ರಕ ಪತ್ರಿಕೋದ್ಯಮ ಈಗ ಭಾರತದ ಕ್ಷಿತಿಜದಲ್ಲಿ ಹಿಂಸ್ರಕ ವ್ಯಾಘ್ರದಂತೆ ಆಗಿದೆ.
ಈ ಪತ್ರಿಕೋದ್ಯಮ ಹೀಗಾಗಿ ದಿಢೀರ್ ಆಗಿ ಉದ್ಭವಿಸಿದ್ದಲ್ಲ. ಇದರ ಹಿಂದೆ ಬಹುಕಾಲದ ತರಬೇತಿ ಇದೆ. ಈ ಪತ್ರಿಕೋದ್ಯಮ ಕೇವಲ ತನ್ನ ಚಾನಲ್ಲು, ಪೇಪರ್ರು, ಫೇಸ್ ಬುಕ್, ವಾಟ್ಸಪ್, ಟ್ವಿಟರ್… ಇತ್ಯಾದಿ ಸೋಷಿಯಲ್ ಮೀಡಿಯಾಗಳನ್ನಷ್ಟೇ ಕಡೆದು ನಿಲ್ಲಿಸಿಲ್ಲ. ತನ್ನದೇ ಓದುಗ, ನೋಡುಗ, ಕೇಳುಗ, ಕಮೆಂಟಿಸುವ ಪಡೆಯೊಂದಿಗೆ ಸಿದ್ದವಾಗಿ ನಿಂತುಬಿಟ್ಟಿದೆ.

ಬ್ರಾಹ್ಮಣರಿರುವುದಷ್ಟೇ ಸಮಸ್ಯೆಯಲ್ಲ; ಮತಾಂಧತೆ ಸಮಸ್ಯೆ
ಇದರ ಕಾರಣಕರ್ತರ್ಯಾರು ಎಂಬುದನ್ನೂ ಗುಟ್ಟು ಮಾಡುವುದು ಸಲ್ಲದು. ಅದು RSS. ಅದು ಕಳೆದ ಶತಮಾನದ ಮುವ್ವತ್ತರ ದಶಕದಿಂದಲೂ ಈ ವಿಭಜಕ ಉದ್ದೇಶಕ್ಕೆ ಸಕಲ ಕ್ಷೇತ್ರಗಳನ್ನೂ ಅಣಿಮಾಡಿಕೊಂಡು ಬಂದ ಸಂಘಟನೆ. ಮೂಲತಃ ಬ್ರಾಹ್ಮಣರನ್ನೇ ತನ್ನ ಮುಖ್ಯ ಅಜೆಂಡಾ ಆದ ತಲೆ ತೊಳೆಯುವ mega operation  brain wash ಗೆ ರೆಕ್ರೂಟ್ ಮಾಡುತ್ತ ಶೂದ್ರರನ್ನು ಅವರ ಸಾಮಾಜಿಕ ದಾರಿದ್ರ್ಯವನ್ನೂ ಮರೆತು ಸಂಘದ ರಾಷ್ಟ್ರದ್ರೋಹಿ ಅಜೆಂಡಾಕ್ಕೆ ದುಡಿಯುವಂತೆ ಪಶುಬಲವನ್ನು ಕಟ್ಟಿ ನಿಲ್ಲಿಸಿದರು. ಆದ್ದರಿಂದ ಇವತ್ತಿನ ಬ್ರಾಹ್ಮಣ ಪತ್ರಿಕೋದ್ಯಮವು ಮುಕ್ಕಾಲು ಶತಮಾನಕ್ಕೂ ಮಿಕ್ಕಿದ ದೀರ್ಘ ಕಾಲಾವಧಿಯ ಗಳಿಕೆಯಾಗಿದೆ.

ಇಲ್ಲಿ ಚಾನಲ್ಲುಗಳು ಪತ್ರಿಕೆಗಳ ಮಾಲೀಕರಿಂದ ಹಿಡಿದು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಸಂಪಾದಕರವರೆಗೆ ವರದಿಗಾರ, ಲೇಖಕ, ಪ್ಯಾನೆಲಿಸ್ಟ್‍ಗಳ ತನಕ… ಅಷ್ಟೇ ಏಕೆ ಆಹ್ವಾನಿತ ಅಂಕಣ ಬರಹಗಾರರವರೆಗೆ ಬ್ರಾಹ್ಮಣಮಯವಾಗಿರುವ ಭಾರತೀಯ ಪತ್ರಿಕೋದ್ಯಮ ಅದರ ಬೃಹತ್ ಓದುಗ, ನೋಡುಗರನ್ನೂ ಕಳೆದೆಪ್ಪತ್ತೈದು ವರ್ಷಗಳಲ್ಲಿ ತಯಾರಿ ಮಾಡಿಕೊಂಡುಬಿಟ್ಟಿದೆ. ಈ ತಯಾರಿಯ, ಈ ಸದೃಢ ಸಂಘಟಿತ ಕಾರ್ಯಾಚರಣೆಯ ವಿರುದ್ಧ ಈ ದೇಶದ ಪ್ರಜಾಪ್ರಭುತ್ವ ಸೆಣಸಬೇಕಾಗಿದೆ. ಇದು ಸುಲಭದ ಮಾತಲ್ಲ.

ಈ ಕಾರಣಕ್ಕಾಗಿಯೇ ನಾನು ಪತ್ರಿಕೋದ್ಯಮವನ್ನು ಎಲೆಕ್ಟ್ರಾನಿಕ್ ಮತ್ತು ಪ್ರಿಂಟ್ ಎಂದು ಗುರುತಿಸಿ ನಮ್ಮ ಬದುಕಿನಿಂದ ಬಹು ದೂರದ ಹೊರಚ್ಚಿನ, ನಿರ್ಲಕ್ಷಿಸಬಹುದಾದಷ್ಟು ಕ್ಷುದ್ರ ಸಂಗತಿಗಳೆಂದು ನೋಡುವ ಮೂರ್ಖತನ ಮಾಡಲಾರೆ. ನಾಡಿನ ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಅವರು ಇತ್ತೀಚಿನ ಕೆಲವು ವಿಚಾರ ಸಂಕಿರಣಗಳಲ್ಲಿ ಹಂಚಿಕೊಂಡಂತೆ ಬೇರೆ ವೃತ್ತಿಪರ ಕ್ಷೇತ್ರಗಳಿಗೆ ಹೋಗುತ್ತಿರುವ ಹೊಸ ಪೀಳಿಗೆಯ ಯುವಜನರಿಗೆ ಹೋಲಿಸಿದರೆ ಪತ್ರಿಕೋದ್ಯಮಕ್ಕೆ ಬರುತ್ತಿರುವವರ ಬ್ರಾಹ್ಮಣೇತರ ಜಾತಿಗಳ ಯುವಕರ ಸಂಖ್ಯೆ ಆಘಾತಕರವೆನ್ನುವಷ್ಟರ ಮಟ್ಟಿಗೆ ಕಡಿಮೆ ಇದೆ. ಅದು ಶೇಕಡಾ ಹತ್ತನ್ನು ಮೀರಿಲ್ಲ. ಇವತ್ತು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿರುವವರ ಬ್ರಾಹ್ಮಣರ ಸಂಖ್ಯೆ ಶೇಕಡಾ ತೊಂಬತ್ತರಷ್ಟಿದೆ. ಈ ಎರಡೂ ಮಾಧ್ಯಮಗಳ ಬ್ರಾಹ್ಮಣ ಸಂಪಾದಕರ ಸಂಖ್ಯೆ ಕೂಡಾ ಶೇಕಡಾ ತೊಂಬತ್ತೈದರಷ್ಟಿದೆ. ಇದು ಕೇವಲ ಆಕಸ್ಮಿಕವಿರಲಾರದು ಎನ್ನುವುದು ನನ್ನ ಸಂಶಯ.

 

ಇಷ್ಟು ಮಂದಿ ಬ್ರಾಹ್ಮಣರಿದ್ದರೂ ತೊಂದರೆ ಇರಲಿಲ್ಲ, ಆದರೆ ಇವರಲ್ಲಿ ಬಹುಪಾಲು ಮತಾಂಧರಾಗಿದ್ದಾರೆ. ಮತಾಂಧ ರಾಜಕಾರಣದ ಪ್ರೊಮೋಟರ್‍ಗಳೂ, ಅದಕ್ಕಾಗಿ ತಮ್ಮ ತನು ಮನ ಧನ (ಧನವನ್ನಲ್ಲ, ಧನಕ್ಕಾಗಿ ಮಾರಿಕೊಂಡವರಿಲ್ಲಿ ಬಹುತೇಕ)ವನ್ನರ್ಪಿಸಿದವರೂ ಆಗಿದ್ದಾರೆ.

ನಾನು ಈ ಲೇಖನದ ಆರಂಭದಲ್ಲಿ ಜೀಸಸ್ ಟ್ರಯಲ್‍ಅನ್ನು ಉಲ್ಲೇಖಿಸಿದ ಕಾರಣವೇನೆಂದರೆ, ಆ ವಿಚಾರಣೆಗೆ ಸಾಮ್ಯತೆ ಹೊಂದಿರುವ ಮೀಡಿಯಾ ಅಕ್ರಮಣಗಳಿಗೆ ನಾವು ಕಳೆದ ಐದು ವರ್ಷಗಳಲ್ಲಿ ಸಾಕ್ಷಿಯಾದೆವು. ಫೇಸ್ ಬುಕ್‍ನಲ್ಲಿ ಗೌರಿ ಲಂಕೇಶ್ ಅವರ ಮೇಲಾಗುತ್ತಿದ್ದ ಅವಾಚ್ಯ ಶಬ್ದಗಳ ದಾಳಿ ಅವರ ಕೊಲೆಯಲ್ಲಿ ಅಂತ್ಯ ಕಂಡಿದ್ದನ್ನು ನಾವು ದಿಗ್ಭ್ರಾಂತರಾಗಿ ನೋಡಿದೆವು. ತಲ್ಲಣಗೊಳ್ಳುತ್ತಲೇ ಈ ದುರ್ಘಟನೆಗೆ ಸಾಕ್ಷಿಯಾದೆವು. ಈ ಕೊಲೆಯ ಹಿಂದೆ ಬ್ರಾಹ್ಮಣ ಪತ್ರಿಕೋದ್ಯಮದ ಸತತ ಪ್ರಚೋದನೆ, ಆಕ್ರಮಣ, ಮಾಸ್ ಬ್ರೈನ್ ವಾಷ್ ಇವುಗಳನ್ನು ಗುರುತಿಸಬಹುದಾಗಿದೆ.

ಏಕಪಕ್ಷೀಯ ಬ್ರಾಹ್ಮಣೀಯ ಅಬ್ಬರ
ಟೈಮ್ಸ್ ನೌ ಮತ್ತು ರಿಪಬ್ಲಿಕ್ ಟಿವಿಗಳಲ್ಲಿ ಕಳೆದ ಐದಾರು ವರ್ಷಗಳಿಂದ ತನ್ನ ಅಧಿಪತ್ಯ ಸಾರಿದ ಪ್ರಜಾತಂತ್ರ ವಿರೋಧದ, ಬಿಜೆಪಿಯ ಸಮರ್ಥನೆಯನ್ನು ಶಿರಸಾವಹಿಸಿ ನಿರ್ವಹಿಸಿದ ಅರ್ನಬ್ ಗೋಸ್ವಾಮಿ ಎಂಬ ನಿರ್ಲಜ್ಜನ ಕ್ರಿಯೆ ಯಾವ ವಿಧದಲ್ಲೂ ಯಹೂದಿ ಪುರೋಹಿತರ ವರ್ತನೆಗಿಂತ ಭಿನ್ನವಾಗಿರಲಿಲ್ಲ. ಇನ್ನು ಕರ್ನಾಟಕದ ಪಬ್ಲಿಕ್ ಟಿವಿ, ಸುವರ್ಣ ಟಿವಿ, ಬಿ ಟಿವಿ ಇತ್ಯಾದಿ ಟಿವಿಗಳಲ್ಲಿ ಬ್ರಾಹ್ಮಣ ವಟುಗಳ ಏಕಪಕ್ಷೀಯ ಅಬ್ಬರವನ್ನು ಕರ್ನಾಟಕ ಹಲ್ಲು ಕಡಿಯುತ್ತ ಸಹಿಸುತ್ತಿದೆ. ಒಂದೆರಡು ಟಿವಿಗಳಲ್ಲಿ ಕೆಲವೊಮ್ಮೆ ಜಾತಿಯಿಂದ ಬ್ರಾಹ್ಮಣರಲ್ಲದವರು ಇದ್ದಾಗಲೂ ಅವರೂ ಇದೇ ಮನಸ್ಥಿತಿಯುಳ್ಳವರು ಎಂಬುದನ್ನು ಪದೇ ಪದೇ ಖಚಿತಪಡಿಸುತ್ತಿದ್ದಾರೆ.

ಇನ್ನು ಪಬ್ಲಿಕ್ ಟಿವಿ, ಸುವರ್ಣ ಟಿವಿಯ ಪತ್ರಕರ್ತರ ನ್ಯಾಯಾಧೀಶ ಧೋರಣೆಗಳು ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ. ನ್ಯಾಯಾಧೀಶನಂತೆ ಪೊಲೀಸನಂತೆ ವರ್ತಿಸುವ ಈ ಬ್ರಾಹ್ಮಣ ಮಾಧ್ಯಮ ತನ್ನ ಆಯ್ಕೆಯ, ತನ್ನ ಹಿತಾಸಕ್ತಿಯ ರಾಜಕಾರಣಕ್ಕಷ್ಟೇ ಬೆಂಬಲವಾಗಿ ನಿಲ್ಲುತ್ತದೆ ಬಿಟ್ಟರೆ ಇದು ಎಂದೂ ಭಾರತದ ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಾದ ಕೇಂದ್ರದ ಮೋದಿ ಸರ್ಕಾರದ ದಾಳಿಯನ್ನು ಪ್ರಶ್ನಿಸಿಯೇ ಇಲ್ಲ. ದೇಶದ ಸೇನಾಬಲ, ಚುನಾವಣಾ ಆಯೋಗ, ಸರ್ವೊಚ್ಚ ನ್ಯಾಯಾಲಯ, ಸಿಬಿಐ, ಆರ್‍ಬಿಐ ಮತ್ತು ಬ್ಯಾಂಕಿಂಗ್ ವ್ಯವಸ್ಥೆ, ದೇಶದ ವಿವಿಗಳು…. ಎಲ್ಲವುಗಳ ಸ್ವಾಯತ್ತತೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿದ ಮೋದಿ ಸರ್ಕಾರದ ರಾಜಕೀಯ ಅತಿಕ್ರಮಣವನ್ನು ಈ ದೇಶದ ಬ್ರಾಹ್ಮಣ್ಯದ ಗುಲಾಮಿ ಪತ್ರಿಕೋದ್ಯಮ ಗುರುತಿಸಿ ಜನತೆಯ ಮುಂದೆ ಇಡಲಿಲ್ಲ.

ನಾವಿಲ್ಲಿ ದಾಖಲಿಸಿಕೊಳ್ಳಬೆಕಾದ ಬಹು ಮುಖ್ಯ ನೆನಪೆಂದರೆ ವಯೋವೃದ್ಧರೂ ಜ್ಞಾನವೃದ್ಧರೂ ಆಗಿದ್ದ ಆದರೆ ಗಂಭೀರ ಕಾಯಿಲೆಯಿಂದ ಜರ್ಝರಿತರಾಗಿದ್ದ, ಆದರೆ ತಮ್ಮ ಮೇಲೆ ನಡೆಯುತ್ತಿದ್ದ ಮತಾಂಧ ರಾಜಕಾರಣದ ಹಲ್ಲೆಗಳನ್ನು ಧೀಮಂತಿಕೆಯಿಂದ ದಿಟ್ಟವಾಗಿ ಎದುರಿಸಿ ತಮ್ಮ ಕೊನೆ ಕ್ಷಣದವರೆಗೆ ಪ್ರಜಾಪ್ರಭುತ್ವದ ಹಿತ ಚಿಂತಿಸಿದ ಡಾ.ಯು.ಆರ್.ಅನಂತ ಮೂರ್ತಿಯವರನ್ನು ಕನ್ನಡದ ಪತ್ರಕರ್ತ ವರ್ಗ ಸೀಳುನಾಯಿಗಳಂತೆ ದಶ ದಿಕ್ಕಿನಿಂದಲೂ ಆಕ್ರಮಣ ನಡೆಸಿದ್ದನ್ನು. ನಮೋಬ್ರಿಗೇಡ್‍ನ ಪುಂಡರಿಗೆ ತಮ್ಮ ಚಾನಲ್ಲುಗಳ ಪ್ಯಾನಲ್ಲುಗಳಲ್ಲಿ ಜಾಗಕೊಟ್ಟು ಅಂತರರಾಷ್ಟ್ರೀಯ ಖ್ಯಾತಿಯ ಕನ್ನಡದ ಈ ಹಿರಿಯ ಸೃಜನಶೀಲ ಬರಹಗಾರರನ್ನು ಅವಹೇಳನಕಾರಿಯಾಗಿ ಎರಗಿದ್ದು ಬ್ರಾಹ್ಮಣ ಪತ್ರಿಕೋದ್ಯಮದ ಪ್ರಾತಿನಿಧಿಕ ಚಹರೆಯಾಗಿ ದಾಖಲಾಗಿದೆ. 2014ರ ಸಂಸತ್ ಚುನಾವಣೆಗಳು ಮುಗಿಯುವ ಹೊತ್ತಿಗೆ ದೇಶದ ಬಹುಪಾಲು ಎಲೆಕ್ಟ್ರಾನಿಕ್ ಮೀಡಿಯಾ ಮೋದಿ ಬೆಂಬಲಿತ ಕಾರ್ಪೊರೇಟ್‍ಗಳ ಪಾಲಾಗಿತ್ತು. ರಾಜದೀಪ್ ಸರ್ದೇಸಾಯಿ ತರಹದ ಪತ್ರಕರ್ತರೂ ಸಹ ತಮ್ಮ ಅಸ್ತಿತ್ವವನ್ನುಳಿಸಿಕೊಳ್ಳಲು ಬಹಳ ದಿನ ಪರದಾಡಬೇಕಾಯಿತು. 2014ರ ಸಂಸತ್ ಚುನಾವಣಾ ಪೂರ್ವದ ಮಾಧ್ಯಮಗಳಲ್ಲಿನ ರಾಜಕೀಯ ಚರ್ಚೆಗಳ ಕಾಲ ಮೀಸಲಿನ ಅಂಕಿ ಅಂಶವನ್ನು ನೋಡಿ ನಾನು ಬೆಚ್ಚಿಬಿದ್ದಿದ್ದೆ.

ಬಿಜೆಪಿಯ ಕುರಿತ ಪ್ರಸ್ತಾಪ, ಅದಕ್ಕೆ ನೀಡುತ್ತಿದ್ದ ಬೆಂಬಲ, ಇತ್ಯಾದಿಗೆ ಒಟ್ಟೂ ಕಾಲಾವಕಾಶದ ಶೇಕಡಾ ತೊಂಬತ್ತು ಭಾಗ ಮೀಸಲಿಟ್ಟರೆ ರಾಷ್ಟ್ರದ ಬಹು ಮುಖ್ಯ ರಾಜಕೀಯ ಪಕ್ಷವಾದ ಕಾಂಗ್ರೆಸ್‍ಗೆ ಮೀಸಲಿಟ್ಟ ಕಾಲ ಶೇಕಡಾ ಮೂರರಷ್ಟು ಮಾತ್ರ, ಅದೂ ನಿಂದನೆ ಮತ್ತು ಟೀಕೆಗಾಗಿ. ಇದು ಪುರೋಹಿತ, ಫ್ಯೂಡಲ್ ಮತ್ತು ಕಾರ್ಪೊರೇಟ್ ಪ್ರಾಯೋಜಿತ ಜಂಟಿ ಕಾರ್ಯಾಚರಣೆಯ ಫಲವಾಗಿದೆ. ಇದರ ಕೇಂದ್ರದಲ್ಲಿರುವ ಮೆದುಳು RSS ಬ್ರಾಹ್ಮಣ್ಯ ಅನ್ನುವುದನ್ನು ನಾವು ಮರೆಯುವ ಹಾಗಿಲ್ಲ.

ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಯ ಆಘಾತದಲ್ಲಿ ಸಾರ್ವಜನಿಕ ಕ್ಷೇತ್ರಕ್ಕೆ ಬಿರುಗಾಳಿಯಂತೆ ರಾಜಕೀಯ ಪ್ರವೇಶ ಮಾಡಿದ ಕಲಾವಿದ ಪ್ರಕಾಶ್ ರೈ ಅವರನ್ನೂ ದೇಶದ ಪುರೋಹಿತಶಾಹಿ ಮಾಧ್ಯಮ ಕಾಡಿತು. ಅವರ ಸಾರ್ವಜನಿಕ ಕ್ಷೇತ್ರದ ಪ್ರವೇಶ ಮತ್ತು ಬಿಜೆಪಿ ಮತ್ತವರ ಪರಿವಾರದ ಮತಾಂಧ ರಾಜಕೀಯ ಮತ್ತು ಸಾಮಾಜಿಕ ಕಾರ್ಯಾಚರಣೆಯ ಪ್ರಜಾತಂತ್ರ ವಿರೋಧಿ ಧಾಷ್ಟ್ರ್ಯವನ್ನು ಕಟುವಾಗಿ ವಿಮರ್ಶಿಸುತ್ತ ರಾಷ್ಟ್ರವ್ಯಾಪಿ ಸಂಚಲನ ಸೃಷ್ಟಿಸಿದ್ದನ್ನು ಅನಪೇಕ್ಷಿತ ಮತ್ತು ಅಸಹನೀಯವೆಂಬಂತೆ ಚಿತ್ರಿಸಲಾರಂಭಿಸಿದವು. ಇದಕ್ಕೆ ಹೊಯ್ಕಯ್ಯಾಗಿ ನಿಂತ ಪತ್ರಿಕೆ ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾದ ಓದುಗ ಮತ್ತು ನೋಡುಗ ವರ್ಗಗಳು ಅವರನ್ನು ಅಸಭ್ಯವಾಗಿ ಅವಹೇಳನಮಾಡತೊಡಗಿದರು.

ಚಿಂತಕರನ್ನು ನಗರ ನಕ್ಸಲ್ ಎಂದು ಕರೆದು ಸಾರ್ವಜನಿಕರ ದೃಷ್ಟಿಯಲ್ಲಿ ಅವರನ್ನು ಖಳರಂತೆ ಚಿತ್ರಿಸುವ ಪ್ರಭುತ್ವದ ಆಘಾತಕಾರಿ ಕ್ರಮವನ್ನು ಪ್ರತಿಭಟಿಸಲು ಮುಂದಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡರನ್ನೂ ಹೀನ ಶಬ್ದಗಳಲ್ಲಿ ಆಕ್ರಮಣ ಮಾಡಿ ಅವಹೇಳನ ಮಾಡಿದ ಗ್ಯಾಂಗಿನಲ್ಲಿ ಬ್ರಾಹ್ಮಣವಾದಿ ಮೀಡಿಯಾ ಮತ್ತದರ ತಲೆತೊಳೆಯಲಾದ ಬೃಹತ್ ಓದುಗ ನೋಡುಗ ಜಾಲವಿದೆ. ಅದು ಸೋಷಿಯಲ್ ಮೀಡಿಯಾದಲ್ಲಿ ಅದರೆಲ್ಲ ಅಕರಾಳ ವಿಕರಾಳ ಸ್ವರೂಪವನ್ನು ಅನಾವರಣ ಮಾಡಿದೆ.

ಮೇಲಿನ ವಿವಿಧ ಘಟನೆ ಮತ್ತು ವಿದ್ಯಮಾನಗಳು ಗಾಂಧಿ ಹತ್ಯೆಯ ನಂತರದ ಕಳೆದ ಶತಮಾನದಿಂದಲೂ ಭಾರತದ ಸಾಮಾಜಿಕ ಪರಿಸರವನ್ನು ಅವರಿಸಿರುವ ಪುರೋಹಿತಶಾಹಿಯ ಆಕ್ರಮಣಕಾರಿ ವಿಧ್ವಂಸಕ ಪ್ರವೃತ್ತಿಯನ್ನು ವಿಷದೀಕರಿಸುತ್ತವೆ. ಈ ಮತಾಂಧ ಶಕ್ತಿ ಒಳಿತನ್ನು ಗುರಿಮಾಡಿ ಆಕ್ರಮಣ ನಡೆಸುತ್ತದೆ. ಗಾಂಧಿಯನ್ನು ಕೊಂದು ಗೋಡ್ಸೆಯನ್ನು ಆರಾಧಿಸುತ್ತದೆ ಮತ್ತು ಎಲ್ಲ ಒಳಿತನ್ನೂ ಜನತೆಯ ಮನಸ್ಸಿನಲ್ಲಿ ಖಳನನ್ನಾಗಿ ಕಡೆದು ನಿಲ್ಲಿಸುತ್ತದೆ. ದುರದೃಷ್ಟವಶಾತ್ ಈ ಮತಾಂಧ ಪುಂಡ ಶಕ್ತಿಯೇ ಇವತ್ತು ದೇಶದ ರಕ್ಕಸ ಮೀಡಿಯಾ ಆಗಿ ಅವತಾರ ತಳೆದು ಜೀವ ವಿರೋಧಿಯೂ, ಪ್ರಜಾಪ್ರಭುತ್ವ ವಿರೋಧಿಯೂ ಅಗಿ ನಿರ್ಲಜ್ಜೆ ಮತ್ತು ಧಾಷ್ಟ್ರ್ಯದಿಂದ ಪ್ರವರ್ತಿಸುತ್ತಿದೆ.

ಕುವೆಂಪು ನೀಡಿದ ಎಚ್ಚರ
ಕಳೆದ ಶತಮಾನದ ಕೊನೆಯ ಘಟ್ಟದಲ್ಲಿ, ಐತಿಹಾಸಿಕ ‘ಒಕ್ಕೂಟ’ದ ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು ಕೊಟ್ಟ ಕರೆಯನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬೇಕಾಗಿದೆ.

‘ಪುರೋಹಿತಶಾಹಿ ಎಂಬುದು ಹೆಬ್ಬುಲಿ, ಕಲ್ಲುಗಳನ್ನೆಸೆದು ಅದನ್ನು ಹಿಮ್ಮೆಟ್ಟಿಸಲಾಗದು, ಜೋಡಿ ನಳಿಗೆಯ ಬಂದೂಕಿನಲ್ಲಿ ಅದನ್ನು ಉಡಾಯಿಸಿ ಕೆಡವಬೇಕು. ಅದು ಎಲ್ಲೋ ಅಲ್ಲ ನಿಮ್ಮ ತಲೆಯಲ್ಲಿ ನೆಲೆಗೊಂಡಿರುತ್ತದೆ. ಮೊದಲ ಗುಂಡು ಬೀಳಬೇಕಾದದ್ದು ನಿಮ್ಮ ತಲೆಗೆ ತಲೆ ತಲೆ…’ ಎಂದು ಎಚ್ಚರಿಸಿ ಪುರೋಹಿತಶಾಹಿಯಿಂದ ನಮ್ಮ ಮನಸ್ಸುಗಳನ್ನು ಮುಕ್ತಗೊಳಿಸಿಕೊಳ್ಳಲು ಕರೆ ನೀಡಿ ಅರ್ಧ ಶತಮಾನ ಸಮೀಪಿಸುತ್ತಿದೆ. ಅದನ್ನು ನಾವು ನಿರ್ಲಕ್ಷಿಸಿದ್ದೇ, ಪುರೊಹಿತಶಾಹಿ ಹೆಬ್ಬುಲಿಯಂತೆ ನಮ್ಮ ತಲೆಗಳನ್ನು ಭದ್ರವಾಗಿ ಹಿಡಿಯಲು ಎಡೆಮಾಡಿಕೊಟ್ಟಿತು
ಕೊನೆಯಲ್ಲಿ, ಮತ್ತೆ ಈ ಲೇಖನದ ಆರಂಭಕ್ಕೆ ಹಿಂತಿರುಗುವುದಾದರೆ, ಜನಾಭಿವ್ಯಕ್ತಿಯ ವೇದಿಕೆಯಾದ ಮಾಧ್ಯಮ ಲೋಕಕ್ಕೆ ಈ ಪುರೋಹಿತ ಹೆಬ್ಬುಲಿ ನುಗ್ಗಿಬಿಟ್ಟಿದೆ.

ಅದು ಹಿಂದೆ ಜೀಸಸ್‍ನನ್ನು ಮುಗಿಸಿದ್ದು, ಬಹು ಹಿಂದೆ ನಮ್ಮ ಬಸವನನ್ನು ಆತನ ಸಾಮಾಜಿಕ ಧಾರ್ಮಿಕ ಸುಧಾರಣೆಯನ್ನು ದಮನಿಸಿದ್ದು, ಮೊನ್ನೆ ಮೊನ್ನೆ ಗಾಂಧಿಯನ್ನು ಹತ್ಯೆ ಮಾಡಿದ್ದು ಇದೇ ಶಕ್ತಿ. ಪುರೋಹಿತ ಅಥವಾ ಬ್ರಾಹ್ಮಣ ಹಿಂಸಾ ಮಾಧ್ಯಮದ ಬಿಗಿ ಹಿಡಿತದಲ್ಲಿ ಅಹಿಂಸೆಯ ವ್ರತ ನಿರತ ಸಂತ ಸಮ ಭಾರತದ ಪ್ರಜಾಪ್ರಭುತ್ವ ಅಕ್ಷರಶಃ ಸೆರೆಯಾಗಿಬಿಟ್ಟಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

2 COMMENTS

LEAVE A REPLY

Please enter your comment!
Please enter your name here